ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಪ್ಸಿ, ಕೋಕ್ ಹೆಚ್ಚು ಮಾಲಿನ್ಯಕ್ಕೆ ಕಾರಣವಾಗುವ ಬ್ರಾಂಡ್‌ಗಳು

Last Updated 25 ಜೂನ್ 2018, 7:09 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿ ಅತಿ ಹೆಚ್ಚು ಪರಿಸರ ಮಾಲಿನ್ಯ ಉಂಟುಮಾಡುವ ಮತ್ತು ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಾರಣವಾಗುವ ಬ್ರಾಂಡ್‌, ಉತ್ಪನ್ನ, ಕಂಪೆನಿಗಳ ಪಟ್ಟಿಯಲ್ಲಿ ಕರ್ನಾಟಕದ ನಂದಿನಿ, ಪಾರ್ಲೆ, ಪೆಪ್ಸಿಕೊ, ಬ್ರಿಟಾನಿಯಾ ಮತ್ತಿತರ ಹೆಸರುಗಳು ಕಂಡುಬಂದಿವೆ.

‘ಗ್ಲೋಬಲ್‌ ಅಲಾಯನ್ಸ್‌ ಫಾರ್ ಇನ್‌ಸೈನ್‌ರೇಟರ್‌ ಅಲ್ಟರ್ನೇಟಿವ್ಸ್‌ (800ಕ್ಕೂ ಹೆಚ್ಚು ಸ್ವಯಂಸೇವಾ ಸಂಸ್ಥೆಗಳು ಮತ್ತು 90 ರಾಷ್ಟ್ರಗಳ ವ್ಯಕ್ತಿಗಳನ್ನೊಳಗೊಂಡ ಮೈತ್ರಕೂಟ)’ ವಿಶ್ವ ಪರಿಸರ ದಿನದ ಅಂಗವಾಗಿ ಸಮೀಕ್ಷೆ ನಡೆಸಿದ್ದು, ಮಾಲಿನ್ಯಕಾರಕ ಬ್ರಾಂಡ್‌ಗಳ ಪಟ್ಟಿಯುಳ್ಳ ವರದಿ ಬಿಡುಗಡೆ ಮಾಡಿದೆ.

ಪೆಪ್ಸಿಕೊ, ಪರ್ಫೆಟ್ಟಿ ವ್ಯಾನ್ ಮೆಲ್ಲೆ, ಯೂನಿಲಿವರ್, ಕೋಕಾ ಕೋಲ, ಮೊಂಡಲೆಜ್ ಇಂಟರ್‌ನ್ಯಾಷನಲ್ ಭಾರತದಲ್ಲಿ ಅತಿ ಹೆಚ್ಚು ಮಾಲಿನ್ಯ ಉಂಟುಮಾಡುವ ಅಂತರರಾಷ್ಟ್ರೀಯ ಮಟ್ಟದ ಬ್ರಾಂಡ್‌ಗಳು ಎಂಬುದಾಗಿ ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸಿಟಿಜನ್ ಮ್ಯಾಟರ್ಸ್ ವರದಿ ಮಾಡಿದೆ.

* ಪೆಪ್ಸಿಕೊದ 20 ಉತ್ಪನ್ನಗಳು - ಪೆಪ್ಸಿ, ಮೌಂಟೇನ್ ಡ್ಯೂ, ಅಕ್ವಾಫಿನಾ, ಲೇಯ್ಸ್‌ ಮತ್ತು ಕುರ್ಕುರೆ
* ಪರ್ಫೆಟ್ಟಿ ವ್ಯಾನ್ ಮೆಲ್ಲೆ - ಸೆಂಟರ್‌ ಫ್ರೆಶ್, ಹ್ಯಾಪ್ಪಿಡೆಂಟ್, ಮೆಂಟೊಸ್ ಚೂಯಿಂಗ್‌ಗಮ್‌ಗಳು ಮತ್ತು ಆಲ್ಪನ್‌ ಲಿಬೆಯಂಥ ಚಾಕೊಲೆಟ್‌ಗಳು
* ಯೂನಿಲಿವರ್ - ಡೊವ್, ರಿನ್‌, ಫ್ಯಾರ್ ಆ್ಯಂಡ್‌ ಲವ್ಲಿ, ಲಿಪ್ಟನ್ ಮತ್ತಿತರ ಉತ್ಪನ್ನಗಳು.
* ಕೋಕಾ ಕೋಲ – ಕೋಕಾ ಕೋಲ, ಮಿನಿಟ್ ಮೇಯ್ಡ್‌, ಥಮ್ಸ್ಅಪ್, ಲಿಮ್ಕಾ ಮತ್ತು ಮಾಜ
* ಮೊಂಡಲೆಜ್ ಇಂಟರ್‌ನ್ಯಾಷನಲ್ - ಕ್ಯಾಡ್‌ಬರಿ ಡೇರಿಮಿಲ್ಕ್‌, ಫೈವ್‌ ಸ್ಟಾರ್, ಜೆಮ್ಸ್, ಏಕ್ಲೇರ್ಸ್‌ ಮತ್ತಿತರ ಚಾಕೊಲೆಟ್‌ಗಳು ಮತ್ತು ಬೋರ್ನ್‌ವಿಟಾದಂಥ ಪಾನೀಯಗಳು.
ನೆಸ್ಟ್ಲೆ, ಪ್ರೊಕ್ಟೆರ್‌ ಮತ್ತು ಗೇಂಬಲ್, ಸಿಜಿ ಫುಡ್ಸ್, ಲೊಟ್ಟೆ, ಮೆಕ್ಡೊನಾಲ್ಡ್ ಮತ್ತು ಗ್ಲಾಕ್ಸೊ ಸ್ಮಿತ್‌ಕ್ಲೈನ್‌ ಹೆಸರು ಸಹ ಪಟ್ಟಿಯಲ್ಲಿವೆ.

ಅತಿ ಹೆಚ್ಚು ಮಾಲಿನ್ಯ ಉಂಟುಮಾಡುವ ಸ್ಥಳೀಯ ಬ್ರಾಂಡ್‌, ಉತ್ಪನ್ನಗಳು ಹೀಗಿವೆ:

* ಪಾರ್ಲೆ – ಪಾರ್ಲೆ ಜಿ, ಮಾರಿ, ಮಿಲನೊ, ಪಾಪ್ಪಿನ್ಸ್, ಮ್ಯಾಂಗೊ ಬೈಟ್, ಮೆಕ್ಸಿಟೊಸ್ ಮತ್ತು ಫ್ರೆಶ್‌ ಹಾರ್ವೆಸ್ಟ್‌
* ಕರ್ನಾಟಕ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟ - ನಂದಿನಿ ಹೆಸರಿನಲ್ಲಿ ಉತ್ಪಾದಿಸುವ ಹಾಲು, ಮೊಸರು, ಪೇಡ, ಪನ್ನೀರ್
* ಬ್ರಿಟಾನಿಯಾ – ಮಿಲ್ಕಿ ಬಿಕಿಸ್‌, ಗುಡ್‌ ಡೇ, ನ್ಯೂಟ್ರಿ ಚಾಯ್ಸ್ ಮತ್ತಿತರ ಹೆಸರುಗಳಲ್ಲಿ ತಯಾರಾಗುವ ಬಿಸ್ಕಿಟ್, ಬ್ರೆಡ್‌, ಕೇಕ್‌ಗಳು
* ಅಮುಲ್ – ಡೇರಿ ಉತ್ಪನ್ನಗಳು
* ಐಟಿಸಿ – ಸಿಗರೆಟ್‌, ಯಪ್ಪಿ ನೂಡಲ್ಸ್‌, ಬಿನ್‌ಗೊ ಚಿಪ್ಸ್‌, ಸನ್‌ಫೀಸ್ಟ್‌ ಬಿಸ್ಕಿಟ್‌, ಆಶೀರ್ವಾದ್‌ ಗೋಧಿ.

ದೇಶದ 15 ನಗರಗಳಲ್ಲಿ ಸಾರ್ವಜನಿಕ ಸ್ಥಳಗಳಿಂದ ತ್ಯಾಜ್ಯಗಳನ್ನು ಸಂಗ್ರಹಿಸಿ ಸಮೀಕ್ಷೆ ನಡೆಸಲಾಗಿದೆ. ಸಂಗ್ರಹಿಸಿದ ತ್ಯಾಜ್ಯಗಳನ್ನು ಬ್ರಾಂಡೆಡ್ ಪ್ಲಾಸ್ಟಿಕ್, ಅನ್‌ಬ್ರಾಂಡೆಡ್ ಪ್ಲಾಸ್ಟಿಕ್, ಪಾಲಿಸ್ಟೈರೀನ್, ರಬ್ಬರ್, ಗ್ಲಾಸ್&ಮೆಟಲ್, ಪೇಪರ್, ಕಾರ್ಡ್‌ಬೋರ್ಡ್‌ ಮತ್ತು ಜವಳಿ ಎಂದು ವಿಂಗಡಿಸಲಾಗಿದೆ. ತೂಕ ಮತ್ತು ಪರಿಮಾಣದ ಆಧಾರದಲ್ಲಿ ಅಳತೆ ಮಾಡಲಾಗಿದೆ. ನಂತರ ಬ್ರಾಂಡೆಡ್ ಪ್ಲಾಸ್ಟಿಕ್‌ಗಳನ್ನು ಉತ್ಪನ್ನದ ಆಧಾರದಲ್ಲಿ ವಿಭಾಗಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ವಿದೇಶಿ ಬ್ರಾಂಡ್‌ಗಳಿಗಿಂತಲೂ ಸ್ಥಳೀಯ ಬ್ರಾಂಡ್‌ಗಳ ತ್ಯಾಜ್ಯವೇ ಹೆಚ್ಚು ದೊರೆತಿದೆ. ಆಹಾರ ವಸ್ತುಗಳ ಪೊಟ್ಟಣಗಳೇ ಹೆಚ್ಚಿನ ಪ್ರಮಾಣದಲ್ಲಿವೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT