ಮಂಗಳವಾರ, ಮೇ 17, 2022
26 °C
ಸ್ಮಾರ್ಟ್‌ ಸಿಟಿಯಡಿ ಪಬ್ಲಿಕ್‌ ಸೈಕಲ್‌ ಷೇರಿಂಗ್‌ ಯೋಜನೆ

PV Web Exclusive: ಹುಬ್ಬಳ್ಳಿಗೆ ಬರಲಿವೆ ಚೀನಾ ಬದಲಿಗೆ ಮಲೇಷ್ಯಾ ಸೈಕಲ್‌ಗಳು!

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಸ್ಮಾರ್ಟ್‌ ಸಿಟಿ ಯೋಜನೆಯಡಿ ಬೈಸಿಕಲ್‌ ಪೂರೈಸಲು ಚೀನಾ ಕಂಪನಿಗೆ ನೀಡಲಾಗಿದ್ದ ಟೆಂಡರ್‌ ಅನ್ನು ಕೊರೊನಾ ಹಿನ್ನೆಲೆಯಲ್ಲಿ ರದ್ದುಗೊಳಿಸಿದ್ದರಿಂದ ಮಲೇಷ್ಯಾ ಸೈಕಲ್‌ಗಳು ಹುಬ್ಬಳ್ಳಿಗೆ ಬರಲು ಸಜ್ಜಾಗಿವೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಸುಮಾರು 340 ಸೈಕಲ್‌ಗಳು ಹಡಗಿನಲ್ಲಿ ಕೌಲಾಲಂಪುರದಿಂದ ಹೊರಟಿದ್ದು, ಮುಂದಿನ ತಿಂಗಳಷ್ಟೊತ್ತಿಗೆ ಹುಬ್ಬಳ್ಳಿಗೆ ತಲುಪಲಿವೆ.

ಪರಿಸರ ಸ್ನೇಹಿ ಸಾರಿಗೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸ್ಮಾರ್ಟ್‌ ಸಿಟಿ ಯೋಜನೆಯಡಿ ಸೈಕಲ್‌ ಸವಾರಿಗೆ ಮಹತ್ವ ನೀಡಲಾಗುತ್ತಿದೆ. ವಾಯು ಮಾಲಿನ್ಯಕ್ಕೆ ಕಾರಣವಾಗುವ ಬೈಕ್‌, ಕಾರುಗಳನ್ನು ಬಿಟ್ಟು ಸೈಕಲ್‌ ಬಳಸಲಿ ಎನ್ನುವುದು ಇದರ ಹಿಂದಿನ ಉದ್ದೇಶ. ಟೆಂಡರ್‌ಶ್ಯೂರ್‌ ರಸ್ತೆ– ತೋಳನಕೆರೆ ರಸ್ತೆ, ಶಿರೂರು ಪಾರ್ಕ್‌ ರಸ್ತೆ, ವಿವೇಕಾನಂದ ನಗರ, ಹೊಸೂರಿನಿಂದ ಉಣಕಲ್‌ವರೆಗಿನ ಹಳೆ ಪಿ.ಬಿ.ರಸ್ತೆ ಸೇರಿದಂತೆ ವಿವಿಧೆಡೆ ಸೈಕಲ್‌ಗಾಗಿಯೇ ಪ್ರತ್ಯೇಕ ಪಥ ನಿರ್ಮಿಸಲಾಗಿದೆ. 

ಪ್ರತ್ಯೇಕ ಕಾರಿಡಾರ್‌ ನಿರ್ಮಿಸಲು ಸಾಧ್ಯವಾಗದಿದ್ದ ಕಡೆ, ರಸ್ತೆ ಚಿಕ್ಕದಿದ್ದಾಗ ಅದರ ಒಂದುಭಾಗದಲ್ಲಿ ಬಣ್ಣ ಬಳಿದು ಕಾರಿಡಾರ್‌ ಗುರುತು ಹಾಕಲಾಗಿದೆ. ಒಟ್ಟಾರೆಯಾಗಿ 30 ಕಿ.ಮೀ ಪ್ರದೇಶದಲ್ಲಿ ಸೈಕಲ್‌ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಗಾಗಿ ₹ 8.5 ಕೋಟಿ ಅನುದಾನ ತೆಗೆದಿರಿಸಲಾಗಿದೆ. ಈ ಸೈಕಲ್‌ ಪಥದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯ ವಿಶೇಷ ಸೈಕಲ್‌ಗಳ ಜೊತೆ ಸಾಮಾನ್ಯ ಸೈಕಲ್‌ಗಳನ್ನೂ ಓಡಿಸಲು ಅವಕಾಶ ನೀಡಲಾಗಿದೆ.

ಸೈಕಲ್‌ಗಳ ವಿಶೇಷ: ಸಾಮಾನ್ಯ ಸೈಕಲ್‌ಗಳಿಗಿಂತ ಇವು ಹಗುರವಾಗಿರಲಿವೆ. ಅಗತ್ಯಕ್ಕೆ ತಕ್ಕಂತೆ ಸೀಟು ಹಾಗೂ ಹ್ಯಾಂಡಲ್‌ಗಳ ಎತ್ತರವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು. ಇದರಲ್ಲಿ ಆರ್‌ಎಫ್‌ಐಡಿ ಚಿಪ್‌ ಅಳವಡಿಸಲಾಗಿರುತ್ತದೆ. ಇದರಿಂದಾಗಿ ಸೈಕಲ್‌ ಎಲ್ಲಿದೆ ಎನ್ನುವುದನ್ನು ಪತ್ತೆ ಹಚ್ಚಲು ಸುಲಭವಾಗುತ್ತದೆ. ಸೈಕಲ್‌ ಪಡೆಯಲು ಕಡ್ಡಾಯವಾಗಿ ಆಧಾರ್‌ ಕಾರ್ಡ್‌ ಹಾಗೂ ಮೊಬೈಲ್‌ ಸಂಖ್ಯೆ ನೀಡಿ ಹೆಸರು ನೋಂದಾಯಿಸಬೇಕು. ಶುಲ್ಕವನ್ನು ಆನ್‌ಲೈನ್‌ನಲ್ಲಿಯೇ ಪಾವತಿಸಬೇಕು.

34 ಕಡೆ ನಿಲ್ದಾಣ: ಹುಬ್ಬಳ್ಳಿಯಲ್ಲಿ 34 ಕಡೆ ಸೈಕಲ್‌ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು. ಸಾರ್ವಜನಿಕರು ಇಲ್ಲಿಂದ ಸೈಕಲ್‌ಗಳನ್ನು ಪಡೆದು, ತಾವು ಬಯಸಿದ ಸ್ಥಳಗಳಿಗೆ ಹೋಗಬಹುದು. ಅಲ್ಲಿಗೆ ಹತ್ತಿರದಲ್ಲಿರುವ ನಿಲ್ದಾಣಕ್ಕೆ ಸೈಕಲ್‌ಗಳನ್ನು ಒಪ್ಪಿಸಬಹುದು. ಸೈಕಲ್‌ಗಳನ್ನು ಪೂರೈಸುವುದು, ನಿಲ್ದಾಣಗಳನ್ನು ನಿರ್ಮಿಸುವುದು ಹಾಗೂ ಅವುಗಳ ನಿರ್ವಹಣೆ ಸೇರಿದಂತೆ ಒಟ್ಟಾರೆ ಯೋಜನೆಯನ್ನು ಬೆಂಗಳೂರಿನ ಟ್ರಿನಿಟಿ ಟೆಕ್ನಾಲಜೀಸ್‌ ಸಾಫ್ಟ್‌ವೇರ್‌ ಸೊಲ್ಯುಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ವಹಿಸಲಾಗಿದೆ. ₹ 8.5 ಕೋಟಿ ಮೊತ್ತದ ಟೆಂಡರ್ ಅದಕ್ಕೆ ನೀಡಲಾಗಿದೆ.

ಚೀನಾ ಸೈಕಲ್‌ ರದ್ದು: ‘ಸೈಕಲ್‌ ಪೂರೈಸುವಂತೆ 2019ರ ಅಂತ್ಯದ ವೇಳೆ ಚೀನಾ ಕಂಪನಿಯೊಂದಕ್ಕೆ ಟೆಂಡರ್‌ ನೀಡಲಾಗಿತ್ತು. 2020ರ ಫೆಬ್ರುವರಿ– ಮಾರ್ಚ್‌ನಲ್ಲಿ ಕೊರೊನಾ ಹರಡಿದ್ದರಿಂದ ಕೇಂದ್ರ ಸರ್ಕಾರವು ಚೀನಾ ಜೊತೆಗಿನ ವ್ಯವಹಾರಗಳನ್ನು ಕಡಿತಗೊಳಿಸಲು ಸೂಚಿಸಿತ್ತು. ಅದರ ಪ್ರಕಾರ, ಮಲೇಷ್ಯಾದ ಕಂಪನಿಗೆ ಟೆಂಡರ್‌ ನೀಡಲಾಯಿತು. ಆ ಸೈಕಲ್‌ಗಳು ಶೀಘ್ರದಲ್ಲಿ ಹುಬ್ಬಳ್ಳಿ ತಲುಪಲಿವೆ’ ಎಂದು ಸ್ಮಾರ್ಟ್‌ ಸಿಟಿ ಯೋಜನೆಯ ವಿಶೇಷ ಅಧಿಕಾರಿ ಎಸ್‌.ಎಚ್‌. ನರೇಗಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೈಕಲ್‌ ಬಳಸಲು ಪ್ರೋತ್ಸಾಹಿಸಲು ಮೊದಲ ಗಂಟೆ ಉಚಿತವಾಗಿ ನೀಡಲು ತೀರ್ಮಾನಿಸಲಾಗಿದೆ. ನಂತರದ ಪ್ರತಿ ಗಂಟೆಗೆ ₹ 10ರಿಂದ ₹ 15 ಶುಲ್ಕ ವಿಧಿಸಲು ಯೋಚಿಸಲಾಗಿದೆ. ಶುಲ್ಕ ದರವನ್ನು ಸ್ಮಾರ್ಟ್‌ ಸಿಟಿ ಸಲಹಾ ಸಮಿತಿ ಸಭೆಯಲ್ಲಿ ಅಂತಿಮಗೊಳಿಸಲಾಗುವುದು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು