ಭಾನುವಾರ, ಜುಲೈ 25, 2021
22 °C

ನೀಲಗಿರಿ ವನವೀಗ ನೀರು ಇಂಗುವ ತಾಣ

ಡಿ.ಜಿ.ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

Prajavani

ವರ್ಷದ ಹಿಂದೆ..

ನೂರು ಎಕರೆ ಪ್ರದೇಶದ ತುಂಬಾ ನೆಲದಾಳದಿಂದ ಕೋಟಿ ಕೋಟಿ ಲೀಟರ್‌ನಷ್ಟು ಅಂತರ್ಜಲವನ್ನು ಹೀರುವ ನೀಲಗಿರಿ ಕಾಡಿತ್ತು.

ಈಗ...

ಅದೇ ಜಾಗದಲ್ಲಿ ಕೋಟಿ ಕೋಟಿ ಲೀಟರ್‌ನಷ್ಟು ಮಳೆನೀರು ಇಂಗಿಸುವ ಸಾವಿರಾರು ಇಂಗುಗುಂಡಿಗಳಿವೆ. ಲಕ್ಷಾಂತರ ಲೀಟರ್‌ ನೀರು ಸಂಗ್ರಹಿಸುವ ಕೃಷಿ ಹೊಂಡಗಳಿವೆ. ಕೆಲವೇ ದಿನಗಳಲ್ಲಿ ಇಲ್ಲೊಂದು ಜೀವವೈವಿಧ್ಯ ಕಾಡು ಜನ್ಮ ತಾಳಲಿದೆ..!

ಹೌದು, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ನೂರು ಎಕರೆಯ ನೀಲಗಿರಿ ತೋಪು, ಈಗ ಮಳೆ ನೀರು ಇಂಗಿಸುವ ತಾಣವಾಗಿದೆ. ಇಲ್ಲಿನ ‘ನೆಲ–ಜಲ ಸಂರಕ್ಷಣೆಯ’ ಚಟುವಟಿಕೆಗಳನ್ನು ನೋಡುತ್ತಿದ್ದರೆ ‘ಬಾನಿಗೆ ಆಲಿಕೆ ಕಟ್ಟಿದ್ದಾರೇನೋ’ ಎನ್ನುವಂತೆ ಭಾಸವಾಗುತ್ತದೆ!

ಶುರುವಾಗಿದ್ದು ಹೀಗೆ...

ವರ್ಷದ ಹಿಂದಿನ ಮಾತು; ಆಗ ಇಲ್ಲಿ ಬೆಳೆದಿದ್ದ ನೀಲಗಿರಿ ಮರಗಳನ್ನು ಹರಾಜು ಹಾಕುವ ಸಮಯ. ಈ ಮರಗಳನ್ನು ತೆಗೆಸಿದ ಮೇಲೆ ಮತ್ತೆ ಇದೇ ಜಾಗದಲ್ಲಿ ನೀರು ಹೀರುವ ನೀಲಗಿರಿ ಮರಗಳನ್ನು ಬೆಳೆಸಬಾರದು. ಬದಲಿಗೆ, ಮಳೆ ನೀರು ಇಂಗಿಸುವ ಇಂಗುಗುಂಡಿಗಳನ್ನು ತೆಗೆಸಬೇಕು. ಜತೆಗೆ, ಸ್ಥಳೀಯ ಜಾತಿಯ ಹಣ್ಣು ಮತ್ತು ಕಾಡು ಗಿಡಗಳನ್ನು ಬೆಳೆಸಿ, ಪಂಚಾಯ್ತಿಗೆ ಹಣಕಾಸು ಮೂಲವನ್ನಾಗಿ ಮಾಡಬೇಕೆಂದು ನಿರ್ಧರಿಸಿದವರು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ್.

ಈ ಯೋಚನೆಯಂತೆ ಯೋಜನೆ ಸಿದ್ಧವಾಯಿತು. ಆ ಪ್ರಕಾರ ಮೊದಲು ಹರಾಜಿನ ನಂತರ ಉಳಿದ ನೀಲಗಿರಿ ಮರಗಳನ್ನು ಬುಡ ಸಮೇತ ತೆಗೆಸಿ ಭೂಮಿ ಹದಗೊಳಿಸಲಾಯಿತು. ತಾಲ್ಲೂಕು ಪಂಚಾಯ್ತಿ ಅಭಿವೃದ್ಧಿ ಅನುದಾನದಲ್ಲಿ ಎರಡು ಕೊಳವೆಬಾವಿಯನ್ನು ಕೊರೆಸಲಾಯಿತು. ನಂತರ ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ(ನರೇಗಾ) ಇಂಗುಗುಂಡಿಗಳು, ಕೃಷಿಹೊಂಡಗಳ ನಿರ್ಮಾಣ, ಅಂತರ್ಜಲ ಹೆಚ್ಚಿಸಲು ಬದುಗಳ ನಿರ್ಮಾಣ, ಕಾಡು–ಹಣ್ಣಿನ ಗಿಡಗಳನ್ನು ನೆಡುವುದು ಸೇರಿದಂತೆ ಐದು ಕಾಮಗಾರಿಗಳನ್ನು ಕೈಗೆತ್ತಿಕೊಂಡರು. 

‘ಲಾಕ್‌ಡೌನ್‌’ನಲ್ಲಿ ಉದ್ಯೋಗ 

ಆರಂಭದಲ್ಲಿ ಮರಗಳನ್ನು ತೆಗೆಸಿ, ಭೂಮಿ ಹದ ಮಾಡಿಸುವ ವೇಳೆಯಲ್ಲಿ ಕೊರೊನಾ ಸೋಂಕಿನ ಭೀತಿ– ದೇಶದಾದ್ಯಂತ ಲಾಕ್‌ಡೌನ್ ಘೋಷಣೆಯಾಯಿತು. ಕೃಷಿ– ಉದ್ಯೋಗ ಸೇರಿದಂತೆ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡವು. ಕಟ್ಟಡ ನಿರ್ಮಾಣ ಕೆಲಸಗಳಿಗಾಗಿ ನಗರಕ್ಕೆ ಹೋಗುತ್ತಿದ್ದ ಜನರಿಗೂ ಕೆಲಸವಿಲ್ಲದಂತಾಯಿತು. 

ಈ ಸಮಯದಲ್ಲಿ ಕಾರ್ಮಿಕರಿಗೆ ಉದ್ಯೋಗ ನೀಡಬೇಕಿತ್ತು. ಜತೆಗೆ, ಮಳೆಗಾಲ ಆರಂಭವಾಗುವುದರೊಳಗೆ ಇಂಗುಗುಂಡಿಗಳನ್ನೂ ತೆಗೆಸಬೇಕಿತ್ತು. ಆಗ ಶುರುವಾಗಿದ್ದೇ ನರೇಗಾ ಯೋಜನೆಯಡಿ ಗುಂಡಿಗಳನ್ನು ತೆಗೆಸುವ ಕಾರ್ಯ. ಏಪ್ರಿಲ್ ತಿಂಗಳಲ್ಲಿ ಈ ಕೆಲಸ  ಆರಂಭವಾಯಿತು. ಇದರಿಂದಾಗಿ ಲಾಕ್‌ಡೌನ್ ಅವಧಿಯಲ್ಲಿ ಉದ್ಯೋಗವಿಲ್ಲದೇ ಪರಿತಪಿಸುತ್ತಿದ್ದ ಸುತ್ತಮುತ್ತಲಿನ ಗ್ರಾಮಗಳ 130 ಜನರಿಗೆ ಪ್ರತಿ ದಿನ ಕೆಲಸ ಸಿಕ್ಕಿತು. ಪ್ರತಿ ನಿತ್ಯ ಕಾರ್ಮಿಕರು 250 ಗುಂಡಿಗಳನ್ನು (2 ಅಡಿ ಉದ್ದ X 2 ಅಡಿ ಆಳX 2 ಅಡಿ ಅಗಲ ಅಳತೆ) ತೆಗೆಯುತ್ತಿದ್ದರು. ಹೀಗೆ  ಎರಡೂವರೆ ತಿಂಗಳಲ್ಲಿ 8500 ಇಂಗು ಗುಂಡಿಗಳು, ಜತೆಗೆ ಒಂಬತ್ತು ಕೃಷಿ ಹೊಂಡಗಳು ಸಿದ್ಧವಾದವು. ಇದರಿಂದಾಗಿ 45ಕ್ಕೂ ಹೆಚ್ಚು ದಿನ ಕಾರ್ಮಿಕರಿಗೆ ಕೆಲಸ ಸಿಕ್ಕಿತು. ಈಗಲೂ ಆ ಕೆಲಸ ಮುಂದುವರಿದಿದ್ದು, 10 ಸಾವಿರ ಗುಂಡಿಗಳನ್ನು ತೆಗೆಸಬೇಕೆಂಬ ಗುರಿ ಇದೆ. ಕಳೆದ ವಾರ ಒಂದು ಹದ ಮಳೆಯೂ ಬಂತು. ತೆಗೆಸಿದ ಗುಂಡಿಗಳಲ್ಲಿ ನೀರು ತುಂಬಿಕೊಂಡಿತು.  

‘ಇಳಿಜಾರಿಗೆ ಅಡ್ಡಲಾಗಿ ಇಂಗುಗುಂಡಿಗಳನ್ನು ತೆಗೆಸಿದ್ದೇವೆ. ಅಲ್ಲಲ್ಲೇ ಸಣ್ಣ ಸಣ್ಣ ಕೃಷಿ ಹೊಂಡಗಳಿವೆ. ತುದಿಯಲ್ಲಿ 8 ಲಕ್ಷ ಲೀಟರ್ ನೀರು ಹಿಡಿಯುವ ಸಾಮರ್ಥ್ಯದ ಬೃಹತ್ ಕೃಷಿಹೊಂಡ ಮಾಡಿಸಿದ್ದೇವೆ. ಈ ಪ್ರದೇಶದಲ್ಲಿ ಬೀಳುವ ಹನಿ ಹನಿ ಮಳೆ ನೀರು ಭೂಮಿಯಲ್ಲಿ ಇಂಗುತ್ತದೆ. ಒಂದು ಗುಂಡಿ ತುಂಬಿದರೆ, ಮುಂದಿನ ಗುಂಡಿಗೆ ಹರಿಯುವಂತಹ ವಿನ್ಯಾಸವಿದೆ. ಗುಂಡಿಗಳಲ್ಲಿ ಹೆಚ್ಚಾದ ನೀರು ಕೊನೆಯಲ್ಲಿ ಕೃಷಿ ಹೊಂಡ ಸೇರುತ್ತದೆ’ ಎಂದು ಮಣ್ಣು–ನೀರು ಸಂರಕ್ಷಣೆ ವಿನ್ಯಾಸ ವಿವರಿಸಿದರು ಶಿವಕುಮಾರ್. 

ಮುಂದಿನ ಯೋಜನೆ..

ಗುಂಡಿಗಳ ನಿರ್ಮಾಣ ಕಾರ್ಯದ ಜತೆ ಜತೆಗೆ, ಬದುಗಳ ಮೇಲೆ ಹಣ್ಣಿನ ಗಿಡಗಳನ್ನು ಬೆಳೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಗೋಡಂಬಿ, ನಿಂಬೆ, ಮಾವು, ಹುಣಸೆ, ಹಲಸು, ನೆಲ್ಲಿ, ನೇರಳೆಯಂತಹ ಒಂದು ಸಾವಿರ ಹಣ್ಣಿನ ಗಿಡಗಳನ್ನು ಬೆಳೆಸುವ ಸಿದ್ಧತೆ ನಡೆದಿದೆ. ಈ ನೂರು ಎಕರೆ ಪ್ರದೇಶದಲ್ಲಿ ‘ನಮ್ಮ ಹೊಲ– ನಮ್ಮ ರಸ್ತೆ’ ಯೋಜನೆಯಡಿ ‘ಪ್ಲಸ್‌’ ಆಕಾರದಲ್ಲಿ ರಸ್ತೆ ಮಾಡಿಸಿದ್ದಾರೆ. ಆ ರಸ್ತೆಯ ಎರಡೂ ಬದಿಯಲ್ಲಿ ಹಿಪ್ಪೆ, ಆಲ, ತೇಗ, ಹೊನ್ನೆ, ಬೇವು, ಮಹಾಗನಿಯಂತಹ ಕಾಡು ಮರಗಳನ್ನು ನೆಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದೇ ಜೂನ್ 5ರ ವಿಶ್ವ ಪರಿಸರ ದಿನದಂದು ಈ ಗಿಡಗಳ ನಾಟಿಗೆ ಚಾಲನೆ ನೀಡಲಿದ್ದಾರೆ. ‘ಇನ್ನೆರಡು ವರ್ಷಗಳಲ್ಲಿ ಈ ಜಾಗಕ್ಕೆ ಹಸಿರುಡುಗೆ ತೊಡಿಸಬೇಕೆಂಬುದು ನಮ್ಮ ಗುರಿ’ ಎನ್ನುತ್ತಾರೆ ಶಿವಕುಮಾರ್.

***

ಮೊದಲು ನಗರಕ್ಕೆ ಗಾರೆ ಕೆಲಸಕ್ಕೆ ಹೋಗುತ್ತಿದ್ದೆ. ಲಾಕ್‌ಡೌನ್‌ ಆಗುತ್ತಿದ್ದಂತೆಯೇ ಕೆಲಸವಿಲ್ಲದಂತಾಯಿತು. ದಿಕ್ಕು ತೋಚದಂತಾಯಿತು. ಇದೇ ಸಮಯಕ್ಕೆ ನರೇಗಾ ಯೋಜನೆಯಡಿ ಇಲ್ಲಿ ಗುಂಡಿ ತೆಗೆಯುವ ಕೆಲಸ ಸಿಕ್ಕಿತು. ತುಂಬಾ ಅನುಕೂಲವಾಯಿತು.
-ನಾರಾಯಣಸ್ವಾಮಿ, ಕಾರ್ಮಿಕರು

***

ನಮ್ಮ ಊರಿನ ಪಕ್ಕದಲ್ಲೇ ಕೂಲಿ ಕೆಲಸ ಸಿಕ್ಕಿತು. ಕೆಲಸ ಮಾಡಿದ ಕೂಡಲೇ, ಹಣ ನಮ್ಮ ಖಾತೆಗೆ ಬರುತ್ತಿದೆ. ಈಗ ಕೂಲಿ ಕೆಲಸಕ್ಕಾಗಿ ದೂರ ಹೋಗುವ ಕಷ್ಟ ತಪ್ಪಿತು‍.
-ಆಂಜಿನಮ್ಮ, ಕಾರ್ಮಿಕರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು