ಮಂಗಳವಾರ, ಮೇ 11, 2021
27 °C

ಆಳ–ಅಗಲ: ಭಾರತ– ಬಾಂಗ್ಲಾ, ಸುವರ್ಣ ಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನೆರೆಯ ಬಾಂಗ್ಲಾದೇಶವು ಶುಕ್ರವಾರ (ಮಾರ್ಚ್‌ 26) ತನ್ನ 50ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಂಡಿದೆ. ಯಾವುದೇ ರಾಷ್ಟ್ರಕ್ಕೆ ಇದು ಒಂದು ಮಹತ್ವದ ಘಟ್ಟ. ಬಾಂಗ್ಲಾದೇಶದ ಜತೆಗೆ, ಭಾರತಕ್ಕೂ ಇದು ಒಂದು ರೀತಿ ಹೆಮ್ಮೆಯ ಕ್ಷಣ. ಯಾಕೆಂದರೆ, ಬಾಂಗ್ಲಾದೇಶವು ಐವತ್ತು ವರ್ಷಗಳ ಹಿಂದೆ ಪಾಕಿಸ್ತಾನದಿಂದ ಸಿಡಿದು ಸ್ವತಂತ್ರಗೊಳ್ಳುವುದರ ಹಿಂದಿನ ದೊಡ್ಡ ಶಕ್ತಿಯೇ ಭಾರತವಾಗಿತ್ತು. ಆ ಕಾರಣಕ್ಕಾಗಿಯೇ 50ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬಾಂಗ್ಲಾದೇಶವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದೆ.

ಮೋದಿ ಅವರು ಎರಡು ದಿನಗಳ ಬಾಂಗ್ಲಾದೇಶ ಪ್ರವಾಸ ಆರಂಭಿಸಿದ್ದಾರೆ. ಕೋವಿಡ್‌ ಸಂಕಷ್ಟದ ನಂತರ ಮೋದಿ ಅವರದ್ದು ಇದು ಮೊದಲ ವಿದೇಶ ಯಾತ್ರೆ. ಪಾಕಿಸ್ತಾನ ಮತ್ತು ಚೀನಾದ ಜತೆಗೆ ಭಾರತದ ಸಂಬಂಧ ಸ್ವಲ್ಪ ಹದಗೆಟ್ಟಿರುವ ಈ ಸಂದರ್ಭದಲ್ಲಿ ಮೋದಿ ಅವರ ಬಾಂಗ್ಲಾದೇಶ ಪ್ರವಾಸಕ್ಕೆ ಹಲವು ಮಹತ್ವಗಳಿವೆ.

ಹಾಗೆ ನೋಡಿದರೆ, ಬಾಂಗ್ಲಾದೇಶದ ಜತೆಗಿನ ಭಾರತದ ಸಂಬಂಧ ಕಳೆದ ಒಂದೆರಡು ದಶಕಗಳಿಂದ ಅಷ್ಟು ಆತ್ಮೀಯವಾಗೇನೂ ಇಲ್ಲ. 1970ರ ದಶಕದಲ್ಲಿ ರಾಜತಾಂತ್ರಿಕ ಮಾರ್ಗದಲ್ಲಿ ಬಾಂಗ್ಲಾದೇಶದ ಸಮಸ್ಯೆಯತ್ತ ಜಗತ್ತಿನ ಗಮನವನ್ನು ಸೆಳೆಯುವುದು, ಆನಂತರ ಪಾಕಿಸ್ತಾನದ ಜತೆಗಿನ ಯುದ್ಧದಲ್ಲಿ ನೇರವಾಗಿ ಭಾಗಿಯಾಗಿ ಬಾಂಗ್ಲಾದೇಶವನ್ನು (ಅಂದಿನ ಪೂರ್ವ ಪಾಕಿಸ್ತಾನ) ಸ್ವತಂತ್ರಗೊಳಿಸಿದ್ದು ಭಾರತವೇ. ಇದಾದ ನಂತರ ಕೆಲವು ವರ್ಷಗಳ ಕಾಲ ಭಾರತ ಮತ್ತು ಬಾಂಗ್ಲಾ ಸಂಬಂಧ ಆತ್ಮೀಯವಾಗಿತ್ತು. ಆದರೆ ಕ್ರಮೇಣ ಒಂದೊಂದೇ ವಿಚಾರದಲ್ಲಿ ಸಣ್ಣ–ಪುಟ್ಟ ಭಿನ್ನಮತಗಳು ಕಾಣಿಸಲಾರಂಭಿಸಿದವು. ‘ನಮ್ಮ ನಿಲುವುಗಳಿಗೆ ಭಾರತದಿಂದ ಸರಿಯಾದ ಸ್ಪಂದನೆ ಲಭಿಸಲಿಲ್ಲ’ ಎಂದು ಬಾಂಗ್ಲಾದೇಶವು ಆರೋಪಿಸಿದ್ದೂ ಇದೆ.

ಕಾಲಕ್ರಮೇಣ ನದಿ ನೀರು ಹಂಚಿಕೆ, ಗಡಿಯಲ್ಲಿ ಶಾಂತಿ ಕಾಪಾಡುವುದೇ ಮುಂತಾದ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗತೊಡಗಿದವು. ಸಾಗರ ಗಡಿ ನಿಗದಿ ವಿಚಾರದಲ್ಲೂ ಬಾಂಗ್ಲಾದೇಶವು ಭಾರತದ ಜತೆ ತಕರಾರು ತೆಗೆದು, ಜಾಗತಿಕ ವೇದಿಕೆಗಳಲ್ಲಿ ಅದನ್ನು ಪ್ರಸ್ತಾಪಿಸಿತ್ತು. ಇತ್ತೀಚೆಗೆ ಮ್ಯಾನ್ಮಾರ್‌ನ ರೋಹಿಂಗ್ಯಾ ವಲಸಿಗರ ಸಮಸ್ಯೆಯು ಭಾರತ– ಬಾಂಗ್ಲಾ ಸಂಬಂಧವನ್ನು ಇನ್ನಷ್ಟು ಹಾಳು ಮಾಡಲು ಕಾರಣವಾಯಿತು.

ಸನಿಹ ಬಂದ ಚೀನಾ: ಈಮಧ್ಯೆ, ಭಾರಿ ಪ್ರಮಾಣದ ಹೂಡಿಕೆಯ ಮೂಲಕ, ಬಾಂಗ್ಲಾದೇಶಕ್ಕೆ ಹತ್ತಿರವಾದ ಚೀನಾ, ಭಾರತ– ಬಾಂಗ್ಲಾದೇಶ ನಡುವಿನ ಬಿರುಕು ಇನ್ನಷ್ಟು ಆಳವಾಗುವಂತೆ ಮಾಡಿತು. 2016ರ ನಂತರ ಬಾಂಗ್ಲಾದೇಶದಲ್ಲಿ ಚೀನಾ ಕೋಟ್ಯಂತರ ರೂಪಾಯಿಯ ಹೂಡಿಕೆ ಮಾಡಿತು. ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಬಾಂಗ್ಲಾದೇಶಕ್ಕೆ ಭೇಟಿನೀಡಿದರು. ಇದರಿಂದ ಸಹಜವಾಗಿ ಎರಡೂ ರಾಷ್ಟ್ರಗಳು ಹತ್ತಿರವಾದವು.

ಆದರೆ, ಚೀನಾ ಜತೆಗಿನ ಸ್ನೇಹದಿಂದಾಗಿ ಭಾರತದ ಜತೆಗಿನ ಸಂಬಂಧಕ್ಕೆ ಧಕ್ಕೆಯಾಗಿದೆ ಎಂಬುದನ್ನು ಬಾಂಗ್ಲಾದೇಶ ಒಪ್ಪಲಿಲ್ಲ. ‘ಚೀನಾದ ಜತೆಗೆ ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ವಹಿವಾಟು ನಡೆಯುತ್ತದೆ. ಅದಕ್ಕೂ, ಭಾರತದ ಜತೆಗಿನ ಸಂಬಂಧಕ್ಕೂ ತಾಳೆ ಹಾಕುವಂತಿಲ್ಲ. ತನ್ನ ಆರ್ಥಿಕ ಅಭಿವೃದ್ಧಿಗಾಗಿ ಬಾಂಗ್ಲಾದೇಶವು ಎಲ್ಲಾ ರಾಷ್ಟ್ರಗಳ ಜತೆಗೆ ಸೌಹಾರ್ದ ಸಂಬಂಧವನ್ನು ಬಯಸುತ್ತದೆ’ ಎಂದು ಅಲ್ಲಿನ ವಿಶ್ಲೇಷಕರು ಹೇಳಿದ್ದರು.

ಈಗ ಪರಿಸ್ಥಿತಿ ಬದಲಾಗಿದೆ. ಗಡಿಯಲ್ಲಿ ‘ಚೀನಾದ ತಂಟೆ’ ಹೆಚ್ಚಾಗುತ್ತಿದ್ದಂತೆ, ಭಾರತವು ನೆರೆ ರಾಷ್ಟ್ರಗಳ ಜತೆಗಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಪ್ರಯತ್ನ ಆರಂಭಿಸಿದೆ.

ಸ್ವಾತಂತ್ರ್ಯೋತ್ಸವದ ಸುವರ್ಣ ಸಂದರ್ಭದಲ್ಲಿ ಮೋದಿ ಅವರ ಭೇಟಿಯು ಉಭಯ ರಾಷ್ಟ್ರಗಳ ನಡುವಿನ ಕಹಿಯನ್ನು ದೂರವಾಗಿಸಿ, ಸಂಬಂಧವನ್ನು ಗಟ್ಟಿಗೊಳಿಸಬಹುದೆಂದು ನಿರೀಕ್ಷಿಸಲಾಗಿದೆ. ಇತ್ತೀಚೆಗಷ್ಟೇ ಉಭಯ ರಾಷ್ಟ್ರಗಳ ನಡುವೆ ‘ಮೈತ್ರಿ ಸೇತು’ ಸೇತುವೆ ಉದ್ಘಾಟನೆಗೊಂಡಿದೆ. ಬಾಂಗ್ಲಾದಲ್ಲಿ ಇನ್ನಷ್ಟು ಹೂಡಿಕೆಯ ಪ್ರಸ್ತಾವಗಳೊಂದಿಗೆ ಮೋದಿ ಅವರು ಅಲ್ಲಿಗೆ ಹೋಗಿದ್ದಾರೆ. ಅಷ್ಟೇ ಅಲ್ಲ ಕೋವಿಡ್‌ ಲಸಿಕೆಯ ‘ಉಡುಗೊರೆ’ಯನ್ನೂ ಜತೆಗೆ ಒಯ್ದಿದ್ದಾರೆ. ಜಾಗತಿಕ ಮಟ್ಟದಲ್ಲಿ ಬದಲಾಗಿರುವ ರಾಜಕೀಯ ಸನ್ನಿವೇಶದಲ್ಲಿ ಸಂಬಂಧವನ್ನು ಸುಧಾರಿಸಿಕೊಳ್ಳುವುದು ಎರಡೂ ರಾಷ್ಟ್ರಗಳಿಗೆ ಅಗತ್ಯವೂ ಆಗಿದೆ.

ಚುನಾವಣೆ ಮೇಲೆ ಪ್ರಭಾವ

ಪ್ರಧಾನಿ ನರೇಂದ್ರ ಮೋದಿ ಅವರ ಬಾಂಗ್ಲಾದೇಶದ ಪ್ರವಾಸವು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೇಲೆ ಗಣನೀಯ ಪ್ರಭಾವ ಬೀರಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ಮೋದಿ ಅವರ ಈ ಪ್ರವಾಸದಲ್ಲಿ ಹೆಚ್ಚು ಮಹತ್ವ ಪಡೆದುಕೊಂಡಿರುವುದು ಒರಕಾಂಡಿ ಜಿಲ್ಲೆಯಲ್ಲಿರುವ ಠಾಕೂರ್‌ಭಾರಿ ಭೇಟಿ. ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾಗಿರುವ ಹಿಂದೂ ಮತುವಾ ಸಮುದಾಯದವರ ಧಾರ್ಮಿಕ ಕೇಂದ್ರವಿದು.

ಮತುವಾ ಸಮುದಾಯಕ್ಕೆ ವೈಷ್ಣವ ಪಂಥದ ದೀಕ್ಷೆ ನೀಡಿದ್ದ ಶ್ರೀ ಶ್ರೀ ಹರಿಚಂದ್ರ ಠಾಕೂರ್‌ ಜೀ ಅವರ ದೇವಾಲಯವು ಠಾಕೂರ್‌ಬಾರಿಯಲ್ಲಿದೆ. ಮತುವಾ ಸಮುದಾಯದ ಜನರ ಜತೆ ಮೋದಿ ಅವರು ಇಲ್ಲಿ ಸಂವಾದ ನಡೆಸಲಿದ್ದಾರೆ. ಢಾಕಾಗೆ ಹೊರಡುವ ಮುನ್ನ ಶುಕ್ರವಾರ ಬೆಳಿಗ್ಗೆ ಸಹ ಮೋದಿ ಅವರು, ‘ಮತುವಾ ಸಮುದಾಯದ ಜನರ ಜತೆ ಸಂವಾದ ನಡೆಸಲು ನಾನು ಅತ್ಯಂತ ಕಾತರನಾಗಿದ್ದೇನೆ’ ಎಂದು ಹೇಳಿದ್ದರು.

ಪಶ್ಚಿಮ ಬಂಗಾಳದಲ್ಲೂ ಮತುವಾ ಸಮುದಾಯದ ಜನರು ಭಾರಿ ಸಂಖ್ಯೆಯಲ್ಲಿ ಇದ್ದಾರೆ. 1947ರ ನಂತರ ಬಾಂಗ್ಲಾದಿಂದ ಭಾರತಕ್ಕೆ ಬಂದ ಕೋಟ್ಯಂತರ ಜನರಲ್ಲಿ ಮತುವಾ ಸಮುದಾಯದವರೂ ಇದ್ದಾರೆ. ಹೀಗೆ ಬಾಂಗ್ಲಾದೇಶದಿಂದ ಬಂದಿರುವ ಜನರು ಪಶ್ಚಿಮ ಬಂಗಾಳದ ಉತ್ತರ 24 ಪರಗಣ, ದಕ್ಷಿಣ 24 ಪರಗಣ, ನಾದಿಯಾ, ಸಿಲಿಗುರಿ, ಕೂಚ್‌ಬಿಹಾರಿ, ಜಲಪೈಗುರಿ, ವರ್ಧಮಾನ್ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ. ಒಟ್ಟು 30 ವಿಧಾನಸಭಾ ಕ್ಷೇತ್ರಗಳಲ್ಲಿ ಮತುವಾ ಜನರು ನಿರ್ಣಾಯಕರಾಗಿದ್ದಾರೆ.

ಈ ಸಮುದಾಯದ ಜನರಿಗೆ ಭಾರತದ ಪೌರತ್ವ ದೊರೆತಿಲ್ಲ. ಪೌರತ್ವ ನೀಡುತ್ತೇವೆ ಎಂದು ಬಿಜೆಪಿ ಘೋಷಿಸಿದ ನಂತರ, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವುದಾಗಿ ಈ ಸಮುದಾಯದ ನಾಯಕರು ಬಹಿರಂಗವಾಗಿ ಹೇಳಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಈ ಸಮುದಾಯದ ಜನರಿಗೆ ಕೇಂದ್ರ ಸರ್ಕಾರವು ಪೌರತ್ವ ನೀಡಲಿದೆ. ‘ಈಗ, ಚುನಾವಣೆ ನಡೆಯುತ್ತಿರುವ ಸಮಯದಲ್ಲೇ ಮೋದಿ ಅವರು ಪಕ್ಕದ ಬಾಂಗ್ಲಾದಲ್ಲಿ ಮತುವಾ ಜನರ ಜತೆ ಸಂವಾದ ನಡೆಸಲಿದ್ದಾರೆ. ಭಾರತದಲ್ಲಿರುವ ಮತುವಾ ಜನರನ್ನು ಓಲೈಸಲೆಂದೇ ಮೋದಿ ಅವರು ಈ ಸಂವಾದ ನಡೆಸುತ್ತಿದ್ದಾರೆ. ಬಾಂಗ್ಲಾಗೆ ಪ್ರಯಾಣ ಆರಂಭಿಸುವ ಮುನ್ನ ಈ ಬಗ್ಗೆ ಬಹಿರಂಗವಾಗಿ ಘೋಷಿಸಿದ್ದಾರೆ. ಇವೆಲ್ಲವೂ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ’ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

51 ಶಕ್ತಿಪೀಠಗಳಲ್ಲಿ ಒಂದಾದ ಸುಗಂಧ ಶಕ್ತಿ ಪೀಠಕ್ಕೂ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಶಕ್ತಿಯ ಆರಾಧಕರಿಗೆ ಇದು ಅತ್ಯಂತ ಮಹತ್ವದ ತೀರ್ಥ ಕ್ಷೇತ್ರವಾಗಿದ್ದು, ಬಂಗಾಳದ ಕಾಳಿಯ ಆರಾಧಕರು ಪ್ರತಿ ವರ್ಷ ಇಲ್ಲಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಕಾಳಿಯ ಆರಾಧಕರನ್ನು ಓಲೈಸುವ ಉದ್ದೇಶದಿಂದ ಮೋದಿ ಅವರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ ಎಂಬ ಆರೋಪವೂ ಇದೆ.

ಮಹತ್ವದ ಕ್ಷೇತ್ರಗಳಿಗೆ ಮೋದಿ ಭೇಟಿ

ಎರಡು ದಿನದ ಬಾಂಗ್ಲಾ ಪ್ರವಾಸದಲ್ಲಿ ಮೋದಿ ಅವರು ಧಾರ್ಮಿಕವಾಗಿ ಮತ್ತು ಐತಿಹಾಸಿಕವಾಗಿ ಮಹತ್ವ ಪಡೆದಿರುವ ಹಲವು ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ಅವುಗಳ ವಿವರ ಇಲ್ಲಿದೆ

1. ಬಂಗಬಂಧು ಸ್ಮಾರಕ: ತುಂಗಿಪಾರಾದಲ್ಲಿ ಇರುವ ಬಂಗಬಂಧು ಸ್ಮಾರಕಕ್ಕೆ ಮೋದಿ ಅವರು ಭೇಟಿ ನೀಡಲಿದ್ದಾರೆ. ಬಾಂಗ್ಲಾದೇಶದ ಪಿತಾಮಹ ಬಂಗಬಂಧು ಶೇಕ್ ಮುಜಿಬುರ್ ರಹಮಾನ್ ಅವರ ಗೋರಿ ಇರುವ ಸ್ಥಳವಿದು. ಇಲ್ಲಿ ಮೋದಿ ಅವರು ರಹಮಾನ್ ಅವರ ಸ್ಮಾರಕಕ್ಕೆ ಗೌರವ ಸಲ್ಲಿಸಲಿದ್ದಾರೆ. 2021, ರಹಮಾನ್ ಅವರ ಜನ್ಮ ಶತಮಾನೋತ್ಸವ ವರ್ಷವೂ ಹೌದು.

2. ರವೀಂದ್ರ ಕುಟೀ ಬಾರಿ: ರವೀಂದ್ರನಾಥ ಟ್ಯಾಗೋರ್ ಅವರ ಮೂಲ ಊರು ಕುಶ್ತಿಯಾದಲ್ಲಿ, ಅವರ ಅಜ್ಜ ದ್ವಾರಕನಾಥ ಟ್ಯಾಗೋರ್ ಅವರು ನಿರ್ಮಿಸಿದ್ದ ಕುಟೀರವಿದೆ. ಈ ಸ್ಥಳಕ್ಕೆ ಮೋದಿ ಭೇಟಿ ನೀಡಲಿದ್ದಾರೆ. ರವೀಂದ್ರನಾಥ ಟ್ಯಾಗೋರ್ ಅವರು ಈ ಕುಟೀರದಲ್ಲಿ ಹಲವು ವರ್ಷಗಳನ್ನು ಕಳೆದಿದ್ದಾರೆ. ಗೀತಾಂಜಲಿಯ ಹಲವು ಪದ್ಯಗಳನ್ನು ಇಲ್ಲಿಯೇ ರಚಿಸಿದ್ದರು. ಗೀತಾಂಜಲಿಯನ್ನು ಇಲ್ಲಿಯೇ ಇಂಗ್ಲಿಷ್‌ಗೆ ಭಾಷಾಂತರಿಸಿದ್ದರು.

3. ಬಾಘಾ ಜತಿನ್ ಸ್ಮಾರಕ: ಬಂಗಾಳದ ಸ್ವಾತಂತ್ರ್ಯ ಹೋರಾಟಗಾರ ಜತಿಂದರ್‌ನಾಥ್ ಮುಖರ್ಜಿ ಅವರ ಪೂರ್ವಜರ ಮನೆ ಇರುವ ಸ್ಮಾರಕಕ್ಕೆ ಮೋದಿ ಭೇಟಿ ನೀಡಲಿದ್ದಾರೆ. ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಎರಡಕ್ಕೂ ಬಾಘಾ ಜತಿನ್ ಅವರು ಅತ್ಯಂತ ಮಹತ್ವದ ನಾಯಕರಾಗಿದ್ದಾರೆ. ಲಾರ್ಡ್‌ ಕರ್ಜನ್ ವಿರುದ್ಧ ಹೋರಾಟಗಾರರಿಗೆ ತರಬೇತಿ ನೀಡಲು ಬಾಭಾ ಜತಿನ್ ಅವರು ಪಡೆಯೊಂದನ್ನು ಕಟ್ಟಿದ್ದರು. ಇವರಲ್ಲಿ ತರಬೇತಿ ಪಡೆದ ಸಾವಿರಾರು ಜನರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿದ್ದರು.

4. ಯುದ್ಧ ಸ್ಮಾರಕ: 1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಹುತಾತ್ಮರಾದ ಯೋಧರ ಸ್ಮಾರಕಕ್ಕೆ ಮೋದಿ ಅವರು ಶುಕ್ರವಾರ ಭೇಟಿ ನೀಡಿದ್ದಾರೆ. ಹುತಾತ್ಮರಿಗೆ ಗೌರವ ಸಲ್ಲಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು