ಗುರುವಾರ , ಆಗಸ್ಟ್ 18, 2022
25 °C

Explainer: ದೆಹಲಿಯಲ್ಲಿ ಹಿಂಸೆಗೆ ತಿರುಗಿದ 60 ದಿನಗಳ ಶಾಂತಿಯುತ ರೈತ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನವೆಂಬರ್ 26ರಂದು ಸಾವಿರಾರು ರೈತರು ದೆಹಲಿ ಹೆಬ್ಬಾಗಿಲಿಗೆ ಬಂದು ಶಾಂತಿಯುತ ಪ್ರತಿಭಟನೆ ಆರಂಭಿಸಿದ್ದರು. ಆದರೆ, 60 ದಿನ ಸತತವಾಗಿ ನಡೆದ ಹೋರಾಟ ನಿನ್ನೆ ಹಿಂಸಾರೂಪಕ್ಕೆ ತಿರುಗಿತ್ತು. ರಾಜಧಾನಿ ಬಂದ ಸಾವಿರಾರು ಸಂಖ್ಯೆ ಪ್ರತಿಭಟನಾಕಾರರು ಬ್ಯಾರಿಕೇಡ್ ಮುರಿದು, ಬಸ್‌ಗಳನ್ನು ಜಖಂಗೊಳಿಸಿ ಪೊಲೀಸರ ಮೇಲೆ ದಾಳಿ ನಡೆಸಿ ಸಿಕ್ಕ ಸಿಕ್ಕಲ್ಲೆಲ್ಲ ದಾಂಧಲೆ ನಡೆಸಿದರು. ಕೆಂಪುಕೋಟೆ ಮೇಲೆ ಅನ್ಯ ದ್ವಜ ಹಾರಿಸಿ ಆಕ್ರೋಶ ಹೊರ ಹಾಕಿದರು.

ಇದುವರೆಗೆ ರೈತರ ಜೊತೆ ಕೇಂದ್ರ ಸರ್ಕಾರ 11 ಸುತ್ತಿನ ಮಾತುಕತೆ ನಡೆಸಿದ್ದು, ಯಾವ ಸಭೆಯಲ್ಲೂ ಅಂತಿಮ ನಿರ್ಣಯಕ್ಕೆ ಬರಲು ಸಾಧ್ಯವಾಗಿಲ್ಲ. ಕೃಷಿ ಕಾಯ್ದೆಗಳನ್ನು ಒಂದೂವರೆ ವರ್ಷ ಅಮಾನತಿನಲ್ಲಿಡುವ ಕುರಿತಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಇಟ್ಟ ಪ್ರಸ್ತಾಪವನ್ನು ರೈತರು ತಿರಸ್ಕರಿಸಿದ್ದು, ಶತಾಯಗತಾಯ ಕಾಯ್ದೆಗಳನ್ನು ರದ್ದು ಮಾಡಬೇಕು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ನೀಡಬೇಕು ಎಂದು ಪಟ್ಟು ಹಿಡಿದಿವೆ.

ಶಾಂತಿಯುತವಾಗಿ ಆರಂಭವಾದ ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದವರೆಗಿನ 2 ತಿಂಗಳ ಕಾಲಾನುಕ್ರಮದ ಚಿತ್ರಣ ಇಲ್ಲಿದೆ.

ನವೆಂಬರ್ 26: ನವೆಂಬರ್ 5 ರಂದು ರಾಷ್ಟ್ರವ್ಯಾಪಿ "ಚಕ್ಕಾ ಜಾಮ್"(ಬಿಜೆಪಿ ನಾಯಕರ ಮನೆಗೆ ಮುತ್ತಿಗೆ) ನಂತರ, ಪಂಜಾಬ್ ಮತ್ತು ಹರಿಯಾಣದ ರೈತ ಸಂಘಗಳು "ದೆಹಲಿ ಚಲೋ" ಆಂದೋಲನಕ್ಕೆ ಕರೆ ನೀಡಿದವು. ಕೃಷಿ ಕಾನೂನುಗಳ ವಿರುದ್ಧ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದವು. ಹರಿಯಾಣ ಪೊಲೀಸರ ಅಶ್ರುವಾಯು ಮತ್ತು ಜಲ ಫಿರಂಗಿಗಳನ್ನು ಲೆಕ್ಕಿಸದೆ ರೈತರು ರಾಷ್ಟ್ರ ರಾಜಧಾನಿ ಗಡಿಗೆ ಬಂದು ಪ್ರತಿಭಟನೆಗೆ ಕುಳಿತರು. ಸಿಂಘು ಗಡಿಯಲ್ಲಿ ರೈತರ ಗದ್ದಲದ ಬಳಿಕ ಪೊಲೀಸರು ದೆಹಲಿ ಪ್ರವೇಶಿಸಲು ಅವಕಾಶ ಮಾಡಿಕೊಟ್ಟರು. ಬುರಾರಿಯ ನಿರಂಕರಿ ಮೈದಾನದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ಡಿಸೆಂಬರ್ 1: ಕೃಷಿ ಕಾನೂನುಗಳ ಬಗ್ಗೆ ಚರ್ಚಿಸಲು ಸಮಿತಿ ರಚಿಸುವ ಕೇಂದ್ರದ ಪ್ರಸ್ತಾವವನ್ನು ರೈತರು ತಿರಸ್ಕರಿಸಿದ ಬಳಿಕ 35 ರೈತ ಒಕ್ಕೂಟಗಳ ಮುಖಂಡರು ಮತ್ತು ಕೃಷಿ ಸಚಿವ ನರೇಂದ್ರ ತೋಮರ್ ನಡುವಿನ ಮೊದಲ ಮಾತುಕತೆ ಯಾವುದೇ ನಿರ್ಣಯಕ್ಕೆ ಬರದೆ ಮುರಿದುಬಿದ್ದಿತ್ತು.

ಡಿಸೆಂಬರ್ 3: ಎಂಟು ಗಂಟೆಗಳ ಮ್ಯಾರಥಾನ್ ಸಭೆಯ ನಂತರವೂ ಎರಡನೇ ಸುತ್ತಿನ ಮಾತುಕತೆ ಯಾವುದೇ ಫಲಿತಾಂಶ ನೀಡಲು ವಿಫಲವಾಯಿತು. ಕನಿಷ್ಠ ಬೆಂಬಲ ಬೆಲೆ ಮತ್ತು ಖರೀದಿ ವ್ಯವಸ್ಥೆಯ ಬಗ್ಗೆ ಕೇಂದ್ರವು ಅನೇಕ ಪ್ರಸ್ತಾಪಗಳನ್ನು ನೀಡಿದರೂ ಸಹ ರೈತ ನಾಯಕರು ಹಲವಾರು ಲೋಪದೋಷ ಮತ್ತು ಕಾನೂನಿನ ನ್ಯೂನತೆಗಳನ್ನು ಎತ್ತಿ ತೋರಿಸಿದರು.

ಡಿಸೆಂಬರ್ 5: ಐದನೇ ಸುತ್ತಿನ ಮಾತುಕತೆಯಲ್ಲಿ ಕೃಷಿ ಮುಖಂಡರು "ಮೌನ ವ್ರತ" ನಡೆಸಿದರು. ಕೃಷಿ ಕಾಯ್ದೆಗಳ ರದ್ದತಿ ಬಗ್ಗೆ "ಹೌದು ಅಥವಾ ಇಲ್ಲ" ಎಂಬ ಉತ್ತರ ನೀಡುವಂತೆ ಕೋರಿದರು, ಹಾಗಾಗಿ, ಕೇಂದ್ರವು ಮತ್ತೊಂದು ಸಭೆ ಕರೆಯಿತು.

ಡಿಸೆಂಬರ್ 8: ಈ ಮಧ್ಯೆ, ಪ್ರತಿಭಟನಾ ನಿರತ ರೈತರು ಭಾರತ್ ಬಂದ್‌ಗೆ ಕರೆ ನೀಡಿದರು. ಇದು ಪಂಜಾಬ್ ಮತ್ತು ಹರಿಯಾಣದಲ್ಲಿ ಗರಿಷ್ಠ ಪರಿಣಾಮ ಬೀರಿತು. ರಸ್ತೆ ಸಂಚಾರ, ಮಾರುಕಟ್ಟೆಗಳು ಬಂದ್ ಆದವು. ವಿರೋಧ ಪಕ್ಷಗಳ ಆಡಳಿತವಿರುವ ಒಡಿಶಾ, ಮಹಾರಾಷ್ಟ್ರ ಮತ್ತು ಬಿಹಾರದಂತಹ ರಾಜ್ಯಗಳಲ್ಲೂ ಸ್ವಲ್ಪ ಪ್ರಭಾವ ಬೀರಿತು.

ಬಳಿಕ ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ನಡೆದ ಸಭೆಯಲ್ಲೂ ಕಾಯ್ದೆಗಳಿಗೆ ತಿದ್ದುಪಡಿ ತರುವ ಪ್ರಸ್ತಾಪವನ್ನು ರೈತ ನಾಯಕರು ತಿರಸ್ಕರಿಸಿದರು.

ಡಿಸೆಂಬರ್ 16: ಪ್ರಯಾಣಿಕರಿಗೆ ತೊಂದರೆ ಆಗುತ್ತಿರುವ ಕಾರಣ ದೆಹಲಿ ಗಡಿಗಳಲ್ಲಿ ಪ್ರತಿಭಟನಾ ನಿರತ ರೈತರನ್ನು ಕೂಡಲೇ ತೆರವುಗೊಳಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೇಂದ್ರವು ಹೊಸ ಕೃಷಿ ಕಾನೂನುಗಳ ಅನುಷ್ಠಾನವನ್ನು ತಡೆಹಿಡಿದು, ಸಮಸ್ಯೆ ಬಗೆಹರಿಸಲು ನಿಷ್ಪಕ್ಷಪಾತ ಮತ್ತು ಸ್ವತಂತ್ರ ಸಮಿತಿ ರಚನೆಯ ಸೂಚನೆ ನೀಡಿತು. ಅಹಿಂಸಾತ್ಮಕ ಪ್ರತಿಭಟನೆ ನಡೆಸುವುದು ರೈತರ ಮೂಲಭೂತ ಹಕ್ಕು ಎಂದು ನ್ಯಾಯಾಲಯ ಹೇಳಿತು.

ಡಿಸೆಂಬರ್ 21: ಎಲ್ಲ ಪ್ರತಿಭಟನಾ ಸ್ಥಳಗಳಲ್ಲಿ ದಿನವಿಡೀ ಉಪವಾಸ ಸತ್ಯಾಗ್ರಹ ನಡೆಸಿದ ರೈತರು, ಡಿಸೆಂಬರ್ 25 ಮತ್ತು 27ರಂದು ಹರಿಯಾಣದ ಎಲ್ಲ ಟೋಲ್ ಗೇಟ್ ಬಂದ್ ಮಾಡುವ ನಿರ್ಧಾರ ಘೋಷಿಸಿದರು.

ಡಿಸೆಂಬರ್ 30: ಸರ್ಕಾರ ಮತ್ತು ರೈತ ಮುಖಂಡರ ನಡುವಿನ ಆರನೇ ಸುತ್ತಿನ ಮಾತುಕತೆ ಸ್ವಲ್ಪ ಮಟ್ಟಿಗೆ ಆಶಾವಾದ ಕಂಡುಬಂದಿತ್ತು. ಕೃಷಿ ತ್ಯಾಜ್ಯ ಸುಡುವ ರೈತರಿಗೆ ದಂಡ ವಿಧಿಸುವ ನಿಯಮಗಳಿಗೆ ಸಂಬಂಧಿಸಿದ ಸುಗ್ರೀವಾಜ್ಞೆಯಲ್ಲಿ ಕೈಬಿಡಲು ಮತ್ತು ಪ್ರಸ್ತಾವಿತ ವಿದ್ಯುತ್ ತಿದ್ದುಪಡಿ ಕಾನೂನನ್ನು ತಡೆಹಿಡಿಯಲು ಕೇಂದ್ರ ಒಪ್ಪಿಕೊಂಡಿತು.

ಜನವರಿ 4: ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ರೈತ ಮುಖಂಡರು ಪಟ್ಟು ಹಿಡಿದರು. ಕೇಂದ್ರ ಇದಕ್ಕೆ ಸೊಪ್ಪುಹಾಕದ ಹಿನ್ನೆಲೆಯಲ್ಲಿ ಏಳನೇ ಸುತ್ತಿನ ಮಾತುಕತೆ ಅನಿಶ್ಚಿತವಾಗಿ ಅಂತ್ಯಗೊಂಡಿತು.

ಜನವರಿ 8: ಸಭೆಯಲ್ಲಿ ರೈತ ಮುಖಂಡರು ತಮ್ಮ ನಿರ್ಧಾರಕ್ಕೆ ಅಂಟಿಕೊಂಡು ಕುಳಿತರು. ತಮ್ಮ "ಘರ್ ವಾಪ್ಸಿ" (ಮನೆಗೆ ಮರಳುವುದು) "ಕಾನೂನು ವಾಪ್ಸಿ" (ಕಾನೂನುಗಳನ್ನು ರದ್ದುಪಡಿಸಿದ) ನಂತರವೇ ಎಂಬ ಸ್ಪಷ್ಟ ಸಂದೇಶವನ್ನು ಕೇಂದ್ರಕ್ಕೆ ರವಾನಿಸಿದರು. ಕಾನೂನುಗಳನ್ನು ರದ್ದುಗೊಳಿಸುವ ಬೇಡಿಕೆಗಳಿಗೆ ಪರ್ಯಾಯ ಮಾರ್ಗಗಳನ್ನು ತರಲು ಸರ್ಕಾರ, ರೈತ ಮುಖಂಡರಿಗೆ ಸೂಚಿಸಿತು.

ಜನವರಿ 12: ಸುಪ್ರೀಂ ಕೋರ್ಟ್ ಮೂರು ಕೃಷಿ ಕಾನೂನುಗಳ ಅನುಷ್ಠಾನವನ್ನು ಸ್ಥಗಿತಗೊಳಿಸಿತು. ಎರಡು ತಿಂಗಳುಗಳಲ್ಲಿ ಈ ಬಗ್ಗೆ ಕೂಲಂಕುಶ ಪರಿಶೀಲನೆ ನಡೆಸಿ ಬದಲಾವಣೆಗಳು ಬೇಕಾದಲ್ಲಿ ಸೂಚಿಸುವಂತೆ ಒಂದು ಸಮಿತಿ ರಚನೆಗೆ ಸೂಚಿಸಿತು. ಈ ಸಮಿತಿಯಲ್ಲಿ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಮತ್ತು ಅಖಿಲ ಭಾರತ ಕಿಸಾನ್ ಸಮನ್ವಯ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಭೂಪಿಂದರ್ ಸಿಂಗ್ ಮನ್, ಕೃಷಿ ಅರ್ಥಶಾಸ್ತ್ರಜ್ಞ ಮತ್ತು ದಕ್ಷಿಣ ಏಷ್ಯಾ, ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರಮೋದ್ ಕುಮಾರ್ ಜೋಶಿ, ಕೃಷಿ ಅರ್ಥಶಾಸ್ತ್ರಜ್ಞ ಮತ್ತು ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ ಮಾಜಿ ಅಧ್ಯಕ್ಷ ಅಶೋಕ್ ಗುಲಾಟಿ, ಮತ್ತು ಶೆಟ್ಕರಿ ಸಂಘಟನೆ ಅಧ್ಯಕ್ಷ ಅನಿಲ್ ಘನಾವತ್ ಅವರನ್ನು ಸಮಿತಿಗೆ ನೇಮಕ ಮಾಡಲಾಯಿತು.

ಜನವರಿ 15: ಬೇಡಿಕೆ ಸಡಿಲಗೊಳಿಸಿ ತಿದ್ದುಪಡಿಗೆ ಸಿದ್ಧವಿದ್ದೇವೆ ಎಂದು ಕೇಂದ್ರದ ಹೇಳಿಕೆ ಬಳಿಕವೂ ಪ್ರತಿಭಟನಾ ನಿರತ ರೈತ ಸಂಘಗಳು ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕೆಂಬ ತಮ್ಮ ಮುಖ್ಯ ಬೇಡಿಕೆಗೆ ಅಂಟಿಕೊಂಡಿದ್ದ ಒಂಬತ್ತನೇ ಸುತ್ತಿನ ಮಾತುಕತೆಗಳು ಫಲಪ್ರದವಾಗಲಿಲ್ಲ,

ಜನವರಿ 21: ಹತ್ತನೇ ಸುತ್ತಿನ ಮಾತುಕತೆಯಲ್ಲಿ, ಮೂರು ಕೃಷಿ ಕಾನೂನುಗಳನ್ನು ಒಂದೂವರೆ ವರ್ಷ ಕಾಲ ಅಮಾನತುಗೊಳಿಸುವುದಾಗಿ ಸರ್ಕಾರ ಪ್ರಸ್ತಾಪವಿಟ್ಟಿತು. ವಿವಾದ ನಿವಾರಣೆಗೆ ಕಾಯ್ದೆಗಳ ಬಗ್ಗೆ ಚರ್ಚಿಸಲು ಜಂಟಿ ಸಮಿತಿಯನ್ನು ರಚಿಸಿತು.

ಜನವರಿ 22: ಮತ್ತೊಂದು ಸುತ್ತಿನ ಮಾತುಕತೆ ವೇಳೆ ಕೃಷಿ ಕಾಯ್ದೆಗಳನ್ನು ರದ್ದು ಮಾಡುವ ತಮ್ಮ ಮೂಲ ಬೇಡಿಕೆಯಿಂದ ಹಿಂದೆ ಸರಿಯಲು ರೈತ ಮುಖಂಡರು ನಿರಾಕರಿಸಿದರು. ಹಾಗಾಗಿ, ಕಾಯ್ದೆಗಳ ಅಮಾನತು ಪ್ರಸ್ತಾಪದ ಬಗ್ಗೆ ಚರ್ಚಿಸಲು ಯೂನಿಯನ್ ನಾಯಕರು ಒಪ್ಪಿದ ನಂತರ ಮತ್ತೆ ಭೇಟಿಯಾಗುವುದಾಗಿ ಹೇಳಿ ಸರ್ಕಾರ ತನ್ನ ನಿಲುವನ್ನು ಗಟ್ಟಿಗೊಳಿಸಿತು.

ಜನವರಿ 26: ಮಧ್ಯ ದೆಹಲಿಯ ಐಟಿಒದಲ್ಲಿ ಪೊಲೀಸರು ನಿಲ್ಲಿಸಿದ್ದ ಬಸ್‌ಗಳ ಮೇಲೆ ಪ್ರತಿಭಟನಾ ನಿರತ ರೈತರು ಕಲ್ಲು ತೂರಾಟ ನಡೆಸಿದರು. ಬ್ಯಾರಿಕೇಡ್ ಮುರಿದು ಒಳ ನುಗ್ಗಿ ದಾಂಧಲೆ ನಡೆಸಿದರು. ತಮ್ಮ ಟ್ರಾಕ್ಟರುಗಳನ್ನು ಅಡ್ಡಾದಿಡ್ಡಿ ಓಡಿಸಿ ರಾಷ್ಟ್ರ ರಾಜಧಾನಿಯಲ್ಲಿ ಭಯದ ವಾತಾವರಣ ಸೃಷ್ಟಿಸಿದರು. ಪೊಲೀಸರು ಅಶ್ರುವಾಯು ಮತ್ತು ಲಾಠಿಚಾರ್ಜ್ ಮಾಡಿ ಗುಂಪು ಚದುರಿಸಲು ಪ್ರಯತ್ನಿಸಿದರು.

ಇದಕ್ಕೂ ಮುನ್ನ, ಟ್ರ್ಯಾಕ್ಟರ್ ರ್‍ಯಾಲಿಗೆ ರೈತರು ಮತ್ತು ದೆಹಲಿ ಪೊಲೀಸರು ಮಾರ್ಗ ನಿಗದಿ ಮಾಡಿ ಒಪ್ಪಂದಕ್ಕೆ ಬಂದಿದ್ದರು. ಆದರೆ, ಒಪ್ಪಂದ ಮೀರಿ ರೈತರ ಗುಂಪುಗಳು ಸಿಂಗು, ಟಿಕ್ರಿ ಮತ್ತು ಗಾಜಿಪುರ ಗಡಿಭಾಗಗಳಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು ದೆಹಲಿಗೆ ನುಗ್ಗಿದರು.

ಇವುಗಳನ್ನೂ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು