ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ನೌಕರಿಯ ಹೊಸ ಲೋಕ

Last Updated 23 ಅಕ್ಟೋಬರ್ 2020, 21:00 IST
ಅಕ್ಷರ ಗಾತ್ರ
ADVERTISEMENT
""

ಕೆಲಸಗಳಲ್ಲಿ ಯಂತ್ರಗಳ ಬಳಕೆ ಅಥವಾ ಕೆಲಸಗಳ ಯಾಂತ್ರೀಕರಣವು (ಆಟೋಮೇಷನ್‌) ಜನರ ಉದ್ಯೋಗ ಕಸಿದುಕೊಳ್ಳುತ್ತದೆ ಎಂಬ ಕಳವಳ ಬಹಳ ಹಿಂದಿನಿಂದಲೂ ಇದೆ. ಆದರೆ, ಆಟೋಮೇಷನ್‌ನಿಂದಾಗಿ ಉದ್ಯೋಗಗಳ ಹೊಸ ದಿಗಂತ ಕೂಡ ತೆರೆದುಕೊಳ್ಳುತ್ತದೆ ಎಂಬುದೂ ನಿಜ. ವಿಶ್ವ ಆರ್ಥಿಕ ವೇದಿಕೆಯು (ಡಬ್ಲ್ಯುಇಎಫ್‌) ಕಳೆದ ಐದು ವರ್ಷಗಳಲ್ಲಿ ಕೆಲಸಗಳಲ್ಲಿ ಮತ್ತು ಕೌಶಲಗಳ ಅಗತ್ಯದಲ್ಲಿ ಆಗಿರುವ ಬದಲಾವಣೆಗಳನ್ನು ಗುರುತಿಸಿದೆ. ಆಟೋಮೇಷನ್‌ನಿಂದಾಗಿ, ಆಟೋಮೇಷನ್‌ನ ವಿಸ್ತರಣೆಯಿಂದಾಗಿ ನಷ್ಟವಾಗುವ ಕೆಲಸಗಳನ್ನು ಪಟ್ಟಿ ಮಾಡಿದೆ. ಅದರ ಜತೆಗೆ, ನಷ್ಟವಾಗುವ ನೌಕರಿಯ ಬದಲಿಗೆ ಹೊಸ ಉದ್ಯೋಗ ಅವಕಾಶಗಳನ್ನು ಪಡೆದುಕೊಳ್ಳಲು ಬೇಕಿರುವ ಕೌಶಲಗಳು ಯಾವುವು ಎಂಬುದರತ್ತಲೂ ಡಬ್ಲ್ಯುಇಎಫ್‌ ಗಮನ ಹರಿಸಿದೆ.

ವ್ಯಾಪಕವಾದ ಸಮೀಕ್ಷೆಗಳ ಮೂಲಕ ಕಂಡುಕೊಂಡ ಅಂಶಗಳ ವರದಿಯನ್ನೂ ಸಿದ್ಧಪಡಿಸಲಾಗಿದೆ. ಈ ವರದಿಯಲ್ಲಿ, ಉದ್ಯೋಗಕ್ಕೆ ಸಂಬಂಧಿಸಿದ ಅಲ್ಪಾವಧಿ ಮತ್ತು ದೀರ್ಘಾವಧಿ ಪ್ರವೃತ್ತಿಗಳೇನು ಎಂಬುದನ್ನು ಪಟ್ಟಿ ಮಾಡಲಾಗಿದೆ. ಸಾಂಪ್ರದಾಯಿಕವಾದ ಉದ್ಯೋಗಗಳಿಗಿಂತ ಹೊಸ ಯುಗದ ಉದ್ಯೋಗದ ಸ್ವರೂಪದಲ್ಲಿ ಬದಲಾವಣೆ ಆಗಿದೆ ಮತ್ತು ಕೆಲಸಗಳಿಗೆ ಬೇಕಿರುವ ಕೌಶಲಗಳಲ್ಲಿಯೂ ಬಹಳ ವ್ಯತ್ಯಾಸ ಆಗಿದೆ. ಕೆಲಸದ ಸ್ವರೂಪ ಮತ್ತು ಅದಕ್ಕೆ ಬೇಕಿರುವ ಕೌಶಲಗಳು ಎಂಬ ಎರಡು ಅಂಶಗಳು ಕೆಲಸದ ಮಾರುಕಟ್ಟೆಯ ಭವಿಷ್ಯದ ಮುನ್ನೋಟ ಒದಗಿಸುತ್ತವೆ. ಕೆಲಸ ಪಡೆದುಕೊಳ್ಳಲು ಮತ್ತು ಆ ಕೆಲಸದಲ್ಲಿ ಉತ್ತಮ ಭವಿಷ್ಯ ಕಂಡುಕೊಳ್ಳಲು ಮಾಡಿಕೊಳ್ಳಬೇಕಿರುವ ಸಿದ್ಧತೆಗಳೇನು ಮತ್ತು ಅನುಸರಿಸಬೇಕಿರುವ ಕಾರ್ಯತಂತ್ರ ಏನು ಎಂಬುದನ್ನು ತೀರ್ಮಾನಿಸಲು ಈ ವರದಿಯು ನೆರವಾಗುತ್ತದೆ.

ಕಳೆದ ಎರಡು ವರ್ಷಗಳಲ್ಲಿ ಕಂಪೆನಿಗಳು ಆಟೋಮೇಷನ್‌ನ ತೀವ್ರತೆಯನ್ನು ಹೆಚ್ಚಿಸಿವೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ. 2025ರ ಹೊತ್ತಿಗೆ ಇದು ಇನ್ನಷ್ಟು ಹೆಚ್ಚಳವಾಗಲಿದೆ. ಈ ಹಿಂದಿನ ವರ್ಷಗಳ ಹಾಗೆಯೇ, ಕ್ಲೌಡ್‌ ಕಂಪ್ಯೂಟಿಂಗ್‌, ದತ್ತಾಂಶ ವಿಶ್ಲೇಷಣೆ ಮತ್ತು ಇ–ಕಾಮರ್ಸ್‌ ಕ್ಷೇತ್ರಗಳಲ್ಲಿ ಆಟೋಮೇಷನ್‌ ಪ್ರಮಾಣ ಹೆಚ್ಚಿದೆ. ಅದರ ಜತೆಗೆ, ಎನ್‌ಕ್ರಿಪ್ಶನ್‌ ಕ್ಷೇತ್ರದಲ್ಲಿಯೂ ಯಂತ್ರಗಳ ಬಳಕೆಯ ಬಗ್ಗೆ ಒಲವು ಹೆಚ್ಚಾಗಿದೆ. ರೋಬೊಗಳು ಮತ್ತು ಕೃತಕ ಬುದ್ಧಿಮತ್ತೆಯು ಮುಂದಿನ ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಎದ್ದು ಕಾಣುವ ಅಂಶಗಳಾಗಲಿವೆ.

ತಂತ್ರಜ್ಞಾನದ ಬಳಕೆಯು ಎಲ್ಲ ಕ್ಷೇತ್ರಗಳಲ್ಲಿಯೂ ಒಂದೇ ರೀತಿಯಲ್ಲಿ ಇಲ್ಲ. ಡಿಜಿಟಲ್‌ ಮಾಹಿತಿ ಮತ್ತು ಸಂವಹನ, ಹಣಕಾಸು ಸೇವೆಗಳು, ಆರೋಗ್ಯ ಸೇವೆ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಮೇಲಿನ ಅವಲಂಬನೆ ಹೆಚ್ಚಾಗಿದೆ. ಗಣಿಗಾರಿಕೆ ಮತ್ತು ಲೋಹಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ದತ್ತಾಂಶ ವಿಶ್ಲೇಷಣೆ, ವಿನಿಮಯ ಮತ್ತು ರೋಬೊಗಳ ಬಳಕೆಗೆ ಹೆಚ್ಚು ಒತ್ತು ದೊರೆಯುತ್ತಿದೆ. ಸರ್ಕಾರ ಮತ್ತು ಸಾರ್ವಜನಿಕ ಉದ್ಯಮ ಕ್ಷೇತ್ರದಲ್ಲಿ ಎನ್‌ಕ್ರಿಪ್ಶನ್‌ಗೆ ಯಂತ್ರಗಳ ಬಳಕೆಗೆ ಹೆಚ್ಚಿನ ಒಲವು ಇದೆ.

ಹೊಸ ತಂತ್ರಜ್ಞಾನಗಳ ಮೇಲಿನ ಅವಲಂಬನೆಯು ವಿವಿಧ ಉದ್ಯಮ ಕ್ಷೇತ್ರಗಳ ಭವಿಷ್ಯದ ಪ್ರಗತಿಯನ್ನು ನಿರ್ಧರಿಸಲಿದೆ. ಹಾಗೆಯೇ, ಹೊಸ ಸ್ವರೂಪದ ಉದ್ಯೋಗ ಹಾಗೂ ಕೌಶಲಗಳಿಗೆ ಬೇಡಿಕೆಯೂ ಹೆಚ್ಚಲಿದೆ. ಯಾಂತ್ರೀಕರಣದಿಂದ ಆಗುವ ಉದ್ಯೋಗ ನಷ್ಟವನ್ನು ಬೇರೊಂದು ರೀತಿಯಲ್ಲಿ ಇದು ಭರ್ತಿ ಮಾಡಲಿದೆ ಎಂದು ಡಬ್ಲ್ಯುಇಎಫ್‌ ವರದಿಯು ಹೇಳುತ್ತದೆ. ಈಗ ಮನುಷ್ಯರು ಮಾಡುತ್ತಿರುವ ಹಲವು ಕೆಲಸಗಳು ಆಟೋಮೇಷನ್‌ನಿಂದಾಗಿ ಕಳೆದು ಹೋಗಲಿವೆ. ಹಲವರು ಉದ್ಯೋಗ ಕಳೆದುಕೊಳ್ಳುತ್ತಾರೆ ಎಂಬುದೂ ವಾಸ್ತವವಾಗಲಿದೆ. ಆದರೆ, ಕೆಲಸಗಾರರು ಹೊಸ ಕೌಶಲಗಳನ್ನು ಹೇಗೆ ರೂಢಿಸಿಕೊಳ್ಳುತ್ತಾರೆ ಎಂಬುದರ ಮೇಲೆ ಉದ್ಯೋಗ ನಷ್ಟದ ಪ್ರಮಾಣವನ್ನು ನಿರ್ಧರಿಸಬಹುದು.

ಹೊಸ ತಂತ್ರಜ್ಞಾನಗಳ ಕಾರಣದಿಂದಾಗಿ ಕಾರ್ಮಿಕ ಸಮೂಹದ ಪುನರ್‌ ರಚನೆ ಅನಿವಾರ್ಯವೇ ಆಗಲಿದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ ಹಲವು ಕಂಪೆನಿಗಳು ಹೇಳಿವೆ. ತಮ್ಮ ವ್ಯಾಪಾರ ಸ್ವರೂಪವನ್ನೇ ಬದಲಾಯಿಸಬೇಕಾಗುತ್ತದೆ ಎಂದು ಶೇ 55ರಷ್ಟು, ಇನ್ನಷ್ಟು ಆಟೋಮೇಷನ್‌ಗೆ ಒಳಗಾಗಿ ಈಗಿನ ಕಾರ್ಮಿಕ ಬಲವನ್ನು ಕಡಿತ ಮಾಡಬೇಕು ಎಂದು ಶೇ 43ರಷ್ಟು, ತಂತ್ರಜ್ಞಾನ ಬಳಕೆ ಹೆಚ್ಚಳದಿಂದ ಕಾರ್ಮಿಕ ಬಲವನ್ನು ವಿಸ್ತರಿಸಬೇಕಾಗಬಹುದು ಎಂದು ಶೇ 34ರಷ್ಟು ಮತ್ತು ನಿರ್ದಿಷ್ಟ ಕೆಲಸಗಳಿಗಾಗಿ ಗುತ್ತಿಗೆದಾರರನ್ನು ಅವಲಂಬಿಸಬೇಕಾಗಬಹುದು ಎಂದು ಶೇ 41ರಷ್ಟು ಕಂಪನಿಗಳು ಹೇಳಿವೆ.

ಅನಗತ್ಯ ಉದ್ಯೋಗ ಇಳಿಕೆ

ಅನಗತ್ಯ ಹುದ್ದೆಗಳ ಪ್ರಮಾಣವು ಈಗಿನ ಶೇ 15.4ರಿಂದ ಶೇ 9ಕ್ಕೆ (ಶೇ 6.4ರಷ್ಟು) ಇಳಿಯಲಿದೆ. ಹೊಸ ಉದ್ಯೋಗಗಳ ಸೃಷ್ಟಿಯು ಈಗಿನ ಶೇ 7.8ರಿಂದ ಶೇ 13.5ಕ್ಕೆ (ಶೇ 5.7) ಏರಿಕೆಯಾಗಲಿದೆ. 2025ರ ಹೊತ್ತಿಗೆ, ಶ್ರಮವು ಮನುಷ್ಯನಿಂದ ಯಂತ್ರಕ್ಕೆ ವರ್ಗಾವಣೆ ಆಗುವುದರಿಂದಾಗಿ 8.5 ಕೋಟಿ ಜನರು ಕೆಲಸ ಕಳೆದುಕೊಳ್ಳಲಿದ್ದಾರೆ. 9.7 ಕೋಟಿ ಹೊಸ ಉದ್ಯೋಗಗಳ ಸೃಷ್ಟಿಯೂ ಆಗಲಿದೆ. ಇದು 26 ದೇಶಗಳ 15 ಉದ್ಯಮಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದ ಅಂಶ.

ನಾಳಿನ ಉದ್ಯೋಗಗಳು: ನಷ್ಟವಾಗುವ ಉದ್ಯೋಗಗಳಿಗಿಂತ ಹೆಚ್ಚಾಗಿ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಆದರೆ, ಮುಂದಿನ ದಶಕದಲ್ಲಿ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಬಹುಪಾಲು ಹೊಸ ಸ್ವರೂಪದ ಕೆಲಸಗಳೇ ಆಗಿರುತ್ತವೆ. ಅಥವಾ ಈಗ ಇರುವ ಉದ್ಯೋಗಗಳೇ ಇದ್ದರೂ ಅವುಗಳ ಸ್ವರೂಪ, ಬೇಕಿರುವ ಕೌಶಲಗಳಲ್ಲಿ ಭಾರಿ ಬದಲಾವಣೆ ಆಗಲಿದೆ.

ಕೌಶಲದಲ್ಲಿ ಬದಲಾವಣೆ

ಈಗ ಇರುವ ಉದ್ಯೋಗಗಳ ಕಾರ್ಯನಿರ್ವಹಣೆ ಸ್ವರೂಪದಲ್ಲಿ ಗಣನೀಯ ಪರಿವರ್ತನೆ ಆಗಲಿದೆ. ಈಗಿನ ಕಾರ್ಯನಿರ್ವಹಣೆಗೆ ಅಗತ್ಯವಿರುವ ಕೌಶಲಗಳು, ಭವಿಷ್ಯದ ಉದ್ಯೋಗಗಳು ಬೇಡುವ ಕೌಶಲಗಳ ನಡುವೆ ವ್ಯತ್ಯಾಸ ಇರಲಿದೆ. ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಅಗತ್ಯವಿರುವ ಕೌಶಲಗಳು, ಈಗಿನ ಕೌಶಲಗಳಿಗಿಂತ ತುಸು
ಭಿನ್ನವಾಗಿರುತ್ತವೆ

ಉದ್ಯೋಗ ಸ್ವರೂಪದಲ್ಲಿ ಬದಲಾವಣೆ

ಮುಂದಿನ ದಿನಗಳಲ್ಲಿ ಬಹುತೇಕ ಕ್ಷೇತ್ರಗಳಲ್ಲಿನ ಉದ್ಯೋಗದ ಸ್ವರೂಪ ಬದಲಾಗಲಿದೆ. ಆಯಾ ಹುದ್ದೆಯು ಬೇಡುವ ಕಾರ್ಯದಕ್ಷತೆ, ಕಾರ್ಯಕ್ಷಮತೆ, ಕೌಶಲಗಳು, ವಿದ್ಯಾರ್ಹತೆ, ತರಬೇತಿ ಮಟ್ಟದಲ್ಲಿ ಬದಲಾವಣೆಯಾಗಲಿದೆ. ಕೆಲವು ಕ್ಷೇತ್ರಗಳಲ್ಲಿ ಈ ಬದಲಾವಣೆಯ ಪ್ರಮಾಣ ಅತ್ಯಧಿಕವಾಗಿರಲಿದೆ. ಕೆಲವು ಕ್ಷೇತ್ರಗಳಲ್ಲಿ ಬದಲವಾಣೆ ಪ್ರಮಾಣ ಕಡಿಮೆ. ಈ ಸ್ವರೂಪದ ಬದಲಾವಣೆಯ ಕಾರಣ ಈಗ ಇರುವ ಹುದ್ದೆಗಳು ಬದಲಾಗಲಿವೆ. ಕೆಲಸದ ಸ್ವರೂಪ ಮತ್ತು ವಾತಾವರಣ ಬದಲಾಗಲಿದೆ

ಬೇಡಿಕೆ ಹೆಚ್ಚುತ್ತಿರುವ ಹುದ್ದೆಗಳು

1. ದತ್ತಾಂಶ ವಿಶ್ಲೇಷಣೆ ಮತ್ತು ದತ್ತಾಂಶ ವಿಜ್ಞಾನ

2. ಕೃತಕ ಬುದ್ಧಿಮತ್ತೆ ಮತ್ತು ಮಷೀನ್ ಲರ್ನಿಂಗ್ ಪರಿಣತರು

3. ದತ್ತಾಂಶ ವಿಶ್ಲೇಷಕರು

4. ಡಿಜಿಟಲ್ ಮಾರ್ಕೆಂಟಿಂಗ್ ಪರಿಣತರು

5. ಆಟೊಮೇಷನ್ ಪ್ರೊಸೆಸ್ ಪರಿಣತರು

6. ವ್ಯವಹಾರ ಅಭಿವೃದ್ಧಿ ಪರಿಣತರು

7. ಡಿಜಿಟಲ್ ಟ್ರಾನ್ಸ್‌ಫಾರ್ಮೇಷನ್‌ ಪರಿಣತರು

8. ಮಾಹಿತಿ ಸುರಕ್ಷತೆ ಪರಿಣತರು

9. ಸಾಫ್ಟ್‌ವೇರ್ ಮತ್ತು ಅಪ್ಲಿಕೇಷನ್ ಡೆವಲಪರ್‌ಗಳು

10. ಇಂಟರ್ನೆಟ್ ಆಫ್ ಥಿಂಗ್ಸ್ ಪರಿಣತರು

11. ಪ್ರಾಜೆಕ್ಟ್ ಮ್ಯಾನೇಜರ್

12. ಬಿಸಿನೆಸ್‌ ಸರ್ವಿಸ್ ಮತ್ತು ಅಡ್ಮಿನಿಸ್ಟ್ರೇಷನ್ ಪರಿಣತರು

13. ಡಾಟಾಬೇಸ್ ಮತ್ತು ನೆಟ್‌ವರ್ಕ್ ಪರಿಣತರು

14. ರೊಬೊಟಿಕ್ ಎಂಜಿನಿಯರ್‌ಗಳು

15. ತಾಂತ್ರಿಕ ಸಲಹೆಗಾರರು

16. ನಿರ್ವಹಣೆ ಮತ್ತು ಸಂಘಟನಾ ವಿಶ್ಲೇಷಕರು

17. ಫೈನ್‌ಟೆಕ್ ಎಂಜಿನಿಯರ್‌ಗಳು

18. ಮೆಕ್ಯಾನಿಕ್‌ಗಳು ಮತ್ತು ಯಂತ್ರೋಪಕರಣ ರಿಪೇರಿ ಮಾಡುವವರು

19. ಸಾಂಸ್ಥಿಕ ಅಭಿವೃದ್ಧಿ ಪರಿಣತರು

20. ರಿಸ್ಕ್ ಮ್ಯಾನೇಜ್‌ಮೆಂಟ್ ಪರಿಣತರು

ಬೇಡಿಕೆ ಕುಗ್ಗುತ್ತಿರುವ ಹುದ್ದೆಗಳು

1. ಡಾಟಾ ಎಂಟ್ರಿ ಆಪರೇಟರ್‌

2. ಆಡಳಿತಾತ್ಮಕ ಮತ್ತು ಕಾರ್ಯನಿರ್ವಾಹಕ ಕಾರ್ಯದರ್ಶಿ

3. ಲೆಕ್ಕಪತ್ರ, ದಾಖಲೆ ಮತ್ತು ಪೇರೋಲ್‌ ನಿರ್ವಹಣೆ ಗುಮಾಸ್ತ

4. ಲೆಕ್ಕಪರಿಶೋಧಕರು

5. ಜೋಡಣೆ ಮತ್ತು ಕಾರ್ಖಾನೆ ನೌಕರರು

6. ಬಿಸಿನೆಸ್‌ ಸರ್ವಿಸ್ ಮತ್ತು ಅಡ್ಮಿನಿಸ್ಟ್ರೇಷನ್ ಮ್ಯಾನೇಜರ್

7. ಗ್ರಾಹಕ ಮಾಹಿತಿ ಮತ್ತು ಗ್ರಾಹಕ ಸೇವಾ ಸಿಬ್ಬಂದಿ

8. ಜನರಲ್ ಮತ್ತು ಆಪರೇಷನ್ಸ್ ಮ್ಯಾನೇಜರ್‌

9. ಸಾಮಗ್ರಿ ಮತ್ತು ದಾಸ್ತಾನು ನಿರ್ವಹಣೆ ಸಿಬ್ಬಂದಿ

10. ಆರ್ಥಿಕ ವ್ಯವಹಾರ ವಿಶ್ಲೇಷಕರು

11. ಠಪಾಲು ಸೇವಾ ಸಿಬ್ಬಂದಿ

12. ಮಾರಾಟ ಪ್ರತಿನಿಧಿ

13. ರಿಲೇಷನ್‌ಶಿಪ್ ಮ್ಯಾನೇಜರ್

14. ಡೋರ್‌ ಟು ಡೋರ್‌ ಮಾರಾಟಗಾರರು

15. ಬೀದಿಬದಿ ವ್ಯಾಪಾರಿಗಳು

16. ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ಸಾಧನ ಅಳವಡಿಕೆ ಮತ್ತು ರಿಪೇರಿ ಸಿಬ್ಬಂದಿ

17. ಮಾನವ ಸಂಪನ್ಮೂಲ ಅಭಿವೃದ್ಧಿ ಪರಿಣತರು

18. ತರಬೇತಿ ಪರಿಣತರು

ಆಧಾರ: ಫ್ಯೂಚರ್‌ ಆಫ್‌ ಜಾಬ್‌ ಸರ್ವೆ 2020

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT