ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | BF.7 ಕೊರೊನಾ ಹೊಸ ತಳಿಯ ಭಯ: ಇದರ ಲಕ್ಷಣಗಳೇನು? ಮುಂಜಾಗ್ರತೆ ಹೇಗೆ?

ವುಹಾನ್‌ನಲ್ಲಿ ಮೊದಲು ಪತ್ತೆಯಾದ ಸೋಂಕಿಗಿಂತಲೂ 4.4 ಪಟ್ಟು ಅಪಾಯಕಾರಿ ವೈರಸ್‌ ಇದು
Last Updated 24 ಡಿಸೆಂಬರ್ 2022, 7:38 IST
ಅಕ್ಷರ ಗಾತ್ರ

ಕೋವಿಡ್‌ 19ನ ಒಮೈಕ್ರಾನ್‌ ತಳಿಯ ಉಪತಳಿ ಬಿಎಫ್‌.7 ನಿಂದಾಗಿ ದೇಶದಲ್ಲಿ ವೈರಸ್‌ನ ಮತ್ತೊಂದು ಅಲೆಯ ಭೀತಿ ಎದುರಾಗಿದೆ. ವೈರಾಣುವಿನ ಉಗಮಸ್ಥಾನ ಚೀನಾದಲ್ಲಿ ಭಾರೀ ಪ್ರಮಾಣದಲ್ಲಿ ‍ಪ್ರಕರಣಗಳು ಕಂಡುಬರುತ್ತಿರುವಾಗಲೇ ದೇಶದಲ್ಲಿ ಹೊಸ ತಳಿ ಪತ್ತೆಯಾಗಿದೆ. ಗುಜರಾತ್ ಹಾಗೂ ಒಡಿಶಾದಲ್ಲಿ ತಲಾ ಎರಡು ಪ್ರಕರಣಗಳು ಪತ್ತೆಯಾಗಿದೆ. ಇನ್ನೊಂದು ಅಲೆ ಅಪ್ಪಳಿಸುವ ಸಾಧ್ಯತೆ ಇರುವುದರಿಂದ ಸರ್ಕಾರ ಈಗಾಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಸೂಚಿಸಿದೆ. ಮಾಸ್ಕ್‌ ಧರಿಸಿ, ಬೂಸ್ಟರ್‌ ಲಸಿಕೆ ಪಡೆದುಕೊಳ್ಳಿ ಎಂದು ನಿರ್ದೇಶಿಸಿದೆ.

ಹಾಗಾದರೆ ಏನಿದು ಹೊಸ ಉಪತಳಿ? ಇದರ ತೀವ್ರತೆ ಎಷ್ಟು? ಲಕ್ಷಣಗಳು ಏನೆಲ್ಲಾ? ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಏನೆಲ್ಲಾ? ಭಾರತದ ಸದ್ಯದ ಪರಿಸ್ಥಿತಿ ಏನು? ಸಂಕ್ಷಿಪ್ತ ವಿವರಣೆ ಇಲ್ಲಿದೆ.

ಏನಿದು ಬಿಎಫ್‌.7?

ಕೋವಿಡ್‌ 19 ನ ಓಮೈಕ್ರಾನ್‌ ಬಿಎ.5 ತಳಿಯ ಉಪತಳಿ ಇದಾಗಿದೆ. ಈ ತಳಿಯ ವೈರಾಣು ಅತಿ ಕಡಿಮೆ ಅವಧಿಯಲ್ಲಿ ಭಾರಿ ವೇಗದಲ್ಲಿ ಹರಡುವ ಸಾಮರ್ಥ್ಯ ಹೊಂದಿದೆ. ಒಮ್ಮೆ ಸೋಂಕು ತಗುಲಿಸಿಕೊಂಡು ಗುಣಮುಖರಾದವರಿಗೂ, ಈ ತಳಿಯಿಂದಾಗಿ ಮತ್ತೆ ಸೋಂಕು ತಾಕುವ ಸಾಧ್ಯತೆ ಇದೆ. ಲಸಿಕೆ ಪಡೆದುಕೊಂಡವರೂ ಈ ಸೋಂಕಿನಿಂದ ತಪ್ಪಿಸಿಕೊಳ್ಳುವುದು ಕಷ್ಟ.

ಮೊದಲ ಬಾರಿಗೆ ಚೀನಾದ ವುಹಾನ್‌ನಲ್ಲಿ ಕಾಣಿಸಿಕೊಂಡಿದ್ದ ಸೋಂಕಿನ ತಳಿಗಿಂತಲೂ, ಬಿಎಫ್‌.7 ಉಪತಳಿಯು 4.4 ಪಟ್ಟು ಹೆಚ್ಚು ತಟಸ್ಥ ಪ್ರತಿರೋಧ ಹೊಂದಿದೆ ಎಂದು ‘ಸೆಲ್‌ ಹೋಸ್ಟ್‌ ಆ್ಯಂಡ್ ಮೈಕ್ರೋಬ್‌‘ ನಿಯತಕಾಲಿಕೆ ಪ್ರಕಟಿಸಿದ ಅಧ್ಯಯನ ವರದಿ ಹೇಳಿದೆ. ಅಂದರೆ, ಸದ್ಯ ನಾವು ಪಡೆದಿರುವ ಲಸಿಕೆಯಿಂದ ಸಿಗುತ್ತಿರುವ ರೋಗ ಪ್ರತಿರೋಧಕ ಶಕ್ತಿಯೂ ಕೂಡ ಇದನ್ನು ತಡೆಯಲಾಗದು ಎಂದರ್ಥ.

ಬಿಎಫ್‌.7ನ ಲಕ್ಷಣಗಳು ಏನೆಲ್ಲಾ?

ಈ ಹಿಂದೆ ಬಂದಿದ್ದ ಕೊರೊನಾ ತಳಿಗಳ ಲಕ್ಷಣಗಳೇ ಇದರದ್ದೂ ಕೂಡ. ಉಸಿರಾಟದ ತೊಂದರೆ, ಜ್ವರ, ಗಂಟಲು ಕೆರೆತ,. ಕಟ್ಟಿದ ಮೂಗು, ಕಫ ಮುಂತಾದ ಲಕ್ಷಣಗಳು ಇರಲಿವೆ.

ಕೆಲ ರೋಗಿಗಳಲ್ಲಿ ಹೊಟ್ಟೆನೋವು, ಅತಿಸಾರ ಹಾಗೂ ವಾಂತಿ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಈ ಮೇಲಿನ ಲಕ್ಷಣಗಳು ಕಂಡುಬಂದರೆ ತಜ್ಞರನ್ನು ಸಂಪರ್ಕಿಸಿ, ಕೋವಿಡ್‌ ಪರೀಕ್ಷೆ ಮಾಡಿಕೊಳ್ಳುವುದು ಕ್ಷೇಮ.

ಈ ತಳಿಯ ತೀವ್ರತೆ ಕಡಿಮೆ ಇರುವುದರಿಂದ ಹೆಚ್ಚಿನ ಸಾವು–ನೋವು ಸಂಭವಿಸುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ. ಆದರೆ ಇದು ವೇಗವಾಗಿ ಹರಡುವುದರಿಂದ ಮುನ್ನೆಚ್ಚರಿಕಾ ಕ್ರಮ ಪಾಲಿಸುವುದು ಹಾಗೂ ಆರಂಭದಲ್ಲೇ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.

ಮುನ್ನೆಚ್ಚರಿಕಾ ಕ್ರಮಗಳು

ಸದ್ಯ ಕ್ರಿಸ್ಮಸ್‌ ಹಬ್ಬ ಹಾಗೂ ವರ್ಷಾಂತ್ಯದ ಸಾಲು ಸಾಲು ರಜೆಗಳಿಂದಾಗಿ ಕೋವಿಡ್‌ ಹೆಚ್ಚಿನ ಪ್ರಮಾಣದಲ್ಲಿ ಹರಡುವ ಸಾಧ್ಯತೆ ಇದೆ. ಹೀಗಾಗಿ ಕೋವಿಡ್ ನಿಯಮಾವಳಿಗಳನ್ನು ಪಾಲನೆ ಮಾಡುವುದು ಮುಖ್ಯವಾಗಲಿದೆ. ಮಾಸ್ಕ್‌ ಧಾರಣೆ, ದೈಹಿಕ ಅಂತ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್‌ ಬಳಕೆ ಮುಂತಾದ ಮೂಲಭೂತ ಮುನ್ನೆಚ್ಚರಿಕಾ ಕ್ರಮಗಳನ್ನು ಮರೆಯಬಾರದು.

ಚಳಿಗಾಲದ ಈ ಅವಧಿಯಲ್ಲಿ ಶೀತ, ಕಫ ಹಾಗೂ ಇನ್ನಿತರ ಸಾಮಾನ್ಯ ಕಾಯಿಲೆಗಳು ಕಂಡು ಬರುತ್ತವೆ. ಆದರೆ ಇದನ್ನು ನಿರ್ಲಕ್ಷ್ಯ ಮಾಡದೇ ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್ ಪರೀಕ್ಷೆ ಮಾಡಿಕೊಳ್ಳುವುದು ಉತ್ತಮ. ಈ ಮೇಲಿನ ಲಕ್ಷಣಗಳು ಇರುವವರೊಂದಿಗೆ ಸಂಪರ್ಕ ಉಂಟಾದರೆ, ಐಸೊಲೇಷನ್‌ಗೆ ಒಳಗಾಗಿ, ಕೋವಿಡ್‌ ಪರೀಕ್ಷೆ ಮಾಡಿಕೊಳ್ಳಿ.

ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಎಚ್ಚರಿಕೆ ವಹಿಸಬೇಕು.

ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಿಗೆ ಕೋವಿಡ್‌ ಬೇಗನೇ ಅಂಟಿಕೊಳ್ಳುತ್ತದೆ ಎನ್ನುವುದು ಈ ಹಿಂದಿನ ಅಧ್ಯಯನದಿಂದಲೇ ಸಾಬೀತಾಗಿದೆ. ಇದೇ ಕಾರಣದಿಂದಾಗಿ ಚೀನಾದಲ್ಲಿ ನಿತ್ಯ ಎರಡು–ಮೂರು ಕೋಟಿ ಪ್ರಕರಣಗಳು ಪತ್ತೆಯಾಗುತ್ತಿವೆ.

ರೋಗ ನಿರೋಧಕ ಶಕ್ತಿ ಹೆಚ್ಚಳ ಮಾಡಲು ಬೇಕಾದ ಕ್ರಮಗಳನ್ನು ಪಾಲಿಸಿ.

ಉದಾಹರಣೆಗೆ: ಸರಿಯಾದ ವ್ಯಾಕ್ಸಿನ್‌ ಪಡೆದುಕೊಳ್ಳುವುದು, ನಿತ್ಯ ನಿಯಮಿತ ವ್ಯಾಯಾಮ, ಸರಿಯಾದ ಆಹಾರ ಸೇವನೆ, ಮಾಸ್ಕ್‌ ಧಾರಣೆ, ಅಗತ್ಯ ನಿದ್ದೆ, ನಿಯಮಿತವಾಗಿ ಕೈ ಕಾಲುಗಳನ್ನು ಶುಚಿಗೊಳಿಸುವುದು, ಒತ್ತಡ ನಿವಾರಿಸಿಕೊಳ್ಳುವುದು, ಬೇಕಾದಷ್ಟು ನೀರು ಕುಡಿಯುವುದು ಇತ್ಯಾದಿ.

ಭಾರತದ ಪರಿಸ್ಥಿತಿ ಹೇಗಿದೆ?

ಸದ್ಯ ಭಾರತದಲ್ಲಿ ಒಟ್ಟು ನಾಲ್ಕು ಬಿಎಫ್.7 ತಳಿಯ ಸೋಂಕು ಪತ್ತೆಯಾಗಿದೆ. ಹೆಚ್ಚು ಅಪಾಯಕಾರಿ ಅಲ್ಲದೇ ಹೋದರೂ, ಭಾರೀ ವೇಗವಾಗಿ ಹರಡುವುದರಿಂದ ಮುನ್ನೆಚ್ಚರಿಕೆ ಅಗತ್ಯ. ‘ಕೋವಿಡ್‌ ಇನ್ನೂ ಮುಗಿದಿಲ್ಲ. ನಿಯಮಾವಳಿಗಳನ್ನು ಪಾಲಿಸಿ ಎಂದು ಆರೋಗ್ಯ ಸಚಿವ ಮನ್ಸುಖ್‌ ಮಾಂಡವಿಯ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಸಂಬಂಧಪಟ್ಟ ಎಲ್ಲರಿಗೂ ಎಚ್ಚರಿಕೆಯಿಂದಿರಿ. ನಿಗಾ ವಹಿಸಿ ಎಂದು ಹೇಳಿದ್ದಾರೆ. ಅಲ್ಲದೇ ಮುಂಬರುವ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿ ಎನ್ನುವ ನಿರ್ದೇಶನವನ್ನೂ ನೀಡಿದ್ದಾರೆ.

ವಿದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ, ಜೀನೋಮ್‌ ಸೀಕ್ವೆನ್ಸಿಂಗ್ ಮಾಡಬೇಕು ಮುಂತಾದ ನಿರ್ದೇಶನಗಳು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ ಬಂದಿವೆ. ಸದ್ಯದ ಮಟ್ಟಿಗೆ ಭಾರತದಲ್ಲಿ ಯಾವುದೇ ಅಪಾಯ ಇಲ್ಲದೇ ಹೋದರೂ, ವರ್ಷಾಂತ್ಯದ ಮೋಜು–ಮಸ್ತಿ, ಪ್ರವಾಸ ಮುಂತಾದವುಗಳಿಂದ ಹರಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ಚೀನಾ, ಜಪಾನ್, ದಕ್ಷಿಣ ಕೊರಿಯಾ, ಫ್ರಾನ್ಸ್‌ ಹಾಗೂ ಅಮೆರಿಕದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಭಾರತ ಕೂಡ ಎಚ್ಚರಿಕೆಯಿಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT