ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ಭಾರತದ ಬಗಲಲ್ಲಿ ಚೀನಾ ರೈಲು

Last Updated 1 ಆಗಸ್ಟ್ 2021, 20:30 IST
ಅಕ್ಷರ ಗಾತ್ರ

ಗಾಲ್ವನ್ ನದಿ ಕಣಿವೆಯಲ್ಲಿ ಎರಡೂ ದೇಶಗಳ ಸೈನಿಕರ ನಡುವೆ 2020ರ ಜೂನ್‌ 15ರಂದು ನಡೆದ ಸಂಘರ್ಷ, ಅದರಲ್ಲಿ ಭಾರತದ 20 ಯೋಧರ ಹತ್ಯೆಯು ಎರಡೂ ದೇಶಗಳ ನಡುವಣ ದ್ವಿಪಕ್ಷೀಯ ಸಂಬಂಧವನ್ನು ಇತ್ತೀಚಿನ ವರ್ಷಗಳಲ್ಲೇ ಪಾತಾಳಕ್ಕೆ ಕುಸಿಯುವಂತೆ ಮಾಡಿತು. 1988ರಲ್ಲಿ ಪ್ರಧಾನಿಯಾಗಿದ್ದ ರಾಜೀವ್‌ ಗಾಂಧಿ ಅವರು ಬೀಜಿಂಗ್‌ಗೆ ಭೇಟಿ ಕೊಟ್ಟ ಬಳಿಕ ಎರಡೂ ದೇಶಗಳ ನಡುವಣ ಸಂಬಂಧವು ಸುಧಾರಣೆಯ ಹಾದಿಗೆ ಬಂತು ಎನ್ನಲಾಗುತ್ತಿದೆ. ಆದರೆ, 2020ರ ಜೂನ್‌ 15ರ ಬಳಿಕ ಸಂಬಂಧವು ಹದಗೆಡುತ್ತಲೇ ಸಾಗಿದೆ.

ಭಾರತ– ಚೀನಾ ನಡುವೆ 3,488 ಕಿ.ಮೀ. ಉದ್ದದ ಗಡಿ ಇದೆ.ಜಮ್ಮು–ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳು ಚೀನಾ ಗಡಿಯಲ್ಲಿರುವ ಪ್ರದೇಶಗಳು. ಬಹುತೇಕ ಪ್ರದೇಶಗಳಲ್ಲಿ ಅಂತರರಾಷ್ಟ್ರೀಯ ಗಡಿಯ ವ್ಯಾಖ್ಯಾನ ನಿಖರವಾಗಿಲ್ಲ. ಇದು ಎರಡೂ ದೇಶಗಳ ನಡುವೆ ಆಗಾಗ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಭಾರತದ ಗಡಿ ಸಮೀಪದಲ್ಲಿರುವ ನಿನ್ಷಿ ಪಟ್ಟಣದವರೆಗೆ ಬುಲೆಟ್‌ ರೈಲು ಸಂಚಾರವನ್ನು ಚೀನಾ ಆರಂಭಿಸಿದೆ. ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ರೈಲಿನಲ್ಲಿ ಇಲ್ಲಿಗೆ ಇತ್ತೀಚೆಗೆ ಭೇಟಿ ನೀಡಿದ್ದರು ಎಂಬುದು ಗಡಿ ಸಮಸ್ಯೆಯತ್ತ ಮತ್ತೆ ಗಮನ ಹರಿಸುವಂತೆ ಮಾಡಿದೆ.

ಆದರೆ, ಅತೃಪ್ತಿಗೆ ಕಾರಣ ಗಡಿ ವಿವಾದ ಮಾತ್ರ ಅಲ್ಲ ಎಂಬ ವಾದವೂ ಇದೆ. ಎರಡೂ ದೇಶಗಳು ಜಾಗತಿಕವಾಗಿ ಹೊಂದಿರುವ ಮಹತ್ವಾಕಾಂಕ್ಷೆ ಮತ್ತು ಪರಸ್ಪರ ಪೈಪೋಟಿಯೇ ಸಂಘರ್ಷಕ್ಕೆ ಮುಖ್ಯ ಕಾರಣ ಆಗುತ್ತಿದೆ ಎಂದು ಕಾರ್ನೆಗಿ ಇಂಡಿಯಾ ಸಂಸ್ಥೆಯ ಅಧ್ಯಯನವೊಂದು ಹೇಳಿದೆ.

2008ರ ಆರ್ಥಿಕ ಬಿಕ್ಕಟ್ಟಿನ ಬಳಿಕ ಚೀನಾವು ತನ್ನ ಜಾಗತಿಕ ಆಕಾಂಕ್ಷೆಯನ್ನು ಒಳಗೊಳ್ಳುವ ರೀತಿಯಲ್ಲಿ ವಿದೇಶ ನೀತಿಯನ್ನು ಮಾರ್ಪಡಿಸಿತು. ಜಾಗತಿಕ ಮಟ್ಟದಲ್ಲಿ ತನ್ನ ಪಾತ್ರದ ವಿಸ್ತರಣೆಯು ಭಾರತದ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದನ್ನು ಚೀನಾ ಗಣನೆಗೆ ತೆಗೆದುಕೊಳ್ಳಲಿಲ್ಲ.

ತನ್ನ ಹಿತಾಸಕ್ತಿಯನ್ನು ಚೀನಾ ದಮನ ಮಾಡಲು ಯತ್ನಿಸುತ್ತಿದೆ ಎಂದು ಭಾರತ ಭಾವಿಸಿತು. ತನ್ನ ಹಿತಾಸಕ್ತಿ ರಕ್ಷಣೆಗೆ ಅಗತ್ಯವಾದ ರೀತಿಯಲ್ಲಿ ವಿದೇಶ ನೀತಿಯನ್ನು ರೂಪಿಸಲು ತೊಡಗಿತು. ಅದರ ಪರಿಣಾಮವೇ ‘ನೆರೆ ದೇಶಗಳೇ ಮೊದಲು’ ನೀತಿ. ಕ್ವಾಡ್‌ ಕೂಟ ವಿಸ್ತರಣೆ, ಅಮೆರಿಕದ ಜತೆಗೆ ಹೆಚ್ಚಿನ ಸಹಕಾರ, ಹಿಂದೂ ಮಹಾಸಾಗರ – ಪೆಸಿಫಿಕ್‌ ಪ್ರದೇಶದಲ್ಲಿ ಚೀನಾದ ವಿರೋಧಿ ದೇಶಗಳ ಜತೆಗೆ ಭಾರತದ ಒಡನಾಟಹೆಚ್ಚಳವು ಎರಡೂ ದೇಶಗಳ ನಡುವೆ ಸೃಷ್ಟಿಯಾದ ಅಪನಂಬಿಕೆಯ ಪರಿಣಾಮಗಳು.

ಗಡಿ ಗ್ರಾಮಗಳ ಅಭಿವೃದ್ಧಿ

ಟಿಬೆಟ್‌ನ ರಾಜಧಾನಿ ಲಾಹ್ಸಾದಿಂದ ಟಿಬೆಟ್-ಭಾರತ ಗಡಿಪಟ್ಟಣ ನಿನ್ಷಿ ನಡುವಣ ಬುಲೆಟ್ ರೈಲಿನ ಸಂಚಾರ ಕಳೆದ ವಾರವಷ್ಟೇ ಆರಂಭವಾಗಿದೆ. ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಲಾಹ್ಸಾದಲ್ಲಿ ಈ ರೈಲಿಗೆ ಚಾಲನೆ ನೀಡಿದ್ದಾರೆ. ಭಾರತದ ಅರುಣಾಚಲ ಪ್ರದೇಶದ ಗಡಿಯಿಂದ ಕೆಲವೇ ಕಿ.ಮೀ. ದೂರದಲ್ಲಿರುವ ಈ ಪಟ್ಟಣಕ್ಕೆ, ಟಿಬೆಟ್‌ನ ಹಲವೆಡೆಯಿಂದ ರೈಲು ಸಂಚಾರವನ್ನು ಈ ಬುಲೆಟ್ ರೈಲು ಸುಗಮಗೊಳಿಸಿದೆ. ಭಾರತ-ಚೀನಾ ಗಡಿ ಸಂಘರ್ಷವನ್ನು ಗಮನದಲ್ಲಿ ಇರಿಸಿಕೊಂಡು ನೋಡುವುದಾದರೆ, ಚೀನಾ ತನ್ನ ಗಡಿಯಲ್ಲಿ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿದೆ ಎಂದೇ ವಿಶ್ಲೇಷಿಸಲಾಗಿದೆ.

ಪೂರ್ವ ಲಡಾಖ್‌ನಲ್ಲಿ ಭಾರತ-ಚೀನಾ ಸೈನಿಕರ ಸಂಘರ್ಷ ನಡೆದ ನಂತರ ಗಡಿಯಲ್ಲಿ ಮೂಲಸೌಕರ್ಯವನ್ನು ಹೆಚ್ಚಿಸಲು ಚೀನಾ ಸರ್ಕಾರ ಕ್ರಮ ತೆಗೆದುಕೊಂಡಿದೆ. ಗಡಿ ಗ್ರಾಮಗಳ ಸಬಲೀಕರಣ ಎಂಬ ಹೊಸ ಯೋಜನೆಯನ್ನು ಚೀನಾ ಪ್ರಕಟಿಸಿದೆ. ಇದಕ್ಕಾಗಿ ಭಾರತ-ಚೀನಾ ಗಡಿಯಲ್ಲಿ 624 ಗ್ರಾಮಗಳನ್ನು ಚೀನಾ ಗುರುತಿಸಿದೆ. ಈ ಎಲ್ಲಾ ಗ್ರಾಮಗಳ ನಡುವೆ ಸಂಪರ್ಕಕ್ಕೆ ಲಾಹ್ಸಾ-ನಿನ್ಷಿ ಬುಲೆಟ್ ರೈಲು ಮಾರ್ಗವು ಕೊಂಡಿಯಾಗಿದೆ.

ಈ 624 ಗಡಿ ಗ್ರಾಮಗಳನ್ನು ಚೀನಾ ಗಡಿ ಠಾಣೆಗಳು ಎಂದು ವರ್ಗೀಕರಿಸಿದೆ. ಈ ಗ್ರಾಮಗಳಲ್ಲಿ ಒಂದೊಂದು ಭದ್ರತಾ ತುಕಡಿಯನ್ನು ನಿಯೋಜಿಸಿದೆ. ಜತೆಗೆ ತುರ್ತು ಸಂದರ್ಭದಲ್ಲಿ ಅತ್ಯಂತ ತ್ವರಿತವಾಗಿ ಈ ಗ್ರಾಮಗಳಿಗೆ ತಲುಪಲು ಸಾಧ್ಯವಾಗುವಂತೆ ರಸ್ತೆ-ರೈಲು ಮಾರ್ಗವನ್ನು ಅಭಿವೃದ್ಧಿಪಡಿಸುತ್ತಿದೆ. ಅದರಲ್ಲಿ ಲಾಹ್ಸಾ-ನಿನ್ಷಿ ಬುಲೆಟ್ ರೈಲು ಮಾರ್ಗವು ಪ್ರಧಾನವಾದದು.

ಲಾಹ್ಸಾ-ನಿನ್ಷಿ ಮಾರ್ಗದ ಬುಲೆಟ್ ರೈಲಿನಲ್ಲಿ ಪ್ರಯಾಣಿಕರ ಬೋಗಿಯ ಜತೆಗೆ, ಸರಕು ಸಾಗಣೆ ಬೋಗಿಯೂ ಇದೆ. ಲಾಹ್ಸಾದಿಂದ ನಿನ್ಷಿಗೆ ಸರಕುಸಾಗಣೆಯ ವೇಗವನ್ನು ಇದು ಮೂರುಪಟ್ಟು ಹೆಚ್ಚಿಸಿದೆ ಮತ್ತು ನಿನ್ಷಿ ಪಟ್ಟಣದ ಆರ್ಥಿಕ ಅಭಿವೃದ್ಧಿಗೆ ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಟ್ರಕ್‌-ಸೇನಾ ಸಲಕರಣೆಗಳನ್ನು ಸಾಗಿಸಲು ಅನುಕೂಲವಾಗುವಂತೆ ಬೋಗಿಗಳನ್ನು ವಿನ್ಯಾಸ ಮಾಡಲಾಗಿದೆ.

ಲಾಹ್ಸಾದಿಂದ-ನಿನ್ಷಿ ನಡುವಣ ರಸ್ತೆ ಮಾರ್ಗದ ಪ್ರಯಾಣದ ಅವಧಿ 6.30 ಗಂಟೆ. ಬುಲೆಟ್ ರೈಲು ಈ ಪ್ರಯಾಣದ ಅವಧಿಯನ್ನು 2.20 ಗಂಟೆಗೆಇಳಿಸಿದೆ. ತುರ್ತು ಸಂದರ್ಭದಲ್ಲಿ ಚೀನಾದ ಸೈನಿಕರನ್ನು ಗಡಿ ಗ್ರಾಮಗಳಿಗೆ ಅತ್ಯಂತ ತ್ವರಿತವಾಗಿ ತಲುಪಿಸಲು ಈ ರೈಲು ಮಾರ್ಗವು ನೆರವಾಗಲಿದೆ. ಗಡಿ ಭದ್ರತೆ ದೃಷ್ಟಿಯಿಂದ ಈ ರೈಲು ಮಾರ್ಗವು ಅತ್ಯಂತ ಮಹತ್ವದ್ದು ಎನ್ನಲಾಗಿದೆ.

ಚೀನಾದ ಈ ಅಭಿವೃದ್ಧಿ ಕಾರ್ಯಗಳು ಭಾರತಕ್ಕೆ ದೊಡ್ಡ ಹಿನ್ನಡೆ ಎಂದೇ ವಿಶ್ಲೇಷಿಸಲಾಗದೆ. ಗಾಲ್ವನ್, ಲಡಾಖ್‌ ಸಂಘರ್ಷಗಳಂತಹ ಸಂದರ್ಭದಲ್ಲಿ ಚೀನಾವು ಸೇನೆಯನ್ನು ನಿಯೋಜಿಸಲು ಇಲ್ಲಿನ ರಸ್ತೆಗಳು ಮತ್ತು ಬುಲೆಟ್ ರೈಲು ಮಾರ್ಗವು ನೆರವಾಗಲಿವೆ. ಆದರೆ ಭಾರತವು ಅಷ್ಟೇ ತ್ವರಿತವಾಗಿ ಸೇನೆಯನ್ನು ನಿಯೋಜಿಸುವ ಮೂಲಸೌಕರ್ಯಗಳನ್ನು ಹೊಂದಿಲ್ಲ. ಇದು ಭಾರತಕ್ಕೆ ದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.

ಗಡಿ ರಾಜ್ಯಗಳ ನಾಜೂಕು ಸ್ಥಿತಿ

ಅಂತರರಾಷ್ಟ್ರೀಯ ಗಡಿಯು ಸೂಕ್ಷ್ಮವಾಗಿದ್ದಾಗ, ಗಡಿಗಳು ಹಾದು ಹೋಗಿರುವ ರಾಜ್ಯಗಳು ಹೆಚ್ಚು ಎಚ್ಚರದಲ್ಲಿ ಇರಬೇಕು. ಆದರೆ, ಚೀನಾದ ಜತೆಗೆ ಗಡಿ ಹಂಚಿಕೊಂಡಿರುವ ಈಶಾನ್ಯದ ರಾಜ್ಯಗಳ ನಡುವಣ ಗಡಿ ಸಮಸ್ಯೆ ಕಳವಳಕ್ಕೆ ಕಾರಣವಾಗಿದೆ.

ಅಸ್ಸಾಂ–ಮಿಜೋರಾಂ ರಾಜ್ಯಗಳ ನಡುವಣ ಗಡಿ ವಿವಾದವು ಹಿಂಸಾಚಾರ ಮತ್ತು ಆರು ಮಂದಿಯ ಸಾವಿಗೆ ಇತ್ತೀಚೆಗೆ ಕಾರಣ ಆಗಿತ್ತು. ಬೇರೊಂದು ದೇಶದ ಜತೆಗೆ ಗಡಿ ಹಂಚಿಕೊಂಡಿರುವ ರಾಜ್ಯಗಳು ಹೀಗೆ ಕಿತ್ತಾಟಕ್ಕೆ ಇಳಿದರೆ ಅದು ಆಂತರಿಕ ಭದ್ರತೆಗೆ ಬಹುದೊಡ್ಡ ಸವಾಲಾಗಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ.

ಗಡಿಯನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವ ವಿಚಾರದಲ್ಲಿ ಈಶಾನ್ಯ ರಾಜ್ಯಗಳು (ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ತ್ರಿಪುರಾ, ನಾಗಾಲ್ಯಾಂಡ್‌, ಮಣಿಪುರ, ಮಿಜೋರಾಂ) ಬಹಳ ಮುಖ್ಯ. ಆದರೆ, ಈಶಾನ್ಯದ ಹಲವು ರಾಜ್ಯಗಳ ನಡುವೆ ಗಡಿ ವಿವಾದ ಇದೆ; ಆಂತರಿಕ ಕ್ಷೋಭೆಯು ವಿದೇಶಿ ಶಕ್ತಿಗಳಿಗೆ ಅನುಕೂಲಕರ ಪರಿಸ್ಥಿತಿ ನಿರ್ಮಿಸಿಕೊಡುತ್ತದೆ.

ಈಶಾನ್ಯ ರಾಜ್ಯಗಳನ್ನು ಭಾರತದ ಜತೆ ಜೋಡಿಸುವ ಕೊಂಡಿಯಂತಹ ಒಂದು ಭಾಗ ಇದೆ. ಅದನ್ನು ಸಿಲಿಗುರಿ ಕಾರಿಡಾರ್‌ ಅಥವಾ ಕೋಳಿಯ ಕತ್ತು ಎನ್ನುತ್ತಾರೆ. ಈ ಭಾಗದ ಅಗಲವು 23 ಕಿ.ಮೀ. ಮಾತ್ರ. ಈ ಪ್ರದೇಶದ ಉತ್ತರಕ್ಕೆ ಚೀನಾ ಸ್ವಾಧೀನದಲ್ಲಿರುವ ಟಿಬೆಟ್‌ ಸ್ವಾಯತ್ತ ಪ್ರದೇಶವಿದೆ.

ಭಾರತ ಮತ್ತು ಚೀನಾದ ಸೇನೆಗಳ ನಡುವೆ ಸುದೀರ್ಘ ಮುಖಾಮಖಿ ಉಂಟಾಗಿದ್ದ ದೋಕಲಾ ಪ್ರದೇಶವು ಸಿಲಿಗುರಿ ಕಾರಿಡಾರ್‌ಗೆ ಸಮೀಪದಲ್ಲಿಯೇ ಇದೆ.

ಹಾಗಾಗಿ, ಈಶಾನ್ಯ ರಾಜ್ಯಗಳ ಗಡಿ ವಿವಾದಗಳು ಬಿಕ್ಕಟ್ಟುಗಳಾದರೆ ಆಂತರಿಕ ಭದ್ರತೆಗೆ ತೊಡಕು ಎಂದು ತಜ್ಞರು ಹೇಳುತ್ತಾರೆ.

ತಾಲಿಬಾನ್‌ ಜತೆಗೆ ಸರಸ...

ಅಮೆರಿಕದ ಸೇನೆಯು ಅಫ್ಗಾನಿಸ್ತಾನದಿಂದ ಹೊರನೆಡೆದು ತಿಂಗಳು ಕಳೆದಿಲ್ಲ. ಆಗಲೇ ಚೀನಾವು ತಾಲಿಬಾನಿಗಳ ಜತೆ ಕೈಜೋಡಿಸಿದೆ. ಅಫ್ಗಾನಿಸ್ತಾನದಲ್ಲಿ ಬಂಡವಾಳ ಹೂಡಿ ಎಂದು ಚೀನಾಗೆ ತಾಲಿಬಾನಿಗಳು ನೀಡಿದ್ದ ಆಹ್ವಾನವನ್ನು ಚೀನಾ ಒಪ್ಪಿಕೊಂಡಿದೆ. ಚೀನಾದಲ್ಲಿ ಜುಲೈ 28ರಂದು ನಡೆದ ಸಭೆಯಲ್ಲಿ ತಾಲಿಬಾನ್ ಪ್ರತಿನಿಧಿಗಳು ಚೀನಾದ ವಿದೇಶಾಂಗ ಸಚಿವರ ಜತೆ ಮಾತುಕತೆ ನಡೆಸಿದ್ದಾರೆ.

ಅಫ್ಗಾನಿಸ್ತಾನದಲ್ಲಿ ಸರ್ಕಾರವನ್ನು ಉರುಳಿಸಿ, ಸಂಪೂರ್ಣ ಹಿಡಿತ ಸಾಧಿಸಲು ಮುಂದಾಗಿರುವ ತಾಲಿಬಾನಿಗಳಿಗೆ ದೇಶವನ್ನು ಮುನ್ನಡೆಸಲು ಆರ್ಥಿಕ ಬಲ ಬೇಕಿದೆ. ಇದಕ್ಕಾಗಿ ಹೊರಗಿನಿಂದ ಬಂಡವಾಳ ತರುವುದು ಅನಿವಾರ್ಯವಾಗಿದೆ. ಈ ಕಾರಣದಿಂದಲೇ ಅಪಾರ ಖನಿಜ ಸಂಪತ್ತು ಹೊಂದಿರುವ ಅಫ್ಗಾನಿಸ್ತಾನದಲ್ಲಿ ಬಂಡವಾಳ ಹೂಡಲು ತಾಲಿಬಾನಿಗಳು ಚೀನಾಗೆ ಆಹ್ವಾನ ನೀಡಿದ್ದರು. ದಶಕಗಳಿಂದಲೂ ಈ ನಿಕ್ಷೇಪಗಳ ಮೇಲೆ ಕಣ್ಣಿಟ್ಟಿದ್ದ ಚೀನಾ, ಅತ್ಯಂತ ಕಡಿಮೆ ಅವಧಿಯಲ್ಲಿ ಈ ಆಹ್ವಾನವನ್ನು ಪುರಸ್ಕರಿಸಿದೆ.

ಅಫ್ಗಾನಿಸ್ತಾನದಲ್ಲಿರುವ ಖನಿಜ ಸಂಪತ್ತಿನ ಬಗ್ಗೆ 2014ರಲ್ಲೇ ಚೀನಾ ಸಮೀಕ್ಷೆ ನಡೆಸಿ, ಹಲವು ನಿಕ್ಷೇಪಗಳನ್ನು ಗುರುತಿಸಿತ್ತು. ಇದರಲ್ಲಿ ಒಂದು ತೈಲ ಬಾವಿ ಘಟಕವನ್ನಷ್ಟೇ 25 ವರ್ಷಗಳ ಅವಧಿಗೆ ಗುತ್ತಿಗೆ ಪಡೆಯಲು ಚೀನಾಗೆ ಸಾಧ್ಯವಾಯಿತು. ಆದರೆ, ವಿವಿಧ ಕಾರಣಗಳಿಂದಾಗಿ ಬೇರೆ ಯಾವುದೇ ನಿಕ್ಷೇಪಗಳನ್ನು ಗುತ್ತಿಗೆ ಪಡೆಯುವಲ್ಲಿ ಚೀನಾ ವಿಫಲವಾಯಿತು. 2014ರಲ್ಲಿ ನಡೆಸಿದ್ದ ಸಮೀಕ್ಷೆ ಪ್ರಕಾರ ಅಫ್ಗಾನಿಸ್ತಾನದಲ್ಲಿ 6.6 ಕೋಟಿ ಟನ್ ತಾಮ್ರ, 220 ಕೋಟಿ ಟನ್‌ ಕಬ್ಬಿಣ ಮತ್ತು 15 ಲಕ್ಷ ಟನ್‌ನಷ್ಟು ಲಿಥಿಯಂ, ನಿಯೋಡಿಯಂ, ಸತು, ಚಿನ್ನ, ಅಲ್ಯೂಮಿನಿಯಂ, ಬೆಳ್ಳಿಯ ಅದಿರು ಇದೆ ಎಂದು ಅಂದಾಜಿಸಲಾಗಿತ್ತು. ಈ ಎಲ್ಲಾ ನಿಕ್ಷೇಪಗಳನ್ನು ಚೀನಾಗೆ ಗುತ್ತಿಗೆ ನೀಡುವುದಾಗಿ ತಾಲಿಬಾನ್ ಭರವಸೆ ನೀಡಿದೆ ಎನ್ನಲಾಗಿದೆ. ಈ ಕಾರಣದಿಂದಲೇ ಉಗ್ರ ಸಂಘಟನೆಗೂ ಕಾನೂನುಬದ್ಧ ಸರ್ಕಾರದ ಮಾನ್ಯತೆ ನೀಡಿ ಚೀನಾ ವಾಣಿಜ್ಯ ಮಾತುಕತೆ ನಡೆಸಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಇದರ ಜತೆಯಲ್ಲಿಯೇ ಚೀನಾವು ತನ್ನ ಪುರಾತನ ‘ಸಿಲ್ಕ್ ರೂಟ್‌’ ಅನ್ನು ಮರುಸ್ಥಾಪಿಸಲು ಯೋಜನೆ ಹಾಕಿಕೊಂಡಿದೆ. ಸಿಲ್ಕ್‌ ರೂಟ್‌ನ ಒಂದು ಮಾರ್ಗವು ಅಫ್ಗಾನಿಸ್ತಾನದ ಕಾರಕೋರಂ ಪರ್ವತ ಶ್ರೇಣಿಯ ಮೂಲಕ ಪಾಕಿಸ್ತಾನ ಮತ್ತು ಇರಾನ್‌ಗೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗವನ್ನು ಅಭಿವೃದ್ಧಿಪಡಿಸಲು ತಾಲಿಬಾನ್ ಒಪ್ಪಿಗೆ ನೀಡಿದೆ ಎನ್ನಲಾಗಿದೆ. ಹೀಗಾಗಿ ತಾಲಿಬಾನಿನ ಆಹ್ವಾನವನ್ನು ಪುರಸ್ಕರಿಸಿ, ಅಫ್ಗಾನಿಸ್ತಾನದಲ್ಲಿ ಬಂಡವಾಳ ಹೂಡಲು ಚೀನಾ ಮುಂದಾಗಿದೆ ಎನ್ನಲಾಗಿದೆ.

ತಾಲಿಬಾನ್‌ನಿಂದ ಬಿಡುಗಡೆಗೊಂಡ ಅಪ್ಗಾನಿಸ್ತಾನದ ಮರು ನಿರ್ಮಾಣಕ್ಕೆ ಅಲ್ಲಿನ ಚುನಾಯಿತ ಸರ್ಕಾರದ ಜತೆಗೆ ಭಾರತ ಕೈಜೋಡಿಸಿತ್ತು. ಇದು ತಾಲಿಬಾನ್ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ, ಅಫ್ಗಾನಿಸ್ತಾನವು ಮತ್ತೆ ತಾಲಿಬಾನ್‌ ಕೈಗೆ ಬಂದಿದೆ. ಭಾರತದ ಬಗ್ಗೆ ಅಸಮಾಧಾನ ಹೊಂದಿರುವ ಚೀನಾ ಮತ್ತು ತಾಲಿಬಾನ್‌ ಜತೆಯಾಗುವುದು ಭಾರತಕ್ಕೆ ಒಳ್ಳೆಯ ಸುದ್ದಿಯಂತೂ ಅಲ್ಲ ಎಂಬುದು ವಿಶ್ಲೇಷಕರ ಅಭಿಪ್ರಾಯ.

ಆಧಾರ: ಪಿಟಿಐ ಮತ್ತು ವಿವಿಧ ಮೂಲಗಳಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT