ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ನಿಸರ್ಗದ ಕೋಪ ಜಗತ್ತಿಗೆ ತಾಪ

ಗ್ಲಾಸ್ಗೋದಲ್ಲಿ ತಾಪಮಾನ ಏರಿಕೆ ತಡೆ ಸಮಾವೇಶ
Last Updated 2 ನವೆಂಬರ್ 2021, 22:15 IST
ಅಕ್ಷರ ಗಾತ್ರ

ಜಾಗತಿಕ ಸರಾಸರಿ ತಾಪಮಾನ ಏರಿಕೆಯನ್ನು ಹವಾಮಾನ ಬದಲಾವಣೆ, ಹವಾಮಾನ ವೈಪರೀತ್ಯ ಎಂದೆಲ್ಲಾ ಕರೆಯಲಾಗುತ್ತದೆ. ಜಾಗತಿಕ ತಾಪಮಾನ ಏರಿಕೆಯನ್ನು ತಡೆಗಟ್ಟುವ ಸಲುವಾಗಿ ವಿಶ್ವ ಸಂಸ್ಥೆಯ ನೇತೃತ್ವದಲ್ಲಿ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ಒಂದೆಡೆ ಕೂತು, ಸಮಾಲೋಚನೆ ನಡೆಸುವುದೇ ‘ಕಾನ್ಫರೆನ್ಸ್ ಆಫ್ ಪಾರ್ಟೀಸ್‌-ಸಿಒಪಿ’. ವಿಶ್ವ ಸಂಸ್ಥೆಯು ಇಂತಹ ಸಮಾವೇ‍ಶಗಳನ್ನು ನಡೆಸಿಕೊಂಡು ಬಂದಿತ್ತಾದರೂ, ಇದಕ್ಕೊಂದು ವ್ಯವಸ್ಥಿತ ರೂಪ ನೀಡಿದ್ದು 1995ರಲ್ಲಿ.

1995ರಲ್ಲಿ ಸಿಒಪಿಯನ್ನು ರಚಿಸಲಾಯಿತು. ಜರ್ಮನಿಯ ಬರ್ಲಿನ್‌ನಲ್ಲಿ 1995ರ ಮಾರ್ಚ್ 28ರಿಂದ ಏಪ್ರಿಲ್‌ 7ರವರೆಗೆ ಈ ಸಮಾವೇಶ ನಡೆಯಿತು. 2020ರ ವೇಳೆಗೆ ಜಾಗತಿಕ ತಾಪಮಾನ ಏರಿಕೆಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ವಾಹನಗಳಿಂದಾಗುವ ವಾಯುಮಾಲಿನ್ಯ ಮತ್ತು ಕೈಗಾರಿಕೆಗಳಿಂದಾಗುವ ವಾಯುಮಾಲಿನ್ಯವನ್ನು ಕಡಿಮೆ ಮಾಡುವುದು ಮತ್ತು ಆ ಮೂಲಕ ಜಾಗತಿಕ ತಾಪಮಾನವನ್ನು ನಿಯಂತ್ರಿಸುವುದು ಈ ಸಮಾವೇಶದ ಪ್ರಮುಖ ಗುರಿಗಳಲ್ಲಿ ಒಂದಾಗಿತ್ತು.

ಕಾರ್ಯರೂಪಕ್ಕೆ ಬರದ ಗುರಿಗಳು

ಅಭಿವೃದ್ಧಿಶೀಲ ಮತ್ತು ಹಿಂದುಳಿದ ರಾಷ್ಟ್ರಗಳು ಇಂಗಾಲದ ಹೊರಸೂಸುವಿಕೆ ಕಡಿತಗೊಳಿಸಲು ಶ್ರೀಮಂತ ರಾಷ್ಟ್ರಗಳು ಆರ್ಥಿಕ ಮತ್ತು ತಂತ್ರಜ್ಞಾನದ ನೆರವು ನೀಡಬೇಕು ಎಂದು ಪ್ರತಿ ಸಿಒಪಿಯಲ್ಲೂ ಪ್ರತಿಪಾದಿಸಲಾಗಿದೆ. ಇದಕ್ಕೆ ಶ್ರೀಮಂತ ರಾಷ್ಟ್ರಗಳಲ್ಲಿ ಹೆಚ್ಚಿನವು ಸಹಮತ ಹೊಂದಿಲ್ಲ. 2009ರ ಸಿಒಪಿಯಲ್ಲಿ, ಶ್ರೀಮಂತ ರಾಷ್ಟ್ರಗಳು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಪ್ರತಿ ವರ್ಷ ₹7.5 ಲಕ್ಷ ಕೋಟಿ (10,000 ಡಾಲರ್) ನೆರವು ನೀಡುವುದಾಗಿ ಘೋಷಿಸಿದ್ದವು. ಅದು ಈವರೆಗೆ ನೆರವೇರಿಲ್ಲ.

2015ರ ಪ್ಯಾರಿಸ್ ಶೃಂಗಸಭೆಯಲ್ಲಿ ಜಾಗತಿಕ ತಾಪಮಾನವನ್ನು 2030ರ ವೇಳೆಗೆ ಅರ್ಧದಷ್ಟು ಕಡಿಮೆ ಮಾಡುವ ಮಧ್ಯಂತರ ಗುರಿ ಹಾಕಿಕೊಳ್ಳಲಾಗಿತ್ತು. ಇದಕ್ಕಾಗಿ ವಾಹನಗಳ ಇಂಗಾಲ ಹೊರಸೂಸುವಿಕೆ ಮಾನದಂಡವಾದ ಯೂರೊ-6 ಅನ್ನು 2022ರ ವೇಳೆಗೆ ಅಳವಡಿಸಿಕೊಳ್ಳುವ ಗುರಿ ಹಾಕಿಕೊಳ್ಳಲಾಯಿತು. ಯುರೊ-6ಗೆ ಸಂವಾದಿಯಾದ ಭಾರತ್ ಸ್ಟೇಜ್-6 (ಬಿಎಸ್‌-6) ಪರಿಮಾಣವನ್ನು ಭಾರತವು 2020ರಲ್ಲೇ ಅಳವಡಿಸಿಕೊಂಡಿತು.

ಆದರೆ ಈ ಕಾರ್ಯಕ್ಕಾಗಿ ನೆರವು ನೀಡಬೇಕಿದ್ದ ಅಮೆರಿಕವು 2015ರ ಪ್ಯಾರಿಸ್ ಒಪ್ಪಂದದಿಂದ 2017ರಲ್ಲಿ ಹೊರನಡೆಯಿತು. ಪ್ಯಾರಿಸ್ ಒಪ್ಪಂದದ ಗುರಿಗಳು ನನೆಗುದಿಗೆ ಬಿದ್ದವು. ಈಗ ಮತ್ತೆ ಜಾಗತಿಕ ತಾಪಮಾನ ನಿಯಂತ್ರಣದ ಗುರಿಯ ಕಾಲಮಿತಿಯನ್ನು 2070ಕ್ಕೆ ವಿಸ್ತರಿಸಲಾಗಿದೆ.

ನೆಟ್ ಝೀರೊ ಜಟಾಪಟಿ

ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಮಿತಗೊಳಿಸಬೇಕು ಎಂಬ ಕೂಗು ಸರಿಯಾಗಿ ಕಾರ್ಯರೂಪಕ್ಕೆ ಬರುವ ಮುನ್ನವೇ, ತಾಪಮಾನ ಈಗಾಗಲೇ 1.1 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿಬಿಟ್ಟಿದೆ. ಹೀಗಾಗಿಯೇ ನೀರ್ಗಲ್ಲು ಕರಗುವ, ಉಷ್ಣ ಮಾರುತಗಳು ಏಳುವ, ಭಾರಿ ಪ್ರವಾಹ ಉಂಟಾಗುವ ಮತ್ತು ಮಳೆ ವಿನ್ಯಾಸ ಏರುಪೇರಾಗುವ ವಿದ್ಯಮಾನಗಳು ವಿಶ್ವದ ಎಲ್ಲೆಡೆ ಜರುಗುತ್ತಿವೆ. ತಾಪಮಾನಕ್ಕೆ ಬೇಲಿ ಹಾಕುವ ಕ್ರಮಗಳನ್ನು ಅನುಷ್ಠಾನಕ್ಕೆ ತರುವ ಬದಲಾಗಿ, ಅಭಿವೃದ್ಧಿ ಹೊಂದಿದ ದೇಶಗಳು ಹಾಗೂ ಅಭಿವೃದ್ಧಿಶೀಲ ದೇಶಗಳು ಜಟಾಪಟಿಗೆ ಇಳಿದಿವೆ.

ವಿಳಂಬ ಮತ್ತು ಒತ್ತಡ ತಂತ್ರ

ಕೈಗಾರಿಕೀಕರಣಕ್ಕಿಂತ ಮೊದಲು ಎಷ್ಟು ಪ್ರಮಾಣದಲ್ಲಿ ವಾತಾವರಣಕ್ಕೆ ಹಸಿರುಮನೆ ಅನಿಲಗಳನ್ನು ಬಿಡಲಾಗುತ್ತಿತ್ತೋ, ಮತ್ತೆ ಅಲ್ಲಿಗೆ ತಂದು ನಿಲ್ಲಿಸಬೇಕು ಎಂಬುದು ‘ನೆಟ್ ಝೀರೊ’ ಪರಿಕಲ್ಪನೆ. ವಾತಾವರಣಕ್ಕೆ ಇಂಗಾಲ ಹೊರಸೂಸುವಿಕೆಯನ್ನು ತಟಸ್ಥಗೊಳಿಸುವ ‘ನೆಟ್ ಝೀರೊ’ ಅನುಸರಿಸುವುದನ್ನು ಅಭಿವೃದ್ಧಿ ಹೊಂದಿದ ದೇಶಗಳು ವಿಳಂಬ ಮಾಡುತ್ತಿವೆ. ಆದರೆ, ಈಗಿನಿಂದಲೇ ಭಾರತದಂತಹ ದೇಶಗಳು ನೆಟ್ ಝೀರೊ ಅನುಸರಿಸಬೇಕು ಎಂಬ ಒತ್ತಡವನ್ನು ಶ್ರೀಮಂತ ದೇಶಗಳು ಹೇರಲಾರಂಭಿಸಿವೆ.

ಅಮೆರಿಕ ಹವಾಮಾನ ಪ್ರತಿನಿಧಿ ಜಾನ್ ಕೆರ್ರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಈ ಸಂಬಂಧ ಒತ್ತಡ ಹೇರಿದ್ದರು. ಬ್ರಿಟನ್‌ ರಾಜಕಾರಣಿ ಹಾಗೂ ಸಿಒಪಿ26 ಅಧ್ಯಕ್ಷ ಅಲೋಕ್ ಶರ್ಮಾ ಅವರು ಜಿ–20 ದೇಶಗಳು ನೆಟ್ ಝೀರೊ ಗುರಿ ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದ್ದರು. ಹೀಗಾಗಿ ನೆಟ್ ಝೀರೊ ಅಭಿಯಾನ ಶ್ರೀಮಂತ ದೇಶಗಳ ಹಾಗೂ ಅಭಿವೃದ್ಧಿಶೀಲ ದೇಶಗಳ ಅಡಕತ್ತರಿಯಲ್ಲಿ ಸಿಲುಕಿದೆ.

ಭಾರತದ ಪ್ರತಿಪಾದನೆ

ಪಳೆಯುಳಿಕೆ ಇಂಧನಗಳ ಬಳಕೆಗೆ ಅಭಿವೃದ್ಧಿಶೀಲ ದೇಶಗಳಿಗೆ ಇನ್ನಷ್ಟು ವರ್ಷಗಳ ಕಾಲ ಅವಕಾಶ ನೀಡಬೇಕು ಎಂಬ ವಾದವಿದೆ. ಪ್ಯಾರಿಸ್ ಒಪ್ಪಂದದ ಪ್ರಕಾರ,ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಇಂಗಾಲ ಹೊರಸೂಸುವಿಕೆಗೆ ಅವಕಾಶವಿದೆ. ಶ್ರೀಮಂತ ದೇಶಗಳು 2050ರ ವೇಳೆಗೆ ‘ಇಂಗಾಲ ತಟಸ್ಥ’ ಎಂದು ಘೋಷಿಸಬೇಕಿದೆ.ಭಾರತವು 2070ರ ವೇಳೆಗೆ ನೆಟ್ ಝೀರೋಗೆ ಬದಲಾಗುವುದಾಗಿ ತನ್ನ ಬದ್ಧತೆ ವ್ಯಕ್ತಪಡಿಸಿದೆ.

ಶುದ್ಧ ಇಂಧನ ಬಳಕೆಯನ್ನು ಹೆಚ್ಚಿಸಲು ಅಭಿವೃದ್ಧಿಶೀಲ ದೇಶಗಳಿಗೆ ಶ್ರೀಮಂತ ದೇಶಗಳು ಅನುದಾನ ಒದಗಿಸಬೇಕು ಎಂದು ಸಚಿವ ಪೀಯೂಷ್ ಗೋಯಲ್ ಒತ್ತಾಯಿಸಿದ್ದಾರೆ. ಈ ದಿಸೆಯಲ್ಲಿ ಮೊದಲು ಸಿರಿವಂತ ದೇಶಗಳು ಮೇಲ್ಪಂಕ್ತಿ ಹಾಕಲಿ ಎಂಬುದು ಭಾರತ ಸೇರಿದಂತೆ ಅಭಿವೃದ್ಧಿಶೀಲ ದೇಶಗಳ ಆಗ್ರಹ. ಆದರೆ ಮುಂದುವರಿದ ದೇಶಗಳು ಈ ಬಗ್ಗೆ ಬದ್ಧತೆ ತೋರುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಉದ್ಯಮದ ದ್ವಂದ್ವ

ಇಂಗಾಲ ಹೊರಸೂಸುವಿಕೆ ತಡೆಯ ಭರವಸೆಯನ್ನು ದೊಡ್ಡ ದೊಡ್ಡ ಉದ್ಯಮಗಳು ನೀಡಲಾರಂಭಿಸಿವೆ. ಜಾಗತಿಕ ತಾಪಮಾನ ಏರಿಕೆ ತಡೆಗೆ ನಿಜವಾದ ಕಳಕಳಿಯನ್ನು ಈ ಉದ್ಯಮಗಳು ಹೊಂದಿವೆಯೇ? ಅಥವಾ ತಾಪಮಾನ ಏರಿಕೆ ತಡೆಗೆ ಕೈಜೋಡಿಸುತ್ತಿಲ್ಲ ಎಂಬ ಟೀಕೆಯಿಂದ ತಪ್ಪಿಸಿಕೊಳ್ಳಲು ಕೆಲವು ಕ್ರಮಗಳನ್ನು ಘೋಷಿಸುತ್ತಿವೆಯೇ ಎಂಬ ವಿಚಾರ ಚರ್ಚೆ ಆಗುತ್ತಿದೆ.

ಜಗತ್ತಿನ ಶೇ 40ರಷ್ಟು ಇಂಧನವನ್ನು ಉದ್ಯಮವು ಬಳಸಿಕೊಳ್ಳುತ್ತಿದೆ. ಅದರಲ್ಲಿ ಪಳೆಯುಳಿಕೆ ಇಂಧನಗಳಾದ ತೈಲ, ಅನಿಲ ಮತ್ತು ಕಲ್ಲಿದ್ದಲಿಗೇ ಸಿಂಹಪಾಲು. ಜಾಗತಿಕ ತಾಪಮಾನ ಏರಿಕೆಯಲ್ಲಿ ಈ ಇಂಧನಗಳ ಬಳಕೆಯ ಪರಿಣಾಮವೇ ದೊಡ್ಡದು ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆಯು (ಐಇಎ) ಹೇಳಿದೆ.

ದೊಡ್ಡ ಕಂಪನಿಗಳು ಮಹತ್ವಾಕಾಂಕ್ಷಿ ಗುರಿಗಳನ್ನು ಹಾಕಿಕೊಂಡಿವೆಯಾದರೂ ದೊಡ್ಡ ಪರಿಣಾಮ ಉಂಟಾಗಿಲ್ಲ ಎಂದು ಐಇಎ ಹೇಳುತ್ತಿದೆ.

ಬಾಸ್ಟನ್‌ ಕನ್ಸಲ್ಟಿಂಗ್‌ ಗ್ರೂಪ್‌ ಎಂದು ಸಂಸ್ಥೆಯು 1,300 ಕಂಪನಿಗಳ ಸಮೀಕ್ಷೆ ನಡೆಸಿದೆ. ಇವುಗಳಲ್ಲಿ ಶೇ 11ರಷ್ಟು ಮಾತ್ರ ಕಳೆದ ಐದು ವರ್ಷಗಳಲ್ಲಿ ಇಂಗಾಲ ಹೊರಸೂಸುವಿಕೆಯ ಗುರಿಯನ್ನು ಮುಟ್ಟಿವೆ. ಹೊರಸೂಸುವಿಕೆ ಎಷ್ಟು ಎಂಬ ನಿಖರ ಲೆಕ್ಕ ಇಟ್ಟಿರುವ ಕಂಪನಿಗಳು ಶೇ ಒಂಬತ್ತರಷ್ಟು ಮಾತ್ರ.

ನೆಟ್‌ ಝೀರೊವನ್ನು ಕಂಪನಿಗಳು ಹೇಗೆ ವ್ಯಾಖ್ಯಾನಿಸುತ್ತವೆ ಎಂಬುದರ ಮೇಲೆ ಇಂಗಾಲ ಹೊರಸೂಸುವಿಕೆ ಕಡಿತವು ಅವಲಂಬಿತ. ಉದಾಹರಣೆಗೆ, ತೈಲ ಉತ್ಪಾದನಾ ಕಂಪನಿಗಳು ತಮ್ಮ ನೇರ ಇಂಗಾಲ ಹೊರಸೂಸುವಿಕೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬಹುದು. ಆದರೆ, ಈ ಕಂಪನಿಗಳ ಉತ್ಪನ್ನದಿಂದಾಗಿ ಇಂಗಾಲ ಹೊರಸೂಸುವಿಕೆ ಹೆಚ್ಚುತ್ತಲೇ ಹೋಗುತ್ತದೆ.

ಭಾರತದ ಎರಡು ಪ್ರಮುಖ ಸಮೂಹಗಳಾದ ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್‌ ಮತ್ತು ಗೌತಮ್‌ ಅದಾನಿ ನೇತೃತ್ವದ ಅದಾನಿ ಗ್ರೂಪ್‌ಗಳೆರಡೂ ತೈಲ, ಅನಿಲ, ಕಲ್ಲಿದ್ದಲುನಂತಹ ಇಂಗಾಲ ಆಧಾರಿತ ಉತ್ಪನ್ನಗಳನ್ನೇ ತಮ್ಮ ಉದ್ಯಮದ ಕೇಂದ್ರವಾಗಿ ಹೊಂದಿವೆ. ಆದರೆ, ಇತ್ತೀಚೆಗೆ ಎರಡೂ ಕಂಪನಿಗಳು ಇಂಗಾಲಮುಕ್ತ ಇಂಧನ ಉದ್ಯಮಕ್ಕೂ ಪ್ರವೇಶ ಮಾಡಿವೆ. ಸೌರ ಫಲಕಗಳು, ಬ್ಯಾಟರಿ ಮುಂತಾದ ಉದ್ಯಮಗಳತ್ತ ರಿಲಯನ್ಸ್ ವಾಲಿದೆ; ಅದಾನಿ ಗ್ರೀನ್‌ ಎನರ್ಜಿ ಕಂಪನಿಯು ಸೌರ್ ವಿದ್ಯುತ್‌ ಉತ್ಪಾದನೆಯ ಬಹುದೊಡ್ಡ ಕಂಪನಿಯಾಗಿದೆ.

ಈವರೆಗೆ, ಅಮೆರಿಕ ಮತ್ತು ಯುರೋಪ್‌ನ ಇಂಧನ ಕಂಪನಿಗಳತ್ತಲೇ ಗಮನ ಕೇಂದ್ರೀಕೃತವಾಗಿತ್ತು. ಇನ್ನು ಮುಂದೆ, ಜಗತ್ತಿನ ಇತರೆಡೆಯ ಕಂಪನಿಗಳ ಬಗ್ಗೆಯೂ ಗಮನ ಹರಿಸಬೇಕಾಗಿದೆ ಎಂದು ಐಎಇ ಹೇಳಿದೆ.

ಗ್ಲಾಸ್ಗೋ ಸಮಾವೇಶದ ಸುತ್ತ

lಇಟಲಿ ಸಹಭಾಗಿತ್ವದಲ್ಲಿ, ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಹವಾಮಾನ ಬದಲಾವಣೆ ಸಂಬಂಧಿತ ಶೃಂಗಸಭೆಯು ಅ.31ರಿಂದ ಆರಂಭವಾಗಿದ್ದು, ನ.12ರವರೆಗೆ ನಡೆಯಲಿದೆ

lಯುಎನ್‌ಎಫ್‌ಸಿಸಿಸಿ (UNFCCC) ಎಂಬುದು ಹವಾಮಾನ ಬದಲಾವಣೆಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಸಂರಚನಾ ಸಮಾವೇಶ. 1994ರಲ್ಲಿ ಅಸ್ತಿತ್ವಕ್ಕೆ ಬಂದ ಯುಎನ್‌ಎಫ್‌ಸಿಸಿಸಿ, ಭಾರತ, ಅಮೆರಿಕ, ಫ್ರಾನ್ಸ್‌, ಇಟಲಿ ಸೇರಿದಂತೆ 197 ರಾಷ್ಟ್ರಗಳ ಸದಸ್ಯತ್ವ ಹೊಂದಿದೆ

l2020 ನವೆಂಬರ್‌ನಲ್ಲಿ ನಡೆಯಬೇಕಿದ್ದ ಈ ಸಮಾವೇಶವು ಕೋವಿಡ್‌–19 ಸಾಂಕ್ರಾಮಿಕದ ಕಾರಣದಿಂದ ತಡವಾಗಿದೆ

lಸದಸ್ಯ ರಾಷ್ಟ್ರಗಳು, ಭೂಮಿಯ ತಾಪಮಾನ ಏರಿಕೆಯನ್ನು ನಿಧಾನಗೊಳಿಸಬೇಕು ಹಾಗೂ ಹಸಿರುಮನೆ ಅನಿಲಗಳ (ಇಂಗಾಲದ ಡೈ ಆಕ್ಸೈಡ್‌, ಕ್ಲೋರೊಫೊರೊ ಕಾರ್ಬನ್‌ನಂಥ ಅನಿಲಗಳು) ಹೊರಸೂಸುವಿಕೆಯನ್ನು ನಿಯಂತ್ರಿಸಬೇಕು ಎಂಬುದು ಇದರ ಕಾರ್ಯಸೂಚಿ

lಜಾಗತಿಕ ತಾಪಮಾನವು, 2030ರ ವೇಳೆಗೆ ಕೈಗಾರಿಕಾಪೂರ್ವ ಮಟ್ಟಕ್ಕಿಂತ 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ಮಿತಿಯನ್ನು ದಾಟಬಾರದು ಹಾಗೂ 2050ರ ವೇಳೆಗೆ ಜಗತ್ತಿನಾದ್ಯಂತ ಹಸಿರುಮನೆಗಳ ಅನಿಲಗಳ ಹೊರಸೂಸುವಿಕೆಯು ಸ್ಥಗಿತ (ನೆಟ್‌ ಝೀರೊ) ಆಗಬೇಕು ಎಂಬುದು ಪ್ರಮುಖ ಗುರಿ

lಈ ಗುರಿ ತಲುಪುವಲ್ಲಿ, ಅರಣ್ಯ ಬೆಳೆಸುವುದು ಸೇರಿದಂತೆ ನೈಸರ್ಗಿಕ ಪರಿಹಾರೋಪಾಯಗಳನ್ನು ಕಂಡುಕೊಳ್ಳುವುದು, ಬ್ಯಾಟರಿಚಾಲಿತ ವಾಹನಗಳ ಬಳಕೆ ಹಾಗೂ ಮರುಬಳಕೆ ಕ್ಷೇತ್ರದಲ್ಲಿ ಹೂಡಿಕೆಗೆ ಉತ್ತೇಜನ ನೀಡುವುದು ಪ್ರಮುಖ ಆದ್ಯತೆಯಾಗಿದೆ

lನೈಸರ್ಗಿಕ ಆವಾಸಸ್ಥಾನ–ಸಮುದಾಯಗಳನ್ನು ಸಂರಕ್ಷಿಸುವ ಕ್ರಮಕ್ಕೆ ಮುಂದಾಗುವುದು

l2015ರ ಪ್ಯಾರಿಸ್‌ ಶೃಂಗಸಭೆಯ ಒಪ್ಪಂದಕ್ಕೆ ಬದ್ಧತೆ ವ್ಯಕ್ತಪಡಿಸಿದ್ದ ದೇಶಗಳು, ಆ ದಿಸೆಯಲ್ಲಿ ಕೈಗೊಂಡ ಉಪಕ್ರಮಗಳೇನು? ಗುರಿ ಸಾಧನೆಯಲ್ಲಿನ ಪ್ರಗತಿಯನ್ನು ವಿವರಿಸಲು ಹಾಗೂ ಮುಂದಿನ ದಿನಗಳಲ್ಲಿ ಹಾಕಿಕೊಳ್ಳುವ ಗುರಿಯ ಬಗ್ಗೆ ಬದ್ಧತೆಯನ್ನು ವ್ಯಕ್ತಪಡಿಸಲು ಸದಸ್ಯ ರಾಷ್ಟ್ರಗಳಿಗೆ ಸಮಾವೇಶ ಅವಕಾಶ ಒದಗಿಸಿದೆ

lಭೂಮಿಯ ಭವಿಷ್ಯಕ್ಕಾಗಿ ಹಾಗೂ ಗುರಿ ಸಾಧನೆಗಾಗಿ ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಹಾಗೂ ಈ ದಿಸೆಯಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು, ಬಡ ಹಾಗೂ ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ನೆರವಾಗುವಂಥ ದೃಢವಾದ ಕಾರ್ಯಯೋಜನೆಗಳನ್ನು ರೂಪಿಸುವುದು ಹಾಗೂ ಜಾಗತಿಕ ಒಗ್ಗಟ್ಟು ಪ್ರದರ್ಶಿಸುವುದು ಸಮಾವೇಶದ ಕಾರ್ಯಸೂಚಿಯಲ್ಲಿ ಸೇರಿದೆ.

ಆಧಾರ: ವಿಶ್ವ ಸಂಸ್ಥೆ, ಎಎಫ್‌ಪಿ, ರಾಯಿಟರ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT