ಶನಿವಾರ, ಫೆಬ್ರವರಿ 29, 2020
19 °C

Explainer | ಚೀನಾದಲ್ಲಿ ಆತಂಕ ಮೂಡಿಸಿದ ಕೊರೊನಾ ವೈರಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೀನಾ ಮತ್ತೆ ವೈರಸ್‌ ಸೋಂಕಿನ ಭೀತಿಗೆ ಒಳಗಾಗಿದೆ. 2002ರಲ್ಲಿ ಚೀನಾದಲ್ಲಿ ಮೊದಲಬಾರಿಗೆ ಕಂಡುಬಂದಿದ್ದ ‘ಸಾರ್ಸ್‌’ (ಸಿವಿಯರ್‌ ಅಕ್ಯೂಟ್‌ ರೆಸ್ಪಿರೇಟರಿ ಸಿಂಡ್ರೋಮ್‌) ವೈರಸ್‌ ಹಲವರ ಸಾವಿಗೆ ಕಾರಣವಾಗಿತ್ತು. ಅಷ್ಟೇ ಅಲ್ಲ, ಈ ವೈರಸ್‌ ಹಲವು ರಾಷ್ಟ್ರಗಳಿಗೆ ವಿಸ್ತರಿಸಿಕೊಂಡಿತ್ತು. ಈಗ ಇದೇ ವರ್ಗಕ್ಕೆ ಸೇರಿದ ‘ಕೊರೋನಾ ವೈರಸ್‌’ ಚೀನಾದಲ್ಲಿ ಆತಂಕ ಮೂಡಿಸಿದೆ.

ಇದೆಂಥ ವೈರಸ್‌?
ಕೊರೋನಾ ವೈರಸ್‌ (CoV) ಸಾಮಾನ್ಯವಾಗಿ ನೆಗಡಿ ಹಾಗೂ ಶ್ವಾಸಕೋಶದ ಸೋಂಕಿಗೆ ಕಾರಣವಾಗುವ ವೈರಸ್‌. ಆದರೆ ಈಗ ಚೀನಾದಲ್ಲಿ ಕಾಣಿಸಿಕೊಂಡಿರುವುದು ಹೊಸ ತಳಿಯ ‘ನೊವೆಲ್‌ ಕೊರೋನರಿ ವೈರಸ್‌’ (2019–nCoV). ಬಹುಮಟ್ಟಿಗೆ ಇದು ‘ಸಾರ್ಸ್‌’ನ ಸ್ವರೂಪದ್ದೇ ಆಗಿದೆ. ಆದರೆ ಸಾರ್ಸ್‌ನಷ್ಟು ಅಪಾಯಕಾರಿಯಲ್ಲ ಎನ್ನಲಾಗಿದೆ. ಸೋಂಕಿಗೆ ಒಳಗಾದವರ ಶ್ವಾಸಕೋಶದ ಮೇಲೆ ಈ ವೈರಸ್‌ ಹೆಚ್ಚಿನ ಒತ್ತಡ ಹೇರುತ್ತದೆ. ಚೀನಾದಲ್ಲಿ ಈ ಹಿಂದೆ ಎಂದೂ ಇದು ಕಾಣಿಸಿಕೊಂಡಿರಲಿಲ್ಲ ಎಂದು ಹೇಳಲಾಗಿದೆ.

ಇದರ ಸೋಂಕಿಗೆ ಒಳಗಾದವರಲ್ಲಿ ಜ್ವರ, ಕೆಮ್ಮು, ಉಸಿರಾಡಲು ಕಷ್ಟವಾಗುವುದೇ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದು ಇನ್ನಷ್ಟು ತೀವ್ರವಾದರೆ, ಸೋಂಕಿತರು ನ್ಯುಮೋನಿಯಾಕ್ಕೆ ಒಳಗಾಗುತ್ತಾರೆ, ಮೂತ್ರಪಿಂಡ ವಿಫಲವಾಗಬಹುದು, ಅಷ್ಟೇ ಅಲ್ಲ ಈ ವೈರಸ್‌ ಪ್ರಾಣಕ್ಕೂ ಕುತ್ತು ತರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಪತ್ತೆ ಯಾವಾಗ?
‘ವುಹಾನ್‌ ನಗರದಲ್ಲಿ ಕೆಲವರು ನ್ಯುಮೋನಿಯಾಕ್ಕೆ ಒಳಗಾಗಿದ್ದು, ಅದರ ಕಾರಣಗಳು ನಿಗೂಢವಾಗಿವೆ’ ಎಂಬ ಮಾಹಿತಿಯನ್ನು ಚೀನಾದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಕಚೇರಿಗೆ ಅಲ್ಲಿನ ಅಧಿಕಾರಿಗಳು 2019ರ ಡಿಸೆಂಬರ್‌ 31ರಂದು ನೀಡಿದ್ದರು.

ಆ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಿದ್ದ ಅಲ್ಲಿನ ಅಧಿಕಾರಿಗಳು, ಈ ರೋಗಕ್ಕೆ ‘ನೊವೆಲ್‌ ಕೊರೋನಾ ವೈರಸ್‌’ ಕಾರಣ ಎಂಬುದನ್ನು ಜನವರಿ 7ರಂದು ಪತ್ತೆ ಮಾಡಿದ್ದರು. ಇದಾದ ಬಳಿಕ ಈ ರೋಗವನ್ನು ತಡೆಯಲು ಯಾವರೀತಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆಯು ವಿವಿಧ ರಾಷ್ಟ್ರಗಳಿಗೆ ಸೂಚಿಸಿತ್ತು.

‘ಅಂತರರಾಷ್ಟ್ರೀಯ ಆರೋಗ್ಯ ನಿಯಮಾವಳಿಗೆ ಅನುಗುಣವಾಗಿ ಎಲ್ಲಾ ರಾಷ್ಟ್ರಗಳೂ ತುರ್ತು ಸನ್ನಿವೇಶಗಳನ್ನು ಎದುರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು‌’ ಎಂದು ಸಂಸ್ಥೆ ಸಲಹೆ ನೀಡಿದೆ.

ವಿಸ್ತರಿಸಿದ ಭೀತಿ
ಈ ಸೋಂಕಿಗೆ ಒಳಗಾಗಿ ಒಂಬತ್ತು ಮಂದಿ ಸತ್ತಿರುವುದು ಮತ್ತು 400ಕ್ಕೂ ಹೆಚ್ಚು ಮಂದಿಗೆ ಸೋಂಕು ತಗಲಿರುವುದು ಚೀನಾದಲ್ಲಿ ಮಾತ್ರವಲ್ಲದೆ, ಇತರ ರಾಷ್ಟ್ರಗಳಲ್ಲೂ ಭಯ ಮೂಡಿಸಿದೆ. ಥಾಯ್ಲೆಂಡ್‌, ಜಪಾನ್‌ ಹಾಗೂ ದಕ್ಷಿಣ ಕೊರಿಯಾದಲ್ಲೂ ಸೋಂಕಿತರು ಪತ್ತೆಯಾಗಿದ್ದು ಚಿಂತೆಗೆ ಕಾರಣವಾಗಿದೆ.

‘ಚೀನಾಕ್ಕೆ ಹೋಗುವಾಗ ಎಚ್ಚರದಿಂದಿರಿ’ ಎಂದು ಅನೇಕ ರಾಷ್ಟ್ರಗಳು ತಮ್ಮ ದೇಶದ ನಾಗರಿಕರಿಗೆ ಸಲಹೆ ನೀಡಿವೆ. ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳ ವಿಮಾನ ನಿಲ್ದಾಣಗಳಲ್ಲಿ ಚೀನಾದಿಂದ ಬರುವ ಪ್ರಯಾಣಿಕರ ತಪಾಸಣಾ ವ್ಯವಸ್ಥೆ ಮಾಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ತುರ್ತು ಸಭೆ ನಡೆಸಿ ಈ ಸೋಂಕಿನ ಬಗ್ಗೆ ಚರ್ಚೆ ನಡೆಸಿದೆ.

ಬಂದಿದ್ದು ಎಲ್ಲಿಂದ?
ಈ ವೈರಸ್‌ನ ಮೂಲ ಯಾವುದು ಎಂದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ ಇದು ಪ್ರಾಣಿಜನ್ಯ ಎಂದು ವೈದ್ಯರು ಊಹಿಸಿದ್ದಾರೆ. ಇದು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ಆ ಬಗ್ಗೆ ಇನ್ನೂ ನಿಖರ ಮಾಹಿತಿ ಲಭಿಸಿಲ್ಲ.

ಸಾಗರೋತ್ಪನ್ನಗಳ ಮಾರುಕಟ್ಟೆಯೇ ಈ ರೋಗಾಣುಗಳ ಮೂಲ ಎಂದು ವುಹಾನ್‌ನ ಅಧಿಕಾರಿಗಳು ಹೇಳಿದ್ದರು. ಆದರೆ ಈ ಮಾರುಕಟ್ಟೆಗೆ ಭೇಟಿ ನೀಡದಿದ್ದವರೂ ಸೋಂಕಿಗೆ ಒಳಗಾಗುತ್ತಿರುವುದರಿಂದ ಈ ವಾದವನ್ನು ತಳ್ಳಿಹಾಕಲಾಗಿದೆ. ಈ ವೈರಸ್‌, ಮನುಷ್ಯ ಮತ್ತು ಪ್ರಾಣಿಗಳ ಮಧ್ಯೆ ಪ್ರಸಾರವಾಗುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

‘ವೈರಸ್‌ನ ಮೂಲ ಯಾವುದು ಎನ್ನುವುದು ಖಚಿತವಾಗಿ ತಿಳಿದು ಬಂದಿಲ್ಲ. ಈ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ’ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಉಪನಿರ್ದೇಶಕ ಲಿ ಬಿನ್‌ ತಿಳಿಸಿದ್ದಾರೆ.

ವೈರಸ್‌ನಿಂದ ಸಾವಿಗೀಡಾದವರ ಸಂಖ್ಯೆ 9ಕ್ಕೆ
ಬೀಜಿಂಗ್‌ (ಪಿಟಿಐ/ಎಎಫ್‌ಪಿ): ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೊನಾವೈರಸ್‌ನಿಂದ ಸಾವಿಗೀಡಾದವರ ಸಂಖ್ಯೆ ಒಂಬತ್ತಕ್ಕೆ ಏರಿದೆ. ವೈರಸ್‌ ಮತ್ತೆ ಹರಡುತ್ತಿದ್ದು, ಇದುವರೆಗೆ 440 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಸಾವಿಗೀಡಾದ ಒಂಬತ್ತು ಮಂದಿ ಹುಬೈ ಪ್ರಾಂತ್ಯಕ್ಕೆ ಸೇರಿದ್ದಾರೆ. ಹುಬೈ ಪ್ರಾಂತ್ಯದ ವುಹಾನ್‌ ನಗರದಲ್ಲೇ ಅತಿ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿವೆ. ಚೀನಾದಲ್ಲಿ ಈಗ ಕಾಣಿಸಿಕೊಂಡಿರುವ ವೈರಸ್‌ ಈ ಮೊದಲು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಈ ವೈರಸ್‌ನಿಂದ ಜ್ವರ, ಕೆಮ್ಮು, ಉಸಿರಾಟದ ತೊಂದರೆಯಿಂದ ನಾಗರಿಕರು ಬಳಲುತ್ತಿದ್ದಾರೆ.

ಜಪಾನ್‌ನಲ್ಲಿ ಒಂದು, ಥಾಯ್ಲೆಂಡ್‌ನಲ್ಲಿ ಮೂರು ಹಾಗೂ ಕೊರಿಯಾ ಮತ್ತು ಅಮೆರಿಕದಲ್ಲಿ ತಲಾ ಒಂದು ಕೊರೊನಾವೈರಸ್‌ನ ಪ್ರಕರಣಗಳು ಪತ್ತೆಯಾಗಿವೆ. ವುಹಾನ್‌ ನಗರದಿಂದ ಬಂದ ವ್ಯಕ್ತಿಯಲ್ಲೇ ವೈರಸ್‌ ಇರುವುದು ದೃಢಪಟ್ಟಿದೆ. ವಿದೇಶಿ ಪ್ರವಾಸಿಗರ ಭೇಟಿಯನ್ನು ಉತ್ತರ ಕೊರಿಯಾ ನಿಷೇಧಿಸಿದೆ.

ಒಂಬತ್ತು ಸಾವಿರ ಪ್ರಯಾಣಿಕರ ತಪಾಸಣೆ
ನವದೆಹಲಿ (ಪಿಟಿಐ): ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ 9,156 ಪ್ರಯಾಣಿಕರನ್ನು ಕೊರೊನಾವೈರಸ್‌ಗಾಗಿ ತಪಾಸಣೆ ಮಾಡಲಾಗಿದ್ದು, ಯಾವುದೇ ಪ್ರಕರಣ ಪತ್ತೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುದಾನ್‌ ಬುಧವಾರ ತಿಳಿಸಿದ್ದಾರೆ.
**
ಕಣ್ಗಾವಲಿನಲ್ಲಿ ವುಹಾನ್‌ ಪ್ರಜೆಗಳು
ಬೆಂಗಳೂರು:
ಕೊರೊನಾವೈರಸ್ ಹರಡುವ ಭೀತಿಯಿಂದಾಗಿ, ರಾಜ್ಯಕ್ಕೆ ‍ಪ್ರವಾಸ ಬರುವ ಚೀನಾದ ವುಹಾನ್‌ ನಗರದ ಪ್ರಜೆಗಳ ಚಲನವಲನಗಳ ಮೇಲೆ ನಿಗಾ ಇಡುವ ಜತೆಗೆ ಅವರ ಆರೋಗ್ಯವನ್ನು ಪ್ರತಿನಿತ್ಯ ವಿಚಾರಿಸಲಾಗುತ್ತಿದೆ.

ರಾಜ್ಯಕ್ಕೆ ಬಂದ ಅಲ್ಲಿನ ಪ್ರಜೆಗಳು ವಾಪಸ್‌ ತೆರಳುವವರೆಗೂ ಅವರ ಆರೋಗ್ಯ ವಿಚಾರಿಸುವಂತೆ ಆರೋಗ್ಯ ಕಾರ್ಯಕರ್ತೆಯರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸೂಚಿಸಿದೆ. 

ವುಹಾನ್‌ ನಗರದ ವ್ಯಕ್ತಿಯೊಬ್ಬರು ಈಗಾಗಲೇ ಬೆಂಗಳೂರಿಗೆ ಬಂದಿದ್ದಾರೆ. ಅವರಿರುವ ಸ್ಥಳಕ್ಕೆ ಆರೋಗ್ಯ ಕಾರ್ಯಕರ್ತೆಯರು ನಿತ್ಯ ಭೇಟಿ ನೀಡಿ, ಮಾಹಿತಿ ಕಲೆಹಾಕುತ್ತಿದ್ದಾರೆ. ಒಂದು ವೇಳೆ ಅವರಲ್ಲಿ ಸೋಂಕಿನ ಲಕ್ಷಣಗಳು ಗೋಚರಿಸಿದಲ್ಲಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ.

ಜ್ವರ, ಕೆಮ್ಮು, ನ್ಯುಮೋನಿಯಾ, ಉಸಿರಾಟದ ಸಮಸ್ಯೆ ಕೊರೊನಾವೈರಸ್ ಲಕ್ಷಣಗಳಾಗಿದ್ದು, ವಿಮಾನ ನಿಲ್ದಾಣದಲ್ಲಿ ಯಾವುದೇ ವ್ಯಕ್ತಿಯಲ್ಲಿ ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡಲ್ಲಿ ನೇರವಾಗಿ ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆಗೆ ಆಂಬುಲೆನ್ಸ್ ಮೂಲಕ ಕರೆತರುವಂತೆ ಅಲ್ಲಿನ ಅಧಿಕಾರಿಗಳಿಗೆ ಆರೋಗ್ಯ ಇಲಾಖೆ ಸೂಚಿಸಿದೆ.  

ಮಾಹಿತಿ ನೀಡುವಿಕೆ ಕಡ್ಡಾಯ: ‘ಆರೋಗ್ಯ ಕಾರ್ಯಕರ್ತೆಯರಿಗೆ ಅಲ್ಲಿನ ಪ್ರಜೆಗಳು ಕಡ್ಡಾಯವಾಗಿ ಮಾಹಿತಿಯನ್ನು ನೀಡಬೇಕು. ಒಂದು ವೇಳೆ ಮಾಹಿತಿ ನೀಡಲು ನಿರಾಕರಿಸಿದಲ್ಲಿ ಅವರನ್ನು ಪರೀಕ್ಷೆಗೆ ಒಳಪಡಿಸಲು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಅವರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆರಳುವುದಾದರೂ ತಿಳಿಸಬೇಕು’ ಎಂದು ಇಲಾಖೆಯ ಜಂಟಿ ನಿರ್ದೇಶಕ ಡಾ.ಪ್ರಕಾಶ್ ಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಥಾಯ್ಲೆಂಡ್‌, ಜಪಾನ್‌ ಮತ್ತು ದಕ್ಷಿಣ ಕೊರಿಯಾದಲ್ಲೂ ವೈರಸ್‌ ಪ್ರಕರಣಗಳು ಪತ್ತೆಯಾಗಿದ್ದರಿಂದ ಅಲ್ಲಿಂದ ಬರುವವರನ್ನೂ ಒಂದು ವಾರದಿಂದ ತಪಾಸಣೆಗೆ ಒಳಪಡಿಸಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಈವರೆಗೆ  ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ವಿಮಾನ ನಿಲ್ದಾಣದ ಸಿಬ್ಬಂದಿಯ ಜತೆಗೆ ಇಲಾಖೆಯಿಂದಲೂ ನಾಲ್ವರು ಸಿಬ್ಬಂದಿಯನ್ನು ಒದಗಿಸಲಾಗಿದೆ’ ಎಂದರು.

–ವರುಣ ಹೆಗಡೆ

 **
ಸೋಂಕು ಬರದಂತೆ ಎಲ್ಲ ಮುಂಜಾಗ್ರತೆ ವಹಿಸಲಾಗಿದೆ. ಚಿಕಿತ್ಸೆ ಒದಗಿಸಲು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ ಮೀಸಲಿಟ್ಟಿದ್ದೇವೆ.
–ಡಾ.ಪ್ರಕಾಶ್ ಕುಮಾರ್, ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು