ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಮುನ್ನೆಚ್ಚರಿಕೆಯೇ ಮದ್ದು

Last Updated 11 ಮೇ 2020, 20:15 IST
ಅಕ್ಷರ ಗಾತ್ರ

ಯಾವುದೇ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಂತಹ ಸರ್ವಸಮರ್ಥ ಲಸಿಕೆ ಅಭಿವೃದ್ಧಿಪಡಿಸಲು ಸರಿಸುಮಾರು 10ರಿಂದ 12 ವರ್ಷಗಳೇ ಬೇಕು ಎನ್ನುವುದು ತಜ್ಞರ ಅನಿಸಿಕೆ. ಜಗತ್ತನ್ನು ಕಾಡಿರುವ ಹಲವು ರೋಗಗಳಿಗೆ ಈವರೆಗೆ ಲಸಿಕೆಯನ್ನೇ ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಸಂಶೋಧನೆಯಲ್ಲಿ ಎದುರಾಗುವ ಸವಾಲುಗಳು ಇದಕ್ಕೆ ಮೊದಲ ಕಾರಣವಾದರೆ, ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಾಗೂ ಶಕ್ತ ಕಂಪನಿಗಳು ಸಂಶೋಧನೆಗೆ ಹಣ ಹೂಡಲು ಮುಂದಾಗದಿರುವುದು ಇನ್ನೊಂದು ಪ್ರಮುಖ ಕಾರಣ. ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗದ ರೋಗಗಳ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯೇ ಮದ್ದು ಎಂಬುದು ಇದುವರೆಗಿನ ಅನುಭವ ಕಲಿಸಿದ ಪಾಠ...

ಕೆಎಫ್‌ಡಿ: ಲಸಿಕೆ ಇದ್ದರೂ ಪರಿಣಾಮಕಾರಿ ಆಗಿಲ್ಲ

ಮಲೆನಾಡಿನ ಭಾಗದಲ್ಲಿ ದಶಕಗಳಿಂದ ಕಾಡುತ್ತಿರುವ ‘ಕ್ಯಾಸನೂರು ಫಾರೆಸ್ಟ್ ಡಿಸೀಸ್’ (ಕೆಎಫ್‌ಡಿ) ಅಥವಾ ಮಂಗನ ಕಾಯಿಲೆಗೆ ಪರಿಣಾಮಕಾರಿ ಔಷಧ ಇಲ್ಲ. 1984ರಲ್ಲಿ ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದಲ್ಲಿ ಲಸಿಕೆಯನ್ನು ಅಭಿವೃದ್ಧಿ ಮಾಡಲಾಗಿತ್ತು. ಆದರೆ ಔಷಧದ ಸಾಮರ್ಥ್ಯ ಪರೀಕ್ಷಿಸುವ ಯತ್ನ ಒಮ್ಮೆ ಮಾತ್ರ ನಡೆದಿದೆ. ಪೀಡಿತರಿಗೆ ಮೂರು ಡೋಸ್‌ಗಳಲ್ಲಿ ಔಷಧ ನೀಡಲಾಗುತ್ತದೆ. ಆದರೆ, ಅದರಿಂದ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ ಎನ್ನುವ ವಾದವಿದೆ. ಹೊಸ ಲಸಿಕೆ ಅಭಿವೃದ್ಧಿಪಡಿಸುವ ಅಥವಾ ಈಗಿರುವ ಲಸಿಕೆಯನ್ನೇ ಮೇಲ್ದರ್ಜೆಗೇರಿಸುವ ಯತ್ನ ಮಾಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಇದೆಲ್ಲದರ ಮಧ್ಯೆ ಪ್ರತಿವರ್ಷ ಕೆಎಫ್‌ಡಿ ಪೀಡಿತರ ಸಂಖ್ಯೆ ಏರುತ್ತಲೇ ಇದೆ.

ಅರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಸೊಳ್ಳೆಗಳು ಕಚ್ಚದಂತೆ ಮುನ್ನೆಚ್ಚರಿಕೆ ವಹಿಸುವುದು, ಸುತ್ತಮುತ್ತಲಿನ ಜಾಗದಲ್ಲಿ ಮಂಗಗಳ ಅಸಹಜ ಸಾವಿನ ಮೇಲೆ ನಿಗಾ ವಹಿಸುವುದು, ಜಾನುವಾರುಗಳ ಮೈಮೇಲೆ ಉಣ್ಣೆಗಳು ಆಗದಂತೆ ನೋಡಿಕೊಳ್ಳುವುದು, ಕಾಡು ಪ್ರವೇಶಿಸುವ ಮುನ್ನ ಮೈತುಂಬ ಬಟ್ಟೆ ಧರಿಸುವುದು ಹಾಗೂ ವಾಪಸಾದ ಬಳಿಕ ಬಟ್ಟೆಗಳನ್ನು ಬಿಸಿನೀರಿನಲ್ಲಿ ತೊಳೆಯುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು – ಇಂತಹ ಕ್ರಮಗಳಿಂದ ಕಾಯಿಲೆಯ ತೀವ್ರತೆಯನ್ನು ತಡೆಯಲು ಸಾಧ್ಯವಾಗಿದೆ.

ಖಚಿತ ಲಸಿಕೆ ಇಲ್ಲದ ಕೆಲವು ಕಾಯಿಲೆಗಳು

* ಎಚ್ಐವಿ

* ಡೆಂಗಿ

* ಚಿಕುನ್ ಗುನ್ಯಾ

* ಮಲೇರಿಯಾ

* ಚಗಾಸ್ ಡಿಸೀಸ್ (ಅಮೆರಿಕನ್ ಟ್ರೈಪನೊಸೊಮಿಯಾಸಿಸ್)

* ಸೈಟೊಮೆಗಾಲೊವೈರಸ್ (ಸಿಎಂವಿ)

* ಹುಕ್‌ವರ್ಮ್ ಸೋಂಕು

* ಲೈಸ್ಮೆನಿಯಾಸಿಸ್

* ರೆಸ್ಪರೇಟರಿ ಸೆನ್ಸಿಟಿಯಲ್ ವೈರಸ್

* ಸ್ಕಿಸ್ಟೊಸೋಮಿಯಾಸಿಸ್

ಎಚ್‌ಐವಿಗೆ ಗುದ್ದು ನೀಡಿದ ಜಾಗೃತಿ

ಕೋಟಿಗಟ್ಟಲೆ ಹಣ ಸುರಿದರೂ ಎಚ್‌ಐವಿಯನ್ನು ತಡೆಗಟ್ಟಲು ಈವರೆಗೆ ಯಾವುದೇ ಪರಿಣಾಮಕಾರಿ ಔಷಧ ಲಭ್ಯವಾಗಿಲ್ಲ. ಪರಿಣಾಮಕಾರಿ ಫಲಿತಾಂಶ ನೀಡದ ಕಾರಣ, ಎಚ್‌ಐವಿಗೆ ಔಷಧಿ ಸಂಶೋಧಿಸುವ ಎರಡು ಯೋಜನೆಗಳನ್ನು ದಕ್ಷಿಣ ಆಫ್ರಿಕಾದಲ್ಲಿ ಇದೇ ಫೆಬ್ರುವರಿಯಲ್ಲಿ ಸ್ಥಗಿತಗೊಳಿಸಲಾಗಿದೆ. ಎಚ್‌ಐವಿಗೆ ಪರಿಣಾಮಕಾರಿ ಔಷಧ ಮುಂದಿನ ಹತ್ತು ವರ್ಷಗಳ ಒಳಗೆ ಲಭ್ಯವಾಗಲಿದೆ ಎಂಬುದು ವಿಜ್ಞಾನಿಗಳ ಆಶಾಭಾವ. ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯು ಎಚ್ಐವಿ–1 ಲಸಿಕೆಯನ್ನು ಅಭಿವೃದ್ಧಿಪಡಿಸುವ ಮೊದಲ ಹಂತ ಪೂರ್ಣಗೊಂಡಿದೆ ಎಂದು ಇತ್ತೀಚೆಗೆ ಘೋಷಿಸಿದೆ. ಲಸಿಕೆಯಿಂದ ದೇಹದ ರೋಗನಿರೋಧಕ ಶಕ್ತಿ ವೃದ್ಧಿಸಿದೆ ಎಂದೂ ತಿಳಿಸಿದೆ.

ಎಚ್‌ಐವಿಗೆ ಲಸಿಕೆ ಲಭ್ಯವಾಗಿಲ್ಲ ಎಂದು ಯಾರೂ ಇದುವರೆಗೆ ಕೈಕಟ್ಟಿ ಕುಳಿತಿಲ್ಲ. ಲೈಂಗಿಕ ಕ್ರಿಯೆಯ ವೇಳೆ ಕಾಂಡೋಮ್ ಬಳಕೆ, ಒಮ್ಮೆ ಬಳಸಿದ ಸಿರಿಂಜ್‌ಗಳ ಮರುಬಳಕೆ ಸ್ಥಗಿತ, ಟ್ಯಾಟೂ ಹಾಕಿಸಿಕೊಳ್ಳುವಾಗ, ಕ್ಷೌರ ಮಾಡಿಸಿಕೊಳ್ಳುವಾಗ ಹೊಸ ಬ್ಲೇಡ್ ಬಳಕೆ, ಎಚ್‌ಐವಿ ಗುಣಲಕ್ಷಣಗಳಿಲ್ಲದ ರಕ್ತವನ್ನಷ್ಟೆ ರೋಗಿಗೆ ನೀಡುವಿಕೆ – ಇಂತಹ ಕ್ರಮಗಳಿಂದ ಸೋಂಕು ಪಸರಿಸುವುದನ್ನು ದೊಡ್ಡ ಮಟ್ಟದಲ್ಲಿ ನಿಯಂತ್ರಣಕ್ಕೆ ತರಲಾಗಿದೆ. ಈ ಕ್ರಮಗಳನ್ನು ಎಲ್ಲೆಡೆ ಪ್ರಚುರಪಡಿಸಿ ಜನಜಾಗೃತಿ ಮಾಡಲಾಗಿದೆ. ಹೀಗಾಗಿ, ಎಚ್‌ಐವಿ, ಇತರ ಸಾಂಕ್ರಾಮಿಕ ರೋಗಗಳಂತೆ ಕ್ಷಿಪ್ರಗತಿಯಲ್ಲಿ ಹರಡಿಲ್ಲ.

ಮಲೇರಿಯಾ: ಮರಣ ಪ್ರಮಾಣ ಕುಸಿತ

ಸೊಳ್ಳೆಗಳಿಂದ ಹರಡುವ ಸೋಂಕು ಮಲೇರಿಯಾ. ಚಳಿ, ಜ್ವರ, ವಾಂತಿ ಮೊದಲಾದ ಲಕ್ಷಣಗಳಿಂದ ಆರಂಭಿಸಿ, ಒಮ್ಮೊಮ್ಮೆ ಅಂಗಾಂಗ ವೈಫಲ್ಯಕ್ಕೂ, ಸಾವಿಗೂ ಕಾರಣವಾಗುತ್ತದೆ. ಪ್ರಯೋಗಾಲಯಗಳಲ್ಲಿ ವಿಜ್ಞಾನಿಗಳು ಬೆವರು ಹರಿಸುತ್ತಿದ್ದರೂ ಮಲೇರಿಯಾಕ್ಕೆ ಒಪ್ಪಿತವಾದ ಔಷಧ ಸಿಕ್ಕಿಲ್ಲ.

ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ಮಲೇರಿಯಾದಿಂದ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದೆ. ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು, ಸೊಳ್ಳೆನಿವಾರಕ ಕ್ರೀಮ್‌ಗಳನ್ನು ಲೇಪಿಸಿಕೊಳ್ಳುವುದು, ಸೊಳ್ಳೆ ಪರದೆ ಬಳಸುವುದು – ಇಂತಹ ಕ್ರಮಗಳನ್ನು ಜನ ತಮ್ಮ ದೈನಂದನ ಜೀವನದಲ್ಲಿ ರೂಢಿಸಿಕೊಂಡಿದ್ದಾರೆ. 2000ರಿಂದ 2015ರ ಅವಧಿಯಲ್ಲಿ ಮಲೇರಿಯಾ ಸಾವಿನ ಪ್ರಮಾಣ ಶೇ 62ಕ್ಕೆ ಕುಸಿದಿದೆ. 68 ಲಕ್ಷ ಜನರ ಜೀವ ಉಳಿದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಕೋವಿಡ್‌ಗೆ ಲಸಿಕೆ: ಆಸಕ್ತಿ ಏಕೆ?

ಜಗತ್ತನ್ನು ಈಗ ಕಾಡುತ್ತಿರುವ ಕೋವಿಡ್–19ಗೆ ಲಸಿಕೆ ಪತ್ತೆಮಾಡಲು ಹಲವು ದೇಶಗಳು ಮುಂದಾಗಿವೆ. ನೂರಕ್ಕೂ ಹೆಚ್ಚು ಕಂಪನಿಗಳು ಸಂಶೋಧನೆಗಾಗಿ ಕೋಟ್ಯಂತರ ರೂಪಾಯಿ ಹಣ ವಿನಿಯೋಗ ಮಾಡುತ್ತಿವೆ. ಇದರ ಮಧ್ಯೆ ‘ಕೋವಿಡ್–19 ಕಾಯಿಲೆಗೆ ಲಸಿಕೆ ಸಿಗದೇ ಹೋಗಬಹುದು’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕಳವಳ ವ್ಯಕ್ತಪಡಿಸಿದೆ.

ಈ ರೋಗ 185 ದೇಶಗಳಿಗೆ ಹರಡಿದೆ. ಇನ್ನು ನಾಲ್ಕು ತಿಂಗಳಲ್ಲಿ 70 ಕೋಟಿಗೂ ಹೆಚ್ಚು ಜನರಿಗೆ ಈ ರೋಗ ಹರಡುವ ಅಪಾಯವಿದೆ ಎಂದು ಹಲವು ಸಂಶೋಧನಾ ವರದಿಗಳು ಹೇಳಿವೆ. ಈ ಕಾಯಿಲೆಗೆ ಲಸಿಕೆ ಅಭಿವೃದ್ಧಿಯಾದರೆ, ನೂರಾರು ಕೋಟಿ ಡೋಸ್‌ ಬೇಕಾಗುತ್ತದೆ. ಇದು ಹೆಚ್ಚು ಲಾಭಕರ ಲಸಿಕೆ ಎಂಬುದು ಸಾಬೀತಾಗಿದ್ದರಿಂದಲೇ ಅದರ ಅಭಿವೃದ್ಧಿಗೆ ಅಷ್ಟೊಂದು ಕಂಪನಿಗಳು ಸಾಲುಗಟ್ಟಿ ನಿಂತಿರುವುದು. ಆದರೆ, ಕಡಿಮೆ ಜನರನ್ನು ಬಾಧಿಸುತ್ತಿರುವ ಹಲವು ಭಯಂಕರ ರೋಗಗಳಿಗೆ ಲಸಿಕೆ ಕಂಡುಹಿಡಿಯುವಲ್ಲಿ ಇಷ್ಟು ಆಸಕ್ತಿ ವ್ಯಕ್ತವಾಗಿಲ್ಲ.

ಎಬೋಲಾ: ಲಾಭದ ಲೆಕ್ಕಾಚಾರ

ಕೆಲವು ರೋಗಗಳಿಗೆ ಲಸಿಕೆ ಅಭಿವೃದ್ಧಿಪಡಿಸಲು ಯಾವ ಸರ್ಕಾರಗಳಾಗಲಿ, ಕಂಪನಿಗಳಾಗಲಿ ಆಸಕ್ತಿ ತೋರದೇ ಇರುವುದೂ ಇತಿಹಾಸದಲ್ಲಿ ದಾಖಲಾಗಿದೆ. ಆಫ್ರಿಕಾದ ಬಡರಾಷ್ಟ್ರಗಳನ್ನು ಕಾಡಿದ್ದ ಎಬೋಲಾ ರೋಗಕ್ಕೆ ಲಸಿಕೆ ಕಂಡುಹಿಡಿಯುವುದು ವಿಳಂಬವಾಗಲು ಇದೇ ರೀತಿಯ ಕಾರಣ ಇತ್ತು. 30 ವರ್ಷಗಳಲ್ಲಿ ಈ ರೋಗಕ್ಕೆ ಲಸಿಕೆ ಅಭಿವೃದ್ಧಿಪಡಿಸಲು ನಡೆಸಿದ ಯಾವ ಪ್ರಯತ್ನಗಳೂ ಪೂರ್ಣವಾಗಲಿಲ್ಲ. ಲಸಿಕೆ ಅಭಿವೃದ್ಧಿಯ ಹಂತ ಮುಟ್ಟುತ್ತಿದೆ ಎಂಬುವಷ್ಟರಲ್ಲೇ ರೋಗದ ಉಪಟಳ ಕಡಿಮೆ ಆಗುತ್ತಿದ್ದುದೇ ಇದಕ್ಕೆ ಕಾರಣ.

‘ಎಬೋಲಾಕ್ಕೆ ಲಸಿಕೆ ಕಂಡುಹಿಡಿಯುವುದಕ್ಕೆ ಕೋಟ್ಯಂತರ ಹಣ ವೆಚ್ಚ ಮಾಡಬೇಕಾಗುತ್ತದೆ. ಆದರೆ, ಈ ರೋಗ ಇರುವುದು ಆಫ್ರಿಕಾದ ಕೆಲವು ರಾಷ್ಟ್ರಗಳಲ್ಲಿ ಮಾತ್ರ. ಅಲ್ಲದೆ, ರೋಗಕ್ಕೆ ತುತ್ತಾದವರ ಸಂಖ್ಯೆ ಲಕ್ಷಕ್ಕಿಂತಲೂ ಕಡಿಮೆ. ಹೀಗಿದ್ದಾಗ ಲಸಿಕೆ ಅಭಿವೃದ್ಧಿಪಡಿಸಿ, ಯಾವುದೇ ಲಾಭವಿಲ್ಲ’ ಎಂದು ಯೂರೋಪ್‌ನ ಔಷಧ ತಯಾರಕ ಕಂಪನಿಗಳು ಹೇಳಿದ್ದವು. ‘ದಿ ಗಾರ್ಡಿಯನ್’ ಪತ್ರಿಕೆ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಹಲವು ಕಂಪನಿಗಳ ಅಧಿಕಾರಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು. ರೋಗ ಹರಡದಂತೆ ತಡೆಯಲು ಲಸಿಕೆ ಅಭಿವೃದ್ಧಿಪಡಿಸಲಾಗಿತ್ತು. ಈ ಲಸಿಕೆಯನ್ನು ಲಕ್ಷಾಂತರ ಸಂಖ್ಯೆಯಲ್ಲಿ ವ್ಯಾಪಕವಾಗಿ ಬಳಸಲಾಯಿತು. ಆಫ್ರಿಕಾದ ಬಡರಾಷ್ಟ್ರಗಳಲ್ಲಿ ಜನರಿಗೆ ಈ ಲಸಿಕೆ ನೀಡಲು ವಿಶ್ವ ಆರೋಗ್ಯ ಸಂಸ್ಥೆ ನೆರವು ನೀಡಿತ್ತು. ಭಾರತದಲ್ಲೂ ಕೆಲವು ರೋಗಗಳಿಗೆ ಈವರೆಗೆ ಲಸಿಕೆ ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಬದಲಿಗೆ ರೋಗ ತಗುಲದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಲಸಿಕೆ ನೀಡುವ ಪದ್ಧತಿ ಇದೆ.

ಬೇಕಿದೆ ಸಾರ್ವತ್ರಿಕ ಫ್ಲೂ ಲಸಿಕೆ

ನೆಗಡಿ, ಜ್ವರ ಮೊದಲಾದ ಫ್ಲೂನಿಂದ ಹರಡುವ ಸೋಂಕುಗಳು ಬಹುಕಾಲದಿಂದ ಮನುಷ್ಯನನ್ನು ಕಾಡುತ್ತಿದ್ದರೂ ಸಾರ್ವತ್ರಿಕವಾಗಿ ಬಳಸಬಹುದಾದ ಲಸಿಕೆ ಇಲ್ಲ. ಹೆಚ್ಚಿನ ಲಸಿಕೆಗಳನ್ನು ಮನುಷ್ಯನಿಗೆ ಒಮ್ಮೆ ಅಥವಾ ಕೆಲ ಬಾರಿ ಮಾತ್ರ ನೀಡಬೇಕಾಗುತ್ತದೆ. ಫ್ಲೂ ಆಗಾಗ್ಗೆ ರೂ‍ಪಾಂತರಗೊಳ್ಳುವುದರಿಂದ (ಮ್ಯುಟೇಷನ್) ಲಸಿಕೆಗಳಲ್ಲೂ ಮಾರ್ಪಾಡು ಮಾಡುವುದು ಅನಿವಾರ್ಯ. ಹೀಗಾಗಿಯೇ ಪ್ರತಿ ಚಳಿಗಾಲದಲ್ಲಿ ಜನರು ಫ್ಲೂ ಹೊಡೆತಕ್ಕೆ ತುತ್ತಾಗುತ್ತಾರೆ.

ಲಸಿಕೆ ತಯಾರಿಕಾ ಸಂಸ್ಥೆ ಸನೋಫಿಯ ತಜ್ಞರು ಸಾರ್ವತ್ರಿಕ ಫ್ಲೂ ಲಸಿಕೆ ಅಭಿವೃದ್ಧಿಪಡಿಸುವ ಹಂತದಲ್ಲಿದ್ದಾರೆ. ಈ ಲಸಿಕೆಯು ಎಲ್ಲ ರೀತಿಯ ಫ್ಲೂಗಳನ್ನೂ ತಡೆಗಟ್ಟುವ ಉದ್ದೇಶ ಹೊಂದಿದ್ದು, ಇನ್ನೂ ಕ್ಲಿನಿಕಲ್ ಟ್ರಯಲ್ ಹಂತದಲ್ಲಿದೆ. ಆದರೆ ಈಗ ಬಳಸುತ್ತಿರುವ ಫ್ಲೂ ಲಸಿಕೆಗಳು ವಿಶಾಲ ಸ್ವರೂಪದ ವೈರಾಣುಗಳನ್ನು ತಡೆಯಲು ಅಣಿಯಾಗಿಲ್ಲ.

ಚಿಕೂನ್‌ ಗುನ್ಯಕ್ಕೆ ಸಿಕ್ಕಿಲ್ಲ ರಾಮಬಾಣ

ಸೊಳ್ಳೆ ಕಚ್ಚುವುದರಿಂದ ಮನುಷ್ಯರಿಗೆ ಚಿಕೂನ್‌ಗುನ್ಯ ಹರಡುತ್ತದೆ. ಜ್ವರ ಹಾಗೂ ಕೀಲು ನೋವು, ಮಾಂಸಖಂಡಗಳಲ್ಲಿ ನೋವು, ಊತ ಇದರ ಲಕ್ಷಣಗಳು. ಆಫ್ರಿಕಾ, ಏಷ್ಯಾ, ಯುರೋಪ್ ಖಂಡಗಳಲ್ಲಿ ವ್ಯಾಪಿಸಿದೆ. ಆದರೆ ವೈರಸ್ ಸೋಂಕು ತಡೆಗೆ ಅಥವಾ ನಿಯಂತ್ರಣಕ್ಕೆ ಸಮರ್ಥ ಎನಿಸುವ ಲಸಿಕೆ ಅಥವಾ ಚಿಕಿತ್ಸಾ ಪದ್ಧತಿ ಲಭ್ಯವಿಲ್ಲ. ಸೋಂಕು ಹರಡದಂತೆ ತಡೆಯಲು ಸೊಳ್ಳೆ ಕಡಿತದಿಂದ ದೂರವಿರುವುದೇ ಪರಿಹಾರ. ಪ್ರಯಾಣದ ಅವಧಿಯಲ್ಲಿ ಸೊಳ್ಳೆಗಳಿಂದ ಪಾರಾಗಲು ಕೀಟ ನಿವಾರಕ ಬಳಕೆ, ಉದ್ದ ತೊಳಿನ ಅಂಗಿ ಮತ್ತು ಪ್ಯಾಂಟ್ ಧರಿಸುವುದನ್ನು ರೂಢಿಸಿಕೊಳ್ಳಬೇಕು. ಮನೆಯೊಳಗೆ ಸೊಳ್ಳೆ ಪ್ರವೇಶಿಸದಂತ ನೋಡಿಕೊಳ್ಳಬೇಕು.

ನೊರೊ ವೈರಸ್‌ಗೂ ಲಸಿಕೆ ಇಲ್ಲ

ಹೊಟ್ಟೆನೋವು, ವಾಂತಿ, ಅತಿಸಾರಕ್ಕೆ ಕಾರಣವಾಗುವ ನೊರೊ ವೈರಸ್ ಅಮೆರಿಕದಲ್ಲಿ ಪ್ರತಿವರ್ಷ 2.1 ಕೋಟಿ ಜನರನ್ನು ಬಾಧಿಸುತ್ತದೆ. ತಡೆಗೆ ಕೆಲವು ಮಾರ್ಗಗಳಿವೆಯೇ ಹೊರತು, ಲಸಿಕೆ ಇಲ್ಲ. ವಾಕ್ಸಾರ್ಟ್ ಕಂಪನಿಯು ಮಾತ್ರೆಗಳನ್ನು ತಯಾರಿಸಿದ್ದಾಗಿ ಹೇಳಿಕೊಂಡಿದೆ. ಆದರೆ ಲಸಿಕೆ ಪ್ರಾಯೋಗಿಕ ಹಂತದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT