ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ಅನ್‌ಲಾಕ್‌ ಅಲ್ಲ; ಮತ್ತೆ ಲಾಕ್‌ಡೌನ್‌!

Last Updated 12 ಜುಲೈ 2020, 19:30 IST
ಅಕ್ಷರ ಗಾತ್ರ

ಕೊರೊನಾ ಸೋಂಕು ಹರಡುವಿಕೆ ತಡೆಗೆ ದೇಶದಲ್ಲಿ ವಿಧಿಸಿದ್ದ 68 ದಿನಗಳ ಲಾಕ್‌ಡೌನ್‌ ಮುಗಿದು ತಿಂಗಳ ಮೇಲೆ ಒಂದು ವಾರ ಕಳೆದಿದೆ. ಈಗ ದೇಶವು ಅನ್‌ಲಾಕ್‌ ಪ್ರಕ್ರಿಯೆಯಲ್ಲಿದೆ. ಆದರೆ, ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಹಲವು ರಾಜ್ಯಗಳು ಪ್ರಕರಣಗಳು ಹೆಚ್ಚಿರುವ ಪ್ರದೇಶಗಳಲ್ಲಿ ಲಾಕ್‌ಡೌನ್ ‌ಅನ್ನು ಮುಂದುವರಿಸಿವೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿಯೂ ಮಂಗಳವಾರ ರಾತ್ರಿಯಿಂದ ಒಂದು ವಾರದ ಲಾಕ್‌ಡೌನ್‌ ಘೋಷಿಸಲಾಗಿದೆ. ಬೇರೆ ರಾಜ್ಯಗಳ ಸದ್ಯದ ಸ್ಥಿತಿಯ ಚಿತ್ರಣ ಇಲ್ಲಿದೆ...

ಆಂಧ್ರಪ್ರದೇಶ
ರಾಜ್ಯದಾದ್ಯಂತ ಇದ್ದ ಲಾಕ್‌ಡೌನ್ ಬಹುತೇಕ ಸಡಿಸಲಿಸಲಾಗಿದೆ. ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಲಾಗಿದೆ. ಕೋವಿಡ್‌ ವ್ಯಾಪಕವಾಗಿ ಹರಡುತ್ತಿರುವ ಪ್ರದೇಶಗಳನ್ನು ಹುಡುಕಿ, ಅವುಗಳನ್ನು ಸೀಲ್‌ಡೌನ್ ಮಾಡಲಾಗುತ್ತಿದೆ. ಕೃಷ್ಣಾ ಜಿಲ್ಲೆಯ ವಿಜಯವಾಡದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಸಂಪೂರ್ಣ ಲಾಕ್‌ಡೌನ್ ಜಾರಿಗೆ ತರಲಾಗಿದೆ. ಅಗತ್ಯ ವಸ್ತು/ಸೇವೆಗಳ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ರಾಜಸ್ಥಾನ
ರಾಜಸ್ಥಾನದಲ್ಲಿ ಜೂನ್‌ ತಿಂಗಳ ಮೂರನೇ ವಾರದವರೆಗೆ ಲಾಕ್‌ಡೌನ್‌ ಜಾರಿಯಲ್ಲಿತ್ತು. ಆದರೆ, ಲಾಕ್‌ಡೌನ್ ತೆರವು ಮಾಡಿದ ನಂತರ ಕೋವಿಡ್‌ ಹರಡುವಿಕೆ ವ್ಯಾಪಕವಾಯಿತು. ಹೀಗಾಗಿ ಹಾಟ್‌ಸ್ಪಾಟ್‌ಗಳನ್ನು ಮಾತ್ರ ಲಾಕ್‌ಡೌನ್ ಮಾಡಲಾಯಿತು. ಅಗತ್ಯವಿದ್ದೆಡೆ ಸಂಪೂರ್ಣ ಸೀಲ್‌ಡೌನ್ ಮಾಡಲಾಯಿತು. ಲಾಕ್‌ಡೌನ್‌ ತೆರವು ಮಾಡಿದ ನಂತರ ಬಾರ್ಮೇರ್‌ ಜಿಲ್ಲೆಯಲ್ಲಿ ಸೋಂಕು ಕ್ಷಿಪ್ರವಾಗಿ ಹರಡಿತು. ಕೋವಿಡ್ ಆಸ್ಪತ್ರೆಗಳಲ್ಲಿ ಹಾಸಿಗೆಗಳು ದೊರೆಯದ ಕಾರಣ, ಪಕ್ಕದ ಜಿಲ್ಲೆಗಳಿಗೆ ರೋಗಿಗಳನ್ನು ಕಳುಹಿಸಲಾಯಿತು. ಬಾರ್ಮೇರ್‌ನಲ್ಲಿ ಜುಲೈ 4ರಂದು ಒಂದು ವಾರದ ಸಂಪೂರ್ಣ ಲಾಕ್‌ಡೌನ್ ಹೇರಲಾಯಿತು.

ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದಲ್ಲಿ ಜುಲೈ 31ರವರೆಗೆ ಲಾಕ್‌ಡೌನ್‌ ವಿಸ್ತರಿಸಲಾಗಿದೆ. ಕೆಲವು ವಿನಾಯಿತಿ ನೀಡಲಾಗಿದ್ದರೂ ಉಪನಗರ ರೈಲು ಸಾರಿಗೆ ಸ್ಥಗಿತಗೊಳಿಸಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಅಂತರ ಕಾಯ್ದುಕೊಂಡು ಕೆಲಸ ಮಾಡಲು ಅನುಕೂಲವಾಗುವಂತೆ ಶೇ 70ರಷ್ಟು ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಬರುವಂತೆ ನಿಯಮ ರೂಪಿಸಲಾಗಿದೆ. ರಾತ್ರಿ ಕರ್ಫ್ಯೂ ಸಹ ಜಾರಿಯಲ್ಲಿದೆ. ಸೋಂಕಿನ ತೀವ್ರತೆ ಹೆಚ್ಚಾಗಿರುವ ರಾಜ್ಯಗಳಿಂದ ಕೋಲ್ಕತ್ತಕ್ಕೆ ವಿಮಾನ ಸಂಚಾರವನ್ನೂ ರದ್ದುಪಡಿಸಲಾಗಿದೆ.ರಾಜ್ಯದಲ್ಲಿನ ಕೊರೊನಾ ಹಾಟ್‌ಸ್ಪಾಟ್‌ಗಳಲ್ಲಿ ಗುರುವಾರ ಸಂಜೆಯಿಂದ ಏಳು ದಿನದವರೆಗೆ ಸಂಪೂರ್ಣ ಲಾಕ್‌ಡೌನ್ ಜಾರಿಗೆ ತರಲು ರಾಜ್ಯ ಸರ್ಕಾರ ಆದೇಶಿಸಿದೆ. ರಾಜ್ಯದ ಕೋಲ್ಕತ್ತ, ಹೌರಾ ಮತ್ತು 24 ಪರಗಣ ಜಿಲ್ಲೆಗಳಲ್ಲೇ ಹೆಚ್ಚಿನ ಹಾಟ್‌ಸ್ಪಾಟ್‌ಗಳಿವೆ. ಇಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆದೇಶಿಸಿದ್ದಾರೆ.

24:ಕೋಲ್ಕತ್ತದಲ್ಲಿನ ಸಂಪೂರ್ಣ ಲಾಕ್‌ಡೌನ್‌ಗೆ ಒಳಗಾಗಲಿರುವ ಪ್ರದೇಶಗಳು
93:ಉತ್ತರ 24 ಪರಗಣ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ಗೆ ಒಳಗಾಗಲಿರುವ ಪ್ರದೇಶಗಳು
56:ಹೌರಾ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ಗೆ ಒಳಗಾಗಲಿರುವ ಪ್ರದೇಶಗಳು

ಅಸ್ಸಾಂ:
ಅಸ್ಸಾಂನಲ್ಲಿ ಪ್ರಕರಣಗಳ ಸಂಖ್ಯೆ ಒಂದೇ ಸಮನೆ ಹೆಚ್ಚುತ್ತಿರುವ ಕಾರಣ ರಾಜಧಾನಿ ಗುವಾಹಟಿಯನ್ನೂ ಒಳಗೊಂಡ ಕಾಮರೂಪ ಮೆಟ್ರೊಪಾಲಿಟನ್‌ ಜಿಲ್ಲೆಯಲ್ಲಿ 14 ದಿನಗಳ ಲಾಕ್‌ಡೌನ್‌ ವಿಧಿಸಲಾಗಿದೆ. ಕಾಮರೂಪದ ಜತೆಗೆ ಇನ್ನೂ ಹಲವು ಜಿಲ್ಲೆಗಳು ಸಹ ಸ್ತಬ್ಧಗೊಂಡಿವೆ. ಫಾರ್ಮಸಿಗಳು, ಲ್ಯಾಬ್‌ಗಳು ಮತ್ತು ಆಸ್ಪತ್ರೆಗಳ ಕಾರ್ಯಾಚರಣೆಗೆ ಮಾತ್ರ ಅವಕಾಶ ನೀಡಲಾಗಿದೆ. ಪ್ರಕರಣಗಳು ಹೆಚ್ಚುತ್ತಿರುವ ಗೋಲಘಾಟ್‌ ಜಿಲ್ಲೆಯಲ್ಲಂತೂ ಗುರುವಾರದಿಂದ ಶಟ್‌ಡೌನ್‌ ಜಾರಿಗೊಳಿಸಲಾಗಿದೆ.

ಜಾರ್ಖಂಡ್‌
ಜಾರ್ಖಂಡ್‌ನಲ್ಲೂ ಜುಲೈ 31ರವರೆಗೆ ಲಾಕ್‌ಡೌನ್‌ ಮುಂದುವರಿಸಲಾಗಿದೆ. ಹೋಟೆಲ್‌ಗಳು, ಬಾರ್‌ಗಳು, ಶಾಪಿಂಗ್‌ ಮಾಲ್‌ಗಳು, ಚಿತ್ರಮಂದಿರಗಳು, ಸಲೂನ್‌ಗಳು, ಜಿಮ್ನಾಸಿಯಂಗಳು, ಈಜುಕೊಳಗಳ ಮೇಲಿನ ನಿಷೇಧ ಮುಂದುವರಿಸಲಾಗಿದೆ. ಅಂತರ ಜಿಲ್ಲಾ, ಅಂತರರಾಜ್ಯ ಬಸ್‌ ಸಂಚಾರವನ್ನು ರದ್ದುಪಡಿಸಲಾಗಿದೆ. ಈ ರಾಜ್ಯದಲ್ಲೂ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ.

ತಮಿಳುನಾಡು
ತಮಿಳುನಾಡಿನಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿರುವ ಐದು ಜಿಲ್ಲೆಗಳಲ್ಲಿ ಜುಲೈ 31ರವರೆಗೆ ಸಂಪೂರ್ಣ ಲಾಕ್‌ಡೌನ್‌ ವಿಧಿಸಲಾಗಿದೆ. ಆರೋಗ್ಯಸಂಬಂಧಿ ತುರ್ತು ಚಟುವಟಿಕೆಗಳನ್ನು ಬಿಟ್ಟರೆ ಬೇರೆ ಯಾವುದಕ್ಕೂ ಈ ಜಿಲ್ಲೆಗಳಲ್ಲಿ ಈಗ ಅವಕಾಶವಿಲ್ಲ. ಚೆನ್ನೈ, ಮಧುರೆ, ಕಾಂಚಿಪುರಂ, ಚೆಂಗಾಲಪಟ್ಟು ಮತ್ತು ತಿರುವಳ್ಳೂರ್ ಜಿಲ್ಲೆಗಳು ಈ ತಿಂಗಳ ಕೊನೆಯವರೆಗೆ ಸ್ತಬ್ಧವಾಗಿರಲಿವೆ.ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ವ್ಯಾಪಕವಾಗಿ ಏರಿಕೆ ಆದ ಕಾರಣ, ಲಾಕ್‌ಡೌನ್‌ ಅನ್ನು ಮತ್ತಷ್ಟು ದಿನ ವಿಸ್ತರಿಸಲಾಗುತ್ತದೆ ಎಂಬ ವದಂತಿ ಹರಡಿತ್ತು. ಆದರೆ, ಇದನ್ನು ರಾಜ್ಯ ಸರ್ಕಾರ ಅಲ್ಲಗಳೆದಿದೆ. ‘ಕೋವಿಡ್ ಹರಡದಂತೆ ನಿಯಂತ್ರಿಸುವುದರ ಜತೆಗೆ, ರಾಜ್ಯದಲ್ಲಿನ ಆರ್ಥಿಕ ಚಟುವಟಿಕೆಗಳೂ ನೆಲಕಚ್ಚದಂತೆ ನೋಡಿಕೊಳ್ಳಬೇಕಿದೆ. ಹೀಗಾಗಿ ಲಾಕ್‌ಡೌನ್‌ ಅನ್ನು ವಿಸ್ತರಿಸುವುದಿಲ್ಲ’ ಎಂದು ಮುಖ್ಯಮಂತ್ರಿ ಪಳನಿಸ್ವಾಮಿ ಹೇಳಿದ್ದಾರೆ.

ಮಹಾರಾಷ್ಟ್ರ
ಮಹಾರಾಷ್ಟ್ರ ರಾಜ್ಯದಾದ್ಯಂತ ಲಾಕ್‌ಡೌನ್‌ ಅನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ. ಆದರೆ, ಕೆಲವು ಚಟುವಟಿಕೆಗಳಿಗೆ ರಿಯಾಯಿತಿ ನೀಡಲಾಗಿದೆ. ಕಾರ್ಯನಿಮಿತ್ತ ಜನ ಮನೆಯಿಂದ ಹೊರಬಂದಾಗ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಅಂತರ ಜಿಲ್ಲಾ ಸಂಚಾರವನ್ನು ನಿರ್ಬಂಧಿಸಲಾಗಿದೆ.ಸರ್ಕಾರಿ ಕಚೇರಿಗಳು, ಪೊಲೀಸ್ ಠಾಣೆಗಳಲ್ಲಿ 15 ಮಂದಿ ಅಥವಾ 15% ಸಿಬ್ಬಂದಿ ಇದರಲ್ಲಿ ಯಾವುದು ಹೆಚ್ಚೋ ಅಷ್ಟು ಮಂದಿ ಮಾತ್ರ ಕಾರ್ಯನಿರ್ವಹಿಸಬಹುದು. ಅಂತರ ಜಿಲ್ಲಾ ಬಸ್‌ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ, ಬಸ್‌ಗಳ ಸೀಟಿನ ಸಾಮರ್ಥ್ಯದ ಶೇ 50ರಷ್ಟು ಜನರು ಮಾತ್ರ ಸಂಚರಿಸಬಹುದು ಎಂದು ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಎಲ್ಲಾ ಸ್ವರೂಪದ ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಆದರೆ ಕಠಿಣ ನಿಯಮಗಳನ್ನು ಹೇರಲಾಗಿದೆ. ಖಾಸಗಿ ಕಂಪನಿಗಳು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಆದರೆ, ಗರಿಷ್ಠ ಶೇ 10ರಷ್ಟು ಸಿಬ್ಬಂದಿ ಅಥವಾ 10 ಮಂದಿ, ಇದರಲ್ಲಿ ಯಾವುದು ಹೆಚ್ಚೋ ಅಷ್ಟು ಮಂದಿ ಮಾತ್ರ ಕಾರ್ಯನಿರ್ವಹಿಸಬಹುದು.

ಮೇಘಾಲಯ
ಅಸ್ಸಾಂನ ಗಡಿಗುಂಟ –ಅದರಲ್ಲೂ ಗುವಾಹಟಿಗೆ ಹತ್ತಿರದಲ್ಲಿರುವ– ಪ್ರದೇಶಗಳಲ್ಲಿ ಮೇಘಾಲಯ ಲಾಕ್‌ಡೌನ್‌ ಘೋಷಿಸಿದೆ. ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು, ನಿಯಂತ್ರಣಕ್ಕೆ ಬಾರದಿದ್ದರೆ ರಾಜ್ಯದಾದ್ಯಂತ ಸಂಪೂರ್ಣ ಲಾಕ್‌ಡೌನ್‌ ಜಾರಿಗೊಳಿಸಲಾಗುತ್ತದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಮಿಜೋರಾಂ
ಮಿಜೋರಾಂ ರಾಜ್ಯದಾದ್ಯಂತ ಭಾಗಶಃ ಲಾಕ್‌ಡೌನ್‌ ಮುಂದುವರಿಸಲಾಗಿದೆ. ಸೋಂಕಿನ ತೀವ್ರತೆ ಹೆಚ್ಚಿರುವ ಆ ರಾಜ್ಯದ ಐಜ್ವಾಲ್‌ ಪ್ರದೇಶದಲ್ಲಿ ಸಂಪೂರ್ಣ ಲಾಕ್‌ಡೌನ್‌ ಜಾರಿಯಲ್ಲಿದೆ.

ನಾಗಾಲ್ಯಾಂಡ್‌
ನಾಗಾಲ್ಯಾಂಡ್‌ನಲ್ಲಿ ರಾಜ್ಯದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದ್ದು, ಜುಲೈ 15ರವರೆಗೆ ವಿಸ್ತರಿಸಲಾಗಿದೆ. ಲಾಕ್‌ಡೌನ್‌ನಲ್ಲಿ ಕೆಲವೊಂದು ವಿನಾಯಿತಿ ನೀಡಿದ್ದನ್ನು ಬಿಟ್ಟರೆ ಮಿಕ್ಕ ಎಲ್ಲ ನಿರ್ಬಂಧಗಳು ಯಥಾಪ್ರಕಾರ ಮುಂದುವರಿಯಲಿವೆ ಎಂದು ಆ ರಾಜ್ಯ ಸರ್ಕಾರವು ಹೇಳಿಕೆ ಬಿಡುಗಡೆ ಮಾಡಿದೆ. ಅಂತರರಾಜ್ಯ ಗಡಿಗಳನ್ನು ಮುಚ್ಚಲಾಗಿದೆ.

ಬಿಹಾರ
ರಾಜಧಾನಿ ಪಟ್ನಾ ಸೇರಿದಂತೆ ಸೋಂಕಿನ ತೀವ್ರತೆ ಹೆಚ್ಚಿರುವ ರಾಜ್ಯದ ಇತರ ಜಿಲ್ಲೆಗಳಲ್ಲಿ ಜುಲೈ 10ರಿಂದ ಒಂದು ವಾರದವರೆಗೆ ಸಂಪೂರ್ಣ ಲಾಕ್‌ಡೌನ್‌ ವಿಧಿಸಲಾಗಿದೆ. ಈ ಅವಧಿಯಲ್ಲಿ ಸರ್ಕಾರಿ ಕಚೇರಿಗಳು ಸಹ ಬಂದ್‌ ಇರಲಿವೆ. ತುರ್ತುಸೇವೆಗಳು ಅಬಾಧಿತವಾಗಿದ್ದು, ಕಿರಾಣಿ ಅಂಗಡಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ರಾಜ್ಯದ ಇತರ ಭಾಗಗಳಲ್ಲೂ ಸಾರ್ವಜನಿಕರ ಓಡಾಟದ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ.

ಕೇರಳ
ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಈಗ ‘ಟ್ರಿಪಲ್‌ ಲಾಕ್‌ಡೌನ್‌’ಅನ್ನು ಜಾರಿಗೊಳಿಸಲಾಗಿದೆ. ಸಾರ್ವಜನಿಕ ಸಾರಿಗೆ ಸೇವೆಯನ್ನು ರದ್ದುಪಡಿಸಲಾಗಿದೆ. ತುರ್ತು ಸನ್ನಿವೇಶ ಹೊರತುಪಡಿಸಿದರೆ ಖಾಸಗಿ ವಾಹನ ಸಂಚಾರವನ್ನೂ ನಿರ್ಬಂಧಿಸಲಾಗಿದೆ. ನಿಯಮಗಳ ಕಟ್ಟುನಿಟ್ಟಿನ ಜಾರಿಗೆ ವಿಶೇಷ ಸಶಸ್ತ್ರ ಪೊಲೀಸ್‌ (ಎಸ್‌ಎಪಿ) ಪಡೆಯನ್ನು ನಿಯೋಜಿಸಲಾಗಿದೆ.

ಮಧ್ಯಪ್ರದೇಶ
ಮಧ್ಯಪ್ರದೇಶ ರಾಜ್ಯದಾದ್ಯಂತ ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್‌ ಘೋಷಿಸಲಾಗಿದೆ. ಆ ರಾಜ್ಯದಲ್ಲಿ ಜೂನ್‌ 30ರವರೆಗೆ ಲಾಕ್‌ಡೌನ್‌ ಜಾರಿಯಲ್ಲಿತ್ತು. ಹಂತ, ಹಂತವಾಗಿ ಅದನ್ನು ತೆರವುಗೊಳಿಸಲಾಗಿತ್ತು.

ದೆಹಲಿ
ದೆಹಲಿಯಲ್ಲಿ ಮತ್ತೆ ಲಾಕ್‌ಡೌನ್‌ ವಿಧಿಸುವುದಿಲ್ಲ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸ್ಪಷ್ಟಪಡಿಸಿದ್ದಾರೆ. ಆದರೆ, ಕಂಟೈನ್‌ಮೆಂಟ್‌ ವಲಯಗಳಲ್ಲಿ ಬಿಗಿಯಾದ ನಿರ್ಬಂಧಗಳು ಮುಂದುವರಿಯಲಿವೆ ಎಂದು ಅವರು ತಿಳಿಸಿದ್ದಾರೆ.

ಗುಜರಾತ್
ಗುಜರಾತ್‌ನ ಸೂರತ್‌ನಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಳವಾದ ಕಾರಣ, ಜುಲೈ 3ರಿಂದ 10ರವರೆಗೆ ಲಾಕ್‌ಡೌನ್ ಹೇರಲಾಯಿತು. ಇದು ಸಂಪೂರ್ಣ ಲಾಕ್‌ಡೌನ್ ಅಲ್ಲ. ಬದಲಿಗೆ ಬೀದಿ ಬದಿ ವ್ಯಾಪಾರಿಗಳು ಮತ್ತು ಕೆಲವು ಸ್ವರೂಪದ ಕೈಗಾರಿಕೆಗಳಿಗೆ ಮಾತ್ರ ಅನ್ವಯ. ಅಹಮದಾಬಾದ್‌ನ ಹಲವು ವಸತಿ ಪ್ರದೇಶಗಳಲ್ಲಿ ಲಾಕ್‌ಡೌನ್ ಹೇರಲಾಗಿದೆ. ಈಗ ಲಾಕ್‌ಡೌನ್‌ ಅನ್ನು ಕಂಟೈನ್‌ಮೆಂಟ್ ಪ್ರದೇಶಗಳಿಗಷ್ಟೇ ಸೀಮಿತಗೊಳಿಸಲಾಗಿದೆ

ಉತ್ತರಪ್ರದೇಶ
ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಗೊಳಿಸಲಾಗಿತ್ತು. ಆದರೆ ಈಚಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾದ ಕಾರಣ, ರಾಜ್ಯ ಸರ್ಕಾರ ಭಾನುವಾರವಷ್ಟೇ ಮತ್ತೆ ಲಾಕ್‌ಡೌನ್‌ಗೆ ಆದೇಶಿಸಿದೆ. ‌ ಜುಲೈ 18ರಿಂದ ಅನ್ವಯವಾಗುವಂತೆ ಪ್ರತಿ ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್‌ಡೌನ್‌ಗೆ ಆದೇಶಿಸಿದೆ. ಇದು ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೂ ಅನ್ವಯವಾಗಲಿದೆ

ಪಂಜಾಬ್‌
ರಾಜ್ಯದಲ್ಲಿ ಜುಲೈ 31ರವೆರೆಗೆ ಲಾಕ್‌ಡೌನ್ ಇರಲಿದೆ. ಅಂತರ ಜಿಲ್ಲಾ ಸಂಚಾರಕ್ಕೆ ಅವಕಾಶವಿದೆ. ಹೊರರಾಜ್ಯಗಳಿಂದ ಬರುವವರನ್ನು ಕಡ್ಡಾಯ ಕ್ವಾರಂಟೈನ್‌ ಮಾಡಲಾಗುತ್ತದೆ. ಶಾಲಾ–ಕಾಲೇಜುಗಳು, ಕೋಚಿಂಗ್ ಕೇಂದ್ರಗಳು, ಮಾಲ್, ಚಿತ್ರಮಂದಿರಗಳು, ಈಜುಕೊಳ, ಬಾರ್‌ ಮತ್ತು ರೆಸ್ಟೋರೆಂಟ್‌ಗಳು ತೆರೆಯಲು ಅವಕಾಶ ಇಲ್ಲ.

ಹರಿಯಾಣ
ಕೋವಿಡ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಗುರುಗ್ರಾಮದ ಎಂಟು ಪ್ರದೇಶಗಳಲ್ಲಿ ಜುಲೈ 14ರವರೆಗೆ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿದೆ. ದೆಹಲಿ ಜತೆಗೆ ಗಡಿಯನ್ನು ಬಂದ್ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ

ಜಮ್ಮು–ಕಾಶ್ಮೀರ
ಜಮ್ಮು–ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಶನಿವಾರದಿಂದ ಒಂದು ವಾರದವರೆಗೆ ಕಠಿಣ ಲಾಕ್‌ಡೌನ್ ಹೇರಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT