ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಕೋವಿಡ್‌ ಚಿಕಿತ್ಸೆಗೆ ಬೇಕಿದೆ 'ಪ್ರಾಣವಾಯು'

ಭಾರತವೂ ಸೇರಿದಂತೆ ಜಗತ್ತಿನೆಲೆಡೆ ಕಾಡುತ್ತಿದೆ ವೆಂಟಿಲೇಟರ್‌ ಕೊರತೆ
Last Updated 28 ಮಾರ್ಚ್ 2020, 20:07 IST
ಅಕ್ಷರ ಗಾತ್ರ
ADVERTISEMENT
""

ಉಸಿರಾಟದ ಪ್ರಕ್ರಿಯೆಗೆ ನೆರವು ನೀಡುವ ನರಗಳ ಕಾರ್ಯನಿರ್ವಹಣೆಗೆ ಕೊರೊನಾವೈರಸ್ ಧಕ್ಕೆ ತರುತ್ತದೆ. ಆಗ ಸೋಂಕು ಪೀಡಿತನಾಗಿರುವ ವ್ಯಕ್ತಿ ಉಸಿರಾಡಲು ಪರಿತಪಿಸಬೇಕಾಗುತ್ತದೆ. ಕೋವಿಡ್–19 ಪೀಡಿತರಾದವರಲ್ಲಿ ಶೇ 5–10ರಷ್ಟು ಮಂದಿಗೆ ಈ ಸಮಸ್ಯೆ ಕಂಡುಬರುತ್ತಿದೆ. ವೆಂಟಿಲೇಟರ್ ಸಹಾಯದಿಂದ ಕೃತಕ ಉಸಿರಾಟದ ನೆರವು ನೀಡದಿದ್ದರೆ, ಆ ವ್ಯಕ್ತಿ ಕೊನೆಯುಸಿರು ಎಳೆಯುವ ಸಾಧ್ಯತೆಯೇ ಹೆಚ್ಚು. ವೆಂಟಿಲೇಟರ್‌ಗಳ ತೀವ್ರ ಕೊರತೆ ಎದುರಿಸುತ್ತಿರುವ ಕಾರಣದಿಂದಲೇ ಇಟಲಿಯಲ್ಲಿ ಕೋವಿಡ್‌–19 ಪೀಡಿತರು ಅತ್ಯಧಿಕ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ. ವೆಂಟಿಲೇಟರ್‌ಗಳ ತೀವ್ರ ಅಭಾವ ಎದುರಿಸುತ್ತಿರುವ ಭಾರತದಲ್ಲೂ ಸೋಂಕು ಹರಡುವಿಕೆಯನ್ನು ನಿಯಂತ್ರಿಸದಿದ್ದರೆ ಅಪಾಯ ತಪ್ಪಿದ್ದಲ್ಲ.

ಕೊರೊನಾವೈರಸ್‌ನ ವ್ಯಾಪಕ ಹರಡುವಿಕೆಯಿಂದ ಭಾರತದಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆಯು ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ಅಪಾಯವಿದೆ ಎಂದು ಹಲವು ಅಧ್ಯಯನ ವರದಿಗಳು ಹೇಳಿವೆ. ಸೋಂಕು ಹರಡುವಿಕೆಯನ್ನು ತಡೆಗಟ್ಟದಿದ್ದರೆ, ಜೂನ್ ವೇಳೆಗೆ ಭಾರತದಲ್ಲಿ ಕೋಟ್ಯಂತರ ಜನರಿಗೆ ಸೋಂಕು ತಗಲುವ ಅಪಾಯವಿದೆ ಎಂದು ಜಾನ್ಸ್‌ ಹಾಕಿನ್ಸ್‌ ವಿಶ್ವವಿದ್ಯಾಲಯದ ಸಮೀಕ್ಷಾ ವರದಿ ಹೇಳಿದೆ. ಈ ಮಟ್ಟದಲ್ಲಿ ಸೋಂಕು ಹರಡಿದರೆ, 2 ಕೋಟಿಯಷ್ಟು ಜನ ಕೋವಿಡ್–19 ಪೀಡಿತರಾಗುವ ಅಪಾಯವಿದೆ.

ಚೀನಾದ ಸಂದರ್ಭದಲ್ಲಿ ಕೋವಿಡ್‌–19 ಪೀಡಿತರಲ್ಲಿ ಶೇ 5ರಷ್ಟು ಮಂದಿಗೆ ಮಾತ್ರ ವೆಂಟಿಲೇಟರ್ ಅವಶ್ಯವಿತ್ತು. ಇಟಲಿ ಸಂದರ್ಭದಲ್ಲಿ ಶೇ 10ರಷ್ಟು ಮಂದಿಗೆ ವೆಂಟಿಲೇಟರ್‌ನ ಅವಶ್ಯಕತೆ ಇತ್ತು. ಭಾರತದಲ್ಲೂ ಈಗ ದಾಖಲಾಗಿರುವ ಪ್ರಕರಣಗಳಲ್ಲಿ ಶೇ 5ರಷ್ಟು ಪ್ರಕರಣಗಳಲ್ಲಿ ವೆಂಟಿಲೇಟರ್‌ನ ಅವಶ್ಯಕತೆ ಇದೆ. ಸದ್ಯ ಸೋಂಕಿತರ ಸಂಖ್ಯೆ ಕಡಿಮೆಯಿದ್ದು, ಈಗ ಲಭ್ಯವಿರುವ ವೆಂಟಿಲೇಟರ್‌ಗಳು ಸಾಕಾಗುತ್ತವೆ. ಆದರೆ, ಸೋಂಕು ವ್ಯಾಪಕವಾಗಿ ಹರಡಿದರೆ, ವೆಂಟಿಲೇಟರ್‌ಗಳ ಕೊರತೆ ಎದುರಾಗಲಿದೆ.

ಭಾರತದಲ್ಲಿ ಐದು ವರ್ಷಗಳಲ್ಲಿ 47,000 ವೆಂಟಿಲೇಟರ್‌ಗಳು ಮಾರಾಟವಾಗಿವೆ. ಇವುಗಳಲ್ಲಿ ಶೇ 80ರಷ್ಟು ವೆಂಟಿಲೇಟರ್‌
ಗಳನ್ನು ವಿದೇಶಗಳಿಂದ ಖರೀದಿಸಲಾಗಿದೆ. ಉಳಿದವು ಸ್ಥಳೀಯವಾಗಿ ತಯಾರಾದ ವೆಂಟಿಲೇಟರ್‌ಗಳು. ದೇಶದಲ್ಲಿರುವ ವೆಂಟಿಲೇಟರ್‌
ಗಳಲ್ಲಿ 45,000 ಸಾಧನಗಳು ಮಾತ್ರ ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ಸುಸ್ಥಿತಿಯಲ್ಲಿ ಇರಬಹುದು ಎಂದು ಭಾರತೀಯ ವೈದ್ಯಕೀಯ ಉಪಕರಣಗಳ ತಯಾರಕರು ಮತ್ತು ಮಾರಾಟಗಾರರ ಒಕ್ಕೂಟ ಹೇಳಿದೆ.

ಒಂದೊಮ್ಮೆ ಇಟಲಿಯಂತಹ ಸ್ಥಿತಿ ನಿರ್ಮಾಣವಾದರೆ, ಜೂನ್ ವೇಳೆಗೆ ಭಾರತದಲ್ಲಿ ಹತ್ತು ಲಕ್ಷ ಜನರಿಗೆ ವೆಂಟಿಲೇಟರ್‌ನ ಅವಶ್ಯಕತೆ ಬೀಳುತ್ತದೆ. ಇಷ್ಟೂ ಜನರಿಗೆ ಏಕಕಾಲಕ್ಕೆ ವೆಂಟಿಲೇಟರ್ ಬೇಕಾಗುವ ಸಾಧ್ಯತೆ ಕಡಿಮೆ. ಹೀಗಾಗಿ 6–7 ಲಕ್ಷ ವೆಂಟಿಲೇಟರ್‌ಗಳಿದ್ದರೂ ಪರಿಸ್ಥಿತಿಯನ್ನು ನಿಭಾಯಿಸಬಹುದು ಎಂದು ವರದಿಗಳಲ್ಲಿ ಹೇಳಲಾಗಿದೆ.

ಈಗಿರುವ ಸಂಖ್ಯೆಗಿಂತ 15 ಪಟ್ಟು ಹೆಚ್ಚಿನ ಸಂಖ್ಯೆಯ ವೆಂಟಿಲೇಟರ್‌ಗಳನ್ನು ಎರಡು ತಿಂಗಳ ಅವಧಿಯಲ್ಲಿ ಒದಗಿಸಿಕೊಳ್ಳುವುದೇ ದೇಶದ ಮುಂದಿರುವ ದೊಡ್ಡ ಸವಾಲು. ಬಹುತೇಕ ವಿದೇಶಿ ಕಂಪನಿಗಳು ವೆಂಟಿಲೇಟರ್‌ಗಳ ರಫ್ತನ್ನು ಸ್ಥಗಿತಗೊಳಿಸಿವೆ. ಹೀಗಾಗಿ ಅಗತ್ಯವಿರುವ ವೆಂಟಿಲೇಟರ್‌ಗಳನ್ನು ದೇಶೀಯವಾಗಿಯೇ ತಯಾರಿಸಬೇಕಿದೆ. ಆದರೆ, ಬೇಡಿಕೆಗೆ ತಕ್ಕಷ್ಟು ವೆಂಟಿಲೇಟರ್‌ಗಳನ್ನು ತಯಾರಿಸುವ ಸಾಮರ್ಥ್ಯ ದೇಶಿ ಕಂಪನಿಗಳಿಗೆ ಇಲ್ಲ.

ಸರ್ಕಾರ ಮಾಡಿದ್ದೇನು?
ವೆಂಟಿಲೇಟರ್‌ಗಳ ತಯಾರಿಕೆಗೆ ಕೇಂದ್ರ ಸರ್ಕಾರ ಕೊನೆಗೂ ಒತ್ತುಕೊಟ್ಟಿದೆ. ವೈದ್ಯಕೀಯ ಉಪಕರಣಗಳ ರಫ್ತು ನಿರ್ಬಂಧಿಸಿ ಮಾರ್ಚ್ 24ರಂದು ಸುತ್ತೋಲೆ ಹೊರಡಿಸಿದೆ. ವೆಂಟಿಲೇಟರ್‌ಗಳ ಪೂರೈಕೆ ಸಂಬಂಧ ಕೆಲವು ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ.

*ವೆಂಟಿಲೇಟರ್ ತಯಾರಕರೊಂದಿಗೆ ಸಭೆ ನಡೆಸಿರುವ ಸರ್ಕಾರ, ಏಪ್ರಿಲ್ 1ರ ಒಳಗಾಗಿ ದೇಶದಲ್ಲಿ ಲಭ್ಯವಿರುವ ವೆಂಟಿಲೇಟರ್‌ಗಳು ಹಾಗೂ ಹೆಚ್ಚುವರಿಯಾಗಿ ತಯಾರಿಕೆ ಮಾಡಲು ಇರುವ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದೆ

*ವೆಂಟಿಲೇಟರ್‌ಗಳಿಗೆ ಬೇಡಿಗೆ ಹೆಚ್ಚುತ್ತಿದ್ದು, 10 ಸಾವಿರ ಉಪಕರಣಗಳ ಪೂರೈಕೆಗೆ ಆದೇಶ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಮೊದಲು 1,200 ವೆಂಟಿಲೇಟರ್‌ಗಳಿಗೆ ಬೇಡಿಕೆಸಲ್ಲಿಸಲಾಗಿತ್ತು

*ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ಗೆ (ಬಿಇಎಲ್) 30 ಸಾವಿರ ಹೆಚ್ಚುವರಿ ವೆಂಟಿಲೇಟರ್‌ಗಳನ್ನು ಒಂದೆರಡು ತಿಂಗಳಲ್ಲಿ ಪೂರೈಸಲು ಸೂಚಿಸಲಾಗಿದೆ

*ಆಂಧ್ರಪ್ರದೇಶ ಸರ್ಕಾರದ ವಿಶೇಷ ಯೋಜನೆಯಾದ ಆಂಧ್ರ ಮೆಡ್‌ಟೆಕ್ ಜೋನ್ (ಎಎಂಟಿಜೆಡ್) ಮೂಲಕ ಸರ್ಕಾರವು ಬೃಹತ್ ಪ್ರಮಾಣದಲ್ಲಿ ವೆಂಟಿಲೇಟರ್ ತಯಾರಿಕೆಗೆ ₹40 ಕೋಟಿ ಹಣಕಾಸು ನೆರವು ನೀಡಲು ಮುಂದಾಗಿದೆ. ಉಪಕರಣ ತಯಾರಿಗೆ ಪ್ರಮುಖ ಕಂಪನಿಗಳನ್ನು ಆಹ್ವಾನಿಸಲಾಗಿದೆ.

ಆಮದು ಸಮಸ್ಯೆ
*ಭಾರತಕ್ಕೆ ಅಗತ್ಯವಿರುವ ವೆಂಟಿಲೇಟರ್‌ಗಳಲ್ಲಿ ಹೆಚ್ಚಿನವುಗಳನ್ನು ಆಮದು ಮಾಡಲಾಗುತ್ತದೆ

*ಚೆನ್ನೈನ ‘ಟ್ರಿವಿಟ್ರಾನ್‌’, ಮೈಸೂರಿನ ‘ಸ್ಕ್ಯಾನರಿ ಟೆಕ್ನಾಲಜೀಸ್‌’ ಸೇರಿದಂತೆ ದೇಶದಲ್ಲಿ ಒಂಬತ್ತು ಸಂಸ್ಥೆಗಳು ವೆಂಟಿಲೇಟರ್‌ ತಯಾರಿಸುತ್ತಿದ್ದರೂ ಹೆಚ್ಚಿನ ಸಂಸ್ಥೆಗಳು ಬಿಡಿಭಾಗಗಳನ್ನು ವಿದೇಶಗಳಿಂದ ಆಮದು ಮಾಡುತ್ತವೆ

*ಅಂತರರಾಷ್ಟ್ರೀಯ ವಿಮಾನ ಹಾರಾಟಕ್ಕೆ ನಿರ್ಬಂಧ ವಿಧಿಸಿರುವುದರಿಂದ ವೆಂಟಿಲೇಟರ್‌ಗಳಿಗೆ ಅಗತ್ಯವಿರುವ ಬಿಡಿಭಾಗಗಳನ್ನು ತರಿಸುವುದು ಕಷ್ಟವಾಗಿದೆ

*ಹೆಚ್ಚಿನ ರಾಷ್ಟ್ರಗಳು ಈಗ ವೆಂಟಿಲೇಟರ್‌ಗಳನ್ನಾಗಲಿ ಬಿಡಿಭಾಗಗಳನ್ನಾಗಲಿ ರಫ್ತು ಮಾಡುವುದನ್ನು ನಿಷೇಧಿಸಿವೆ. ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ಸರಳವಾದ ವೆಂಟಿಲೇಟರ್‌ಗಳನ್ನು ತಯಾರಿಸುವುದೊಂದೇ ಈ ಸಮಸ್ಯೆಗೆ ಇರುವ ಪರಿಹಾರ ಎಂದು ತಯಾರಿಕಾ ಸಂಸ್ಥೆಗಳು ಹೇಳಿವೆ.

ವೆಂಟಿಲೇಟರ್ ಏಕೆ ಅಗತ್ಯ?
ಕೋವಿಡ್–19 ವೈರಾಣು ಮನುಷ್ಯನ ಉಸಿರಾಟ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಶ್ವಾಸಕೋಶವನ್ನು ವೈರಾಣುಗಳು ಪ್ರವೇಶಿಸುವುದರಿಂದ ಉಸಿರಾಟ ಕಷ್ಟವಾಗುತ್ತದೆ. ಹೀಗಾಗಿ ವೆಂಟಿಲೇಟರ್‌ಗಳ ಮೂಲಕ ಕೃತಕ ಉಸಿರಾಟ ವ್ಯವಸ್ಥೆ ಕಲ್ಪಿಸುವುದು ಅನಿವಾರ್ಯ. ಪ್ರತಿ ಆರು ಸೋಂಕಿತರ ಪೈಕಿ ಒಬ್ಬ ವ್ಯಕ್ತಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ತೀವ್ರ ಸ್ವರೂಪದಪ್ರಕರಣಗಳಲ್ಲಿ ಶ್ವಾಸಕೋಶಗಳಿಗೆವೈರಸ್ ಹಾನಿ ಮಾಡುತ್ತದೆ.

ಆದರೆ, ಶೇ 80ರಷ್ಟು ಸೋಂಕಿತರು ಆಸ್ಪತ್ರೆ ಚಿಕಿತ್ಸೆ ಇಲ್ಲದೇ ಗುಣಮುಖರಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಅಮೆರಿಕದ ಆರೋಗ್ಯ ಸಚಿವಾಲಯದ ಅಧಿಕಾರಿಗಳ ಪ್ರಕಾರ, ಸೋಂಕಿತರ ಪೈಕಿ ಶೇ 5ರಷ್ಟು ಮಂದಿಗೆ ಮಾತ್ರ ವೆಂಟಿಲೇಟರ್ ಅಗತ್ಯವಿದ್ದು, ಉಳಿದವರು ಸಾಮಾನ್ಯ ಚಿಕಿತ್ಸೆ ಮೂಲಕ ಗುಣಮುಖರಾಗಬಹುದು.

ದೇಶೀಯ ತಯಾರಿಕೆಗೆ ಒತ್ತು
ದೇಶ ಎದುರಿಸುತ್ತಿರುವ ವೆಂಟಿಲೇಟರ್‌ಗಳ ಕೊರತೆ ನೀಗಿಸಲು ನೆರವಾಗುವಂತೆ ಸರ್ಕಾರವು ವೈದ್ಯಕೀಯೇತರ ಕ್ಷೇತ್ರದ ಕೆಲವು ಸಂಸ್ಥೆಗಳಲ್ಲಿ ಮನವಿ ಮಾಡಿದೆ. ಆ ಸಂಸ್ಥೆಗಳು ಆ ನಿಟ್ಟಿನಲ್ಲಿ ಕೆಲಸವನ್ನೂ ಆರಂಭಿಸಿವೆ.

*‘ತಂತ್ರಜ್ಞಾನವನ್ನು ಸರಳಗೊಳಿಸಿ ತಯಾರಿಕಾ ಪ್ರಮಾಣವನ್ನು ಹೆಚ್ಚಿಸಲು ದೇಶಿ ಕಂಪನಿಗಳಿಗೆ ನೆರವು ನೀಡುವ ಜತೆಗೆ ನಾವೂ ತಯಾರಿಕೆಯನ್ನು ಆರಂಭಿಸಲಿದ್ದೇವೆ. ನಮ್ಮ ಎಂಜಿನಿಯರ್‌ಗಳ ತಂಡ ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ’ ಎಂದು ಮಹೀಂದ್ರಾ ಸಂಸ್ಥೆಯ ಆಡಳಿತ ನಿರ್ದೇಶಕ ಪವನ್‌ ಗೋಯೆಂಕಾ ಹೇಳಿದ್ದಾರೆ

*ಸ್ವಯಂಚಾಲಿತ ವ್ಯವಸ್ಥೆ ಇರುವ, ಸರಳವಾದ, ಬ್ಯಾಗ್‌ ಮಾದರಿಯ ವೆಂಟಿಲೇಟರ್‌ಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತಿದ್ದೇವೆ. ಇದು ಸಿದ್ಧವಾಗುತ್ತಿದ್ದಂತೆ, ಈ ತಂತ್ರಜ್ಞಾನವನ್ನು ಇತರ ಸಂಸ್ಥೆಗಳಿಗೂ ನೀಡಲಾಗುವುದು ಎಂದು ಆನಂದ್‌ ಮಹೀಂದ್ರಾ ತಿಳಿಸಿದ್ದಾರೆ

*ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ ಸಂಸ್ಥೆಯೂ ವೆಂಟಿಲೇಟರ್‌ ತಯಾರಿಕೆಗೆ ಮುಂದೆ ಬಂದಿದೆ

*ಟಾಟಾ ಮೋಟರ್ಸ್‌ ಸಂಸ್ಥೆಯು ಶೀಘ್ರದಲ್ಲೇ ತಯಾರಿಕೆಯನ್ನು ಆರಂಭಿಸುವ ನಿರೀಕ್ಷೆ ಇದೆ

*‘ನಮ್ಮ ಘಟಕದಲ್ಲಿ ದಿನದ 24 ಗಂಟೆಗಳ ಕಾಲವೂ ಕೆಲಸ ನಡೆಸಲಾಗುವುದು. ಆದರೆ ಬಿಡಿಭಾಗಗಳನ್ನು ತರಿಸಿಕೊಡುವ ವಿಚಾರದಲ್ಲಿ ಸರ್ಕಾರದ ಸಹಕಾರ ಬೇಕಾಗುತ್ತದೆ’ ಎಂದು ವೆಂಟಿಲೇಟರ್‌ ತಯಾರಿಸುವ ಅಗ್‌ವಾ (AgVa) ಸಂಸ್ಥೆ ಹೇಳಿದೆ.

ಅಮೆರಿಕ: ಕೊರತೆ ಇದ್ದರೂ ನೆರವು ನೀಡುವ ಭರವಸೆ
*ಭಾರತ ಸೇರಿದಂತೆ ಹಲವು ದೇಶಗಳಲ್ಲಿ ವೆಂಟಿಲೇಟರ್‌ಗಳಿಗೆ ಬೇಡಿಕೆಯಿದ್ದು, ಅವುಗಳನ್ನು ಒದಗಿಸಲು ಅಮೆರಿಕ ಮುಂದಾಗಿದೆ. ಮುಂದಿನ 100 ದಿನಗಳಲ್ಲಿ ಸುಮಾರು 1 ಲಕ್ಷ ವೆಂಟಿಲೇಟರ್‌ಗಳನ್ನು ಪೂರೈಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

*10 ಸಾವಿರ ವೆಂಟಿಲೇಟರ್‌ಗಳು ಈಗಾಗಲೇ ಅಮೆರಿಕದಲ್ಲಿ ದಾಸ್ತಾನಿವೆ. ದೇಶದಾದ್ಯಂತ ಇವುಗಳನ್ನು ಪೂರೈಸಲಾಗುತ್ತದೆ. ಹೆಚ್ಚುವರಿ ವೆಂಟಿಲೇಟರ್ ತಯಾರಿಸುವ ಸಂಬಂಧ ಅಮೆರಿಕವು 10 ವಿವಿಧ ಕಂಪನಿಗಳ ಜತೆ ಸಂಪರ್ಕದಲ್ಲಿದೆ

*ಜನರಲ್ ಎಲೆಕ್ಟ್ರಿಕ್, ಜಿಎಂ, ಟೆಸ್ಲಾ, ಫೋರ್ಡ್ ಮೊದಲಾದ ಕಾರು ತಯಾರಿಕಾ ಕಂಪನಿಗಳು ವೆಂಟಿಲೇಟರ್ ತಯಾರಿಕೆಗೆ ಮುಂದೆ ಬಂದಿವೆ

*ಅಮೆರಿಕದಲ್ಲಿ ಕೊರೊನಾ ವೈರಸ್‌ನ ಕೇಂದ್ರಭಾಗ ಎನಿಸಿರುವ ನ್ಯೂಯಾರ್ಕ್‌ನಲ್ಲಿ ತುರ್ತಾಗಿ 40 ಸಾವಿರ ವೆಂಟಲೇಟರ್‌ಗಳ ಅಗತ್ಯ ಬಿದ್ದಿದೆ. ಇಲ್ಲಿ 45 ಸಾವಿರ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ

*ಅಮೆರಿಕದಲ್ಲಿ ಕೊರೊನಾ ಪೀಡಿತರಿಗೆ ಸುಮಾರು 9.6 ಲಕ್ಷ ವೆಂಟಿಲೇಟರ್‌ಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ

ಇಟಲಿಯಲ್ಲಿ ಕಾಡಿದ ಸಂಕಷ್ಟ
ಇಟಲಿಯಲ್ಲಿ ವೆಂಟಿಲೇಟರ್‌ಗಳ ಕೊರತೆ ತೀವ್ರವಾಗಿದೆ. ಹೀಗಾಗಿ 50 ವರ್ಷ ಮೇಲ್ಪಟ್ಟ ರೋಗಿಗಳಿಗೆ ವೆಂಟಿಲೇಟರ್ ನೀಡಲಾಗುತ್ತಿಲ್ಲ. ಅಮೆರಿಕದಲ್ಲೂ ಕೋವಿಡ್–19 ಪೀಡಿತರ ಸಂಖ್ಯೆ ಲಕ್ಷ ದಾಟಿದೆ. ಹಳೆಯವೂ ಸೇರಿ ಅಮೆರಿಕದ ಬಳಿ2 ಲಕ್ಷದಷ್ಟು ವೆಂಟಿಲೇಟರ್‌ಗಳು ಇವೆ.

ಸೋಂಕು ಸಾಂಕ್ರಾಮಿಕವಾಗಿರುವ ಕಾರಣ ಕೆಲವೇ ದಿನಗಳಲ್ಲಿ ಈ ವೆಂಟಿಲೇಟರ್‌ಗಳೂ ಸಾಲದಾಗುತ್ತವೆ ಎಂಬಆತಂಕವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT