ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಗಂಗಾ ನದಿಯಲ್ಲಿ ತೇಲಿದ ಹೆಣಗಳು

Last Updated 17 ಮೇ 2021, 1:17 IST
ಅಕ್ಷರ ಗಾತ್ರ

ಯಾರದ್ದೋ ಗೊತ್ತಿಲ್ಲದ, ವಾರಸುದಾರರೂ ಇಲ್ಲದ ಹತ್ತಾರು ಹೆಣಗಳು ‘ಪವಿತ್ರ’ ಗಂಗಾ ನದಿಯಲ್ಲಿ ಇತ್ತೀಚಿನ ದಿನಗಳಲ್ಲಿ ತೇಲಿ ಬಂದಿವೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಹಲವು ಹೆಣಗಳು ಪತ್ತೆಯಾಗಿವೆ. ಉತ್ತರ ಪ್ರದೇಶದಿಂದಲೇ ಇವು ತೇಲಿ ಬಂದಿವೆ ಎಂದು ಹೇಳಲಾಗುತ್ತಿದೆ. ಕೋವಿಡ್‌–19ರ ಎರಡನೇ ಅಲೆಯ ಘೋರ ಮುಖವನ್ನು ಇದು ಅನಾವರಣಗೊಳಿಸಿದೆ. ಉತ್ತರ ಪ್ರದೇಶದಲ್ಲಿ ಪ್ರತಿ ದಿನವೂ 200–300 ಜನರು ಕೋವಿಡ್‌ನಿಂದ ಸಾಯುತ್ತಿದ್ದಾರೆ ಎಂಬುದು ಅಧಿಕೃತವಾಗಿ ದಾಖಲಾಗುತ್ತಿರುವ ಲೆಕ್ಕ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಸಾವಿನ ಸಂಖ್ಯೆ ದಿಗಿಲು ಹುಟ್ಟಿಸುವಷ್ಟು ಹೆಚ್ಚು ಎಂದು ಹೇಳಲಾಗುತ್ತಿದೆ. ನದಿಯಲ್ಲಿ ತೇಲಿ ಬರುತ್ತಿರುವ ಹೆಣಗಳು ಈ ಕಳವಳಕ್ಕೆ ಪುಷ್ಟಿ ಒದಗಿಸುತ್ತಿವೆ.

ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಅತ್ಯಂತ ಗೌರವ ಮತ್ತು ಘನತೆಯಿಂದ ಮಾಡುವ ಸಂಸ್ಕೃತಿ ನಮ್ಮಲ್ಲಿದೆ. ಹಾಗಿದ್ದರೂ ಹೆಣಗಳು ಈ ಪ್ರಮಾಣದಲ್ಲಿ ನದಿಯಲ್ಲಿ ತೇಲಿದ್ದು ಹೇಗೆ ಎಂಬ ಪ್ರಶ್ನೆ ಇದೆ. ಅಂತ್ಯಸಂಸ್ಕಾರಕ್ಕೆ ದೊಡ್ಡ ಮೊತ್ತ ಖರ್ಚಾಗುತ್ತದೆ. ಕೋವಿಡ್‌ನಿಂದಾಗಿ ಅತಿ ಹೆಚ್ಚು ಸಂಖ್ಯೆಯಲ್ಲಿ ಜನರು ಸಾಯುತ್ತಿರುವುದರಿಂದ ಕಟ್ಟಿಗೆ ಅಭಾವ ಎದುರಾಗಿದೆ. ಹಾಗಾಗಿ, ದೇಹವನ್ನು ಸುಡುವ ಬದಲು ಸಂಬಂಧಿಕರು ನದಿಗೆ ಎಸೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಕೋವಿಡ್‌ನಿಂದಾಗಿ ಜನರ ಆದಾಯದಲ್ಲಿ ಭಾರಿ ಇಳಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಅಂತ್ಯಸಂಸ್ಕಾರಕ್ಕೆ ದೊಡ್ಡ ಮೊತ್ತ ವೆಚ್ಚ ಮಾಡುವ ಸ್ಥಿತಿಯಲ್ಲಿ ಜನರು ಇಲ್ಲ. ‘ಹಿಂದೆಲ್ಲ ₹600ಕ್ಕೆ ಒಂದು ಶವದ ಅಂತ್ಯಸಂಸ್ಕಾರಕ್ಕೆ ಬೇಕಾದ ಕಟ್ಟಿಗೆ ದೊರಕುತ್ತಿತ್ತು. ಈಗ ಅಷ್ಟೇ ಕಟ್ಟಿಗೆಗೆ ₹2,000 ಹೇಳುತ್ತಾರೆ. ಎಲ್ಲ ಖರ್ಚುಗಳು ಸೇರಿದರೆ ₹10,000 ಬೇಕಾಗುತ್ತದೆ. ಹೀಗಾಗಿಯೇ ಜನರು ದೇಹಗಳನ್ನು ಹೂಳುತ್ತಿದ್ದಾರೆ’ ಎಂದು ಸ್ಥಳೀಯ ವ್ಯಕ್ತಿಯೊಬ್ಬರು ಹೇಳಿದ್ದಾಗಿ ವರದಿಯಾಗಿದೆ.

ಹೆಣಗಳನ್ನು ಕೆಲವರು ಗಂಗಾ ನದಿಯ ದಂಡೆಯಲ್ಲಿ ಹೂಳುತ್ತಿದ್ದಾರೆ. ಮೂರು–ನಾಲ್ಕು ಅಡಿ ಆಳದ ಗುಂಡಿ ತೋಡಿ ನದಿ ದಂಡೆಯ ಮರಳಿನಲ್ಲಿ ಹೂಳುವುದು ಸಾಮಾನ್ಯ ದೃಶ್ಯವಾಗಿದೆ ಎಂದು ಈ ಪ್ರದೇಶದಲ್ಲಿ ವಾಸಿಸುವ ಹಲವರು ಹೇಳಿದ್ದಾರೆ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ನದಿ ದಂಡೆಯ ಮರಳು ಕೊಚ್ಚಿ ಹೋಗಿದೆ. ಹೆಣಗಳು ಮೇಲಕ್ಕೆ ಬಂದು ನದಿಯಲ್ಲಿ ತೇಲಿವೆ ಎಂದೂ ಹೇಳಲಾಗುತ್ತಿದೆ.

ಕೋವಿಡ್‌ ಅಲ್ಲದೆ ಬೇರೆ ಕಾರಣಗಳಿಂದ ಸತ್ತರೂ ಗ್ರಾಮೀಣ ಪ್ರದೇಶದ ಜನರಲ್ಲಿ ಸೋಂಕಿನ ಅನುಮಾನವೇ ಮೂಡುತ್ತದೆ. ಅಂತ್ಯಸಂಸ್ಕಾರಕ್ಕೆ ಬರಲು ಜನರು ಹೆದರುತ್ತಾರೆ. ಹಾಗಾಗಿ ಬೇರೆ ಕಾರಣಗಳಿಂದ ಸತ್ತವರ ಹೆಣಗಳೂ ನೀರು ಪಾಲಾಗುತ್ತಿವೆ. ಊರಿನಲ್ಲಿ ಅಂತ್ಯಸಂಸ್ಕಾರ ಮಾಡಿದರೆ ಸೋಂಕು ಇನ್ನಷ್ಟು ವ್ಯಾಪಕವಾಗಿ ಹರಡಬಹುದು ಎಂಬ ಭೀತಿಯಿಂದಾಗಿಯೂ ಜನರು ಮೃತದೇಹಗಳನ್ನು ನದಿಗೆ ಎಸೆಯುತ್ತಿದ್ದಾರೆ ಎಂಬ ವರದಿಗಳೂ ಪ್ರಕಟವಾಗಿವೆ.

ಗಂಗಾ ನದಿಯಲ್ಲಿ ತೇಲಿ ಬಂದ ಹೆಣಗಳು ನಿಜವಾಗಿಯೂ ಕೋವಿಡ್‌ಗೆ ಬಲಿಯಾದವರದ್ದೇ ಎಂಬ ಪ್ರಶ್ನೆಯೂ ಉದ್ಬವವಾಗಿದೆ. ‘ಗಾಜಿಪುರ ಜಿಲ್ಲೆಯಲ್ಲಿ ಪತ್ತೆಯಾದ 4–5 ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ದೇಹಗಳಲ್ಲಿ ಕೊರೊನಾ ವೈರಾಣು ಪತ್ತೆ ಆಗಿಲ್ಲ. ಶವಗಳು ಕೊಳೆತ ಸ್ಥಿತಿಯಲ್ಲಿದ್ದವು. ಈ ಸ್ಥಿತಿಯಲ್ಲಿ ವೈರಾಣು ಪತ್ತೆ ಸಾಧ್ಯವೇ ಎನ್ನುವ ಬಗ್ಗೆ ಅನುಮಾನ ಇದೆ’ ಎಂದು ಉತ್ತರ ಪ್ರದೇಶದ ಹಿರಿಯ ಅಧಿಕಾರಿ ಮನೋಜ್‌ ಕುಮಾರ್‌ ಸಿಂಗ್‌ ಹೇಳಿದ್ದಾಗಿ ರಾಯಿಟರ್ಸ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

2,000ಕ್ಕೂ ಹೆಚ್ಚು ಶವಗಳು?

ಕಳೆದ ಕೆಲವು ದಿನಗಳಿಂದ ಗಂಗಾನದಿಯಲ್ಲಿ ತೇಲಿಬರುವ ಶವಗಳ ಸಂಖ್ಯೆ ವಿಪರೀತವಾಗಿದೆ ಎಂಬುದು ನದಿ ತಟದ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

‘ಗಂಗಾನದಿಯು ಉತ್ತರಪ್ರದೇಶದಲ್ಲಿ ಸುಮಾರು 1,140 ಕಿ.ಮೀ. ದೂರವನ್ನು ಕ್ರಮಿಸುತ್ತದೆ. ಈ ವ್ಯಾಪ್ತಿಯಲ್ಲಿ ಈವರೆಗೆ ಎರಡು ಸಾವಿರಕ್ಕೂ ಹೆಚ್ಚು ಶವಗಳು ಪ‍ತ್ತೆಯಾಗಿವೆ’ ಎಂದು ಹಿಂದಿ ದಿನಪತ್ರಿಕೆ ‘ದೈನಿಕ್ ಭಾಸ್ಕರ್‌’ ವರದಿ ಮಾಡಿದೆ.

ಆ ವರದಿಯ ಪ್ರಕಾರ ಕಾನ್ಪುರ, ಕನೌಜ್‌, ಉನ್ನಾವ್‌, ಗಾಜಿಪುರ ಹಾಗೂ ಬಲಿಯಾ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ವಿಪರೀತವಾಗಿ ಹರಡಿದೆ. ಕನೌಜ್‌ನ ಮಹಾದೇವಿ ಗಂಗಾ ಘಾಟ್‌ನಲ್ಲಿ ಸುಮಾರು 350 ಶವಗಳನ್ನು ಹೂಳಲಾಗಿದೆ. ಶವಗಳು ಕಾಣದಿರಲಿ ಎಂಬ ಉದ್ದೇಶದಿಂದ ಅವುಗಳನ್ನು ಹೂತಿದ್ದ ಜಾಗದಲ್ಲಿ ಜಿಲ್ಲಾಡಳಿತವೇ ಮಣ್ಣನ್ನು ಸುರಿಯುತ್ತಿದೆ ಎಂದು ಈ ಘಾಟ್‌ನ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

ಕಾನ್ಪುರ ನಗರದಲ್ಲಿ ಶೆರೇಶ್ವರ್‌ ಘಾಟ್‌ನಿಂದ ಅನತಿ ದೂರದಲ್ಲಿ 400ಕ್ಕೂ ಹೆಚ್ಚು ಶವಗಳನ್ನು ಹೂಳಲಾಗಿದೆ. ಹೀಗೆ ತೇಲಿ ಬಂದ ಶವಗಳನ್ನು ನಾಯಿಗಳು ಎಳೆದಾಡುತ್ತಿದ್ದ, ಕೆಲವು ಶವಗಳ ಮೇಲೆ ಹದ್ದು, ಕಾಗೆ ಹಾಗೂ ಇತರ ಪಕ್ಷಿಗಳು ಕೂತಿದ್ದ ಭೀಕರ ದೃಶ್ಯ ಕಂಡುಬಂದಿದೆ. ಈ ಮಾಹಿತಿ ಲಭಿಸುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ಶವಗಳ ಮೇಲೆ ಮಣ್ಣು ಮುಚ್ಚುವ ಕೆಲಸವನ್ನು ಮಾಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಉನ್ನಾವ್‌ನಲ್ಲಿ ಗರಿಷ್ಠ 900 ಶವಗಳನ್ನು ಹೂಳಲಾಗಿದೆ. ಇಲ್ಲಿನ ಶುಕ್ಲಾಗಂಜ್‌ ಹಾಗೂ ಬಕ್ಸರ್ ಘಾಟ್‌ ಬಳಿ ಭಾರಿ ಸಂಖ್ಯೆಯಲ್ಲಿ ಶವಗಳು ತೇಲಿ ಬಂದಿದ್ದವು. ಇಲ್ಲಿ ಹೆಜ್ಜೆ ಹೆಜ್ಜೆಗೂ ಮನುಷ್ಯನ ಶರೀರದ ಅಂಗಾಂಗಗಳು ಕಾಣಸಿಗುತ್ತವೆ ಎಂದು ಪತ್ರಿಕೆ ವರದಿ ಮಾಡಿದೆ. ಆಡಳಿತವು ಶವಗಳ ಮೇಲೆ ಮರಳನ್ನು ಸುರಿಯುವ ಕೆಲಸ ಮಾಡಿದೆ.

ಫತೇಪುರ್‌ನಲ್ಲಿ 20, ಪ್ರಯಾಗರಾಜ್‌ನಲ್ಲಿ ಗಂಗಾ ಮತ್ತು ಯಮುನಾ ನದಿಗಳಿಂದ 50 ಶವಗಳು– ಹೀಗೆ ನದಿ ದಂಡೆಯ ಅಕ್ಕಪಕ್ಕದ ನಗರ–ಪಟ್ಟಣಗಳಲ್ಲಿ ಇಂಥ ಅಪರಿಚಿತ ಶವಗಳ ರಾಶಿಯೇ ಕಾಣಸಿಗುತ್ತಿದೆ ಎಂದು ಪತ್ರಿಕೆ ವರದಿ ಮಾಡಿದೆ.

ಆದರೆ, ಉತ್ತರ ಪ್ರದೇಶ ಸರ್ಕಾರದ ವಕ್ತಾರ ನವನೀತ್‌ ಸೆಹಗಲ್‌ ಅವರು ಇಂತಹ ವರದಿಗಳನ್ನು ಅಲ್ಲಗಳೆದಿದ್ದಾರೆ. ದಿನಕ್ಕೆ 10–20 ಹೆಣಗಳಷ್ಟೇ ಸಿಗುತ್ತಿವೆ. ನದಿ ದಂಡೆಯ ಕೆಲವು ಗ್ರಾಮಗಳ ಜನರು ಧಾರ್ಮಿಕ ಮಹತ್ವದ ತಿಂಗಳುಗಳಲ್ಲಿ ಮೃತದೇಹವನ್ನು ಸುಡುವುದಿಲ್ಲ, ಹೂಳುತ್ತಾರೆ ಎಂದು ಅವರು ಹೇಳಿದ್ದಾರೆ.

ಹಲವು ಯೋಜನೆ ರೂಪಿಸಿದರೂ ಶುಚಿಯಾಗದ ಗಂಗೆ

ಗಂಗಾನದಿಯನ್ನು ಶುಚಿಗೊಳಿಸುವ ಯೋಜನೆ 35 ವರ್ಷಕ್ಕಿಂತಲೂ ಹಳೆಯದು. ಹರಿದ್ವಾರದವರೆಗೆ ಶುದ್ಧವಾಗಿಯೇ ಹರಿಯುವ ಗಂಗೆ, ನಂತರ ಜನ ವಸತಿ ಪ್ರದೇಶಗಳನ್ನು ದಾಟುತ್ತಾ ಹೋದಂತೆ ಮಲಿನವಾಗುತ್ತಾ ಹೋಗುತ್ತಾಳೆ. ಗಂಗೆ ತಟದಲ್ಲಿರುವ ಪವಿತ್ರ ಕ್ಷೇತ್ರಗಳ ಸ್ನಾನಘಟ್ಟಗಳು ಮಲಿನವಾಗಿವೆ. ನದಿ ತಟದ ನಗರಗಳ ಕೊಳಚೆ ನೀರು, ಕೈಗಾರಿಕೆಗಳ ಕೊಳಚೆ ನೀರು ನದಿಯನ್ನು ಮಲಿನಗೊಳಿಸುತ್ತವೆ. ಗಂಗೆಯನ್ನು ಬಂದು ಸೇರುವ ಯಮುನಾ ಸಹ ಮಲಿನವಾಗಿರುತ್ತಾಳೆ. ಹೀಗಾಗಿ ಗಂಗಾ ಮತ್ತು ಅದರ ಉಪನದಿಗಳನ್ನು ಶುಚಿಗೊಳಿಸಲು 1986ರಲ್ಲೇ ರಾಜೀವ್ ಗಾಂಧಿ ನೇತೃತ್ವದ ಸರ್ಕಾರವು ‘ಗಂಗಾ ಕ್ರಿಯಾ ಯೋಜನೆ’ (ಗಂಗಾ ಆ್ಯಕ್ಷನ್ ಪ್ಲಾನ್-ಜಿಎಪಿ) ರೂಪಿಸಿತ್ತು. ಈ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬರುವ ಮುನ್ನವೇ 1993ರಲ್ಲಿ ಕಾಂಗ್ರೆಸ್ ಸರ್ಕಾರವು ಜಿಎಪಿ-2 ಅನ್ನು ಆರಂಭಿಸಿತು.

ಕೈಗಾರಿಕೆಗಳು ಮತ್ತು ನಗರಗಳ ಕೊಳಚೆ ನೀರನ್ನು ಸಂಸ್ಕರಿಸಿ ಗಂಗೆಗೆ ಬಿಡುವುದು ಈ ಯೋಜನೆಗಳ ಪ್ರಮುಖ ಉದ್ದೇಶವಾಗಿತ್ತು. ವಿವಿಧ ಕಾರಣಗಳಿಂದಾಗಿ ಈ ಯೋಜನೆಗಳು ಸರಿಯಾಗಿ ಅನುಷ್ಠಾನಕ್ಕೆ ಬರಲಿಲ್ಲ. 2009ರಲ್ಲಿ ಮತ್ತೆ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವು ಜಿಎಪಿ ಯೋಜನೆಗಳ ಲೋಪಗಳನ್ನು ಸರಿಪಡಿಸಲು ಗಂಗಾ ನದಿ ಕಣಿವೆರಾಷ್ಟ್ರೀಯ ಪ್ರಾಧಿಕಾರವನ್ನು ರಚಿಸಿತು. ಈ ಎಲ್ಲಾ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರಲು 2013ರಲ್ಲಿ ನಿರ್ಮಲ ಗಂಗಾ ರಾಷ್ಟ್ರೀಯ ಮಿಷನ್ ಆರಂಭಿಸಲಾಯಿತು. ಯೋಜನೆ ಜಾರಿ ವೇಳೆಗೆ ನದಿಗೆ ಎಲ್ಲಾ ನಗರಗಳು ಮತ್ತು ಕೈಗಾರಿಕೆಗಳಿಂದ ಪ್ರತಿದಿನ 2,700 ಎಂಎಲ್‌ಡಿ (2,700 ಕೋಟಿ ಲೀಟರ್‌) ಕೊಳಚೆ ನೀರು ಸೇರುತ್ತಿತ್ತು. ಈ ಕೊಳಚೆ ನೀರನ್ನು ಸಂಸ್ಕರಿಸುವುದು, ನದಿ ತಟವನ್ನು ಸುಂದರಗೊಳಿಸುವುದು, ನದಿಯ ಜೀವವೈವಿಧ್ಯವನ್ನು ಸಂರಕ್ಷಿಸುವುದು ಈ ಯೋಜನೆಯ ಪ್ರಮುಖ ಗುರಿಗಳಾಗಿದ್ದವು.

2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಇದೇ ಯೋಜನೆಯನ್ನು ‘ನಮಾಮಿ ಗಂಗೆ’ ಎಂಬ ಹೆಸರಿನಲ್ಲಿ ಮುಂದುವರಿಸಿತು. ಯೋಜನೆಯ ಅನುಷ್ಠಾನಕ್ಕೆ 10 ವರ್ಷಗಳಲ್ಲಿ ₹20,000 ಕೋಟಿ ವಿನಿಯೋಗಿಸುವುದಾಗಿ ಸರ್ಕಾರ ಘೋಷಿಸಿತು. ಯೋಜನೆ ಆರಂಭದ ವೇಳೆ ಇದ್ದ ಉತ್ಸಾಹ, ಅನುಷ್ಠಾನದಲ್ಲಿ ಕಾಣಿಸಲಿಲ್ಲ. ಸರ್ಕಾರವು ಯೋಜನೆಗೆ ಅನುದಾನವನ್ನೂ ಸರಿಯಾಗಿ ಬಿಡುಗಡೆ ಮಾಡಲಿಲ್ಲ. 10 ವರ್ಷಗಳಲ್ಲಿ ಪೂರ್ಣವಾಗಬೇಕಿದ್ದ ಯೋಜನೆ ಇನ್ನೂ ಕುಂಟುತ್ತಾ ಸಾಗುತ್ತಿದೆ.

l ಗಂಗೆ ಹರಿಯುವ ರಾಜ್ಯಗಳಲ್ಲಿ ಯೋಜನೆಗೆ ನೀಡಿದ ಅನುದಾನ ಕಡಿತವಾಗಿದೆ. ಪ್ರತಿ ವರ್ಷ ನೀಡುತ್ತಿದ್ದ ಅನುದಾನದಲ್ಲಿ ಕೇಂದ್ರ ಸರ್ಕಾರವು ಶೇ 50ರಷ್ಟನ್ನು ಕಡಿತ ಮಾಡಿದೆ

l ಗಂಗೆ ತಟದಲ್ಲಿ ಕೆಲವು ಉದ್ಯಾನಗಳ ಅಭಿವೃದ್ಧಿ ಹೊರತುಪಡಿಸಿದರೆ, ಬೇರೆ ಯಾವ ಯೋಜನೆಗಳೂ ಪೂರ್ಣಗೊಂಡಿಲ್ಲ

l ಗಂಗೆಗೆ ಶವ ಬಿಸಾಡುವುದನ್ನು ತಡೆಯುವುದೂ ಯೋಜನೆಯ ಪ್ರಮುಖ ಗುರಿಯಾಗಿತ್ತು. ಇದನ್ನು ಅನುಷ್ಠಾನಕ್ಕೆ ತರುವಲ್ಲಿಯೂ ರಾಜ್ಯ ಸರ್ಕಾರಗಳು ವಿಫಲವಾಗಿವೆ

l ಗಂಗೆಯ ಉದ್ದಕ್ಕೂ ಕೊಳಚೆ ನೀರು ಸಂಸ್ಕರಣದ 63 ಘಟಕಗಳ ನಿರ್ಮಾಣ ಕಾಮಗಾರಿ ಆರಂಭವಾಗಿ 6 ವರ್ಷಗಳೇ ಕಳೆದಿವೆ. 12 ಘಟಕಗಳ ನಿರ್ಮಾಣ ಕಾಮಗಾರಿ ಈಗಷ್ಟೇ ಆಗಿದೆ. ಈ ಕಾಮಗಾರಿಗಳನ್ನು 2024ರ ವೇಳೆಗೆ ಪೂರ್ಣಗೊಳಿಸಬೇಕು. ಇವುಗಳಲ್ಲಿ ಒಂದೂ ಘಟಕ ಕಾರ್ಯಾರಂಭ ಮಾಡಿಲ್ಲ

l 182 ಸ್ನಾನಘಟ್ಟಗಳು ಮತ್ತು 118 ಚಿತಾಗಾರಗಳ ಆಧುನೀಕರಣ ಕಾಮಗಾರಿ ಆರಂಭವಾಗಿದೆ, ಆದರೆ ಪೂರ್ಣವಾಗಿಲ್ಲ. ಇವುಗಳನ್ನು ಯೋಜನೆ ಆರಂಭವಾದ ಒಂದು ವರ್ಷದಲ್ಲಿ ಪೂರ್ಣಗೊಳಿಸಬೇಕಿತ್ತು

ಶವಗಳ ಜತೆ ತೇಲಿಬಂದ ಸುಳ್ಳುಸುದ್ದಿ

ಗಂಗಾನದಿಯಲ್ಲಿ ಶವಗಳು ತೇಲಿಬರುತ್ತಿರುವ ವಿಡಿಯೊ ಮತ್ತು ಚಿತ್ರಗಳು ಸುಳ್ಳು ಎಂದು ಹಲವು ಸ್ಥಳೀಯ ಮಾಧ್ಯಮಗಳು ಹಾಗೂ ಸುದ್ದಿ ಜಾಲತಾಣಗಳು ವರದಿ ಮಾಡಿವೆ. ಈ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಆದರೆ, ಗಂಗಾನದಿಯಲ್ಲಿ ಶವಗಳು ಅಧಿಕ ಸಂಖ್ಯೆಯಲ್ಲಿ ತೇಲಿಬರುತ್ತಿವೆ ಎಂಬುದನ್ನು ಬಿಹಾರದ ಬಕ್ಸರ್ ಜಿಲ್ಲಾಡಳಿತ ಮತ್ತು ಉತ್ತರ ಪ್ರದೇಶದ ಉನ್ನಾವ್, ಗಾಜಿಪುರ ಜಿಲ್ಲಾಡಳಿತಗಳು ದೃಢಪಡಿಸಿವೆ. ಮೂರೂ ಜಿಲ್ಲಾಡಳಿತಗಳು ಶವಗಳು ಏಕೆ ತೇಲಿಬರುತ್ತಿವೆ ಮತ್ತು ಎಲ್ಲಿಂದ ತೇಲಿ ಬರುತ್ತಿವೆ ಎಂಬುದನ್ನು ಪತ್ತೆ ಮಾಡಲು ತನಿಖೆಗೆ ಆದೇಶಿಸಿವೆ. ತನಿಖೆ ಪ್ರಗತಿಯಲ್ಲಿ ಇದೆ.

ನದಿಯಲ್ಲಿ ಶವ ತೇಲಿಬರುತ್ತಿರುವ ಒಂದು ಚಿತ್ರವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂದು ‘ದಿ ಕ್ವಿಂಟ್’ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. 2015ರಲ್ಲಿ ನದಿಯಲ್ಲಿ ತೇಲಿಬಂದಿದ್ದ ಶವಗಳ ಚಿತ್ರವನ್ನು ಈಗಿನದ್ದೆಂದು ಹಂಚಿಕೊಳ್ಳಲಾಗಿದೆ. ಹೀಗಾಗಿ ನದಿಯಲ್ಲಿ ತೇಲಿಬರುತ್ತಿರುವ ಶವಗಳ ಚಿತ್ರಗಳು ಮತ್ತು ವಿಡಿಯೊಗಳಲ್ಲಿ ಎಲ್ಲವೂ ಈಗಿನದ್ದೇ ಅಲ್ಲ. ಆದರೆ ಶವಗಳು ತೇಲಿಬರುತ್ತಿರುವುದಂತೂ ನಿಜ. ಆ ಶವಗಳ ಸಂಸ್ಕಾರವನ್ನು ಸಂಬಂಧಿತ ಜಿಲ್ಲಾಡಳಿತಗಳೇ ನಡೆಸುತ್ತಿವೆ.

ವರದಿ –ಹಮೀದ್ ಕೆ.,ಉದಯ ಯು., ಜಯಸಿಂಹ ಆರ್.

(ಆಧಾರ: ರಾಯಿಟರ್ಸ್‌, ಪಿಟಿಐ, ಬಿಬಿಸಿ, ನಿರ್ಮಲ ಗಂಗಾ ರಾಷ್ಡ್ರೀಯ ಮಿಷನ್, ನಮಾಮಿ ಗಂಗೆ ಜಾಲತಾಣ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT