ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ 10 ಸ್ಥಾನ ಕುಸಿದ ಭಾರತ

Last Updated 22 ಜನವರಿ 2020, 22:55 IST
ಅಕ್ಷರ ಗಾತ್ರ

2019ರ ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತವು 41ನೇ ರ‍್ಯಾಂಕ್‌ನಿಂದ 51ನೇ ರ‍್ಯಾಂಕ್‌ಗೆ ಕುಸಿದಿದೆ. ನಾರ್ವೆಯು ಮೊದಲ ಮತ್ತು ಉತ್ತರ ಕೊರಿಯ (169) ಕೊನೆಯ ರ‍್ಯಾಂಕ್‌ನಲ್ಲಿ ಉಳಿದಿವೆ. ‘ದಿ ಎಕನಾಮಿಸ್ಟ್ ಇಂಟಲಿಜೆನ್ಸ್ ಯುನಿಟ್’ 2006ರಿಂದ ಪ್ರತಿ ವರ್ಷ ಈ ಸೂಚ್ಯಂಕವನ್ನು ಸಿದ್ಧಪಡಿಸುತ್ತಿದೆ. ಎಲ್ಲಾ ದೇಶಗಳಲ್ಲಿನ ಪ್ರಜಾಸತ್ತಾತ್ಮಕ ವಾತಾವರಣದ ಬಗ್ಗೆ ಸಮೀಕ್ಷೆ ನಡೆಸಿ, ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗುತ್ತದೆ.2014ರಲ್ಲಿ 27ನೇ ರ‍್ಯಾಂಕ್‌ನಲ್ಲಿದ್ದ ಭಾರತವು, 2019ರಲ್ಲಿ 51ನೇ ರ‍್ಯಾಂಕ್‌ಗೆ ಕುಸಿದಿದೆ. 2019ಕ್ಕೆ ಸಂಬಂಧಿಸಿದ ಸಮೀಕ್ಷೆಯಲ್ಲಿ 70 ಪ್ರಶ್ನೆಗಳನ್ನು ಕೇಳಲಾಗಿತ್ತು. ಭಾರತದಲ್ಲಿ ಪ್ರಜಾಸತ್ತಾತ್ಮಕವಾದ ವಾತಾವರಣಕ್ಕೆ ಧಕ್ಕೆಯಾಗುತ್ತಿದೆ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ

2014ರಲ್ಲಿ ಜನರ ರಾಜಕೀಯ ಪಾಲ್ಗೊಳ್ಳುವಿಕೆ, ಸರ್ಕಾರದ ಕಾರ್ಯನಿರ್ವಹಣೆ, ರಾಜಕೀಯ ಸಂಸ್ಕೃತಿ ಮತ್ತು ನಾಗರಿಕ ಸ್ವಾತಂತ್ರ್ಯಗಳು ಗರಿಷ್ಠಮಟ್ಟದಲ್ಲಿ ಇದ್ದವು. ಕೇಂದ್ರದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿದ್ದ ಸರ್ಕಾರದ ಮೇಲೆ ಜನರ ನಿರೀಕ್ಷೆ ಅಧಿಕವಾಗಿತ್ತು. ಹೀಗಾಗಿ ಸರ್ಕಾರದ ಪ್ರತಿ ನಡೆಯನ್ನೂ ಜನರು ಗಮನಿಸುತ್ತಿದ್ದರು. ಅಲ್ಲದೆ, ಸರ್ಕಾರ ಮತ್ತು ಜನರ ನಡುವಣ ಸಂವಾದ ಉತ್ತಮವಾಗಿತ್ತು.

2015ರಲ್ಲಿ ನಾಗರಿಕ ಸ್ವಾತಂತ್ರ್ಯಕ್ಕೆ ತುಸು ಧಕ್ಕೆ ಬಂದಿದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಹಲವರು ಕಳವಳ ವ್ಯಕ್ತಪಡಿಸಿದ್ದರು. ಅಲ್ಲದೆ ದೇಶದ ರಾಜಕೀಯ ಸಂಸ್ಕೃತಿ ಸಹ ತೀವ್ರ ಬದಲಾವಣೆಗೆ ಸಾಕ್ಷಿಯಾಯಿತು. ಜನರ ಮತ್ತು ಜನಪ್ರತಿನಿಧಿಗಳ ನಡುವೆ ಅಂತರ ಹೆಚ್ಚಾಯಿತು. ರಾಜಕೀಯದಲ್ಲಿ ಜನರ ಪಾಲ್ಗೊಳ್ಳುವಿಕೆ ಕಡಿಮೆಯಾಯಿತು.ಹೀಗಾಗಿ ಈ ಎರಡೂ ಕ್ಷೇತ್ರಗಳಲ್ಲಿ ಭಾರತದ ಅಂಕ ಕುಸಿಯಿತು. ಹೀಗಾಗಿ ಭಾರತದ ರ‍್ಯಾಂಕ್ ಸಹ ಕುಸಿಯಿತು.

2016ರಲ್ಲಿ ಆಡಳಿತ ಪಕ್ಷವಾದ ಬಿಜೆಪಿಯು ಹಲವು ರಾಜ್ಯಗಳ ಚುನಾವಣೆಗಳಲ್ಲಿ ಗೆಲುವು ಸಾಧಿಸಿತು. ಈ ವರ್ಷದಲ್ಲಿ ದೇಶದ ರಾಜಕೀಯ ಪರಿಸ್ಥಿತಿ ಸ್ಥಿರವಾಗಿತ್ತು. ಹೀಗಾಗಿ ಭಾರತವು ತನ್ನ ರ‍್ಯಾಂಕ್ ಉತ್ತಮಪಡಿಸಿಕೊಂಡಿತ್ತು.

2017ರಲ್ಲಿ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ದೇಶದ ಹಲವೆಡೆ ಭಿನ್ನಾಭಿಪ್ರಾಯ, ವಿರೋಧ ವ್ಯಕ್ತವಾಯಿತು. ಈ ಭಿನ್ನಾಭಿಪ್ರಾಯ ಮತ್ತು ವಿರೋಧವನ್ನು ಹತ್ತಿಕ್ಕಲು ಸರ್ಕಾರವು ಬಲ ಪ್ರಯೋಗಿಸಿತು. ಅಲ್ಲದೆ ಆಡಳಿತ ಪಕ್ಷದ ಬೆಂಬಲ ಹೊಂದಿರುವ ಒತ್ತಡಗುಂಪುಗಳು, ಭಿನ್ನದನಿಯನ್ನು ಹತ್ತಿಕ್ಕಲು ಯತ್ನಿಸಿದವು. ದೇಶದ ಹಲವೆಡೆ ಗೋಸಂರಕ್ಷಣೆ ಹೆಸರಿನಲ್ಲಿ, ಧಾರ್ಮಿಕ ಅಲ್ಪಸಂಖ್ಯಾತರನ್ನು ಹೊಡೆದು ಕೊಲ್ಲಲಾಯಿತು. ಸರ್ಕಾರದ ವಿರುದ್ಧ ದನಿಯೆತ್ತಿದ್ದವರ ಹತ್ಯೆಗಳು ನಡೆದವು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ಘಟನೆಗಳು ನಡೆದವು. ದೇಶದಲ್ಲಿ ಪ್ರಜಾಸತ್ತಾತ್ಮಕವಾದ ವಾತಾವರಣಕ್ಕೆ ಧಕ್ಕೆಯಾಗಿತ್ತು. ಹೀಗಾಗಿ ಭಾರತವು ರ‍್ಯಾಂಕಿಂಗ್‌ನಲ್ಲಿ 10 ಸ್ಥಾನಗಳಷ್ಟು ಕುಸಿಯಿತು.

2018ರಲ್ಲೂ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವ ಕೆಲಸ ನಡೆಯಿತು. ಆದರೆ, ಸಾಲು ಸಾಲು ಚುನಾವಣೆಗಳು ಎದುರಾದ ಕಾರಣ ಎಲ್ಲಾ ರಾಜಕೀಯ ಪಕ್ಷಗಳೂ ಚುನಾವಣೆಗಳತ್ತ ಗಮನ ಹರಿಸಿದ್ದವು. ಸರ್ಕಾರದ ನೀತಿಯ ವಿರುದ್ಧ ದೇಶದ ಹಲವೆಡೆ ತೀವ್ರ ಪ್ರತಿಭಟನೆ ನಡೆದವು. 2017ಕ್ಕೆ ಹೋಲಿಸಿದರೆ ಪರಿಸ್ಥಿತಿ ಸುದಾರಿಸಲೂ ಇಲ್ಲ, ಹದಗೆಡಲೂ ಇಲ್ಲ. ಹೀಗಾಗಿ ಭಾರತದ ಸೂಚ್ಯಂಕದ ಅಂಕದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಆದರೆ, ಭಾರತವು ರ‍್ಯಾಂಕ್‌ ಪಟ್ಟಿಯಲ್ಲಿ ಒಂದು ಸ್ಥಾನ ಉತ್ತಮಪಡಿಸಿಕೊಂಡಿತ್ತು.

2019ರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದೇಶದಾದ್ಯಂತ ನೂರಾರು ಪ್ರತಿಭಟನೆಗಳು ನಡೆದಿವೆ. ಜಮ್ಮು– ಕಾಶ್ಮೀರದ ವಿಶೇಷಾಧಿಕಾರ ವಾಪಸ್ ಪಡೆಯುವ ಪ್ರಕ್ರಿಯೆ ಪ್ರಜಾಸತ್ತಾತ್ಮಕವಾಗಿರಲಿಲ್ಲ. ಜನರ ಹಕ್ಕುಗಳನ್ನು ಹತ್ತಿಕ್ಕಲಾಯಿತು. ಧರ್ಮದ ಆಧಾರದಲ್ಲಿ ವಿದೇಶಿ ಕ್ರಮ ವಲಸಿಗರಿಗೆ ಪೌರತ್ವ ನೀಡುವ ಕಾಯ್ದೆಯ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಈ ಪ್ರತಿಭಟನೆಗಳನ್ನು ಹತ್ತಿಕ್ಕಲು ಸರ್ಕಾರವು ಪೊಲೀಸ್ ಬಲ ಪ್ರಯೋಗಿಸುತ್ತಿದೆ. ದೇಶದಲ್ಲಿ ನಾಗರಿಕ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ. ಹೀಗಾಗಿ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತವು ಮತ್ತೆ 10 ಸ್ಥಾನಗಳಷ್ಟು ಕುಸಿತ ಕಂಡಿದೆ.

ಕಾರಣಗಳು

ಚುನಾವಣಾ ಪ್ರಕ್ರಿಯೆ ಮತ್ತು ಬಹುತ್ವ: ದೇಶದಲ್ಲಿ ಚುನಾವಣೆ ಮುಕ್ತವಾಗಿ ನಡೆಯುತ್ತಿದೆ ಎಂಬುದರ ಬಗ್ಗೆ ಸಂದೇಹ ವ್ಯಕ್ತಪಡಿಸಿರುವ ಜನರ ಸಂಖ್ಯೆ ಹೆಚ್ಚಾಗಿದೆ. ಕೇಂದ್ರ ಸರ್ಕಾರವು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹಲವು ಕಾನೂನುಗಳನ್ನು ಜಾರಿಗೆ ತರುತ್ತಿದೆ. ಇದರಿಂದ ದೇಶದ ಬಹುತ್ವಕ್ಕೆಧಕ್ಕೆಯಾಗುತ್ತಿದೆ ಎಂದೂ ಹಲವರು ಆರೋಪಿಸಿದ್ದಾರೆ.

ರಾಜಕೀಯ ಸಂಸ್ಕೃತಿ: ದೇಶದಲ್ಲಿ ಪ್ರಜಾಸತ್ತಾತ್ಮಕವಾದ ವಾತಾವರಣ ಇಲ್ಲ ಎಂದು ಹಲವರು ದೂರಿದ್ದಾರೆ. ಆಡಳಿತ ಪಕ್ಷವು ದ್ವೇಷ ರಾಜಕಾರಣದ ಮೊರೆ ಹೋಗಿವೆ.

ನಾಗರಿಕ ಹಕ್ಕುಗಳು: ದೇಶದಲ್ಲಿ ಜನರ ಪ್ರತಿಭಟನೆಯ ಹಕ್ಕನ್ನು ಹತ್ತಿಕ್ಕಲಾಗುತ್ತಿದೆ. ಸರ್ಕಾರವು ಜನರ ನಿಲುವನ್ನು ಕಡೆಗಣಿಸುತ್ತಿದೆ. ಸರ್ಕಾರವು ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ. ಹೀಗಾಗಿ ನಾಗರಿಕ ಹಕ್ಕುಗಳಿಗೆ ಗರಿಷ್ಠ ಮಟ್ಟದ ಅಪಾಯ ಎದುರಾಗಿದೆ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT