ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ಉಡಾನ್‌ ಯೋಜನೆ ಶೇ 53ರಷ್ಟು ಮಾರ್ಗಗಳಲ್ಲಿ ಸ್ಥಗಿತ! ವಿವರ ಇಲ್ಲಿದೆ..
ಆಳ–ಅಗಲ: ಉಡಾನ್‌ ಯೋಜನೆ ಶೇ 53ರಷ್ಟು ಮಾರ್ಗಗಳಲ್ಲಿ ಸ್ಥಗಿತ! ವಿವರ ಇಲ್ಲಿದೆ..
ದೇಶದಲ್ಲಿ ಪ್ರಾದೇಶಿಕ ವಿಮಾನಯಾನ ಸಂಪರ್ಕವನ್ನು ಬಲಪಡಿಸುವ ಸಲುವಾಗಿ ಕೇಂದ್ರ ಸರ್ಕಾರವು 2017–18ರಲ್ಲಿ ಜಾರಿಗೆ ತಂದಿದ್ದ ‘ಉಡಾನ್‌’ ಯೋಜನೆ
Published 21 ಆಗಸ್ಟ್ 2023, 0:27 IST
Last Updated 21 ಆಗಸ್ಟ್ 2023, 0:27 IST
ಅಕ್ಷರ ಗಾತ್ರ

ದೇಶದಲ್ಲಿ ಪ್ರಾದೇಶಿಕ ವಿಮಾನಯಾನ ಸಂಪರ್ಕವನ್ನು ಬಲಪಡಿಸುವ ಸಲುವಾಗಿ ಕೇಂದ್ರ ಸರ್ಕಾರವು 2017–18ರಲ್ಲಿ ಜಾರಿಗೆ ತಂದಿದ್ದ ‘ಉಡಾನ್‌’ ಯೋಜನೆಯು, ಜನರಿಗೆ ಕೈಗೆಟಕುವ ದರದಲ್ಲಿ ವಿಮಾನಯಾನ ಸೇವೆಯನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ. ಮೂರು ಹಂತಗಳಲ್ಲಿ ಜಾರಿಯಾಗಿದ್ದ ಯೋಜನೆಯ ಫಲಾನುಭವಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೂ, ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಸಾಧಿಸಿಲ್ಲ. ಈ ಯೋಜನೆ ಅಡಿಯಲ್ಲಿ ಕಾರ್ಯಾರಂಭ ಮಾಡಿದ್ದ ವಿಮಾನಯಾನ ಮಾರ್ಗಗಳಲ್ಲಿ, ಈಗ ಅರ್ಧಕ್ಕೂ ಹೆಚ್ಚು ಮಾರ್ಗಗಳಲ್ಲಿ ಸೇವೆ ಸ್ಥಗಿತವಾಗಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಹೇಳಲಾಗಿದೆ.

ಮೊದಲ ಹಂತದ ಯೋಜನೆಯನ್ನು (ಉಡಾನ್‌–1) 2017ರ ಮಾರ್ಚ್‌ನಲ್ಲಿ, ಉಡಾನ್‌–2 ಅನ್ನು 2018ರ ಮಾರ್ಚ್‌ ಮತ್ತು ಉಡಾನ್‌–3ನ್ನು 2019ರ ಮಾರ್ಚ್‌ನಲ್ಲಿ ಆರಂಭಿಸಲಾಗಿತ್ತು. ದೇಶದ ಬೇರೆ ಬೇರೆ ಜಿಲ್ಲೆಗಳಲ್ಲಿ, ಪ್ರದೇಶಗಳಲ್ಲಿ ಈಗಾಗಲೇ ಇರುವ ಮತ್ತು ಬಳಕೆಯಲ್ಲಿ ಇಲ್ಲದ ವಿಮಾನ ನಿಲ್ದಾಣ ಮತ್ತು ಹೆಲಿಪೋರ್ಟ್‌ಗಳನ್ನು ಮೇಲ್ದರ್ಜೆಗೆ ಏರಿಸುವುದು ಹಾಗೂ ಅವುಗಳ ಮೂಲಕ ವಿಮಾನಯಾನ ಸೇವೆ ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿತ್ತು. ಅಲ್ಲದೆ, ಅಗತ್ಯವಿರುವೆಡೆ ಹೊಸ ವಿಮಾನ ನಿಲ್ದಾಣ ಮತ್ತು ಹೆಲಿಪೋರ್ಟ್‌ಗಳನ್ನು ನಿರ್ಮಿಸುವುದೂ ಯೋಜನೆಯ ಭಾಗವಾಗಿತ್ತು. ಕೇಂದ್ರ ಸರ್ಕಾರ ವಿಮಾನ ನಿಲ್ದಾಣ ಮತ್ತು ಹೆಲಿಪೋರ್ಟ್‌ಗಳನ್ನು ಒದಗಿಸಿಕೊಡುವುದು ಆಯಾ ರಾಜ್ಯ ಸರ್ಕಾರಗಳು ಭದ್ರತೆ, ತೆರಿಗೆ ವಿನಾಯಿತಿ, ವಿದ್ಯುತ್–ನೀರು ಪೂರೈಕೆ ಮತ್ತು ಇತರೆ ಸವಲತ್ತುಗಳನ್ನು ರಿಯಾಯಿತಿ ದರದಲ್ಲಿ ಒದಗಿಸಬೇಕಿತ್ತು. ಆದರೆ ಈ ಎಲ್ಲಾ ರಿಯಾಯಿತಿ ಮತ್ತು ವಿನಾಯಿತಿಗಳು ಸೀಮಿತ ಅವಧಿಗೆ ಮಾತ್ರ ಅನ್ವಯವಾಗುತ್ತವೆ. ಆ ಅವಧಿ ಮುಗಿದ ಕೂಡಲೇ ಹಲವು ಮಾರ್ಗಗಳಲ್ಲಿ ವಿಮಾನಯಾನ ಸೇವೆ ಸ್ಥಗಿತವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಉಡಾನ್‌–1, 2 ಮತ್ತು 3ರ ಅಡಿಯಲ್ಲಿ ಒಟ್ಟು 953 ಮಾರ್ಗಗಳಲ್ಲಿ ಸೇವೆ ಒದಗಿಸಲು ವಿಮಾನಯಾನ ಸಚಿವಾಲಯಕ್ಕೆ ವಿಮಾನಯಾನ ಕಂಪನಿಗಳು ಪ್ರಸ್ತಾವ ಸಲ್ಲಿಸಿದ್ದವು. ಅವುಗಳಲ್ಲಿ 774 ಮಾರ್ಗಗಳಲ್ಲಿ ಸೇವೆ ಆರಂಭಿಸಲು ಸಚಿವಾಲಯವು ಅನುಮೋದನೆ ನೀಡಿತ್ತು. ಆದರೆ, 774 ಮಾರ್ಗಗಳಲ್ಲಿ ಕಾರ್ಯಾರಂಭವಾಗಿದ್ದು 371 ಮಾರ್ಗಗಳಲ್ಲಿ ಮಾತ್ರ. ಉಳಿದ 403 ಮಾರ್ಗಗಳಲ್ಲಿ ಸೇವೆ ಆರಂಭವಾಗಲೇ ಇಲ್ಲ. ಅಗತ್ಯ ಸೌಲಭ್ಯಗಳು ಇಲ್ಲದೇ ಇರುವುದು, ವಿಮಾನನಿಲ್ದಾಣ ಮತ್ತು ಹೆಲಿಪೋರ್ಟ್‌ಗಳ ಕಾರ್ಯಾಚರಣೆಗೆ ಅನುಮತಿ ದೊರೆಯದೇ ಇರುವುದು ಹಾಗೂ ಸೂಚಿತ ದರದಲ್ಲಿ ಸೇವೆ ಕಾರ್ಯಸಾಧುವಲ್ಲದೇ ಇರುವುದು, ಸೇವೆ ಆರಂಭವಾಗದೇ ಇರುವುದಕ್ಕೆ ಪ್ರಮುಖ ಕಾರಣಗಳು ಎಂದು ಸಿಎಜಿ ಗುರುತಿಸಿದೆ.

ಮೂರೂ ಹಂತದ ಯೋಜನೆಯಲ್ಲಿ, ಯಾವುದೇ ಮಾರ್ಗದಲ್ಲಿ ಸೇವೆ ಆರಂಭಿಸಿದ ನಂತರ ಒಂದು ವರ್ಷದವರೆಗೆ ಕಡ್ಡಾಯವಾಗಿ ಸೇವೆ ಒದಗಿಸಲೇಬೇಕು ಎಂಬ ನಿಯಮ ಇತ್ತು. ಹೀಗಾಗಿ ಕಾರ್ಯಾರಂಭ ಮಾಡಿದ ಬಹುತೇಕ ಮಾರ್ಗಗಳಲ್ಲಿ ಒಂದು ವರ್ಷದವರೆಗೆ ಸೇವೆ ಜಾರಿಯಲ್ಲಿತ್ತು. ಆದರೆ ಒಂದು ವರ್ಷದ ನಂತರ 139 ಮಾರ್ಗಗಳಲ್ಲಿ ಸೇವೆಯನ್ನು ಸ್ಥಗಿತಗೊಳಿಸಲಾಯಿತು. ಕಾರ್ಯಾಚರಣೆ ಕಾರ್ಯಸಾಧುವಲ್ಲ ಎಂಬುದನ್ನೇ ಸೇವೆ ಸ್ಥಗಿತಕ್ಕೆ ಕಂಪನಿಗಳು ಕೊಟ್ಟ ಪ್ರಮುಖ ಕಾರಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿನಾಯಿತಿ ಹಾಗೂ ರಿಯಾಯಿತಿಗಳ ಕಾರಣ ಉಳಿದ 232 ಮಾರ್ಗಗಳಲ್ಲಿ ಮೂರು ವರ್ಷಗಳವರೆಗೆ ಸೇವೆ ಲಭ್ಯವಿತ್ತು. ಆದರೆ, ಮೂರು ವರ್ಷಗಳ ನಂತರ ಇನ್ನೂ 58 ಮಾರ್ಗಗಳಲ್ಲಿ ಸೇವೆ ಸ್ಥಗಿತವಾಯಿತು. 2023ರ ಮಾರ್ಚ್‌ ಅಂತ್ಯದವರೆಗೆ ಉಡಾನ್‌ ಯೋಜನೆ ಅಡಿಯಲ್ಲಿ ಲಭ್ಯವಿದ್ದ ವಿಮಾನಯಾನ ಮಾರ್ಗಗಳ ಸಂಖ್ಯೆ 174ಕ್ಕೆ ಕುಸಿದಿತ್ತು. ಅನುಮೋದನೆ ದೊರೆತ (774) ಮಾರ್ಗಗಳ ಸಂಖ್ಯೆಗೆ ಹೋಲಿಸಿದರೆ ಇದು ಶೇ 22.5ರಷ್ಟು ಮಾತ್ರ.

ಯೋಜನೆ ಜಾರಿಯಲ್ಲಿ ಹಲವು ತೊಡಕುಗಳಿದ್ದು, ಅವುಗಳನ್ನು ನಿವಾರಿಸಿದರೆ ಮತ್ತಷ್ಟು ಪ್ರಗತಿ ಸಾಧಿಸಬಹುದು ಮತ್ತು ಜನರಿಗೆ ಕೈಗೆಟುಕುವ ದರದಲ್ಲಿ ವಿಮಾನಯಾನ ಸೇವೆ ಒದಗಿಸಬಹುದು ಎಂದು ಸಿಎಜಿ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

ಆಧಾರ: ಸಿಎಜಿ

ಪ್ರಯಾಣಿಕರ ಸಂಖ್ಯೆ ಏರಿಕೆ

2017ರಲ್ಲಿ ಮೊದಲ ಹಂತದ ಉಡಾನ್‌ ಯೋಜನೆ ಜಾರಿಗೆ ಬಂದಾಗ, ಅದಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 2017–18ನೇ ಆರ್ಥಿಕ ವರ್ಷದ ಅಂತ್ಯಕ್ಕೆ 56 ಮಾರ್ಗಗಳಲ್ಲಷ್ಟೇ ಸೇವೆ ಲಭ್ಯವಿತ್ತು. ಕಡಿಮೆ ಸಂಖ್ಯೆ ಮಾರ್ಗಗಳು ಮತ್ತಿತರ ಕಾರಣದಿಂದ ಇಡೀ ವರ್ಷದಲ್ಲಿ ಯೋಜನೆ ಅಡಿಯ ಸೇವೆ ಬಳಸಿಕೊಂಡ ಪ್ರಯಾಣಿಕರ ಸಂಖ್ಯೆ 2.63 ಲಕ್ಷ ಮಾತ್ರ. ಆದರೆ ನಂತರದ ವರ್ಷಗಳಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಲೇ ಸಾಗಿದೆ

l ಯೋಜನೆ ಆರಂಭವಾದ ಎರಡನೇ (2018–19)ವರ್ಷ ಉಡಾನ್‌ ವಿಮಾನಗಳಲ್ಲಿ ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆ 12.40 ಲಕ್ಷಕ್ಕೆ ಏರಿಕೆಯಾಗಿತ್ತು

l 2019–20ನೇ ಆರ್ಥಿಕ ವರ್ಷದಲ್ಲಿ 300ಕ್ಕೂ ಹೆಚ್ಚು ಮಾರ್ಗಗಳಲ್ಲಿ ಉಡಾನ್‌ ಸೇವೆ ಲಭ್ಯವಿತ್ತು. ಈ ಕಾರಣದಿಂದ ಸೇವೆ ಪಡೆದುಕೊಂಡ ಪ್ರಯಾಣಿಕರ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದ ಏರಿಕೆಯಾಗಿತ್ತು. ಆ ವರ್ಷದಲ್ಲಿ ಒಟ್ಟು 29.91 ಲಕ್ಷ ಮಂದಿ ಉಡಾನ್‌ ಸೇವೆಯನ್ನು ಬಳಸಿಕೊಂಡಿದ್ದರು

l 2020–21ರಲ್ಲಿ ಕೋವಿಡ್‌ ಕಾರಣದಿಂದ ಸೇವೆಯ ಸಂಖ್ಯೆಯೂ ಕಡಿಮೆಯಾಗಿತ್ತು ಮತ್ತು ಪ್ರಯಾಣಿಕರ ಸಂಖ್ಯೆಯಲ್ಲೂ ಇಳಿಕೆಯಾಗಿತ್ತು

l 2021–22 ಉಡಾನ್‌ ಇತಿಹಾಸದಲ್ಲೇ ಅತಿಹೆಚ್ಚು ಪ್ರಗತಿ ಸಾಧಿಸಿದ ವರ್ಷವಾಗಿದೆ. ಕೋವಿಡ್‌ ನಿರ್ಬಂಧಗಳು ಪೂರ್ಣ ಪ್ರಮಾಣದಲ್ಲಿ ಸಡಿಲವಾದ ಕಾರಣ, ಬಹುತೇಕ ಮಾರ್ಗಗಳಲ್ಲಿ ಸೇವೆಗೆ ಮರುಚಾಲನೆ ನೀಡಲಾಗಿತ್ತು. ಆ ವರ್ಷದಲ್ಲಿ ಒಟ್ಟು 32.99 ಲಕ್ಷ ಪ್ರಯಾಣಿಕರು ಉಡಾನ್‌ ವಿಮಾನಗಳಲ್ಲಿ ಪ್ರಯಾಣಿಸಿದ್ದಾರೆ

l ಆದರೆ, 2022–23ರಲ್ಲಿ ಹಲವು ಮಾರ್ಗಗಳಲ್ಲಿ ಸೇವೆ ಸ್ಥಗಿತವಾಯಿತು. ಇದಕ್ಕೆ ಪ್ರಯಾಣಿಕರ ಕೊರತೆ ಕಾರಣ ಎಂದು ಹೇಳಲಾಗಿದೆಯಾದರೂ, ಸರ್ಕಾರದ ಸವಲತ್ತು ಸ್ಥಗಿತವಾಗಿದ್ದು ಪ್ರಮುಖ ಕಾರಣ ಎಂಬುದನ್ನು ಸಿಎಜಿ ಗುರುತಿಸಿದೆ. ಸೇವೆ ಇಲ್ಲದೇ ಇರುವ ಕಾರಣ ಆ ವರ್ಷ ಉಡಾನ್‌ ವಿಮಾನಗಳಲ್ಲಿ ಪ್ರಯಾಣಿಸಿದವರ ಸಮಖ್ಯೆ 24.97 ಲಕ್ಷಕ್ಕೆ ಕುಸಿದಿತ್ತು

l ಕೈಗೆಟುಕುವ ದರದಲ್ಲಿ ಗುಣಮಟ್ಟದ ಸೇವೆ ಮತ್ತು ಅತ್ಯಂತ ಅಗತ್ಯವಿರುವ ಮಾರ್ಗಗಳಲ್ಲಿ ಸೇವೆಯನ್ನು ಒದಗಿಸಿದರೆ ಉಡಾನ್‌ ಯೋಜನೆ ಮತ್ತಷ್ಟು ಪ್ರಗತಿ ಸಾಧಿಸಲಿದೆ. ಪ್ರಯಾಣಿಕರ ಸಂಖ್ಯೆಯೂ ಏರಿಕೆಯಾಗಲಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ

ಸಿದ್ಧವಾಗದ ಹೆಲಿಪೋರ್ಟ್‌ಗಳಿಗೆ ಅನುಮೋದನೆ

ಉಡಾನ್‌ ಯೋಜನೆಯ ಅಡಿಯಲ್ಲಿ 31 ಹೆಲಿಪೋರ್ಟ್‌ಗಳ ಮೂಲಕ ಸೇವೆ ಒದಗಿಸಲು ವಿಮಾನಯಾನ ಸಚಿವಾಲಯವು ಅನುಮೋದನೆ ನೀಡಿತ್ತು. ಆದರೆ, ಆ ಹೆಲಿಪೋರ್ಟ್‌ಗಳಲ್ಲಿ ಅಗತ್ಯ ಸೌಲಭ್ಯಗಳೇ ಇರಲಿಲ್ಲ. ಯಾವುದೇ ಹೆಲಿಪೋರ್ಟ್‌ನಲ್ಲಿ ಹೆಲಿಕಾಪ್ಟರ್‌ ಸೇವೆ ಒದಗಿಸಲು ಇರಬೇಕಾದ ಕನಿಷ್ಠ ಸೌಲಭ್ಯಗಳು ಇಲ್ಲದೇ ಇದ್ದರೆ, ಅಲ್ಲಿಂದ ಕಾರ್ಯಾಚರಣೆ ನಡೆಸಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಅನುಮತಿ ನೀಡುವುದಿಲ್ಲ. 

ಸಚಿವಾಲಯವು ಅನುಮೋದನೆ ನೀಡಿದ 31 ಹೆಲಿಪೋರ್ಟ್‌ಗಳಲ್ಲಿ ಶೇ 70ಕ್ಕೂ ಹೆಚ್ಚು ಹೆಲಿಪೋರ್ಟ್‌ಗಳಿಗೆ ಡಿಜಿಸಿಎ ಅನುಮತಿ ನೀಡಿರಲಿಲ್ಲ. ಇದರಿಂದ 50ಕ್ಕೂ ಹೆಚ್ಚು ಮಾರ್ಗಗಳಲ್ಲಿ ಹೆಲಿಕಾಪ್ಟರ್‌ ಸೇವೆ ಆರಂಭಿಸಲು ಸಾಧ್ಯವಾಗಿಲ್ಲ ಎಂದು ಸಿಎಜಿ ತನ್ನ ವರದಿಯಲ್ಲಿ ವಿವರಿಸಿದೆ.

ಹೆಲಿಪೋರ್ಟ್‌ಗಳ ಮೂಲಕ ಸೇವೆ ಆರಂಭಿಸಲು ಅನುಮೋದನೆ ನೀಡುವುದಕ್ಕೂ ಮುನ್ನ, ಅಲ್ಲಿ ಅಗತ್ಯ ಸೌಲಭ್ಯಗಳು ಇವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದನ್ನು ವಿಮಾನಯಾನ ಸಚಿವಾಲಯವು ರೂಢಿಸಿಕೊಳ್ಳಬೇಕು. ಹೀಗೆ ದೃಢಪಡಿಸಿಕೊಳ್ಳದೇ ಅನುಮೋದನೆ ನೀಡಿದ ಕಾರಣಕ್ಕೂ ಯೋಜನೆ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಸಾಧಿಸಿಲ್ಲ ಎಂದು ಸಿಎಜಿ ಹೇಳಿದೆ.

ಶಿಫಾರಸುಗಳು
l ಉಡಾನ್‌ ಯೋಜನೆಗೆಂದು ಸಾಮಾನ್ಯ ವಿಮಾನಗಳ ಪ್ರತಿ ಪ್ರಯಾಣದ ಮೇಲೆ ವಿಧಿಸಲಾಗುತ್ತಿರುವ ₹5,000 ಲೆವಿ, ಸಂಗ್ರಹಕ್ಕೆ ಏಕರೂಪತೆ ತರಬೇಕು. ಕೆಲವು ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಂದ ಅಗತ್ಯಕ್ಕಿಂತ ಹೆಚ್ಚಿನ ಲೆವಿ ಶುಲ್ಕ ಸಂಗ್ರಹಿಸುತ್ತಿವೆ. ಆದರೆ, ಉಡಾನ್ ನಿಧಿಗೆ ನೀಡುತ್ತಿರುವುದು ₹5,000 ಮಾತ್ರ. ₹5,000ದಷ್ಟು ಶುಲ್ಕವನ್ನಷ್ಟೇ ಪ್ರಯಾಣಿಕರಿಂದ ಸಂಗ್ರಹಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು l ಉಡಾನ್ ನಿಧಿಯಲ್ಲಿ ಲಭ್ಯವಿದ್ದ ಅನುದಾನವು ಯಾವ ವರ್ಷವೂ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿಲ್ಲ. ಆ ನಿಧಿಯನ್ನು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು ಮತ್ತು ಆ ಮೂಲಕ ವಿಮಾನನಿಲ್ದಾಣಗಳು/ಹೆಲಿಪೋರ್ಟ್‌ಗಳನ್ನು ಶೀಘ್ರವೇ ಅಭಿವೃದ್ಧಿ ಮಾಡಬೇಕು l ಉಡಾನ್ ಯೋಜನೆ ಅಡಿ ಕಾರ್ಯನಿರ್ವಹಿಸುತ್ತಿರುವ ವಿಮಾನಗಳ ಟಿಕೆಟ್ ದರಕ್ಕೂ, ಹೆಲಿಕಾಪ್ಟರ್‌ಗಳ ಟಿಕೆಟ್‌ ದರಕ್ಕೂ ತೀರಾ ವ್ಯತ್ಯಾಸವಿದೆ. ವಿಮಾನಗಳಿಗೆ ಹೋಲಿಸಿದರೆ, ಹೆಲಿಕಾಪ್ಟರ್‌ಗಳು ತೀರಾ ದುಬಾರಿ. ಈ ಅಂತರವನ್ನು ಕಡಿಮೆ ಮಾಡಬೇಕು. ಆ ಮೂಲಕ ಜನ ಸಾಮಾನ್ಯರೂ ಹೆಲಿಕಾಪ್ಟರ್‌ಗಳ ಸೇವೆ ಬಳಸುವಂತಹ ಸ್ಥಿತಿ ನಿರ್ಮಿಸಬೇಕು l ಯೋಜನೆಯಲ್ಲಿ ಉಲ್ಲೇಖಿಸಿರುವಂತೆ ಹಲವು ರಾಜ್ಯ ಸರ್ಕಾರಗಳು ವಿಮಾನನಿಲ್ದಾಣ/ಹೆಲಿಪೋರ್ಟ್‌ಗಳ ಭದ್ರತೆ/ನಿರ್ವಹಣೆಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಈ ಲೋಪವನ್ನು ವಿಮಾನಯಾನ ಸಚಿವಾಲಯವು ಕಡೆಗಣಿಸಿದೆ. ಇದೂ ಸಹ ಹಲವು ಮಾರ್ಗಗಳಲ್ಲಿ ಕಾರ್ಯಾಚರಣೆ ಸ್ಥಗಿತವಾಗಲು ಕಾರಣವಾಗಿದೆ. ಇಂತಹ ಲೋಪಗಳನ್ನು ಸರಿಪಡಿಸುವ ಮೂಲಕ, ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಕ್ರಮ ತೆಗೆದುಕೊಳ್ಳಬೇಕು l ಸಚಿವಾಲಯವು ಅನುಮೋದನೆ ನೀಡಿದ 31 ಹೆಲಿಪೋರ್ಟ್‌ಗಳಲ್ಲಿ ಶೇ 70ಕ್ಕೂ ಹೆಚ್ಚು ಹೆಲಿಪೋರ್ಟ್‌ಗಳಿಗೆ ಡಿಜಿಸಿಎ ಅನುಮತಿ ನೀಡಿರಲಿಲ್ಲ. ಇದರಿಂದ 50ಕ್ಕೂ ಹೆಚ್ಚು ಮಾರ್ಗಗಳಲ್ಲಿ ಹೆಲಿಕಾಪ್ಟರ್‌ ಸೇವೆ ಆರಂಭಿಸಲು ಸಾಧ್ಯವಾಗಿಲ್ಲ. ಅನುಮೋದನೆ ನೀಡುವುದಕ್ಕೂ ಮುನ್ನ, ಅಲ್ಲಿ ಅಗತ್ಯ ಸೌಲಭ್ಯಗಳು ಇವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದನ್ನು ವಿಮಾನಯಾನ ಸಚಿವಾಲಯವು ರೂಢಿಸಿಕೊಳ್ಳಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT