ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ತೆಲಂಗಾಣದಲ್ಲಿ ‘ಕೈ’ಗೆ ಶಕ್ತಿ, ಬಿಆರ್‌ಎಸ್‌ಗೆ ನಿಶ್ಶಕ್ತಿ

Published 29 ಮಾರ್ಚ್ 2024, 22:14 IST
Last Updated 29 ಮಾರ್ಚ್ 2024, 22:14 IST
ಅಕ್ಷರ ಗಾತ್ರ

ಕೆಲವೇ ತಿಂಗಳ ಹಿಂದಷ್ಟೇ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಅಧಿಕಾರದಲ್ಲಿದ್ದ ಬಿಆರ್‌ಎಸ್‌ ಪಕ್ಷವನ್ನು ಸೋಲಿಸಿ, ಕಾಂಗ್ರೆಸ್‌ ಬಹುಮತದೊಂದಿಗೆ ಅಧಿಕಾರಕ್ಕೆ ಏರಿತ್ತು. ಲೋಕಸಭೆ ಚುನಾವಣೆಯ ಹೋರಾಟಕ್ಕೆ ಕಾಂಗ್ರೆಸ್‌ಗೆ ಈ ಗೆಲುವೇ ದೊಡ್ಡ ಬಲ. ಆದರೆ, ಅಧಿಕಾರದಿಂದ ಇಳಿದ ಬಿಎಸ್‌ಆರ್‌ ಮಾತ್ರ ತನ್ನ ಬಲವನ್ನು ದಿನದಿಂದ ದಿನಕ್ಕೆ ಕುಂದಿಸಿಕೊಳ್ಳುತ್ತಲೇ ಇದೆ. ವಿಧಾನಸಭೆ ಚುನಾವಣೆ ಹೊತ್ತಿನಲ್ಲೇ ಬಿಆರ್‌ಎಸ್‌ ನಾಯಕರ ಆಡಳಿತ ವೈಖರಿ ಮೇಲೆ ಜನರು ಸಿಟ್ಟಿಗೆದ್ದಿದ್ದರು. ಅದು ಫಲಿತಾಂಶದಲ್ಲಿಯೂ ತಿಳಿದುಬಂದಿತ್ತು. ಈಗ ಬಿಆರ್‌ಎಸ್‌ ಪಕ್ಷದೊಳಗೇ ಅಸಮಾಧಾನ ತೀವ್ರಗೊಂಡಿದೆ. ಸಾಲು ಸಾಲು ನಾಯಕರು ಕಾಂಗ್ರೆಸ್‌ ಸೇರುತ್ತಿದ್ದಾರೆ. ಬಿಜೆಪಿಗೂ ಹಲವು ನಾಯಕರು ಸೇರಿಕೊಂಡಿದ್ದಾರೆ

‘ನಾನು ಮುಖ್ಯಮಂತ್ರಿಯಾದ ಬಳಿಕ ನನ್ನೊಳಗಿನ ಆಡಳಿತಗಾರನನ್ನು ನೋಡಿದ್ದೀರಿ. ಆದರೆ, ಇಲ್ಲಿಂದ ಮುಂದೆ ನೀವು ನನ್ನನ್ನು ತೆಲಂಗಾಣ ಕಾಂಗ್ರೆಸ್‌ ಘಟಕದ ಅಧ್ಯಕ್ಷನನ್ನಾಗಿ, ನನ್ನ ಕೆಲಸವನ್ನು ನೋಡಲಿದ್ದೀರಿ’ ಎಂದು ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಮುಖ್ಯಮಂತ್ರಿ ರೇವಂತ ರೆಡ್ಡಿ ಹೇಳಿದ್ದಾರೆ. ಸರ್ಕಾರ ರಚನೆಗೊಂಡ ನಂತರದಿಂದಲೂ ‘ಸರ್ಕಾರ ಬೀಳಲಿದೆ’ ಎಂಬ ಹೇಳಿಕೆಗಳನ್ನು ವಿರೋಧ ಪಕ್ಷಗಳು ಹೇಳಿಕೊಂಡೇ ಬರುತ್ತಿವೆ. ಸರ್ಕಾರವನ್ನೂ ಉಳಿಸಿಕೊಳ್ಳಬೇಕು, ಇನ್ನೊಂದೆಡೆ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಹೆಚ್ಚು ಸ್ಥಾನಗಳನ್ನೂ ಗೆಲ್ಲಬೇಕು –ಇದು ರೇವಂತ ರೆಡ್ಡಿ ಅವರ ಮುಂದಿರುವ ಸವಾಲು.

ಇದಕ್ಕೆ ಪುಷ್ಟಿ ಕೊಡುವಂತೆ, ಬಿಆರ್‌ಎಸ್‌ನ ಹಲವು ನಾಯಕರು ಕಾಂಗ್ರೆಸ್‌ ಸೇರಿಕೊಳ್ಳುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಗ್ರೇಟರ್‌ ಹೈದರಾಬಾದ್‌ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಹಿನ್ನೆಡೆಯಾಗಿತ್ತು. ಈ ಪ್ರದೇಶವು ಬಿಆರ್‌ಎಸ್‌ನ ಭದ್ರಕೋಟೆಯಂತಿದೆ. ಆದರೆ, ಈಗ ಈ ಪ್ರದೇಶದ ಬಿಆರ್‌ಎಸ್‌ ಸಂಸದರು, ಶಾಸಕರು ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದಾರೆ. ಬಿಆರ್‌ಎಸ್‌ನ ರಾಜ್ಯಸಭಾ ಸದಸ್ಯ ಕೆ. ಕೇಶವ್‌ ರಾವ್‌ ಅವರೂ ಪಕ್ಷ ತೊರೆದು ಕಾಂಗ್ರೆಸ್‌ ಸೇರುವುದಕ್ಕೆ ಸಿದ್ಧರಾಗಿದ್ದಾರೆ. ಇವರೊಂದಿಗೆ ಅವರ ಮಗಳು ಗ್ರೇಟರ್‌ ಹೈದರಾಬಾದ್‌ ನಗರಪಾಲಿಕೆ ಮೇಯರ್‌ ಆಗಿರುವ ಗದ್ವಾಲ್‌ ವಿಜಯಲಕ್ಷ್ಮಿ ಕೂಡ ಕಾಂಗ್ರೆಸ್‌ ಸೇರಲಿದ್ದಾರೆ ಮತ್ತು ಹಲವು ಕಾರ್ಪೊರೇಟರ್‌ಗಳನ್ನು ಕರೆತರಲಿದ್ದಾರೆ ಎಂಬ ಸುದ್ದಿ ಹರಡಿದೆ. ಇದು ಕಾಂಗ್ರೆಸ್‌ಗೆ ಲಾಭವನ್ನೇ ತಂದುಕೊಡಲಿದೆ. ಬಿಆರ್‌ಎಸ್‌ನಿಂದ ಬಂದ ಹಲವರಿಗೆ ಕಾಂಗ್ರೆಸ್‌ ಲೋಕಸಭಾ ಟಿಕೆಟ್‌ ಅನ್ನೂ ನೀಡಿದೆ. ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ನೀಡಿದ್ದ ಆರು ಗ್ಯಾರಂಟಿಗಳು ಕೂಡ ಪಕ್ಷಕ್ಕೆ ಅನುಕೂಲ ಮಾಡಿಕೊಡಲಿವೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಶಕ್ತಿ ಕುಂದಿಸಿಕೊಂಡ ಬಿಆರ್‌ಎಸ್‌: ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಇತ್ತೀಚೆಗೆ ಬಿಆರ್‌ಎಸ್‌ ಅಧ್ಯಕ್ಷ ಕೆ. ಚಂದ್ರಶೇಖರ ರಾವ್‌ ಅವರ ಪುತ್ರಿ, ಶಾಸಕಿ ಕೆ. ಕವಿತಾ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ವಿಧಾನಸಭೆ ಚುನಾವಣೆ ಪ್ರಚಾರದ ಉದ್ದಕ್ಕೂ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಬಿಆರ್‌ಎಸ್‌ನ ಭ್ರಷ್ಟಾಚಾರದ ಕುರಿತು ಮಾತನಾಡುತ್ತಲೇ ಇದ್ದವು. ಕವಿತಾ ಅವರ ಬಂಧನ ಇದಕ್ಕೆ ಸಾಕ್ಷ್ಯ ಒದಗಿಸಿದೆ. ಕಲ್ಲೇಶ್ವರ ನೀರಾವರಿ ಯೋಜನೆ ಕೂಡ ವಿಧಾನಸಭಾ ಚುನಾವಣೆಯ ದೊಡ್ಡ ವಿಚಾರವೇ ಆಗಿತ್ತು. ಈ ಯೋಜನೆಯ ಗುತ್ತಿಗೆ ನೀಡುವಲ್ಲಿಯೂ ಭ್ರಷ್ಟಾಚಾರ ನಡೆದಿದೆ ಎನ್ನುವುದು ಚುನಾವಣಾ ಬಾಂಡ್‌ ಮಾಹಿತಿಗಳು ಬಹಿರಂಗಗೊಂಡ ಬಳಿಕ ಬಹಿರಂಗವಾಯಿತು. ಕಲ್ಲೇಶ್ವರ ನೀರಾವರಿ ಯೋಜನೆಯ ಗುತ್ತಿಗೆ ಪಡೆದಿದ್ದ ಮೇಘ ಇಂಜಿನಿಯರಿಂಗ್‌ ಕಂಪನಿಯು ಬಿಆರ್‌ಎಸ್ ಪಕ್ಷಕ್ಕೆ ಚುನಾವಣಾ ಬಾಂಡ್‌ ಮೂಲಕ ₹195 ಕೋಟಿ ದೇಣಿಗೆ ನೀಡಿದೆ. ಇದೂ ಕೂಡ ಪಕ್ಷಕ್ಕೆ ಹೊಡೆತ ಬೀಳಬಹುದು ಎನ್ನಲಾಗಿದೆ.

ಪಕ್ಷದ ನಾಯಕರು ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಪಕ್ಷಾಂತರಗೊಳ್ಳುತ್ತಿರುವುದೂ ಚಂದ್ರಶೇಖರ ರಾವ್‌ ಅವರ ತಲೆನೋವಿಗೆ ಕಾರಣವಾಗಿದೆ (ಬಿಜೆಪಿಯ 15 ಅಭ್ಯರ್ಥಿಗಳಲ್ಲಿ 9 ಅಭ್ಯರ್ಥಿಗಳು ಬಿಆರ್‌ಎಸ್‌ನಿಂದ ಬಂದವರು). ಪಕ್ಷದ ಹಿರಿಯ ನಾಯಕರೇ ಪಕ್ಷ ತೊರೆಯುತ್ತಿದ್ದಾರೆ. ಇನ್ನಷ್ಟು ನಾಯಕರು ಪಕ್ಷ ತೊರೆಯದಂತೆ ನೋಡಿಕೊಳ್ಳಲು ಕೆಸಿಆರ್‌ ಮಗ, ಮಾಜಿ ಸಚಿವ ಕೆ.ಟಿ. ರಾಮ್‌ರಾವ್‌ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಜೊತೆಗೆ, ಲೋಕಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನೂ ಪಕ್ಷ ಬಿಡುಗಡೆ ಮಾಡಿದೆ. ಪಕ್ಷ ತೊರೆಯಬಹುದು ಎಂದು ಅನುಮಾನ ಇದ್ದ ನಾಯಕರಿಗೆ ಲೋಕಸಭೆಯ ಟಿಕೆಟ್‌ ನೀಡಲಾಗಿದೆ.

ಎಸ್‌ಸಿ, ಎಸ್‌ಟಿ, ಒಬಿಸಿ ಗುರಿ

ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ ಮೊದಲ ವಾರದಲ್ಲಿ ತೆಲಂಗಾಣದಲ್ಲಿ ಚುನಾವಣಾ ರ್‍ಯಾಲಿ ನಡೆಸಿದ್ದರು. ಬಿಆರ್‌ಎಸ್‌ ಹಾಗೂ ಕಾಂಗ್ರೆಸ್‌ ವಿರುದ್ಧ ಭಾಷಣ ಮಾಡಿದ್ದರು. ಇದೇ ವೇಳೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಕುರಿತೂ ಮಾತನಾಡಿದ್ದರು. ‘ನಮ್ಮ ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳ ಫಲಾನುಭವಿಗಳೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಜನರೇ ಆಗಿದ್ದಾರೆ. ಹೀಗೆ ಮಾಡುವುದೇ ಸಾಮಾಜಿಕ ನ್ಯಾಯದ ನಿಜವಾದ ಹೋರಾಟ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಕಾಂಗ್ರೆಸ್‌ ಹಾಗೂ ಬಿಆರ್‌ಎಸ್‌ ರಾಜಕೀಯ ಲಾಭಗಳಿಸುತ್ತವೆ. ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಲು ಇವರೇ ಯತ್ನಿಸಿದ್ದರು’ ಎಂದು ಮೋದಿ ಮಾತನಾಡಿದ್ದರು. ಈ ಮೂಲಕ ತೆಲಂಗಾಣದಲ್ಲಿ ಬಿಜೆಪಿಯು ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಮತ ಸೆಳೆಯುವ ಯತ್ನ ನಡೆಸುತ್ತಿದೆ ಎಂಬುದು ಸ್ಪಷ್ಟ.

ಇದಕ್ಕೆ ಕಾರಣವೂ ಇದೆ. ಮೊದಲನೆಯದು ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಮತಗಳ ಪ್ರಮಾಣ
ಶೇ 80ಕ್ಕಿಂತಲೂ ಅಧಿಕ. ರಾಜ್ಯದ ಒಟ್ಟು ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್‌ಸಿ ಹಾಗೂ ಎಸ್‌ಟಿ ಮೀಸಲು ಕ್ಷೇತ್ರಗಳ ಸಂಖ್ಯೆ 31. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 23 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಬಿಜೆಪಿಗೆ ಒಂದು ಕ್ಷೇತ್ರದಲ್ಲೂ ಗೆಲುವು ದೊರೆತಿಲ್ಲ. ಇದೇ ಕಾರಣಕ್ಕೆ ಪ್ರಧಾನಿ ಅವರು ಪದೇ ಪದೇ ಎಸ್‌ಸಿ, ಎಸ್‌ಟಿ ಜನರ ಕುರಿತು ರಾಜ್ಯದಲ್ಲಿ ಮಾತನಾಡುತ್ತಿದ್ದಾರೆ. ಈ ವರ್ಗದ ಜನರು ಬಿಆರ್‌ಎಸ್‌ನ ಮತಬ್ಯಾಂಕ್‌. ಇದೇ ಕ್ಷೇತ್ರಗಳಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಆರ್‌ಎಸ್‌ 25 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಆದರೆ, ಈಗ ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಾಬಲ್ಯ ಅಧಿಕಗೊಂಡಿದೆ, ಬಿಆರ್‌ಎಸ್‌ ಬಲ ಕುಂದಿದೆ ಮತ್ತು ಬಿಜೆಪಿಗೆ ಜಾಗವೇ ಇಲ್ಲದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT