ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
 ಆಳ –ಅಗಲ | ಬಡವರೂ ತೆರಿಗೆ ಕಟ್ಟುವರು
ಆಳ –ಅಗಲ | ಬಡವರೂ ತೆರಿಗೆ ಕಟ್ಟುವರು
Published 3 ಜುಲೈ 2023, 23:35 IST
Last Updated 3 ಜುಲೈ 2023, 23:35 IST
ಅಕ್ಷರ ಗಾತ್ರ

ಸರ್ಕಾರವು ನೀಡುವ ವಿವಿಧ ಕಲ್ಯಾಣ ಯೋಜನೆಗಳು ಮತ್ತು ಉಚಿತ ಯೋಜನೆಗಳ ಫಲಾನುಭವಿಗಳು ಯಾವುದೇ ತೆರಿಗೆ ಕಟ್ಟುವುದಿಲ್ಲ ಎಂಬ ವಾದ ಈಚೆಗೆ ಭಾರಿ ಚರ್ಚೆಗೆ ಕಾರಣವಾಗಿತ್ತು. ಜನ ಸಾಮಾನ್ಯರು ತೆರಿಗೆ ಕಟ್ಟುವುದಿಲ್ಲ. ಆದರೆ, ಅವರಿಗೇ ಎಲ್ಲಾ ಉಚಿತ ಯೋಜನೆಗಳನ್ನು ನೀಡಲಾಗುತ್ತದೆ ಎಂಬುದೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾದ ಮತ್ತೊಂದು ಅಂಶ.

ಈ ಚರ್ಚೆ ಎಲ್ಲಿಯವರೆಗೆ ಮುಟ್ಟಿತ್ತು ಎಂದರೆ, ‘ನಮ್ಮ ತೆರಿಗೆ ಹಣ ಫ್ರೀಬೀಗಳಿಗಲ್ಲ’ ಎಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಪ್ರಮಾಣದಲ್ಲೇ ನಡೆಸಲಾಯಿತು. ಈ ಘೋಷಣೆ ಇದ್ದ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣಗಳ ಪ್ರೊಫೈಲ್‌ ಚಿತ್ರ, ಡಿಸ್‌ಪ್ಲೇ ಚಿತ್ರಗಳಲ್ಲಿ ಹಂಚಿಕೊಳ್ಳಲಾಯಿತು. ಇಂತಹ ಅಭಿಯಾನದಲ್ಲಿ ಭಾಗಿಯಾದವರಲ್ಲಿ ಬಹುತೇಕ ಮಂದಿ ತಾವು ಆದಾಯ ತೆರಿಗೆ ಪಾವತಿದಾರರು ಎಂದು ಘೋಷಿಸಿಕೊಂಡಿದ್ದರು. ಆದರೆ, ಆದಾಯ ತೆರಿಗೆ ಒಂದೇ, ತೆರಿಗೆ ಅಲ್ಲ ಮತ್ತು ಅದು ದೇಶದ ತೆರಿಗೆ ಆದಾಯದಲ್ಲಿ ಅದರದ್ದೇ ಸಿಂಹಪಾಲೂ ಅಲ್ಲ. ಜಿಎಸ್‌ಟಿ, ಅಬಕಾರಿ, ಎಕ್ಸೈಸ್‌ ಸುಂಕಗಳೂ ದೊಡ್ಡ ಪ್ರಮಾಣದಲ್ಲೇ ಸಂಗ್ರಹವಾಗುತ್ತವೆ. ದೇಶದ ಪ್ರತಿಯೊಬ್ಬ ನಾಗರಿಕನು ಬಳಸುವ ಬಹುತೇಕ ಸರಕು ಮತ್ತು ಸೇವೆಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಟ್ಟಲೇಬೇಕು. ಹೀಗಾಗಿ ಪ್ರತಿಯೊಬ್ಬರೂ ತೆರಿಗೆದಾರರೇ.

ದೇಶದ ಬಡವ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬವೂ ಪ್ರತಿದಿನ ತಾನು ಬಳಸುವ ಸರಕು ಮತ್ತು ಸೇವೆಗಳ ಮೇಲೆ ದೊಡ್ಡ ಪ್ರಮಾಣದ ತೆರಿಗೆ ಕಟ್ಟುತ್ತದೆ. ಈ ತೆರಿಗೆ ಪರೋಕ್ಷ ಸ್ವರೂಪದ್ದು, ಹೀಗಾಗಿ ತೆರಿಗೆ ಕಟ್ಟಿದ್ದು ಗೊತ್ತಾಗುವುದಿಲ್ಲ. ಆದರೆ, ದಿನಸಿ ಮತ್ತು ಅತ್ಯಗತ್ಯದ ವಸ್ತುಗಳ ಖರೀದಿಯ ಬಿಲ್‌ ಗಮನಿಸಿದರೆ ಎಷ್ಟು ತೆರಿಗೆ (ಜಿಎಸ್‌ಟಿ) ಕಟ್ಟಲಾಗುತ್ತಿದೆ ಎಂಬುದು ತಿಳಿಯುತ್ತದೆ.

ಯಾವುದೇ ಕುಟುಂಬವೊಂದು ತಾನು ಪ್ರತಿದಿನ ಬಳಸುವ ಹಲವು ಸರಕುಗಳ ಮೇಲೆ ಶೇ 5ರಷ್ಟು ಜಿಎಸ್‌ಟಿ ಕಟ್ಟುತ್ತದೆ. ಅದು ಅಕ್ಕಿ ಇರಬಹುದು, ಗೋಧಿ ಇರಬಹುದು ಅಥವಾ ಹಾಲು ಇರಬಹುದು. ಅದಕ್ಕೆ ಪಾವತಿಸುವ ಮೊತ್ತದಲ್ಲಿ ಜಿಎಸ್‌ಟಿ ಇದ್ದೇ ಇರುತ್ತದೆ. ಜಿಎಸ್‌ಟಿ ಅನ್ವಯವಾಗವ ಸರಕುಗಳ ಪಟ್ಟಿ ಇಲ್ಲಿಗೇ ಮುಗಿಯುವುದಿಲ್ಲ. ಸಾಮಾನ್ಯ ಕುಟುಂಬವೊಂದರ ಸದಸ್ಯರು ಪ್ರತಿದಿನ ಬೆಳಿಗ್ಗೆ ಎದ್ದು, ರಾತ್ರಿ ಮಲಗುವವರೆಗೆ ಕನಿಷ್ಠ 25ರಿಂದ 30ರಷ್ಟು ಸರಕು ಮತ್ತು ಸೇವೆಗಳನ್ನು ಬಳಸುತ್ತದೆ. ಆ ಎಲ್ಲಾ ಸರಕು ಮತ್ತು ಸೇವೆಗಳಿಗೆ ತೆರಿಗೆ ಕಟ್ಟಲೇಬೇಕು. ಆ ಸರಕುಗಳನ್ನು ಅಂದೇ ಖರೀದಿಸಬಹುದು ಅಥವಾ ತಿಂಗಳಿಗೊಮ್ಮೆ ಖರೀದಿಸಬಹುದು. ಆದರೆ, ಹಾಗೆ ಖರೀದಿಸಿದ ಸರಕು ಮತ್ತು ಸೇವೆಗಳ ಮೇಲೆ ಆ ಕುಟುಂಬವು ದೊಡ್ಡ ಪ್ರಮಾಣದ ತೆರಿಗೆ ಪಾವತಿಸುತ್ತಲೇ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT