ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ಆಳ –ಅಗಲ: ಆರ್‌ಬಿಐ @90
ಆಳ –ಅಗಲ: ಆರ್‌ಬಿಐ @90
Published 10 ಏಪ್ರಿಲ್ 2024, 23:30 IST
Last Updated 10 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಈಗ 90ನೇ ವರ್ಷಕ್ಕೆ ಕಾಲಿಟ್ಟಿದೆ. ಆರ್‌ಬಿಐ ಅನ್ನು ಸ್ಥಾಪಿಸಿದ್ದು ಬ್ರಿಟಿಷರು, 1935ರಲ್ಲಿ. ಹಿಲ್ಟನ್‌ ಯಂಗ್‌ ಆಯೋಗದ ಶಿಫಾರಸಿನ ಆಧಾರದಲ್ಲಿ, ‘ಭಾರತೀಯ ರಿಸರ್ವ್‌ ಬ್ಯಾಂಕ್‌ ಕಾಯ್ದೆ 1934’ ಅನ್ನು ಜಾರಿಗೊಳಿಸಿ, ಈ ಬ್ಯಾಂಕ್‌ ಅನ್ನು ಸ್ಥಾಪಿಸಲಾಗಿತ್ತು. ಆರ್‌ಬಿಐ ತನ್ನ ಕಾರ್ಯಚಟುವಟಿಕೆಯನ್ನು 1935ರ ಏಪ್ರಿಲ್‌ 1ರಿಂದ ಆರಂಭಿಸಿತು. 

ಹೆಸರೇ ಸೂಚಿಸುವಂತೆ, ಹಣಕಾಸಿನ ಸ್ಥಿರತೆಯನ್ನು ಕಾಪಾಡುವುದಕ್ಕಾಗಿ ಒಂದಿಷ್ಟು ಹಣವನ್ನು ಕೂಡಿಟ್ಟುಕೊಳ್ಳುವುದು (ರಿಸರ್ವ್‌) ಈ ಬ್ಯಾಂಕ್‌ ಸ್ಥಾಪನೆಯ ಮೂಲ ಉದ್ದೇಶಗಳಲ್ಲಿ ಒಂದು. ನೋಟು ವಿತರಣೆ, ಸಾಲ, ಹಣಕಾಸಿನ ವ್ಯವಹಾರಗಳನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ವ್ಯವಸ್ಥೆಯೊಂದನ್ನು ರೂಪಿಸುವುದು ಮತ್ತು ಅದರ ಜಾರಿ– ಇವು ಇನ್ನಿತರ ಮೂಲ ಉದ್ದೇಶಗಳಾಗಿದ್ದವು. 89 ವರ್ಷದ ಬಳಿಕವೂ ಆರ್‌ಬಿಐನ ಈ ಮೂಲ ಉದ್ದೇಶಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆಧುನಿಕತೆಗೆ ತಕ್ಕಂತೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆಯಷ್ಟೇ.

ಬ್ರಿಟಿಷ್‌ ಸರ್ಕಾರದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಆರ್‌ಬಿಐ, ಸ್ವಾತಂತ್ರ್ಯಾನಂತರ ಜನರ ಹಿತಾಸಕ್ತಿಗಾಗಿ ಕೆಲಸ ನಿರ್ವಹಿಸುತ್ತಿದೆ. ಖಾಸಗಿ ಷೇರುದಾರರ ಬ್ಯಾಂಕ್‌ ಆಗಿದ್ದ ಆರ್‌ಬಿಐ, 1949ರಲ್ಲಿ ರಾಷ್ಟ್ರೀಕರಣಗೊಂಡಿತು. ಕಾಲ ಕಾಲಕ್ಕೆ ಹಣಕಾಸಿನ ನೀತಿಗಳನ್ನು ರೂಪಿಸುತ್ತಾ, ಬ್ಯಾಂಕ್‌ಗಳ ಬ್ಯಾಂಕ್‌ ಆಗಿ, ದೇಶದ ಇಡೀ ಅರ್ಥ ವ್ಯವಸ್ಥೆಯ ಕೇಂದ್ರವಾಗಿ, ಆರ್ಥಿಕತೆಯ ಆಧಾರವಾಗಿಯೂ ಆರ್‌ಬಿಐ ಕೆಲಸ ನಿರ್ವಹಿಸುತ್ತಿದೆ.

ಸರ್‌ ಒಸ್‌ಬೋರ್ನ್‌ ಸ್ಮಿತ್‌ ಅವರು ಆರ್‌ಬಿಐನ ಮೊದಲ ಗವರ್ನರ್. ಅಲ್ಲಿಂದ ಇಲ್ಲಿಯವರೆಗೆ ಸುಮಾರು 24 ಗವರ್ನರ್‌ಗಳು ಕಾರ್ಯನಿರ್ವಹಿಸಿದ್ದಾರೆ. ಶಕ್ತಿಕಾಂತ್‌ ದಾಸ್‌ ಅವರು ಆರ್‌ಬಿಐನ 25ನೇ ಗವರ್ನರ್‌. ಆರ್‌ಬಿಐನ ಕಾರ್ಯಗಳನ್ನು ನಿರ್ಧರಿಸುವುದು ಅದರ ನಿರ್ದೇಶಕರ ಮಂಡಳಿ. ಗವರ್ನರ್‌ ಸೇರಿದಂತೆ ನಿರ್ದೇಶಕರ ಮಂಡಳಿಯನ್ನು ನೇಮಿಸುವುದು ಕೇಂದ್ರ ಸರ್ಕಾರ. ಬ್ರಿಟಿಷ್‌ ಸರ್ಕಾರದ ವ್ಯವಹಾರಗಳಿಗಾಗಿಯೇ ಸೀಮಿತವಾಗಿದ್ದ ಆರ್‌ಬಿಐ, ಬರುಬರುತ್ತಾ ತನ್ನ ಕಾರ್ಯವ್ಯಾಪ್ತಿಯನ್ನು ಬದಲಾಯಿಸಿಕೊಂಡಿದೆ; ವಿಸ್ತರಿಸಿಕೊಂಡಿದೆ. ಸ್ವಾಯತ್ತ ಸಂಸ್ಥೆಯಾಗಿ ಜನರ ಏಳಿಗೆಗಾಗಿ ಕೆಲಸ ಮಾಡುತ್ತಾ ಬಂದಿದೆ. ಕೇಂದ್ರ ಸರ್ಕಾರದಿಂದಲೇ ನೇಮಕವಾದರೂ, ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಬಹುದಾದಷ್ಟು ಸ್ವಾಯತ್ತೆಯನ್ನು ಆರ್‌ಬಿಐ ಈಗಲೂ ಉಳಿಸಿಕೊಂಡಿದೆಯೇ ಎನ್ನುವುದು ಚರ್ಚಾ ವಿಷಯ. ಬ್ರಿಟಿಷರ ಕೈಯಲ್ಲಿ 12 ವರ್ಷ ಆರ್‌ಬಿಐ ಕಾರ್ಯನಿರ್ವಹಿಸಿದೆ. ಸ್ವಾತಂತ್ರ್ಯಾನಂತರ ಹಲವು ಪಕ್ಷಗಳ ಸರ್ಕಾರಗಳ ಅಧಿಕಾರಾವಧಿಯಲ್ಲಿ ಇದು ಕಾರ್ಯ ನಡೆಸಿದೆ.

1938ರಲ್ಲಿ ಮೊದಲ ಬಾರಿಗೆ ಆರ್‌ಬಿಐ ನೋಟುಗಳನ್ನು ವಿತರಿಸಿತು. 1940ರಲ್ಲಿ ಮೀಸಲು ಚಿನ್ನದ ನಿಧಿ ಹೊರತಾದ ನೋಟು ಮುದ್ರಣವನ್ನು ಆರ್‌ಬಿಐ ನಡೆಸಿತು. ಇದು ಬ್ರಿಟಿಷ್ ಆಡಳಿತದ ಅವಧಿಯಲ್ಲಾದ ಪ್ರಮುಖ ಬೆಳವಣಿಗೆ. ಸ್ವಾತಂತ್ರ್ಯಾನಂತರ, ಹಲವು ಸುಧಾರಣೆಗಳು, ಹಲವು ನೀತಿಗಳು, ಕಾನೂನುಗಳನ್ನು ತರಲಾಯಿತು. ಆರ್‌ಬಿಐನ ಕಾರ್ಯವು ವಿಸ್ತರಣೆಗೊಂಡಿತು ಮತ್ತು ಹೆಚ್ಚು ಹೆಚ್ಚು ನಿರ್ದಿಷ್ಟವಾಯಿತು. 1949ರ ಬ್ಯಾಂಕಿಂಗ್‌ ಕಂಪನಿ ಕಾಯ್ದೆ ಜಾರಿಯು ಆರ್‌ಬಿಐಗೆ ಶಾಸನಬದ್ಧ ಅಧಿಕಾರ ನೀಡಿತು.

ಪಂಚವಾರ್ಷಿಕ ಯೋಜನೆಗಳ ಘೋಷಣೆಯಾಯಿತು. ಭಾರತೀಯ ಸ್ಟೇಟ್‌ ಬ್ಯಾಂಕ್‌ ಸ್ಥಾಪನೆಯು (1955) ಈ ಕಾಲಘಟ್ಟದ ಪ್ರಮುಖ ಬೆಳವಣಿಗೆ. ಬ್ಯಾಂಕ್‌ಗಳು ನಗರ ಕೇಂದ್ರಿತವಾಗದೆ, ಗ್ರಾಮೀಣ ಭಾಗಕ್ಕೂ ಎಟುಕುವಂತಾಯಿತು. ಆ ಮೂಲಕ ಬ್ಯಾಂಕಿಂಗ್‌ ವ್ಯವಹಾರಗಳಲ್ಲಿ ಜನರ ಪಾಲ್ಗೊಳ್ಳುವಿಕೆ ಅಧಿಕವಾಯಿತು. ನೋಟು ಮುದ್ರಣ ಮಾಡಬೇಕು ಅಂತಾದರೆ, ಕನಿಷ್ಠ ಶೇ 40ರಷ್ಟು ಚಿನ್ನ ಮೀಸಲು ಇರಬೇಕಿತ್ತು. ಎರಡನೇ ಪಂಚ ವಾರ್ಷಿಕ ಯೋಜನೆ ಕಾಲಘಟ್ಟದಲ್ಲಿ ಮೀಸಲು ನಿಧಿಯನ್ನು ಸಡಿಲಿಸಲಾಯಿತು. 1957ರಲ್ಲಿ ಈ ಮೀಸಲು ಪ್ರಮಾಣವನ್ನು ಮತ್ತಷ್ಟು ಸಡಿಲಿಸಲಾಯಿತು. 1959ರ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಅಧೀನ ಬ್ಯಾಂಕ್‌ಗಳು) ಕಾಯ್ದೆಯು ಈ ಕಾಲಘಟ್ಟದ ಮುಖ್ಯ ಬೆಳವಣಿಗೆ. ಪ್ರಾದೇಶಿಕವಾಗಿ ಇದ್ದ ಹಲವು ಬ್ಯಾಂಕ್‌ಗಳು ಸ್ಟೇಟ್‌ ಬ್ಯಾಂಕ್‌ ಅಧೀನಕ್ಕೆ ಬಂದವು.

1960ರಿಂದ 1971ರ ಅವಧಿಯಲ್ಲಿ ಆರ್‌ಬಿಐನಲ್ಲಿ ಹಲವು ಸಾಂಸ್ಥಿಕ ಬದಲಾವಣೆಗಳಾದವು. ಹಲವು ನೀತಿಗಳು ಜಾರಿಯಾದವು. ಈ ನೀತಿಗಳು ಆರ್‌ಬಿಐನ ಕಾರ್ಯ ವ್ಯಾಪ್ತಿಯನ್ನು ಹೆಚ್ಚಿಸಿತಲ್ಲದೆ, ಹೆಚ್ಚಿನ ಅಧಿಕಾರವನ್ನೂ ತಂದುಕೊಟ್ಟವು. 1969ರಲ್ಲಿ 14 ವಾಣಿಜ್ಯ ಬ್ಯಾಂಕ್‌ಗಳ ರಾಷ್ಟ್ರೀಕರಣವೂ ಅಂದಿನ ಕೇಂದ್ರ ಸರ್ಕಾರದ ಪ್ರಮುಖ ನಿರ್ಧಾರವಾಗಿತ್ತು. ಇದು ಕೂಡ ಆರ್‌ಬಿಐನ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಿತು. ಬ್ಯಾಂಕ್‌ಗಳು ಹೆಚ್ಚು ಹೆಚ್ಚು ಜನಸ್ನೇಹಿಯಾದವು. 1974ರಲ್ಲಿ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆಯು ಜಾರಿಗೊಂಡಿತು. ವಿದೇಶಿ ವಿನಿಮಯ ನಿಯಂತ್ರಣದ ಹೊಣೆಯನ್ನು ಆರ್‌ಬಿಐಗೆ ನೀಡಲಾಯಿತು.

ಗ್ರಾಮೀಣ ಬ್ಯಾಂಕ್‌ಗಳನ್ನು 1975ರಲ್ಲಿ ಸ್ಥಾಪಿಸಲಾಯಿತು. 20 ಅಂಶದ ಕಾರ್ಯಕ್ರಮದ ಅಡಿಯಲ್ಲಿ ಈ ಬೆಳವಣಿಗೆ ನಡೆಯಿತು. ಈ ಮೂಲಕ ಅತ್ಯಂತ ಕುಗ್ರಾಮದ ಜನರು ಕೂಡ ಬ್ಯಾಂಕಿಂಗ್‌ ವ್ಯವಸ್ಥೆಯ ಭಾಗವಾದರು. 1980ರಲ್ಲಿ ಆರು ಖಾಸಗಿ ವಲಯದ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. 1968ರಿಂದ 1985ರ ಕಾಲಘಟ್ಟವನ್ನು ಬ್ಯಾಂಕ್‌ಗಳ ರಾಷ್ಟ್ರೀಕರಣ ಯುಗ ಹಾಗೂ ಬ್ಯಾಂಕ್‌ ಸೇವೆಯ ವಿಸ್ತಾರದ ಯುಗ ಎಂದೇ ಹೇಳಬೇಕು.

1991 ಭಾರತದ ಮಟ್ಟಿಗೆ ಪ್ರಮುಖವಾದ ಘಟ್ಟ. ಭಾರತವು ಜಾಗತೀಕರಣಗೊಂಡಿತು. ಭಾರತದ ಬ್ಯಾಂಕ್‌ಗಳೂ ಜಾಗತೀಕರಣಗೊಳ್ಳಬೇಕಾಯಿತು. ಆರ್‌ಬಿಐನ ಕಾರ್ಯವ್ಯಾಪ್ತಿ ಮತ್ತಷ್ಟು ಹೆಚ್ಚಿತು. ಬೇರೆ ದೇಶಗಳೊಟ್ಟಿಗೆ ಸ್ಪರ್ಧಿಸುವ ಜೊತೆಯಲ್ಲಿಯೇ, ಆಧುನಿಕರಣಗೊಳ್ಳುತ್ತಿದ್ದ ಜನರಿಗೆ ಅನುಕೂಲವಾಗುವಂಥ ನೀತಿಗಳನ್ನು ಆರ್‌ಬಿಐ ರೂಪಿಸಬೇಕಿತ್ತು. 1988ರಲ್ಲಿಯೇ ಸೆಬಿಯನ್ನು ಸ್ಥಾಪಿಸಲಾಗಿತ್ತು. 1991ರನಂತರ ಇದಕ್ಕೆ ಹೆಚ್ಚಿನ ಅಧಿಕಾರ ನೀಡಲಾಯಿತು. ಬ್ಯಾಂಕ್‌ಗಳು ಆಧುನೀಕರಣಕ್ಕೆ ತೆರೆದುಕೊಂಡವು. ಬ್ಯಾಂಕ್‌ಗಳು ಡಿಜಿಟಲೀಕರಣಗೊಂಡವು. 1999ರಲ್ಲಿ ಡೆಬಿಟ್‌ ಕಾರ್ಡ್‌ಅನ್ನು ಬ್ಯಾಂಕ್‌ಗಳು ವಿತರಿಸಲು ಆರಂಭಿಸಿದವು.

ಬ್ಯಾಂಕ್‌ಗಳನ್ನು ಮಾತ್ರವಲ್ಲ, ದೇಶದ ಆರ್ಥಿಕತೆಯನ್ನು ಪ್ರಭಾವಿಸುವ ಕೇಂದ್ರ ಸರ್ಕಾರದ ನೀತಿ ರೂಪಣೆಯಲ್ಲಿ ಆರ್‌ಬಿಐ ಮಹತ್ವದ ಪಾತ್ರ ವಹಿಸುತ್ತದೆ. ಇಂತಹ ಅಧಿಕಾರ ವ್ಯಾಪ್ತಿಯ ಕಾರಣದಿಂದಲೇ ಆರ್‌ಬಿಐ, ಕೇಂದ್ರ ಸರ್ಕಾರದೊಂದಿಗೆ ಹಲವು ಬಾರಿ ತೆರೆಮರೆಯ ಜಟಾಪಟಿ ನಡೆಸಿದ್ದೂ ಇದೆ. ಹೀಗೆ ಜನರ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವ ಆರ್‌ಬಿಐ ಈಗ 90ರ ವಸಂತಕ್ಕೆ ಕಾಲಿರಿಸಿದೆ. 

ನೋಟು ರದ್ದತಿ, ಚುನಾವಣಾ ಬಾಂಡ್: ಆರ್‌ಬಿಐನ ಆಕ್ಷೇಪ ನಿರ್ಲಕ್ಷಿಸಿದ್ದ ಸರ್ಕಾರ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಮತ್ತು ಅವುಗಳನ್ನು ದುರ್ಬಲಗೊಳಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಆರ್‌ಬಿಐ ಅನ್ನು ಸಹ ಈ ರೀತಿ ದುರ್ಬಲಗೊಳಿಸಲು ಯತ್ನಿಸಿದೆ ಎಂಬುದು ವಿರೋಧ ಪಕ್ಷಗಳ ದೊಡ್ಡ ಆರೋಪ. ಈ ಆರೋಪವನ್ನು ದೃಢಪಡಿಸುವಂತಹ ಹಲವು ದಾಖಲೆಗಳು ಈಗಾಗಲೇ ಬಹಿರಂಗವಾಗಿವೆ. ಸರ್ಕಾರದ ಹಲವು ನೀತಿಗಳಿಗೆ ಆರ್‌ಬಿಐ ಸಲ್ಲಿಸಿದ ಆಕ್ಷೇಪಗಳನ್ನು ಸರ್ಕಾರವು ಸಾರಾಸಗಟಾಗಿ ಕಡೆಗಣಿಸಿದೆ ಎಂಬುದನ್ನು ಈ ದಾಖಲೆಗಳು ಹೇಳುತ್ತವೆ. ನೋಟುರದ್ದತಿ ಮತ್ತು ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ಆರ್‌ಬಿಐ ಸಲ್ಲಿಸಿದ್ದ ಆಕ್ಷೇಪಗಳು ಇದಕ್ಕೆ ಸ್ಪಷ್ಟ ಉದಾಹರಣೆ.

2016ರಲ್ಲಿ ಕೇಂದ್ರ ಸರ್ಕಾರವು ₹500 ಮತ್ತು ₹1,000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಪಡಿಸಿತ್ತು. ನೋಟುರದ್ದತಿ ಎಂದು ಕರೆಯಲಾದ ಈ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವಾಲಯವು ಆರ್‌ಬಿಐನ ಸಲಹೆಯನ್ನು ಕೇಳಿತ್ತು. ಈ ಯೋಜನೆ ಕಾರ್ಯಸಾಧುವಲ್ಲ ಎಂದು ಆರ್‌ಬಿಐ ಟಿಪ್ಪಣಿ ನೀಡಿತ್ತು. ಆದರೆ ಆ ಟಿಪ್ಪಣಿಯನ್ನು ಕಡೆಗಣಿಸಿ ನೋಟುರದ್ದತಿಯನ್ನು ಜಾರಿಗೆ ತರಲಾಗಿತ್ತು. ಆರ್‌ಬಿಐನ ಆಕ್ಷೇಪವನ್ನು ಕೇಂದ್ರ ಸರ್ಕಾರವು ಕಡೆಗಣಿಸಿತ್ತು ಎಂದು ಅಂದಿನ ಆರ್‌ಬಿಐ ಗವರ್ನರ್ ಆಗಿದ್ದ ರಘುರಾಮ್‌ ರಾಜನ್‌ ಅವರು ಸಾರ್ವಜನಿಕವಾಗಿಯೇ ಹಲವು ಬಾರಿ ಹೇಳಿದ್ದಾರೆ.

ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ಆರ್‌ಬಿಐ ನೀಡಿದ್ದ ಆಕ್ಷೇಪವನ್ನು ಕೇಂದ್ರ ಸರ್ಕಾರವು ಇದೇ ರೀತಿ ನಿರ್ಲಕ್ಷಿಸಿತ್ತು. ಚುನಾವಣಾ ಬಾಂಡ್‌ ಸ್ವರೂಪದ ‘ಪ್ರಾಮಿಸರಿ ನೋಟ್‌’ಗಳನ್ನು ನೀಡುವ ಅಧಿಕಾರ ಆರ್‌ಬಿಐಗೆ ಮಾತ್ರ ಇತ್ತು. ಅಂತಹ ಅಧಿಕಾರವನ್ನು ಎಸ್‌ಬಿಐಗೆ ನೀಡಲು ಚುನಾವಣಾ ಬಾಂಡ್‌ ಯೋಜನೆಯಲ್ಲಿ ಅವಕಾಶವಿತ್ತು. ಎಸ್‌ಬಿಐ, ಆರ್‌ಬಿಐನ ಅಧೀನ ಬ್ಯಾಂಕ್‌. ಈ ಬಗ್ಗೆ ಮತ್ತು ಚುನಾವಣಾ ಬಾಂಡ್‌ನಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿದೆ ಎಂಬುದರ ಬಗ್ಗೆ ಆರ್‌ಬಿಐ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಸಂಬಂಧ ಆರ್‌ಬಿಐ, ಕೇಂದ್ರ ಹಣಕಾಸು ಸಚಿವಾಲಯಕ್ಕೆ ಸುದೀರ್ಘ ಪತ್ರ ಬರೆದಿತ್ತು.

‘ರಾಜಕೀಯ ಪಕ್ಷಗಳಿಗೆ ನೀಡಲಾಗುವ ದೇಣಿಗೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಚುನಾವಣಾ ಬಾಂಡ್‌ ವ್ಯವಸ್ಥೆ ಅಸ್ತಿತ್ವಕ್ಕೆ ಬರಲಿದೆ ಎನ್ನಲಾಗಿತ್ತು. ಆದರೆ, ಯಾರು ಈ ಬಾಂಡ್ ಖರೀದಿಸುತ್ತಾರೆ ಮತ್ತು ಯಾರು ಇದನ್ನು ರಾಜಕೀಯ ಪಕ್ಷಗಳಿಗೆ ನೀಡುತ್ತಾರೆ ಎಂಬುದರ ದಾಖಲೆ ಇರುವುದಿಲ್ಲ. ಈ ದಾಖಲೆ ಇಲ್ಲದಿರುವ ಕಾರಣ, ಈ ಯೋಜನೆಯ ಮೂಲ ಉದ್ದೇಶವನ್ನು ಸಾಧಿಸಲು ಸಾಧ್ಯವೇ ಇಲ್ಲ. ಬಾಂಡ್‌ ಖರೀದಿಸುವವರು ‘ನಿಮ್ಮ ಗ್ರಾಹಕರನ್ನು ತಿಳಿಯಿರಿ (ಕೆವೈಸಿ)’ ದಾಖಲೆಗಳನ್ನು ಸಲ್ಲಿಸಬೇಕು. ಅದರಲ್ಲಿ ಅವರ ಗುರುತು ಇರುತ್ತದೆ. ಆದರೆ, ಬಾಂಡ್‌ ಅನ್ನು ಪಡೆಯುವವರ ಗುರುತು ಇರುವುದಿಲ್ಲ. ಇದು ಹಣದ ಅಕ್ರಮ ವರ್ಗಾವಣೆಗೆ ದಾರಿ ಮಾಡಿಕೊಡುತ್ತದೆ. ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಉದ್ದೇಶದಿಂದ ಮಾತ್ರ ಈ ಚುನಾವಣಾ ಬಾಂಡ್‌ಗಳನ್ನು ಖರೀದಿಸಲಾಗುತ್ತದೆ. ಈಗ ಚಾಲ್ತಿಯಲ್ಲಿರುವ ಚೆಕ್‌, ಡಿಮ್ಯಾಂಡ್‌ ಡ್ರಾಫ್ಟ್‌–ಡಿ.ಡಿ, ಆನ್‌ಲೈನ್‌ ಬ್ಯಾಂಕಿಂಗ್‌, ಮೊಬೈಲ್ ಬ್ಯಾಂಕಿಂಗ್ ಮತ್ತು ಇತರ ಡಿಜಿಟಲ್ ಪಾವತಿ ವ್ಯವಸ್ಥೆಗಳ ಮೂಲಕವೇ ದೇಣಿಗೆ ನೀಡಲು ಅವಕಾಶವಿದೆ. ಇಂತಹ ವ್ಯವಸ್ಥೆಗಳು ಇರುವಾಗಲೇ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಉದ್ದೇಶದಿಂದ ವಿಶೇಷ ಮತ್ತು ಪ್ರತ್ಯೇಕ ವ್ಯವಸ್ಥೆಯನ್ನು ಜಾರಿಗೆ ತರುವ ಅವಶ್ಯಕತೆ ಇಲ್ಲ’ ಎಂದು ಆರ್‌ಬಿಐ ಆಕ್ಷೇಪ ಸಹಿತ ಸಲಹೆ ನೀಡಿತ್ತು.

ಆರ್‌ಬಿಐನ ಆಕ್ಷೇಪವನ್ನು ತಿರಸ್ಕರಿಸಿ ಅಂದಿನ ಕೇಂದ್ರ ಸರ್ಕಾರದ ರೆವಿನ್ಯೂ ಕಾರ್ಯದರ್ಶಿಯಾಗಿದ್ದ ಹಸಮುಖ್ ಆಧಿಯಾ ಅವರು ಹಣಕಾಸು ಸಚಿವಾಲಯದ ಕಾರ್ಯದರ್ಶಿಗೆ, ‘ದೇಣಿಗೆ ನೀಡುವವರ ವಿವರವನ್ನು ಗೋಪ್ಯವಾಗಿ ಇಡುವುದರ ಹಿಂದಿನ ಉದ್ದೇಶವನ್ನು ಆರ್‌ಬಿಐ ಅರ್ಥಮಾಡಿಕೊಂಡಿಲ್ಲ. ಅಲ್ಲದೆ, ಆರ್‌ಬಿಐ ತಡವಾಗಿ ಸಲಹೆ ನೀಡಿದೆ. ಈಗಾಗಲೇ ಹಣಕಾಸು ಮಸೂದೆಯ ಮುದ್ರಣ ಮುಗಿದಿದೆ. ಹೀಗಾಗಿ, ಯೋಜನೆಯನ್ನು ಜಾರಿಗೆ ತರೋಣ’ ಎಂದು ಪತ್ರ 2017ರ ಜನವರಿ 30ರಂದು ಬರೆದರು. ರಿಸರ್ವ್‌ ಬ್ಯಾಂಕ್‌ನ ಅಧಿಕಾರಗಳನ್ನು ಮೊಟಕುಗೊಳಿಸುವ ಸ್ವರೂಪದ ನಿಯಮಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತು.

ಆರ್‌ಬಿಐನ ಅಧಿಕಾರಗಳನ್ನು ಮೊಟಕುಗೊಳಿಸುವ ಕೇಂದ್ರ ಸರ್ಕಾರದ ಯತ್ನಗಳ ಬಗ್ಗೆ ಆರ್‌ಬಿಐನ ಅಂದಿನ ಗವರ್ನರ್ ಉರ್ಜಿತ್ ಪಟೇಲ್‌ ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಬಂಧ ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಜತೆಗೆ ಮಾತುಕತೆಯೂ ನಡೆದಿತ್ತು. ಆದರೆ ಸರ್ಕಾರವು ಪಟ್ಟು ಬಿಡದ ಕಾರಣ ಆ ಯೋಜನೆಗಳು ಜಾರಿಗೆ ಬಂದಿದ್ದವು. ಸರ್ಕಾರದೊಂದಿಗೆ ತೀವ್ರ ಭಿನ್ನಾಭಿಪ್ರಾಯ ಮೂಡಿದ್ದರಿಂದಲೇ ಉರ್ಜಿತ್ ಪಟೇಲ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದು ಆ ಅವಧಿಯಲ್ಲಿ ಹಣಕಾಸು ಕಾರ್ಯದರ್ಶಿಯಾಗಿದ್ದ ಸುಭಾಷ್‌ಚಂದ್ರ ಗರ್ಗ್‌ ತಮ್ಮ ‘ವಿ ಆಲ್ಸೊ ಮೇಕ್‌ ಪಾಲಿಸಿ’ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಬರ್ಮಾ, ಪಾಕಿಸ್ತಾನಕ್ಕೂ ಕೇಂದ್ರೀಯ ಬ್ಯಾಂಕ್ ಆಗಿದ್ದ ಆರ್‌ಬಿಐ

1937ರಲ್ಲಿ ಮ್ಯಾನ್ಮಾರ್‌ (ಅಂದಿನ ಬರ್ಮಾ) ಭಾರತದಿಂದ ಬೇರ್ಪಟಿತು. ಆದರೆ, ಜಪಾನಿಗರು ಮ್ಯಾನ್ಮಾರ್‌ ಅನ್ನು ವಶಪಡಿಸಿಕೊಳ್ಳುವ ವರೆಗೂ (1947) ಭಾರತೀಯ ರಿಸರ್ವ್‌ ಬ್ಯಾಂಕ್‌ ಮ್ಯಾನ್ಮಾರ್‌ನ ಕೇಂದ್ರೀಯ ಬ್ಯಾಂಕ್‌ ಆಗಿ ಕಾರ್ಯನಿರ್ವಹಿಸಿತ್ತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು, ಪಾಕಿಸ್ತಾನವು ರಚನೆಗೊಂಡ ಬಳಿಕವೂ, ಭಾರತೀಯ ರಿಸರ್ವ್‌ ಬ್ಯಾಂಕ್‌ ಪಾಕಿಸ್ತಾನಕ್ಕೂ ಕೇಂದ್ರೀಯ ಬ್ಯಾಂಕ್‌ ಆಗಿತ್ತು. 1948ರಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಪಾಕಿಸ್ತಾನ ಸ್ಥಾಪನೆಗೊಂಡಿತು. ಈ ತರುವಾಯ, ಭಾರತೀಯ ರಿಸರ್ವ್‌ ಬ್ಯಾಂಕ್‌ ಭಾರತಕ್ಕಷ್ಟೇ ಕೇಂದ್ರೀಯ ಬ್ಯಾಂಕ್‌ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT