ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ಆಳ –ಅಗಲ: ಕುದಿ ಬಾಣಲೆಯಲ್ಲಿ ಭೂಮಿ
ಆಳ –ಅಗಲ: ಕುದಿ ಬಾಣಲೆಯಲ್ಲಿ ಭೂಮಿ
ಫಾಲೋ ಮಾಡಿ
Published 17 ಡಿಸೆಂಬರ್ 2023, 23:30 IST
Last Updated 17 ಡಿಸೆಂಬರ್ 2023, 23:30 IST
Comments

ಭೂಮಿಯ ಇತಿಹಾಸದಲ್ಲಿಯೇ ಈ ವರ್ಷ ಅಂದರೆ, 2023 ಗರಿಷ್ಠ ತಾಪಮಾನದ ವರ್ಷವಾಗಬಹುದು ಎಂದು ವಿಶ್ವ ಹವಾಮಾನ ಸಂಘಟನೆಯು (ಡಬ್ಲ್ಯುಎಂಒ) ಹೇಳಿದೆ. ಈ ವರ್ಷದ ಜೂನ್‌, ಜುಲೈ, ಆಗಸ್ಟ್‌ ಮತ್ತು ನವೆಂಬರ್‌ ಈವರೆಗಿನ ಅತಿ ಹೆಚ್ಚು ತಾಪಮಾನದ ತಿಂಗಳುಗಳು ಎಂದು ದಾಖಲಾಗಿವೆ. ಭೂಮಿಯ ವಿವಿಧ ಭಾಗಗಳಲ್ಲಿ ಉಂಟಾದ ಕಾಳ್ಗಿಚ್ಚು ಅದಕ್ಕೆ ಒಂದು ಮುಖ್ಯವಾದ ಕಾರಣ ಎಂದೂ ಹೇಳಲಾಗಿದೆ. 

ಜೂನ್‌ ಆರಂಭದಲ್ಲಿ ಪೂರ್ವ ಕೆನಡಾದಲ್ಲಿ ಹಬ್ಬಿದ ಕಾಳ್ಗಿಚ್ಚು ಉತ್ತರ ಅಮೆರಿಕದ ಮೇಲೆ ದಟ್ಟ ಹೊಗೆಯ ಪದರವನ್ನೇ ಸೃಷ್ಟಿಸಿತ್ತು. ಆಗಸವು ಕಿತ್ತಳೆ ಬಣ್ಣ ತಳೆಯಿತು. ಇಡೀ ಪ್ರದೇಶದ ವಾಯುಗುಣಮಟ್ಟವು ಅಪಾಯಕಾರಿ ಹಂತಕ್ಕೆ ಕುಸಿದುದರ ಕುರಿತು ಭಾರಿ ಕಳವಳ ವ್ಯಕ್ತವಾಯಿತು. ಕೆನಡಾದಲ್ಲಿ ಕಾಳ್ಗಿಚ್ಚು ಅಂತ್ಯವಿಲ್ಲದಂತೆ ಉರಿಯುತ್ತಲೇ ಹೋಯಿತು.  

ಈ ವರ್ಷದ ನವೆಂಬರ್‌ ವರೆಗೆ, 4.5 ಕೋಟಿ ಎಕರೆ ಅರಣ್ಯವು ಈ ದೇಶದಲ್ಲಿ ಕಾಳ್ಗಿಚ್ಚಿನಿಂದಾಗಿ ಸುಟ್ಟು ಕರಕಲಾಗಿದೆ. ಕೆನಡಾದ ಒಟ್ಟು ಅರಣ್ಯದಲ್ಲಿ ಶೇ 5ರಷ್ಟು ಹೀಗೆ ಬೆಂಕಿಗೆ ತುತ್ತಾಯಿತು. ಇದರಿಂದ ಬಿಡುಗಡೆ ಆದ ಇಂಗಾಲವು 40 ಕೋಟಿ ಟನ್‌ಗೂ ಹೆಚ್ಚು ಎಂದು ಲೆಕ್ಕಹಾಕಲಾಗಿದೆ. ಈ ಹಿಂದೆ 2014ರಲ್ಲಿ ಈ ದೇಶದಲ್ಲಿ ಕಾಳ್ಗಿಚ್ಚಿನ ಬೆಂಕಿಯಿಂದ 13.8 ಟನ್‌ ಇಂಗಾಲ ಬಿಡುಗಡೆ ಆಗಿತ್ತು. ಈವರೆಗಿನ ಗರಿಷ್ಠ ಮೊತ್ತ ಇದೇ ಆಗಿತ್ತು. 

ಹವಾಮಾನ ಬದಲಾವಣೆಯೇ ಪೂರ್ವ ಕೆನಡಾದಲ್ಲಿ ಕಾಡ್ಗಿಚ್ಚಿಗೆ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಮೇಯಿಂದ ಜುಲೈ ನಡುವಲ್ಲಿ ಸಾಮಾನ್ಯಕ್ಕಿಂತ ಎರಡು ಪಟ್ಟಿಗೂ ಹೆಚ್ಚು ಕಾಳ್ಗಿಚ್ಚು ಉಂಟಾಗಿದೆ. ಇತರ ಪ್ರದೇಶಗಳು ಕೂಡ ಇಂತಹುದೇ ಸ್ಥಿತಿಯನ್ನು ಎದುರಿಸಿವೆ. 

ವರ್ಷವಿಡೀ ಅನುಭವಕ್ಕೆ ಬಂದ ಅತಿಯಾದ ತಾಪಮಾನವು ಇನ್ನೂ ಮುಂದುವರಿದಿದೆ ಮತ್ತು ಬಿಸಿ ಕಡಿಮೆಯಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಈ ವರ್ಷದ ನವೆಂಬರ್‌ ತಿಂಗಳು ಗರಿಷ್ಠ ತಾಪಮಾನವನ್ನು ದಾಖಲಿಸುವುದರ ಜೊತೆಗೆ, ಭೂ ಮೇಲ್ಮೈಯ ಅತಿ ಹೆಚ್ಚು ತಾಪಮಾನದ ದಿನಗಳು ಎಂದು ನವೆಂಬರ್‌ 17 ಮತ್ತು 18 ದಾಖಲೆ ಸೇರಿವೆ. ಕೈಗಾರಿಕಾ ಕ್ರಾಂತಿಯ ಹಿಂದಿನ ದಿನಗಳಿಗೆ ಹೋಲಿಸಿದರೆ ಈ ಎರಡೂ ದಿನಗಳ ತಾಪಮಾನದಲ್ಲಿ ಕ್ರಮವಾಗಿ 2.07 ಡಿಗ್ರಿ ಸೆಲ್ಸಿಯಸ್‌ ಮತ್ತು 2.06 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆ ಕಂಡಿತ್ತು. 

ಕೈಗಾರಿಕಾ ಕ್ರಾಂತಿಯ ದಿನಗಳೇ ಮಾನದಂಡ

ತಾಪಮಾನಕ್ಕೆ ಸಂಬಂಧಿಸಿ ಸಂಗ್ರಹಿಸಲಾದ ಈ ವರ್ಷದ ಅಕ್ಟೋಬರ್‌ವರೆಗಿನ ದತ್ತಾಂಶ ಪ್ರಕಾರ, ಕೈಗಾರಿಕಾ ಕ್ರಾಂತಿಯ ದಿನಗಳಿಗೆ ಹೋಲಿಸಿದರೆ ಭೂಮಿಯ ತಾಪವು 1.4 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆ ಕಂಡಿದೆ. ಇದು ಈವರೆಗಿನ ಗರಿಷ್ಠ ಏರಿಕೆ ಅನ್ನಿಸಿಕೊಂಡಿದೆ. ಕೊನೆಯ ಎರಡು ತಿಂಗಳ ದತ್ತಾಂಶವನ್ನು ಪಡೆದುಕೊಂಡ ಬಳಿಕ ಫಲಿತಾಂಶದಲ್ಲಿ ಬದಲಾವಣೆ ಉಂಟಾಗುವ ಸಾಧ್ಯತೆ ಇಲ್ಲ. 

ಕೈಗಾರಿಕಾ ಕ್ರಾಂತಿಯ ಅವಧಿಯನ್ನೇ (1850–1900) ಹವಾಮಾನ ಬದಲಾವಣೆಯನ್ನು ಅಳೆಯುವ ಮಾನದಂಡವಾಗಿ ಇರಿಸಿಕೊಳ್ಳಲಾಗಿದೆ. ಕೈಗಾರಿಕಾ ಕ್ರಾಂತಿಯ ಬಳಿಕವೇ ಪಳೆಯುಳಿಕೆ ಇಂಧನವನ್ನು ವ್ಯಾಪಕವಾಗಿ ಬಳಸಲು ಆರಂಭಿಸಲಾಯಿತು. ಇದು ತಾಪಮಾನ ಹೆಚ್ಚಳಕ್ಕೆ ಮೂಲ ಕಾರಣವಾಗಿದೆ. ಹಾಗಾಗಿಯೇ ಪಳೆಯುಳಿಕೆ ಇಂಧನ ಕಡಿಮೆ ಬಳಕೆಯ ದಿನಗಳು ಹವಾಮಾನ ಬದಲಾವಣೆಯ ಮಾನದಂಡವಾಗಿವೆ.

ಗರಿಷ್ಠ ತಾಪಮಾನ: ಕೆಲವು ಲಕ್ಷಣ

ತಿಂಗಳಿನಿಂದ ತಿಂಗಳಿಗೆ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಾ 2023ನೇ ವರ್ಷವು ಇತಿಹಾಸದಲ್ಲಿಯೇ ಅತಿ ಹೆಚ್ಚು ತಾಪಮಾನ ದಾಖಲಾದ ವರ್ಷವಾಗಿದೆ. ತಾಪಮಾನ ಏರಿಕೆಯಾದ ಕಾರಣ ಜಗತ್ತು ಹಲವು ವಿಧದಲ್ಲಿ ಹಲವು ಮೊದಲುಗಳನ್ನು ದಾಖಲಿಸಿದೆ. ಹೆಚ್ಚುತ್ತಿರುವ ಕಾಳ್ಗಿಚ್ಚು ಹಿಮಕರಗುವಿಕೆ ಸಮುದ್ರದ ಮೇಲ್ಮೈ ತಾಪಮಾನದಲ್ಲಿ ಏರಿಕೆ... ಹೀಗೆ ಹಲವು ವಿಧಗಳಲ್ಲಿ ಜಗತ್ತು ಸಂಕಷ್ಟ ಎದುರಿಸಿತು. ಈ ಬಗ್ಗೆ ವಿಶ್ವ ಹವಾಮಾನ ಸಂಸ್ಥೆ ಪಟ್ಟಿ ಮಾಡಿದೆ. ಈ ಸಂಸ್ಥೆಯು ತನ್ನ ಪೂರ್ಣ ಪ್ರಮಾಣದ ವರದಿಯನ್ನು 2024ರ ಮೊದಲಾರ್ಧದ ಹೊತ್ತಿಗೆ ಬಿಡುಗಡೆ ಮಾಡಲಿದೆ. ಆದರೆ ದುಬೈನಲ್ಲಿ ನಡೆದ ‘ಹವಾಮಾನ ಶೃಂಗಸಭೆ’ಯ ಕಾರಣಕ್ಕಾಗಿ ತನ್ನ ವರದಿಯ ಸಾರಾಂಶವನ್ನು ಮಾತ್ರ ಇದೇ ವರ್ಷವೇ ಬಿಡುಗಡೆ ಮಾಡಿದೆ.

ಹಸಿರುಮನೆ ಅನಿಲ: ಇಂಗಾಲದ ಆಕ್ಸೈಡ್‌ ಮೀಥೇನ್‌ ಹಾಗೂ ನೈಟ್ರಸ್‌ ಆಕ್ಸೈಡ್‌– ಈ ಮೂರು ಅನಿಲಗಳು ವಾತಾವರಣವನ್ನು ಸೇರುತ್ತಿರುವ ಪ್ರಮಾಣವು ಹೆಚ್ಚಾಗಿದೆ. 2022ಕ್ಕೆ ಹೋಲಿಸಿಕೊಂಡರೆ 2023ರಲ್ಲಿ ಈ ಮೂರು ಅನಿಲಗಳ ಸೋರಿಕೆಯು ಏರುತ್ತಲೇ ಇದೆ.

ಸಮುದ್ರದ ಮೇಲ್ಮೈ ತಾಪಮಾನ ಏರಿಕೆ: ಉತ್ತರ ಅಟ್ಲಾಂಟಿಕ್‌ನ ಪೂರ್ವ ಭಾಗ ಗಲ್ಫ್‌ ಆಫ್‌ ಮೆಕ್ಸಿಕೊ ಕೆರೀಬಿಯನ್‌ ಸಮುದ್ರ ಜೊತೆಗೆ ಅಂಟಾರ್ಕ್ಟಿಕ್‌ ಸಮುದ್ರದ ಬಹು ದೊಡ್ಡ ಪ್ರದೇಶವು ಅತಿಯಾದ ತಾಪಮಾನಕ್ಕೆ ಗುರಿಯಾಗಿತ್ತು. ಈ ಸಮುದ್ರಗಳಲ್ಲಿ ದೊಡ್ಡ ಮಟ್ಟದ ಬಿಸಿ ಗಾಳಿಯೂ ಎದ್ದಿತ್ತು. ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ತಾಪಮಾನ ಹೆಚ್ಚಿತ್ತು. ಜುಲೈ ಆಗಸ್ಟ್‌ ಮತ್ತು ಸೆಪ್ಟೆಂಬರ್‌ ಮಧ್ಯದಲ್ಲಿ 0.21 ಡಿಗ್ರಿ ಸೆಲ್ಸಿಯಸ್‌ನಿಂದ 0.27 ಡಿಗ್ರಿ ಸೆಲ್ಸಿಯಸ್‌ವರೆಗೂ ತಾಪಮಾನ ದಾಖಲಾಗಿತ್ತು.

ಏರಿಕೆ ಕಂಡ ಸಮುದ್ರದ ಶಾಖ: ಕಳೆದ ಎರಡು ದಶಕಗಳಿಗೆ ಹೋಲಿಸಿಕೊಂಡರೆ ಸಮುದ್ರದ ಶಾಖದಲ್ಲಿ ಏರಿಕೆ ಕಂಡಿದೆ. 2022ರಲ್ಲಿಯೇ ಈ ಪ್ರಮಾಣ ಹೆಚ್ಚಿತ್ತು. 2023ರ ಹೊತ್ತಿಗೆ ಇದು ಇನ್ನಷ್ಟು ಏರಿಕೆಯಾಗಿದೆ. ಸಮುದ್ರದ ಶಾಖದ ಪ್ರಮಾಣವನ್ನು ಕಳೆದ 65 ವರ್ಷಗಳಿಂದ ಅಳೆಯಲಾಗುತ್ತಿದೆ. ಈ ವರ್ಷಗಳಲ್ಲೇ ಅತಿ ಹೆಚ್ಚಿನ ಶಾಖದ ಪ್ರಮಾಣವು 2023ರಲ್ಲಿ ದಾಖಲಾಗಿದೆ.

ಸಮುದ್ರ ಮಟ್ಟದಲ್ಲಿ ಏರಿಕೆ: 1993ರಿಂದ ಉಪಗ್ರಹದ ಮೂಲಕ ಸಮುದ್ರ  ಮಟ್ಟವನ್ನು ಅಳತೆ ಮಾಡಲಾಗುತ್ತಿದೆ. ಅಲ್ಲಿಂದ ಇಲ್ಲಿಯವರೆಗೆ ಸಮುದ್ರ ಮಟ್ಟದ ಏರಿಕೆ ಪ್ರಮಾಣವನ್ನು ಹೋಲಿಸಿ ನೋಡಿದರೆ 2023ರಲ್ಲಿ ಸಮುದ್ರ ಮಟ್ಟದಲ್ಲಿ ಹೆಚ್ಚಿನ ಪ್ರಮಾಣದ ಏರಿಕೆ ಕಂಡುಬಂದಿದೆ. ನೀರ್ಗಲ್ಲು ಹಾಗೂ ಹಿಮದ ಪದರಗಳ ನಿರಂತರ ಕರಗುವಿಕೆಯ ಕಾರಣದಿಂದ ಸಮುದ್ರ ಮಟ್ಟದಲ್ಲಿ ಏರಿಕೆಯಾಗಿದೆ.

ಕಡಿಮೆಯಾಗುತ್ತಿರುವ ಹಿಮಗಡ್ಡೆ ಪದರ: ಅಂಟಾರ್ಕ್ಟಿಕ್‌ ಸಮುದ್ರದಲ್ಲಿನ ಹಿಮ ಪದರ ಇರುವ ಪ್ರದೇಶವು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಲೇ ಇದೆ. 1991–2020ರ ಸರಾಸರಿಗೆ ಹೋಲಿಸಿದರೆ ಅಂಟಾರ್ಕ್ಟಿಕ್‌ ಸಮುದ್ರದಲ್ಲಿನ ಹಿಮ ಪದರ ಪ್ರದೇಶವು 2023ರ ಸೆಪ್ಟೆಂಬರ್‌ನಲ್ಲಿ 15 ಲಕ್ಷ ಚದರ ಕಿ.ಮೀನಷ್ಟು ಕಡಿಮೆಯಾಗಿತ್ತು. 1986ರಲ್ಲಿ ಈ ಪದರದ ಪ್ರದೇಶವು ಆವರೆಗಿನ ಕನಿಷ್ಠ ಮಟ್ಟದಲ್ಲಿತ್ತು. ಈ ವರ್ಷಕ್ಕೆ ಹೋಲಿಸಿಕೊಂಡರೆ ಈ ಪದರದ ಪ್ರದೇಶವು 2023ರ ಹೊತ್ತಿಗೆ 12 ಲಕ್ಷ ಚದರ ಕಿ.ಮೀನಷ್ಟು ಕಡಿಮೆಯಾಗಿದೆ.  ಆರ್ಕ್ಟಿಕ್ ಸಮುದ್ರದ ಹಿಮ ಪದರ ಪ್ರದೇಶವು ಸಾಮಾನ್ಯಕ್ಕಿಂತ ಕಡಿಮೆಯೇ ಇದೆ. ಉತ್ತರ ಅಮೆರಿಕದ ಪೂರ್ವ ಭಾಗ ಹಾಗೂ ಯುರೋಪಿನ ಪರ್ವತಗಳಲ್ಲಿನ (ಆಲ್ಫ್ಸ್) ಹಿಮಗಳೂ ದೊಡ್ಡ ಪ್ರಮಾಣದಲ್ಲಿ ಕರಗಿವೆ. ಸ್ವಿಟ್ಜರ್ಲೆಂಡ್‌ನಲ್ಲಿರುವ ನೀರ್ಗಲ್ಲುಗಳಲ್ಲಿ ಶೇ 10ರಷ್ಟು 20 ವರ್ಷಗಳಲ್ಲಿ ಕರಗಿವೆ.

ಅತಿ ಮಳೆ ಅತಿ ಬರ: ಚಂಡಮಾರುತಗಳು ಪ್ರವಾಹ ಅತಿ ತಾಪಮಾನ ಅತಿಯಾದ ಬರ ಹಾಗೂ ಕಾಳ್ಗಿಚ್ಚುಗಳು– ಇವು ವಿಪರೀತ ಹವಾಮಾನ ವೈಪರೀತ್ಯದ ಲಕ್ಷಣಗಳು. ಡೇನಿಯಲ್‌ ಚಂಡಮಾರುತವು ಗ್ರೀಸ್‌ ಬಲ್ಗೇರಿಯಾ ಟರ್ಕಿ ಹಾಗೂ ಲಿಬಿಯಾವನ್ನು ಪ್ರಭಾವಿಸಿತು. ಇಲ್ಲೆಲ್ಲಾ ಅತಿಯಾದ ಪ್ರವಾಹ ಉಂಟಾಗಿತ್ತು. ಸೆಪ್ಟೆಂಬರ್‌ನಲ್ಲಿ ಲಿಬಿಯಾದಲ್ಲಿ ಇದರ ಪರಿಣಾಮ ತುಸು ಹೆಚ್ಚೇ ಆಗಿತ್ತು. 

ಫೆಬ್ರುವರಿ ಹಾಗೂ ಮಾರ್ಚ್‌ನಲ್ಲಿ ಬಂದ ಫ್ರೆಡಿ ಚಂಡಮಾರುತವು ಜಗತ್ತಿನಲ್ಲಿಯೇ ಹೆಚ್ಚು ದಿನಗಳವರೆಗೆ ಇದ್ದ ಚಂಡಮಾರುತವಾಗಿತ್ತು. ಬಂಗಾಳಕೊಲ್ಲಿಯಲ್ಲಿ ಮೇ ತಿಂಗಳಿನಲ್ಲಿ ಎದ್ದಿದ್ದ ಮೋಚಾ ಚಂಡಮಾರುತವು ಭಾರತ ಹಾಗೂ ಬಾಂಗ್ಲಾದೇಶದಲ್ಲಿ ಹಾನಿಯುಂಟು ಮಾಡಿತು.

ಯುರೋಪ್‌ ಉತ್ತರ ಆಫ್ರಿಕಾದಲ್ಲಿ ಅತಿಯಾದ ಉಷ್ಣಾಂಶವು ಪರಿಣಾಮ ಬೀರಿತ್ತು. ಅದರಲ್ಲಿಯೂ ಜುಲೈನ ದ್ವಿತೀಯಾರ್ಥದಲ್ಲಿ ತೀವ್ರವಾದ ತಾಪಮಾನ ದಾಖಲಾಗಿತ್ತು. ಮೊರಕ್ಕೊದ ಅಗಧೀರದಲ್ಲಿ 50 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಹವಾಯಿಯಲ್ಲಿ ಇದೇ ವರ್ಷ ಎದ್ದಿದ್ದ ಕಾಳ್ಗಿಚ್ಚಿನ ಪರಿಣಾಮ 99 ಮಂದಿ ಮೃತಪಟ್ಟರು.

ಅಮೆಜಾನ್‌ ಕಾಡಿನಲ್ಲಿ ಬರ ಬಡಿದಿದೆ. ಆಫ್ರಿಕಾದ ಗ್ರೇಟರ್‌ ಹಾರ್ನ್‌ ಪ್ರದೇಶದಲ್ಲಿ ಐದು ವರ್ಷದಿಂದ ಬರ ತಲೆದೋರಿತ್ತು. ಆದರೆ ಈ ವರ್ಷ ಆ ಪ್ರದೇಶದಲ್ಲಿ ಪ್ರವಾಹ ಉಂಟಾಯಿತು. ಹಲವು ಮಂದಿ ಸ್ಥಳಾಂತರಗೊಂಡರು. ಅತಿಯಾದ ಬರದ ಕಾರಣ ನೀರನ್ನು ಹಿಡಿದುಕೊಳ್ಳುವ ಶಕ್ತಿಯನ್ನು ಮಣ್ಣು ಕಳೆದುಕೊಂಡಿತ್ತು. ಇದೇ ಕಾರಣಕ್ಕೆ ದೊಡ್ಡ ಮಟ್ಟದ ಪ್ರವಾಹ ಉಂಟಾಯಿತು.

ಹಸಿರುಮನೆ ಅನಿಲ ಹೊರಸೂಸುವಿಕೆ ಗರಿಷ್ಠ ಪ್ರಮಾಣದಲ್ಲಿದೆ. ಜಾಗತಿಕ ತಾಪಮಾನ ದಾಖಲೆ ಮಟ್ಟದಲ್ಲಿದೆ. ಸಮುದ್ರ ಮಟ್ಟ ಏರಿಕೆಯು ಗರಿಷ್ಠ ಪ್ರಮಾಣದಲ್ಲಿದೆ. ಅಂಟಾರ್ಕ್ಟಿಕ್‌ ಸಮುದ್ರದ ಮಂಜುಗಡ್ಡೆಯು ಕನಿಷ್ಠ ಮಟ್ಟದಲ್ಲಿದೆ. ದಾಖಲೆಗಳ ಮುರಿಯುವಿಕೆಯ ಕರ್ಕಶ ಸದ್ದು ಕಿವಿಗಡಚಿಕ್ಕುವಂತಿದೆ. 20ನೇ ಶತಮಾನದ ಹವಾಮಾನಕ್ಕೆ ನಾವು ಮರಳುವುದು ಅಸಾಧ್ಯ. ಆದರೆ ಮುಂದಿನ ಶತಮಾನಗಳಲ್ಲಿ ಈ ಭೂಮಿಯಲ್ಲಿ ಬದುಕಲು ಅಸಾಧ್ಯ ಎಂಬ ಸ್ಥಿತಿಯನ್ನು ತಡೆಯಲು ಶ್ರಮಿಸಬೇಕು
–ಪ್ರೊ. ಪೆಟ್ಟೆರಿ ಟಾಲಸ್‌, ವಿಶ್ವ ಹವಾಮಾನ ಸಂಘಟನೆಯ ಪ್ರಧಾನ ಕಾರ್ಯದರ್ಶಿ

ಆಧಾರ: ರಾಯಿಟರ್ಸ್‌, ವಿಶ್ವ ಹವಾಮಾನ ಸಂಸ್ಥೆ ವರದಿ, ‘ಕೋಪರ್ನಿಕಸ್‌ ಕ್ಲೈಮೆಟ್‌ ಚೇಂಜ್‌ ಸರ್ವೀಸ್‌’ನ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT