ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಾಣಿಗಳಲ್ಲಿ ಪೌರ ಜಾಗೃತಿ ಮೂಡಿಸುವ ಸಿಎಂಸಿಎ

Published 9 ಫೆಬ್ರುವರಿ 2024, 20:28 IST
Last Updated 9 ಫೆಬ್ರುವರಿ 2024, 20:28 IST
ಅಕ್ಷರ ಗಾತ್ರ

ಪ್ರಜಾಪ್ರಭುತ್ವ, ಸರ್ಕಾರ, ಸಾಮಾಜಿಕ ಸಮಾನತೆ, ಲಿಂಗ ಸಮಾನತೆ, ಬಹುತ್ವ ಇವೆಲ್ಲವೂ ಹಿರೀಕರ ಚರ್ಚೆ. 18 ವರ್ಷ ತುಂಬಿ, ಹಲವು ಬಾರಿ ಮತ ಚಲಾಯಿಸಿದ ಮೇಲೂ ಯುವಕರಿಗೆ ಈ ಬಗ್ಗೆ ಆಸಕ್ತಿಯಾಗಲೀ, ಜಾಗೃತಿಯಾಗಲೀ ಇರುವುದಿಲ್ಲ. ಇನ್ನು ಪುಟ್ಟ ಮಕ್ಕಳಂತೂ ಈ ವಿಷಯಗಳಿಂದ ದೂರ ಇರಬೇಕು ಎಂದೇ ಪೋಷಕರು ಬಯಸುತ್ತಾರೆ. ಪಾಠ ಕಲಿಯಬೇಕು, ಅಂಕ ಗಳಿಸಬೇಕು. ಇವಷ್ಟೇ ಮಕ್ಕಳ ಜವಾಬ್ದಾರಿ ಎನ್ನುವುದು ಸಾಮಾನ್ಯ ಕಲ್ಪನೆ. ಆದರೆ, ಪ್ರಜಾಪ್ರಭುತ್ವ, ಸಾಮಾಜಿಕ ಸಮಾನತೆ, ಬಹುತ್ವ, ಸೌಹಾರ್ದ– ಇವು ಯಾವುವೂ ಮಕ್ಕಳಿಂದ ದೂರ ತಳ್ಳಬೇಕಾದ ವಿಷಯವಲ್ಲ. ಮುಂದೆ ಜವಾಬ್ದಾರಿಯುತ ಪ್ರಜೆಯಾಗಲು ಇವುಗಳ ಕುರಿತ ಸ್ಪಷ್ಟ ಚಿತ್ರಣ ಅಗತ್ಯ. ಈ ಅಗತ್ಯವನ್ನು ಮನಗಂಡು ಬೆಂಗಳೂರಿನ ಚಿಲ್ಡ್ರನ್ಸ್‌ ಮೂವ್‌ಮೆಂಟ್‌ ಫಾರ್ ಸಿವಿಕ್‌ ಅವೇರ್‌ನೆಸ್‌ ಸಂಸ್ಥೆಯು (ಸಿಎಂಸಿಎ) ಎರಡು ದಶಕಕ್ಕೂ ಹೆಚ್ಚಿನ ಅವಧಿಯಿಂದ ಕೆಲಸ ಮಾಡುತ್ತಿದೆ.

‘ಪಬ್ಲಿಕ್‌ ಅಫೇರ್ಸ್‌ ಸೆಂಟರ್‌’ ಸಂಸ್ಥೆಯ ಯೋಜನೆಯಾಗಿ ‘ಚಿಲ್ಡ್ರನ್ಸ್‌ ಮೂವ್‌ಮೆಂಟ್‌ ಫಾರ್ ಸಿವಿಕ್‌ ಅವೇರ್‌ನೆಸ್‌’ ಹುಟ್ಟುಪಡೆಯಿತು. ನಂತರದ ದಿನಗಳಲ್ಲಿ ಈ ಯೋಜನೆಯೇ ಸಂಸ್ಥೆಯ ರೂಪ ಪಡೆದುಕೊಂಡಿತು. ಮಂಜುನಾಥ ಸದಾಶಿವ, ವೃಂದಾ ಭಾಸ್ಕರ್‌ ಹಾಗೂ ಪ್ರಿಯಾ ಕೃಷ್ಣಮೂರ್ತಿ ಅವರು ಸೇರಿ ಈ ಸಂಸ್ಥೆಯನ್ನು 2000ನೇ ಇಸ್ವಿಯಲ್ಲಿ ಹುಟ್ಟುಹಾಕಿದರು.

ಪ್ರಶ್ನೆ ಕೇಳುವುದು ಜವಾಬ್ದಾರಿಯುತ ಪ್ರಜೆಯ ಮುಖ್ಯ ಲಕ್ಷಣ. ಅನ್ಯಾಯದ ವಿರುದ್ಧ, ತಮ್ಮ ಹಕ್ಕಿನ ಪ್ರತಿಪಾದನೆಗಾಗಿ ವ್ಯಕ್ತಿ ಪ್ರಶ್ನೆ ಕೇಳಬೇಕು. ಹೀಗೆ ಪ್ರಶ್ನೆ ಕೇಳುವ ಪ್ರವೃತ್ತಿಯನ್ನು ಸಣ್ಣ ವಯಸ್ಸಿರುವಾಗಲೇ ಬೆಳೆಸುವುದು, ಆ ಮೂಲಕ ಮಕ್ಕಳನ್ನು ಉತ್ತಮ ಪ್ರಜೆಯಾಗಿಸುವುದು ಈ ಸಂಸ್ಥೆಯ ಉದ್ದೇಶ.

ಮಕ್ಕಳನ್ನು ಜವಾಬ್ದಾರಿಯುತ ಪ್ರಜೆಯಾಗಿಸಲು, ಅವರಲ್ಲಿ ಜೀವನ ಕೌಶಲಗಳನ್ನು ತುಂಬಲು ಈ ಸಂಸ್ಥೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಸಂಸ್ಥೆಯ ಕಾರ್ಯಕರ್ತರು ಶಾಲೆ–ಶಾಲೆಗಳಿಗೆ ತೆರಳಿ ಸಂಸ್ಥೆಯ ಕುರಿತು, ಅವರು ಯೋಜನೆಯ ಕುರಿತು ವಿವರಿಸುತ್ತಾರೆ. ಅದು, ಸರ್ಕಾರಿ ಶಾಲೆ ಇರಬಹುದು, ಖಾಸಗಿ ಶಾಲೆ ಇರಬಹುದು. ಶಾಲೆಯು ಒಪ್ಪಿಗೆ ನೀಡಿದರೆ, ಸಂಸ್ಥೆಯು ತನ್ನ ಕಾರ್ಯಚಟುವಟಿಕೆಗಳನ್ನು ಆರಂಭಿಸುತ್ತದೆ. ಶಾಲೆಗಳೂ ಖುದ್ದಾಗಿ ಸಂಸ್ಥೆಯನ್ನು ಸಂಪರ್ಕಿಸಬಹುದು.

6ನೇ ತರಗತಿಯಿಂದ 10ನೇ ತರಗತಿಯ ವರೆಗಿನ ಮಕ್ಕಳನ್ನು ಸಂಸ್ಥೆಯು ಮುಖ್ಯ ಗುರಿಯನ್ನಾಗಿಸಿಕೊಂಡಿದೆ. 6ನೇ ತರಗತಿಯ ಒಬ್ಬ ಮಗುವು ಈ ಯೋಜನೆಯ ಭಾಗವಾದರೆ, ಆ ಮಗುವು 10ನೇ ತರಗತಿಗೆ ಬರುವವರೆಗೂ ಸಂಸ್ಥೆಯ ಯೋಜನೆಗಳ ಭಾಗವಾಗಿಯೇ ಇರುತ್ತದೆ. ಶಾಲೆಯೊಂದರಲ್ಲಿ ವಾರಕ್ಕೆ ಒಂದು ತರಗತಿಯನ್ನು ಪ್ರತಿ ತರಗತಿಯ ಮಕ್ಕಳಿಗೆ ಸಂಸ್ಥೆಯು ನಡೆಸುತ್ತದೆ. ತಜ್ಞರ ಮೂಲಕ ಸಂಸ್ಥೆಯು ತನ್ನದೇ ಪಠ್ಯಕ್ರಮವನ್ನೂ ರೂಪಿಸಿಕೊಂಡಿದೆ. ಸಹಾನುಭೂತಿ, ಒಂದು ವಿಷಯದ ಕುರಿತು ವಿಮರ್ಶೆ ಮಾಡುವುದು, ಕ್ರಿಯಾಶೀಲ ವಿಚಾರವಂತಿಕೆಯನ್ನು ಬೆಳೆಸಿಕೊಳ್ಳುವುದು, ಉತ್ತಮ ಸಂವಹನ ಹೀಗೆ ಅನೇಕ ಜೀವನ ಕೌಶಲಗಳನ್ನೂ ಸಂಸ್ಥೆ ಕಲಿಸಿಕೊಡುತ್ತದೆ.

ಪ್ರಾಯೋಗಿಕ ಚಟುವಟಿಕೆಗಳೇ ಸಂಸ್ಥೆಯ ಪಠ್ಯಕ್ರಮವಾಗಿದೆ. ಕರ್ನಾಟಕವಲ್ಲದೆ, ತಮಿಳುನಾಡು, ಮಹಾರಾಷ್ಟ್ರ ಮತ್ತು ಒಡಿಶಾದಲ್ಲಿಯೂ ತನ್ನ ಕಾರ್ಯಚಟುವಟಿಕೆಗಳನ್ನು ಸಂಸ್ಥೆ ವಿಸ್ತರಿಸಿಕೊಂಡಿದೆ. ಕಾಲೇಜು ವಿದ್ಯಾರ್ಥಿಗಳಿಗಾಗಿಯೂ ಸಂಸ್ಥೆ ಕೆಲಸ ಮಾಡುತ್ತಿದೆ. ತನ್ನೆಲ್ಲಾ ಕಾರ್ಯಚಟುವಟಿಕೆಗಳನ್ನು ಸಂಸ್ಥೆ ಉಚಿತವಾಗಿ ಮಾಡುತ್ತದೆ. ದಾನಿಗಳ ದೇಣಿಗೆಯೇ ಸಂಸ್ಥೆಯ ಆರ್ಥಿಕ ಬೆನ್ನೆಲುಬು.

ಸಂಸ್ಥೆಯ ಕೆಲವು ಕಾರ್ಯಚಟುವಟಿಕೆಗಳ ಇಂತಿವೆ:

‘ಸಿಎಂಸಿಎ ಕ್ಲಬ್‌’ ಯೋಜನೆ: 7ನೇ ಹಾಗೂ 8ನೇ ತರಗತಿಯ ಮಕ್ಕಳು ಈ ಯೋಜನೆಯಲ್ಲಿ ಭಾಗವಹಿಸುತ್ತಾರೆ. ಪ್ರಜಾಪ್ರಭುತ್ವ ಮೌಲ್ಯಗಳು ಹಾಗೂ ನಾಗರಿಕ ಸಮಸ್ಯೆಗಳ ಕುರಿತು ತಿಳಿಸಿಕೊಡಲಾಗುತ್ತದೆ. ಜೊತೆಗೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸವನ್ನೂ ಮಕ್ಕಳ ಮೂಲಕವೇ ಮಾಡಿಸಲಾಗುತ್ತದೆ.

ಮಕ್ಕಳ ಗ್ರಾಮ ಸಭೆಗಳು: ಇದು ರಾಜ್ಯ ಸರ್ಕಾರದ ಯೋಜನೆ. ಸ್ವಯಂ ಸೇವಾ ಸಂಸ್ಥೆಗಳೂ ಇದರಲ್ಲಿ ಭಾಗವಹಿಸಬಹುದು ಎಂದು ಸರ್ಕಾರ ಹೇಳಿದ ಮೇಲೆ, ಸಿಎಂಸಿಎ ಕೂಡ ಸರ್ಕಾರದೊಂದಿಗೆ ಕೈಜೋಡಿಸಿತು. 2011ರಿಂದ ಈ ಕೆಲಸದಲ್ಲಿ ತೊಡಗಿಕೊಂಡಿದೆ.

ನನ್ನ ಒಳಿತಿಗಾಗಿ ಗ್ರಂಥಾಲಯ: ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು, ಸಂಸ್ಥೆಯ ಕಾರ್ಯಕರ್ತರು ಗ್ರಂಥಾಲಯಗಳಿಗೆ ಭೇಟಿ ನೀಡುತ್ತಾರೆ. ಗ್ರಂಥಾಲಯಕ್ಕೆ ಬರುವಂತೆ ಮಕ್ಕಳನ್ನು ಹುರಿದುಂಬಿಸುತ್ತಾರೆ. ನಾಗರಿಕ ವಿಷಯಗಳ ಕುರಿತು ಜಾಗೃತಿ ಮೂಡಿಸಲು, ಇಲ್ಲಿ ಮಕ್ಕಳಿಂದ ಹಲವು ಕಾರ್ಯಚಟುವಟಿಕೆಗಳನ್ನು ಮಾಡಿಸುತ್ತಾರೆ. ಮಕ್ಕಳಿಗೆ ಕಾರ್ಯಯೋಜನೆಯೊಂದನ್ನೂ ನೀಡುತ್ತಾರೆ. ಹಲವು ತಿಂಗಳ ಅಧ್ಯಯನದ ನಂತರ ಮಕ್ಕಳೇ ವರದಿಯೊಂದನ್ನು ಸಿದ್ಧಪಡಿಸಬೇಕು. ಅದನ್ನು ಗ್ರಾಮದ ಎಲ್ಲರ ಮುಂದೆ ಓದಬೇಕು. ಪುಸ್ತಕ ಓದುವಂತೆಯೂ ಮಕ್ಕಳನ್ನು ಇಲ್ಲಿ ಉತ್ತೇಜಿಸಲಾಗುತ್ತದೆ.

ಸಂಪರ್ಕ: 97427 54372

ತಮ್ಮ ಸುತ್ತಮುತ್ತಲಿನ ಸಮಸ್ಯೆಗಳ ಕುರಿತು ಆಲೋಚಿಸಿ ಮಕ್ಕಳು ನಿರ್ಧಾರ ತೆಗೆದುಕೊಳ್ಳಬೇಕು. ಸಮಸ್ಯೆ ಎದುರಾದರೆ ಇದು ನಮಗೆ ಯಾಕೆ ಎದುರಾಯಿತು ಎಂದು ಮಕ್ಕಳು ಭಾವಿಸಬಾರದು. ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಜವಾಬ್ದಾರಿಯುತ ನಾಗರಿಕರಾಗುವ ದಿಸೆಯಲ್ಲಿ ಮಕ್ಕಳಿಗೆ ನಾವು ಮಾರ್ಗದರ್ಶನ ನೀಡುತ್ತೇವೆ

- ಮರಳಪ್ಪ ಸಿ.ಆರ್‌. ಸಹಾಯಕ ನಿರ್ದೇಶಕ ಸಿಎಂಸಿಎ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT