ಭಾರತದ ಸಂವಿಧಾನವು ಜಗತ್ತಿನಲ್ಲಿಯೇ ಅತ್ಯಂತ ವಿಶಿಷ್ಟ ಸ್ಥಾನ ಪಡೆದಿದ್ದು, ಹಲವು ದಾಖಲೆಗಳಿಗೆ ಪಾತ್ರವಾಗಿದೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ತಿದ್ದುಪಡಿಗಳಾಗಿರುವ ಸಂವಿಧಾನ ಎನ್ನುವ ವಿಶೇಷತೆಯೂ ನಮ್ಮ ಸಂವಿಧಾನಕ್ಕಿದೆ. ಭಾರತದಂತಹ ನೂರಾರು ಜಾತಿ, ಹತ್ತಾರು ಧರ್ಮ, ವೈವಿಧ್ಯಮಯವಾದ ಸಂಸ್ಕೃತಿ, ಆಚರಣೆಗಳಿಂದ ಕೂಡಿರುವ ದೇಶಕ್ಕೆ ಸಂವಿಧಾನವನ್ನು ರೂಪಿಸುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಭಾರತವು ಇಂದು ಜಾಗತಿಕ ಮಟ್ಟದಲ್ಲಿ ಗಮನಾರ್ಹ ಸ್ಥಾನ ಪಡೆದಿದ್ದರೆ, ಅದಕ್ಕೆ ಕಾರಣ, ನಮ್ಮ ಸಶಕ್ತವಾದ ಸಂವಿಧಾನ. ಅದು ದೇಶದ ಆಡಳಿತ ಮತ್ತು ಜನರ ಚಿಂತನೆಯ ಚಾಲಕಶಕ್ತಿಯಾಗಿದೆ..

ಸ್ವತಂತ್ರ ಭಾರತಕ್ಕೆ ಸಂವಿಧಾನವನ್ನು ರೂಪಿಸಲು ರಚನಾ ಸಭೆ ಸ್ಥಾಪನೆಯಾಗಿದ್ದು 1946ರಲ್ಲಿ. ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತ್ವತ್ವದಲ್ಲಿ ನೂರಾರು ಮಂದಿ ಸುಮಾರು ಮೂರು ವರ್ಷ ಶ್ರಮಿಸಿ ಸಂವಿಧಾನ ರೂಪಿಸಿದರು. ಸಂವಿಧಾನ ರಚನಾ ಸಭೆಯು 1949ರ ನ.26ರಂದು ಸಂವಿಧಾನವನ್ನು ಅಂಗೀಕರಿಸಿತು. ದೇಶದಲ್ಲಿ ಸಂವಿಧಾನವು 1950 ಜ.26ರಂದು ಜಾರಿಗೆ ಬಂತು. ಸಂವಿಧಾನ ರಚನೆಯ ವೇಳೆ ಅಮೆರಿಕ, ಬ್ರಿಟನ್, ಐರ್ಲೆಂಡ್ನ ಸಂವಿಧಾನದ ಕೆಲವು ಅಂಶಗಳು, ಗಾಂಧಿ ತತ್ವಗಳಿಂದಲೂ ಪ್ರೇರಣೆ ಪಡೆಯಲಾಗಿದೆ. ಭಾರತದ ಸಂವಿಧಾನವು ಜಗತ್ತಿನಲ್ಲಿಯೇ ಅತ್ಯಂತ ವಿಶಿಷ್ಟ ಸ್ಥಾನ ಪಡೆದಿದ್ದು, ಹಲವು ದಾಖಲೆಗಳಿಗೆ ಪಾತ್ರವಾಗಿದೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ತಿದ್ದುಪಡಿಗಳಾಗಿರುವ ಸಂವಿಧಾನ ಎನ್ನುವ ವಿಶೇಷತೆಯೂ ನಮ್ಮ ಸಂವಿಧಾನಕ್ಕಿದೆ.

ಭಾರತದಂತಹ ನೂರಾರು ಜಾತಿ, ಹತ್ತಾರು ಧರ್ಮ, ವೈವಿಧ್ಯಮಯವಾದ ಸಂಸ್ಕೃತಿ, ಆಚರಣೆಗಳಿಂದ ಕೂಡಿರುವ ದೇಶಕ್ಕೆ ಸಂವಿಧಾನವನ್ನು ರೂಪಿಸುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಭಾರತವು ಇಂದು ಜಾಗತಿಕ ಮಟ್ಟದಲ್ಲಿ ಗಮನಾರ್ಹ ಸ್ಥಾನ ಪಡೆದಿದ್ದರೆ, ಅದಕ್ಕೆ ಕಾರಣ, ನಮ್ಮ ಸಶಕ್ತವಾದ ಸಂವಿಧಾನ. ಅದು ದೇಶದ ಆಡಳಿತ ಮತ್ತು ಜನರ ಚಿಂತನೆಯ ಚಾಲಕಶಕ್ತಿಯಾಗಿದೆ.

ಸಂವಿಧಾನ ರಚನಾ ಸಭೆ

ದೇಶದ ಸಂವಿಧಾನ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದು ಸಂವಿಧಾನ ರಚನಾ ಸಭೆ.

ದೇಶವು ಸ್ವತಂತ್ರಗೊಂಡ ನಂತರ ಸರ್ಕಾರ, ಆಡಳಿತ, ಜನಜೀವನಕ್ಕೆ ಮಾರ್ಗದರ್ಶನ ಮಾಡುವ ದಿಸೆಯಲ್ಲಿ ಸಂವಿಧಾನವೊಂದರ ಅಗತ್ಯವಿದೆ ಎಂಬುದು ಭಾರತ ಸ್ವಾತಂತ್ರ್ಯ ಪಡೆಯುವ ಹಾದಿಯಲ್ಲಿದ್ದಾಗ ರಾಷ್ಟ್ರ ನಾಯಕರಿಗೆ ಮನವರಿಕೆ ಆಯಿತು. ಅದಕ್ಕಾಗಿ 1946ರಲ್ಲಿ ಸಂವಿಧಾನ ರಚನಾ ಸಭೆಯನ್ನು ಸ್ಥಾಪಿಸಲಾಯಿತು. ಪರೋಕ್ಷ ಚುನಾವಣೆಯ ಮೂಲಕ ಆಯ್ಕೆಯಾದ ಪ್ರಾಂತೀಯ ಶಾಸನಸಭೆಗಳ ಸದಸ್ಯರನ್ನು ಸೇರಿಸಿ ಈ ರಚನಾ ಸಭೆಯನ್ನು ರೂಪಿಸಲಾಯಿತು. ಡಿ.9ರಂದು ಮೊದಲ ಅಧಿವೇಶನ ನಡೆಯಿತು. ಆಗ ಇದರಲ್ಲಿದ್ದ ಒಟ್ಟು ಸದಸ್ಯರ ಸಂಖ್ಯೆ 389. ದೇಶ ವಿಭಜನೆಯ (1947) ನಂತರ ಈ ಸಂಖ್ಯೆ 299ಕ್ಕೆ ಇಳಿಯಿತು.

ಡಾ.ಸಚ್ಚಿದಾನಂದ ಸಿನ್ಹಾ ಅವರು ಸಂವಿಧಾನ ರಚನಾ ಸಭೆಯ ಮೊದಲ ಅಧ್ಯಕ್ಷ. ನಂತರ ಡಾ.ರಾಜೇಂದ್ರ ಪ್ರಸಾದ್ ಅವರು ಅಧ್ಯಕ್ಷರಾದರು. ಸಂವಿಧಾನದಲ್ಲಿರುವ ಪ್ರತಿ ಕಲಂನ ಬಗ್ಗೆಯೂ ಸಂವಿಧಾನ ರಚನಾ ಸಭೆಯ ಸದಸ್ಯರು ಚರ್ಚೆ ಮಾಡಿದ್ದರು. ಸಂವಿಧಾನವನ್ನು ರೂಪಿಸುವ ಅವಧಿಯಲ್ಲಿ ರಚನಾ ಸಭೆಯ 11 ಅಧಿವೇಶನಗಳು ನಡೆದಿದ್ದು, ಒಟ್ಟು 167 ದಿನ ಚರ್ಚೆ ನಡೆದಿತ್ತು.

ಡಾ.ಬಿ.ಆರ್.ಅಂಬೇಡ್ಕರ್ ಮಹತ್ವ

ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಗೆ ಮುಂಬೈ ಪ್ರಾಂತ್ಯದಿಂದ ಸ್ಪರ್ಧಿಸಿದರೂ ಯಶಸ್ವಿಯಾಗಲಿಲ್ಲ. ನಂತರ ಬಂಗಾಳದಿಂದ ಆಯ್ಕೆಯಾದರು. ಆದರೆ, ದೇಶ ವಿಭಜನೆಯ ನಂತರ ತಮ್ಮ ಸ್ಥಾನ ಕಳೆದುಕೊಂಡರು. ಆದಾಗ್ಯೂ, ಕಾಂಗ್ರೆಸ್ ಪಕ್ಷವು ಅವರನ್ನು ಮುಂಬೈ ಪ್ರಾಂತ್ಯದಿಂದ ನಾಮನಿರ್ದೇಶನ ಮಾಡಿತು.

ಸಂವಿಧಾನ ರಚನೆಯ ಮಹತ್ವದ ಜವಾಬ್ದಾರಿಯನ್ನು ಕರಡು ರಚನಾ ಸಮಿತಿಗೆ ವಹಿಸಲಾಗಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಿತಿಯ ಅಧ್ಯಕ್ಷರಾಗಿದ್ದರು. ಸಮಿತಿಗೆ ಅಂಬೇಡ್ಕರ್ ಅವರೇ ಅಧ್ಯಕ್ಷರಾಗಲಿ ಎನ್ನುವುದು ದೇಶದ ಒಳಗಿನ ಮತ್ತು ಹೊರಗಿನ ಅನೇಕ ಚಿಂತಕರ ಅಭಿಪ್ರಾಯವಾಗಿತ್ತು. ಕರಡು ರಚನಾ ಸಮಿತಿಯಲ್ಲಿದ್ದ ಆರು ಮಂದಿ ಸದಸ್ಯರೂ ಅಂಬೇಡ್ಕರ್ ಅವರೇ ಅಧ್ಯಕ್ಷರಾಗಲಿ ಎಂದಿದ್ದರು. ಐರ್ಲೆಂಡ್ನ ಸಂವಿಧಾನ ರಚಿಸಿದ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟವನ್ನು ಬೆಂಬಲಿಸಿದ್ದ ಏಮನ್ ಡೆ ವಲೇರಾ ಅವರು ಕರಡು ರಚನಾ ಸಮಿತಿಗೆ ಅಂಬೇಡ್ಕರ್ ಅವರೇ ಸೂಕ್ತ ಎಂದಿದ್ದರು.

ಭಾರತದ ಕೊನೆಯ ವೈಸ್ರಾಯ್ ಮತ್ತು ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಮೌಂಟ್ ಬ್ಯಾಟನ್ ಅವರ ಪತ್ನಿ ಎಡ್ವಿನಾ ಮೌಂಟ್ ಬ್ಯಾಟನ್ ಅವರು ಕೂಡ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು. ‘ದೇಶದಲ್ಲಿರುವ ಪ್ರತಿ ಜಾತಿ, ಮತ, ಪಂಥಕ್ಕೂ ಸಮಾನ ನ್ಯಾಯ ಒದಗಿಸಬಲ್ಲ ಜೀನಿಯಸ್ ಅವರೊಬ್ಬರೇ’ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಲಾರ್ಡ್ ಮೌಂಟ್ ಬ್ಯಾಟನ್ ಅವರಿಗೂ ಅಂಬೇಡ್ಕರ್ ಬಗ್ಗೆ, ಅವರ ಕೆಲಸದ ಬಗ್ಗೆ ಅಪಾರ ಗೌರವ, ತೃಪ್ತಿ ಇತ್ತು.

ಕರಡು ರಚನೆ ನಡೆಯುತ್ತಿದ್ದ ಕಾಲದಲ್ಲಿ ಅಂಬೇಡ್ಕರ್ ಅವರ ಆರೋಗ್ಯ ಅಷ್ಟೇನೂ ಉತ್ತಮವಾಗಿರಲಿಲ್ಲ. ಮಧುಮೇಹ ಮತ್ತು ರಕ್ತದೊತ್ತಡದಿಂದ ಅವರು ಬಳಲುತ್ತಿದ್ದರು. ಆದರೂ, ಕರಡು ರಚನೆಯ ಮತ್ತು ಅದಕ್ಕೆ ಸಂಬಂಧಿಸಿ ಸಂವಿಧಾನ ರಚನಾ ಸಮಿತಿಗೆ ವಿವರಿಸುವ ಬಹುತೇಕ ಕೆಲಸಗಳನ್ನು ಅಂಬೇಡ್ಕರ್ ಅವರೇ ಮಾಡಿದರು. ರಚನಾ ಸಭೆಯ ಸದಸ್ಯರಿಗೆ ಪ್ರತಿಯೊಂದು ಕಲಂ ಅನ್ನು ವಿವರಿಸುವುದು, ಅವರು ಸೂಚಿಸಿದ ತಿದ್ದುಪಡಿಗಳನ್ನು ಸಕಾರಣವಾಗಿ ಒಪ್ಪಿಕೊಳ್ಳುವುದು ಇಲ್ಲವೇ ತಿರಸ್ಕರಿಸುವುದು... ಹೀಗೆ ಸುಮಾರು 100 ದಿನ ಅಂಬೇಡ್ಕರ್ ಅವರು ಸಭೆಯಲ್ಲಿ ಪಾಲ್ಗೊಂಡು, ಹೆಚ್ಚಿನ ಜವಾಬ್ದಾರಿಗಳನ್ನು ನಿರ್ವಹಿಸಿದರು.

‘ಸದಸ್ಯರ ಅನಾರೋಗ್ಯ, ಸಾವು, ಇತರೆ ಕೆಲಸಗಳ ಒತ್ತಡದಿಂದ, ಸಂವಿಧಾನದ ಕರಡು ರೂಪಿಸುವುದಕ್ಕೆ ಸಂಬಂಧಿಸಿದ ಹೆಚ್ಚಿನ ಹೊರೆಯು ಅಂಬೇಡ್ಕರ್ ಅವರ ಮೇಲೆಯೇ ಬಿದ್ದಿದೆ’ ಎಂದು ಕರಡು ರಚನಾ ಸಮಿತಿಯ ಸದಸ್ಯರಾಗಿದ್ದ ಟಿ.ಟಿ.ಕೃಷ್ಣಮಾಚಾರಿ ಅವರು 1948ರ ಸಭೆಯಲ್ಲಿ ಹೇಳಿದ್ದರು. ‘ಕೌಶಲದಿಂದ ಕೂಡಿದ ಸಂವಿಧಾನದ ಪೈಲಟ್’ ಎಂದು ಅಂಬೇಡ್ಕರ್ ಅವರನ್ನು ರಾಜೇಂದ್ರ ಪ್ರಸಾದ್ ಬಣ್ಣಿಸಿದ್ದರು.

ವಿಶಿಷ್ಟ, ವಿಭಿನ್ನ ಸಂವಿಧಾನ

* ಇದು ಭಾರತದ ಪರಮೋಚ್ಚ ಕಾನೂನು

* ಒಕ್ಕೂಟ ವ್ಯವಸ್ಥೆಯಲ್ಲಿ ಸಂಸದೀಯ ಮಾದರಿಯ ಸರ್ಕಾರ ರಚನೆಗೆ ಸಂವಿಧಾನ ಅವಕಾಶ ನೀಡುತ್ತದೆ

* 1949ರ ನವೆಂಬರ್ 26ರಂದು ಅಂಗೀಕೃತಗೊಂಡು, 1950 ಜನವರಿ 26ರಂದು ಜಾರಿಗೆ ಬಂದಾಗ ಸಂವಿಧಾನವು 395 ವಿಧಿಗಳು, ಎಂಟು ಪರಿಚ್ಛೇದಗಳನ್ನು ಹೊಂದಿತ್ತು

* 1.45 ಲಕ್ಷ ಪದಗಳನ್ನು ಹೊಂದಿದ್ದ ಇದು ಜಗತ್ತಿನಲ್ಲೇ ಅತ್ಯಂತ ದೊಡ್ಡ ಸಂವಿಧಾನ

* ಕರಡು ಸಮಿತಿ ಅಧ್ಯಕ್ಷರಾದ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮ ಸಂವಿಧಾನದ ಮುಖ್ಯ ಶಿಲ್ಪಿ

* ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರು ಸಂವಿಧಾನಕ್ಕೆ ಸಹಿ ಹಾಕಿದ ಮೊದಲಿಗರು

* ಈಗಲೂ ಇದು ಜಗತ್ತಿನ ಅತ್ಯಂತ ದೊಡ್ಡ ಸಂವಿಧಾನ. ಇದನ್ನು ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಕೈ ಬರಹದಲ್ಲಿ ಬರೆಯಲಾಗಿದ್ದು, ಕ್ಯಾಲಿಗ್ರಫಿಯಿಂದ ಅಲಂಕೃತಗೊಂಡಿದೆ

* ವ್ಯೋಹರ್ ರಾಮ್ಮನೋಹರ್ ಸಿನ್ಹಾ , ಪ್ರೇಮ್ ಬಿಹಾರಿ ನಾರಾಯಣ ರೈಝಾದಾ ಮತ್ತು ನಂದಲಾಲ್ ಬೋಸ್ ಸೇರಿದಂತೆ ಶಾಂತಿನಿಕೇತನ ಕಲಾವಿದರ ಚಿತ್ರಗಳು ಸಂವಿಧಾನದ ಪುಟಗಳಲ್ಲಿ ಸ್ಥಾನ ಪಡೆದಿವೆ

* ಅಂತಿಮ ಕರಡನ್ನು ಪೂರ್ಣಗೊಳಿಸಲು ಎರಡು ವರ್ಷ 11 ತಿಂಗಳು ಮತ್ತು 17 ದಿನಗಳನ್ನು ತೆಗೆದುಕೊಳ್ಳಲಾಗಿತ್ತು

* ಸದ್ಯ ಸಂವಿಧಾನವು 448 ವಿಧಿಗಳು, 25ವಿಭಾಗಗಳು ಮತ್ತು 12 ಪರಿಚ್ಛೇದಗಳನ್ನು ಒಳಗೊಂಡಿದೆ.
ಈವರೆಗೆ ಸಂವಿಧಾನಕ್ಕೆ 106 ಬಾರಿ ತಿದ್ದುಪಡಿ ತರಲಾಗಿದೆ

* ‘ಭಾರತದ ಪ್ರಜೆಗಳಾದ ನಾವು..’ ಎಂದು ಆರಂಭವಾಗುವ ಪ್ರಸ್ತಾವನೆಯು, ಸಂವಿಧಾನದ ಆಶಯಗಳನ್ನು, ಸಾರವನ್ನು ಪ್ರತಿನಿಧಿಸುತ್ತದೆ

* ದೇಶದಲ್ಲಿ ಸರ್ಕಾರ, ಆಡಳಿತ ವ್ಯವಸ್ಥೆ ಯಾವ ರೀತಿ ಇರಬೇಕು, ಅದಕ್ಕಾಗಿ ಯಾವ ರೀತಿಯ ಕಾನೂನು, ನಿಯಮಗಳು ಇರಬೇಕು ಎಂಬುದನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಆದರೆ, ಬೇರೆ ದೇಶಗಳ ಸಂವಿಧಾನಗಳಲ್ಲಿ ಸ್ಥೂಲ ಮಾರ್ಗಸೂಚಿ/ ಅಂಶಗಳು ಮಾತ್ರ ಇರುತ್ತವೆ

* ಅಗತ್ಯವಿದ್ದ ಸಂದರ್ಭಗಳಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡಲು ಸಂಸತ್ತಿಗೆ ಅಧಿಕಾರವನ್ನು ಸಂವಿಧಾನ ನೀಡಿದೆ

* ಒಕ್ಕೂಟ ವ್ಯವಸ್ಥೆಯನ್ನು ಪ್ರತಿಪಾದಿಸುತ್ತದೆ. ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಗಳಿಗೂ ಅಧಿಕಾರ ನೀಡಿದೆ. ವಿಶೇಷ/ತುರ್ತು ಸಂದರ್ಭಗಳಲ್ಲಿ ಪೂರ್ಣ ಅಧಿಕಾರವನ್ನು ಕೇಂದ್ರಕ್ಕೆ ನೀಡುತ್ತದೆ

* ಪ್ರಜಾಪ್ರಭುತ್ವದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಿಗೆ ಪ್ರತ್ಯೇಕ ಜವಾಬ್ದಾರಿಗಳನ್ನು ನೀಡಿದೆ

* ಶಾಸನಗಳು ಅಥವಾ ಸಂವಿಧಾನವನ್ನು ಉಲ್ಲಂಘಿಸುವ ಸರ್ಕಾರದ ಕ್ರಮಗಳನ್ನು ರದ್ದು ಮಾಡುವ ಅಧಿಕಾರವನ್ನು ಸ್ವತಂತ್ರ ನ್ಯಾಯಾಂಗಕ್ಕೆ ಕೊಟ್ಟಿದೆ

* ಜಾತ್ಯತೀತ ತತ್ವ ಪ್ರತಿಪಾದಿಸುತ್ತದೆ. ತಮಗೆ ಇಷ್ಟವಾದ ಧರ್ಮವನ್ನು ಅನುಸರಿಸುವ ಹಕ್ಕನ್ನು ಪ್ರಜೆಗಳಿಗೆ ನೀಡಿದೆ

* ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯೇಕ ಕಾನೂನುಗಳನ್ನು ರೂಪಿಸಿದರೂ ಈ ಕಾನೂನುಗಳ ಅನುಷ್ಠಾನದ ಮೇಲುಸ್ತುವಾರಿಗೆ ವಿವಿಧ ಹಂತದ ನ್ಯಾಯಾಲಯಗಳನ್ನೊಳಗೊಂಡ ಒಂದು ಸಂಯೋಜಿತ ವ್ಯವಸ್ಥೆಗೆ ಸಂವಿಧಾನ ಅವಕಾಶ ನೀಡಿದೆ

* ಪ್ರಜೆಗಳಿಗೆ ಆರು ಮೂಲಭೂತ ಹಕ್ಕುಗಳು ಮತ್ತು 11 ಮೂಲಭೂತ ಕರ್ತವ್ಯಗಳನ್ನು ನೀಡಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದೂ ಹೇಳಿದೆ

ಆ 15 ಮಹಿಳೆಯರು

299 ಸದಸ್ಯರ ಸಂವಿಧಾನ ರಚನಾ ಸಭೆಯಲ್ಲಿ 15 ಮಂದಿ ಮಹಿಳೆಯರಿದ್ದರು. ಮಹಿಳೆಯರ ಹಕ್ಕುಗಳು ಸೇರಿದಂತೆ ಸಂವಿಧಾನದಲ್ಲಿ ಅಡಕವಾಗಿರುವ ಹಲವು ಪ್ರಮುಖ ವಿಚಾರಗಳಲ್ಲಿ ಇವರ ಕೊಡುಗೆ ಮಹತ್ವಪೂರ್ಣವಾದುದು ಎನ್ನಲಾಗಿದೆ. ಇವರ ಪೈಕಿ ಸರೋಜಿನಿ ನಾಯ್ಡು, ಸುಚೇತಾ ಕೃಪಲಾನಿ, ವಿಜಯಲಕ್ಷ್ಮಿ ಪಂಡಿತ್, ಪೂರ್ಣಿಮಾ ಬ್ಯಾನರ್ಜಿ, ರಾಣಿ ಅಮೃತ್ ಕೌರ್, ರೇಣುಕಾ ರಾಯ್,
ಆ್ಯನಿ ಮ್ಯಾಸ್ಕರೆನ್ ಪ್ರಮುಖರಾದವರು.

ಕೇರಳದ ಪಾಲ್ಘಾಟ್ನ ಅಮ್ಮು ಸ್ವಾಮಿನಾಥನ್, ಉತ್ತರ ಪ್ರದೇಶದ ಬೇಗಂ ಅಜಾಜ್ ರಸೂಲ್, ಆಂಧ್ರ ಪ್ರದೇಶದ ದುರ್ಗಾಬಾಯಿ ದೇಶಮುಖ್, ಬರೋಡದ ಹನ್ಸ ಜೀವರಾಜ್ ಮೆಹತಾ, ಲಖನೌದ ಕಮಲಾ ಚೌಧರಿ, ಬಂಗಾಳದ ಮಾಲತಿದೇವಿ ಚೌಧರಿ, ಅಸ್ಸಾಂನ ಲೀಲಾ ರಾಯ್ ಕೂಡ ಸಂವಿಧಾನ ರಚನಾ ಸಭೆಯಲ್ಲಿ ಸ್ಥಾನ ಪಡೆದಿದ್ದರು. ಇವರೆಲ್ಲರ ಜತೆಗೆ ಕೊಚ್ಚಿಯ ದಾಕ್ಷಾಯಿಣಿ ವೇಲಾಯುಧನ್ ಅವರೂ ಇದ್ದರು. ಕೇರಳದ ಕೊಚ್ಚಿಯ ಇವರು, ಪೊಲೆಯ (ಎಸ್ಸಿ) ಸಮುದಾಯಕ್ಕೆ ಸೇರಿದ್ದರು. ಜಾತಿ ತಾರತಮ್ಯದ ವಿರುದ್ಧ ಹೋರಾಟ ನಡೆಸಿದ್ದ ಇವರು ಸಂವಿಧಾನ ರಚನೆಯ ವೇಳೆ ದಲಿತರು, ಆದಿವಾಸಿಗಳ ಹಕ್ಕುಗಳ ವಿಚಾರದಲ್ಲಿ ಅಂಬೇಡ್ಕರ್ ಅವರಿಗೆ ಬೆಂಬಲವಾಗಿ ನಿಂತಿದ್ದರು.

ಆಧಾರ:ಸಂಸದ್.ಇನ್, ಸುಪ್ರೀಂಕೋರ್ಟ್ ವೆಬ್ಸೈಟ್,ಪಿಐಬಿ, ಬಿಬಿಸಿ, ಲಲಿತಕಲಾ ಅಕಾಡೆಮಿ ವೆಬ್ಸೈಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.