ದೇಶದ ನಗರ ಪ್ರದೇಶದ ಪ್ರತಿ ಕುಟುಂಬವು ಪ್ರತಿ ತಿಂಗಳು ಮನೆ ಖರ್ಚಿಗೆಂದು ಸರಾಸರಿ ₹6,521 ವೆಚ್ಚ ಮಾಡಿದರೆ, ಗ್ರಾಮೀಣ ಪ್ರದೇಶದ ಕುಟುಂಬವು ₹3,860 ವೆಚ್ಚ ಮಾಡುತ್ತದೆ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿಯ ‘ಕುಟುಂಬ ಗೃಹಬಳಕೆ ವೆಚ್ಚ ಸಮೀಕ್ಷೆ’ಯಲ್ಲಿ ಹೇಳಲಾಗಿದೆ. 2011–12ರಲ್ಲಿ ಹೀಗೆ ಮಾಡುತ್ತಿದ್ದ ವೆಚ್ಚಕ್ಕೂ 2022–23ನೇ ಸಾಲಿನಲ್ಲಿ ಮಾಡಿದ ವೆಚ್ಚದ ಮಧ್ಯೆ ಎರಡುಪಟ್ಟು ಏರಿಕೆಯಾಗಿದೆ. ವೆಚ್ಚದಲ್ಲಿ ಆಗಿರುವ ಏರಿಕೆಯು ಒಂದೆಡೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯನ್ನು ಸೂಚಿಸಿದರೆ, ಮತ್ತೊಂದೆಡೆ ಜನರ ಖರೀದಿ ಸಾಮರ್ಥ್ಯ ಏರಿಕೆಯಾಗಿರುವುದನ್ನೂ ಸೂಚಿಸುತ್ತದೆ. ಆದರೆ ಬಡವರು ಮತ್ತು ಸಿರಿವಂತರ ನಡುವಣ ವೆಚ್ಚದ ಮೊತ್ತದ ನಡುವಣ ಅಂತರವು ಅಧಿಕವಾಗಿಯೇ ಇದೆ. ವಿವಿಧ ಸಾಮಾಜಿಕ ವರ್ಗಗಳ ನಡುವಣ ಈ ಅಂತರವೂ ಢಾಳಾಗಿ ಕಾಣುತ್ತದೆ. ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಲ್ಲಿ ವಂಚಿತರು ವಂಚಿತರಾಗಿಯೇ ಇದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ.
‘ಕುಟುಂಬ ಗೃಹಬಳಕೆ ವೆಚ್ಚ ಸಮೀಕ್ಷೆ’ಯು ದೇಶದ ಆರ್ಥಿಕ ಸ್ಥಿತಿಗತಿಗೆ ಹಿಡಿದ ಕೈಗನ್ನಡಿ ಎಂದು ಭಾನುವಾರವಷ್ಟೇ ಬಿಡುಗಡೆಯಾದ ಸಂಕ್ಷಿಪ್ತ ವರದಿಯಲ್ಲಿ ಹೇಳಲಾಗಿದೆ. ದೇಶದ ಆರ್ಥಿಕ ಪ್ರಗತಿ, ಹಣದುಬ್ಬರದ ಸ್ಥಿತಿ, ಜಿಡಿಪಿ ಬೆಳವಣಿಗೆ, ಜನರ ಜೀವನ ಮಟ್ಟ ಸುಧಾರಣೆಯನ್ನು ಈ ಸಮೀಕ್ಷೆಯ ವರದಿ ತೆರೆದಿಡುತ್ತದೆ. ಈ ಸಮೀಕ್ಷೆಯ ವರದಿಯ ಪ್ರಕಾರ ದೇಶದ ಜನರ ವೆಚ್ಚ ಮಾಡುವ ಸಾಮರ್ಥ್ಯವು ಹನ್ನೊಂದು ವರ್ಷಗಳಲ್ಲಿ ಎರಡುಪಟ್ಟು ಏರಿಕೆಯಾಗಿದೆ. ಆದರೆ ಬಡವರು ಮತ್ತು ಸಿರಿವಂತರ ನಡುವೆ ಇದ್ದ ವೆಚ್ಚ ಮಾಡುವ ಸಾಮರ್ಥ್ಯದ ಅಂತರವು ಹಾಗೇ ಉಳಿದುಕೊಂಡಿದೆ.
ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶದಲ್ಲಿನ ಕುಟುಂಬಗಳು ಪ್ರತಿ ತಿಂಗಳು ಮನೆ ಖರ್ಚಿಗೆ ಮಾಡಬೇಕಿರುವ ವೆಚ್ಚದ ನಡುವಣ ಅಂತರವೂ ಹತ್ತು ವರ್ಷಗಳಲ್ಲಿ ಹಾಗೆಯೇ ಉಳಿದಿದೆ. ಜಾತಿ ಸಮುದಾಯಗಳ ನಡುವೆ ಇರುವ ಈ ವೆಚ್ಚ ಅಂತರವೂ ಹಾಗೇ ಉಳಿದಿದೆ. ಕೇಂದ್ರ ಸರ್ಕಾರದ ಉಚಿತ ಪಡಿತರ ಯೋಜನೆ, ಉಚಿತ ವೈದ್ಯಕೀಯ ಸೇವೆ ಮತ್ತಿತರ ಕಲ್ಯಾಣ ಕಾರ್ಯಕ್ರಮಗಳ ಕಾರಣದಿಂದ ಜನರ ವೆಚ್ಚ ಮಾಡುವ ಸಾಮರ್ಥ್ಯ ಏರಿಕೆಯಾಗಿದೆ ಎಂದು ಸಂಕ್ಷಿಪ್ತ ವರದಿಯಲ್ಲಿ ಹೇಳಲಾಗಿದೆ. ಇಂತಹ ಕಾರ್ಯಕ್ರಮಗಳ ಫಲಾನುಭವಿಗಳು ಸಾಮಾನ್ಯವಾಗಿ ಆರ್ಥಿಕವಾಗಿ ಹಿಂದುಳಿದವರೇ ಆಗಿದ್ದಾರೆ. ಇಂತಹ ಕಲ್ಯಾಣ ಕಾರ್ಯಕ್ರಮಗಳ ಹೊರತಾಗಿಯೂ ಜೀವನಮಟ್ಟವನ್ನು ಸುಧಾರಿಸುವಂತಹ ಸರಕು ಮತ್ತು ಸೇವೆಗಳಿಗಾಗಿ ಈ ಜನರು ಮಾಡುತ್ತಿರುವ ವೆಚ್ಚ ಮತ್ತು ಸಿರಿವಂತರು ಮಾಡುವ ವೆಚ್ಚದ ಅಂತರ ಹಾಗೇ ಉಳಿದಿದೆ.
ದೇಶದಲ್ಲಿನ ವಿವಿಧ ವರ್ಗದ ಜನರು ಪ್ರತಿ ತಿಂಗಳು ಮನೆ ಖರ್ಚಿಗೆಂದು ಮಾಡುವ ವೆಚ್ಚದಲ್ಲಿ ಭಾರಿ ಅಂತರವಿದೆ. ದೇಶದ ಗ್ರಾಮೀಣ ಪ್ರದೇಶದ ಅತ್ಯಂತ ಬಡ ಕುಟುಂಬಗಳು ಪ್ರತಿ ತಿಂಗಳು ಮಾಡುವ ಸರಾಸರಿ ವೆಚ್ಚವು ₹1,400ರ ಆಸುಪಾಸಿನಲ್ಲಿ ಇದೆ. ಆದರೆ ಗ್ರಾಮೀಣ ಪ್ರದೇಶದಲ್ಲಿನ ಸಿರಿವಂತ ಕುಟುಂಬಗಳು ಪ್ರತಿ ತಿಂಗಳು ಮಾಡುವ ಸರಾಸರಿ ವೆಚ್ಚವು ₹10,000ಕ್ಕಿಂತಲೂ ಹೆಚ್ಚು. ಈ ಎರಡೂ ವೆಚ್ಚಗಳ ನಡುವಣ ಅಂತರ ಶೇ 600ಕ್ಕಿಂತಲೂ ಹೆಚ್ಚು ಎನ್ನುತ್ತದೆ ಈ ದತ್ತಾಂಶ.
ಅಂದರೆ ದೇಶದ ಗ್ರಾಮೀಣ ಪ್ರದೇಶದಲ್ಲಿನ ಅತ್ಯಂತ ಕಡೆಯ ಶೇ 5ರಷ್ಟು ಬಡ ಕುಟುಂಬಗಳು ಪ್ರತಿ ತಿಂಗಳು ಮಾಡುವ ಸರಾಸರಿ ವೆಚ್ಚಕ್ಕಿಂತ, ಗ್ರಾಮೀಣ ಪ್ರದೇಶದ ಸಿರಿವಂತರಲ್ಲೇ ಮೊದಲ
ಶೇ 5ರಷ್ಟು ಕುಟುಂಬವು ಪ್ರತಿ ತಿಂಗಳು ಮಾಡುವ ಸರಾಸರಿ ವೆಚ್ಚವು ಶೇ 634ರಷ್ಟು ಹೆಚ್ಚು. ನಗರ ಪ್ರದೇಶದಲ್ಲಿನ ಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ನಗರ ಪ್ರದೇಶದಲ್ಲಿ ಇಂತಹ ಅಂತರದ ಪ್ರಮಾಣವು ಶೇ 898ರಷ್ಟು ಇದೆ.
ಈ ಲೆಕ್ಕಾಚಾರವು ಸರಾಸರಿ ರೂಪದಲ್ಲಿ ಇರುವ ಕಾರಣ, ನೈಜ ಚಿತ್ರಣವನ್ನು ನೀಡುವುದಿಲ್ಲ. ಹೀಗಾಗಿ ಬಡವರು ಮಾಡುವ ವೆಚ್ಚವು ಇಲ್ಲಿ ತೋರಿಸಿದ್ದಕ್ಕಿಂತ ಕಡಿಮೆ ಇರಬಹುದು ಮತ್ತು ಸಿರಿವಂತರು ಮಾಡುವ ವೆಚ್ಚವು ಇಲ್ಲಿ ತೋರಿಸಿದ್ದಕ್ಕಿಂತ ಹೆಚ್ಚು ಇರಬಹುದು.
ಸಾಮಾಜಿಕ–ಆರ್ಥಿಕ ಹಿನ್ನೆಲೆಯಲ್ಲಿಯೂ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಸಮಾಜದ ತಳ ಸಮುದಾಯಗಳ ಕುಟುಂಬವೊಂದು ತಿಂಗಳಿಗೆ ಎಷ್ಟು ಖರ್ಚು ಮಾಡುವ ಸಾಮರ್ಥ್ಯ ಹೊಂದಿದೆ ಎನ್ನುವುದನ್ನು ಈ ಸಮೀಕ್ಷೆಯ ಅಂಕಿಅಂಶಗಳು ನಿರೂಪಿಸಿವೆ. ಜೊತೆಗೆ, ಇವೇ ಜಾತಿ–ಸಮುದಾಯಗಳ ಕುಟುಂಬವು ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ಆ ಕುಟುಂಬದ ಸಾಮರ್ಥ್ಯ ಎಷ್ಟು ಎಂಬುದನ್ನೂ ಇಲ್ಲಿ ಹೇಳಲಾಗಿದೆ.
ಸಾಮಾಜಿಕ ಸ್ತರವಿನ್ಯಾಸದಲ್ಲಿ ಮೇಲಿನ ಸ್ಥಾನದಲ್ಲಿರುವ ಜಾತಿ ಸಮುದಾಯಗಳಿಗೆ (ಸಮೀಕ್ಷೆಯಲ್ಲಿ ಇವನ್ನು ಉಳಿದ ಜಾತಿ ಸಮುದಾಯ ಎಂದು ಗುರುತಿಸಲಾಗಿದೆ) ಹೋಲಿಸಿಕೊಂಡರೆ, ತಳ ಸಮುದಾಯಗಳ ಕುಟುಂಬದ ಖರ್ಚು ಮಾಡುವ ಸಾಮರ್ಥ್ಯವು ಕಡಿಮೆ ಇದೆ. ಪರಿಶಿಷ್ಟ ಜಾತಿ, ವರ್ಗ ಅಥವಾ ಹಿಂದುಳಿದ ಸಮುದಾಯದ ಕುಟುಂಬವೊಂದು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದರೆ ಅದು ಸುಮಾರು ₹3,000ದಿಂದ ₹3,950ವರಗೆ ಖರ್ಚು ಮಾಡುತ್ತವೆ. ಅದೇ ಉಳಿದ ಜಾತಿ–ಸಮುದಾಯಗಳ ಕುಟುಂಬವೊಂದು ಸುಮಾರು ₹4,500ರಷ್ಟು ಖರ್ಚು ಮಾಡುತ್ತವೆ. ನಗರ ಪ್ರದೇಶದ ವಸ್ತುಸ್ಥಿತಿಯು ಇದಕ್ಕಿಂತ ಭಿನ್ನವೇನಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.