ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
 ಆಳ–ಅಗಲ | ಬರ ಪರಿಹಾರ ಯಾರ ಹೊಣೆ–3: ನರೇಗಾ ವಿಸ್ತರಿಸದ ಕೇಂದ್ರ ಸರ್ಕಾರ
ಆಳ–ಅಗಲ | ಬರ ಪರಿಹಾರ ಯಾರ ಹೊಣೆ–3: ನರೇಗಾ ವಿಸ್ತರಿಸದ ಕೇಂದ್ರ ಸರ್ಕಾರ
Published 8 ಫೆಬ್ರುವರಿ 2024, 19:18 IST
Last Updated 8 ಫೆಬ್ರುವರಿ 2024, 19:18 IST
ಅಕ್ಷರ ಗಾತ್ರ

ರಾಜ್ಯದ 223 ತಾಲ್ಲೂಕುಗಳಲ್ಲಿ ತೀವ್ರ ಬರ ಇದೆ ಎಂದು ರಾಜ್ಯ ಸರ್ಕಾರ ಘೋಷಿಸಿ ತಿಂಗಳುಗಳೇ ಕಳೆದಿವೆ. ಬರ ತೀವ್ರವಾಗಿರುವ ಈ ತಾಲ್ಲೂಕುಗಳಲ್ಲಿ ಜನರಿಗೆ ನರೇಗಾದ ಉದ್ಯೋಗ ಖಾತರಿಯ ಮೂಲಕ ಆರ್ಥಿಕ ಭದ್ರತೆಯನ್ನು ಒದಗಿಸಲೇಬೇಕು. ತೀವ್ರ ಬರದ ಸಂದರ್ಭದಲ್ಲಿ ಕುಟುಂಬವೊಂದಕ್ಕೆ 150 ದಿನಗಳವರೆಗೆ ಉದ್ಯೋಗ ಖಾತರಿಯನ್ನು ವಿಸ್ತರಿಸಬೇಕು ಎನ್ನುತ್ತದೆ ನಿಯಮ. ಆದರೆ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಿರುವುದು ಕೇಂದ್ರ ಸರ್ಕಾರ. ನರೇಗಾವನ್ನು ವಿಸ್ತರಿಸಿ ಎಂದು ರಾಜ್ಯ ಸರ್ಕಾರವು ಹಲವು ಬಾರಿ ಮನವಿ ಮಾಡಿದ್ದರೂ ಕೇಂದ್ರ ಆ ಯೋಜನೆಯನ್ನು ವಿಸ್ತರಿಸಿಲ್ಲ...

ಗ್ರಾಮೀಣ ಪ್ರದೇಶದಲ್ಲಿ ಈಗಲೂ ಅತ್ಯಂತ ಪ್ರಮುಖ ಕೆಲಸ ಕೃಷಿಯೇ ಆಗಿದೆ. ಸಣ್ಣ ಹಿಡುವಳಿದಾರರು, ಭೂರಹಿತ ಕೃಷಿ ಕಾರ್ಮಿಕರ ಪ್ರಮುಖ ಜೀವನೋಪಾಯ ಕೃಷಿಯನ್ನೇ ಅವಲಂಬಿಸಿದೆ. ಕೃಷಿ ಇಲ್ಲದೇ ಇರುವ ದಿನಗಳಲ್ಲೂ ಆ ಜನರಿಗೆ ಉದ್ಯೋಗವನ್ನು ಒದಗಿಸಬೇಕು ಎಂದು ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ–ನರೇಗಾ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಈ ಯೋಜನೆ ಪ್ರಕಾರ ಕುಟುಂಬವೊಂದಕ್ಕೆ ವರ್ಷವೊಂದರಲ್ಲಿ 100 ದಿನಗಳ ಉದ್ಯೋಗವನ್ನು ಒದಗಿಸಬೇಕು. ನರೇಗಾ ಯೋಜನೆಯನ್ನು ರೂಪಿಸುವ ಸಂದರ್ಭದಲ್ಲೇ, ನೆರೆ ಅಥವಾ ಬರದಂತಹ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಉದ್ಯೋಗವನ್ನು 150 ದಿನಗಳವರೆಗೆ ವಿಸ್ತರಿಸಬೇಕು ಎಂಬ ಅಂಶವನ್ನು ಸೇರಿಸಲಾಗಿತ್ತು. ನಿರ್ವಹಣಾ ಕೈಪಿಡಿಯಲ್ಲೂ ಈ ಅಂಶವನ್ನು ಸೇರಿಸಿಕೊಳ್ಳಲಾಗಿತ್ತು. ಆದರೆ ಈಗಿನ ಕೇಂದ್ರ ಸರ್ಕಾರವು ತನ್ನದೇ ನಿಯಮದಂತೆಯೂ ನಡೆದುಕೊಳ್ಳುತ್ತಿಲ್ಲ, ನರೇಗಾವನ್ನು ವಿಸ್ತರಿಸುತ್ತಿಲ್ಲ.

ಮುಂಗಾರು ಮಳೆ ಅಥವಾ ಹಿಂಗಾರು ಮಳೆ ಕೊರತೆಯಾದುದು ಗೊತ್ತಾದ ಬೆನ್ನಲ್ಲೇ ರಾಜ್ಯ ಸರ್ಕಾರಗಳು ಗ್ರಾಮೀಣ ಭಾಗದಲ್ಲಿ ಉದ್ಯೋಗವನ್ನು ಒದಗಿಸಬೇಕು ಎನ್ನುತ್ತದೆ ಕೇಂದ್ರ ಸರ್ಕಾರದ ನಿಯಮ. ಬರ ಮತ್ತು ತೀವ್ರ ಬರದ ಸಂದರ್ಭದಲ್ಲಿ ನೇರ ಹೊಡೆತ ಬೀಳುವುದು ಕೃಷಿ ಕಾರ್ಮಿಕರಿಗೆ. ಅವರು ಉದ್ಯೋಗ ಅರಸಿಕೊಂಡು ಬೇರೆಡೆಗೆ ಗುಳೆ ಹೋಗುವುದನ್ನು ತಡೆಯಬೇಕು ಮತ್ತು ಇದಕ್ಕೆ ಅಗತ್ಯವಿರುವ ಹಣಕಾಸು ನೆರವನ್ನು ಪಡೆಯಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದೂ ಈ ನಿಯಮ ಹೇಳುತ್ತದೆ. ಆದರೆ ಕರ್ನಾಟಕ ಸರ್ಕಾರವು ಹೀಗೆ ಸೆಪ್ಟೆಂಬರ್‌ನಲ್ಲಿ ಸಲ್ಲಿಸಿದ್ದ ಮನವಿಗೆ ಕೇಂದ್ರ ಸರ್ಕಾರ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ರಾಜ್ಯದಲ್ಲಿ ತೀವ್ರ ಬರದ ಸ್ಥಿತಿ ಎದುರಾದ ಸಂದರ್ಭದಲ್ಲೇ ರಾಜ್ಯ ಸರ್ಕಾರವು ನರೇಗಾ ಅಡಿಯ ಕಾಮಗಾರಿಗಳಿಗೆ ಒತ್ತು ನೀಡಿತ್ತು. ಸೆಪ್ಟೆಂಬರ್‌ನಲ್ಲಿ ತೀವ್ರ ಬರ ಇದೆ ಎಂದು ಘೋಷಿಸಿದ ನಂತರ, ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ‘ತೀವ್ರ ಬರದ ಕಾರಣ ರಾಜ್ಯದಲ್ಲಿ ನರೇಗಾ ಅಡಿ ಉದ್ಯೋಗಕ್ಕೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಪ್ರತಿ ಕುಟುಂಬಕ್ಕೆ ನೀಡಲಾಗುವ 100 ದಿನಗಳ ಉದ್ಯೋಗವನ್ನು 150 ದಿನಗಳಿಗೆ ವಿಸ್ತರಿಸಬೇಕು’ ಎಂದು ಕೋರಿತ್ತು. ಈ ಬೇಡಿಕೆಯನ್ನು ಕೇಂದ್ರ ಸರ್ಕಾರವೇ ರೂಪಿಸಿದ್ದ ‘ಬರ ನಿರ್ವಹಣಾ ಕೈಪಿಡಿ’ಯ ನಿಯಮಗಳ ಅನ್ವಯವೇ ಸಲ್ಲಿಸಲಾಗಿತ್ತು.

ನಿಯಮದ ಪ್ರಕಾರ, ರಾಜ್ಯ ಸರ್ಕಾರವು ವೈಜ್ಞಾನಿಕ ವಿಧಾನಗಳ ಮೂಲಕ ಅಧ್ಯಯನ ನಡೆಸಿ ತೀವ್ರ ಬರ ಇದೆ ಎಂಬುದನ್ನು ಘೋಷಿಸಬೇಕು. ಹಾಗೆ ಘೋಷಿಸಿದ ಒಂದು ವಾರದ ಒಳಗೆ ಅಗತ್ಯವಿರುವ ಪರಿಹಾರಗಳಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ನರೇಗಾ ಅಡಿ ನೋಂದಣಿ ಮಾಡಿಕೊಂಡಿರುವ ಕುಟುಂಬಗಳ ಸಂಖ್ಯೆ, ಜಾಬ್‌ ಕಾರ್ಡ್‌ ಹೊಂದಿರುವವರ ಸಂಖ್ಯೆ, ಉದ್ಯೋಗಕ್ಕೆ ಇರುವ ಬೇಡಿಕೆ ಮೊದಲಾದ ವಿವರಗಳನ್ನು ತಾಲ್ಲೂಕುವಾರು ಪಟ್ಟಿಯ ರೂಪದಲ್ಲಿ ಒದಗಿಸಬೇಕು. ರಾಜ್ಯ ಸರ್ಕಾರವು ಸಲ್ಲಿಸಿರುವ ಮನವಿಯಲ್ಲಿ ಈ ವಿವರಗಳೆಲ್ಲವೂ ಇದೆ.

2023–24ನೇ ಸಾಲಿನಲ್ಲಿ ಕರ್ನಾಟಕಕ್ಕೆ ನರೇಗಾ ಯೋಜನೆ ಅಡಿ ಒಟ್ಟು 13 ಕೋಟಿ ಮಾನವ ದಿನಗಳಷ್ಟು (ಎಂಟು ಗಂಟೆಗಳ ಒಂದು ಕೆಲಸವನ್ನು ಒಂದು ಮಾನವ ದಿನ ಎಂದು ಪರಿಗಣಿಸಲಾಗುತ್ತದೆ. 100 ಮಂದಿ ಒಂದೇ ದಿನದಲ್ಲಿ ಎಂಟು ತಾಸು ಕೆಲಸ ಮಾಡಿದರೆ, ಅದನ್ನು 100 ಮಾನವ ದಿನಗಳು ಎಂದು ಪರಿಗಣಿಸಲಾಗುತ್ತದೆ) ಉದ್ಯೋಗವನ್ನು ಕೇಂದ್ರ ಸರ್ಕಾರವು ಹಂಚಿಕೆ ಮಾಡಿತ್ತು. ತೀವ್ರ ಬರದ ಸ್ಥಿತಿ ಇರುವ ಕಾರಣದಿಂದ ರಾಜ್ಯ ಸರ್ಕಾರವು ಈಗಾಗಲೇ 12.40 ಕೋಟಿ ಮಾನವ ದಿನಗಳಷ್ಟು ಉದ್ಯೋಗವನ್ನು ಒದಗಿಸಿದೆ. ಈ ಆರ್ಥಿಕ ವರ್ಷದ ಅಂತ್ಯದವರೆಗೆ ರಾಜ್ಯದ ಜನರಿಗೆ ಉದ್ಯೋಗ ಖಾತರಿಯನ್ನು ಒದಗಿಸಲು ಇನ್ನೂ ಹೆಚ್ಚುವರಿಯಾಗಿ 5 ಕೋಟಿ ಮಾನವ ದಿನಗಳಷ್ಟು ಕೆಲಸ ಒದಗಿಸಬೇಕು ಎಂದು ಮನವಿ ಮಾಡಿತ್ತು.

ಈ ಬಗ್ಗೆ ಮನವಿ ಸಲ್ಲಿಸಿದ ನಂತರ ಕೇಂದ್ರ ತಂಡವು ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಆನಂತರದ ಏಳು ದಿನಗಳಲ್ಲಿ ಆ ತಂಡವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ನಂತರದ ಒಂದು ತಿಂಗಳೊಳಗೆ ಕೇಂದ್ರ ಸರ್ಕಾರವು ಪರಿಹಾರವನ್ನು ಒದಗಿಸಬೇಕು. ನರೇಗಾ ಅಡಿ ಉದ್ಯೋಗದ ದಿನಗಳನ್ನು ವಿಸ್ತರಿಸಲೂ ಇದೇ ನಿಯಮಗಳು ಮತ್ತು ಕಾಲಮಿತಿ ಅನ್ವಯವಾಗುತ್ತದೆ. ನರೇಗಾವನ್ನು ವಿಸ್ತರಿಸಿ ಎಂದು 2023ರ ಸೆಪ್ಟೆಂಬರ್‌ನಲ್ಲೇ ರಾಜ್ಯ ಸರ್ಕಾರ ಮನವಿ ಸಲ್ಲಿಸಿದೆ. ಆನಂತರ ಹಲವು ಬಾರಿ ಮತ್ತೆ ಮನವಿ ಮಾಡಿಕೊಂಡಿದೆ. ಆದರೆ ಕೇಂದ್ರ ಸರ್ಕಾರ ನರೇಗಾವನ್ನು ವಿಸ್ತರಿಸಲು, ಕರ್ನಾಟಕದ ಜನರಿಗೆ ಉದ್ಯೋಗ ಭದ್ರತೆಯನ್ನು ವಿಸ್ತರಿಸಲು ಈವರೆಗೆ ಅನುಮತಿ ನೀಡಿಲ್ಲ.

ಆಗ ನೀಡಿದ್ದು, ಈಗೇಕೆ ನೀಡುತ್ತಿಲ್ಲ?

2018–19ನೇ ಸಾಲಿನಲ್ಲಿ ರಾಜ್ಯದ 156 ತಾಲ್ಲೂಕುಗಳಲ್ಲಿ ಬರ ಇದೆ ಎಂದು ಆಗಿನ ಜೆಡಿಎಸ್‌–ಕಾಂಗ್ರೆಸ್‌ ನೇತೃತ್ವದ ರಾಜ್ಯದ ಮೈತ್ರಿ ಸರ್ಕಾರ ಘೋಷಿಸಿತ್ತು. 31 ತಾಲ್ಲೂಕುಗಳಲ್ಲಿ ನರೇಗಾ ಯೋಜನೆಯನ್ನು 150 ದಿನಗಳವರೆಗೆ ವಿಸ್ತರಿಸುವಂತೆ 2019ರ ಜನವರಿ 28ರಂದು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಕೇಂದ್ರ ಸರ್ಕಾರವು 15 ದಿನಗಳಲ್ಲಿ ಆ ಮನವಿಗೆ ಸ್ಪಂದಿಸಿ ಫೆಬ್ರುವರಿ 13ರಂದು ನರೇಗಾ ವಿಸ್ತರಣೆಗೆ ಅನುಮತಿ ನೀಡಿತ್ತು. ಅದಕ್ಕೂ ಮುನ್ನ ಮುಂಗಾರು ಅವಧಿಯಲ್ಲಿ ತೀವ್ರ ಬರ ಎದುರಿಸಿದ್ದ 125 ತಾಲ್ಲೂಕುಗಳಲ್ಲೂ ನರೇಗಾವನ್ನು 150 ದಿನಗಳಿಗೆ ವಿಸ್ತರಿಸಲಾಗಿತ್ತು.

2023ರ ಸೆಪ್ಟೆಂಬರ್‌ನಲ್ಲಿ ಸಲ್ಲಿಸಿದ್ದ ಮನವಿಯ ಪ್ರಕಾರ ರಾಜ್ಯದ 195 ತಾಲ್ಲೂಕುಗಳಲ್ಲಿ 42.3 ಲಕ್ಷ ಜನರು ನರೇಗಾ ಅಡಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಅಷ್ಟು ಜನರಿಗೆ ಒಟ್ಟು 7.32 ಕೋಟಿ ಮಾನವ ದಿನಗಳಷ್ಟು ಉದ್ಯೋಗವನ್ನು ನೀಡಬೇಕು ಎಂದು ರಾಜ್ಯ ಸರ್ಕಾರ ವಿವರವನ್ನು ನೀಡಿತ್ತು. ಆ ಮನವಿ ಸಲ್ಲಿಸಿ ಐದು ತಿಂಗಳು ಕಳೆದಿವೆ. ಆದರೆ ಕೇಂದ್ರ ಸರ್ಕಾರ ಈವರೆಗೆ ನರೇಗಾವನ್ನು ವಿಸ್ತರಿಸಿಲ್ಲ.

ಅನುಮತಿ ಒಟ್ಟಿಗೆ, ಅನುದಾನವನ್ನೂ ನೀಡಬೇಕು

ಯುಪಿಎ ಸರ್ಕಾರವು ಈ ಯೋಜನೆಯನ್ನು ರೂಪಿಸಿದಾಗ, ಅದರ ಸಂಪೂರ್ಣ ಅನುದಾನವನ್ನು ಕೇಂದ್ರ ಸರ್ಕಾರವೇ ಭರಿಸಬೇಕು ಎಂದು ನಿಯಮ ಹೇಳುತ್ತದೆ. ರಾಜ್ಯಗಳಿಂದ ಸಂಗ್ರಹಿಸುವ ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆಗಳಲ್ಲೇ ನರೇಗಾ ಯೋಜನೆಗೆಂದು ಕೇಂದ್ರ ಸರ್ಕಾರವು ಅನುದಾನವನ್ನು ತೆಗೆದಿರಿಸುತ್ತದೆ. ರಾಜ್ಯಗಳಲ್ಲಿ ಈ ಯೋಜನೆ ಅಡಿ ಬೇಡಿಕೆ ಇರುವಷ್ಟು ಉದ್ಯೋಗಕ್ಕೆ ಬೇಕಿರುವ ಅನುದಾನವನ್ನು ಹಂಚಿಕೆ ಮಾಡುತ್ತದೆ. ತೀವ್ರ ಬರದ ಸಂದರ್ಭದಲ್ಲಿ ನರೇಗಾವನ್ನು ವಿಸ್ತರಿಸಿದಾಗಲೂ ಇದೇ ನಿಯಮ ಅನ್ವಯವಾಗುತ್ತದೆ. 

ನರೇಗಾವನ್ನು ವಿಸ್ತರಿಸಿ ಎಂದು ರಾಜ್ಯ ಸರ್ಕಾರವು ಮನವಿ ಮಾಡಿಕೊಂಡರೂ, ಕೇಂದ್ರ ಸರ್ಕಾರವೇ ಅದನ್ನು ಅನುಮತಿಸಬೇಕು. ಏಕೆಂದರೆ ಈ ಯೋಜನೆ ಅಡಿ ಹೆಚ್ಚುವರಿ ಅನುದಾನವನ್ನು ಕೊಡಬೇಕಿರುವುದೂ ಕೇಂದ್ರ ಸರ್ಕಾರವೇ. ಕರ್ನಾಟಕ ಸರ್ಕಾರದ ಮನವಿಯಂತೆ ಕೇಂದ್ರ ಸರ್ಕಾರವು ನರೇಗಾ ಅಡಿ ಹೆಚ್ಚುವರಿ 50 ದಿನಗಳ ಉದ್ಯೋಗವನ್ನು ವಿಸ್ತರಿಸಿದರೆ, ಅದರ ವೆಚ್ಚವನ್ನು ಕೇಂದ್ರವೇ ಭರಿಸಬೇಕಾಗುತ್ತದೆ. ಹೆಚ್ಚುವರಿ 50 ದಿನಗಳ ಕೆಲಸಕ್ಕೆ ಅನುಮತಿ ಕೊಟ್ಟರೆ, 5 ಕೋಟಿಯಷ್ಟು ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗುತ್ತದೆ. ರಾಜ್ಯದಲ್ಲಿ ನರೇಗಾ ಅಡಿ ದಿನವೊಂದಕ್ಕೆ ₹316 ಕೂಲಿ ನೀಡಲಾಗುತ್ತಿದೆ. ಅದರಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ₹1,580 ಕೋಟಿಯಷ್ಟು ಕೂಲಿ ಮೊತ್ತವನ್ನು ನೀಡಬೇಕಾಗುತ್ತದೆ. ಮತ್ತು ನರೇಗಾ ಅಡಿ ಕೈಗೊಂಡ ಕಾಮಗಾರಿಯ ಸಾಮಗ್ರಿಗಳ ವೆಚ್ಚವನ್ನೂ ನೀಡಬೇಕಾಗುತ್ತದೆ. 

ಈ ವರ್ಷದ್ದೇ ನೂರಾರು ಕೋಟಿ ಬಾಕಿ

2023–24ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕದಲ್ಲಿ ನರೇಗಾ ಅಡಿ ಕೈಗೊಳ್ಳಲಾದ ಕಾಮಗಾರಿಗಳ ಕೂಲಿ ಮತ್ತು ಸಾಮಗ್ರಿ ವೆಚ್ಚದಲ್ಲಿ ಕೇಂದ್ರ ಸರ್ಕಾರವು ₹950 ಕೋಟಿಗಿಂತಲೂ ಹೆಚ್ಚು ಬಾಕಿ ಉಳಿಸಿಕೊಂಡಿದೆ. ಇದೇ ಬುಧವಾರ (ಫೆಬ್ರುವರಿ 7) ಹಣಕಾಸು ಸಚಿವಾಲಯವು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ಇದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT