ವಿದ್ಯುತ್‌ಚಾಲಿತ (ಇ.ವಿ) ಸ್ಕೂಟರ್‌ಗಳಿಗೆ ಬೆಂಕಿ ಹೊತ್ತಿಕೊಳ್ಳುತ್ತಿರುವ ಪ್ರಕರಣಗಳು ಒಂದೆರಡು ತಿಂಗಳಿನಿಂದ ಹೆಚ್ಚಾಗಿ ವರದಿಯಾಗುತ್ತಿವೆ. ಇದು ಭವಿಷ್ಯದ ಇ.ವಿ ಮಾರುಕಟ್ಟೆ ಹಾಗೂ ಸ್ಕೂಟರ್ ಖರೀದಿಸುವವರನ್ನು ಆತಂಕಕ್ಕೆ ತಳ್ಳಿದೆ. ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಮೊದಲಾದ ಕಡೆಗಳಲ್ಲಿ ವರದಿಯಾಗಿರುವ ಇಂತಹ ಹಲವು ಪ್ರಕರಣಗಳು ಭೀತಿ ಮೂಡಿಸಿವೆ.
ಓಲಾ, ಒಕಿನಾವಾ, ಜಿತೇಂದ್ರ ಇವಿ, ಪ್ಯೂರ್ ಇವಿ ಮೊದಲಾದ ಸಂಸ್ಥೆಗಳು ತಯಾರಿಸಿದ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಈ ಸಂಸ್ಥೆಗಳು ತನಿಖೆಗೆ ಮುಂದಾಗಿವೆ. ಓಲಾ ಕಂಪನಿಯ ಎಸ್1 ಪ್ರೊ ಹೆಸರಿನ ಸ್ಕೂಟರ್ ಪುಣೆಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದಾಗ ಬೆಂಕಿಗಾಹುತಿಯಾಯಿತು. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡಿತು. ಸ್ಕೂಟರ್‌ನಲ್ಲಿ ಬ್ಯಾಟರಿ ಇರಿಸಿದ್ದ ಜಾಗದಿಂದ ದೊಡ್ಡ ಪ್ರಮಾಣದ ಹೊಗೆ ಬಂದಿತ್ತು. ನಂತರ ಬೆಂಕಿ ತಗುಲಿತ್ತು. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಆಗಲಿಲ್ಲ.
ಜಿತೇಂದ್ರ ಇವಿ ಸಂಸ್ಥೆಯ 40 ಸ್ಕೂಟರ್‌ಗಳನ್ನು ಟ್ರಕ್‌ನಲ್ಲಿ ಸಾಗಿಸುತ್ತಿದ್ದಾಗ, ಅದರಲ್ಲಿದ್ದ ಸ್ಕೂಟರ್‌ಗಳಿಗೆ ಬೆಂಕಿ ಹೊತ್ತಿಕೊಂಡಿತ್ತು.ತನಿಖೆ ನಡೆಸಿ ಈ ಘಟನೆಗೆ ನಿಖರ ಕಾರಣ ಕಂಡುಕೊಳ್ಳುವುದಾಗಿ ಸಂಸ್ಥೆ ತಿಳಿಸಿದೆ.
ತಮಿಳುನಾಡಿನಲ್ಲಿ ಒಕಿನಾವಾ ಸಂಸ್ಥೆಯ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡು ತಂದೆ–ಮಗಳು ಮೃತಪಟ್ಟಿದ್ದರು. ಸ್ಕೂಟರ್ ಅನ್ನು ಚಾರ್ಜ್‌ಗೆ ಹಾಕುವ ವೇಳೆ ನಿರ್ಲಕ್ಷ್ಯ ತೋರಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಒಕಿನಾವಾ ಹೇಳಿಕೆ ನೀಡಿತ್ತು. ನಂಬಲರ್ಹ ಮಾಹಿತಿಗಳು, ಸ್ಥಳೀಯ ಪ್ರಾಧಿಕಾರಗಳು ಹಾಗೂ ಪೊಲೀಸರ ಮಾಹಿತಿಯಂತೆ, ಚಾರ್ಜ್‌ಗೆ ಹಾಕುವಾಗ ಶಾರ್ಟ್ ಸರ್ಕಿಟ್ ಆಗಿ ದುರಂತ ಸಂಭವಿಸಿದೆ ಎಂದು ವಿವರಣೆ ನೀಡಿತ್ತು. ಆದರೂ, ತನಿಖೆಯ ಸಂಪೂರ್ಣ ವರದಿ ಬಂದ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿತ್ತು. 2021ರ ಅಕ್ಟೋಬರ್‌ನಲ್ಲಿ ಇದೇ ಸಂಸ್ಥೆಯ ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಎರಡೂ ಘಟನೆಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಒಕಿನಾವಾ ತಿಳಿಸಿದೆ. ದೋಷಪೂರಿತ ಸ್ವಿಚ್‌ನಿಂದಾಗಿ ಶಾರ್ಟ್ ಸರ್ಕಿಟ್ ಆಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಸ್ಥಳೀಯ ಪೊಲೀಸರು ಅಭಿಪ್ರಾಯಪಟ್ಟಿದ್ದರು.
ತಮಿಳುನಾಡಿನ ಹೊಸೂರಿನಲ್ಲಿ ಇದೇ ಶನಿವಾರ ಮತ್ತೊಂದು ಬ್ಯಾಟರಿ ಚಾಲಿತ ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸವಾರ ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದರು.ಸೀಟಿನ ಕೆಳಗಡೆ ಬೆಂಕಿ ಹೊತ್ತಿಕೊಳ್ಳುತ್ತಿದ್ದುದನ್ನು ಗಮನಿಸಿದ ಅವರು, ಸ್ಕೂಟರ್‌ನಿಂದ ಜಿಗಿದು ಪಾರಾಗಿದ್ದರು. ವರ್ಷದ ಹಿಂದೆಯಷ್ಟೇ ಈ ಸ್ಕೂಟರ್ ಖರೀದಿಸಲಾಗಿತ್ತು.ತಿರುಚಿನಾಪಳ್ಳಿ ಜಿಲ್ಲೆಯ ಮನಪ್ಪಾರೈ ಎಂಬಲ್ಲಿ ಬ್ಯಾಟರಿಚಾಲಿತ ದ್ವಿಚಕ್ರವಾಹನಕ್ಕೆ ಬೆಂಕಿ ತಗುಲಿತ್ತು.ತೆಲಂಗಾಣದಲ್ಲಿ ಸ್ಕೂಟರ್‌ನಿಂದ ಬ್ಯಾಟರಿ ತೆಗೆದು ಮನೆಯಲ್ಲಿ ಚಾರ್ಜ್‌ಗೆ ಹಾಕಿದಾಗ ಅದು ಸ್ಫೋಟಗೊಂಡಿದ್ದು ವರದಿಯಾಗಿತ್ತು.
ಬಹುತೇಕ ಪ್ರಕರಣಗಳಲ್ಲಿ ಸ್ಕೂಟರ್‌ನ ಬ್ಯಾಟರಿ ಇದ್ದ ಜಾಗದಲ್ಲಿ ಹೊಗೆ ಹಾಗೂ ಬೆಂಕಿ ಸೃಷ್ಟಿಯಾಗಿರುವುದನ್ನು ಗಮನಿಸಿದರೆ, ಬ್ಯಾಟರಿ ದೋಷ ಕಾರಣ ಇರಬಹುದು ಎಂದು ತಜ್ಞರು ಅಭಿಪ್ರಾಯಟ್ಟಿದ್ದಾರೆ. ಹೀಗಾಗಿ, ಬ್ಯಾಟರಿಚಾಲಿತ ಸ್ಕೂಟರ್‌ಗಳ ಸುರಕ್ಷತೆ ಬಗ್ಗೆ
ದೇಶದೆಲ್ಲೆಡೆ ಭಾರಿ ಚರ್ಚೆ ನಡೆಯುತ್ತಿದೆ. ಈ ವಿಚಾರವು ದೇಶದ ಇ.ವಿ ಮಾರುಕಟ್ಟೆಯ ಭವಿಷ್ಯದ ಪ್ರಶ್ನೆಯಾಗಿದೆ ಎನ್ನುತ್ತಾರೆ ತಜ್ಞರು.
ನಿಯಮಗಳಲ್ಲೇ ದೋಷ
ಭಾರತದಲ್ಲಿ ಮಾರಾಟವಾಗುವ ಪ್ರತಿ ಮಾದರಿಯ ವಾಹನವನ್ನೂ ಆಟೊಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಎಆರ್‌ಎಐ) ಹಲವು ಸ್ವರೂಪದ ಪರೀಕ್ಷೆಗಳಿಗೆ ಒಳಪಡಿಸುತ್ತದೆ. ಈ ಎಲ್ಲಾ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿದ ವಾಹನಗಳಷ್ಟೇ ಭಾರತದ ಮಾರುಕಟ್ಟೆ ಪ್ರವೇಶಿಸಲು ಅನುಮತಿ ಪಡೆಯುತ್ತವೆ. ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗೂ ಇದು ಅನ್ವಯವಾಗುತ್ತದೆ. ಭಾರತದಲ್ಲಿ ಮಾರಾಟವಾಗುವ ಪ್ರತಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನವೂ ಎಆರ್‌ಎಐನ ಪ್ರಮಾಣ ಪತ್ರ ಪಡೆದಿರಬೇಕು. ಹೀಗೆ ಪ್ರಮಾಣ ಪತ್ರ ಪಡೆದ ಇ–ಸ್ಕೂಟರ್‌ಗಳಿಗೂ ಬೆಂಕಿ ಹೊತ್ತಿಕೊಂಡದ್ದರಿಂದ, ಎಆರ್‌ಎಐ ನಡೆಸುವ ಪರೀಕ್ಷೆಗಳ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಎಆರ್‌ಎಐ ನಡೆಸುವ ಬ್ಯಾಟರಿ ಪರೀಕ್ಷೆಗಳ ನಿಯಮಗಳಲ್ಲೇ ಸಮಸ್ಯೆ ಇರುವುದು ಮೇಲ್ನೋಟಕ್ಕೆ ಕಾಣುತ್ತದೆ. ಬಹುತೇಕ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಲ್ಲಿ ಲಿಥಿಯಂ ಅಯಾನ್ ಬ್ಯಾಟರಿಗಳ ಪ್ಯಾಕ್ ಬಳಸಲಾಗುತ್ತಿದೆ. ಈ ಬ್ಯಾಟರಿಗಳು ಮೈನಸ್ 10 ಡಿಗ್ರಿ ಸೆಲ್ಸಿಯಸ್‌ನಿಂದ 45 ಡಿಗ್ರಿ ಸೆಲ್ಸಿಯಸ್‌ವರೆಗಿನ ಉಷ್ಣಾಂಶದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿವೆ. ಇದಕ್ಕಿಂತ ಹೆಚ್ಚಿನ ಅಥವಾ ಕಡಿಮೆ ಉಷ್ಣಾಂಶದಲ್ಲಿ ಕಾರ್ಯನಿರ್ವಹಿಸಿದರೆ ಬ್ಯಾಟರಿ ಹಾಳಾಗುವ ಅಥವಾ ಅದರ ದಕ್ಷತೆ ಕುಸಿಯುವ ಅಥವಾ ಬ್ಯಾಟರಿ ಶಾರ್ಟ್ ಸರ್ಕಿಟ್‌ನ ಅಪಾಯವಿರುತ್ತದೆ. ಆದರೆ ಎಆರ್‌ಎಐ ನಡೆಸುವ ಬಹುತೇಕ ಪರೀಕ್ಷೆಗಳನ್ನು 10 ಡಿಗ್ರಿ ಸೆಲ್ಸಿಯಸ್‌ನಿಂದ 30 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶದಲ್ಲಿ ನಡೆಸಲಾಗುತ್ತದೆ. ಇದು ಬ್ಯಾಟರಿಯು ಕಾರ್ಯನಿರ್ವಹಿಸುವ ಸಂದರ್ಭದ ಉಷ್ಣಾಂಶಕ್ಕಿಂತ ಇದು ತೀರಾ ಕಡಿಮೆ.
l ಬ್ಯಾಟರಿ ಚಾರ್ಜಿಂಗ್ ಪರೀಕ್ಷೆ: ಚಾರ್ಜಿಂಗ್ ವೇಳೆ ಬ್ಯಾಟರಿಗಳು ಹೆಚ್ಚು ಬಿಸಿಯಾಗುತ್ತವೆಯೇ? ಹೆಚ್ಚು ಬಿಸಿಯಾಗುವುದರಿಂದ ಬ್ಯಾಟರಿ ಮತ್ತು ಬ್ಯಾಟರಿಯ ಕೇಸಿಂಗ್‌ಗೆ ಹಾನಿಯಾಗುತ್ತದೆಯೇ, ಬ್ಯಾಟರಿಗೆ ಬೆಂಕಿ ಹೊತ್ತಿಕೊಳ್ಳುತ್ತದೆಯೇ ಮತ್ತು ಬ್ಯಾಟರಿ ಸ್ಫೋಟಗೊಳ್ಳುತ್ತದೆಯೇ ಎಂಬುದನ್ನು ಈ ಪರೀಕ್ಷೆಯಲ್ಲಿ ಪರಿಶೀಲಿಸಲಾಗುತ್ತದೆ. ಎಆರ್‌ಎಐ 20 –10 ಡಿಗ್ರಿ ಸೆಲ್ಸಿಯಸ್ ಅಥವಾ 20+10 ಡಿಗ್ರಿ ಸೆಲ್ಸಿಯಸ್‌ನಲ್ಲಿ ಈ ಪರೀಕ್ಷೆ ನಡೆಸುತ್ತದೆ. ಅಂದರೆ, 10 ಡಿಗ್ರಿ ಸೆಲ್ಸಿಯಸ್‌ನಿಂದ 30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದ ಮಧ್ಯೆ ಈ ಪರೀಕ್ಷೆ ನಡೆಯುತ್ತದೆ. ಆದರೆ, ಚಾರ್ಜಿಂಗ್ ವೇಳೆ ಬ್ಯಾಟರಿಗಳು 45 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶಕ್ಕೆ ತಲುಪುತ್ತವೆ. ಜತೆಗೆ ಭಾರತದ ಸಂದರ್ಭದಲ್ಲಿ ಬೇಸಿಗೆಯಲ್ಲಿ ಹೊರಗಿನ ವಾತಾವರಣ ಹಲವೆಡೆ 40 ಡಿಗ್ರಿ ಸೆಲ್ಸಿಯಸ್‌ನಷ್ಟು ತಲುಪುತ್ತದೆ
l ಬ್ಯಾಟರಿ ಓವರ್ ಚಾರ್ಜಿಂಗ್ ಪರೀಕ್ಷೆ: ಬ್ಯಾಟರಿಯಲ್ಲಿ ಚಾರ್ಜಿಂಗ್ ಶೇ 100ರಷ್ಟನ್ನು ಮುಟ್ಟಿದ ಮೇಲೂ ಚಾರ್ಜ್ ಮಾಡಿದರೆ, ಆಗುವ ಪರಿಣಾಮಗಳನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ. ಈ ಪರೀಕ್ಷೆಯನ್ನು ಸಹ 10 ಡಿಗ್ರಿ ಸೆಲ್ಸಿಯಸ್‌ನಿಂದ 30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದ ವಾತಾವರಣದಲ್ಲಿ ನಡೆಸಲಾಗುತ್ತದೆ. ಆದರೆ ಓವರ್ ಚಾರ್ಜಿಂಗ್ ವೇಳೆ ಬ್ಯಾಟರಿಗಳ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪುವುದು ಸಾಮಾನ್ಯ
l ಬ್ಯಾಟರಿ ಓವರ್ ಡಿಸ್‌ಚಾರ್ಜಿಂಗ್ ಪರೀಕ್ಷೆ: ಬ್ಯಾಟರಿಯಲ್ಲಿ ಚಾರ್ಜಿಂಗ್ ಸೂಚಿತ ಮಟ್ಟಕಿಂತ ಕಡಿಮೆ ಬಂದ ನಂತರವೂ ಅದನ್ನು ಬಳಸಿದರೆ, ಅದನ್ನು ಓವರ್ ಡಿಸ್‌ಚಾರ್ಜ್ ಎಂದು ಕರೆಯಲಾಗುತ್ತದೆ. ಅಂತಹ ಸಂದರ್ಭದಲ್ಲಿ ಬ್ಯಾಟರಿ ಹೆಚ್ಚು ಬಿಸಿಯಾಗುತ್ತದೆಯೇ, ಬೆಂಕಿ ಹೊತ್ತಿಕೊಳ್ಳುತ್ತದೆಯೇ ಅಥವಾ ಸ್ಫೋಟಗೊಳ್ಳುತ್ತದೆಯೇ ಎಂಬುದನ್ನು ಈ ಪರೀಕ್ಷೆಯಲ್ಲಿ ಪರಿಶೀಲಿಸಲಾಗುತ್ತದೆ. ಇದನ್ನು ಸಹ 10 ಡಿಗ್ರಿ ಸೆಲ್ಸಿಯಸ್‌ನಿಂದ 30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದ ವಾತಾವರಣದಲ್ಲಿ ನಡೆಸಲಾಗುತ್ತದೆ. ಆದರೆ ಓವರ್ ಡಿಸ್‌ಚಾರ್ಜಿಂಗ್ ವೇಳೆ ಬ್ಯಾಟರಿಗಳ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪುವುದು ಸಾಮಾನ್ಯ
l ಕಂಪನ, ಆಘಾತ ಪರೀಕ್ಷೆ: ವಾಹನಗಳ ಚಾಲನೆ ವೇಳೆ ಉಂಟಾಗುವ ಕಂಪನ ಮತ್ತು ಆಘಾತಗಳಿಂದ ಬ್ಯಾಟರಿ ಮತ್ತು ಬ್ಯಾಟರಿ ಪ್ಯಾಕ್‌ಗೆ ಹಾನಿಯಾಗುತ್ತದೆಯೇ ಎಂಬುದನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ. ಪರೀಕ್ಷೆ ವೇಳೆ ಬ್ಯಾಟರಿ ಹೆಚ್ಚು ಬಿಸಿಯಾಗುತ್ತದೆಯೇ, ಬೆಂಕಿ ಹೊತ್ತಿಕೊಳ್ಳುತ್ತದೆಯೇ ಅಥವಾ ಸ್ಫೋಟಗೊಳ್ಳುತ್ತದೆಯೇ ಎಂಬುದನ್ನು ಈ ಪರೀಕ್ಷೆಯಲ್ಲಿ ಪರಿಶೀಲಿಸಲಾಗುತ್ತದೆ. ಈ ಪರೀಕ್ಷೆಯನ್ನು 10 ಡಿಗ್ರಿ ಸೆಲ್ಸಿಯಸ್‌ನಿಂದ 30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದ ವಾತಾವರಣದಲ್ಲಿ ನಡೆಸಲಾಗುತ್ತದೆ. ಆದರೆ, ವಾಸ್ತವದಲ್ಲಿ ವಾಹನಗಳ ಚಾಲನೆ ವೇಳೆ ಹೊರಗಿನ ವಾತಾವರಣದಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚು ಉಷ್ಣಾಂಶವಿರುತ್ತದೆ
l ಥರ್ಮಲ್ ಶಾಕಿಂಗ್: ಬ್ಯಾಟರಿ ಮತ್ತು ಬಾಹ್ಯ ಉಷ್ಣಾಂಶದಲ್ಲಿ ಆಗುವ ದಿಢೀರ್ ಬದಲಾವಣೆಯಿಂದ ಬ್ಯಾಟರಿ ಮೇಲೆ ಆಗುವ ಪರಿಣಾಮಗಳನ್ನು ಪರಿಶೀಲಿಸಲು ಈ ಪರೀಕ್ಷೆ ನಡೆಸಲಾಗುತ್ತದೆ. ಇದನ್ನು ಮೈನಸ್ 20 ಡಿಗ್ರಿ ಸೆಲ್ಸಿಯಸ್‌ನಿಂದ 60 ಡಿಗ್ರಿ ಸೆಲ್ಸಿಯಸ್‌ವರೆಗಿನ ಉಷ್ಣಾಂಶದಲ್ಲಿ ನಡೆಸಲಾಗುತ್ತದೆ. ಈ ಪರೀಕ್ಷೆಯನ್ನು ಕೆಲವೇ ಸೆಕೆಂಡ್‌ಗಳ ಕಾಲ ನಡೆಸಲಾಗುತ್ತದೆ
ಬಹುತೇಕ ಪರೀಕ್ಷೆಗಳನ್ನು 10ರಿಂದ 30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲೇ ನಡೆಸಲಾಗುತ್ತದೆ. ಆದರೆ ವಾಸ್ತವ ಬಳಕೆ ವೇಳೆ ಬ್ಯಾಟರಿಯಲ್ಲಿನ ಉಷ್ಣಾಂಶವೇ 45 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪುತ್ತದೆ. ಭಾರತದ ಹಲವು ಪ್ರದೇಶಗಳಲ್ಲಿ ಉಷ್ಣಾಂಶವು 40 ಡಿಗ್ರಿ ಸೆಲ್ಸಿಯಸ್ ಅನ್ನೂ ದಾಟುತ್ತದೆ. ಆದರೆ ಕಡಿಮೆ ಉಷ್ಣಾಂಶದಲ್ಲಿ ನಡೆದ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ ಮಾದರಿಯ ಬ್ಯಾಟರಿಗಳು, ವಾಸ್ತವ ಬಳಕೆಯಲ್ಲಿ ಇನ್ನೂ ಹೆಚ್ಚಿನ ಉಷ್ಣಾಂಶವನ್ನು ಎದುರಿಸಬೇಕಾಗುತ್ತದೆ. ಇಷ್ಟೊಂದು ಉಷ್ಣಾಂಶದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಆ ಮಾದರಿಯ ಬ್ಯಾಟರಿಗೆ ಇದೆಯೇ ಎಂಬುದನ್ನು ಪರೀಕ್ಷೆ ವೇಳೆ ಪರಿಶೀಲಿಸುವುದೇ ಇಲ್ಲ. ಪರೀಕ್ಷಾ ನಿಯಮಗಳಲ್ಲಿ ಇರುವ ಈ ನ್ಯೂನತೆಯಿಂದಾಗಿ, ಬ್ಯಾಟರಿ ಸಾಮಾನ್ಯವಾಗಿ ಕಾರ್ಯನಿರ್ವಹಿಸುವ ಉಷ್ಣಾಂಶದಲ್ಲಿ ಬ್ಯಾಟರಿಗೆ ಏನಾಗುತ್ತದೆ ಎಂಬುದರ ಪರೀಕ್ಷೆ ನಡೆಯುವುದೇ ಇಲ್ಲ. ಇದರಿಂದ ಹೆಚ್ಚಿನ ಉಷ್ಣಾಂಶದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವಿಲ್ಲದೇ ಇರುವ ಬ್ಯಾಟರಿಗಳನ್ನೂ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಲ್ಲಿ ಬಳಸಲು ಅವಕಾಶವಿದೆ.
ಥರ್ಮಲ್ ರನ್‌ಅವೇ
ಬಾಹ್ಯ ಮತ್ತು ಆಂತರಿಕ ಕಾರಣಗಳಿಂದ ಬ್ಯಾಟರಿಗಳಲ್ಲಿನ ಉಷ್ಣಾಂಶವು ವಿಪರೀತ ಮಟ್ಟದಲ್ಲಿ ಏರಿಕೆಯಾಗುವುದನ್ನು ಥರ್ಮಲ್ ರನ್‌ಅವೇ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಲಿಥಿಯಂ ಅಯಾನ್ ಬ್ಯಾಟರಿಗಳಲ್ಲಿ ಉಷ್ಣಾಂವು 45 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಾದರೆ, ಥರ್ಮಲ್ ರನ್‌ಅವೇ ಸಂಭವಿಸುವ ಅಪಾಯವಿರುತ್ತದೆ. ಹೀಗೆ ಆದಾಗ, ಬ್ಯಾಟರಿಯಲ್ಲಿ ಬೆಂಕಿ ಹೊತ್ತಿಕೊಳ್ಳುವ ಅಥವಾ ಬ್ಯಾಟರಿ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಬ್ಯಾಟರಿಯ ಕಾರ್ಯಾಚರಣೆ ಉಷ್ಣಾಂಶವು 45 ಡಿಗ್ರಿ ಸೆಲ್ಸಿಯಸ್ ದಾಟದಂತೆ ಪೂರಕ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲಾಗಿರುತ್ತದೆ. ಇಂತಹ ವ್ಯವಸ್ಥೆಗಳು ವಿಫಲವಾದಾಗ ಅಥವಾ ಇಂತಹ ವ್ಯವಸ್ಥೆಗಳು ಇಲ್ಲದೇ ಇದ್ದಾಗ ಅಥವಾ ಬ್ಯಾಟರಿ ತಣ್ಣಗಾಗಿಸುವ ಬಾಹ್ಯ ಕೂಲಿಂಗ್ ವ್ಯವಸ್ಥೆ ಇಲ್ಲದೇ ಇದ್ದಾಗ ಥರ್ಮಲ್ ರನ್ಅವೇ ತಲೆದೋರುವ ಅಪಾಯವಿದೆ.
ತನಿಖೆಗೆ ಸೂಚನೆ
ಇ.ವಿಗಳಲ್ಲಿ ಬೆಂಕಿ ಪ್ರಕರಣಗಳ ಬಗ್ಗೆ ತನಿಖೆ ನಡೆಸುವಂತೆ ಡಿಆರ್‌ಡಿಒ ಅಧೀನದ ‘ಸೆಂಟರ್ ಫಾರ್ ಫೈರ್ ಅಂಡ್ ಎಕ್ಸ್‌ಪ್ಲೋಸಿವ್ ಅಂಡ್ ಎನ್ವಿರಾನ್‌ಮೆಂಟ್ ಸೇಫ್ಟಿ’ (ಸಿಎಫ್‌ಇಇಎಸ್) ಎಂಬ ರಕ್ಷಣಾ ಪ್ರಯೋಗಾಲಯಕ್ಕೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಸೂಚನೆ ನೀಡಿದೆ.
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಬ್ಯಾಟರಿ ಚಾಲಿತ ದ್ವಿಚಕ್ರವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿರುವ ಪ್ರಕರಣಗಳ ಬಗ್ಗೆ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ್ದರು. ದೋಷಪೂರಿತ ವಾಹನಗಳನ್ನು ಸರಿಪಡಿಸುವಂತೆ ಎಲ್ಲ ಇ.ವಿ ಕಂಪನಿಗಳಿಗೆ ಅವರು ಸೂಚನೆ ನೀಡಿದ್ದರು. ವಾಹನ ಚಾಲಕರ ಸುರಕ್ಷತೆಯೇ ಸರ್ಕಾರದ ಆದ್ಯತೆ ಎಂದಿದ್ದ ಅವರು, ಈ ಪ್ರಕರಣಗಳಲ್ಲಿ ಕಂಪನಿಗಳ ಲೋಪ ಕಂಡುಬಂದಲ್ಲಿ ಭಾರಿ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಿದ್ದರು.
ದೇಶದಲ್ಲಿ ಈಗಿರುವ ಶೇ 2ರಷ್ಟು ಇ.ವಿ ಸ್ಕೂಟರ್‌ಗಳ ಪ್ರಮಾಣವನ್ನು 2030ರ ವೇಳೆಗೆ ಶೇ 80ಕ್ಕೆ ಏರಿಸುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ.
ತನಿಖೆಗೆ ಸೂಚನೆ
ಇ.ವಿಗಳಲ್ಲಿ ಬೆಂಕಿ ಪ್ರಕರಣಗಳ ಬಗ್ಗೆ ತನಿಖೆ ನಡೆಸುವಂತೆ ಡಿಆರ್‌ಡಿಒ ಅಧೀನದ ‘ಸೆಂಟರ್ ಫಾರ್ ಫೈರ್ ಅಂಡ್ ಎಕ್ಸ್‌ಪ್ಲೋಸಿವ್ ಅಂಡ್ ಎನ್ವಿರಾನ್‌ಮೆಂಟ್ ಸೇಫ್ಟಿ’ (ಸಿಎಫ್‌ಇಇಎಸ್) ಎಂಬ ರಕ್ಷಣಾ ಪ್ರಯೋಗಾಲಯಕ್ಕೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಸೂಚನೆ ನೀಡಿದೆ.
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರುಬ್ಯಾಟರಿ ಚಾಲಿತ ದ್ವಿಚಕ್ರವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿರುವ ಪ್ರಕರಣಗಳ ಬಗ್ಗೆ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ್ದರು. ದೋಷಪೂರಿತ ವಾಹನಗಳನ್ನು ಸರಿಪಡಿಸುವಂತೆ ಎಲ್ಲ ಇ.ವಿ ಕಂಪನಿಗಳಿಗೆ ಅವರು ಸೂಚನೆ ನೀಡಿದ್ದರು. ವಾಹನ ಚಾಲಕರ ಸುರಕ್ಷತೆಯೇ ಸರ್ಕಾರದ ಆದ್ಯತೆ ಎಂದಿದ್ದ ಅವರು, ಈ ಪ್ರಕರಣಗಳಲ್ಲಿ ಕಂಪನಿಗಳ ಲೋಪ ಕಂಡುಬಂದಲ್ಲಿ ಭಾರಿ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಿದ್ದರು.
ದೇಶದಲ್ಲಿ ಈಗಿರುವ ಶೇ 2ರಷ್ಟು ಇ.ವಿ ಸ್ಕೂಟರ್‌ಗಳ ಪ್ರಮಾಣವನ್ನು 2030ರ ವೇಳೆಗೆ ಶೇ 80ಕ್ಕೆ ಏರಿಸುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ.
ಕಂಪನಿಗಳಿಂದ ಉಚಿತ ತಪಾಸಣೆ
ಅಗ್ನಿ ಅವಘಡಗಳ ಬೆನ್ನಲ್ಲೇ, ದೋಷಪೂರಿತ ಇ.ವಿಗಳನ್ನು ವಾಪಸ್ ಪಡೆದು ಸರಿಪಡಿಸಲು ಕಂಪನಿಗಳು ಮುಂದಾಗಿವೆ. ಓಲಾ ಕಂಪನಿಯು 1,441 ವಾಹನಗಳನ್ನು, ಒಕಿನಾವಾ 3,215 ವಾಹನಗಳನ್ನು ಹಾಗೂ ಪ್ಯೂರ್ ಇವಿ ಕಂಪನಿಯು 2,000 ವಾಹನಗಳನ್ನು ಉಚಿತವಾಗಿ ಸರಿಪಡಿಸುವ ವಾಗ್ದಾನ ನೀಡಿವೆ. ಒಕಿನಾವಾ ಪ್ರೈಸ್‌ಪ್ರೊ ಮಾದರಿಯಲ್ಲಿ ಕಾಣಿಸಿಕೊಂಡಿರುವ ಬ್ಯಾಟರಿ ದೋಷಗಳನ್ನು ಕಂಪನಿಯ ಯಾವುದಾದರೂ ಸರ್ವಿಸ್ ಕೇಂದ್ರಗಳಲ್ಲಿ ಪರಿಶೀಲನೆಗೆ ಒಳಪಡಿಸಬಹುದು ಎಂದು ಏಪ್ರಿಲ್ ಮಧ್ಯಭಾಗದಲ್ಲಿ ಸಂಸ್ಥೆ ತಿಳಿಸಿತ್ತು. ಎಲ್ಲ ಕೇಂದ್ರಗಳಲ್ಲಿ ಉಚಿತವಾಗಿ ಬ್ಯಾಟರಿಗಳ ಗುಣಮಟ್ಟ ಹಾಗೂ ಜೋಡಣೆ ಸರಿಯಾಗಿದೆಯೇ ಎಂದು ತಪಾಸಣೆ ಮಾಡಲಾಗುವುದು ಎಂದು ಪ್ರಕಟಣೆ ಹೊರಡಿಸಿತ್ತು.
ಆಧಾರ: ಪಿಟಿಐ, ಎಆರ್‌ಎಐ, ಆಟೊಮೋಟಿವ್ ಇಂಡಸ್ಟ್ರಿ ಸ್ಟಾಡಂರ್ಡ್ಸ್–156,48,38 ನಿಯಮಾವಳಿಗಳು, ನಾಸಾ, ಪ್ಯಾನಸೋನಿಕ್ ಲಿಥಿಯಂ ಅಯಾನ್ ಬ್ಯಾಟರಿ ನಿರ್ವಹಣಾ ಮಾರ್ಗದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.