ದೇಶದಲ್ಲಿ ಕಾಡಾನೆಗಳ ಸಂಖ್ಯೆ ಕುಸಿತವಾಗಿರುವುದನ್ನು ಕೆಲವು ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿರುವ ‘ಭಾರತದಲ್ಲಿ ಆನೆಗಳ ಸ್ಥಿತಿಗತಿ ವರದಿ’ಯ ಅಂಕಿ ಅಂಶಗಳು ತೋರಿಸಿವೆ. 2017ರ ವರದಿಗೆ ಹೋಲಿಸಿದರೆ ಆನೆಗಳ ಸಂಖ್ಯೆ ಶೇ 25ರಷ್ಟು ಕಡಿಮೆಯಾಗಿದೆ. ಆದರೆ ಇದೇ ಮೊದಲ ಬಾರಿಗೆ ದೇಶದಲ್ಲಿ ಡಿಎನ್‌ಎ ಆಧಾರಿತವಾಗಿ ಆನೆಗಳ ಗಣತಿ ನಡೆದಿದೆ ಹಿಂದಿನ ಗಣತಿಗಳಿಗೆ ಹೋಲಿಸಿದರೆ ಇದು ಹೆಚ್ಚು ನಿಖರ ಎಂದು ಹೇಳಲಾಗಿದೆ. ಆನೆಗಳ ಸಂಖ್ಯೆಯಲ್ಲಿ ಈ ಬಾರಿಯೂ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಈ ಸಲದ ಗಣತಿಯು ಸಂಪೂರ್ಣವಾಗಿ ಭಿನ್ನ ರೀತಿಯಲ್ಲಿ ನಡೆದಿರುವುದರಿಂದ ಹಳೆಯ ಸಂಖ್ಯೆಗಳೊಂದಿಗೆ ಹೋಲಿಸುವುದು ಸರಿಯಲ್ಲ ಎಂದು ವರದಿ ಹೇಳಿದೆ. ದೇಶದಲ್ಲಿ ಆನೆಗಳ ಸಂರಕ್ಷಣೆಗೆ ಇರುವ ಸವಾಲುಗಳನ್ನೂ ವಿವರಿಸಿರುವ ವರದಿ, ಅಭಿವೃದ್ಧಿ ಯೋಜನೆಗಳು, ಅರಣ್ಯ ನಾಶ, ಮಾನವನ ಹಸ್ತಕ್ಷೇಪ ಕಾಡಾನೆಗಳಿಗೆ ಕಂಟಕವಾಗಿವೆ ಎಂದು ಎಚ್ಚರಿಸಿದೆ.