ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ನೀರಿನ ಬವಣೆ ನೀಗಲು ಬೇಕು ದೂರಗಾಮಿ ಯೋಜನೆ

Published 25 ಸೆಪ್ಟೆಂಬರ್ 2023, 0:30 IST
Last Updated 25 ಸೆಪ್ಟೆಂಬರ್ 2023, 0:30 IST
ಅಕ್ಷರ ಗಾತ್ರ

ಅತಿಹೆಚ್ಚು ಮಳೆಯಾದಾಗ ಪ್ರವಾಹ, ಕಡಿಮೆ ಮಳೆಯಾದಾಗ ಬರ. ಕರ್ನಾಟಕವೂ ಸೇರಿ ದೇಶದ ಬಹುತೇಕ ರಾಜ್ಯಗಳ ಸ್ಥಿತಿ ಇದು. ದೇಶದಲ್ಲಿ ಹೆಚ್ಚು ಮಳೆಯಾಗುವ ರಾಜ್ಯಗಳಲ್ಲಿ ಒಂದಾದ ಮಧ್ಯಪ್ರದೇಶ ಮತ್ತು ಕಡಿಮೆ ಮಳೆಯಾಗುವ ರಾಜ್ಯಗಳಲ್ಲಿ ಒಂದಾದ ರಾಜಸ್ಥಾನ, ಹಿಂದಿನ ಮತ್ತು ಈಗಿನ ಶತಮಾನದ ಉದ್ದಕ್ಕೂ ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಸಾಕ್ಷಿಯಾಗಿವೆ. ಅತಿ ಮಳೆಯಾದಾಗ ಪ್ರವಾಹ ನಿಯಂತ್ರಣಕ್ಕೆಂದು ನಿರ್ಮಿಸಿದ ಚೆಕ್‌ಡ್ಯಾಂಗಳು ಮತ್ತು ಕಿರು ಜಲಾಶಯಗಳು ರಾಜ್ಯದ ಕೆರೆಗಳಿಗೂ ನೀರು ತುಂಬಿಸುತ್ತಿವೆ. ಹೀಗೆ ಸಂಗ್ರಹಿಸಲಾದ ನೀರು ಬರಗಾಲದ ವರ್ಷಗಳಲ್ಲಿ ಜನರ ನೀರಿನ ಅವಶ್ಯಕತೆಯನ್ನೂ ಪೂರೈಸುತ್ತವೆ. ಕರ್ನಾಟಕಕ್ಕೂ ಇದು ಮಾದರಿಯಾಗಬಲ್ಲದು

ದೇಶದಲ್ಲಿ ಅತಿ ಕಡಿಮೆ ಮಳೆಯಾಗುವ ರಾಜ್ಯವೆಂದರೆ ರಾಜಸ್ಥಾನ. ರಾಜ್ಯದ ಪೂರ್ವ ಭಾಗದಲ್ಲಿ ವಾರ್ಷಿಕ 660 ಮಿಲಿಮೀಟರ್‌ನಷ್ಟು ಮಳೆಯಾದರೆ, ಪಶ್ಚಿಮ ಭಾಗದಲ್ಲಿ 315 ಮಿಲಿಮೀಟರ್‌ನಷ್ಟು ಮಳೆಯಾಗುತ್ತದೆ. ಆದರೆ, ರಾಜ್ಯದಲ್ಲಾಗುವ ಅಲ್ಪ ಮಳೆಯ ನೀರನ್ನೇ ಸಂಗ್ರಹಿಸಿಕೊಳ್ಳಲು ಮಾಡಿಕೊಂಡಿರುವ ವ್ಯವಸ್ಥೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ತಜ್ಞರು ಬಣ್ಣಿಸುತ್ತಾರೆ. ಎರಡು ಮುಖ್ಯ ನದಿಗಳು ಮತ್ತು 19 ಉಪನದಿಗಳಿಗೆ/ತೊರೆಗಳಿಗೆ ನಿರ್ಮಿಸಲಾಗಿರುವ ಕಿರು ಜಲಾಶಯಗಳು ಮತ್ತು ಚೆಕ್‌ಡ್ಯಾಂಗಳಲ್ಲಿ ರಾಜಸ್ಥಾನವು 445 ಟಿಎಂಸಿ ಅಡಿಗಿಂತಲೂ ಹೆಚ್ಚು ನೀರನ್ನು ಸಂಗ್ರಹಿಸುತ್ತದೆ. ಇದು ದಕ್ಷಿಣ ಭಾರತದ, ಅತಿಹಚ್ಚು ಮಳೆಯಾಗುವ ಕೆಲ ರಾಜ್ಯಗಳಲ್ಲಿನ ನೀರು ಸಂಗ್ರಹ ಸಾಮರ್ಥ್ಯಕ್ಕಿಂತಲೂ ಹೆಚ್ಚು.

ರಾಜಸ್ಥಾನದ ಅತಿಮುಖ್ಯ ನದಿ ಚಂಬಲ್‌. ಮಧ್ಯಪ್ರದೇಶದ ವಿಂಧ್ಯಪರ್ವತದಲ್ಲಿ ಹುಟ್ಟಿ ಉತ್ತರಕ್ಕೆ ಹರಿಯುವ ಚಂಬಲ್‌ ನಂತರ ರಾಜಸ್ಥಾನ ಪ್ರವೇಶಿಸುತ್ತದೆ. ರಾಜಸ್ಥಾನದಲ್ಲಿ 261 ಕಿ.ಮೀ. ಹರಿಯುವ ಈ ನದಿಗೆ ಪಾರ್ವತಿ, ಕಾಲಿಸಿಂಧಿ ಮತ್ತು ಬನಾಸ್‌ ಉಪನದಿಗಳು ಜತೆಯಾಗುತ್ತವೆ. ಚಂಬಲ್‌ ಜಲಾನಯನ ಪ್ರದೇಶ ಮತ್ತು ಅಚ್ಚುಕಟ್ಟು ಪ್ರದೇಶಕ್ಕೆ ಅವಶ್ಯಕತೆ ಇರುವುದಕ್ಕಿಂತ ಹಲವು ಪಟ್ಟು ಹೆಚ್ಚು ನೀರು ಈ ನದಿಗಳಲ್ಲಿ ಹರಿಯುತ್ತದೆ. ರಾಜ್ಯದ ಪೂರ್ವ ಭಾಗದಲ್ಲಿ ಈ ಸ್ಥಿತಿಯಿದ್ದರೆ, ಪಶ್ಚಿಮ ಭಾಗದಲ್ಲಿ ನೀರೇ ಇಲ್ಲ ಎನ್ನುವಂತಹ ಸ್ಥಿತಿ ಇತ್ತು. ಪೂರ್ವದ ಚಂಬಲ್‌ ಪ್ರದೇಶದಲ್ಲಿನ ಹೆಚ್ಚುವರಿ ನೀರನ್ನು ಸಂಗ್ರಹಿಸಿ ಕೆರೆಗಳಿಗೆ, ರಾಜ್ಯದ ಬೇರೆ ಭಾಗಗಳಿಗೆ ಹರಿಸುವ ಯೋಜನೆ 1970ರ ದಶಕದಲ್ಲಿ ಆರಂಭವಾಯಿತು. ಚಂಬಲ್‌ ಕಣಿವೆಗೆ ರಾಜಸ್ಥಾನದಲ್ಲಿ ನಾಲ್ಕು ದೊಡ್ಡ ಅಣೆಕಟ್ಟೆಗಳನ್ನು ಕಟ್ಟಲಾಯಿತು. ಆದರೆ ಕೋಟಾ ಬಳಿ ಚಂಬಲ್‌ ಕೋಟಾ ಅಭಯಾರಣ್ಯ ಸ್ಥಾಪಿಸಿದ ಕಾರಣ ಮತ್ತಷ್ಟು ದೊಡ್ಡ ಜಲಾಶಯಗಳನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ. ಆಗ ರಾಜಸ್ಥಾನ ಸರ್ಕಾರ ಕಂಡುಕೊಂಡ ಪರಿಹಾರವೇ ಕಿರು ಜಲಾಶಯಗಳು ಮತ್ತು ಚೆಕ್‌ಡ್ಯಾಂನ ನಿರ್ಮಾಣ.

ಚಂಬಲ್‌ ನದಿಗೆ ಸಾಧ್ಯವಿರುವೆಡೆ ಸಣ್ಣ ಸಣ್ಣ ಜಲಾಶಯಗಳನ್ನು ನಿರ್ಮಿಸಲಾಯಿತು. ಆದರೆ ಅಲ್ಲಿ ಹರಿಯುವ ಅಷ್ಟೂ ನೀರನ್ನು ಸಂಗ್ರಹಿಸಲು ಆ ಕಿರು ಜಲಾಶಯಗಳು ಸಾಲದೇ ಹೋದವು. ಹೀಗಾಗಿ ಉಪನದಿಗಳಿಗೆ ಕಿರುಜಲಾಶಯಗಳನ್ನು ನಿರ್ಮಿಸುವ ಮೂಲಕ ಚಂಬಲ್‌ ನದಿಗೆ ನೀರಿನ ಹರಿವನ್ನು ಕಡಿಮೆ ಮಾಡಲು ಸರ್ಕಾರ ಮುಂದಾಯಿತು. ಇದಕ್ಕಾಗಿ ಪಾರ್ವತಿ, ಕಾಲಿಸಿಂಧಿ, ಬನಾಸ್‌ ಮತ್ತು ಲೂನಿ ನದಿಗಳಿಗೆ ನೂರಾರು ಕಿರು ಜಲಾಶಯಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಯಿತು. ಕೇವಲ 20–30 ಅಡಿ ಎತ್ತರದ ಅಣೆಕಟ್ಟೆಗಳನ್ನು ನಿರ್ಮಿಸಲಾಯಿತು. ಈ ಅಣೆಕಟ್ಟೆಗಳ ಹಿನ್ನೀರು, ನದಿ ಪಾತ್ರದಲ್ಲಿಯೇ ಕಿರು ಜಲಾಶಯಗಳನ್ನು ನಿರ್ಮಿಸಲಾಯಿತು. ಈ ರೀತಿಯ ನಿರ್ಮಾಣದಿಂದ ಮುಳುಗಡೆಯ ಸಮಸ್ಯೆಯೂ ತಲೆದೋರಲಿಲ್ಲ. ಹೀಗೆ ಐದು ದಶಕಗಳಲ್ಲಿ ಒಟ್ಟು 719 ದೊಡ್ಡ ಮತ್ತು ಕಿರು ಜಲಾಶಯಗಳನ್ನು ನಿರ್ಮಿಸಲಾಗಿದೆ. ನದಿ ಪಾತ್ರದುದ್ದಕ್ಕೂ ನಾಲ್ಕೈದು ಕಿ.ಮೀ.ಗೆ ಒಂದರಂತೆ ಇಂತಹ ಕಿರುಜಲಾಶಯಗಳನ್ನು ನಿರ್ಮಿಸಲಾಗಿದೆ. ಈ ಎಲ್ಲಾ ಜಲಾಶಯಗಳಲ್ಲಿ 445 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗುತ್ತದೆ. ಈ ಎಲ್ಲಾ ಜಲಾಶಯಗಳು ಶೇ 60ರಷ್ಟು ಭರ್ತಿಯಾದರೂ ರಾಜ್ಯದ ಕುಡಿಯುವ ನೀರು, ಕೃಷಿ ಮತ್ತು ಕೈಗಾರಿಕೆಗಳಿಗೆ ಅವಶ್ಯಕತೆ ಇರುವಷ್ಟು ನೀರು ಲಭ್ಯವಾಗುತ್ತದೆ. 

ಆದರೆ, ಈ ಎಲ್ಲಾ ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವುದೇ ಇಲ್ಲ. ಏಕೆಂದರೆ ಅವುಗಳಲ್ಲಿ ನಿಗದಿತ ಮಟ್ಟದ ನೀರು ಸಂಗ್ರಹವಾಗುತ್ತಿದ್ದಂತೆಯೇ ಕಾಲುವೆಗಳ ಮೂಲಕ ಸಮೀಪದ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಇದಕ್ಕಾಗಿ ವ್ಯವಸ್ಥಿತವಾದ ಕಾಲುವೆ ಜಾಲವನ್ನು ನಿರ್ಮಿಸಲಾಗಿದೆ. ಈ ಕೆರೆಗಳು ಕೃಷಿ, ಕೈಗಾರಿಕೆ ಮತ್ತು ಜಾನುವಾರುಗಳ ನೀರಿನ ಅವಶ್ಯಕತೆಯನ್ನು ಪೂರೈಸುತ್ತವೆ. 

ನೀರು ಸಂಗ್ರಹ ಮತ್ತು ಪೂರೈಕೆ ಜಾಲವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರಾಜಸ್ಥಾನ ಸರ್ಕಾರ ‘ಪೂರ್ವ ರಾಜಸ್ಥಾನ ಕಾಲುವೆ ಯೋಜನೆ–ಇಆರ್‌ಸಿಪಿ’ ಆರಂಭಿಸಿದೆ. 2050ರ ವೇಳೆಗೆ ರಾಜ್ಯದ ನೀರಿನ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಇದರ ಅಡಿಯಲ್ಲಿ ಮತ್ತಷ್ಟು ಕಾಲುವೆಗಳನ್ನು ಮತ್ತು ಕೆರೆಗಳನ್ನು ನಿರ್ಮಿಸಲಾಗುತ್ತದೆ. 2041ರ ವೇಳೆಗೆ ಯೋಜನೆ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಇದು ಅನುಷ್ಠಾನಕ್ಕೆ ಬಂದರೆ ರಾಜ್ಯದ ಶೇ 23.6ರಷ್ಟು ಕೃಷಿ ಭೂಮಿಗೆ ಮತ್ತು ಶೇ 41ರಷ್ಟು ಜನರಿಗೆ ಅಗತ್ಯವಿರುವ ಕುಡಿಯುವ ನೀರಿನ ಸಂಗ್ರಹ ಮತ್ತು ಪೂರೈಕೆ ಸಾಮರ್ಥ್ಯ ಇಆರ್‌ಸಿಪಿಗೆ ದತ್ತವಾಗಲಿದೆ.

ನೀರು ಸಂರಕ್ಷಣೆಗೆ ಜನಾಂದೋಲನ - ಮಧ್ಯಪ್ರದೇಶ ಮಾದರಿ

‘ಅತ್ಯಂತ ಕೆಟ್ಟ ಸ್ಥಿತಿಯೂ ಒಮ್ಮೊಮ್ಮೆ ವರವಾಗಿ ಪರಿಣಮಿಸುತ್ತದೆ ಎನ್ನುವಂತೆ ಬರವು ನಮ್ಮ ಪಾಲಿಗೆ ವರವಾಗಿ ಪರಿಣಮಿಸಿತು. ಜನರಿಗೆ ನೀರಿನ ಅವಶ್ಯಕತೆಯ ಅರಿವಾಯಿತು. ಸರ್ಕಾರದ ಯೋಜನೆಗಳನ್ನು ಜನರು ಬಹುಬೇಗ ಒಪ್ಪಿಕೊಂಡರು ಮತ್ತು ಆ ಯೋಜನೆಗಾಗಿ ಸರ್ಕಾರದೊಂದಿಗೆ ತಾವೂ ಶ್ರಮಿಸಿದರು’

ಮಧ್ಯಪ್ರದೇಶದ ಶಾದೂಲ್‌ ಜಿಲ್ಲಾ ಪಂಚಾಯಿತಿಯ ಸದಸ್ಯ ನಾಗೇಂದ್ರ ಯಾದವ್‌ ಅವರು 2000ರ ಬರದ ಸಂದರ್ಭದಲ್ಲಿ ನೀಡಿದ ಈ ಹೇಳಿಕೆಯು ಮಧ್ಯಪ್ರದೇಶದ ನೀರಿನ ಸಂರಕ್ಷಣೆಯ ಕಥನವನ್ನು ವಿವರಿಸುತ್ತದೆ. 2000ರಲ್ಲಿ ಮಧ್ಯಪ್ರದೇಶದ ಬುಂದೇಲ್‌ಖಂಡ ಪ್ರದೇಶವು ಸೇರಿದಂತೆ ಕೆಲವು ಜಿಲ್ಲೆಗಳು ತೀವ್ರ ಬರದ ಸಂಕಷ್ಟ ಎದುರಿಸಿದ್ದವು. ಅದಕ್ಕಿಂತ ಹಿಂದೆಯೂ ಈ ಪ್ರದೇಶಗಳು ತೀವ್ರ ಬರವನ್ನು ಅನುಭವಿಸಿದ್ದವು. ರಾಜ್ಯದ ಇತರೆ ಭಾಗವು ಅತಿವೃಷ್ಟಿ, ಪ್ರವಾಹದಿಂದ ತತ್ತರಿಸಿದರೂ ಬುಂದೇಲ್‌ಖಂಡ ಪ್ರದೇಶದಲ್ಲಿ ಮಾತ್ರ ಬರವು ತನ್ನ ಬಾಹುಗಳನ್ನು ಚಾಚಿಕೊಂಡಿತ್ತು.

ಆದರೆ, ಈ ಪ್ರದೇಶಕ್ಕೆ 2000ರಲ್ಲಿ ಬಡಿದ ಬರವು ನೀರಿನ ಸಂರಕ್ಷಣೆಯಲ್ಲಿ ಜನರ ಒಗ್ಗೂಡುವಿಕೆಗೆ ಸಾಕ್ಷಿಯಾಯಿತು ಎನ್ನಬಹುದು. ಇನ್ನೊಂದು ಮುಖ್ಯ ಅಂಶ ಎಂದರೆ, ಸರ್ಕಾರದ ಯೋಜನೆಯು ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ನೀಡಿದ್ದು. ಖುದ್ದು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಪಂಚಾಯಿತಿಗಳಿಗೆ ನೀಡಲಾಯಿತು. ಅಧಿಕಾರದ ವಿಕೇಂದ್ರೀಕರಣವೂ ಬರ ನಿರ್ವಹಣೆಯಲ್ಲಿ ಮುಖ್ಯ ಪಾತ್ರ ವಹಿಸಿತ್ತು.

ಅಲ್ಲಿಂದ ಇಲ್ಲಿಯವರೆಗೆ ಸರ್ಕಾರ ಹಾಗೂ ಜನರು ಸೇರಿ ರೂಪಿಸಿದ ಈ ಮಾದರಿಯು ಇಂದು ಮಧ್ಯಪ್ರದೇಶವನ್ನು ನೀರಿನ ಸಂರಕ್ಷಣೆಯಲ್ಲಿ ಮಾದರಿ ರಾಜ್ಯವನ್ನಾಗಿಸಿದೆ. ‘ರಾಷ್ಟ್ರೀಯ ಜಲ ಪ್ರಶಸ್ತಿ –2022’ ಅನ್ನು ಮಧ್ಯ ಪ್ರದೇಶವು ತನ್ನದಾಗಿಸಿಕೊಂಡಿದೆ. ಜೊತೆಗೆ, ನಗರ ಪ್ರದೇಶದಲ್ಲಿ ನೀರಿನ ಪೂರೈಕೆ ಹಾಗೂ ಹಂಚಿಕೆ ವಿಭಾಗದಲ್ಲಿ ಇಂದೋರ್‌ ನಗರಸಭೆಯು ಇದೇ ವರ್ಷದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.

ಮಧ್ಯಪ್ರದೇಶವು ನೈಸರ್ಗಿಕವಾಗಿ ಸಂಪತ್ತು ಭರಿತ ರಾಜ್ಯವಾಗಿದೆ. ಇಲ್ಲಿ ಒಟ್ಟು 14 ಪ್ರಮುಖ ನದಿ ಜಾಲಗಳು ಇವೆ. ಹಾಗಿದ್ದರೂ  ರಾಜ್ಯವು ಮಳೆಗಾಲದಲ್ಲಿ ಸುರಿಯುವ ಮಳೆಯ ಮೇಲೆಯೇ ಅವಲಂಬಿತವಾಗಿದೆ. ಜನವರಿಯಿಂದ ಜೂನ್‌ವರೆಗೂ ರಾಜ್ಯವು ಪೂರ್ತಿ ಬೆಂಗಾಡಾಗಿ ಇರುತ್ತದೆ. ಈ ತಿಂಗಳುಗಳಲ್ಲಿ ಬಾವಿಗಳಂಥ ನೀರಿನ ಮೂಲಗಳ ಮೇಲೆ ಮಾತ್ರವೇ ಜನರು ಅವಲಂಬಿತರಾಗುತ್ತಾರೆ. 

1994ರಲ್ಲಿ ‘ರಾಜೀವ್ ಗಾಂಧಿ ಜಲಾನಯನ ನಿರ್ವಹಣಾ ಮಿಷನ್’ ಅನ್ನು ಅಂದಿನ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್‌ ನೇತೃತ್ವದಲ್ಲಿ ಮಧ್ಯಪ್ರದೇಶದಲ್ಲಿ ಜಾರಿ ಮಾಡಲಾಗಿತ್ತು. 1985ರಲ್ಲಿ ಝಬುವಾ ಜಿಲ್ಲೆಯ ಕಲೆಕ್ಟರ್‌ ಆಗಿದ್ದ ಆರ್‌. ಗೋಪಾಲಕೃಷ್ಣನ್‌ ಅವರ ವರದಿಯನ್ನು ಆಧರಿಸಿ ಈ ಮಿಷನ್‌ ಅನ್ನು ಜಾರಿ ಮಾಡಲಾಗಿತ್ತು. ಪರಿಸರ ನಾಶದಿಂದ ತೀವ್ರವಾಗಿ ಹಾನಿಯೊಳಗಾಗಿರುವ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು, ಅಲ್ಲಿನ ಜಲಮೂಲಗಳ ಸಂರಕ್ಷಣೆ ಮಾಡುವುದು ಈ ಮಿಷನ್‌ನ ಮುಖ್ಯ ಉದ್ದೇಶವಾಗಿತ್ತು. ಸರ್ಕಾರ, ಸ್ಥಳೀಯ ಸಂಸ್ಥೆಗಳು, ಎನ್‌ಜಿಒ ಹಾಗೂ ಜನರ ಪಾಲುದಾರಿಕೆಯಲ್ಲಿ ಈ ಮಿಷನ್‌ನ ಕೆಲಸ ಕಾರ್ಯಗಳು ಜರುಗಿದವು.

ಇದರ ಮುಂದುವರಿದ ಭಾಗ ಎಂಬಂತೆ 1999ರಲ್ಲಿ, ಸಿಂಗ್‌ ಅವರೇ ಮುಂದಾಳತ್ವ ವಹಿಸಿ, ‘ಏಕ್‌ ಪಂಚ್‌ ಏಕ್‌ ತಲಾಬ್‌’ (ಒಬ್ಬ ಪಂಚಾಯಿತಿ ಸದಸ್ಯ, ಒಂದು ಕೆರೆ) ಯೋಜನೆಗೆ ಕರೆ ನೀಡಿದರು. ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಯ ಸದಸ್ಯನು ಒಂದು ಕೆರೆಯನ್ನು ನಿರ್ಮಾಣ ಮಾಡಬೇಕು ಮತ್ತು ಒಂದು ಕೆರೆಯ ಪುನಶ್ಚೇತನವನ್ನು ಕಡ್ಡಾಯವಾಗಿ ಮಾಡಬೇಕು ಎಂದು ಸಿಂಗ್‌ ಕರೆ ನೀಡಿದ್ದರು. ಈ ಯೋಜನೆಯು ಎಷ್ಟು ಜನಪ್ರಿಯವಾಯಿತೆಂದರೆ, ಕೆರೆ ನಿರ್ಮಾಣದಲ್ಲಿ ಜನರೂ ಭಾಗೀದಾರರಾದರು. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಕೆರೆಗಳ ನಿರ್ಮಾಣಕ್ಕೆ ಅಣಿಯಾದರು. ಕೆಲವರಂತೂ ತಮ್ಮ ಸ್ವಂತ ಜಮೀನನ್ನೇ ಕೆರೆಯ ನಿರ್ಮಾಣಕ್ಕೆ ದೇಣಿಗೆ ನೀಡಿದರು.

1997–2007ರ ಮಧ್ಯೆದಲ್ಲಿ ಕಿರು ಡ್ಯಾಂಗಳ ನಿರ್ಮಾಣ ಪ್ರಾರಂಭ ಮಾಡಲಾಯಿತು. ನರ್ಮದಾ ನದಿಯೊಂದಕ್ಕೇ ಸುಮಾರು 30 ದೊಡ್ಡ ಜಲಾಶಯಗಳು, 135 ಮಧ್ಯಮ ಗಾತ್ರದ ಜಲಾಶಯಗಳು ಮತ್ತು 3,000 ಚೆಕ್‌ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಜೊತೆಗೆ, ಕಾಲುವೆಗಳಿಗೆ, ಸಣ್ಣ ಸಣ್ಣ ತೊರೆಗಳಿಗೆ ಚೆಕ್‌ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಇವು ರಾಜ್ಯದ ಆರ್ಥಿಕತೆಗೂ ಬಹುದೊಡ್ಡ ಕೊಡುಗೆ ನೀಡಿವೆ ಎಂದು ಸಾಬೀತು ಮಾಡುವ ಹಲವು ಸಂಶೋಧನೆಗಳೂ ನಡೆದಿವೆ. ನೀರಿಲ್ಲದ ದಿನಗಳಲ್ಲಿ, ಈ ಡ್ಯಾಂಗಳಲ್ಲಿ ಮೋಟಾರುಗಳನ್ನು ಅಳವಡಿಸಿಕೊಳ್ಳುವ ಮೂಲಕ ರೈತರು ತಮ್ಮ ಕೃಷಿ ಭೂಮಿಗೆ ನೀರುಣಿಸುತ್ತಿದ್ದಾರೆ. ಜಾನುವಾರುಗಳಿಗೆ ನೀರು, ಮನೆ ಬಳಕೆಗೆ ನೀರು ಹೀಗೆ ಈ ಡ್ಯಾಂಗಳು ನಾನಾ ರೀತಿಯಲ್ಲಿ ಉಪಯೋಗವಾಗುತ್ತಿವೆ. ಚೆಕ್‌ ಡ್ಯಾಂಗಳ ಕಾರಣದಿಂದಲೇ ರಾಜ್ಯದಲ್ಲಿ ನೀರಾವರಿ ಪ್ರದೇಶದ ವಿಸ್ತೀರ್ಣ ಏರಿಕೆಯಾಗಿದೆ.

ಆಧಾರ: ರಾಷ್ಟ್ರೀಯ ಜಲ ಆಯೋಗ, ಪಿಐಬಿ, ರಾಜಸ್ಥಾನ ಜಲಸಂಪನ್ಮೂಲ ಇಲಾಖೆ ವರದಿಗಳು, ಮಧ್ಯಪ್ರದೇಶ ಜಲಸಂಪನ್ಮೂಲ ಇಲಾಖೆ ವರದಿಗಳು, ‘ಡೌನ್‌ ಟು ಅರ್ಥ್‌’ ಪತ್ರಿಕೆಯ ವರದಿಗಳು, ‘ಸ್ಟಡಿ ಆನ್‌ ವರ್ಕಿಂಗ್ಸ್‌ ಆಫ್‌ ಚೆಕ್‌ ಡ್ಯಾಮ್ಸ್‌ ಇನ್‌ ಮಧ್ಯಪ್ರದೇಶ್‌’ ಅಧ್ಯಯನ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT