ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ಎಲ್ಲೆ ಮೀರಿದ... ಮಾತು

Last Updated 24 ಫೆಬ್ರುವರಿ 2023, 1:49 IST
ಅಕ್ಷರ ಗಾತ್ರ

ಕಾಂಗ್ರೆಸ್‌ನ ವಕ್ತಾರ ಪವನ್ ಖೇರಾ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ‘ನರೇಂದ್ರ ಗೌತಮ್‌ದಾಸ್‌ ಮೋದಿ’ ಎಂದು ಹೇಳಿದ್ದರು. ಮೋದಿ ಅವರ ಹೆಸರನ್ನು ತಪ್ಪಾಗಿ ಹೇಳಿದ ಕಾರಣಕ್ಕೆ ಖೇರಾ ವಿರುದ್ಧ ದೇಶದ ಹಲವೆಡೆ ಪ್ರಕರಣ ದಾಖಲಾಗಿದೆ. ಕ್ರಿಮಿನಲ್‌ ಸಂಚು, ವೈಯಕ್ತಿಕ ನಿಂದನೆ, ಧರ್ಮಗಳ ಮಧ್ಯೆ ದ್ವೇಷ ಹರಡುವ ಉದ್ದೇಶ, ಶಾಂತಿ ಕದಡಲು ಯತ್ನಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಖೇರಾ ವಿರುದ್ಧ ಪ್ರಕರಣ ದಾಖಲಾಗಿದೆ. ದೇಶದಲ್ಲಿ ಈ ಹಿಂದೆಯೂ ರಾಜಕಾರಣಿಗಳು ಪರಸ್ಪರ ವೈಯಕ್ತಿಕ ನಿಂದನೆ ಮಾಡಿದ ನಿದರ್ಶನಗಳು ಸಾಕಷ್ಟಿವೆ. ರಾಹುಲ್ ಗಾಂಧಿ ಅವರನ್ನು ‘ಪಪ್ಪು’ ಎಂದು, ನರೇಂದ್ರ ಮೋದಿ ಅವರನ್ನು ‘ಚಾಯ್‌ವಾಲಾ’ ಎಂದು, ಸಿದ್ದರಾಮಯ್ಯ ಅವರನ್ನು ‘ಸಿದ್ರಾಮುಲ್ಲಾ ಖಾನ್‌ ’ ಎಂಬುದಾಗಿ ಕರೆದು ಮೂದಲಿಸಿದ್ದ ಉದಾಹರಣೆಗಳು ಇವೆ

ರಾಷ್ಟ್ರಪತಿಗೆ ‘ಅಗೌರವ’

2022ರ ಜುಲೈನಲ್ಲಿ, ಕಾಂಗ್ರೆಸ್ ಮುಖಂಡ ಅಧಿರ್ ರಂಜನ್ ಚೌಧರಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹುದ್ದೆಗೆ ಅಗೌರವ ಸೂಚಕವಾಗಿ ಮಾತನಾಡಿದ್ದಾರೆ ಎಂಬ ವಿಚಾರ ಲೋಕಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. ‘ರಾಷ್ಟ್ರಪತಿ’ ಪದದ ಬದಲು ‘ರಾಷ್ಟ್ರಪತ್ನಿ’ ಎಂದು ಚೌಧರಿ ಕರೆದಿದ್ದಾರೆ ಎಂದು ಆರೋಪಿಸಿದ್ದ ಬಿಜೆಪಿ ಸಂಸದರು ಗದ್ದಲ ಎಬ್ಬಿಸಿದ್ದರು. ಬುಡಕಟ್ಟು ಸಮುದಾಯಕ್ಕೆ ಸೇರಿದ ರಾಷ್ಟ್ರಪತಿಯನ್ನು ಕಾಂಗ್ರೆಸ್ ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ ಎಂದು ಆರೋಪಿಸಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹಾಗೂ ಬಿಜೆಪಿಯ ಮಹಿಳಾ ಸಂಸದರು ಪ್ರತಿಭಟನೆ ನಡೆಸಿದ್ದರು. ಸದನಕ್ಕೆ ಬಂದಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ತಡೆದು ಎಳೆದಾಡಿದ್ದರು ಎಂದು ಕಾಂಗ್ರೆಸ್ ಸಂಸದರು ಆರೋಪಿಸಿದ್ದರು. ಈ ಘಟನೆಯು ಸಂಸತ್ತಿನಲ್ಲಿ ಜಟಾಪಟಿಗೆ ಕಾರಣವಾಗಿತ್ತು. ಚೌಧರಿ ಅವರು ತಾವು ಬಾಯಿತಪ್ಪಿ ಆಡಿದ್ದ ಮಾತಿಗೆ ಕ್ಷಮೆ ಕೋರಿದ್ದರು.

‘₹50 ಕೋಟಿ ಗರ್ಲ್‌ಫ್ರೆಂಡ್‌’

ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು 2012ರ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಅಂದಿನ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ವೈಯಕ್ತಿಕ ಜೀವನದ ಬಗ್ಗೆ ಟೀಕೆ ಮಾಡಿದ್ದರು. ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರನ್ನು ಕುರಿತು ‘50 ಕೋಟಿ ರೂಪಾಯಿಯ ಗರ್ಲ್‌ಫ್ರೆಂಡ್’ ಎಂದು ಮೋದಿ ಹೇಳಿದ್ದರು 2010ರಲ್ಲಿ ಐಪಿಎಲ್ ಕೊಚ್ಚಿ ತಂಡದ ವ್ಯವಹಾರದ ವಿಚಾರವಾಗಿ ಉಂಟಾಗಿದ್ದ ವಿವಾದವನ್ನು ಟೀಕಿಸಲು ಮೋದಿ ಅವರು ಈ ರೀತಿ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ತರೂರ್, ‘ನನ್ನ ಪತ್ನಿ ಬೆಲೆಕಟ್ಟಲಾಗದವಳು’ ಎಂದಿದ್ದರು. ‘ನಿಮ್ಮ ಕಲ್ಪನೆಯ ₹50 ಕೋಟಿಗಿಂತಲೂ ಆಕೆ ಹೆಚ್ಚು ಮೌಲ್ಯದವಳು’ ಎಂದು ಹೇಳಿದ್ದರು.

ಸೋನಿಯಾ ಮೈಬಣ್ಣದ ಟೀಕೆ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿಯ ಹಲವು ನಾಯಕರು ವೈಯಕ್ತಿಕ ಜೀವನ ಕುರಿತ ಹಲವು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು, ‘ಒಂದು ವೇಳೆ, ರಾಜೀವ್ ಗಾಂಧಿ ಅವರು ನೈಜೀರಿಯಾದ ಮಹಿಳೆಯನ್ನು ವಿವಾಹವಾಗಿದ್ದರೆ ಅಥವಾ ಸೋನಿಯಾ ಅವರು ಶ್ವೇತವರ್ಣದವರು ಆಗಿಲ್ಲದಿದ್ದರೆ, ಅವರನ್ನು ಕಾಂಗ್ರೆಸ್ ಒಪ್ಪಿಕೊಳ್ಳುತ್ತಿತ್ತೇ’ ಎಂದು ಪ್ರಶ್ನಿಸಿದ್ದರು. ಇದು ಸೋನಿಯಾ ಅವರ ಮೈಬಣ್ಣದ ಕುರಿತು ಮಾಡಿದ ಟೀಕೆಯಾಗಿತ್ತು.

ಸೋನಿಯಾ ಅವರು ವಿದೇಶಿ ಮೂಲದವರು ಎಂಬ ವಿಚಾರವನ್ನು ಬಿಜೆಪಿ ಸಾಕಷ್ಟು ಬಾರಿ ಟೀಕೆಗೆ ಬಳಸಿಕೊಂಡಿದೆ. ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸೋನಿಯಾ ಅವರನ್ನು ‘ಜರ್ಸಿ ಹಸು’ ಎಂದು ಜರೆದಿದ್ದರು. ‘ಸೋನಿಯಾ ಅವರನ್ನು ‘ಮೇಡಂ’ ಎಂದು ಸಂಬೋಧಿಸುತ್ತಿದ್ದುದು ಅವರ ಮೇಲಿನ ಗೌರವಕ್ಕಾಗಿ ಅಲ್ಲ, ಬದಲಾಗಿ ಅವರ ಇಟಲಿ ಮೂಲವನ್ನು ಕೆಣಕುವುದಕ್ಕಾಗಿ’ ಎಂಬ ಮಾತುಗಳಿದ್ದವು. ಸೋನಿಯಾ ಅವರನ್ನು ‘ಬಾರ್ ಪರಿಚಾರಕಿ’ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೀಗಳೆದಿದ್ದರು.

‘ರಾಹುಲ್‌ ತಂದೆ ಯಾರು’

ರಾಹುಲ್ ಗಾಂಧಿ ಅವರನ್ನು ‘ಪಪ್ಪು’ ಎಂದೂ, ‘ಯುವರಾಜ’ ಎಂಬುದಾಗಿಯೂ ಬಿಜೆಪಿಯ ಹಲವು ನಾಯಕರು ಟೀಕಿಸಿದ್ದಾರೆ. ಪಕ್ಷದ ಮುಖಂಡ ಹಾಗೂ ಫತೇಪುರ್ ಸಿಕ್ರಿಯ ಸಂಸದ ಚೌಧರಿ ಬಾಬುಲಾಲ್ ಅವರು ರಾಹುಲ್ ಅವರ ತಂದೆ ಯಾರು ಎಂಬುದಕ್ಕೆ ಪುರಾವೆ ಕೇಳಿದ್ದರು. ‘ಮೋದಿ ಸರ್ಕಾರ ನಡೆಸಿದ ನಿರ್ದಿಷ್ಟ ದಾಳಿಗೆ ಸಾಕ್ಷ್ಯ ನೀಡುವಂತೆ ರಾಹುಲ್ ಅವರು ಕೇಳಿದ್ದಾರೆ. ಆದರೆ ತಮ್ಮ ಪೋಷಕರು ಯಾರು ಎಂಬ ದಾಖಲೆಯನ್ನು ನೀಡಲು ರಾಹುಲ್ ಅವರಿಗೆ ಸಾಧ್ಯವೇ’ ಎಂದು ಬಾಬುಲಾಲ್ ಪ್ರಶ್ನಿಸಿದ್ದರು. ವೈಯಕ್ತಿಕ ಮಟ್ಟದಲ್ಲಿ ಮಾಡಲಾದ ಈ ಟೀಕೆಗೆ ಕಾಂಗ್ರೆಸ್‌ನಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

‘ಚಾಯ್‌ವಾಲಾ, ನೀಚ್‌ ಆದ್ಮಿ’

ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸವನ್ನು ಟೀಕಿಸುವ ಉದ್ದೇಶದಿಂದ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಅವರು ‘ಚಾಯ್‌ವಾಲಾ’ ಎಂಬ ಪದವನ್ನು ಬಳಸಿದ್ದರು. ಮೋದಿ ಅವರು ಆರಂಭದಲ್ಲಿ ಚಹಾ ಮಾರುತ್ತಿದ್ದ ವಿಚಾರವನ್ನು ಟೀಕೆಗೆ ಬಳಸಿಕೊಂಡಿದ್ದರು. ಅವರ ಮೇಲೆ ಜಾತಿ ಆಧರಿಸಿದ ಟೀಕೆಗಳೂ ಕೇಳಿಬಂದಿದ್ದವು. 2017ರಲ್ಲಿ ಮೋದಿ ಅವರನ್ನು ‘ನೀಚ್ ಆದ್ಮಿ’ ಎಂದು ಕರೆದಿದ್ದೂ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ‘ಮೋದಿ ಅವರು ಬ್ರಾಹ್ಮಣರಲ್ಲದ ಕಾರಣ, ಅವರಿಗೆ ಹಿಂದುತ್ವದ ಬಗ್ಗೆ ಮಾತನಾಡಲು ಯಾವುದೇ ಹಕ್ಕಿಲ್ಲ’ ಎಂದು ಕಾಂಗ್ರೆಸ್ ಮುಖಂಡ ಸಿ.ಪಿ. ಜೋಷಿ ಅರೋಪಿಸಿದ್ದರು.

‘ಮೋದಿ ಅವರ ತಂದೆ ಯಾರೆಂದು ಯಾರಿಗೂ ಗೊತ್ತಿಲ್ಲ’ ಎಂದು ವಿಲಾಸರಾವ್ ಮತ್ತೇಂವಾರ್ ಅವರು ಆರೋಪಿಸಿದ್ದರು. 2018ರ ರಾಜಸ್ಥಾನ ವಿಧಾನಸಭಾ ಚುನಾವಣೆಯ ವೇಳೆ ಕೇಂದ್ರ ಸಚಿವ ವಿಲಾಸರಾವ್ ಮಾಡಿದ್ದ ಭಾಷಣದ ವಿಡಿಯೊವನ್ನು ಬಿಜೆಪಿ ಟ್ವಿಟರ್‌ನಲ್ಲಿ ಹಂಚಿಕೊಂಡಿತ್ತು. ರಾಹುಲ್ ಅವರು ಐದು ತಲೆಮಾರಿನ ಹಿನ್ನೆಲೆ ಹೊಂದಿದ್ದಾರೆ ಎಂಬುದನ್ನು ಹೋಲಿಸಲು ವಿಲಾಸರಾವ್ ಅವರು ಹೀಗೆ ಹೇಳಿದ್ದರು ಎನ್ನಲಾಗಿದೆ. ಇದಕ್ಕೆ ವ್ಯಾಪಕ ಪ್ರತಿರೋಧ ವ್ಯಕ್ತವಾಗಿತ್ತು.

ರಾಜ್ ಬಬ್ಬರ್ ಅವರು, ಮೋದಿ ಸರ್ಕಾರದ ಅವಧಿಯಲ್ಲಿ ರೂಪಾಯಿ ಮೌಲ್ಯ ಕುಸಿಯುತ್ತಿದೆ ಎಂದು ಆರೋಪಿಸುವ ಭರದಲ್ಲಿ, ಮೋದಿ ಅವರ ತಾಯಿಯ ವಯಸ್ಸಿನೊಂದಿಗೆ ರೂಪಾಯಿ ಮೌಲ್ಯವನ್ನು ಹೋಲಿಕೆ ಮಾಡಿದ್ದ ಘಟನೆ 2018ರಲ್ಲಿ ನಡೆದಿತ್ತು. ಇದೊಂದು ಕೆಟ್ಟ ಮಾನಸಿಕ ಸ್ಥಿತಿ ಎಂದು ಬಿಜೆಪಿ ಮುಖಂಡ ವಿಜಯ್ ರೂಪಾಣಿ ಅವರು ರಾ‌ಜ್ ಬಬ್ಬರ್ ಮಾತನ್ನು ಛೇಡಿಸಿದ್ದರು.

‘ಸಾವಿನ ವ್ಯಾಪಾರಿ’

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿ ಆಗಿದ್ದಾಗ ಕಾಂಗ್ರೆಸ್‌ನ ನಾಯಕರು ಅವರನ್ನು, ‘ಸಾವಿನ ವ್ಯಾಪಾರಿ’ ಎಂದು ಕರೆದಿದ್ದರು. 2002ರ ಗೋಧ್ರಾ ಮತ್ತು ಗೋಧ್ರೋತ್ತರ ಹತ್ಯಾಕಾಂಡದಲ್ಲಿ ಮೋದಿ ಅವರ ಕೈವಾಡ ಇದೆ ಎಂದು ಆರೋಪಿಸುವುದಕ್ಕಾಗಿ ಕಾಂಗ್ರೆಸ್‌ ನಾಯಕರು ‘ಸಾವಿನ ವ್ಯಾಪಾರಿ’ ಎಂಬುದನ್ನು ಬಳಸಿದ್ದರು. ಮೊದಲ ಬಾರಿ ಇದನ್ನು ಬಳಸಿದ್ದು ಸೋನಿಯಾ ಗಾಂಧಿ. 2007ರ ಗುಜರಾತ್‌ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸೋನಿಯಾ ಅವರು ಮೋದಿ ಅವರನ್ನು ‘ಸಾವಿನ ವ್ಯಾಪಾರಿ’ ಎಂದು ಕರೆದಿದ್ದರು. ಈ ಟೀಕೆಗೆ ಭಾರಿ ಆಕ್ಷೇಪ ವ್ಯಕ್ತವಾಗಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತಿತ್ತು. ಆದರೆ, 2014ರ ಲೋಕಸಭಾ ಚುನಾವಣೆಗೆ ಮೋದಿ ಅವರನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದಾಗಲೂ ಕಾಂಗ್ರೆಸ್‌ ನಾಯಕರು ಈ ಟೀಕೆ ಬಳಸಿದ್ದರು. 2014ರ ಮಾರ್ಚ್‌ನಲ್ಲಿ ಕಾಂಗ್ರೆಸ್‌ ವಕ್ತಾರ ಶಕ್ತಿಸಿನ್ಹ ಗೋಹಿಲ್‌ ಮೋದಿ ಅವರನ್ನು ಮತ್ತೆ ‘ಸಾವಿನ ವ್ಯಾಪಾರಿ’ ಎಂದು ಕರೆದಿದ್ದರು. ಇದಕ್ಕೂ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ರಾಜ್ಯದಲ್ಲಿಯೂ ಕಡಿಮೆ ಇಲ್ಲ

ರಾಜ್ಯದಲ್ಲೂ ರಾಜಕೀಯ ನಾಯಕರು ವೈಯಕ್ತಿಕ ಟೀಕೆಗಿಳಿದಿದ್ದಾರೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ‘ಸಿದ್ರಾಮುಲ್ಲಾ ಖಾನ್’ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಕರೆದಿದ್ದರು. ಈ ಟೀಕೆಗೆ ಸಿದ್ದರಾಮಯ್ಯ, ‘ನಾನು ಸಿದ್ರಾಮುಲ್ಲಾ ಖಾನ್ ಹೌದು’ ಎಂದು ತಿರುಗೇಟು ನೀಡಿದ್ದರು. ಸಚಿವ ಅಶ್ವತ್ಥ ನಾರಾಯಣ ಅವರು ‘ಸಿದ್ದರಾಮಯ್ಯ ಅವರನ್ನು ಹೊಡೆದುಹಾಕಬೇಕು’ ಎಂಬುದಾಗಿ ಬಹಿರಂಗ ಸಭೆಯೊಂದರಲ್ಲಿ ಹೇಳಿದ್ದರು. ‘ಉರಿಗೌಡ, ನಂಜೇಗೌಡರು ಟಿಪ್ಪುವನ್ನು ಹೊಡೆದ ಹಾಗೆ, ಸಿದ್ದರಾಮಯ್ಯ ಅವರನ್ನೂ ಹೊಡೆದುಹಾಕಬೇಕು’ ಎಂದು ಹೇಳಿದ್ದರು. ಸಚಿವರ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ನಂತರ, ತಾವು ಆ ಅರ್ಥದಲ್ಲಿ ಹೇಳಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದ್ದರು.

ಕಾನೂನು ಹೇಳುವುದೇನು?

ದ್ವೇಷ ಭಾಷಣ ಮತ್ತು ವೈಯಕ್ತಿಕ ನಿಂದನೆ ಪ್ರಕರಣಗಳನ್ನು ಸಾಮಾನ್ಯವಾಗಿ ಭಾರತೀಯ ದಂಡ ಸಂಹಿತೆಯ 153ಎ, 153ಬಿ, 295ಬಿ, 298, 501, 504 ಮತ್ತು 506ನೇ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಲಾಗುತ್ತದೆ. ಈ ಎಲ್ಲಾ ಸೆಕ್ಷನ್‌ಗಳ ಅಡಿಯಲ್ಲಿ ತಪ್ಪಿತಸ್ಥ ಎಂದು ಸಾಬೀತಾದರೆ, ಗರಿಷ್ಠ 7 ವರ್ಷದವರೆಗೆ ಜೈಲುಶಿಕ್ಷೆ ವಿಧಿಸಲು ಅವಕಾಶವಾಗುತ್ತದೆ. ಈ ಸೆಕ್ಷನ್‌ಗಳು ಶಿಕ್ಷೆಯ ಪ್ರಮಾಣವನ್ನು ಮಾತ್ರ ಸೂಚಿಸಿವುದಿಲ್ಲ, ಬದಲಿಗೆ ದ್ವೇಷ ಭಾಷಣ ಮತ್ತು ವೈಯಕ್ತಿಕ ನಿಂದನೆಯ ಸ್ವರೂಪಗಳನ್ನು ವ್ಯಾಖ್ಯಾನಿಸುತ್ತವೆ.

ಸೆಕ್ಷನ್‌ 153ಎ ಮತ್ತು ಸೆಕ್ಷನ್‌ 153ಬಿ: ಧರ್ಮ, ಜನಾಂಗ, ಜಾತಿ, ಜನ್ಮದ ಸ್ಥಳ, ವಾಸ, ಭಾಷೆಯ ಆಧಾರದಲ್ಲಿ ಎರಡು ಗುಂಪುಗಳ ಮಧ್ಯೆ ದ್ವೇಷ ಹರಡುವ ಕೃತ್ಯಗಳು ಈ ಸೆಕ್ಷನ್‌ ಅಡಿಯಲ್ಲಿ ಬರುತ್ತವೆ. ಇಂತಹ ಕೃತ್ಯಗಳು ಮೌಖಿಕ, ಲಿಖಿತ, ಸನ್ನೆ, ಪ್ರದರ್ಶನದ ರೂಪದಲ್ಲಿ ಇರಬಹುದು. ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡುವ ಉದ್ದೇಶದಿಂದ ಇಂತಹ ಕೃತ್ಯಗಳನ್ನು ನಡೆಸುವುದೂ ಈ ಸೆಕ್ಷನ್‌ನ ಅಡಿಯಲ್ಲೇ ಬರುತ್ತದೆ. ಯಾವುದೇ ಸಮುದಾಯದ ವಿರುದ್ಧ ಹಿಂಸೆ ಮತ್ತು ವಿಧ್ವಂಸಕಾರಿ ಕೃತ್ಯವನ್ನು ನಡೆಸುವಂತೆ ಪ್ರಚೋದಿಸಲು ಆಯೋಜಿಸುವ ಕಾರ್ಯಕ್ರಮಗಳೂ ಇದೇ ಸೆಕ್ಷನ್‌ ಅಡಿಯಲ್ಲಿ ಬರುತ್ತವೆ. ಇಂತಹ ಕೃತ್ಯಗಳಿಗೆ ಗರಿಷ್ಠ ಮೂರು ವರ್ಷದವರೆಗೆ ಜೈಲುಶಿಕ್ಷೆ ವಿಧಿಸಲು ಅವಕಾಶವಿದೆ. ಪ್ರಾರ್ಥನೆ ಮತ್ತು ಆರಾಧನೆಯ ಸ್ಥಳಗಳಲ್ಲಿ ಎಸಗುವ ಇಂತಹ ಕೃತ್ಯಗಳಲ್ಲಿ ಗರಿಷ್ಠ 5 ವರ್ಷದವರೆಗೆ ಜೈಲುಶಿಕ್ಷೆ ವಿಧಿಸಲು ಅವಕಾಶವಿದೆ.

ಸೆಕ್ಷನ್‌ 295ಬಿ: ಯಾವುದೇ ಧರ್ಮ ಅಥವಾ ಸಮುದಾಯದ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೃತ್ಯಗಳು ಈ ಸೆಕ್ಷನ್‌ನ ಅಡಿಯಲ್ಲಿ ಬರುತ್ತವೆ. ಇಂತಹ ಕೃತ್ಯಗಳು ಮೌಖಿಕ, ಲಿಖಿತ, ಸನ್ನೆ, ಪ್ರದರ್ಶನದ ರೂಪದಲ್ಲಿ ಇರಬಹುದು. ಈ ಸೆಕ್ಷನ್‌ನ ಅಡಿಯಲ್ಲಿ ಸಾಬೀತಾಗುವ ಕೃತ್ಯಗಳಿಗೆ ಗರಿಷ್ಠ ಮೂರು ವರ್ಷಗಳವರೆಗೆ ಜೈಲುಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.

ಸೆಕ್ಷನ್‌ 298: ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಮಾತನಾಡುವುದು ಅಥವಾ ಸನ್ನೆ ಮಾಡುವುದು ಅಥವಾ ಶಬ್ದ ಮಾಡುವುದು ಅಥವಾ ಪ್ರಾರ್ಥನೆಯ ಸ್ಥಳದಲ್ಲಿ ವಸ್ತುಗಳನ್ನು ಇರಿಸುವಂತಹ ಕೃತ್ಯಗಳನ್ನು ಈ ಸೆಕ್ಷನ್‌ನ ಅಡಿ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಈ ಸೆಕ್ಷನ್‌ ಅಡಿ ಸಾಬೀತಾದ ಕೃತ್ಯಕ್ಕೆ ಗರಿಷ್ಠ ಒಂದು ವರ್ಷದವರೆಗೆ ಜೈಲುಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.

ಸೆಕ್ಷನ್‌ 501: ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಗಳ ರಾಜ್ಯಪಾಲರು ಮತ್ತು ಸಚಿವರಿಗೆ ಅವಮಾನ ಮಾಡುವಂತಹ ಮಾತು, ಸನ್ನೆ, ಕ್ರಿಯೆಗಳನ್ನು ಈ ಸೆಕ್ಷನ್‌ನ ಅಡಿಯಲ್ಲಿ ಅಪರಾಧ ಕೃತ್ಯ ಎಂದು ಪರಿಗಣಿಸಲಾಗುತ್ತದೆ. ಈ ಸೆಕ್ಷನ್ ಅಡಿ ಸಾಬೀತಾದ ಅಪರಾಧ ಕೃತ್ಯಗಳಿಗೆ ಗರಿಷ್ಠ ಎರಡು ವರ್ಷದವರೆಗೆ ಜೈಲುಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.

ಸೆಕ್ಷನ್‌ 504: ಯಾವುದೇ ವ್ಯಕ್ತಿಯನ್ನು ಅವಮಾನಿಸುವುದರಿಂದ ಅಥವಾ ಪ್ರಚೋದಿಸುವುದರಿಂದ ಆತ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಕೃತ್ಯಗಳನ್ನು ಎಸಗುತ್ತಾನೆ ಎಂದು ಗೊತ್ತಿದ್ದೂ, ಮಾಡುವ ಕ್ರಿಯೆಯನ್ನು ಈ ಸೆಕ್ಷನ್‌ನ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಈ ಸೆಕ್ಷನ್ ಅಡಿ ಸಾಬೀತಾದ ಅಪರಾಧ ಕೃತ್ಯಗಳಿಗೆ ಗರಿಷ್ಠ ಎರಡು ವರ್ಷದವರೆಗೆ ಜೈಲುಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.

ಸೆಕ್ಷನ್‌ 506: ಯಾವುದೇ ವ್ಯಕ್ತಿ ಅಥವಾ ಸ್ವತ್ತಿಗೆ ಹಾನಿಯಾಗುವಂತಹ ಕೃತ್ಯಗಳನ್ನು ನಡೆಸುವುದಾಗಿ ಬೆದರಿಕೆ ಹಾಕುವುದನ್ನು ಈ ಸೆಕ್ಷನ್‌ ಅಡಿ ಅಪರಾಧ ಕೃತ್ಯ ಎಂದು ಪರಿಗಣಿಸಲಾಗುತ್ತದೆ. ಈ ಸೆಕ್ಷನ್‌ ಅಡಿ ಸಾಬೀತಾದ ಕೃತ್ಯಗಳಿಗೆ ಗರಿಷ್ಠ ಎರಡು ವರ್ಷಗಳವರೆಗೆ ಜೈಲುಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಇಂತಹ ಬೆದರಿಕೆಯ ಕಾರಣದಿಂದ ಸಾವು ಉಂಟಾದರೆ ಅಥವಾ ಸ್ವತ್ತಿಗೆ ಹಾನಿಯಾದರೆ ಅಂತಹ ಪ್ರಕರಣಗಳಲ್ಲಿ, ಅಪರಾಧಿಗೆ ಗರಿಷ್ಠ ಏಳು ವರ್ಷಗಳವರೆಗೆ ಜೈಲುಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.

ಆಧಾರ: ಭಾರತೀಯ ದಂಡಸಂಹಿತೆ, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT