ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ಸಹಸ್ತ್ರ ಸರೋವರದ ಹಾದಿಯ ಸಾವಿನ ಚಾರಣ
ಆಳ–ಅಗಲ: ಸಹಸ್ತ್ರ ಸರೋವರದ ಹಾದಿಯ ಸಾವಿನ ಚಾರಣ
Published 6 ಜೂನ್ 2024, 23:56 IST
Last Updated 6 ಜೂನ್ 2024, 23:56 IST
ಅಕ್ಷರ ಗಾತ್ರ

ಸಹಸ್ತ್ರ ಸರೋವರಕ್ಕೆ ಚಾರಣ ಮಾಡುವ ಸಾಹಸ ಮಾಡುವವರ ಸಂಖ್ಯೆ ಕಡಿಮೆಯೇ. ಕೇದಾರನಾಥ ಮತ್ತು ಗಂಗೋತ್ರಿಗೆ ಕೈಗೊಳ್ಳುವ ಯಾತ್ರೆಯ ಹಾದಿಯ ನಟ್ಟನಡುವೆ ಇರುವ ಸಹಸ್ತ್ರ ಪರ್ವತ ಶ್ರೇಣಿಯಲ್ಲಿ ನಡೆಸುವ ಚಾರಣವಿದು. ಇಲ್ಲಿಗೆ ಈಚೆಗೆ ಬೆಂಗಳೂರಿನ 22 ಮಂದಿಯ ತಂಡ ಚಾರಣ ಕೈಗೊಂಡಿತ್ತು. ಆದರೆ ವಿಪರೀತ ಹಿಮಪಾತ ಮತ್ತು ಹಿಮಗಾಳಿಯ ಕಾರಣದಿಂದ ಈ ತಂಡದಲ್ಲಿದ್ದ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಉಳಿದ 13 ಮಂದಿಯನ್ನು ರಕ್ಷಿಸಲಾಗಿದೆ. ಮೃತದೇಹಗಳನ್ನೂ ಅಲ್ಲಿಂದ ತರಲಾಗಿದೆ. ಜನಪ್ರಿಯವಲ್ಲದ ಈ ಚಾರಣದಲ್ಲಿ ಅಪಾಯದ ಸಾಧ್ಯತೆ ಹೆಚ್ಚೇ ಇರುತ್ತದೆ. ಅಂತಹ ಅಪಾಯಕ್ಕೆ ಈ ತಂಡ ಸಿಲುಕಿದೆ. ಸಣ್ಣ, ಮಧ್ಯಮ ಮತ್ತು ದೊಡ್ಡ ಸರೋವರಗಳೂ ಸೇರಿ ಒಟ್ಟು ಏಳು ಸರೋವರಗಳಿವೆ. ‘ದೇವತೆಗಳ ಸರೋವರ’ ಎಂದೇ ಖ್ಯಾತವಾಗಿರುವ ಈ ಪ್ರದೇಶವು ಚಾರಣಿಗರಿಗೆ ‘ಮೃತ್ಯುಕೂಪ’ವಾಗಿ ಪರಿಣಮಿಸಿದೆ

ಏಳು ದಿನ, ಆರು ರಾತ್ರಿಗಳ ಚಾರಣ

ಮೊದಲನೇ ದಿನ: ಬಟವಾರೀಯಿಂದ ಮಲ್ಲಾ ಪ್ರದೇಶದವರೆಗೆ ಚಾರಣ. ಇಲ್ಲಿ ಈ ನದಿಯನ್ನು ದಾಟಬೇಕಿದೆ. ಈ ಬಳಿಕ ಸಿಲ್ಲಾ ಗ್ರಾಮ ಸಿಗುತ್ತದೆ. ಇದು ಚಾರಣದಲ್ಲಿ ಸಿಗುವ ಕೊನೆಯ ಹಳ್ಳಿ. ಇಲ್ಲಿಂದ ಪರ್ವತದ ಅರಣ್ಯ ಪ್ರದೇಶಗಳನ್ನು ದಾಟಿಕೊಂಡು, 4–5 ಗಂಟೆಗಳ ಬಳಿಕ ಗಾಯ್ರಿ ಸಿಗುತ್ತದೆ. ಇಲ್ಲಿಂದ ಮುಂದೆ ಸುಮಾರು ಕಿ.ಮೀಗಳ ವರೆಗೆ ಎಲ್ಲಿಯೂ ಕುಡಿಯುವ ನೀರು ಕೂಡ ಸಿಗುವುದಿಲ್ಲ. ಇಲ್ಲಿಯೇ ರಾತ್ರಿ ಕಳೆಯಬೇಕಾಗುತ್ತದೆ

ಎರಡನೇ ದಿನ: ಒಂದು ತಾಸಿನ ಅರಣ್ಯದಾರಿ. ಇಲ್ಲಿಂದ ಚಾರಣವು ಕಷ್ಟವಾಗುತ್ತಾ ಸಾಗುತ್ತದೆ. ತುಸು ದೂರದ ಸರಿದ ನಂತರ ಹುಲ್ಲುಗಾವಲು ಪ್ರದೇಶ ಸಿಗುತ್ತದೆ. ಕುಶ್‌ ಕಲ್ಯಾಣ್ ಪರ್ವತದಲ್ಲೇ ಕ್ಯಾಂಪ್‌ ಮಾಡಬೇಕು. ಇಲ್ಲಿಂದ ಮುಂದೆ ಕುಡಿಯುವ ನೀರು ಸಿಗುವುದು ಇನ್ನು ಲಂಬಾ ಸರೋವರದಲ್ಲಿಯೇ

ಮೂರನೇ ದಿನ: ಇನ್ನಷ್ಟು ಎತ್ತರೆತ್ತರಕ್ಕೆ ಚಾರಣ ಆರಂಭ. ಒಂದು ಪರ್ವತವನ್ನು ಇಳಿದು ಮತ್ತೊಂದು ಪರ್ವತವನ್ನು ಏರಬೇಕು. 6–7 ತಾಸುಗಳ ಚಾರಣದ ಬಳಿಕ ಕ್ಯಾರ್ಕಿ ಬಗ್ಯಾಲ್‌ ಪ್ರದೇಶ ಸಿಗುತ್ತದೆ. ಇಲ್ಲಿಯೇ ರಾತ್ರಿ ಕಳೆಯಲಾಗುತ್ತದೆ

ನಾಲ್ಕನೇ ದಿನ: ಕ್ಯಾರ್ಕಿ ಪ್ರದೇಶದಿಂದ ಇನ್ನಷ್ಟು ಎತ್ತರಕ್ಕೆ ಹೋಗಬೇಕು. ಜೂನ್‌ನಿಂದ ಇಲ್ಲಿ ಹಿಮ ಬೀಳಲು ಆರಂಭವಾಗುತ್ತದೆ. ಪಕ್ಕದ ಪರ್ವತಕ್ಕೆ ಏರುವ ದಾರಿಯು ಕಿರಿದಾಗುತ್ತದೆ. ಕೇವಲ ಆರು ಅಡಿ ಅಗಲವಷ್ಟೆ. ಈ ಪರ್ವತದಲ್ಲಿ ಸಣ್ಣ ಸಣ್ಣ ಸರೋವರಗಳು ಸಿಗುತ್ತವೆ. 6 ಕಿ.ಮೀ ದೂರವನ್ನು ಕ್ರಮಿಸಲು 4–5 ತಾಸುಗಳು ಹಿಡಿಯುತ್ತವೆ. ಲಂಬಾ ಸರೋವರದ ಬಳಿಯ ಕ್ಯಾಂಪ್‌ನಲ್ಲಿಯೇ ರಾತ್ರಿ ಕಳೆಯಬೇಕು

ಐದನೇ ದಿನ: ಲಂಬಾ ಸರೋವರದಿಂದ ಸಹಸ್ತ್ರ ಸರೋವರಕ್ಕೆ ಚಾರಣ. ಸಹಸ್ತ್ರ ಸರೋವರಕ್ಕೆ ತಲುಪುವುದು ಸವಾಲು. ಅಂಕು–ಡೊಂಕು ಮಾದರಿಯಲ್ಲಿ ಚಾರಣ ಇರಲಿದೆ. ಹಿಮಪಾತ ಇರುವುದರಿಂದ ಚಾರಣವು ಇನ್ನಷ್ಟು ತ್ರಾಸದಾಯಕ ವಾಗಲಿದೆ. ಖುಕುಲಿ ಧಾರ್‌ ಪರ್ವತದಲ್ಲಿ ಸಹಸ್ತ್ರ ಸರೋವರ ಇದೆ. ಇಲ್ಲಿಂದ ಸಹಸ್ತ್ರ ಪರ್ವತವೂ ಕಾಣುತ್ತದೆ. ಸಹಸ್ತ್ರ ಸರೋವರದ ತಟದಲ್ಲಿ ಒಂದೆರಡು ಗಂಟೆ ಕಳೆದ ನಂತರ ಲಂಬಾ ಸರೋವರಕ್ಕೆ ವಾಪಸಾಗಬೇಕಾಗುತ್ತದೆ

ಆರನೇ ದಿನ: ಲಾಂಬಾ ಸರೋವರದಿಂದ ಕುಶ್‌ ಕಲ್ಯಾಣ್‌ ಪರ್ವತಕ್ಕೆ ಇಳಿಯಬೇಕು. ಕುಶ್‌ ಕಲ್ಯಾಣ್‌ ಪರ್ವತದಲ್ಲಿಯೇ ವಾಸ್ತವ್ಯ

ಏಳನೇ ದಿನ: ಕುಶ್‌ ಕಲ್ಯಾಣ್‌ ಪರ್ವತದಿಂದ ಪಿನ್‌ಶ್ವಾರ್‌ ಪರ್ವತಕ್ಕೆ 10 ಕಿ.ಮೀ.ಗಳ ಚಾರಣ. ಹುಲ್ಲುಗಾವಲು ಪ್ರದೇಶಗಳನ್ನು ದಾಟಿ ಪಿನ್‌ಶ್ವಾರ್‌ ಪರ್ವತಕ್ಕೆ ಇಳಿಯಬೇಕು. ಇಲ್ಲಿಗೆ ಚಾರಣ ಮುಗಿಯುತ್ತದೆ

ಜೂನ್‌ನಲ್ಲಿ ಹಿಮಪಾತದ ಅಪಾಯ
ಕ್ಯಾರ್ಕಿ ಪರ್ವತದಿಂದ ಇನ್ನಷ್ಟು ಎತ್ತರಕ್ಕೆ ಏರಿದರೆ ಲಂಬಾ ಸರೋವರ, ಅಲ್ಲಿಂದ ಸಹಸ್ತ್ರ ಸರೋವರದತ್ತ ಹಾದಿ ಸಾಗುತ್ತದೆ. ಆದರೆ ಜೂನ್‌ ಮೊದಲ ವಾರದಲ್ಲೇ ಇಲ್ಲಿ ಹಿಮಪಾತ ಆರಂಭವಾಗುತ್ತದೆ. ಈ ತಂಡವೂ ಹಿಮಪಾತ ಆರಂಭವಾಗುವ ಸಮಯದಲ್ಲೇ ಚಾರಣ ಕೈಗೊಂಡಿದೆ. ‘ಸಹಸ್ತ್ರ ಸರೋವರವನ್ನು ನೋಡಿಕೊಂಡು ಲಂಬಾ ಸರೋವರದತ್ತ ವಾಪಸಾಗುವಾಗ ಹಿಮಗಾಳಿ ಆರಂಭವಾಯಿತು. ಆನಂತರ ಹಿಮಪಾತ ಆರಂಭ ವಾಯಿತು’ ಎಂದು ಚಾರಣಿಗರೊಬ್ಬರು ಮಾಧ್ಯಮಗಳ ಜತೆಗೆ ಮಾಹಿತಿ ಹಂಚಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಿದ್ದ ವಾಯುಪಡೆಯು ಸಹ ಹಿಮಗಾಳಿ ತೀವ್ರವಾಗಿತ್ತು ಎಂದು ವಿಡಿಯೊ ಮತ್ತು ಚಿತ್ರಗಳನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT