ವ್ಹೀಲಿ ತಡೆಗಟ್ಟಲು ಕಠಿಣ ಕ್ರಮಕ್ಕೆ ಮುಂದಾಗಬೇಕು ಹಾಗೂ ಅಗತ್ಯ ಕಾನೂನು ತಿದ್ದುಪಡಿ ಮಾಡಬೇಕು ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ. ದ್ವಿಚಕ್ರ ವಾಹನದ ಮುಂದಿನ ಚಕ್ರವನ್ನು ಎತ್ತಿ ಓಡಿಸುವ (ವ್ಹೀಲಿ) ಪ್ರವೃತ್ತಿ ಈಚಿನ ವರ್ಷಗಳಲ್ಲಿ ಯುವಕರಲ್ಲಿ ಹೆಚ್ಚಾಗುತ್ತಿದೆ. ಅದು ಮೋಟಾರ್ ಬೈಕ್/ಸ್ಕೂಟರ್ ಚಾಲನೆ ಮಾಡುವವನೂ ಸೇರಿದಂತೆ ರಸ್ತೆಯ ಮೇಲೆ ಸಂಚರಿಸುವ ಇತರೆ ವಾಹನಗಳು ಹಾಗೂ ಪಾದಚಾರಿಗಳಿಗೆ ಅಪಾಯಕಾರಿ. ಕೆಲವು ಯುವಕರು ಥ್ರಿಲ್‌ಗಾಗಿ, ಉನ್ಮಾದಕ್ಕಾಗಿ, ರೀಲ್ಸ್‌ಗಾಗಿ ವ್ಹೀಲಿ, ರೇಸ್ ಮುಂತಾಗಿ ದುಸ್ಸಾಹಸ ಮಾಡಲು ಹೋಗಿ ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ; ಇತರರ ಜೀವವನ್ನೂ ಅಪಾಯಕ್ಕೆ ಒಡ್ಡುತ್ತಿದ್ದಾರೆ
ಬೆಂಗಳೂರಿನಲ್ಲಿ ಕಾರ್ಯಾಚರಣೆ
ವ್ಹೀಲಿ ನಡೆಸುವವರ ವಿರುದ್ಧ ಬೆಂಗಳೂರಿನಲ್ಲಿ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ದ್ವಿಚಕ್ರ ವಾಹನಗಳನ್ನು ಮಾರ್ಪಾಡು ಮಾಡಿಕೊಂಡವರು ವ್ಹೀಲಿ ನಡೆಸುತ್ತಿರುವುದು ಕಂಡುಬಂದಿದೆ. ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 281 ಹಾಗೂ ಮೋಟಾರು ವಾಹನ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ವ್ಹೀಲಿ ನಡೆಸುವವರನ್ನು ವಶಕ್ಕೆ ಪಡೆದು ಆಯಾ ವಿಭಾಗದ ಸಂಚಾರ ಡಿಸಿಪಿಗಳ ಎದುರು ಹಾಜರುಪಡಿಸಿ ₹1 ಲಕ್ಷ ಮೌಲ್ಯದ ಬಾಂಡ್ ಬರೆಸಿಕೊಳ್ಳಲಾಗುತ್ತಿದೆ. ಎರಡನೇ ಬಾರಿ ವ್ಹೀಲಿ ನಡೆಸಿದ್ದು ಕಂಡುಬಂದರೆ ಆ ಬಾಂಡ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಜತೆಗೆ ವಾಹನ ಚಾಲನಾ ಪರವಾನಗಿ ಅಮಾನತು ಹಾಗೂ ವಾಹನಗಳ ನೋಂದಣಿ ರದ್ದು ಮಾಡುವ ಕ್ರಮವನ್ನೂ ತೆಗೆದುಕೊಳ್ಳಲಾಗುತ್ತಿದೆ.
– ಎಂ.ಎನ್.ಅನುಚೇತ್, ಜಂಟಿ ಪೊಲೀಸ್ ಕಮಿಷನರ್, ಸಂಚಾರ ವಿಭಾಗ, ಬೆಂಗಳೂರು