ಏಡ್ಸ್ ನಿಯಂತ್ರಣಕ್ಕಾಗಿ ಭಾರತವೂ ಸೇರಿದಂತೆ 50ಕ್ಕೂ ಹೆಚ್ಚು ಬಡ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಅಮೆರಿಕವು ನೀಡುತ್ತಿದ್ದ ನೆರವು ಸ್ಥಗಿತಗೊಂಡಿದೆ. ಇದರಿಂದ ಭಾರತದಲ್ಲಿ ಎಚ್‌ಐವಿ ಸೋಂಕು ಹರಡುವುದನ್ನು ತಡೆಯಲು ಮತ್ತು ಏಡ್ಸ್ ಪೀಡಿತರಿಗೆ ಚಿಕಿತ್ಸೆ ಒದಗಿಸಲು ಅಡ್ಡಿ ಉಂಟಾಗಿದೆ. ಅನೇಕ ಚಿಕಿತ್ಸಾ ಕೇಂದ್ರಗಳು ಬಾಗಿಲು ಮುಚ್ಚಿವೆ. ಸೋಂಕಿತರೊಂದಿಗೆ ಮತ್ತು ಸೋಂಕಿನ ಅಪಾಯ ಇರುವ ಜನವರ್ಗಗಳೊಂದಿಗೆ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದಾರೆ. ಕಾಳಜಿ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ಇದರಿಂದ ಸೋಂಕಿತರು, ವಿಶೇಷವಾಗಿ ಮಕ್ಕಳು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಅಮೆರಿಕದ ಕ್ರಮದಿಂದ ದೇಶದಲ್ಲಿ ಏಡ್ಸ್ ನಿಯಂತ್ರಣದ ಮೇಲೆ ಹಲವು ಪರಿಣಾಮಗಳು ಉಂಟಾಗಿವೆ