ದೇಶದಲ್ಲಿ ಕುಟುಂಬಗಳ ಮಟ್ಟದಲ್ಲಿ ಸಾಲದ ಮೊತ್ತ ಹೆಚ್ಚಳ ಕಾಣುತ್ತಿರುವುದನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಈಚೆಗೆ ಬಿಡುಗಡೆ ಮಾಡಿರುವ ಹಣಕಾಸು ಸ್ಥಿರತೆ ವರದಿಯು ತಿಳಿಸಿದೆ. ‘ಸಾಲ’ ಎಂದಾಕ್ಷಣ ಸಾಮಾನ್ಯವಾಗಿ ಮನಸ್ಸನ್ನು ಆವರಿಸುವುದು ನಕಾರಾತ್ಮಕ ಚಿತ್ರಣವೇ ಆದರೂ ಆರ್ಬಿಐ ವರದಿಯು ಭಿನ್ನ ಚಿತ್ರಣಗಳನ್ನು ನೀಡಿದೆ.

ದೇಶದ ಕುಟುಂಬಗಳ ಸಾಲವು 2021–22ನೆಯ ಹಣಕಾಸು ವರ್ಷದ ಎರಡನೆಯ ತ್ರೈಮಾಸಿಕದಲ್ಲಿ (2021ರ ಜುಲೈ–ಸೆಪ್ಟೆಂಬರ್ ಅವಧಿ) ದೇಶದ ಒಟ್ಟು ಆಂತರಿಕ ಉತ್ಪಾದನೆಗೆ (ಜಿಡಿಪಿ) ಹೋಲಿಸಿದರೆ ಶೇ 38.3ರಷ್ಟು ಮಾತ್ರ ಇತ್ತು. ಅವು ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಜಾರಿಗೆ ಬಂದಿದ್ದ ಲಾಕ್ಡೌನ್ನ ಆರ್ಥಿಕ ಪರಿಣಾಮಗಳು ತೀವ್ರವಾಗಿದ್ದ ದಿನಗಳು.

ಆದರೆ, 2024ರ ಡಿಸೆಂಬರ್ ಅಂತ್ಯಕ್ಕೆ ದೇಶದ ಕೌಟುಂಬಿಕ ಸಾಲದ ಪ್ರಮಾಣವು ಜಿಡಿಪಿಯ ಶೇ 41.9ಕ್ಕೆ ಹೆಚ್ಚಳ ಕಂಡಿದೆ ಎಂಬ ‘ಕಳವಳಕಾರಿ’ ಅಂಶವು ಆರ್ಬಿಐ ವರದಿಯಲ್ಲಿ ಇದೆ. ಸಾಲದ ತಲಾವಾರು ಮೊತ್ತವು ಈ ವರ್ಷದ ಮಾರ್ಚ್ ವೇಳೆಗೆ ₹4.8 ಲಕ್ಷ ಆಗಿದೆ. ಇದು 2023ರ ಮಾರ್ಚ್ನಲ್ಲಿ ₹3.9 ಲಕ್ಷ ಮಾತ್ರ ಆಗಿತ್ತು. ಎರಡು ವರ್ಷಗಳಲ್ಲಿ ಸಾಲದ ತಲಾವಾರು ಮೊತ್ತ ₹90 ಸಾವಿರದಷ್ಟು ಹೆಚ್ಚಾಗಿದೆ. ಸಾಲದ ತಲಾವಾರು ಮೊತ್ತ ಜಾಸ್ತಿ ಆಗಿದೆ ಎಂಬುದಷ್ಟನ್ನೇ ಹೇಳಿದರೆ ಗಾಬರಿ ಆಗಬಹುದು. ಆದರೆ, ಕ್ರೆಡಿಟ್ ಸ್ಕೋರ್ ಚೆನ್ನಾಗಿ ಇರುವವರು (ಹೈ–ರೇಟೆಡ್) ಸಾಲವನ್ನು ಪಡೆದಿರುವುದು ಸಾಲದ ಮೊತ್ತ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂಬುದನ್ನು ಆರ್ಬಿಐ ವರದಿ ಉಲ್ಲೇಖಿಸಿದೆ.

‘ಒಟ್ಟು ಸಾಲಗಾರರಲ್ಲಿ ಉತ್ತಮ ಕ್ರೆಡಿಟ್ ಸ್ಕೋರ್ ಇರುವವರ ಪ್ರಮಾಣ ಹೆಚ್ಚಾಗುತ್ತಿದೆ. ಇದು ಸಾಲದ ಮರುಪಾವತಿ ಹಾಗೂ ಹಣಕಾಸಿನ ಸ್ಥಿರತೆ ದೃಷ್ಟಿಯಿಂದ ಮಹತ್ವದ್ದಾಗುತ್ತದೆ. ಒಟ್ಟಾರೆಯಾಗಿ ಕೌಟುಂಬಿಕ ಆರ್ಥಿಕ ಸ್ಥಿತಿಯು ಗಟ್ಟಿಗೊಂಡಿರುವುದನ್ನು ಇದು ತೋರಿಸುತ್ತಿದೆ’ ಎಂದು ಆರ್ಬಿಐ ವರದಿಯು ವಿವರಿಸಿದೆ. ದೇಶದ ಕೌಟುಂಬಿಕ ಸಾಲದ ಪ್ರಮಾಣವು ಜಿಡಿಪಿಯ ಶೇ 41.9ರಷ್ಟು ಇದೆಯಾದರೂ ಪ್ರವರ್ಧಮಾನಕ್ಕೆ ಬರುತ್ತಿರುವ ಇತರ ದೇಶಗಳ ಅರ್ಥವ್ಯವಸ್ಥೆಗೆ ಹೋಲಿಸಿದರೆ ಇದು ಕಡಿಮೆಯೇ ಆಗಿದೆ ಎಂದು ವರದಿ ಹೇಳಿದೆ.

ಕಳವಳ ಮೂಡಿಸುವಂಥದ್ದು ಏನೂ ಇಲ್ಲವೇ?

ಕೌಟುಂಬಿಕ ಸಾಲಗಳಲ್ಲಿ, ಗೃಹಸಾಲ ಹೊರತುಪಡಿಸಿದ ಸಾಲಗಳ ಪ್ರಮಾಣವು ಈ ವರ್ಷದ ಮಾರ್ಚ್ ವೇಳೆಗೆ ಶೇ 54.9ರಷ್ಟು ಇತ್ತು ಎಂದು ಆರ್ಬಿಐ ವರದಿ ಬೊಟ್ಟು ಮಾಡಿದೆ. ಗೃಹಸಾಲ ಹೊರತುಪಡಿಸಿದ ಸಾಲಗಳು ಅಂದರೆ, ವೈಯಕ್ತಿಕ ಸಾಲ, ವಿವಿಧ ಉತ್ಪನ್ನಗಳನ್ನು ಖರೀದಿಸುವ ಉದ್ದೇಶದಿಂದ ಪಡೆಯುವ ಸಾಲ, ಕ್ರೆಡಿಟ್ ಕಾರ್ಡ್ ಸಾಲ. ಇಂತಹ ಬಗೆಯ ಸಾಲಗಳು ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸಲು ನೆರವಾಗುತ್ತವೆಯಾದರೂ ಇವು ಸಾಲ ಪಡೆದ ವ್ಯಕ್ತಿಯ ಪಾಲಿಗೆ ಆಸ್ತಿ ಸೃಷ್ಟಿಸಲು ಸಾಮಾನ್ಯವಾಗಿ ನೆರವಾಗುವುದಿಲ್ಲ. ಈ ವರ್ಗದ ಸಾಲದ ಪ್ರಮಾಣವು ಹೆಚ್ಚಾಗಿರುವುದು ಕಳವಳಕಾರಿ ಎಂಬ ಅಭಿಪ್ರಾಯ ಒಂದು ವರ್ಗದಲ್ಲಿದೆ.

ಇಲ್ಲಿ ಇನ್ನೂ ಹೆಚ್ಚು ಗಮನ ಸೆಳೆಯುವ ಅಂಶವೆಂದರೆ, ಈ ಬಗೆಯ ಸಾಲಗಳನ್ನು ತೀರಿಸಲು ಜನರು ತಮ್ಮ ಬಳಕೆಗೆ ಸಿಗುವ ಆದಾಯದ ಶೇ 25.7ರಷ್ಟು ಮೊತ್ತವನ್ನು ವಿನಿಯೋಗ ಮಾಡುತ್ತಿರುವುದು. ವ್ಯಕ್ತಿಯೊಬ್ಬನಿಗೆ ತಿಂಗಳಿಗೆ ಕೈಗೆ ಸಿಗುವ ಸಂಬಳ ₹30 ಸಾವಿರ ಎಂದಾದರೆ, ಅದರಲ್ಲಿ ₹7,710 ಇಂತಹ ಸಾಲಗಳನ್ನು ತೀರಿಸಲಿಕ್ಕೇ ಬಳಕೆ ಆಗುತ್ತಿದೆ.

ಈ ಅಂಶವನ್ನು ಮುಂದಿಟ್ಟುಕೊಂಡು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ‘...ಈ ಹಣದುಬ್ಬರದ ನಡುವೆ ಕುಟುಂಬಗಳಿಗೆ ಜೀವನ ಸಾಗಿಸುವುದು ಕಷ್ಟವಾಗುತ್ತಿದೆ, ಅವು ಸಾಲ ಪಡೆಯಲೇಬೇಕಾದ ಒತ್ತಡ ಸೃಷ್ಟಿಯಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

‘ಈ ಬಗೆಯ ಸಾಲಗಳ (ಗೃಹಸಾಲ, ಕೃಷಿ ಮತ್ತು ಉದ್ಯಮ ಸಂಬಂಧಿ ಸಾಲ ಹೊರತುಪಡಿಸಿದ್ದು) ಪ್ರಮಾಣವು ಕೆಲವು ವರ್ಷಗಳಿಂದ ಸ್ಥಿರ ಏರಿಕೆ ಕಾಣುತ್ತಿದೆ. ಈ ಸಾಲಗಳ ಬೆಳವಣಿಗೆ ಪ್ರಮಾಣವು ಗೃಹಸಾಲ, ಕೃಷಿ ಮತ್ತು ಉದ್ಯಮ ಸಂಬಂಧಿ ಸಾಲದ ಬೆಳವಣಿಗೆ ಪ್ರಮಾಣಕ್ಕಿಂತ ಹೆಚ್ಚಾಗಿದೆ’ ಎಂದು ಆರ್ಬಿಐ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಗೃಹಸಾಲ, ಕೃಷಿಸಾಲ ಮತ್ತು ಉದ್ಯಮ ಸಂಬಂಧಿ ಸಾಲಗಳು ಆಸ್ತಿ ಸೃಷ್ಟಿಗೆ ವಿನಿಯೋಗ ಆಗುತ್ತವೆ.

ಕೌಟುಂಬಿಕ ಸಾಲಗಳಲ್ಲಿ ಶೇ 29ರಷ್ಟು ಗೃಹಸಾಲವಾಗಿದೆ. ಗೃಹಸಾಲ ಪ್ರಮಾಣವು ಸ್ಥಿರವಾಗಿ ಹೆಚ್ಚಳ ಕಾಣುತ್ತಿದೆ. ಆದರೆ, ಈಗಾಗಲೇ ಗೃಹಸಾಲ ಪಡೆದಿರುವ ವ್ಯಕ್ತಿಗಳು ಹೆಚ್ಚುವರಿ ಸಾಲ ಪಡೆಯುತ್ತಿರುವುದು ಗೃಹಸಾಲದಲ್ಲಿನ ಏರಿಕೆಗೆ ಪ್ರಮುಖ ಕಾರಣ ಆಗುತ್ತಿದೆ ಎಂಬುದನ್ನು ಬಿಡಿಬಿಡಿಯಾದ ಅಂಕಿ–ಅಂಶಗಳು ಹೇಳುತ್ತಿವೆ. ಹೀಗೆ ಹೆಚ್ಚುವರಿ ಸಾಲ ಪಡೆದವರ ಪಾಲು ಈ ವರ್ಷದ ಮಾರ್ಚ್ ವೇಳೆಗೆ ಒಟ್ಟು ಗೃಹಸಾಲದ ಮೂರನೆಯ ಒಂದಕ್ಕಿಂತ ಹೆಚ್ಚಾಗಿದೆ. ಸಾಲ ಪಡೆದವರು ಅದನ್ನು ಹಿಂದಿರುಗಿಸದೆ ಇರುವ ಪ್ರಮಾಣವು ಹೆಚ್ಚಾಗಿರುವುದು ಕಡಿಮೆ ಕ್ರೆಡಿಟ್ ಸ್ಕೋರ್ ಇರುವವರಲ್ಲಿ ಹಾಗೂ ಅತಿಯಾಗಿ ಸಾಲ ಮಾಡಿಕೊಂಡಿರುವವರಲ್ಲಿ. ಹೀಗಿದ್ದರೂ, ಇದು ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಕಂಡಿದ್ದ ಪ್ರಮಾಣಕ್ಕೆ ಹೋಲಿಸಿದರೆ ಕಡಿಮೆ ಇದೆ ಎಂದು ಆರ್ಬಿಐ ಹೇಳಿದೆ.

ಹಣಕಾಸು ಆಸ್ತಿಯಲ್ಲಿ ಹೆಚ್ಚಳ

2023–24ನೇ ಆರ್ಥಿಕ ವರ್ಷದಲ್ಲಿ ದೇಶದಲ್ಲಿ ಕೌಟುಂಬಿಕ ಮಟ್ಟದಲ್ಲಿ ಹಣಕಾಸು ಆಸ್ತಿಗಳ ಮೊತ್ತವು ಹೆಚ್ಚಳ ಕಂಡಿದೆ. 2019–20ನೇ ಆರ್ಥಿಕ ವರ್ಷದ ನಂತರದಲ್ಲಿ ಆಸ್ತಿ ಮೌಲ್ಯದಲ್ಲಿನ ಏರಿಕೆಯು ಮೊತ್ತ ಹೆಚ್ಚಳಕ್ಕೆ ಒಂದು ಮುಖ್ಯ ಕಾರಣವಾಗಿ ಒದಗಿಬಂದಿದೆ. ಜನರು ಹಣಕಾಸು ಆಸ್ತಿಗಳ ರೂಪದಲ್ಲಿ ಉಳಿತಾಯ ಮಾಡುತ್ತಿರುವುದು ಕೂಡ ಇವುಗಳ ಮೌಲ್ಯ ಹೆಚ್ಚಾಗಲು ದೊಡ್ಡ ಕಾರಣವಾಗಿದೆ. 2024ರ ಮಾರ್ಚ್ ವೇಳೆಗೆ ಠೇವಣಿಗಳು, ವಿಮೆಗಳು ಮತ್ತು ಪಿಂಚಣಿ ನಿಧಿಗಳು ಕೌಟುಂಬಿಕ ಹಣಕಾಸು ಆಸ್ತಿಗಳಲ್ಲಿ ಶೇ 70ರಷ್ಟು ಪಾಲನ್ನು ಹೊಂದಿದ್ದವು. ಷೇರುಗಳು ಹಾಗೂ ಹೂಡಿಕೆ ನಿಧಿಗಳ ಪಾಲು ಕೂಡ ಹೆಚ್ಚಳ ಕಂಡಿದೆ ಎಂಬುದನ್ನು ಆರ್ಬಿಐ ವರದಿಯು ವಿವರಿಸಿದೆ.

‘ಸಾಲದ ಗುಣಮಟ್ಟ ಮುಖ್ಯ’

ಭಾರತದ ಕೌಟುಂಬಿಕ ಸಾಲದ ಪ್ರಮಾಣವು ಒಟ್ಟು ಜಿಡಿಪಿಯ ಶೇ 41.9ರ ಮಟ್ಟಕ್ಕೆ ಏರಿಕೆ ಆಗಿರುವುದು ಕಳವಳ ಮೂಡಿಸುವಂತಹ ಸಂಗತಿ ಅಲ್ಲ ಎನ್ನುತ್ತಾರೆ ಚಾರ್ಟರ್ಡ್ ಅಕೌಂಟೆಂಟ್ ಪ್ರಕಾಶ ಹೆಗಡೆ.

ಜಿಡಿಪಿಗೆ ಹೋಲಿಸಿದರೆ ಸಾಲದ ಪ್ರಮಾಣವು ಎಷ್ಟು ಎಂಬುದು ಮುಖ್ಯವಾಗುವುದಿಲ್ಲ. ಅದರ ಬದಲಿಗೆ, ಸಾಲವನ್ನು ಯಾರಿಗೆ ನೀಡಲಾಗಿದೆ ಎಂಬುದು ಹೆಚ್ಚು ಮುಖ್ಯವಾಗುತ್ತದೆ. 2019ರ ನಂತರದಲ್ಲಿ, ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ ನೀಡಿದ ಸಾಲದ ಪ್ರಮಾಣವು ಶೇ 44ರಷ್ಟು ಹೆಚ್ಚಳ ಕಂಡಿದೆ. ಇದೇ ಅವಧಿಯಲ್ಲಿ, ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ ನೀಡಿದ ಸಾಲದ ಪ್ರಮಾಣದಲ್ಲಿ ಶೇ 4.8ರಷ್ಟು ಇಳಿಕೆ ಕಂಡುಬಂದಿದೆ. ಇದು ಬಹಳ ಉತ್ತಮವಾದ ಬೆಳವಣಿಗೆ ಎಂದು ಅವರು ವಿವರಿಸಿದರು.

ಕೌಟುಂಬಿಕ ಸಾಲದ ಪ್ರಮಾಣವು ಜಿಡಿಪಿಯ ಶೇ 5ರಷ್ಟು ಮಾತ್ರವೇ ಇದ್ದು, ಆ ಎಲ್ಲ ಸಾಲವೂ ಕಳಪೆ ಕ್ರೆಡಿಟ್ ಸ್ಕೋರ್ ಇರುವವರಿಗೆ ನೀಡಿದ್ದು ಎಂದಾಗಿದ್ದರೆ, ಅಷ್ಟೂ ಸಾಲವು ಅಪಾಯಕ್ಕೆ ಸಿಲುಕುತ್ತಿತ್ತು. ಆದರೆ, ನಮ್ಮಲ್ಲಿ ಆ ರೀತಿ ಆಗಿಲ್ಲ. ಉತ್ತಮ ಮರುಪಾವತಿ ಸಾಮರ್ಥ್ಯ ಹೊಂದಿರುವವರಿಗೆ ನೀಡುವ ಸಾಲದ ಪ್ರಮಾಣ ಹೆಚ್ಚಾಗುತ್ತಿದೆ. ಹೀಗಾಗಿ ಸಾಲದ ಬಗ್ಗೆ ನಿಲುವು ತಾಳುವಾಗ, ಸಾಲದ ಮೊತ್ತವನ್ನು ದೇಶದ ಜಿಡಿಪಿ ಜೊತೆ ಹೋಲಿಕೆ ಮಾಡುವುದಷ್ಟೇ ಅಲ್ಲದೆ, ಸಾಲದ ಗುಣಮಟ್ಟವನ್ನೂ ಪರಿಶೀಲಿಸಬೇಕು ಎಂದು ಅವರು ಹೇಳಿದರು.

ಕೈಗೆ ಸಿಗುವ ವರಮಾನದಲ್ಲಿ ಶೇ 25.7ರಷ್ಟು ಪಾಲು ಕೆಲವು ಬಗೆಯ ಸಾಲಗಳ ಮರುಪಾವತಿಗೆ ವೆಚ್ಚವಾಗುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಗಡೆ, ‘ಉಳಿತಾಯ ಪ್ರಮಾಣವು ಒಂದಿಷ್ಟು ಕಡಿಮೆ ಆಗುತ್ತಿರಬಹುದು. ಆದರೆ ಈಗಿನ ಸಂದರ್ಭದಲ್ಲಿ ವೇತನ, ವರಮಾನ ಏರಿಕೆ ಪ್ರಮಾಣಕ್ಕಿಂತಲೂ ಮನೆ, ಕಾರುಗಳ ಬೆಲೆ ಏರಿಕೆ ಪ್ರಮಾಣ ಹೆಚ್ಚಿದೆ. ಅವುಗಳನ್ನು ಖರೀದಿಸಿದವರ ವರಮಾನದಲ್ಲಿ ಹೆಚ್ಚಿನ ಪಾಲು ಸಾಲ ಮರುಪಾವತಿಗೆ ವಿನಿಯೋಗ ಆಗುತ್ತಿರಬಹುದು’ ಎಂದರು.

‘ಬ್ಯಾಂಕ್ನತ್ತ ಬರುತ್ತಿದ್ದಾರೆ’

‘ಮೊದಲೂ ಸಾಲವು ಇದೇ ಪ್ರಮಾಣದಲ್ಲಿ ಇತ್ತು. ಆದರೆ ಅದು ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಜನರನ್ನು ತಲುಪುತ್ತಿರಲಿಲ್ಲ. ಲೇವಾದೇವಿ ವ್ಯವಹಾರ ನಡೆಸುವವರ ಪ್ರಭಾವ ಇಲ್ಲಿ ಹೆಚ್ಚಿತ್ತು. ಈಗ ಜನರು ಸಾಲಕ್ಕೆ ಬ್ಯಾಂಕಿಂಗ್ ವಲಯದತ್ತ ಹೆಚ್ಚಾಗಿ ಬರುತ್ತಿದ್ದಾರೆ, ಲೇವಾದೇವಿಯವರ ಪ್ರಭಾವ ತಗ್ಗುತ್ತಿದೆ. ಹೀಗಾಗಿ ಸಾಲದ ಪ್ರಮಾಣಕ್ಕೆ ಸಂಬಂಧಿಸಿದ ಅಂಕಿ–ಅಂಶಗಳು ಅಧಿಕೃತವಾಗಿ ಸಿಗುತ್ತಿವೆ’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್ಕೆಸಿಸಿಐ) ನಿರ್ದೇಶಕ, ಚಾರ್ಟರ್ಡ್ ಅಕೌಂಟೆಂಟ್ ರವೀಂದ್ರ ಕೋರೆ ಅಭಿಪ್ರಾಯಪಟ್ಟರು.

‘ಗೃಹಬಳಕೆ ಉಪಕರಣಗಳ ಖರೀದಿಗೆ ಬಳಸುವ ಸಾಲದ ಪ್ರಮಾಣದಲ್ಲಿ ಹೆಚ್ಚಳ ಆಗಿದೆ ಎಂಬುದನ್ನು ವರದಿ ಹೇಳುತ್ತಿದೆ. ಇಂತಹ ಉಪಕರಣಗಳು ಇಂದಿನ ಜೀವನಶೈಲಿಯ ಭಾಗವಾಗಿವೆ. ಅವುಗಳನ್ನು ಖರೀದಿಸುವುದು ಅರ್ಥವ್ಯವಸ್ಥೆಯ ಬೆಳವಣಿಗೆಗೆ ನೆರವಾಗುತ್ತಿದೆ. ಜನರ ಜೀವನಶೈಲಿ ಹಾಗೂ ಜೀವನಮಟ್ಟದಲ್ಲಿ ಬದಲಾವಣೆ ಆಗಿದೆ ಎಂಬುದನ್ನು ನಾವು ಗುರುತಿಸಬೇಕು. ಸಾಲದ ಪ್ರಮಾಣವು ಅಪಾಯಕಾರಿ ಮಟ್ಟದಲ್ಲಿ ಇಲ್ಲ’ ಎಂದು ಕೋರೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.