ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ಅನ್‌ಸ್ಟಾಪೆಬಲ್‌ ಎಂಬಾಪೆ!

Last Updated 19 ಡಿಸೆಂಬರ್ 2022, 22:30 IST
ಅಕ್ಷರ ಗಾತ್ರ

ಜಗತ್ತನ್ನು ಮಂತ್ರಮುಗ್ಧಗೊಳಿಸಿದ ಫುಟ್‌ಬಾಲ್‌ ವಿಶ್ವಕಪ್‌ ಪಂದ್ಯಗಳು ಮುಗಿದಿವೆ. ಫುಟ್‌ಬಾಲ್‌ ಪ್ರೇಮಿಗಳು ಆಟದ ಪೌರುಷ, ಲಯ, ಮೋಡಿಗಳೆಲ್ಲವನ್ನೂ ಮನದೊಳಗೆ ಇಳಿಸಿಕೊಂಡಿದ್ದಾರೆ. ಅರ್ಜೆಂಟೀನಾ ಮತ್ತು ಫ್ರಾನ್ಸ್‌ ನಡುವಣ ಫೈನಲ್ ಪಂದ್ಯದ ರೋಚಕತೆಗೆ ಸಾಟಿಯೇ ಇಲ್ಲವೇನೋ. ಮೆಸ್ಸಿ ಎಂಬ ‍ಫುಟ್‌ಬಾಲ್‌ ಮಾಂತ್ರಿಕ ಅತಿಶ್ರೇಷ್ಠ ಆಟಗಾರರ ಸಾಲಲ್ಲಿ ಅಗ್ರಗಣ್ಯನೇ ಎಂಬ ಚರ್ಚೆಗೆ ಪಂದ್ಯವು ಅಂತ್ಯ ಹಾಡಿದೆ. ಇನ್ನು ಆ ಪ್ರಶ್ನೆಯನ್ನು ಯಾರೂ ಕೇಳಲಿಕ್ಕಿಲ್ಲ. ಹಾಗೆಯೇ ಫ್ರಾನ್ಸ್‌ನ ಎಂಬಾಪೆ ಎಂಬ ಆಟಗಾರ ಮಾಡಿದ ಮೋಡಿಯು ಇನ್ನೂ 23ರ ಹರೆಯದ ಅವರು ಫುಟ್‌ಬಾಲ್‌ ಅಂಗಣದಲ್ಲಿ ಏನೇನೆಲ್ಲ ಮಾಡಬಹುದು ಎಂಬ ನಿರೀಕ್ಷೆಯು ಮಡುಗಟ್ಟುವಂತೆ ಮಾಡಿದೆ. ಈ ಇಬ್ಬರ ಆಟ ಮತ್ತು ಬದುಕಿನತ್ತ ಒಂದು ಇಣುಕುನೋಟ ಇಲ್ಲಿದೆ:

‘ಉಸೇನ್‌ ಬೋಲ್ಟ್‌ ಅವರಿಗಿಂತಲೂ ಕಿಲಿಯನ್‌ ಎಂಬಾಪೆ ವೇಗವಾಗಿ ಓಡಬಲ್ಲರೇ?’

ಫುಟ್‌ಬಾಲ್‌ ಜ್ವರ ಟೈಫಾಯ್ಡ್‌ನಂತೆ ಏರಿದ್ದ ಈ ಅವಧಿಯಲ್ಲಿ ಅತೀ ಹೆಚ್ಚು ಗೂಗಲ್‌ ಆದ ಪ್ರಶ್ನೆಗಳಲ್ಲಿ ಇದೂ ಒಂದು. ಬೋಲ್ಟ್‌ ಅವರ ವಿಶ್ವ ದಾಖಲೆಯ ಓಟದ ವೇಗದಿಂದ ಎಂಬಾಪೆ ಇನ್ನೂ ತುಸುದೂರ ಇದ್ದರಾದರೂ ಫುಟ್‌ಬಾಲ್‌ ಅಂಗಳದಲ್ಲಿ ಮಾತ್ರ ಅವರು ‘ಅನ್‌ಸ್ಟಾಪೆಬಲ್‌’. ಕಾಲ್ಚೆಂಡಿನ ಜಗತ್ತನ್ನು ಆಳುವುದಕ್ಕಾಗಿಯೇ ಉದಯಿಸಿರುವ ಫ್ರಾನ್ಸ್‌ನ ಈ ನವತಾರೆ ಚೆಂಡನ್ನು ಡ್ರಿಬ್ಲಿಂಗ್‌ ಮಾಡುತ್ತಾ ಗಂಟೆಗೆ 38 ಕಿ.ಮೀ. ವೇಗದಲ್ಲಿ ಓಡುವುದನ್ನು ನೋಡಿ, ಅಭಿಮಾನಿಗಳು ಅವರಿಗೆ ‘ಚೀತಾ’ ಎಂದೂ ಕರೆಯುವರು. ಎಂಬಾಪೆ ಚೆಂಡಿನೊಡನೆ ಮುನ್ನುಗ್ಗಿ ಬರುತ್ತಿದ್ದಾರೆ ಎಂದರೆ, ಎದುರಾಳಿ ತಂಡದ ಗೋಲ್‌ ಕೀಪರ್‌ನ ಎದೆಯಲ್ಲಿ ಅಕ್ಷರಶಃ ನಡುಕ ಹುಟ್ಟಬೇಕು. ಚೆಂಡು ತಡೆದರೆ ಎಲ್ಲಿ ಕೈ ಮುರಿಯುವುದೋ ಎನ್ನುವಂತಹ ಭಯ ಅದು. ಹೌದು, ಎಂಬಾಪೆ ಅವರ ಹಿಟ್‌ಗಳ ಮಹಿಮೆಯೇ ಹಾಗಿರುತ್ತದೆ.

ಈಗಷ್ಟೇ 23ರ ಹರೆಯದ ಎಂಬಾಪೆ, ಅದಾಗಲೇ ಜಗತ್ತಿನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿ ಮಿನುಗುತ್ತಿದ್ದಾರೆ.
ಕಳೆದ ಬಾರಿ ಫ್ರಾನ್ಸ್‌ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅವರು, ಸತತ ಎರಡನೇ ಬಾರಿಗೆ ವಿಶ್ವಕಪ್‌ ಕಿರೀಟ ತೊಡುವ ಅವಕಾಶದಿಂದ ಕೂದಲೆಳೆಯ ಅಂತರದಿಂದ ವಂಚಿತರಾದರು. ಫೈನಲ್‌ನಲ್ಲಿ ಎಂಬಾಪೆ ಅವರೇನೋ ಪಂದ್ಯ ಸೋತರು. ಆದರೆ, ಹ್ಯಾಟ್ರಿಕ್‌ ಗೋಲುಗಳ ಮೂಲಕ ಫುಟ್‌ಬಾಲ್‌ ಪ್ರಿಯರ ಹೃದಯವನ್ನು ಗೆದ್ದರು. ಪ್ರಶಸ್ತಿ ಗೆದ್ದ ಅರ್ಜೆಂಟೀನಾದ ಆಟಗಾರರು, ಫ್ರಾನ್ಸ್‌ ತಂಡದ ಡ್ರೆಸ್ಸಿಂಗ್‌ ರೂಮ್‌ ಬಳಿ ‘ಎ ಮಿನ್ಯೂಟ್‌ ಸೈಲೆನ್ಸ್‌ ಫಾರ್‌ ಎಂಬಾಪೆ’ ಎಂದು ಹಾಡಿದ್ದನ್ನು ಅವರು ಅಷ್ಟು ಸುಲಭವಾಗಿ ಮರೆಯಲಾರರು.

ಸ್ಫೋಟಕ ವೇಗವರ್ಧನೆ, ಚುರುಕಿನ ಪಾದಚಲನೆ, ಎದುರಾಳಿಯ ರಕ್ಷಣೆಯನ್ನು ಶಿಥಿಲಗೊಳಿಸುವ ತಂತ್ರಗಾರಿಕೆ, ಚೆಂಡಿನ ಚಲನೆಯ ದಿಕ್ಕಿನಲ್ಲಿ ಹಠಾತ್‌ ಬದಲಾವಣೆಯಂತಹ ಸಾಮರ್ಥ್ಯಗಳಿಂದ ಅಂಗಳದಲ್ಲೊಂದು ದೃಶ್ಯಕಾವ್ಯವನ್ನೇ ಸೃಷ್ಟಿಸುವ ಮಾಂತ್ರಿಕ ಆಟಗಾರ ಅವರು. ರೆಪ್ಪೆ ಮಿಟುಕಿಸುವಷ್ಟರಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಗೆ ಕಳುಹಿಸುವ ಮೂಲಕ ಮಾಡುವ ‘ಮ್ಯಾಜಿಕ್‌’ ಏನು ಸುಮ್ಮನೆಯೇ ಮತ್ತೆ? ಎಂಬಾಪೆ ಅವರ ಸಪೂರವಾದ ದೇಹ ಮತ್ತು ಅವರ ದೈಹಿಕ ಸಾಮರ್ಥ್ಯ ಫುಟ್‌ಬಾಲ್‌ ಆಟಕ್ಕೇ ಹೇಳಿ ಮಾಡಿಸಿದಂತಿವೆ. ಸಂದೇಹವೇ ಇಲ್ಲ, ಫುಟ್‌ಬಾಲ್‌ಗಾಗಿಯೇ ಹುಟ್ಟಿದ ಆಟಗಾರ ಅವರಾಗಿದ್ದಾರೆ.

ಪ್ಯಾರಿಸ್‌ನ ಹೊರವಲಯದ ಬಾಂಡಿ ಎಂಬಲ್ಲಿ ಹುಟ್ಟಿ ಬೆಳೆದ ಈ ಹುಡುಗ (ತಂದೆ–ತಾಯಿ ಇಬ್ಬರೂ ಆಫ್ರಿಕಾ ಮೂಲದವರು), ಕ್ಯಾಥೊಲಿಕ್‌ ಸ್ಕೂಲ್‌ನಲ್ಲಿ ಓದುವಾಗಲೇ ಫುಟ್‌ಬಾಲ್‌ನ ದೀಕ್ಷೆ ಪಡೆದರು. ತಂದೆ ವಿಲ್‌ಫ್ರೆಡ್‌ ಅವರೇ ಮೊದಲ ಗುರು. ಜಿನೆದಿನ್‌ ಜಿದಾನೆ, ಕ್ರಿಸ್ಟಿಯಾನೊ ರೊನಾಲ್ಡೊ ಅವರಂತಹ ಘಟಾನುಘಟಿ ಆಟಗಾರರನ್ನು ಆದರ್ಶವಾಗಿ ಕಂಡವರು ಎಂಬಾಪೆ. ಎ.ಸಿ. ಮಿಲನ್‌ ತಂಡದ ಅಭಿಮಾನಿಯಾಗಿದ್ದ ಅವರು, ರೊಬಿನೊ ಅವರ ಜರ್ಸಿ ಸಂಖ್ಯೆಯಾದ ‘70’ ಎಂದು ದಪ್ಪಕ್ಷರದಲ್ಲಿ ಬರೆದಿದ್ದ ಟಿ–ಶರ್ಟ್‌ಅನ್ನೂ ಕಾಣಿಕೆಯಾಗಿ ಪಡೆದಿದ್ದರು. ‘ಫುಟ್‌ಬಾಲ್‌ನ ಹುಚ್ಚು ನನ್ನನ್ನು ಹೇಗೆ ಆವರಿಸಿತ್ತೆಂದರೆ ಜಗತ್ತಿನ ಇತರ ಎಲ್ಲ ವಿಷಯಗಳಿಂದಲೂ ನಾನು ಸಂಪರ್ಕ ಕಡಿದುಕೊಂಡಿದ್ದೆ’ ಎಂದು
ಸಂದರ್ಶನವೊಂದರಲ್ಲಿ ಅವರು ಹೇಳಿದ್ದರು. ಈ ಹುಡುಗನ ಆಟ ಕಂಡವರು ಅವರನ್ನು ಪಿಲೆ ಅವರೊಂದಿಗೆ ಹೋಲಿಕೆ ಮಾಡಿದ್ದುಂಟು. ಅಂದಹಾಗೆ, ಗಳಿಕೆಯಲ್ಲೂ ಘಟಾನುಘಟಿ ಆಟಗಾರರನ್ನು ಹಿಂದಿಕ್ಕಿದ್ದಾರೆ ಈ ಆಟಗಾರ.

ಕ್ಲಬ್‌ ಲೀಗ್‌ಗಳಲ್ಲಿ ಎಂಬಾಪೆ ಪ್ಯಾರಿಸ್‌ – ಸೇಂಟ್‌ ಜರ್ಮನ್‌ ಕ್ಲಬ್‌ ಪರವಾಗಿ ಆಡುವರು. ಆ ತಂಡದಲ್ಲಿಯೇ ಎಂಬಾಪೆ ಅವರನ್ನು ಉಳಿಸಿಕೊಳ್ಳಲು ಫ್ರಾನ್ಸ್‌ ಅಧ್ಯಕ್ಷರೇ ಮಧ್ಯ ಪ್ರವೇಶಿಸಿದ್ದರು ಎಂದರೆ ಈ ಆಟಗಾರನ ಮಹತ್ವ ಎಂತಹದ್ದು ಎನ್ನುವುದು ನಮಗೆ ಅರ್ಥವಾದೀತು. ಫೈನಲ್‌ನಲ್ಲಿ ಎದುರಾಳಿಯಾಗಿದ್ದ ಲಯೊನಲ್‌ ಮೆಸ್ಸಿ ಸಹ ಪ್ಯಾರಿಸ್‌ – ಸೇಂಟ್‌ ಜರ್ಮನ್‌ ಕ್ಲಬ್‌ಗಾಗಿಯೇ ಆಡುವರು. ‘ವರ್ಷದ ಆಟಗಾರ’ನ ಗೌರವವನ್ನು ಸತತವಾಗಿ ಸಂಪಾದಿಸುತ್ತಲೇ ಬಂದಿರುವ ಎಂಬಾಪೆ, ಭವಿಷ್ಯದಲ್ಲಿ ಹಲವು ದಾಖಲೆಗಳನ್ನು ಪುಡಿಗಟ್ಟುವ ಸಾಮರ್ಥ್ಯವನ್ನೂ ಹೊಂದಿದವರು. ಕತಾರ್‌ ವಿಶ್ವಕಪ್‌ ಟೂರ್ನಿಯಲ್ಲಿ ಒಟ್ಟಾರೆ ಎಂಟು ಗೋಲುಗಳೊಂದಿಗೆ ‘ಚಿನ್ನದ ಬೂಟ’ನ್ನೂ ಪಡೆದ ಎಂಬಾಪೆ, ಫುಟ್‌ಬಾಲ್‌ ಅಂಗಳದ ಸಾಮ್ರಾಟರಾಗಿ ಆಳಲು ಬರುತ್ತಿದ್ದಾರೆ ಎಂದು ಫ್ರಾನ್ಸ್‌ ಮಾತ್ರವಲ್ಲ, ಜಗತ್ತೇ ಈಗ ಬಹುಪರಾಕ್‌ ಹೇಳುತ್ತಿದೆ. ಟ್ರೋಫಿ ಗೆದ್ದ ಮೆಸ್ಸಿ ನೇಪಥ್ಯಕ್ಕೆ ಸರಿದು, ರಂಗದ ಮುಖ್ಯಭೂಮಿಕೆಯಲ್ಲಿ ಎಂಬಾಪೆ ಬಂದಿದ್ದಾರೆ ಎಂದೂ ಉಲಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT