ಇದೇ ಅಕ್ಟೋಬರ್‌ನಲ್ಲಿ ಭಾರತ ಮತ್ತು ಕೆನಡಾ ಮಧ್ಯೆ ವಾಣಿಜ್ಯ–ವ್ಯಾಪಾರ ಸಹಕಾರ ಕುರಿತ ಮಾತುಕತೆ ನಡೆಯಬೇಕಿತ್ತು. ಆದರೆ, ಎರಡೂ ದೇಶಗಳು ಮಾತುಕತೆಯಿಂದ ಹಿಂದೆ ಸರಿದಿವೆ. ಕೆನಡಾದಲ್ಲಿ ಈಚೆಗೆ ನಡೆದ ಖಲಿಸ್ಥಾನ ಪರವಾದ ಮೆರವಣಿಗೆ–ಪ್ರತಿಭಟನೆಯೇ ಕಾರಣ ಎಂದು ವಿಶ್ಲೇಷಿಸಲಾಗಿದೆ. ಈ ಬಗ್ಗೆ ಎರಡೂ ದೇಶಗಳು ರಾಜತಾಂತ್ರಿಕ ಮಟ್ಟದಲ್ಲಿ ಕಟುವಾದ ಮಾತುಗಳಿಂದ ಪರಸ್ಪರ ಪ್ರತಿಭಟನೆ ದಾಖಲಿಸಿವೆ. ಜಿ20 ಶೃಂಗಸಭೆ ಸಂದರ್ಭದಲ್ಲಿ, ಜಸ್ಟಿನ್ ಟ್ರುಡೋ ಜೊತೆಗೆ ದ್ವಿಪಕ್ಷೀಯ ಮಾತುಕತೆಗೆ ಪ್ರಧಾನಿ ನರೇಂದ್ರ ಮೋದಿ ಒಪ್ಪಲಿಲ್ಲ ಎಂದು ಕೆನಡಾ ಸರ್ಕಾರ ಆರೋಪಿಸಿದಾಗಲೇ ಸಂಬಂಧ ತೀರಾ ಬಿಗಡಾಯಿಸಿದೆ ಎಂಬುದು ಬಹಿರಂಗವಾಯಿತು. ಅದರ ಬೆನ್ನಲ್ಲೇ ದ್ವಿಪಕ್ಷೀಯ ಮಾತುಕತೆಯಿಂದ ಹಿಂದೆ ಸರಿದಿರುವುದಾಗಿ ಭಾರತವೂ ಘೋಷಿಸಿದೆ.
––––
ಅವರು ಪ್ರತ್ಯೇಕತಾವಾದವನ್ನು ಮುಂದು ಮಾಡುತ್ತಿದ್ದಾರೆ. ಜೊತೆಗೆ, ಭಾರತೀಯ ರಾಜತಾಂತ್ರಿಕರ ಮೇಲೆ ದಾಳಿ ನಡೆಸಲು ಪ್ರಚೋದಿಸುತ್ತಿದ್ದಾರೆ. ಭಾರತದ ರಾಯಭಾರ ಕಚೇರಿ ಇರುವ ಪ್ರದೇಶಕ್ಕೆ ಹಾನಿಯುಂಟು ಮಾಡುತ್ತಿದ್ದಾರೆ ಮತ್ತು ಕೆನಡಾದಲ್ಲಿ ನೆಲೆಸಿರುವ ಭಾರತೀಯರ ಶ್ರದ್ಧಾ ಕೇಂದ್ರಗಳನ್ನು ಹಾಳುಗೆಡಹುವ ಬೆದರಿಕೆ ಹಾಕುತ್ತಿದ್ದಾರೆ..
-ಭಾರತ
ಅಭಿವ್ಯಕ್ತಿ ಸ್ವಾತಂತ್ರ್ಯ, ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಶಾಂತಿಯುತ ಪ್ರತಿಭಟನೆಗೆ ಕೆನಡಾ ಯಾವತ್ತಿಗೂ ಅವಕಾಶ ನೀಡುತ್ತದೆ. ಇದರ ಜೊತೆಯಲ್ಲಿಯೇ ಹಿಂಸೆಯನ್ನು, ದ್ವೇಷವನ್ನು ತಡೆಗಟ್ಟಲು ನಾವು ಎಂದಿಗೂ ಮುಂದೆ ಇದ್ದೇವೆ. ಯಾರೊ ಕೆಲವರು ಮಾಡಿದ್ದನ್ನು ಇಡೀ ಕೆನಡಾ ಜನಸಮುದಾಯದ ಮೇಲೆ ಹೇರಲು ಸಾಧ್ಯವಿಲ್ಲ..
-ಕೆನಡಾ
------
ಸಿಖ್ ದಂಗೆ ನಂತರ ಖಲಿಸ್ಥಾನ ಹೋರಾಟಕ್ಕೆ ದೊಡ್ಡ ಮಟ್ಟದ ಗತಿ ಸಿಕ್ಕಿತು. ಇದಾದ ಬಳಿಕ, ಸಾವಿರಾರು ಸಿಖ್ಖರು ಕೆನಡಾ ಸೇರಿಕೊಂಡರು. ಅಲ್ಲಿಂದ ಇಲ್ಲಿಯವರೆಗೂ ಕೆನಡಾ ಹಾಗೂ ಭಾರತದ ಸಂಬಂಧವನ್ನು ಖಲಿಸ್ಥಾನ ಪ್ರತ್ಯೇಕತಾವಾದಿ ಹೋರಾಟವು ನೆರಳಿನಂತೆ ಹಿಂಬಾಲಿಸುತ್ತಲೇ ಇದೆ. ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯು ಕೆನಡಾ ಮತ್ತು ಭಾರತದ ಹಳಸಿದ ಸಂಬಂಧದ ವಾಸನೆ ಜಗತ್ತಿಗೆ ತೋರುವಂತೆ ಮಾಡಿತು. ಶೃಂಗಸಭೆ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ದೇಶಗಳ ಅಧ್ಯಕ್ಷರು ಅಥವಾ ಪ್ರಧಾನಿಗಳೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಆದರೆ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಅವರೊಂದಿಗೆ ಮಾತ್ರ ವಿಸ್ತೃತ ಮಾತುಕತೆ ನಡೆಸದೆ, ಕೆಲವೇ ನಿಮಿಷಗಳಲ್ಲಿ ಸಭೆ ಮುಗಿಸಿದ್ದರು.
ಕೆನಡಾದಲ್ಲಿ 13 ಲಕ್ಷಕ್ಕೂ ಹೆಚ್ಚು ಭಾರತೀಯರಿದ್ದಾರೆ. ಇದು ಅಲ್ಲಿನ ಒಟ್ಟು ಜನಸಂಖ್ಯೆಯ ಶೇ 4ರಷ್ಟು. ಭಾರತದ ನಂತರ ಸಿಖ್ಖರು ಹೆಚ್ಚಿನ ಸಂಖ್ಯೆಯಲ್ಲಿರುವ ದೇಶ ಕೆನಡಾ. ಈ ಎಲ್ಲ ಕಾರಣಕ್ಕಾಗಿಯೇ ಈ ಜನಸಂಖ್ಯೆಯು ಕೆನಡಾದ ರಾಜಕೀಯದಲ್ಲಿ ಬಹುಮುಖ್ಯ ಪಾತ್ರವನ್ನೂ ವಹಿಸಿದೆ. ಇದಕ್ಕೆ ಇಂಬು ನೀಡುವಂತೆ ಪ್ರಧಾನಿ ಜಸ್ಟಿನ್ ಟ್ರುಡೋ ಅವರ ಲಿಬರಲ್ ಪಕ್ಷಕ್ಕೆ ಬೆಂಬಲ ನೀಡಿರುವುದು ಖಲಿಸ್ಥಾನ ಪ್ರತ್ಯೇಕತಾ ಹೋರಾಟದಲ್ಲಿ ಭಾಗಿಯಾಗಿರುವ ಜಗಮೀತ್ ಸಿಂಗ್ ಅವರ ನ್ಯೂ ಡೆಮಾಕ್ರಟಿಕ್ ಪಕ್ಷ.
ಈ ಹಿನ್ನೆಲೆಯಲ್ಲಿಯೇ ಕೆನಡಾ ಮತ್ತು ಭಾರತದ ಬಾಂಧವ್ಯವನ್ನು ವಿಶ್ಲೇಷಿಸಬೇಕಾಗುತ್ತದೆ. ಕೆನಡಾದಲ್ಲಿ ಖಲಿಸ್ಥಾನ ಪರ ಹೋರಾಟವು ಇತ್ತೀಚೆಗೆ ತೀವ್ರಗತಿ ಪಡೆದುಕೊಂಡಿದೆ. ದೇವಸ್ಥಾನದ ಗೋಡೆಗಳ ಮೇಲೆ ಖಲಿಸ್ಥಾನ ಪರ ಬರಹಗಳನ್ನು ಬರೆಯಲಾಗುತ್ತಿದೆ. ಖಲಿಸ್ಥಾನ ಪರ ರ್‍ಯಾಲಿಗಳು, ಪ್ರತಿಭಟನೆಗಳು ಹೆಚ್ಚಾಗುತ್ತಿವೆ. ಈ ಎಲ್ಲ ಚಟುವಟಿಕೆಗಳನ್ನು ನಿಯಂತ್ರಣಕ್ಕೆ ತರುವಂತೆ ಭಾರತವು ಕೆನಡಾವನ್ನು ಒತ್ತಾಯಿಸುತ್ತಲೇ ಬಂದಿದೆ. ಹಲವು ಭಾರಿ ಭಾರತವು ರಾಜತಾಂತ್ರಿಕ ಪ್ರತಿಭಟನೆಯನ್ನೂ ದಾಖಲಿಸಿದೆ. ಆದರೂ, ಕೆನಡಾದಲ್ಲಿ ಖಲಿಸ್ಥಾನದ ಪರವಾದ ಅಲೆಯು ನಿಲ್ಲುತ್ತಿಲ್ಲ. ಇನ್ನೊಂದೆಡೆ, ಯಾವ ಪ್ರತಿಭಟನೆಯಲ್ಲೂ ಹಿಂಸಾಚಾರ ನಡೆದಿಲ್ಲ ಎನ್ನುವುದು ಕೆನಡಾ ವಾದ. ಜಸ್ಟಿನ್ ಟ್ರುಡೋ ಅವರು ಪ್ರಧಾನಿ ಆದ ಬಳಿಕ ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧ ಕೆಡುತ್ತಲೇ ಬಂದಿದೆ.
ಆ ಎರಡು ಘಟನೆ
ಇನ್ನಷ್ಟು ಹಳಸಿದ ಸಂಬಂಧ ಎರಡೂ ದೇಶಗಳ ಸಂಬಂಧವು ತೀರಾ ಹದಗೆಡಲು ಸರಣಿ ಕಾರಣಗಳಿವೆ.
1. ಆಪರೇಷನ್ ಬ್ಲೂ ಸ್ಟಾರ್‌ನ 39ನೇ ವರ್ಷಾಚರಣೆ ಸಂದರ್ಭದಲ್ಲಿ ಖಲಿಸ್ಥಾನ ಪರ ಪ್ರತ್ಯೇಕತಾವಾದಿಗಳು ಗ್ರೇಟರ್ ಟೊರಾಂಟೊ ಪ್ರದೇಶದಲ್ಲಿ ರ್‍ಯಾಲಿಯನ್ನು ಆಯೋಜಿಸುತ್ತಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಸೀರೆಯಿಂದ ರಕ್ತ ಬಸಿಯುತ್ತಿರುವುದು ಮತ್ತು ಟರ್ಬನ್ ಹಾಕಿಕೊಂಡ ವ್ಯಕ್ತಿಯೊಬ್ಬರು ಅವರ ಕಡೆಗೆ ಬಂದೂಕು ಇಟ್ಟಿರುವ ಪ್ರತಿಕೃತಿಯನ್ನು ಅಲ್ಲಿ ಪ್ರದರ್ಶಿಸಲಾಗಿತ್ತು. ಜೊತೆಗೆ ‘ಶ್ರೀ ದಾದರ್ ಸಾಹಿಬ್ ಅವರ ಮೇಲಿನ ದಾಳಿಯ ಪ್ರತೀಕಾರ’ ಎಂದೂ ಇದರ ಕೆಳಭಾಗದಲ್ಲಿ ಬರೆಯಲಾಗಿತ್ತು.
2. ಇದೇ ವರ್ಷ ಜೂನ್ 18ರಂದು ಹರ್ದೀಪ್ ಸಿಂಗ್ ನಿಜ್ಜಾರ್ ಎಂಬ ಖಲಿಸ್ಥಾನ ಪ್ರತ್ಯೇಕತಾವಾದಿ ಹೋರಾಟದ ನಾಯಕನ ಹತ್ಯೆ ನಡೆಯುತ್ತದೆ. ಈತ ಅಲ್ಲಿನ ಗುರುದ್ವಾರದ ಮುಖ್ಯಸ್ಥ ಕೂಡ ಆಗಿದ್ದ. ‘ಹಲವು ಪ್ರಕರಣಗಳಲ್ಲಿ ಬೇಕಾಗಿರುವ ಭಯೋತ್ಪಾದಕ’ ಎಂದು ಭಾರತವು ಈತನನ್ನು ಗುರುತಿಸಿತ್ತು. ಆದ್ದರಿಂದ ಈತನ ಹತ್ಯೆಯನ್ನು ಭಾರತವೇ ಮಾಡಿದೆ. ಕೆನಡಾದಲ್ಲಿರುವ ರಾಜತಾಂತ್ರಿಕ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎನ್ನುವುದು ಖಲಿಸ್ಥಾನ ಪ್ರತ್ಯೇಕತಾವಾದಿಗಳ ಆರೋಪ.
ಇದೇ ಕಾರಣಕ್ಕಾಗಿ ನಿಜ್ಜಾರ್‌ನ ಹತ್ಯೆ ನಡೆದ ಒಂದು ತಿಂಗಳ ಬಳಿಕ ಜುಲೈ 8ರ ಹೊತ್ತಿಗೆ ಕೆನಡಾದಲ್ಲಿ ‘ಖಲಿಸ್ಥಾನ ಸ್ವಾತಂತ್ರ್ಯ ರ್‍ಯಾಲಿ’ಯನ್ನು ಹಮ್ಮಿಕೊಳ್ಳಲಾಗಿತ್ತು. ಈ ರ್‍ಯಾಲಿ ಆಯೋಜಿಸಿದ್ದ ಸಂಘಟನೆಯು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ವೊಂದನ್ನು ಹಂಚಿಕೆ ಮಾಡಿತ್ತು. ಇದರಲ್ಲಿ ಒಟ್ಟಾವದಲ್ಲಿನ ಭಾರತದ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಹಾಗೂ ಟೊರಾಂಟೊದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಅಪೂರ್ಣ ಶ್ರೀವಾಸ್ತವ ಅವರಿಗೆ ಬೆದರಿಕೆ ಹಾಕಲಾಗಿತ್ತು. ಭಾರತದ ರಾಜತಾಂತ್ರಿಕ ಪ್ರತಿಭಟನೆ: ಈ ಎರಡೂ ಘನಟೆಗಳಿಗೆ ಸಂಬಂಧಿಸಿ ಭಾರತವು ರಾಜತಾಂತ್ರಿಕ ಪ್ರತಿಭಟನೆಯನ್ನು ದಾಖಲಿಸಿತ್ತು. ‘ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ಸುರಕ್ಷತೆ ಬಗ್ಗೆ ಕ್ರಮ ಅಗತ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದು ಭಾರತವು ಕೆನಡಾ ಸರ್ಕಾರವನ್ನು ಒತ್ತಾಯಿಸಿತ್ತು. ಜೊತೆಗೆ ಕೆನಡಾದಲ್ಲಿ ಹೆಚ್ಚಾಗಿರುವ ಖಲಿಸ್ಥಾನ ಪರ ಪ್ರತ್ಯೇಕತಾವಾದಿಗಳ ಚಟುವಟಿಕೆಗಳ ಬಗ್ಗೆ ಭಾರತೀಯರ ಹಾಗೂ ಭಾರತದ ವಿರುದ್ಧ ಹೆಚ್ಚಾಗುತ್ತಿರುವ ಕೃತ್ಯಗಳ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯವು ಖಂಡನೆ ವ್ಯಕ್ತಪಡಿಸಿತ್ತು. ‘ಖಲಿಸ್ಥಾನ ಉಗ್ರವಾದಕ್ಕೆ ಹೆಚ್ಚು ಅವಕಾಶ ನೀಡಬೇಡಿ. ಒಂದು ವೇಳೆ ಇದಕ್ಕೆ ಅವಕಾಶ ನೀಡಿದರೆ ಅದು ನಮ್ಮ ಬಾಂಧವ್ಯಕ್ಕೆ ಒಳ್ಳೆಯದಲ್ಲ’ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಹೇಳಿದ್ದರು. ಕೆನಡಾದೊಂದಿಗೆ ಅಮೆರಿಕ ಹಾಗೂ ಬ್ರಿಟನ್‌ನಲ್ಲೂ ಖಲಿಸ್ಥಾನ ಪರ ಚಟುವಟಿಕೆಗಳು ಹೆಚ್ಚಾಗ ತೊಡಗಿವೆ.
ಮಾತುಕತೆಗೆ ಹದಿನಾಲ್ಕು ವರ್ಷ ಕೈಗೂಡದ ಒಪ್ಪಂದ
ಭಾರತ ಮತ್ತು ಕೆನಡಾ ಮಧ್ಯೆ ವಾಣಿಜ್ಯ ವಹಿವಾಟು ನಡೆಯುತ್ತಿದೆಯಾದರೂ ಎರಡೂ ದೇಶಗಳ ಮಧ್ಯೆ ಯಾವುದೇ ವಾಣಿಜ್ಯ–ವ್ಯಾಪಾರ ಒಪ್ಪಂದ ಜಾರಿಯಲ್ಲಿಲ್ಲ. ಕೆನಡಾವು ಅತಿಹೆಚ್ಚು ವ್ಯಾಪಾರ ನಡೆಸುವ ದೇಶಗಳ ಪಟ್ಟಿಯಲ್ಲಿ ಭಾರತವು 10ನೇ ಸ್ಥಾನದಲ್ಲಿದ್ದರೆ ಭಾರತವು ಅತಿಹೆಚ್ಚು ವ್ಯಾಪಾರ ನಡೆಸುವ ಪಟ್ಟಿಯಲ್ಲಿ ಕೆನಡಾ 30ನೇ ಸ್ಥಾನದಲ್ಲಿದೆ. ಎರಡೂ ದೇಶಗಳ ಮಧ್ಯೆ ಹಲವು ಕ್ಷೇತ್ರಗಳಲ್ಲಿ ವಾಣಿಜ್ಯ–ವಹಿವಾಟನ್ನು ವೃದ್ಧಿಸಲು ಅವಕಾಶವಿದೆ. ಇದಕ್ಕಾಗಿ ‘ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ’ (ಸಿಎಪಿಎ) ಮಾಡಿಕೊಳ್ಳಬೇಕು ಎಂದು ಎರಡೂ ದೇಶಗಳು ಮಾತುಕತೆ ಆರಂಭಿಸಿದ್ದು 2009ರಲ್ಲಿ. ಆದರೆ ಈವರೆಗೆ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ನವೀಕರಿಸಬಹುದಾದ ಇಂಧನ ಕ್ಷೇತ್ರ ರಸ್ತೆಸಾರಿಗೆ ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆಗೆ ಭಾರತದಲ್ಲಿ ಅವಕಾಶವಿದೆ. ಹೀಗಾಗಿ ಭಾರತದಲ್ಲಿ ಹೂಡಿಕೆ ಮಾಡಬೇಕು ಎಂದು ಕೆನಡಾದ ವಾಣಿಜ್ಯ ಸಚಿವಾಲಯವು ಅಲ್ಲಿನ ಸರ್ಕಾರಕ್ಕೆ 2009ರಲ್ಲಿ ತಿಳಿಸಿತ್ತು. ಆಗ ಕೆನಡಾ ಪ್ರಧಾನಿಯಾಗಿದ್ದ ಸ್ಟೀಫನ್ ಹಾರ್ಪರ್ ಅವರು 2009ರ ನವೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಭಾರತದ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಹಾರ್ಪರ್ ಅವರು ಮಾತುಕತೆಯನ್ನೂ ನಡೆಸಿದ್ದರು.
ಎರಡೂ ದೇಶಗಳ ಮಧ್ಯೆ ವ್ಯಾಪಾರ ಒಪ್ಪಂದದ ಅವಶ್ಯಕತೆ ಇದೆ ಎಂದು ಇಬ್ಬರು ನಾಯಕರೂ ಒಪ್ಪಿಕೊಂಡಿದ್ದರು. ಆನಂತರ ಒಪ್ಪಂದದ ಸ್ವರೂಪ ಹೇಗಿರಬೇಕು ಎಂಬುದನ್ನು ಅಂತಿಮಗೊಳಿಸಲು ಸಮಿತಿಯೊಂದನ್ನು ರಚಿಸಲಾಗಿತ್ತು. ಆ ಸಮಿತಿಯು ತನ್ನ ವರದಿಯನ್ನೂ ಸಲ್ಲಿಸಿತ್ತು. ವರದಿ ಸಲ್ಲಿಸಿದ ನಂತರ ಭಾರತ–ಕೆನಡಾ ವಾಣಿಜ್ಯ ಸಚಿವರು ಹಣಕಾಸು ಸಚಿವರು ಎರಡೂ ಸಚಿವಾಲಯಗಳ ಕಾರ್ಯದರ್ಶಿಗಳು ಹಲವು ಸುತ್ತಿನ ಮಾತುಕತೆ ನಡೆಸಿದರು. ಎರಡೂ ದೇಶಗಳ ಮಧ್ಯೆ ವಾಣಿಜ್ಯ ವಹಿವಾಟಿಗೆ ಇರುವ ತೊಡಕುಗಳನ್ನು ನಿವಾರಿಸಿಕೊಳ್ಳಬೇಕು ಎಂಬ ಅಭಿಪ್ರಾಯ ಈ ಸಭೆಗಳಲ್ಲಿ ವ್ಯಕ್ತವಾಗಿತ್ತು. ಎರಡೂ ದೇಶಗಳ ಮಧ್ಯೆ ಸುಂಕರಹಿತ ವ್ಯಾಪಾರಕ್ಕೆ ಅವಕಾಶವಿರಬೇಕು. ಇದಕ್ಕಾಗಿ ಪ್ರತ್ಯೇಕ ಸುಂಕರಹಿತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಬೇಕು ಎಂಬ ಇಂಗಿತವೂ ವ್ಯಕ್ತವಾಗಿತ್ತು. ಹಲವು ಕ್ಷೇತ್ರಗಳಲ್ಲಿನ ತೊಡಕುಗಳನ್ನು ನಿವಾರಿಸಿಕೊಳ್ಳುವ ಸಲುವಾಗಿ ಹಲವು ಸುತ್ತಿನ ಮಾತುಕತೆ ನಡೆಯಿತು. ಆದರೆ ಎಲ್ಲಾ ವಿಚಾರಗಳಲ್ಲಿ ಸಹಮತಕ್ಕೆ ಬರಲಾಗಲಿಲ್ಲ.
2009ರಿಂದ 2015ರ ಮಧ್ಯೆ ಒಟ್ಟು ಒಂಬತ್ತು ಸುತ್ತಿನ ಸಭೆಗಳು ನಡೆದಿದ್ದವು. ಭಾರತದಲ್ಲಿ 2014ರಲ್ಲಿ ಮತ್ತು ಕೆನಡಾದಲ್ಲಿ 2015ರಲ್ಲಿ ಸರ್ಕಾರ ಬದಲಾಯಿತು. ಜಸ್ಟಿನ್ ಟ್ರುಡೋ ಅವರ ಸರ್ಕಾರವು ಖಲಿಸ್ಥಾನ ಪರವಿರುವ ಸಿಖ್ಖರ ಪಕ್ಷದ ಬೆಂಬಲ ಪಡೆದಿತ್ತು. ಹೀಗಾಗಿ ಸಿಎಪಿಎ ಮಾತುಕತೆಗೆ ಹಿನ್ನಡೆಯಾಯಿತು. 2017ರಲ್ಲಿ 10ನೇ ಸುತ್ತಿನ ಮಾತುಕತೆ ನಡೆದಿತ್ತು. ಆನಂತರದ ಸಭೆ ನಡೆದಿದ್ದು 2021ರಲ್ಲಿ. ಇದರ ಮುಂದುವರಿದ ಭಾಗವಾಗಿಯೇ ಅಕ್ಟೋಬರ್‌ನಲ್ಲಿ ಭಾರತ ಮತ್ತು ಕೆನಡಾ ವಾಣಿಜ್ಯ ಸಚಿವರು ಸಭೆ ನಡೆಸಬೇಕಿತ್ತು. ಆದರೆ ಎರಡೂ ದೇಶಗಳ ನಡುವಣ ರಾಜತಾಂತ್ರಿಕ ಸಂಬಂಧ ಗಾಸಿಗೊಂಡಿರುವ ಕಾರಣವನ್ನು ಮುಂದೊಡ್ಡಿ ಕೆನಡಾ ಸರ್ಕಾರವು ಸದ್ಯದಮಟ್ಟಿಗೆ ಮಾತುಕತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಘೋಷಿಸಿತು. ಭಾರತವೂ ಇದೇ ನಿಲುವನ್ನು ತೆಗೆದುಕೊಂಡಿತು. ಈಗ ಎರಡೂ ದೇಶಗಳು ಸಿಎಪಿಎ ಮಾತುಕತೆಯನ್ನು ಅಧಿಕೃತವಾಗಿ ಸ್ಥಗಿತಗೊಳಿಸಿವೆ.
ಇಂತಹ ಒಪ್ಪಂದವೊಂದು ಏರ್ಪಡದೇ ಇರುವುದು ಎರಡೂ ದೇಶಗಳ ಆರ್ಥಿಕತೆಗೆ ಆಗಿರುವ ಹಿನ್ನಡೆಯೇ ಸರಿ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತದಿಂದ ಕೆನಡಾಕ್ಕೆ ರಫ್ತಾಗುವ ಸರಕುಗಳಲ್ಲಿ ಜವಳಿ ಮತ್ತು ಸಿದ್ಧಉಡುಪುಗಳದ್ದೇ ಸಿಂಹಪಾಲು. ಆದರೆ ಭಾರತವೂ ಇದಕ್ಕೆ ರಫ್ತು ಸುಂಕ ವಿಧಿಸುತ್ತಿದೆ ಮತ್ತು ಕೆನಡಾವು ಆಮದು ಸುಂಕ ವಿಧಿಸುತ್ತಿದೆ. ಈ ಸುಂಕಗಳನ್ನು ತೆಗೆದುಹಾಕಿದರೆ ಜವಳಿ ಮತ್ತು ಸಿದ್ಧಉಡುಪು ರಫ್ತು ಹೆಚ್ಚುತ್ತದೆ. ಇದು ಭಾರತದಲ್ಲಿನ ಜವಳಿ ಕ್ಷೇತ್ರದ ವಹಿವಾಟನ್ನು ಹೆಚ್ಚಿಸುತ್ತದೆ ಎಂದು ಅಂದಾಜಿಸಲಾಗಿತ್ತು. ಈ ಕಾರಣದಿಂದಲೇ ಸುಂಕರಹಿತ ವ್ಯಾಪಾರ ಒಪ್ಪಂದದಲ್ಲಿ ಜವಳಿ ಕ್ಷೇತ್ರವನ್ನು ಸೇರಿಸಬೇಕು ಎಂದು ಒತ್ತಾಯಿಸಲಾಗಿತ್ತು.
ಆದರೆ ಈಗ ಮಾತುಕತೆಯೇ ಸ್ಥಗಿತವಾಗಿರುವ ಕಾರಣ ಈ ಕ್ಷೇತ್ರದಲ್ಲಿ ಸಾಧ್ಯವಿದ್ದ ಮತ್ತಷ್ಟು ಬೆಳವಣಿಗೆಗೆ ಹಿನ್ನಡೆಯಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಕೆನಡಾಕ್ಕೂ ಇದರಿಂದ ಭಾರಿ ಹಿನ್ನಡೆಯೇ ಆಗಿದೆ ಎಂಬುದು ವಾಣಿಜ್ಯ–ವ್ಯಾಪಾರ ತಜ್ಞರ ಅಭಿಪ್ರಾಯ. ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ಜಗತ್ತಿನ //ನಾಲ್ಕನೇ// ಅತ್ಯಂತ ದೊಡ್ಡ ಆರ್ಥಿಕತೆಯಾಗಿದೆ. ಹೀಗಾಗಿ ಭಾರತದೊಂದಿಗೆ ವ್ಯಾಪಾರ ವಹಿವಾಟು ವೃದ್ಧಿಸಲು ಮತ್ತು ಭಾರತದಲ್ಲಿ ಬಂಡವಾಳ ಹೂಡಲು ವಿಫುಲ ಅವಕಾಶಗಳಿವೆ ಎಂದು 2021ರಲ್ಲಿ ಮಾತುಕತೆ ಮತ್ತೆ ಆರಂಭವಾದಾಗ ಕೆನಡಾದ ವಾಣಿಜ್ಯ ಸಚಿವಾಲಯ ಹೇಳಿತ್ತು. ನವೀಕರಿಸಬಹುದಾದ ಇಂಧನ ಕ್ಷೇತ್ರ ಕೃಷಿ ಪರಿಕರಗಳು ಮತ್ತು ಕೃಷಿ ಉತ್ಪನ್ನಗಳ ರಫ್ತಿಗೆ ಭಾರತವು ಉತ್ತಮ ಮಾರುಕಟ್ಟೆಯಾಗಬಲ್ಲದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಈಗ ಮಾತುಕತೆ ಸ್ಥಗಿತವಾಗಿರುವ ಕಾರಣ ಭಾರತದೊಂದಿಗೆ ವ್ಯಾಪಾರ ವೃದ್ಧಿಸುವ ಕೆನಡಾದ ಒತ್ತಾಸೆ ನನೆಗುದಿಗೆ ಬಿದ್ದಂತಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.