ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ಆಳ–ಅಗಲ ‌| ಸತತ ಇಳಿಕೆಯ ಹಾದಿಯಲ್ಲಿ ವಿದೇಶಿ ನೇರ ಹೂಡಿಕೆ
ಆಳ–ಅಗಲ ‌| ಸತತ ಇಳಿಕೆಯ ಹಾದಿಯಲ್ಲಿ ವಿದೇಶಿ ನೇರ ಹೂಡಿಕೆ
Published 31 ಮೇ 2024, 2:06 IST
Last Updated 31 ಮೇ 2024, 2:06 IST
ಅಕ್ಷರ ಗಾತ್ರ

ಯಾವುದೇ ದೇಶದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯು (ಎಫ್‌ಡಿಐ), ಆ ದೇಶದ ಆರ್ಥಿಕತೆಯ ಸ್ಥಿತಿಗತಿಗೆ ಹಿಡಿದ ಕೈಗನ್ನಡಿಯಂತೆ. ಎಫ್‌ಡಿಐ ಏರಿಕೆಯಾದರೆ ಆರ್ಥಿಕತೆ ಬೆಳವಣಿಗೆ ಹೊಂದುತ್ತಿದೆ ಮತ್ತು ಎಫ್‌ಡಿಐ ಇಳಿಕೆಯಾದರೆ ಆರ್ಥಿಕತೆ ಕುಂಟುತ್ತಿದೆ ಎಂದು ಅರ್ಥ. ಭಾರತದಲ್ಲಿ ಎಫ್‌ಡಿಐ ಸತತ ಮೂರನೇ ಆರ್ಥಿಕ ವರ್ಷದಲ್ಲೂ ಇಳಿಕೆಯ ಹಾದಿಯಲ್ಲಿಯೇ ಇದೆ. ಸರ್ಕಾರದ ದಾಖಲೆಗಳ ಪ್ರಕಾರ ದೇಶೀಯ ಆರ್ಥಿಕತೆ ಬೆಳವಣಿಗೆಯ ಹಾದಿಯಲ್ಲಿ ಇದ್ದರೂ, ಅದರಲ್ಲಿನ ಹಲವು ಕೊರತೆಗಳು ಮತ್ತು ಅಡೆತಡೆಗಳ ಕಾರಣದಿಂದ ಭಾರತದಲ್ಲಿ ಎಫ್‌ಡಿಐ ಇಳಿಕೆಯಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ದೇಶದಲ್ಲಿನ ಎಫ್‌ಡಿಐಗೆ ಸಂಬಂಧಿಸಿದ ದತ್ತಾಂಶಗಳನ್ನು ಕೇಂದ್ರ ಸರ್ಕಾರವು ಗುರುವಾರ ಬಿಡುಗಡೆ ಮಾಡಿದೆ. ಸರ್ಕಾರದ ವರದಿಯ ಪ್ರಕಾರ ದೇಶದಲ್ಲಿ ಎಲ್ಲಾ ಸ್ವರೂಪದ ಎಫ್‌ಡಿಐ ಇಳಿಕೆಯಾಗಿದೆ. 2022–23ನೇ ಆರ್ಥಿಕ ವರ್ಷದಲ್ಲಿ ಎಫ್‌ಡಿಐ ರೂಪದಲ್ಲಿ ದೇಶಕ್ಕೆ ಒಟ್ಟು 7,135 ಕೋಟಿ ಡಾಲರ್‌ ಹೂಡಿಕೆ ಬಂದಿತ್ತು. 2023–24ನೇ ಆರ್ಥಿಕ ವರ್ಷದಲ್ಲಿ ಎಫ್‌ಡಿಐ ರೂಪದಲ್ಲಿ ಹೂಡಿಕೆಯಾದ ಬಂಡವಾಳ 7,095 ಕೋಟಿ ಡಾಲರ್‌ಗಳು. ಇದು ಶೇ 1ರಷ್ಟು ಇಳಿಕೆ ಮಾತ್ರ. ಆದರೆ ಹಿಂದಿನ ನಾಲ್ಕೈದು ಆರ್ಥಿಕ ವರ್ಷಗಳಿಗೆ ಹೋಲಿಸಿದರೆ ಈ ಇಳಿಕೆಯ ಪ್ರಮಾಣ ಹೆಚ್ಚು. ದೇಶದ ಆರ್ಥಿಕ ಬೆಳವಣಿಗೆಯು ನಿಧಾನಗತಿಯಲ್ಲಿ ಇದ್ದ 2019–20ನೇ ಆರ್ಥಿಕ ವರ್ಷದಲ್ಲಿ 7,439 ಕೋಟಿ ಡಾಲರ್‌ ಎಫ್‌ಡಿಐ ಹರಿದುಬಂದಿತ್ತು. ಆದರೆ 2023–24ರಲ್ಲಿನ ಎಫ್‌ಡಿಐ ಮೊತ್ತ 2019–20ಕ್ಕಿಂತಲೂ ಕಡಿಮೆಯಾಗಿದೆ. ಬಂಡವಾಳ ಹೂಡಿಕೆಗೆ ಪೂರಕವಾದ ವಾತಾವರಣ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಭಾರತದಲ್ಲಿ ಹೂಡಿಕೆಯಾಗುವ ಎಫ್‌ಡಿಐನಲ್ಲಿ ಸಿಂಹಪಾಲು ಈಕ್ವಿಟಿ ರೂಪದ್ದು. ಹಿಂದಿನ ಮೂರು ಆರ್ಥಿಕ ವರ್ಷಗಳಲ್ಲಿ ಎಫ್‌ಡಿಐ ಈಕ್ವಿಟಿ ಹೂಡಿಕೆ ಕಳವಳಕಾರಿ ಮಟ್ಟದಲ್ಲಿ ಇಳಿಕೆಯಾಗಿದೆ. 2022–23ನೇ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 2023–24ರ ಆದ ಹೂಡಿಕೆಯಲ್ಲಿನ ಇಳಿಕೆ ಶೇ 3ರಷ್ಟು ಮಾತ್ರ. ಆದರೆ ಹಿಂದಿನ ನಾಲ್ಕು ಆರ್ಥಿಕ ವರ್ಷಗಳಲ್ಲಿ ಆದ ಇಳಿಕೆಯು ಶೇ 25ಕ್ಕಿಂತಲೂ ಹೆಚ್ಚು.

ಎಫ್‌ಡಿಐ ಹರಿದುಬರುವುದು ತಯಾರಿಕಾ ವಲಯಕ್ಕೆ. ಕೇಂದ್ರ ಸರ್ಕಾರವು ತಯಾರಿಕಾ ವಲಯಕ್ಕೆ ಒತ್ತು ನೀಡುತ್ತಿದ್ದರೂ ಜೋಡಣೆ ಸ್ವರೂಪದ ಉದ್ದಿಮೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಈ ಸ್ವರೂಪದ ತಯಾರಿಕಾ ಉದ್ದಿಮೆಗಳು, ಕಾರ್ಯನಿರ್ವಹಣೆಗೆ ವಿದೇಶಗಳನ್ನೇ ಅವಲಂಬಿಸಬೇಕಿದೆ. ವಿದೇಶಗಳಿಂದ ಬಿಡಿಭಾಗಗಳ ಪೂರೈಕೆಯಲ್ಲಿನ ತೊಡಕುಗಳು ಮತ್ತು ತೆರಿಗೆ ಪದ್ಧತಿಗಳು ಅವುಗಳ ಕಾರ್ಯನಿರ್ವಹಣೆಯನ್ನು ಪ್ರಭಾವಿಸುತ್ತಿವೆ. ಇದು ತಯಾರಿಕಾ ವಲಯದಲ್ಲಿ ಎಫ್‌ಡಿಐ ಹೂಡಿಕೆಯಾಗುವುದನ್ನು ತಡೆಯುತ್ತಿವೆ. ಪೂರ್ಣ ಪ್ರಮಾಣದ ತಯಾರಿಕೆಗೆ ಅವಕಾಶ ಮಾಡಿಕೊಟ್ಟರೆ ಮತ್ತು ಅಂತಹ ಉದ್ದಿಮೆಗಳ ವೃದ್ಧಿಗೆ ಇರುವ ತೊಡಕುಗಳನ್ನು ನಿವಾರಣೆ ಮಾಡಿದರೆ ಈ ಕ್ಷೇತ್ರಕ್ಕೆ ಹೆಚ್ಚಿನ ಎಫ್‌ಡಿಐ ಹರಿದುಬರುತ್ತದೆ ಎಂಬುದು ವಿದೇಶಿ ಮಾರುಕಟ್ಟೆ ತಜ್ಞರ ಅಭಿಪ್ರಾಯ.

ಇಳಿಕೆಗೆ ಹಲವು ಕಾರಣಗಳು:

ಜಾಗತಿಕ ಮಟ್ಟದಲ್ಲಿನ ಆರ್ಥಿಕ ಹಿಂಜರಿತವೂ ಎಫ್‌ಡಿಐ ಒಳಹರಿವನ್ನು ಪ್ರಭಾವಿಸುತ್ತದೆ. ಆದರೆ ಭಾರತದಲ್ಲಿನ ಸ್ಥಿತಿಗತಿಯೇ ಎಫ್‌ಡಿಐ ಇಳಿಕೆಗೆ ಪ್ರಮುಖ ಕಾರಣ ಎಂದು ದಿ ಡಿಪ್ಲೊಮಾಟ್‌ ವಿಶ್ಲೇಷಣೆ ಪ್ರಕಟಿಸಿದೆ.

2023–24ನೇ ಸಾಲಿನಲ್ಲಿ ಎಫ್‌ಡಿಐ ಅತಿಹೆಚ್ಚು ಇಳಿಕೆಯಾಗಿದ್ದು ಕಂಪ್ಯೂಟರ್‌ ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್‌ ಕ್ಷೇತ್ರದಲ್ಲಿ. ಈ ಕ್ಷೇತ್ರಗಳಿಗೆ ಸಂಬಂಧಿಸಿದ ಬಿಡಿಭಾಗಗಳ ಪೂರೈಕೆಯಲ್ಲಿನ ತೊಡಕುಗಳು, ಕಾರ್ಯನಿರ್ವಹಣೆಗೆ ಪೂರಕವಾದ ವಾತಾವರಣ ಇಲ್ಲದಿರುವುದು ಎಫ್‌ಡಿಐ ಇಳಿಕೆಯಾಗಲು ಪ್ರಮುಖ ಕಾರಣ ಎನ್ನಲಾಗಿದೆ.

ಇದರೊಟ್ಟಿಗೆ ದೂರಸಂಪರ್ಕ ಮತ್ತು ಆಟೊಮೊಬೈಲ್‌ ಕ್ಷೇತ್ರದಲ್ಲೂ ಎಫ್‌ಡಿಐ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ಕ್ಷೇತ್ರಗಳಲ್ಲಿ ತಯಾರಿಕೆಗೆ ಅಗತ್ಯವಿರುವ ಕೌಶಲಭರಿತ ಮಾನವ ಸಂಪನ್ಮೂಲ ಲಭ್ಯವಿಲ್ಲದೇ ಇರುವುದು ಮತ್ತು ಅದರಿಂದ ಉತ್ಪಾದಕತೆ ಕುಂಠಿತವಾಗುತ್ತಿರುವುದು ಈ ಕ್ಷೇತ್ರದ ಬೆಳವಣಿಗೆಯನ್ನು ನಿಧಾನಗೊಳಿಸಿದೆ. 

ಮೊದಲ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದ ಕರ್ನಾಟಕ

ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕರ್ನಾಟಕ ನೆಚ್ಚಿನ ರಾಜ್ಯವಾಗಿತ್ತು. 2021–22ನೇ ಸಾಲಿನಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅತಿ ಹೆಚ್ಚು ಎಫ್‌ಡಿಐ ಆಗಿತ್ತು. ಆದರೆ ನಂತರದ ವರ್ಷಗಳಲ್ಲಿ ರಾಜ್ಯಕ್ಕೆ ಹರಿದು ಬಂದ ಎಫ್‌ಡಿಐ ಮೊತ್ತ ಇಳಿಕೆಯಾಗುತ್ತಲೇ ಇದೆ.

2023–24ನೇ ಆರ್ಥಿಕ ವರ್ಷದಲ್ಲಿ ಅತಿಹೆಚ್ಚು ಎಫ್‌ಡಿಐ ಹೂಡಿಕೆಯಾಗಿದ್ದು ಮಹಾರಾಷ್ಟ್ರದಲ್ಲಿ (₹1.25 ಲಕ್ಷ ಕೋಟಿ). ಅತಿಹೆಚ್ಚು ಎಫ್‌ಡಿಐ ಆಕರ್ಷಿಸಿದ ಎರಡನೇ ರಾಜ್ಯ ಗುಜರಾತ್ (₹60,600 ಕೋಟಿ). ಮೂರನೇ ಸ್ಥಾನದಲ್ಲಿ ಕರ್ನಾಟಕವಿದ್ದು, ಇಲ್ಲಿಗೆ ಹರಿದುಬಂದ ಎಫ್‌ಡಿಐ ಮೊತ್ತ ₹54,427 ಕೋಟಿ ಮಾತ್ರ. ಕರ್ನಾಟಕದಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲೂ ಎಫ್‌ಡಿಐ ಇಳಿಕೆಯಾಗಿತ್ತು ಮತ್ತು ಈ ಸರ್ಕಾರದ ಅವಧಿಯಲ್ಲೂ ಇಳಿಕೆಯಾಗಿದೆ.

ಈ ಅವಧಿಯಲ್ಲಿ ಅತಿಹೆಚ್ಚು ಪ್ರಗತಿ ಕಂಡಿದ್ದು ಗುಜರಾತ್‌ ಮಾತ್ರ. 2021–22ರಲ್ಲಿ ಗುಜರಾತ್‌ನಲ್ಲಿ ಹೂಡಿಕೆಯಾಗಿದ್ದ ಎಫ್‌ಡಿಐ ₹20,169 ಕೋಟಿಯಷ್ಟು. ಅದು 2022–23ರಲ್ಲಿ ₹37,059 ಕೋಟಿ ಮತ್ತು 2023–24ರಲ್ಲಿ ₹60 ಸಾವಿರ ಕೋಟಿಗೂ ಹೆಚ್ಚು ಎಫ್‌ಡಿಐ ಅನ್ನು ಗುಜರಾತ್ ಆಕರ್ಷಿಸಿತ್ತು. ಕರ್ನಾಟಕವೂ ಸೇರಿ ದಕ್ಷಿಣ ಭಾರತದಲ್ಲಿ ಹೂಡಿಕೆಗೆ ಆಸಕ್ತಿ ತೋರಿದ್ದ ಹಲವು ವಿದೇಶಿ ಕಂಪನಿಗಳು ಗುಜರಾತ್‌ನತ್ತ ಹೋಗಿದ್ದೇ, ಗುಜರಾತ್‌ನ ಈ ಪ್ರಗತಿಗೆ ಕಾರಣ ಎನ್ನಲಾಗಿದೆ. ಜತೆಗೆ ಕರ್ನಾಟಕದಲ್ಲಿ ಎಫ್‌ಡಿಐ ಇಳಿಕೆಗೂ ಇದೇ ಕಾರಣ ಎನ್ನಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT