ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಳ–ಅಗಲ | ಪಾಲು ಹಂಚಿಕೆ: ಏಕೀ ವ್ಯತ್ಯಾಸ?

Published 29 ಆಗಸ್ಟ್ 2024, 22:30 IST
Last Updated 29 ಆಗಸ್ಟ್ 2024, 22:30 IST
ಅಕ್ಷರ ಗಾತ್ರ
16ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಅರವಿಂದ ಪನಗಡಿಯಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಹಣಕಾಸು ಹಂಚಿಕೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರು ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಆದ ಅನ್ಯಾಯವನ್ನು ಪುನರುಚ್ಚರಿಸಿದ್ದಾರೆ. ಹಣಕಾಸು ಆಯೋಗದ ರಚನೆಯ ಉದ್ದೇಶ, ರಾಜ್ಯಗಳಿಗೆ ತೆರಿಗೆ ಪಾಲು ನೀಡುವಲ್ಲಿನ ಮಾನದಂಡಗಳ ಬಗೆಗಿನ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಭಾರತ ಒಕ್ಕೂಟದ ಕೆಲವು ರಾಜ್ಯಗಳು– ಮುಖ್ಯವಾಗಿ ದಕ್ಷಿಣದ ರಾಜ್ಯಗಳು– ಕೇಂದ್ರದಿಂದ ತಮಗೆ ನ್ಯಾಯಯುತವಾಗಿ ಸಿಗಬೇಕಿದ್ದ ತೆರಿಗೆ ಪಾಲು ಸಿಗುತ್ತಿಲ್ಲ ಎಂದು ಆಕ್ಷೇಪಿಸಿ, ಪ್ರತಿಭಟನೆಯನ್ನೂ ನಡೆಸಿದ್ದವು. ತೆರಿಗೆ ಸಂಗ್ರಹದಲ್ಲಿ ತಮ್ಮ ಪಾಲಿಗೆ ತಕ್ಕಂತೆ ಕೇಂದ್ರವು ತಮಗೆ ಹಣಕಾಸು ಹಂಚಿಕೆ ಮಾಡುತ್ತಿಲ್ಲ ಎನ್ನುವುದು ರಾಜ್ಯಗಳ ಅಸಮಾಧಾನಕ್ಕೆ ಕಾರಣವಾಗಿತ್ತು.

ಕಾರ್ಪೊರೇಟ್ ತೆರಿಗೆ, ಆದಾಯ ತೆರಿಗೆ, ಸೆಂಟ್ರಲ್ ಜಿಎಸ್‌ಟಿ, ಸಮಗ್ರ ಸರಕು ಮತ್ತು ಸೇವಾ ತೆರಿಗೆಯ (ಐಜಿಎಸ್‌ಟಿ) ಕೇಂದ್ರದ ಪಾಲಿನಲ್ಲಿ ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತದೆ. ಈ ಹಂಚಿಕೆ ನಡೆಯುವುದು ಹಣಕಾಸು ಆಯೋಗದ ಶಿಫಾರಸಿನ ಮೇರೆಗೆ.   

ಸಂವಿಧಾನದ 270ನೇ ವಿಧಿಯು ಕೇಂದ್ರ ಮತ್ತು ರಾಜ್ಯಗಳ ನಡುವಿನ ತೆರಿಗೆ ಹಂಚಿಕೆಯ ಬಗ್ಗೆ ವಿವರಿಸುತ್ತದೆ. ಕೇಂದ್ರವು ರಾಜ್ಯಗಳಿಗೆ ತೆರಿಗೆಯ ಪಾಲನ್ನು ಹಂಚುವುದರ ಜತೆಗೆ ಕೇಂದ್ರ ಹಣಕಾಸು ಆಯೋಗದ ಶಿಫಾರಸಿಗೆ ತಕ್ಕಂತೆ ಅನುದಾನವನ್ನೂ ನೀಡುತ್ತದೆ. ಆದರೆ, ಕೇಂದ್ರವು ಸಂಗ್ರಹ ಮಾಡುವ ಸೆಸ್ ಮತ್ತು ಸರ್‌ಚಾರ್ಜ್‌ನಲ್ಲಿ ರಾಜ್ಯಗಳಿಗೆ ಪಾಲು ನೀಡುವುದಿಲ್ಲ.

ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯಲ್ಲಿ ಶೇ 41ರಷ್ಟು ಮೊತ್ತವನ್ನು ರಾಜ್ಯ ಸರ್ಕಾರಗಳಿಗೆ 14 ಕಂತುಗಳಲ್ಲಿ ಹಂಚಬೇಕೆಂದು 15ನೇ ಹಣಕಾಸು ಆಯೋಗವು ಶಿಫಾರಸು ಮಾಡಿತ್ತು. ವಿವಿಧ ಮಾನದಂಡಗಳ ಆಧಾರದಲ್ಲಿ ಹಣಕಾಸು ಆಯೋಗವು ರಾಜ್ಯಗಳ ‍ಪಾಲನ್ನು ಹಂಚಿಕೆ ಮಾಡಿತ್ತು.

ಹಣಕಾಸು ಆಯೋಗದ ಶಿಫಾರಸಿನ ಅನುಸಾರ ರಾಜ್ಯಗಳಿಗೆ ತೆರಿಗೆ ಹಂಚಿಕೆ ಮಾಡಲಾಗು ತ್ತಿದ್ದರೂ, ಕರ್ನಾಟಕವು ಸೇರಿದಂತೆ ಕೆಲವು ರಾಜ್ಯಗಳು ಕೇಂದ್ರವು ತಾರತಮ್ಯ ಧೋರಣೆ ಅನುಸರಿಸು ತ್ತಿದೆ ಎಂದು ಆರೋಪಿಸುತ್ತಿವೆ. ಕೇಂದ್ರಕ್ಕೆ ಪ್ರತಿ ರಾಜ್ಯವು ಪಾವತಿಸುವ ಒಂದು ರೂಪಾಯಿ ತೆರಿಗೆಗೆ ಪ್ರತಿಯಾಗಿ ಅವುಗಳಿಗೆ ಕೇಂದ್ರದಿಂದ ಸಿಗುವ ಪಾಲಿನಲ್ಲಿ ಭಾರಿ ಅಂತರ ಇದೆ. ಉತ್ತರ ಪ್ರದೇಶ, ಬಿಹಾರದಂಥ ರಾಜ್ಯಗಳಿಗೆ ಹೋಲಿಸಿದರೆ, ಉದ್ಯಮಗಳು ಅಭಿವೃದ್ಧಿ ಹೊಂದಿರುವ ರಾಜ್ಯಗಳಿಗೆ ಸಿಗುವ ಮೊತ್ತವು ಕಡಿಮೆ ಇದೆ. ಮತ್ತೊಂದು ಮುಖ್ಯ ವಿಚಾರ ಎಂದರೆ, ಕಳೆದ ಆರು ಹಣಕಾಸು ಆಯೋಗಗಳ ಅವಧಿಯಲ್ಲೂ ದಕ್ಷಿಣದ ರಾಜ್ಯಗಳಿಗೆ ನೀಡಲಾಗುತ್ತಿರುವ ತೆರಿಗೆ ಪಾಲು ಕಡಿಮೆ ಆಗುತ್ತಾ ಬಂದಿದೆ.

ರಾಜ್ಯಗಳ ತೆರಿಗೆಯ ಸಾಮರ್ಥ್ಯಕ್ಕಿಂತಲೂ ಹೆಚ್ಚಾಗಿ ಆದಾಯದ ಅಂತರ ಕಡಿಮೆ ಮಾಡುವುದು ಮತ್ತು ಅಗತ್ಯಗಳ (ಜನಸಂಖ್ಯೆ, ಪ್ರದೇಶ ಮತ್ತು ಅರಣ್ಯ) ಆಧಾರದಲ್ಲಿ ತೆರಿಗೆ ಪಾಲು ಹಂಚಿಕೆ ಮಾಡುತ್ತಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. 15ನೇ ಹಣಕಾಸು ಆಯೋಗದ ಪ್ರಕಾರ, ಆದಾಯದ ಕೊರತೆ, ನಿರ್ದಿಷ್ಟ ವಲಯದ ಆಧಾರದಲ್ಲಿ ಕೆಲವು ರಾಜ್ಯಗಳಿಗೆ ತೆರಿಗೆ/ಅನುದಾನ ಹಂಚಿಕೆ ಮಾಡಲಾಗಿದೆ. ಜನಸಂಖ್ಯೆ ಮತ್ತು ರಾಜ್ಯಗಳ ಪ್ರಾದೇಶಿಕತೆಯನ್ನೂ ಆಧರಿಸಿ ನೆರವು ನೀಡಲಾಗಿದೆ. ಕೇಂದ್ರದ ಈ ತೆರಿಗೆ ಹಂಚಿಕೆಯ ನೀತಿ ವಿರುದ್ಧ ಕೆಲವು ರಾಜ್ಯಗಳು ಆಕ್ಷೇಪಣೆ ಎತ್ತಿವೆ.  

ರಾಜ್ಯಗಳ ಆದಾಯದ ಪ್ರಮಾಣ ಶೇ 40 ಆಗಿದ್ದರೆ, ವೆಚ್ಚದ ಪ್ರಮಾಣ ಶೇ 60 ಆಗಿದೆ. ಸಾಮಾನ್ಯವಾಗಿ, ಹಣಕಾಸು ಆಯೋಗವು ಈ ಅಸಮಾನತೆಯನ್ನು ಗುರಿಯಾಗಿಸಿಕೊಂಡು, ಹಣಕಾಸು ಹಂಚಿಕೆಯ ಸೂತ್ರಗಳನ್ನು ನಿಗದಿಪಡಿಸುತ್ತದೆ. ಸರಾಸರಿ ತೆರಿಗೆ ವರಮಾನದಲ್ಲಿ (ಜಿಟಿಆರ್) ಸೆಸ್ ಮತ್ತು ಸರ್‌ಚಾರ್ಜ್ ಪ್ರಮಾಣ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯಗಳಿಗೆ ತೆರಿಗೆಯ ಹಂಚಿಕೆಯ ಪಾಲು ಇಳಿಕೆಯಾಗುತ್ತಿದೆ ಎನ್ನುವ ವಿಶ್ಲೇಷಣೆ ಇದೆ. 2011–12ರಲ್ಲಿ ಜಿಟಿಆರ್‌ನಲ್ಲಿ ಶೇ 10.4ರಷ್ಟಿದ್ದ ಸೆಸ್ ಮತ್ತು ಸರ್‌ಚಾರ್ಜ್ ಪ್ರಮಾಣವು 2021ರ ವೇಳೆಗೆ ಶೇ 20.2ಕ್ಕೆ ಏರಿಕೆಯಾಗಿತ್ತು. 

ದೇಶದ ಸಮಗ್ರ ಅಭಿವೃದ್ಧಿಗೆ ರಾಜ್ಯಗಳು ಕೊಡುಗೆ ನೀಡಬೇಕು ಎನ್ನುವುದೇ ನಿಜವೇ ಆದರೂ, ಒಕ್ಕೂಟ ವ್ಯವಸ್ಥೆಯಲ್ಲಿ ತೆರಿಗೆ ಹಂಚಿಕೆಯ ವಿಚಾರದಲ್ಲಿ ಕೇಂದ್ರವು ಕೆಲವೊಂದು ಕ್ರಮಗಳನ್ನು ಅನುಸರಿಸಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. 

ತೆರಿಗೆ ಪಾಲು ಕ್ರಮೇಣ ಹೆಚ್ಚಳ

ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹಂಚಿಕೆ ಮಾಡುವ ತೆರಿಗೆಯ ಪಾಲು ಈಗ ಶೇ 41ರಷ್ಟಿದೆ. 13ನೇ ಹಣಕಾಸು ಆಯೋಗವು ಇದನ್ನು ಶೇ 32ರಷ್ಟು ನಿಗದಿಪಡಿಸಿತ್ತು. 14ನೇ ಹಣಕಾಸು ಆಯೋಗವು 2015–20ರ ಅವಧಿಗೆ ಇದನ್ನು ಶೇ 42ಕ್ಕೆ ಹೆಚ್ಚಿಸಿತ್ತು. 15ನೇ ಆಯೋಗವು ಶೇ 41ಕ್ಕೆ ಇಳಿಸಿದೆ. ಉಳಿದ ಶೇ 1ರಷ್ಟು ಹಣವನ್ನು ಹೊಸದಾಗಿ ರಚಿಸಲಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ಗಳಿಗೆ ಹಂಚಿಕೆ ಮಾಡಬೇಕು ಎಂದು ಹೇಳಿದೆ.

ಕೆಲವು ಮಾನದಂಡ ಬದಲು

ರಾಜ್ಯಗಳಿಗೆ ತೆರಿಗೆ ಪಾಲು, ಅನುದಾನವನ್ನು ಹಂಚಿಕೆ ಮಾಡಲು ಅನುಸರಿಸಲಾಗುತ್ತಿದ್ದ ಕೆಲವು ಮಾನದಂಡಗಳು ಮತ್ತು ಅದಕ್ಕೆ ನೀಡುತ್ತಿದ್ದ ಆದ್ಯತೆಯನ್ನು 15ನೇ ಹಣಕಾಸು ಆಯೋಗವು ಬದಲಾಯಿಸಿದೆ.

ಜನಸಂಖ್ಯೆ: 14ನೇ ಹಣಕಾಸು ಆಯೋಗವು ತನ್ನ ಶಿಫಾರಸುಗಳನ್ನು ಮಾಡುವಾಗ 1971ರ ಮತ್ತು 2011ರ ಜನಸಂಖ್ಯೆಯನ್ನು ಪರಿಗಣಿಸಿತ್ತು. ಇದಕ್ಕೆ ಶೇ 17.5ರಷ್ಟು ಪ್ರಾಮುಖ್ಯ ನೀಡಿತ್ತು. 15ನೇ ಹಣಕಾಸು ಆಯೋಗವು 2011ರ ಜನಸಂಖ್ಯೆಯನ್ನು ಪರಿಗಣಿಸಿದ್ದು, ಒಟ್ಟು ಹಂಚಿಕೆಯಲ್ಲಿ ಶೇ 10ರಷ್ಟು ಆದ್ಯತೆಯನ್ನು ಇದಕ್ಕೆ ನೀಡಬೇಕು ಎಂದು ಹೇಳಿದೆ. 

ವಿಸ್ತೀರ್ಣ: ರಾಜ್ಯಗಳ ವ್ಯಾಪ್ತಿ ಅಥವಾ ವಿಸ್ತೀರ್ಣಕ್ಕೆ 14ನೇ ಆಯೋಗ ಶೇ 15ರಷ್ಟು ಆದ್ಯತೆ ನೀಡಿದ್ದರೆ, 15ನೇ ಆಯೋಗವೂ ಅದನ್ನೇ ಉಳಿಸಿಕೊಂಡಿದೆ. ಅಂದರೆ ರಾಜ್ಯದ ವಿಸ್ತೀರ್ಣ ಜಾಸ್ತಿ ಇದ್ದರೆ, ಅನುದಾನ, ತೆರಿಗೆ ಹಂಚಿಕೆಯೂ ಜಾಸ್ತಿ ಇರುತ್ತದೆ. 

ಜನಸಂಖ್ಯೆ ನಿಯಂತ್ರಣ ಪ್ರಯತ್ನ: ಜನಸಂಖ್ಯೆ ನಿಯಂತ್ರಣಕ್ಕೆ ಒತ್ತು ನೀಡಬೇಕು ಎಂಬ ಉದ್ದೇಶದಿಂದ 15ನೇ ಹಣಕಾಸು ಆಯೋಗ, ಜನಸಂಖ್ಯೆ ನಿಯಂತ್ರಣ ಯತ್ನ ಎಂಬ ಹೊಸ ಮಾನದಂಡವನ್ನು ಸೇರ್ಪಡೆ ಮಾಡಿದ್ದು, ಇದಕ್ಕೆ ಶೇ 12.5ರಷ್ಟು ಒತ್ತು ನೀಡಿದೆ.   

ಅರಣ್ಯ ಪ್ರದೇಶ: ಸುಸ್ಥಿರ ಆರ್ಥಿಕ ಅಭಿವೃದ್ಧಿಗಾಗಿ ಅರಣ್ಯದ ನಿರ್ವಹಣೆ ಮತ್ತು ಸಂರಕ್ಷಣೆ ಮಾನದಂಡಕ್ಕೆ 14ನೇ ಆಯೋಗ ಶೇ 7.5ರಷ್ಟು ಪ್ರಾಮುಖ್ಯ ಕೊಟ್ಟಿದ್ದರೆ, 15ನೇ ಆಯೋಗವು ಅರಣ್ಯದೊಂದಿಗೆ ಪರಿಸರವನ್ನೂ (ಎಕಾಲಜಿ) ಸೇರಿಸಿ ಶೇ 10ರಷ್ಟು ಆದ್ಯತೆ ನೀಡಿದೆ. 

ವರಮಾನದ ಅಂತರ: ರಾಜ್ಯಗಳ ವರಮಾನದ ಅಂತರದ ( ಇದು ರಾಜ್ಯಗಳ ಆದಾಯಕ್ಕೆ ಸಂಬಂಧಿಸಿದ್ದು, ಇದರಲ್ಲಿ ಕಡಿಮೆ ಆದಾಯ ಹೊಂದಿರುವ ರಾಜ್ಯಗಳು ಕೇಂದ್ರದಿಂದ ಹೆಚ್ಚು ಪಾಲನ್ನು ಪಡೆಯುತ್ತವೆ) ಮಾನದಂಡಕ್ಕೆ 14ನೇ ಹಣಕಾಸು ಆಯೋಗ ಶೇ 50ರಷ್ಟು ಪ್ರಾಮುಖ್ಯ ನೀಡಿದ್ದರೆ, 15ನೇ ಆಯೋಗ ಶೇ 45ರಷ್ಟು ಪ್ರಾಮುಖ್ಯ ಕೊಟ್ಟಿದೆ.

ತೆರಿಗೆ ಮತ್ತು ಆರ್ಥಿಕ ಪ್ರಯತ್ನಗಳು: 15ನೇ ಹಣಕಾಸು ಆಯೋಗವು ತೆರಿಗೆ ಮತ್ತು ಆರ್ಥಿಕ ಪ್ರಯತ್ನಗಳು ಎಂಬ ಹೊಸ ಮಾನದಂಡವನ್ನು ಸೇರಿಸಿದ್ದು, ತೆರಿಗೆ ಸಂಗ್ರಹವನ್ನು ಪರಿಣಾಮಕಾರಿಯಾಗಿ ನಡೆಸುವ ರಾಜ್ಯಗಳ ಪ್ರಯತ್ನಕ್ಕೆ ಉತ್ತೇಜನ ನೀಡುವ ಉದ್ದೇಶವನ್ನು ಇದು ಹೊಂದಿದೆ.

ಹಣಕಾಸು ಆಯೋಗದ ರಚನೆ

ಹಣಕಾಸು ಆಯೋಗವು ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಅದು ಕೇಂದ್ರ ಮತ್ತು ರಾಜ್ಯಗಳ ನಡುವೆ ಸಾಂವಿಧಾನಿಕ ವ್ಯವಸ್ಥೆಗಳು ಮತ್ತು ಪ್ರಸ್ತುತ
ಅವಶ್ಯಕತೆಗಳ ಪ್ರಕಾರ ತೆರಿಗೆ ಹಂಚಿಕೆಯ ವಿಧಾನ ಮತ್ತು ಸೂತ್ರವನ್ನು ನಿರ್ಧರಿಸುತ್ತದೆ.

ಕೇಂದ್ರ ಸರ್ಕಾರವು ಸಂವಿಧಾನದ 280ನೇ ವಿಧಿಯ ಷರತ್ತು (1)ರ ಅನುಸಾರವಾಗಿ ಐದು ವರ್ಷಗಳಿಗೊಮ್ಮೆ ಹಣಕಾಸು ಆಯೋಗವನ್ನು ರಚಿಸುತ್ತದೆ. ಆಯೋಗವು ಒಬ್ಬ ಅಧ್ಯಕ್ಷ ಸೇರಿದಂತೆ ನಾಲ್ವರು ಸದಸ್ಯರನ್ನು ಒಳಗೊಂಡಿದ್ದು, ರಾಷ್ಟ್ರಪತಿಯು ಅವರನ್ನು ನೇಮಕ ಮಾಡುತ್ತಾರೆ. ಹಣಕಾಸು ಆಯೋಗ (ವಿವಿಧ ನಿಬಂಧನೆಗಳು) ಕಾಯ್ದೆ–1951 ಹಣಕಾಸು ಆಯೋಗದ ಅಧ್ಯಕ್ಷರ ಮತ್ತು ಸದಸ್ಯರ ಅರ್ಹತೆಗಳನ್ನು ನಿಗದಿಪಡಿಸುತ್ತದೆ. ಕೇಂದ್ರ ಡಾ.ಅರವಿಂದ ಪನಗಡಿಯಾ ಅಧ್ಯಕ್ಷತೆಯಲ್ಲಿ 2026–31ರ ಅವಧಿಗೆ ಶಿಫಾರಸುಗಳನ್ನು ಮಾಡಲು 16ನೇ ಹಣಕಾಸು ಆಯೋಗವನ್ನು ರಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT