ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ಗುಜರಾತ್‌ ಬಿಜೆಪಿಯ ಜಾತಿ ಪ್ರೀತಿ

Last Updated 20 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಬಿಜೆಪಿಯ ರಾಜಕಾರಣದಲ್ಲಿ ಗುಜರಾತ್‌ಗೆ ಕೇಂದ್ರ ಸ್ಥಾನವಿದೆ. ಆದರೆ, ಈಗ ಗುಜರಾತ್‌ನಲ್ಲಿ ತನ್ನ ಜನಪ್ರಿಯತೆ ಕುಸಿದಿದೆ ಮತ್ತು ಅದಕ್ಕಾಗಿ ಹೆಚ್ಚು ಬೆಲೆ ತೆರಬೇಕಾಗಬಹುದು ಎಂಬುದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಆ ಜನಪ್ರಿಯತೆ ಮರಳಿ ಪಡೆಯಲು ಮತ್ತು ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಏನು ಬೇಕಾದರೂ ಮಾಡುತ್ತದೆ. ಸೆಪ್ಟೆಂಬರ್ 12ರಂದು ಬಿಜೆಪಿಯ ವರಿಷ್ಠರು ಇಂಥದ್ದೇ ಒಂದು ಅಸಾಧಾರಣ ನಿರ್ಧಾರ ಕೈಗೊಂಡರು. ಮುಖ್ಯಮಂತ್ರಿ ವಿಜಯ ರೂಪಾಣಿ ಅವರ ರಾಜೀನಾಮೆ ಪಡೆದರು.

ಮೊದಲ ಬಾರಿ ಶಾಸಕರಾಗಿರುವ ಭೂಪೇಂದ್ರ ಪಟೇಲ್ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು. ನಂತರ, ಆಡಳಿತದ ಅನುಭವವೇ ಇಲ್ಲದ 24 ಮಂದಿ ಸಚಿವರಾಗಿ ಆಯ್ಕೆಯಾದರು. ಈ ಸಂಪುಟ ಸರ್ಜರಿಯನ್ನು ಬಿಜೆಪಿ ‘ಅಭಿನವ ಪ್ರಯೋಗ’ ಎಂದು ಕರೆಯಿತು. ಬಿಜೆಪಿ ಈ ಬದಲಾವಣೆಯನ್ನು ಹೀಗೆ ಆಕರ್ಷಕ ಹೆಸರಿನಿಂದ ಕರೆದಿದ್ದರೂ, ಅನಿಶ್ಚಿತ ಸ್ಥಿತಿಯೇ ಈ ನಡೆಯ ಹಿಂದಿನ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. 27 ವರ್ಷಗಳಿಂದ ಅಧಿಕಾರದಲ್ಲಿರುವ ಪಕ್ಷವು ಈಗ ತೀವ್ರ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ.

2016ರಲ್ಲಿ ಜೈನ ಸಮುದಾಯದ ವಿಜಯ ರೂಪಾಣಿ ಅವರನ್ನು ಮುಖ್ಯಮಂತ್ರಿಯಾಗಿ ಬಿಜೆಪಿ ಆಯ್ಕೆ ಮಾಡಿತ್ತು. ಧಾರ್ಮಿಕ ಅಲ್ಪಸಂಖ್ಯಾತರಾಗಿದ್ದರೂ, ಹೆಚ್ಚು ಪ್ರಭಾವವಿರುವ ಸಮುದಾಯವದು. ಬಿಜೆಪಿಗೇ ಬೆಂಬಲ ನೀಡುತ್ತಿದ್ದ ಪಾಟೀದಾರ್ ಸಮುದಾಯವು ಮೀಸಲಾತಿಗಾಗಿ ಆಗ್ರಹಿಸಿ ಮರುವರ್ಷವೇ ಹೋರಾಟ ನಡೆಸಿತು. ಹಾರ್ದಿಕ್ ಪಟೇಲ್‌ ನೇತೃತ್ವದಲ್ಲಿ ಈ ಹೋರಾಟ ತೀವ್ರತೆ ಪಡೆಯಿತು. ಹಾರ್ದಿಕ್ ಕಾಂಗ್ರೆಸ್‌ ಸೇರಿದರು. ಹಿಂದುಳಿದ ವರ್ಗಗಳ ನಾಯಕ ಅಲ್ಪೆಶ್ ಠಾಕೂರ್‌ ಸಹ ಕಾಂಗ್ರೆಸ್ ಸೇರಿದರು. ದಲಿತ ನಾಯಕ ಜಿಗ್ನೇಶ್ ಮೆವಾನಿ ಕಾಂಗ್ರೆಸ್ ಬೆಂಬಲದೊಂದಿಗೆ ಚುನಾವಣೆ ಎದುರಿಸಿದರು. 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಬಿಜೆಪಿಗೆ ತೀವ್ರ ಪೈಪೋಟಿ ನೀಡಿತು. ಬಿಜೆಪಿ ಪ್ರಯಾಸದ ಗೆಲುವು ಸಾಧಿಸಿತು.

ಚುನಾವಣೆಗೆ ಇನ್ನೂ 14 ತಿಂಗಳು ಬಾಕಿ ಇರುವಾಗ, ಮುಖ್ಯಮಂತ್ರಿ ಮತ್ತು ಇಡೀ ಸಂಪುಟವನ್ನು ಬಿಜೆಪಿ ಬದಲಿಸಿದೆ. ಬಿಜೆಪಿಯ ಈ ನೂತನ ಸಂಪುಟವನ್ನು ಗಮನಿಸಿದರೆ, ಪಕ್ಷವು ಈಗ ಜಾತಿಗಳ ಓಲೈಕೆಗೆ ಮುಂದಾಗಿರುವುದು ಗೊತ್ತಾ ಗುತ್ತದೆ. ಚುನಾವಣೆ ಗೆಲ್ಲಲು ಈ ತಂತ್ರ ಬಿಟ್ಟರೆ, ಬಿಜೆಪಿಗೆ ಬೇರೆ ದಾರಿಯಿಲ್ಲ. ಅಭಿವೃದ್ಧಿ ಮಂತ್ರವನ್ನು ಪಠಿಸಿ, ಚುನಾವಣೆ ಎದುರಿಸುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ. ಗುಜರಾತ್ ಅಭಿವೃದ್ಧಿ ಹೊಂದಿದ ರಾಜ್ಯ ಮತ್ತು ಅಭಿವೃದ್ಧಿಯಲ್ಲಿ ಗುಜರಾತ್ ಮಾದರಿ ಎಂಬ ಪರಿಕಲ್ಪನೆಗಳನ್ನು ಬಿಜೆಪಿ ಜನರ ಮುಂದೆ ಇರಿಸಿದೆ. ಈವರೆಗೆ ನಡೆಸಿದಂತೆ ಹಿಂದೂ ಮತದಾರರ ಧ್ರುವೀಕರಣ ಈ ಚುನಾವಣೆಯಲ್ಲಿ ಸಾಧ್ಯವಿಲ್ಲ. ಈಗ ಜಾತಿ ರಾಜಕಾರಣ ಮಾಡದೆ ಬಿಜೆಪಿಗೆ ಬೇರೆ ದಾರಿಯಿಲ್ಲ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಮುಖ್ಯಮಂತ್ರಿಯೂ ಸೇರಿ ಪಾಟೀದಾರ್ ಸಮುದಾಯದ 7 ಜನರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಬಿಜೆಪಿಯಿಂದ ದೂರ ಸರಿದಿರುವ ಮತ್ತು ಬಿಜೆಪಿ ವಿರುದ್ಧ ತೀವ್ರ ಅಸಮಾಧಾನಗೊಂಡಿರುವ ಈ ಸಮುದಾಯಕ್ಕೆ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ದೊರೆತಿದೆ. 2017ರ ಚುನಾವಣೆಯಲ್ಲಿ ಬಿಜೆಪಿಯ ಕೈಬಿಟ್ಟಿದ್ದ ಪರಿಶಿಷ್ಟ ಪಂಗಡಕ್ಕೆ ನೂತನ ಸಂಪುಟದಲ್ಲಿ ನಾಲ್ಕು ಸ್ಥಾನ ನೀಡಲಾಗಿದೆ.

ರಿಮೋಟ್‌ ಕಂಟ್ರೋಲ್‌ ಮುಖ್ಯಮಂತ್ರಿ, ಕೋವಿಡ್‌ ನಿರ್ವಹಣೆಯಲ್ಲಿ ವಿಫಲರಾದ ಮುಖ್ಯಮಂತ್ರಿ ಎಂದು ಕಾರಣ ಒಡ್ಡಿ ರೂಪಾಣಿ ಅವರ ರಾಜೀನಾಮೆ ಪಡೆಯಲಾಗಿದೆ. ಹೊಸ ಮುಖ್ಯಮಂತ್ರಿ ಮತ್ತು ಸಚಿವರು, ಚುನಾವಣೆ ಎದುರಿಸುವಲ್ಲಿ ಪಕ್ಷಕ್ಕೆ ಶಕ್ತಿ ತುಂಬಲಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ ಪಕ್ಷದ ಮುಖಂಡರು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಈವರೆಗೆ ಯಾರೂ ಮಾಡದೇ ಇರುವುದನ್ನು, ಪಕ್ಷದ ಈಗಿನ ನಾಯಕರು ಮಾಡಿದ್ದಾರೆ.ಇಡೀ ಸಚಿವ ಸಂಪುಟವನ್ನು ಹೇಗೆ ಕೈಬಿಡಲು ಸಾಧ್ಯ? ಆಡಳಿತ ವಿರೋಧಿ ಅಲೆಯನ್ನು ಎದುರಿಸಲು, ಅಂತಹ ನಾಯಕರಿಗೆ ಟಿಕೆಟ್ ನಿರಾಕರಿಸಬಹುದಿತ್ತು. ಆದರೆ ಏನೂ ಗೊತ್ತಿಲ್ಲದ ಶಾಸಕರ ಗುಂಪನ್ನು ಸಚಿವರನ್ನಾಗಿ ಮಾಡಲಾಗಿದೆ. ಅವರಲ್ಲಿ 10 ಮಂದಿ ಶಾಲಾ ಶಿಕ್ಷಣವನ್ನೂ ಪೂರ್ಣ ಗೊಳಿಸಿಲ್ಲ. ಇದು ನಿರಂಕುಶ ಪ್ರಭುತ್ವದ ಸೂಚನೆಯಷ್ಟೆ’ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಟೀಕಿಸಿದ್ದಾರೆ.

ತಂಡ–ಸಿದ್ಧತೆ ಇಲ್ಲದ ಕಾಂಗ್ರೆಸ್‌
2017ರ ವಿಧಾನಸಭಾ ಚುನಾವಣೆಯಲ್ಲಿ ಹಾರ್ದಿಕ್‌ ಪಟೇಲ್‌, ಅಲ್ಪೆಶ್‌ ಠಾಕೂರ್‌ ಹಾಗೂ ಜಿಗ್ನೇಶ್ ಮೆವಾನಿ ಅವರ ಸಹಕಾರದಿಂದ ಕಾಂಗ್ರೆಸ್‌ ಪಕ್ಷವು ಬಿಜೆಪಿಯನ್ನು ಬಹುತೇಕ ಸೋಲಿಸಿದಂತೆಯೇ ಆಗಿತ್ತು.ಈ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನಗಳಲ್ಲಿ ಗೆದ್ದಿದ್ದರೆ, ಕಾಂಗ್ರೆಸ್‌ 77 ಸ್ಥಾನಗಳಲ್ಲಿ ಜಯ ಗಳಿಸಿತ್ತು ಹಾಗೂ ಮಿತ್ರ ಪಕ್ಷಗಳು ಮೂರು ಸ್ಥಾನಗಳನ್ನು ಗೆದ್ದಿದ್ದವು.

ಆದರೆ, ನಂತರದಲ್ಲಿ ಎಂಟು ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದರಿಂದ ಕಾಂಗ್ರೆಸ್‌ ಶಾಸಕರ ಸಂಖ್ಯೆ ಕುಸಿಯಿತು.

ಇದರೊಂದಿಗೆ, ಬಿಜೆಪಿಯು ಈ ವರ್ಷದ ಆರಂಭದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಹೇಳಹೆಸರಿಲ್ಲದಂತೆ ಮಾಡಿತು. ಎಲ್ಲ 31 ಜಿಲ್ಲಾ ಪಂಚಾಯಿತಿಗಳಲ್ಲೂ ಗೆಲುವು ಸಾಧಿಸಿತು. 231 ತಾಲ್ಲೂಕು ಪಂಚಾಯಿತಿಗಳ ಪೈಕಿ 196ರಲ್ಲಿ ಹಾಗೂ 81 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 74ರಲ್ಲಿ ಗೆದ್ದಿತ್ತು. ಈ ಫಲಿತಾಂಶವು, ಗುಜರಾತ್‌ನ ಗ್ರಾಮೀಣ ಭಾಗದಲ್ಲಿ ಇದ್ದ ಕಾಂಗ್ರೆಸ್‌ ಪ್ರಾಬಲ್ಯ ಕೊಚ್ಚಿಹೋಗಿದ್ದನ್ನು ಸಾಬೀತುಪಡಿಸಿತು.

ತನ್ನವರನ್ನೆಲ್ಲ ತಂಡವಾಗಿ ಒಗ್ಗೂಡಿಸಿ ಕರೆದೊಯ್ಯುವುದೇ ಕಾಂಗ್ರೆಸ್‌ ಪಕ್ಷಕ್ಕೆ ದೊಡ್ಡ ಸವಾಲಾಗಿದೆ. ಕಳೆದ ವಿಧಾನಸಭೆ ಚುನಾವಣೆ ಮುಗಿದ ಸ್ವಲ್ಪ ದಿನಗಳ ನಂತರದಲ್ಲೇ ಶಾಸಕ ಅಲ್ಪೆಶ್‌ ಠಾಕೂರ್‌ ಬಿಜೆಪಿ ಸೇರ್ಪಡೆಯಾದರು. ಹಾರ್ದಿಕ್‌ ಪಟೇಲ್‌ ಅವರಿಗೆ ಗುಜರಾತ್‌ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಸ್ಥಾನ ನೀಡಲಾಗಿದೆಯಾದರೂ, ಪಕ್ಷದಲ್ಲಿರುವವರು ಇನ್ನೂ ಅವರನ್ನು ಒಪ್ಪಿಕೊಂಡಿಲ್ಲ. ಇನ್ನು, ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿರುವ ಶಾಸಕ ಜಿಗ್ನೇಶ್‌ ಮೆವಾನಿಯನ್ನು ಪಕ್ಷಕ್ಕೆ ಕರೆತರುವ ಪ್ರಯತ್ನಗಳು ಮುಂದುವರಿದಿವೆ.

ತಲೆ ಎತ್ತಿದ ಎಎ‍ಪಿ
ಅರವಿಂದ ಕೇಜ್ರಿವಾಲ್‌ ಅವರ ಆಮ್ ಆದ್ಮಿ ಪಕ್ಷವು (ಎಎಪಿ) ಗುಜರಾತ್‌ ಸ್ಥಳೀಯ ಚುನಾವಣೆಗಳಲ್ಲಿ ಗಮನಾರ್ಹ ಸಾಧನೆ ತೋರಿದೆ. ತನ್ನ ಮೊದಲ ಪ್ರಯತ್ನದಲ್ಲೇ ಸೂರತ್‌ನ ನಗರ ಪಾಲಿಕೆ ಚುನಾವಣೆ ಯಲ್ಲಿ 27 ಸ್ಥಾನಗಳನ್ನು ಗೆದ್ದಿರುವ ಎಎಪಿ, ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ 41 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೂ ಪಕ್ಷಗಳಿಗೆ ಸ್ಪರ್ಧೆ ಒಡ್ಡಿದೆ.

ಪಾಟೀದಾರ್‌ ಸಮುದಾಯದ ಗೋಪಾಲ್‌ ಇಟಾಲಿಯಾ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ, ಎರಡೂ ಪಕ್ಷಗಳ ಯೋಜನೆಯನ್ನು ಬುಡಮೇಲು ಮಾಡಲಿದೆ ಎನ್ನಲಾಗುತ್ತಿದೆ.

ಇದಲ್ಲದೇ ಪಾಟೀದಾರ್‌ ಸಮುದಾಯಕ್ಕೆ ಸೇರಿದ ಪತ್ರಕರ್ತ ಇಸುದಾನ್‌ ಗಧ್ವಿ, ಸೂರತ್‌ನ ಪ್ರಮುಖ ಉದ್ಯಮಿ ಮಹೇಶ್‌ ಸಾವನಿ ಹಾಗೂ ರೈತ ಹೋರಾಟಗಾರ ಸಾಗರ್‌ ರಾಬರಿ ಅವರನ್ನು ಇತ್ತೀಚೆಗಷ್ಟೇ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಆಡಳಿತ ವಿರೋಧಿ ಅಲೆಯು ನಿಶ್ಚಿತವಾಗಿಯೂ ಬಿಜೆಪಿಗೆ ಹೊಡೆತ ನೀಡಬಹುದು; ಸಿದ್ಧತೆ ಇಲ್ಲದೇ ಇರುವುದು ಕಾಂಗ್ರೆಸ್‌ಗೆ ಮುಳುವಾಗಲಿದೆ. ಹೀಗಾಗಿ, ಈ ಅವಕಾಶವನ್ನು ಬಳಸಿಕೊಳ್ಳಲು ಎಎಪಿ ಕಾಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT