ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಬಳ್ಳಾರಿಯಲ್ಲಿ 550 ಎಕರೆ ಅರಣ್ಯ ಭೂಮಿಯನ್ನು ಮಂಜೂರು ಮಾಡಿದ ಪ್ರಕರಣದ ಸಂಬಂಧ ಲೋಕಾಯುಕ್ತ ಎಸ್‌ಐಟಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಇತ್ತೀಚೆಗೆ ಆರೋಪಪಟ್ಟಿ ಸಲ್ಲಿಸಿದೆ. ಈ ಪ್ರಕರಣದಲ್ಲಿ ವಿಚಾರಣೆ ನಡೆಸಲು ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಮತ್ತೆ ಪತ್ರ ಬರೆದಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಕಂಪನಿಗೆ ಜಮೀನು ಮಂಜೂರು ಮಾಡುವಲ್ಲಿ ಏನೆಲ್ಲಾ ಅಕ್ರಮ ನಡೆದಿತ್ತು ಎಂಬುದರ ವಿವರಗಳು ಲೋಕಾಯುಕ್ತ ವರದಿಯಲ್ಲಿ ಇವೆ
ನೋಂದಣಿಯೇ ಆಗದ ಕಂಪನಿಗೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ 550 ಎಕರೆ ಜಮೀನನ್ನು ಗಣಿಗಾರಿಕೆಗೆ ಮಂಜೂರು ಮಾಡಿದ್ದರು ಎಂದು ಲೋಕಾಯುಕ್ತ ವರದಿಯಲ್ಲಿನ ಅಂಶಗಳು ಹೇಳುತ್ತವೆ. ವರದಿ ಸಿದ್ದಪಡಿಸಿದ್ದ ಯು.ವಿ.ಸಿಂಗ್ ಅವರು ಈ ಮಂಜೂರಾತಿಗೆ ಸಂಬಂಧಿಸಿದ ಪ್ರತಿ ದಾಖಲೆಯನ್ನೂ ಸೇರಿಸಿ ವರದಿ ಸಿದ್ಧಪಡಿಸಿದ್ದರು. ಈ ಪ್ರಕರಣದಲ್ಲಿ ಸಾಲು–ಸಾಲು ಅಕ್ರಮ–ಅವ್ಯವಹಾರಗಳು ನಡೆದಿವೆ ಎಂಬುದರತ್ತ ಆ ವರದಿ ಬೊಟ್ಟು ಮಾಡಿ ತೋರಿಸುತ್ತದೆ. ಆ ವರದಿಯನ್ನು ಆಧರಿಸಿ ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ನೀಡಿದ್ದ ವರದಿಯಲ್ಲೂ ಈ ಅಂಶಗಳನ್ನು ಉಲ್ಲೇಖಿಸಲಾಗಿದೆ.
ಮಹಾರಾಷ್ಟ್ರದ ಎಸ್.ವಿ.ಸಕ್ರೆ ಅವರು ಬಳ್ಳಾರಿಯಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ಗಣಿಗಾರಿಕೆಗೆ ಜಮೀನು ಮಂಜೂರು ಮಾಡುವಂತೆ 2006ರ ಏಪ್ರಿಲ್ 17ರಂದು ಅರ್ಜಿ ಸಲ್ಲಿಸಿದ್ದರು. ಅದಿರು ಗಣಿಗಾರಿಕೆ ನಮ್ಮ ಮುಖ್ಯ ವಹಿವಾಟು ಎಂದು ಕಂಪನಿ ಹೇಳಿಕೊಂಡಿದ್ದರೂ ವಾಸ್ತವದಲ್ಲಿ ಆ ಕಂಪನಿ ಯಾವುದೇ ಚಟುವಟಿಕೆ ನಡೆಸುತ್ತಿರಲಿಲ್ಲ. ಈ ಅರ್ಜಿ ಸಂಬಂಧ ಕ್ರಮ ಕೈಗೊಳ್ಳುವಂತೆ ಖನಿಜ ಮತ್ತು ಗಣಿ ನಿರ್ದೇಶನಾಲಯವು ಸೂಚನೆ ನೀಡಿದ್ದರೂ ರಾಜ್ಯ ಸರ್ಕಾರದ ಆಕ್ಷೇಪದ ಕಾರಣ ಅರ್ಜಿಯನ್ನು ಸುಮಾರು ಒಂದು ವರ್ಷದವರೆಗೆ ತಡೆಹಿಡಿಯಲಾಗಿತ್ತು. ಇಂತಹ ಸುಮಾರು 28 ಅರ್ಜಿಗಳು ಇದ್ದು, ರಾಜ್ಯ ಸರ್ಕಾರವು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಖನಿಜ ಮತ್ತು ಗಣಿ ನಿರ್ದೇಶಕರ ಕಚೇರಿಯಿಂದ ರಾಜ್ಯ ಸರ್ಕಾರಕ್ಕೆ ಕಡತಗಳನ್ನು ಕಳುಹಿಸಲಾಗಿತ್ತು.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಕಡತವು ಅವರ ಮುಂದೆ ಬಂದಿತ್ತು. ಅವರು ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ 550 ಎಕರೆ ಮಂಜೂರು ಮಾಡುವಂತೆ ಷರಾ ಬರೆದು, ಸಹಿ ಹಾಕಿದ್ದಾರೆ ಎಂದು ಲೋಕಾಯುಕ್ತ ವರದಿಯಲ್ಲಿ ವಿವರಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಕಡತವು ಯಾವ ದಿನ, ಯಾವ ಇಲಾಖೆಗೆ ಹೋಗಿತ್ತು, ಯಾರು ಸಹಿ ಮಾಡಿದರು ಎಂಬುದರ ಸಂಪೂರ್ಣ ದಾಖಲೆಗಳನ್ನು ವರದಿಯಲ್ಲಿ ಲಗತ್ತಿಸಲಾಗಿದೆ. ಎಚ್.ಡಿ.ಕುಮಾರಸ್ವಾಮಿ ಅವರು 2007ರ ಅಕ್ಟೋಬರ್ 5ರಂದು ಷರಾ ಬರೆದು, ಸಹಿ ಮಾಡಿದ್ದಾರೆ ಎಂದು ಹೇಳಲಾದ ಕಡತದ ಪ್ರತಿಯೂ ಈ ವರದಿಯಲ್ಲಿ ಇದೆ.
ಮುಖ್ಯಮಂತ್ರಿ ಸಹಿ ಮಾಡಿದ ಕಡತವನ್ನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿಗೆ ಕಳುಹಿಸಲಾಗಿತ್ತು. ಅವರು ಅದನ್ನು 2007ರ ಅಕ್ಟೋಬರ್ 6ರಂದು ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಿದ್ದರು. ಇಲಾಖೆಯು ಕೇಂದ್ರ ಸರ್ಕಾರಕ್ಕೆ ಬರೆದಿದ್ದ ಪತ್ರದಲ್ಲಿ, ‘ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಜಮೀನು ಮಂಜೂರು ಮಾಡಲು ಮುಖ್ಯಮಂತ್ರಿ ಆದೇಶಿಸಿರುತ್ತಾರೆ’ ಎಂದು ಉಲ್ಲೇಖಿಸಲಾಗಿತ್ತು. ಯು.ವಿ.ಸಿಂಗ್ ಅವರು ಸಿದ್ದಪಡಿಸಿದ್ದ ವರದಿಯಲ್ಲಿ ಈ ಪತ್ರವನ್ನು ಲಗತ್ತಿಸಲಾಗಿದೆ. 2010-11ರಲ್ಲಿ ಸಲ್ಲಿಸಲಾದ ಲೋಕಾಯುಕ್ತ ವರದಿಯಲ್ಲೂ ಈ ಅಂಶಗಳನ್ನು ಸ್ಪಷ್ಟವಾಗಿ ಹೇಳಲಾಗಿದೆ.
ಒಂದೇ ದಿನದಲ್ಲಿ ಮಂಜೂರು
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ 2007ರಲ್ಲಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಸಂಬಂಧಿಸಿದ ಕಡತವು ಮುಖ್ಯಮಂತ್ರಿ ಕಚೇರಿಗೆ ಬಂದಿತ್ತು. 2007ರ ಅಕ್ಟೋಬರ್ 10ರಂದು ಮುಖ್ಯಮಂತ್ರಿಯ ಅಂದಿನ ಕಾರ್ಯದರ್ಶಿಯಾಗಿದ್ದ ಡಿ.ವಿ.ಪ್ರಸಾದ್ ಅವರು ಈ ಕಡತವನ್ನು ‘ಕ್ರಮವಹಿಸಿ’ ಎಂದು ಸೂಚಿಸಿ ಸಹಿ ಮಾಡಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿಗೆ ಕಳುಹಿಸಿದ್ದರು ಎಂದು ಯು.ವಿ.ಸಿಂಗ್ ತಮ್ಮ ವರದಿಯಲ್ಲಿ ವಿವರಿಸಿದ್ದಾರೆ.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಬಂದ ಕಡತ ಮತ್ತು ನಿರ್ದೇಶನ ಪತ್ರವನ್ನು ಕೇಸ್ ವರ್ಕರ್ ಅದೇ ದಿನ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗೆ ಕಳುಹಿಸಿದ್ದರು. ಕಡತವನ್ನು ಪರಿಶೀಲಿಸಿದ್ದ ಹೆಚ್ಚುವರಿ ಕಾರ್ಯದರ್ಶಿ ತಕ್ಷಣವೇ ಅದನ್ನು ಕಾರ್ಯದರ್ಶಿಗೆ ತಲುಪಿಸಿದ್ದರು. ಕಡತಕ್ಕೆ ಸಂಬಂಧಿಸಿದಂತೆ ಅನುಮೋದನೆ ನೀಡಿದ ಕಾರ್ಯದರ್ಶಿಯು ಅದೇ ದಿನ ಮುಖ್ಯಮಂತ್ರಿಯ ಕಾರ್ಯದರ್ಶಿಗೆ ಕಡತವನ್ನು ರವಾನಿಸಿದ್ದರು. ಹೀಗೆ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಸಂಬಂಧಿಸಿದ ಕಡತವು ಒಂದೇ ದಿನ ಮುಖ್ಯಮಂತ್ರಿ ಕಚೇರಿಯಿಂದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಹಾಗೂ ಅಲ್ಲಿಂದ ವಾಪಸ್ ಮುಖ್ಯಮಂತ್ರಿ ಕಚೇರಿಗೆ ಬಂದಿತ್ತು ಎಂದು ಲೋಕಾಯುಕ್ತದ ವರದಿಯಲ್ಲಿ ವಿವರಿಸಲಾಗಿದೆ.
ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಬರೆಯಲಾಗಿತ್ತು ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಲಾದ ಪತ್ರ – ಲೋಕಾಯುಕ್ತ ವರದಿ ಚಿತ್ರ
ಅದೇ ದಿನವೇ ಕಡತವನ್ನು ಮುಖ್ಯಮಂತ್ರಿಯವರ ಎದುರು ಇರಿಸಲಾಗಿತ್ತು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶ್ರೀ ಸಾಯಿ ವೆಂಕಟೆಶ್ವರ ಮಿನರಲ್ಸ್‌ಗೆ 550 ಎಕರೆ ಮಂಜೂರು ಮಾಡಲಾಗಿದೆ ಎಂದು ಷರಾ ಬರೆದು ಸಹಿ ಮಾಡಿದ್ದರು.
‘ಕಡತವನ್ನು ಪರಿಶೀಲಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಎನ್‌ಇಬಿ ರೇಂಜ್‌ನ ಭನಿಹಳ್ಳಿಯ ತಿಮ್ಮಪ್ಪಗುಡಿ ಸಮೀಪದ ಜೋಗದಲ್ಲಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ 550 ಎಕರೆ ಗಣಿಯನ್ನು ಮಂಜೂರು ಮಾಡಿದ್ದೇನೆ’ ಎಂದು ಕಡತದ 7ನೇ ಪುಟ ಮತ್ತು 16ನೇ ಪ್ಯಾರಾದ ಬಳಿ ಕುಮಾರಸ್ವಾಮಿ ಷರಾ ಬರೆದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮಂಜೂರಿನಲ್ಲಿ ಹತ್ತಾರು ಲೋಪ
ನೋಂದಣಿಯೇ ಆಗದ ಕಂಪನಿಗೆ ಗಣಿಗಾರಿಕೆಗೆ ಅರಣ್ಯ ಜಮೀನು ಮಂಜೂರು ಮಾಡಿದ್ದಲ್ಲದೇ ಮಂಜೂರಾತಿ ವೇಳೆ ಹಲವು ಅಕ್ರಮಗಳೂ ಆಗಿವೆ. ಕಂಪನಿಗೆ ಗಣಿ ಜಮೀನನ್ನು ಮಂಜೂರು ಮಾಡದೇ ಅರ್ಜಿಯನ್ನು ತಿರಸ್ಕರಿಸಲು ಸರ್ಕಾರದ ಮುಂದೆ ಹಲವು ಕಾರಣಗಳು ಇದ್ದವು. ಆದರೆ ಅವೆಲ್ಲವನ್ನೂ ಕಡೆಗಣಿಸಿ ಅಕ್ರಮವಾಗಿ ಗಣಿಯನ್ನು ಮಂಜೂರು ಮಾಡಿದ್ದು ಹಲವು ಲೋಪಗಳು ಆಗಿವೆ ಎಂದು ಲೋಕಾಯುಕ್ತ ತನ್ನ ವರದಿಯಲ್ಲಿ ಹೇಳಿತ್ತು. ಅಂತಹ ಹಲವು ಲೋಪಗಳನ್ನು ವರದಿಯಲ್ಲಿ ಪಟ್ಟಿ ಮಾಡಲಾಗಿತ್ತು.
ಕಂಪನಿಯು ತನ್ನ ಕಚೇರಿ ಇದೆ ಎಂದು ನೀಡಿರುವ ವಿಳಾಸದಲ್ಲಿ ಕಚೇರಿಗಳು ಇರಲಿಲ್ಲ. ವಾಸ್ತವದಲ್ಲಿ ಕಂಪನಿ ಅಸ್ತಿತ್ವದಲ್ಲೇ ಇರಲಿಲ್ಲ
ಕಂಪನಿಗಳಿಗೆ ಗಣಿ ಜಮೀನನ್ನು ಮಂಜೂರು ಮಾಡುವಾಗ ಕೇಂದ್ರ ಸರ್ಕಾರದ ಖನಿಜ ನಿಯಮಗಳನ್ನು ಉಲ್ಲಂಘಿಸಲಾಗಿದೆ
ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪನಿಯು ಈವರೆಗೆ ಗಣಿಗಾರಿಕೆ ನಡೆಸಿದ ಅನುಭವ ಹೊಂದಿಲ್ಲ. ಅಂತಹ ಕಂಪನಿಗೆ ಗಣಿ ಮಂಜೂರು ಮಾಡಲಾಗಿದೆ
ಈ ಕಂಪನಿಯು ಮಹಾರಾಷ್ಟ್ರದಲ್ಲಾಗಲೀ ಕರ್ನಾಟಕದಲ್ಲಾಗಲೀ ನೋಂದಣಿ ಆಗಿಲ್ಲ. ಎರಡೂ ರಾಜ್ಯಗಳಲ್ಲಿ ತೆರಿಗೆ ಸಂಖ್ಯೆ (ಎಂಎಸ್‌ಟಿ ಅಥವಾ ಕೆಎಸ್‌ಟಿ ನಂಬರ್) ಹೊಂದಿಲ್ಲ
ಕಂಪನಿಯು ವ್ಯಾಟ್ ಸಂಖ್ಯೆಯನ್ನೂ ಹೊಂದಿಲ್ಲ
ಕಂಪನಿಯು ದೇಶದ ಎಲ್ಲಿಯೂ ಬ್ಯಾಂಕ್ ಖಾತೆ ಹೊಂದಿಲ್ಲ. ಕಂಪನಿಯು ಆವರೆಗೆ ಗಣಿಗಾರಿಕೆಯಲ್ಲಿ ಯಾವುದೇ ಚಟುವಟಿಕೆ ಮತ್ತು ವಹಿವಾಟು ನಡೆಸದೇ ಇದ್ದ ಕಾರಣಕ್ಕೆ ಅದಕ್ಕೆ ಬ್ಯಾಂಕ್ ಖಾತೆ ತೆರೆಯುವ ಸಂದರ್ಭವೇ ಎದುರಾಗಿಲ್ಲ
ಕುಮಾರಸ್ವಾಮಿ ಅಕ್ರಮ: ‘ಲೋಕಾ’ ವರದಿ
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗಣಿ ಜಮೀನು ಮಂಜೂರಿನಲ್ಲಿ ಅವರು ಅಕ್ರಮ ಎಸಗಿದ್ದಾರೆ ಎಂದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರು.
‘ಈ ಪ್ರಕರಣದಲ್ಲಿ ಹಲವಾರು ಅಕ್ರಮಗಳಾಗಿವೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಪರಿಶೀಲನೆ ನಡೆಸಿ ಅದರಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು. ರಾಜ್ಯದ ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ವಸೂಲಿ ಮಾಡಬೇಕು’ ಎಂದು ವರದಿಯಲ್ಲಿ ಶಿಫಾರಸು ಮಾಡಿದ್ದರು.
ಎಚ್.ಡಿ.ಕೆ ಕುಮಾರಸ್ವಾಮಿ ಬರೆದಿದ್ದಾರೆ ಎನ್ನಲಾದ ಷರಾಗೆ ಸಂಬಂಧಿಸಿದಂತೆ ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಸಿರುವ ದಾಖಲೆಯ ಚಿತ್ರ
‘ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈಗ ಯಾವುದೇ ಹುದ್ದೆಯಲ್ಲಿ ಇಲ್ಲ. ಹೀಗಾಗಿ ಅವರ ಪ್ರಕರಣದಲ್ಲಿ ಯಾವುದೇ ಕ್ರಮಕ್ಕೆ ನಾವು ಶಿಫಾರಸು ಮಾಡುತ್ತಿಲ್ಲ. ಅವರು ಎಸಗಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ’ ಎಂದು ಹೇಳಿದ್ದರು.
ಈ ವರದಿಯ ಆಧಾರದಲ್ಲೇ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಪ್ರಕರಣದಲ್ಲಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ತನಿಖೆ ನಡೆಸುವಂತೆ 2017ರಲ್ಲಿ ಸುಪ್ರೀಂ ಕೋರ್ಟ್ ಲೋಕಾಯುಕ್ತ ಎಸ್‌ಐಟಿಗೆ ಸೂಚನೆ ನೀಡಿತ್ತು.
ಆಧಾರ: ಯು.ವಿ.ಸಿಂಗ್ ವರದಿಯ ಶಿಫಾರಸು ಒಳಗೊಂಡ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗ್ಡೆ ಅವರ ವರದಿ, ಕರ್ನಾಟಕ ವರ್ಸಸ್ ಎಚ್.ಡಿ.ಕುಮಾರಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.