ಡೀಆಕ್ಸಿರೈಬೊನ್ಯೂಕ್ಲಿಯಿಕ್ ಆ್ಯಸಿಡ್ ಎಂಬುದರ ಸಂಕ್ಷಿಪ್ತ ರೂಪ ಡಿಎನ್‌ಎ. ಜೀವಿಗಳ ವರ್ಣತಂತುಗಳಲ್ಲಿರುವ (ಕ್ರೋಮೋಸೋಮ್) ಅತ್ಯಂತ ಸಂಕೀರ್ಣವಾದಂತಹ ಆನುವಂಶೀಯ ರಾಸಾಯನಿಕ ಗುಣಲಕ್ಷಣಗಳನ್ನು ಹೊಂದಿರುವ ಅಣು ಇದು. ವಂಶವಾಹಿಯ ಮುಖ್ಯಭಾಗವಾಗಿರುವ ಡಿಎನ್‌ಎ, ಸುರುಳಿ ಸುತ್ತಿದ ಏಣಿಯ ರೂಪದಲ್ಲಿ ಜೀವಕೋಶದ (ಸೆಲ್) ಕೇಂದ್ರ ಭಾಗದಲ್ಲಿರುತ್ತದೆ. ವ್ಯಕ್ತಿ ಅಥವಾ ಜೀವಿಗಳ ವಂಶಾವಳಿಯ ಮಾಹಿತಿಗಳನ್ನು ತಲೆಮಾರಿನಿಂದ ತಲೆಮಾರಿಗೆ ಇದು ಒಯ್ಯುತ್ತದೆ.
ರಕ್ತ, ವೀರ್ಯ, ಎಂಜಲು, ಮಲ, ಮೂತ್ರ, ಕೂದಲು, ಹಲ್ಲು, ಮೂಳೆ, ಅಂಗಾಂಶ, ಜೀವಕೋಶ, ಬೆರಳಚ್ಚು– ಇವುಗಳ ಪೈಕಿ ಯಾವುದಾದರೊಂದು ಮಾದರಿ ದೊರೆತರೂ ಡಿಎನ್‌ಎ ಪರೀಕ್ಷೆ ನಡೆಸಬಹುದು. ಇವುಗಳ ಜತೆಗೆ, ವ್ಯಕ್ತಿ ಸ್ಪರ್ಶಿಸಿದ ವಸ್ತು, ಸೇದಿದ ಸಿಗರೇಟ್, ಧರಿಸಿದ ಬಟ್ಟೆ, ಕನ್ನಡಕದ ಮೂಲಕವೂ ಕಂಡುಹಿಡಿಯಬಹುದಾಗಿದೆ. ಅತಿ ಸಣ್ಣ ಜೈವಿಕ ಮಾದರಿಯನ್ನು ರಾಸಾಯನಿಕ ಪ್ರಕ್ರಿಯೆ ಮೂಲಕ ಸಂಗ್ರಹಿಸಿ ಡಿಎನ್‌ಎ ಪರೀಕ್ಷೆ ಮಾಡಬಹುದು.