ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ | ಲಕ್ಷದ್ವೀಪ ಪ್ರವಾಸಕ್ಕೆ ಹೊರಟಿರಾ? ಅಲ್ಲಿರುವುದು 176 ಬೆಡ್‌ಗಳು ಮಾತ್ರ!
ಆಳ–ಅಗಲ | ಲಕ್ಷದ್ವೀಪ ಪ್ರವಾಸಕ್ಕೆ ಹೊರಟಿರಾ? ಅಲ್ಲಿರುವುದು 176 ಬೆಡ್‌ಗಳು ಮಾತ್ರ!
ಪ್ರವಾಸೋದ್ಯಮ ಅಭಿವೃದ್ಧಿ ಶಿಫಾರಸುಗಳನ್ನು ಜಾರಿಗೆ ತರದ ಕೇಂದ್ರ ಸರ್ಕಾರ
Published 9 ಜನವರಿ 2024, 20:33 IST
Last Updated 9 ಜನವರಿ 2024, 20:33 IST
ಅಕ್ಷರ ಗಾತ್ರ

ಲಕ್ಷದ್ವೀಪದಲ್ಲಿ ಮಾಲ್ದೀವ್ಸ್‌ಗೆ ಸರಿಸಾಟಿಯಾಗಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬೇಕು ಎನ್ನುವುದು ಕೇಂದ್ರ ಸರ್ಕಾರದ ಕೆಲವು ವರ್ಷಗಳ ಗುರಿ. ಇದಕ್ಕಾಗಿ ನೀತಿ ಆಯೋಗವೂ ಸೇರಿದಂತೆ, ಸರ್ಕಾರ ಕೆಲವು ಪ್ರಯತ್ನಗಳನ್ನು ಆರಂಭಿಸಿದೆ. ಲಕ್ಷದ್ವೀಪ ಸ್ಥಿತಿಗತಿಯನ್ನು ಅವಲೋಕಿಸಲು ಸಮಿತಿಗಳನ್ನು ರಚಿಸಿ ವರದಿಯನ್ನೂ ಕೇಂದ್ರ ಸರ್ಕಾರ ಪಡೆದುಕೊಂಡಿದೆ. ‘ಕಳೆದ ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರವು ಈ ಬಗ್ಗೆ ಕಾರ್ಯಪ್ರವೃತ್ತವಾಗಿದೆ’ ಎಂದು ನೀತಿ ಆಯೋಗ ಹೇಳುತ್ತದೆ. ಇದೇ ಮಾತನ್ನು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ರೂಪಿಸಿದ್ದ ತಜ್ಞರ ಸಮಿತಿಯೊಂದು ಕೂಡ ಹೇಳಿದೆ. ಆದರೆ, ಅದೇ ವರದಿಯಲ್ಲಿ, ‘ಲಕ್ಷದ್ವೀಪ ಆಡಳಿತವು ಪ್ರವಾಸೋದ್ಯಮ ಅಭಿವೃದ್ಧಿಗೆ ಮೊದಲು ನೀಲನಕ್ಷೆಯೊಂದನ್ನು ಸಿದ್ಧಪಡಿಸಿ’ ಎಂದು ಶಿಫಾರಸು ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದಾಗಿನ ಫೋಟೊ ಹಾಗೂ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ದ್ವೀಪದ ಮನೋಹರ ಫೋಟೊಗಳು ಸಾಮಾಜಿಕ ಜಾಲತಾಣಿಗರ ಪ್ರಶಂಸೆಗೆ ಪಾತ್ರವಾಗಿದ್ದವು. ಹಾಗೆಯೆ ಇದು ಮಾಲ್ದೀವ್ಸ್‌ ಹಾಗೂ ಭಾರತದ ಮಧ್ಯೆ ತಿಕ್ಕಾಟಕ್ಕೂ ಕಾರಣವಾಯಿತು. ಮಾಲ್ದೀವ್ಸ್‌ನ ಸಚಿವರ ಹೇಳಿಕೆ ಹಾಗೂ ಆ ದೇಶದ ಚೀನಾ ಪರ ನಿಲುವು ಭಾರತದಾದ್ಯಂತ ಟೀಕೆಗೆ ಗುರಿಯಾಯಿತು. ಇದೇ ಕಾರಣಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ‘ಬಾಯ್ಕಾಟ್‌ಮಾಲ್ದೀವ್ಸ್‌’ ಎಂದೂ ‘ನಮ್ಮದೇ ದೇಶದ, ಮಾಲ್ದೀವ್ಸ್‌ನಂತೆಯೇ ಸಮುದ್ರವಿರುವ ಲಕ್ಷದ್ವೀಪಕ್ಕೆ ಭೇಟಿ ನೀಡೋಣ’ ಎಂದೂ ಅಭಿಪ್ರಾಯಗಳು ಬರತೊಡಗಿದವು. ಲಕ್ಷದ್ವೀಪಕ್ಕೆ ಹೋಗುವುದೇನೊ ಸರಿ. ಆದರೆ, ‘ಇಲ್ಲಿ ಪ್ರವಾಸಿಗರಿಗಾಗಿ ಮೂಲಸೌಕರ್ಯಗಳೇ ಇಲ್ಲ’ ಎಂದು ಸ್ವತಃ ಲಕ್ಷದ್ವೀಪ ಆಡಳಿತವೇ ಹೇಳುತ್ತಿದೆ.

ಪ್ರವಾಸೋದ್ಯಮ ಬೆಳೆಯಬೇಕು ಎಂದಾದರೆ ಸಂಪರ್ಕ, ಉಳಿದುಕೊಳ್ಳುವ ವ್ಯವಸ್ಥೆ, ಕುಡಿಯುವ ನೀರು, ಅಂತರ್ಜಾಲ... ಹೀಗೆ ಅನೇಕ ಮೂಲಸೌಕರ್ಯಗಳು ಬೇಕಾಗುತ್ತವೆ. ಆದರೆ, ಲಕ್ಷದ್ವೀಪದಲ್ಲಿ ಈ ಯಾವ ವ್ಯವಸ್ಥೆಯೂ ಇಲ್ಲ. ದಿನವೊಂದರಲ್ಲಿ ಜನರಿಗೆ ಅಗತ್ಯವಾಗಿ ಬೇಕಿರುವ ವಸ್ತುಗಳು, ದಿನಸಿ ಸೇರಿದಂತೆ ಎಲ್ಲ ವಸ್ತುಗಳ ಲಭ್ಯತೆಯು ನಿರಂತರವಾಗಿಲ್ಲ ಎಂದು ಲಕ್ಷದ್ವೀಪ ಆಡಳಿತವು ತಜ್ಞರ ಸಮಿತಿಗೆ ತಿಳಿಸಿದೆ. ‘ಪರಿಸರ ಹಾಗೂ ಭೌಗೋಳಿಕ ಕಾರಣಗಳಿಗಾಗಿ ಲಕ್ಷದ್ವೀಪವನ್ನು ಪ್ರವಾಸೋದ್ಯಮ ಕೇಂದ್ರವನ್ನವಾಗಿಸುವುದು ಕಷ್ಟಸಾಧ್ಯ’ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಬರುವ ಪ್ರವಾಸಿಗರು ಉಳಿದುಕೊಳ್ಳಲು ಲಕ್ಷದ್ವೀಪದಲ್ಲಿ ಸೌಲಭ್ಯಗಳಿಲ್ಲ. ‘ಇಡೀ ದ್ವೀಪಸಮೂಹದಲ್ಲಿ ಉಳಿದುಕೊಳ್ಳಲು ಒಟ್ಟು 176 ಹಾಸಿಗೆಗಳು ಮಾತ್ರ ಇವೆ. ಇದರಲ್ಲಿ 52 ಬೆಡ್‌ ಸೌಲಭ್ಯ ಇರುವುದು ಟೆಂಟ್‌ಗಳಲ್ಲಿ’ ಎನ್ನುತ್ತದೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ವರದಿ. ಹಡಗಿನಲ್ಲಿ ಪ್ರವಾಸ ಕೈಗೊಳ್ಳುವ ಪ್ರವಾಸಿಗರು ಬೆಳಿಗ್ಗೆ ದ್ವೀಪಗಳಿಗೆ ಭೇಟಿ ನೀಡಿ ರಾತ್ರಿ ವೇಳೆಗೆ ವಾಪಸು ಬರಬೇಕು. ಬೀಚ್‌ ವಿಲ್ಲಾ ಹಾಗೂ ರೆಸಾರ್ಟ್‌ಗಳನ್ನು ನಿರ್ಮಾಣ ಮಾಡುವ ಕುರಿತು ಲಕ್ಷದ್ವೀಪ ಆಡಳಿತವು ಹಲವು ಪ್ರಸ್ತಾವಗಳನ್ನು ಇರಿಸಿದೆ. ಜೊತೆಗೆ, ಇಂಥ ವಿಲ್ಲಾಗಳ ನಿರ್ಮಾಣಕ್ಕಾಗಿ ಬಿಡ್‌ಗಳನ್ನು ಕರೆಯಲಾಗಿದೆ. ಎರಡು ದ್ವೀಪಗಳಲ್ಲಿ ಬೀಚ್‌ ವಿಲ್ಲಾಗಳನ್ನು ಅಭಿವೃದ್ಧಿಪಡಿಸಿ, ನಡೆಸಲು ಇಎಚ್‌ಸಿಎಲ್‌ ಕಂಪನಿಗೆ ಗುತ್ತಿಗೆ ದೊರೆತಿದೆ.

ಕುಡಿಯುವ ನೀರಿನ ಸಮಸ್ಯೆಯೂ ಇಲ್ಲಿ ಅಧಿಕವಾಗಿಯೇ ಇದೆ. ಕವರಟ್ಟಿ ದ್ವೀಪದಲ್ಲಿ ಮಾತ್ರವೇ ನೀರು ಸಂಸ್ಕರಣಾ ಘಟಕ ಇದೆ. ಇಲ್ಲಿ ದಿನವೊಂದಕ್ಕೆ ಒಂದು ಲಕ್ಷ ಲೀಟರ್‌ ನೀರನ್ನು ಶುದ್ಧೀಕರಿಸಲಾಗುತ್ತದೆ. ಲಕ್ಷದ್ವೀಪದ ಜನರಿಗೆ ಮೂರು ದಿನಗಳಿಗೆ ಒಮ್ಮೆ ಇಲ್ಲಿಂದ ನೀರನ್ನು ಪೂರೈಸಲಾಗುತ್ತದೆ. ಬಂಗಾರಂ ದ್ವೀಪದಲ್ಲಿ ಆರ್‌.ಒ ಘಟಕ ಇದೆ. ಇದು ಇತ್ತೀಚೆಗಷ್ಟೇ ಕಾರ್ಯ ಆರಂಭಿಸಿದೆ. ಇಲ್ಲಿ ಒಂದು ದಿನಕ್ಕೆ 50 ಸಾವಿರ ಲೀಟರ್‌ ನೀರನ್ನು ಶುದ್ಧೀಕರಿಸಲಾಗುತ್ತದೆ. ಈ ನೀರು ಪ್ರವಾಸಿಗರಿಗೆ ಮಾತ್ರ ಮೀಸಲು.

ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸಬೇಕು ಎಂದಾದರೆ, ಪ್ರವಾಸಿಗರು ಬರುವುದೇ ಬಹಳ ಮುಖ್ಯವಾಗುತ್ತದೆ. ಆದರೆ, ಲಕ್ಷದ್ವೀಪಕ್ಕೆ ಕಳೆದ ಹತ್ತು ವರ್ಷಗಳಲ್ಲಿ ಅಂದರೆ, 2012–13ರಿಂದ 2021–22ರವರೆಗೆ 78,993 ಜನರಷ್ಟೇ ಭೇಟಿ ನೀಡಿದ್ದಾರೆ. ಮಾಲ್ದೀವ್ಸ್‌ಗೆ ವರ್ಷವೊಂದಲ್ಲಿ ಸರಾಸರಿ 13 ಲಕ್ಷ ಜನರು ಭೇಟಿ ನೀಡುತ್ತಾರೆ.

2014-15ರಲ್ಲಿ ‘ಸ್ವದೇಶ್‌ ದರ್ಶನ್‌’ ಎನ್ನುವ ಯೋಜನೆಯೊಂದನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿತ್ತು. ಪ್ರವಾಸಿತಾಣಗಳ ಮೂಲಸೌಕರ್ಯ ಅಭಿವೃದ್ಧಿ ಸೇರಿ, ಪ್ರದೇಶವೊಂದನ್ನು ಪ್ರವಾಸಿ ಕೇಂದ್ರವಾಗಿಸಲೆಂದೇ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಈ ಯೋಜನೆ ಅಡಿಯಲ್ಲಿ ಲಕ್ಷದ್ವೀಪ ಆಡಳಿತವು ಪ್ರಸ್ತಾವವನ್ನು ಸಲ್ಲಿಸಿತ್ತು. ಆದರೆ, ಕೇಂದ್ರ ಸರ್ಕಾರವು ಈ ಪ್ರಸ್ತಾವವನ್ನು ಪರಿಗಣಿಸಿರಲಿಲ್ಲ. ಕೇಂದ್ರ ಸರ್ಕಾರವು 2023ರಲ್ಲಿ ‘ಸ್ವದೇಶ್‌ ದರ್ಶನ್‌ 2.0’ ಯೋಜನೆಯನ್ನು ಜಾರಿಗೆ ತಂದಿದೆ. ರಾಜ್ಯ ಸರ್ಕಾರಗಳಿಂದ ಪ್ರಸ್ತಾವವನ್ನು ಆಹ್ವಾನಿಸಿದೆ. ಲಕ್ಷದ್ವೀಪ ಆಡಳಿತವು ಸಲ್ಲಿಸಿದ್ದ ಪ್ರಸ್ತಾವವನ್ನು ಈ ಯೋಜನೆ ಅಡಿ ಪರಿಗಣಿಸಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವಾಲಯ ಹೇಳಿದೆ.

ಪರಿಸರ ಸೂಕ್ಷ್ಮ ಪ್ರದೇಶ ಮತ್ತು ಸಂರಕ್ಷಿತ ಬುಡಕಟ್ಟು ಎಂದು ಪರಿಗಣಿಸಲಾದ ಜನರ ಸಂರಕ್ಷಣೆಯನ್ನೂ ಒಳಗೊಂಡು ಲಕ್ಷದ್ವೀಪವನ್ನು ಪ್ರವಾಸೋದ್ಯಮ ಕೇಂದ್ರವಾಗಿಸುವ ನೀಲನಕ್ಷೆ ಇಲ್ಲ. ಮತ್ತೊಂದೆಡೆ, ಸ್ವದೇಶ್‌ ದರ್ಶನ್‌ 2.0 ಯೋಜನೆ ಅಡಿಯಲ್ಲೂ ಗಣನೀಯ ಪ್ರಗತಿ ಸಾಧ್ಯವಾಗಿಲ್ಲ. ಅಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸುವ ಕ್ರಮಗಳನ್ನೇ ತೆಗೆದುಕೊಂಡಿಲ್ಲ. ಆದರೆ, ಭಾರತೀಯರೆಲ್ಲರೂ ಲಕ್ಷದ್ವೀಪಕ್ಕೆ ಪ್ರವಾಸ ಹೋಗಬೇಕು ಎನ್ನುವ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ ಎಂಬುದು ಈ ಹೊತ್ತಿನ ಚರ್ಚೆ.

ಮೋದಿ ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದರು.
ಮೂಲಸೌಕರ್ಯ ಅಭಿವೃದ್ಧಿ, ಕುಡಿಯುವ ನೀರಿನ ವ್ಯವಸ್ಥೆ, ವಿಮಾನಯಾನ ಸಂಪರ್ಕವನ್ನು ಹೆಚ್ಚಿಸಬೇಕು. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಕೂಬಾ ಡೈವಿಂಗ್‌, ಬೀಚ್‌ ಚಿತ್ರಗಳನ್ನು ಹಾಕಬೇಕು ಎಂದು ತಜ್ಞರ ಸಮಿತಿಯು ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು. ಈಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಅಂತಹ ಚಿತ್ರಗಳನ್ನು ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದರು.
ಗೂಗಲ್ ಅರ್ಥ್

ಗೂಗಲ್ ಅರ್ಥ್

ಪುಟ್ಟ ವಿಮಾನ ನಿಲ್ದಾಣದ ವಿಸ್ತರಣೆ ಯಾವಾಗ?

ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮವು ಬೆಳೆಯದೇ ಇರಲು ಬಹುದೊಡ್ಡ ತೊಡಕು ಸಾರಿಗೆ ಸಂಪರ್ಕ. ದಿನಸಿ ವಸ್ತುಗಳಿಗೂ ಕೇರಳವನ್ನು ಅವಲಂಬಿಸಿರುವ ದ್ವೀಪ ಸಮೂಹವಿದು. ಕೇರಳದ ಕಡಲ ತೀರದಿಂದ 250–300 ಕಿ.ಮೀ. ದೂರದವರೆಗೆ ಈ ದ್ವೀಪಗಳು ಹರಡಿಕೊಂಡಿವೆ. ಕೆಲವು ದ್ವೀಪಗಳ ನಡುವಣ ಅಂತರವೇ 50 ಕಿ.ಮೀ. ದಾಟುತ್ತದೆ. ಹಡಗು ಮತ್ತು ದೋಣಿಗಳ ಮೂಲಕ ಸಂಪರ್ಕ ಸಾಧ್ಯವಿದೆಯಾದರೂ, ಪ್ರವಾಸಿಗರನ್ನು ದೊಡ್ಡಮಟ್ಟದಲ್ಲಿ ಸೆಳೆಯಲು ಅದು ಸಾಕಾಗದು. ಕೊಚ್ಚಿಯಿಂದ ಲಕ್ಷದ್ವೀಪಕ್ಕೆ ವಿಮಾನಯಾನ ಸೇವೆ ಚಾಲ್ತಿಯಲ್ಲಿದೆ. ಅದು ಯಾವುದಕ್ಕೂ ಸಾಲದು ಎನ್ನುತ್ತದೆ ಪ್ರವಾಸೋದ್ಯಮ ಸಚಿವಾಲಯದ ತಜ್ಞರ ಸಮಿತಿಯ ವರದಿ. ದೊಡ್ಡ ವಿಮಾನ ನಿಲ್ದಾಣ ಅಭಿವೃದ್ಧಿಗೆ ಲಕ್ಷದ್ವೀಪದ ಆಡಳಿತವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತಲೇ ಬಂದಿದೆ. ಆದರೆ ಕೇಂದ್ರ ಸರ್ಕಾರವು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.

ಲಕ್ಷದ್ವೀಪ ಸಮೂಹದ ಅಗತ್ತಿ ದ್ವೀಪದಲ್ಲಿ ಸಣ್ಣ ವಿಮಾನ ನಿಲ್ದಾಣವಿದೆ. 1,100 ಮೀಟರ್ ಉದ್ದ ಮತ್ತು ಕೇವಲ 30 ಮೀಟರ್‌ ಅಗಲವಿರುವ ರನ್‌ವೇಯಲ್ಲಿ ದೊಡ್ಡ ವಿಮಾನಗಳನ್ನು ಇಳಿಸಲು ಸಾಧ್ಯವಿಲ್ಲ. ಈ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ಲ್ಯಾಂಡಿಂಗ್‌ಗೆ ಅವಕಾಶವಿಲ್ಲ.

ಗೋವಾ, ಮುಂಬೈನಂತಹ ದೂರದ ನಗರಗಳಿಂದ ಅಗತ್ತಿ ವಿಮಾನ ನಿಲ್ದಾಣಕ್ಕೆ ಸಣ್ಣ ವಿಮಾನಗಳನ್ನು ಹಾರಾಟ ನಡೆಸಲು ಸಾಧ್ಯವಿಲ್ಲ. ಅವುಗಳ ಹಾರಾಟದ ವ್ಯಾಪ್ತಿ ಕಡಿಮೆ ಇರುವುದೇ ಇದಕ್ಕೆ ಕಾರಣ. ಹಾಗೆಂದು ದೊಡ್ಡ ವಿಮಾನಗಳನ್ನು ಇಳಿಸುವಷ್ಟು ದೊಡ್ಡ ರನ್‌ವೇ ಅಗತ್ತಿಯಲ್ಲಿ ಇಲ್ಲ. ಅಗತ್ಯವಿದ್ದರೂ, ಈ ದ್ವೀಪದ ಹೆಚ್ಚು ವಿಸ್ತಾರವಾಗಿರುವ ಪ್ರದೇಶದಲ್ಲಿ ದೊಡ್ಡ ರನ್‌ವೇ ನಿರ್ಮಿಸುವ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರವು ಆಸಕ್ತಿ ತೋರಿಸಿಯೇ ಇಲ್ಲ.

2019ರ ಡಿಸೆಂಬರ್‌ನಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್‌ ಈ ಬಗ್ಗೆ ಲೋಕಸಭೆಯಲ್ಲಿ ಮಾಹಿತಿ ಕೇಳಿದ್ದರು. ಅವರ ಪ್ರಶ್ನೆಗೆ ಉತ್ತರಿಸಿದ್ದ ನಾಗರಿಕ ವಿಮಾನಯಾನ ಸಚಿವಾಲಯವು, ‘ಅಗತ್ತಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ. ರನ್‌ವೇ ಅಕ್ಕಪಕ್ಕ ಅಗತ್ಯವಿರುವಷ್ಟು ಜಾಗ ಇಲ್ಲದೇ ಇರುವುದರಿಂದ ರಾತ್ರಿ ಲ್ಯಾಂಡಿಂಗ್‌ಗೆ ಅನುಕೂಲವಾಗುವಂತೆ ರನ್‌ವೇಯನ್ನು ಮೇಲ್ದರ್ಜೆಗೆ ಏರಿಸಲು ಸಾಧ್ಯವಿಲ್ಲ’ ಎಂದು ವಿವರಿಸಿತ್ತು.

ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದ ಸವಾಲುಗಳು ಮತ್ತು ಸಾಧ್ಯತೆಗಳ ಕುರಿತು ಪ್ರವಾಸೋದ್ಯಮ ಸಚಿವಾಲಯವು ವರದಿಯೊಂದನ್ನು ಸಿದ್ಧಪಡಿಸಿತ್ತು. 2023ರ ಮಾರ್ಚ್‌ನಲ್ಲಿ ಲೋಕಸಭೆಗೆ ಆ ವರದಿಯನ್ನು ಸಲ್ಲಿಸಲಾಗಿತ್ತು. ‘ಅಗತ್ತಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವುದು ಕಷ್ಟಸಾಧ್ಯ. ಅಂತಹ ಕಾಮಗಾರಿಯನ್ನು ಕೈಗೊಂಡರೂ ಕಾಮಗಾರಿಯ ವೆಚ್ಚಕ್ಕೆ ಹೋಲಿಸಿದರೆ, ಅಲ್ಲಿಂದ ಬರುವ ಆದಾಯ ತೀರಾ ಕಡಿಮೆ. ಹೀಗಾಗಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವುದು ಕಾರ್ಯಸಾಧುವಲ್ಲ’ ಎಂದು ಹೇಳಿತ್ತು. ಇದು ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವ ನನೆಗುದಿಗೆ ಬೀಳಲು ಪ್ರಮುಖ ಕಾರಣ.

ಲಕ್ಷದ್ವೀಪ ಸಮೂಹದಲ್ಲೇ ದೊಡ್ಡ ದ್ವೀಪಗಳಲ್ಲಿ ಒಂದಾದ ಮಿನಿಕೊಯ್‌ ದ್ವೀಪದಲ್ಲಿ ದೊಡ್ಡ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸುವ ಪ್ರಸ್ತಾವ ಸರ್ಕಾರದ ಮುಂದೆ ಇದೆ ಎಂದು ವರದಿಯಲ್ಲಿ ಹೇಳಲಾಗಿತ್ತು. ರಕ್ಷಣಾ ಸಚಿವಾಲಯವು ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವುದು ಮತ್ತು ನಾಗರಿಕ ವಿಮಾನಗಳ ಕಾರ್ಯಾಚರಣೆಗೂ ಅವಕಾಶ ಕೊಡುವುದಕ್ಕೆ 2022ರಲ್ಲೇ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಪ್ರಸ್ತಾವ ಈಗ ಯಾವ ಹಂತದಲ್ಲಿ ಇದೆ ಎಂಬ ಮಾಹಿತಿ ಇಲ್ಲ.

ಈಗ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನದ ಭಾಗವಾಗಿ ದೊಡ್ಡಮಟ್ಟದಲ್ಲಿ ಪ್ರವಾಸಿಗರು ಲಕ್ಷದ್ವೀಪಕ್ಕೆ ಹೊರಟರೆ, ವಿಮಾನ ಸಂಪರ್ಕದ ಕೊರತೆ ತೀವ್ರವಾಗಿ ಕಾಡಲಿದೆ.

ರಹದಾರಿ ಇದ್ದರಷ್ಟೇ ಪ್ರವೇಶ

ಲಕ್ಷದ್ವೀಪದ ದ್ವೀಪಗಳು ಸಂರಕ್ಷಿತ ಪ್ರದೇಶಗಳಾಗಿರುವ ಕಾರಣ, ಅಲ್ಲಿನ ನಿವಾಸಿಗಳನ್ನು ಹೊರತುಪಡಿಸಿ ಬೇರೆ ಯಾರೂ ನೇರವಾಗಿ ಅಲ್ಲಿಗೆ ಕಾಲಿಡುವಂತಿಲ್ಲ. ಅತ್ಯಂತ ಸೂಕ್ಷ್ಮವಾದ ಹವಳದ ದಂಡೆಗಳು, ಅಲ್ಲಿಗೇ ಸೀಮಿತವಾದ ಜೀವವೈವಿಧ್ಯ ಮತ್ತು ಅಲ್ಲಿನ ಮೂಲನಿವಾಸಿ ಬುಡಕಟ್ಟು ಜನರ (ಆಧುನಿಕ ಜೀವನವನ್ನು ನಡೆಸುತ್ತಿದ್ದರೂ ಜನಾಂಗೀಯ, ಸಾಂಸ್ಕೃತಿಕ ಕಾರಣಕ್ಕೆ ಇವರನ್ನು ಬುಡಕಟ್ಟು ಜನರು ಎಂದು ವರ್ಗೀಕರಿಸಲಾಗಿದೆ) ಕಾರಣಕ್ಕೆ ಇಂತಹ ನಿರ್ಬಂಧ ಜಾರಿಯಲ್ಲಿದೆ. 

ಭಾರತದ್ದೇ ಬೇರೆ ಭಾಗದ ನಿವಾಸಿಗಳು ಲಕ್ಷದ್ವೀಪಕ್ಕೆ ಹೋಗುವ ಮುನ್ನ ಅಲ್ಲಿನ ಆಡಳಿತಾಂಗದಿಂದ ರಹದಾರಿ ಪಡೆಯಬೇಕು. ರಹದಾರಿ ಇದ್ದವರಿಗಷ್ಟೇ ಅಲ್ಲಿಗೆ ಪ್ರವೇಶ. ರಹದಾರಿಯಲ್ಲಿ ನಮೂದಿಸಿರುವ ಅವಧಿಗಷ್ಟೇ ಅವರು ಆ ದ್ವೀಪಗಳಲ್ಲಿ ಇರಬೇಕು. ಯಾವ ದ್ವೀಪಕ್ಕೆ ರಹದಾರಿ ಪಡೆಯಲಾಗಿದೆಯೋ ಅದಕ್ಕಷ್ಟೇ ಭೇಟಿ ನೀಡಬೇಕು. ಅದನ್ನು ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧ.

ಲಕ್ಷದ್ವೀಪ ಸಮೂಹದಲ್ಲಿ 36 ದ್ವೀಪಗಳಿವೆ. ಆದರೆ ಎಲ್ಲದರಲ್ಲೂ ಮನುಷ್ಯರು ವಾಸಿಸುತ್ತಿಲ್ಲ. ಮನುಷ್ಯರ ಆವಾಸವಿಲ್ಲದ ಕೆಲವು ದ್ವೀಪಗಳಿಗೆ ಬೆಳಗಿನ ಹೊತ್ತು ಮಾತ್ರ ಭೇಟಿ ನೀಡಲು ರಹದಾರಿ ನೀಡಲಾಗುತ್ತದೆ. ವಿದೇಶಿ ಪ್ರವಾಸಿಗರಿಗೂ ಈ ರಹದಾರಿ ಪದ್ಧತಿ ಅನ್ವಯವಾಗುತ್ತದೆ. ಅರ್ಜಿ ಸಲ್ಲಿಸಿದ ಎಲ್ಲರಿಗೂ ರಹದಾರಿ ಸಿಕ್ಕೇಸಿಗುತ್ತದೆ ಎಂದು ಹೇಳಲು ಬರುವುದಿಲ್ಲ. ರಾಷ್ಟ್ರೀಯ ಭದ್ರತೆ, ಬುಡಕಟ್ಟು ಸಮುದಾಯಗಳ ಸಂರಕ್ಷಣೆ, ಶಾಂತಿಪಾಲನೆಯ ಕಾರಣಕ್ಕೆ ರಹದಾರಿಯನ್ನು ನಿರಾಕರಿಸಲು ಅವಕಾಶವಿದೆ.

ಆಧಾರ: ಲೋಕಸಭೆಗೆ ಕೇಂದ್ರ ಪ್ರವಾಸೋಧ್ಯಮ ಇಲಾಖೆ ನೀಡಿದ ಉತ್ತರಗಳು, ಪ್ರವಾಸೋಧ್ಯಮ ಸಾಧ್ಯತೆಗಳ ಬಗ್ಗೆ ತಜ್ಞರು ನೀಡಿದ ವರದಿಗಳು, ಮೋದಿ ಅವರ ಎಕ್ಸ್‌ ತಾಣದ ಮಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT