ತಮಿಳುನಾಡಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಗಳಿಗೆ ಶೇ 69ರಷ್ಟು ಮೀಸಲಾತಿ ಜಾರಿಯಲ್ಲಿದೆ. ಜಾತಿಗಣತಿಯ ದತ್ತಾಂಶಗಳ ಆಧಾರದಲ್ಲೇ ಆ ಮೀಸಲಾತಿಯನ್ನು ಜಾರಿಗೆ ತರಲಾಗಿತ್ತು ಮತ್ತು ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿಯನ್ನೂ ನೀಡಲಾಗಿತ್ತು. ಈ ಸಮುದಾಯಗಳಿಗೆ ನೀಡುತ್ತಿರುವ ಮೀಸಲಾತಿಯನ್ನು ಶೇ 50ರಿಂದ ಶೇ 65ಕ್ಕೆ ಏರಿಕೆ ಮಾಡಬೇಕು ಎಂದು ಈಗ ಬಿಹಾರ ಸರ್ಕಾರ ಸಹ ಜಾತಿಗಣತಿಯ ಆಧಾರದಲ್ಲೇ ನಿರ್ಧಾರ ತೆಗೆದುಕೊಂಡಿದೆ. ಕರ್ನಾಟಕದಲ್ಲೂ ಈಗಾಗಲೇ ಅಂತಹ ಸಮೀಕ್ಷೆ ನಡೆದಿದೆ. ಸಮೀಕ್ಷೆಯ ದತ್ತಾಂಶಗಳು ಮೀಸಲಾತಿ ಹೆಚ್ಚಳ ಮತ್ತು ಒಳಮೀಸಲಾತಿ ಬೇಡಿಕೆಗೆ ವೈಜ್ಞಾನಿಕ ತಳಹದಿ ಒದಗಿಸಲಿದೆ
*****
ತಮಿಳುನಾಡಿನಲ್ಲಿ ಶೇ 69ರಷ್ಟು ಮೀಸಲಾತಿ ಇದೆ. ದೇಶದಲ್ಲಿ ಮಂಡಲ ಸಮಿತಿ ವರದಿ ಜಾರಿ ಆಗುವುದಕ್ಕೂ ಮೊದಲೇ ತಮಿಳುನಾಡಿನಲ್ಲಿ ಹಿಂದುಳಿದ ವರ್ಗಗಳಿಗೆ ಶೇ 50ರಷ್ಟು ಮೀಸಲಾತಿಯನ್ನು ನೀಡಲಾಗಿತ್ತು.
‘ತಮಿಳುನಾಡು ಹಿಂದುಳಿದ ಜಾತಿಗಳ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ಶಿಕ್ಷಣ ಸಂಸ್ಥೆ ಹಾಗೂ ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿ) ಕಾಯ್ದೆ, 1993 ಅನ್ನು ಸಂವಿಧಾನದ ಒಂಬತ್ತನೇ ಪರಿಚ್ಛೇದದಲ್ಲಿ ಸೇರಿಸಲಾಗಿದೆ. ಈ ಮೂಲಕ ಈ ಕಾಯ್ದೆಯ ಸಿಂಧುತ್ವವನ್ನು ಯಾರೂ ನ್ಯಾಯಾಲಯದಲ್ಲಿ ಪ್ರಶ್ನಿಸದಂತೆ ಮಾಡಲಾಗಿದೆ. ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳ ರಾಜಕೀಯ ಇಚ್ಛಾಶಕ್ತಿ ಕಾರಣದಿಂದಾಗಿ ತಮಿಳುನಾಡಿನಲ್ಲಿ ಇದು ಸಾಧ್ಯವಾಗಿದೆ.
1971ಕ್ಕೂ ಮೊದಲು ರಾಜ್ಯದಲ್ಲಿ ಶೇ 41ರಷ್ಟು ಮೀಸಲಾತಿ ಇತ್ತು. ಹಿಂದುಳಿದ ವರ್ಗಗಳಿಗೆ ಶೇ 25ರಷ್ಟು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಶೇ 16ರಷ್ಟು ಮೀಸಲಾತಿ ಇತ್ತು.
ಅಣ್ಣಾದೊರೈ ಅವರ ಬಳಿಕ 1969ರಲ್ಲಿ ಡಿಎಂಕೆಯ ಎಂ. ಕರುಣಾನಿಧಿ ಅವರು ಮುಖ್ಯಮಂತ್ರಿಯಾದರು. ಈ ವೇಳೆ ಕರುಣಾನಿಧಿ ಅವರು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸಟ್ಟನಾಥನ್ ಸಮಿತಿಯನ್ನು ರಚಿಸುತ್ತಾರೆ. ಮೀಸಲಾತಿ ಹೆಚ್ಚಳದ ಅಗತ್ಯದ ಕುರಿತು ಕೆಲವು ಶಿಫಾರಸುಗಳನ್ನು ಈ ಸಮಿತಿ ನೀಡುತ್ತದೆ. ಈ ಸಮಿತಿಯ ಶಿಫಾರಸ್ಸಿನ ಮೇಲೆ ಮೀಸಲಾತಿ ಪ್ರಮಾಣವನ್ನು ಸರ್ಕಾರ ಹೆಚ್ಚಿಸುತ್ತದೆ. ಈ ಪ್ರಕಾರ, ಹಿಂದುಳಿದ ಜಾತಿಗಳಿಗೆ ಶೇ 31ರಷ್ಟು ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಶೇ 18ರಷ್ಟು ಮೀಸಲಾತಿಯನ್ನು ಹೆಚ್ಚಿಸಲಾಗುತ್ತದೆ. ಅಲ್ಲಿಗೆ ರಾಜ್ಯದ ಒಟ್ಟು ಮೀಸಲಾತಿ ಪ್ರಮಾಣವು ಶೇ 49ರಷ್ಟಾಗುತ್ತದೆ.
ಈ ಬಳಿಕ ಅಧಿಕಾರವಹಿಸಿಕೊಂಡ ಎಐಎಡಿಎಂಕೆಯ ಎಂ.ಜಿ. ರಾಮಚಂದ್ರನ್ ಅವರು ಮೀಸಲಾತಿಯನ್ನು ಇನ್ನಷ್ಟು ಏರಿಸಲು ಮುಂದಾಗುತ್ತಾರೆ. ಹಿಂದುಳಿದ ಜಾತಿಗಳ ಮೀಸಲಾತಿಯನ್ನು ಶೇ 25ರಿಂದ ಶೇ 50ಕ್ಕೆ ಏರಿಸುತ್ತಾರೆ. ಅಲ್ಲಿಗೆ ರಾಜ್ಯದ ಒಟ್ಟು ಮೀಸಲಾತಿ ಪ್ರಮಾಣವು ಶೇ 68ಕ್ಕೆ ತಲುಪುತ್ತದೆ. ನಂತರ 1989ಎಲ್ಲಿ ಡಿಎಂಕೆಯ ಕರುಣಾನಿಧಿ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಾರೆ. ಈ ಬಾರಿ ಅವರು ಹಿಂದುಳಿದ ಜಾತಿಗಳಿಗೆ ನೀಡಿದ್ದ ಮೀಸಲಾತಿ ಪ್ರಮಾಣವನ್ನು ಎರಡು ವಿಭಾಗಗಳಲ್ಲಿ ವಿಂಗಡಿಸುತ್ತಾರೆ. ಅಂದರೆ, ಕರುಣಾನಿಧಿ ಅವರು ಅತಿ ಹಿಂದುಳಿದ ಜಾತಿಗಳ ವಿಭಾಗವೊಂದನ್ನು ರೂಪಿಸುತ್ತಾರೆ. ಹಿಂದುಳಿದ ಜಾತಿಗಳಿಗೆ ನೀಡಿದ್ದ ಶೇ 50ರಷ್ಟು ಮೀಸಲಾತಿಯಲ್ಲಿ ಅತಿ ಹಿಂದುಳಿದ ಜಾತಿಗಳಿಗೆ ಶೇ 20ರಷ್ಟು ಮೀಸಲಾತಿಯನ್ನು ಹಂಚುತ್ತಾರೆ.
ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದು 1990ರಲ್ಲಿ ಮದ್ರಾಸ್ ಹೈಕೋರ್ಟ್ ಆದೇಶ ನೀಡುತ್ತದೆ. ಅಲ್ಲಿಯವರೆಗೂ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿ ಎರಡಕ್ಕೂ ಸೇರಿ ಶೇ 18ರಷ್ಟು ಮೀಸಲಾತಿಯನ್ನು ನೀಡಲಾಗುತ್ತಿತ್ತು. ನ್ಯಾಯಾಲಯದ ಆದೇಶದಂತೆ, ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಅಷ್ಟಕ್ಕೇ ಉಳಿಸಿಕೊಂಡು, ಪರಿಶಿಷ್ಟ ಪಂಗಡಕ್ಕೆ ಶೇ 1ರಷ್ಟು ಮೀಸಲಾತಿ ನೀಡಲಾಗುತ್ತದೆ. ಹೀಗೆ, ರಾಜ್ಯದ ಒಟ್ಟು ಮೀಸಲಾತಿ ಪ್ರಮಾಣ ಶೇ 69ಕ್ಕೆ ಏರಿತು.
ಇಂದಿರಾ ಸಾಹ್ನಿ ಹಾಗೂ ಇತರರ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ 1992 ನವೆಂಬರ್ 16ರಂದು ನೀಡಿತು. ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವು ಶೇ 50ರಷ್ಟನ್ನು ಮೀರಬಾರದು’ ಎಂಬ ತೀರ್ಪನ್ನು ನ್ಯಾಯಾಲಯ ನೀಡಿತು. .
ಈ ತಕ್ಷಣವೇ ತಮಿಳುನಾಡು ಸರ್ಕಾರವು ಮದ್ರಾಸ್ ಹೈಕೋರ್ಟ್‌ನ ಕದ ತಟ್ಟಿತ್ತು. ಆಗ ಜಯಲಲಿತಾ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. 1993–94ರಲ್ಲಿ ಶಿಕ್ಷಣ ಸಂಸ್ಥೆಗಳಿಗೆ ದಾಖಲಾತಿಯನ್ನು ಶೇ 69ರಷ್ಟಿರುವ ಮೀಸಲಾತಿಯಂತೆಯೇ ನಡೆಸಬೇಕು ಎಂದು ಕೋರಿ ಸರ್ಕಾರ ಅರ್ಜಿ ಹಾಕಿತ್ತು. ಆದರೆ, ರಾಜ್ಯ ಸರ್ಕಾರವು ಇನ್ನೊಂದು ವರ್ಷವಷ್ಟೇ ಈ ಮೀಸಲಾತಿ ನೀತಿಯನ್ನು ಮುಂದುವರಿಸಬಹುದು’ ಎಂದು ನ್ಯಾಯಾಲಯ ಆದೇಶ ನೀಡಿತು. ‘1994–95ರ ಶೈಕ್ಷಣಿಕ ವರ್ಷಕ್ಕೆ ಮೀಸಲಾತಿಯನ್ನು ಶೇ 50ರ ಮಿತಿಯೊಳಗೆ ತರಬೇಕು’ ಎಂದೂ ನ್ಯಾಯಾಲಯ ಹೇಳಿತು.
ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಮೊರೆ ಹೋಯಿತು. ಹಿಂದುಳಿದ ಜಾತಿಗಳ ಅಭಿವೃದ್ಧಿಯ ಪರ ಇರುವ ಈ ಮೀಸಲಾತಿ ಮಿತಿಯನ್ನು ಕಡಿತಗೊಳಿಸಲು ಅನುವು ಮಾಡಿಕೊಡಬಾರದು ಎಂಬ ಮನವಿಯನ್ನೂ ಮಾಡಿತು. ಆದರೆ, ಸುಪ್ರೀಂ ಕೋರ್ಟ್ ಸಹ ಮದ್ರಾಸ್ ಹೈಕೋರ್ಟ್ ನೀಡಿದ ಆದೇಶವನ್ನೇ ಎತ್ತಿಹಿಡಿಯಿತು.
ನ್ಯಾಯಾಲಯಗಳಿಂದ ಇಂಥ ಆದೇಶ ಬರುತ್ತಿದ್ದಂತೆಯೇ 1993 ನವೆಂಬರ್‌ನಲ್ಲಿ ಸರ್ಕಾರವು ವಿಶೇಷ ಅಧಿವೇಶನವನ್ನು ಕರೆಯಿತು. ತಮಿಳುನಾಡಿನ ಮೀಸಲಾತಿ ನೀತಿಯನ್ನು ಇದ್ದಂತೆಯೇ ಮುಂದುವರಿಸಲು ಅನುವಾಗುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂಬ ನಿರ್ಣಯಕ್ಕೆ ಸರ್ವಾನುಮತ ಅನುಮೋದನೆ ಪಡೆಯಿತು. ಆಗ ಕೇಂದ್ರದಲ್ಲಿ ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದರು.
ಆಗಲೇ ರಾಜ್ಯ ಸರ್ಕಾರವು ತಮಿಳುನಾಡು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಗಳ (ಶಿಕ್ಷಣ ಸಂಸ್ಥೆ ಹಾಗೂ ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿ) ಮಸೂದೆ, 1993 ಅನ್ನು ಮಂಡಿಸಿತು. ಇದನ್ನು ರಾಷ್ಟ್ರಪತಿ ಅಂಕಿತಕ್ಕೂ ಕಳುಹಿಸಲಾಯಿತು. ಈ ಮಸೂದೆಗೆ ಅಂಕಿತ ಹಾಕಲೇಬೇಕು ಎಂದು ಕೇಂದ್ರದ ಮೇಲೆ ಒತ್ತಡ ಹೇರುವುದಕ್ಕಾಗಿ ಜಯಲಲಿತಾ ಅವರು ರಾಜ್ಯ ಸರ್ವಪಕ್ಷಗಳ ನಾಯಕರ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋದರು. ಇದರ ಜೊತೆಯಲ್ಲಿ, ತಮಿಳುನಾಡಿನ ಈ ಕಾಯ್ದೆಯನ್ನು ಸಂವಿಧಾನದ ಒಂಬತ್ತನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದೂ ನಿಯೋಗ ಒತ್ತಡ ಹೇರಿತು.
ಈ ಬಳಿಕ ಈ ಮಸೂದೆಗೆ ರಾಷ್ಟ್ರಪತಿ ಅವರ ಅಂಕಿತ ದೊರಕಿತು. ಜೊತೆಗೆ, ಈ ಕಾಯ್ದೆಯನ್ನು ಸಂವಿಧಾನದ ಒಂಬತ್ತನೇ ಪರಿಚ್ಛೇದಕ್ಕೂ ಸೇರಿಸಲಾಯಿತು. ಹೀಗೆ ಶೇ 69ರಷ್ಟು ಮೀಸಲಾತಿಯನ್ನು ತಮಿಳುನಾಡು ಸರ್ಕಾರವು ಉಳಿಸಿಕೊಂಡಿತು.
ತಮಿಳುನಾಡು ಸರ್ಕಾರವು ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಗಳಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಒಟ್ಟು ಶೇ 68ರಷ್ಟು ಮೀಸಲಾತಿಯನ್ನು 80ರ ದಶಕದಲ್ಲೇ ಮಾಡಿತ್ತು. ಇಂತಹ ಮೀಸಲಾತಿಗೆ ಶೇ 50ರಷ್ಟು ಮಿತಿ ಅನ್ವಯವಾಗಬೇಕು ಎಂದು ಆಗಿನ್ನೂ ಸುಪ್ರೀಂ ಕೋರ್ಟ್ ತೀರ್ಪು ನೀಡಿರಲಿಲ್ಲ. ಅಂತಹ ತೀರ್ಪು ಬರುವುದಕ್ಕೂ ಎರಡು ವರ್ಷಗಳ ಮೊದಲೇ ಒಟ್ಟು ಮೀಸಲಾತಿಯ ಪ್ರಮಾಣ ಶೇ 69ಕ್ಕೆ ಏರಿಕೆಯಾಗಿತ್ತು. ತಮಿಳುನಾಡು ಸರ್ಕಾರವು 1983ರ ಜಾತಿ ಗಣತಿಯ ಆಧಾರದಲ್ಲಿ ಅಂತಹ ಸಾಹಸಕ್ಕೆ ತಮಿಳುನಾಡು ಸರ್ಕಾರವು ಕೈಹಾಕಿತ್ತು.
ಜಾತಿ ಗಣತಿಯ ವೇಳೆ ಜಾತಿಗಳ ಶಿಕ್ಷಣ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಸಮೀಕ್ಷೆಯನ್ನೂ ನಡೆಸಲಾಗಿತ್ತು. ಈ ಎಲ್ಲಾ ದತ್ತಾಂಶಗಳು ಬಿಡುಗಡೆಯಾದ ನಂತರ ಮೀಸಲಾತಿ ಹೆಚ್ಚಳಕ್ಕೆ ಆಗ್ರಹ ತೀವ್ರವಾಯಿತು. ಜಾತಿ ಗಣತಿಯ ಆಧಾರದಲ್ಲೇ ಸರ್ಕಾರವು ಮೀಸಲಾತಿಯನ್ನು ಶೇ 68ಕ್ಕೆ ಹೆಚ್ಚಿಸಿತ್ತು. ಜಾತಿ ಗಣತಿಯ ದತ್ತಾಂಶಗಳ ಕಾರಣದಿಂದಲೇ ಪರಿಶಿಷ್ಟ ಪಂಗಡಗಳಿಗೆ 1990ರಲ್ಲಿ ಪ್ರತ್ಯೇಕವಾಗಿ ಶೇ 1ರಷ್ಟು ಮೀಸಲಾತಿ ಒದಗಿಸಲಾಯಿತು. ಅಲ್ಲಿಯವರೆಗೆ ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಕಡಿಮೆ ಇದೆ ಎಂಬ ಕಾರಣಕ್ಕೆ, ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡದ ಮೀಸಲಾತಿ ಎಂಬ ಏಕ ಮೀಸಲಾತಿ ಜಾರಿಯಲ್ಲಿತ್ತು. ಜಾತಿ ಗಣತಿಯ ದತ್ತಾಂಶಗಳ ಆಧಾರದಲ್ಲಿ ಪರಿಶಿಷ್ಟ ಸಮುದಾಯದ ಜನರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್‌ನ ಆದೇಶದ ಮೇರೆಗೆ 1990ರಲ್ಲಿ ಸರ್ಕಾರವು ಶೇ1ರಷ್ಟು ಪ್ರತ್ಯೇಕ ಮೀಸಲಾತಿಯನ್ನು ನೀಡಿತು.
ತಮಿಳುನಾಡು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಗಳ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ 9ನೇ ಪರಿಚ್ಛೇದಲ್ಲಿ ಸೇರಿಸಲಾಗಿದೆ. 9ನೇ ಪರಿಚ್ಛೇದದಲ್ಲಿ ಇರುವ ಕಾಯ್ದೆಗಳನ್ನು ನ್ಯಾಯಾಂಗದ ವಿಮರ್ಶೆಗೆ ಒಳಪಡಿಸಲಾಗದು ಎಂದು ಸಂವಿಧಾನವು ಹೇಳುತ್ತದೆ. ಹೀಗಿದ್ದೂ ಈ ಕಾಯ್ದೆಯ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಕಾಯ್ದೆಯನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಿದ ವಿಧಾನವನ್ನು ಹಲವು ಅರ್ಜಿಗಳು ಪ್ರಶ್ನಿಸಿದ್ದರೆ, ಶೇ 69ರಷ್ಟು ಮೀಸಲಾತಿಯು ಇಂದಿರಾ ಸಾಹ್ನಿ ಪ್ರಕರಣದ ತೀರ್ಪನ್ನು ಮೀರುತ್ತದೆ ಎಂದು ಮತ್ತಷ್ಟು ಅರ್ಜಿಗಳು ಪ್ರತಿಪಾದಿಸುತ್ತಿವೆ. ಸುಪ್ರೀಂ ಕೋರ್ಟ್‌ನಲ್ಲಿ ಈ ಅರ್ಜಿಗಳ ವಿಚಾರಣೆ ಪದೇ–ಪದೇ ಮುಂದಕ್ಕೆ ಹೋಗುತ್ತಿದೆ. ಆದರೆ, ವಿಚಾರಣೆ ವೇಳೆಗೆ ತನ್ನ ವಾದವನ್ನು ಗಟ್ಟಿಮಾಡಿಕೊಳ್ಳಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.
ವೈಜ್ಞಾನಿಕ ಆಧಾರದಲ್ಲೇ ಮೀಸಲಾತಿ ನೀಡಲಾಗಿದೆ ಮತ್ತು ಅಷ್ಟೇ ಮೀಸಲಾತಿ ಈಗಲೂ ಅಗತ್ಯ ಎಂದು ಪ್ರತಿಪಾದಿಸಲು ಸರ್ಕಾರವು ಜಾತಿ ಗಣತಿಯ ಮೊರೆ ಹೋಗಿದೆ. ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಸಮೀಕ್ಷೆಯನ್ನೂ ಒಳಗೊಂಡ ಜಾತಿ ಗಣತಿಯನ್ನು ನಡೆಸಲು 2000ರಲ್ಲಿ ನ್ಯಾಯಮೂರ್ತಿ ಕುಲಶೇಖರನ್ ಸಮಿತಿಯನ್ನು ರಚಿಸಲಾಗಿದೆ. ಜಾತಿ ಗಣತಿಯ ದತ್ತಾಂಶಗಳ ಆಧಾರದಲ್ಲಿ ಎಲ್ಲಾ ಮೀಸಲಾತಿಗಳಲ್ಲಿ ಒಳಮೀಸಲಾತಿಯನ್ನು ತರಲು ಮತ್ತು ಎಂಬಿಸಿ ವರ್ಗದಲ್ಲಿ ಈಗಾಗಲೇ ಇರುವ ಒಳಮೀಸಲಾತಿಯನ್ನು ಪರಿಷ್ಕರಿಸಲಾಗುತ್ತದೆ ಎಂದು ಸರ್ಕಾರ ಹೇಳಿತ್ತು.
ಆಧಾರ: ತಮಿಳುನಾಡು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಗಳ ಮೀಸಲಾತಿ ಕಾಯ್ದೆ, ಸಂವಿಧಾನದ 31ಬಿ ವಿಧಿ, ಇಂದಿರಾ ಸಹಾನಿ ಪ್ರಕರಣದ ತೀರ್ಪು, ಪಿಟಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.