ಸಾಮ್ರಾಜ್ಯಶಾಹಿ ಮನೋಭಾವ
ತನ್ನ ಸಾಮ್ರಾಜ್ಯಶಾಹಿ ಮನೋಭಾವ ಮತ್ತು ತೈಲ ಹಾಗೂ ಆರ್ಥಿಕ ಅಗತ್ಯಗಳಿಗಾಗಿ ವಿವಿಧ ನೆಪವೊಡ್ಡಿ ವಿದೇಶಗಳ ಮೇಲೆ ದಾಳಿ ಮಾಡುವುದು, ನಿರ್ಬಂಧ ವಿಧಿಸುವುದು ಅಮೆರಿಕಕ್ಕೆ ಹೊಸದೇನಲ್ಲ. ಅದು ‘ದೊಡ್ಡಣ್ಣ’ನ ದರ್ಪವನ್ನು ಮುಂದುವರಿಸುತ್ತಲೇ ಇದೆ. ದಿಢೀರ್ ಕಾರ್ಯಾಚರಣೆ ನಡೆಸಿ, ವೆನೆಜುವೆಲಾದ ಅಧ್ಯಕ್ಷರ ಮನೆಗೆ ನುಗ್ಗಿ ಅವರನ್ನು ಅಪಹರಿಸಿ ತನ್ನ ದೇಶದಲ್ಲಿ ಸೆರೆಯಲ್ಲಿಟ್ಟಿರುವ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ಮುಂದಿನ ಗುರಿ ಯಾರು ಎನ್ನುವುದರ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ವಿದೇಶಿ ನಾಯಕರನ್ನು ವಿನಾಕಾರಣ ಕಟಕಟೆಯಲ್ಲಿ ನಿಲ್ಲಿಸುವ ಸ್ವಭಾವ, ಹಠಾತ್ ಕೆರಳುವ ಗುಣ, ಆಕ್ರಮಣಕಾರಿ ವರ್ತನೆ, ಕ್ಷಿಪ್ರ ಕಾರ್ಯಾಚರಣೆಗಳಿಗೆ ಹೆಸರಾದ ಟ್ರಂಪ್ ಅವರು ಪ್ರಸ್ತುತ ಗ್ರೀನ್‌ಲ್ಯಾಂಡ್, ಕೊಲಂಬಿಯಾ, ಇರಾನ್, ಮೆಕ್ಸಿಕೊ ಮತ್ತು ಕ್ಯೂಬಾ ಮೇಲೆ ಕಣ್ಣು ನೆಟ್ಟಿದ್ದಾರೆ. ಸುಭದ್ರ ಸರ್ಕಾರ, ಡ್ರಗ್ಸ್ ವಿರುದ್ಧದ ಹೋರಾಟ ಮುಂತಾದ ಕಾರಣಗಳನ್ನು ಮುಂದು ಮಾಡಿ, ಆ ದೇಶಗಳನ್ನು, ಅಲ್ಲಿನ ನಾಯಕರನ್ನು ‘ಮಣಿಸುವ’ ಸಾಧ್ಯತೆ ಇದೆ ಎನ್ನಲಾಗುತ್ತಿದೆ..