ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ಭಾರತದ ಸೈನಿಕರಿಗೆ ಹೊಸ ಸಮರ ದಿರಿಸು

Last Updated 23 ಜನವರಿ 2022, 19:31 IST
ಅಕ್ಷರ ಗಾತ್ರ

ಭಾರತೀಯ ಸೈನಿಕರಿಗಾಗಿ ಸೇನೆಯು ನೂತನ ಸಮರ ಸಮವಸ್ತ್ರವನ್ನು (ಕಾಂಬ್ಯಾಟ್‌ ಯೂನಿಫಾರ್ಮ್‌) ಸಿದ್ಧಪಡಿಸಿದೆ. ಇದೇ ಜನವರಿ 15ರಂದು ನಡೆದ ಸೇನಾ ದಿನಾಚರಣೆಯಲ್ಲಿ ಈ ಸಮವಸ್ತ್ರವನ್ನು ಅನಾವರಣ ಮಾಡಲಾಗಿದೆ. ಸೇನೆಗಳು ತಮ್ಮ ಸಮವಸ್ತ್ರಗಳನ್ನು ಆಗಾಗ್ಗೆ ಬದಲಿಸುವುದು ರೂಢಿಯಲ್ಲಿದೆ. ಭಾರತೀಯ ಸೇನೆಯ ಸಮವಸ್ತ್ರವನ್ನೂ ಹೀಗೆ ಹಲವು ಬಾರಿ ಬದಲಿಸಲಾಗಿದೆ. ಕೊನೆಯ ಬಾರಿ ಸಮವಸ್ತ್ರವನ್ನು ಬದಲಿಸಿದ್ದು 2008ರಲ್ಲಿ. ಈಗ ಮತ್ತೆ ಸಮವಸ್ತ್ರವನ್ನು ಬದಲಿಸಲಾಗಿದೆ.

ಈವರೆಗಿನ ಬದಲಾವಣೆಗಳಲ್ಲಿ ಕೇವಲ ಬಣ್ಣ ಮತ್ತು ಸಮವಸ್ತ್ರಗಳಲ್ಲಿನ ಸವಲತ್ತುಗಳ ಸೇರ್ಪಡೆಯನ್ನು ಮಾತ್ರ ಮಾಡಲಾಗಿತ್ತು. ಆದರೆ ಈಗಿನ ಬದಲಾವಣೆಯಲ್ಲಿ ಸಮವಸ್ತ್ರದ ವಿನ್ಯಾಸವನ್ನೇ ಬದಲಿಸಲಾಗಿದೆ.

ಗಡಿಗಳಲ್ಲಿ, ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಇರುವವರಿಗೆ ಮಾತ್ರ ಈ ಸಮವಸ್ತ್ರವನ್ನು ನೀಡಲಾಗುತ್ತದೆ. ಉಳಿದಂತೆ ಒಳನಾಡಿನಲ್ಲಿ ಸೇವೆಯಲ್ಲಿ ರುವ ಸೈನಿಕರಿಗೆ ಈಗ ಇರುವ ಆಲಿವ್ ಹಸಿರು ಸಮವಸ್ತ್ರವನ್ನೇ ಮುಂದುವರಿಸಲಾಗುತ್ತದೆ. ಇದೇ 26ರ ಗಣರಾಜ್ಯೋತ್ಸವದಲ್ಲಿ ಸೇನೆಯ ಆರಂಭಿಕ ದಿನಗಳಿಂದ ಬಳಕೆಯಲ್ಲಿದ್ದ ಎಲ್ಲಾ ವಿನ್ಯಾಸದ ಸಮವಸ್ತ್ರ ಧರಿಸಿದ ಮತ್ತು ಬಳಕೆಯಲ್ಲಿದ್ದ ರೈಫಲ್‌ಗಳನ್ನು ಹೊತ್ತ ಸೈನಿಕರ ತಂಡಗಳು ಪಥಸಂಚಲನ ನಡೆಸಲಿವೆ.

ಬದಲಾವಣೆಗಳು

* ಈ ಮೊದಲು ಇದ್ದ ಸಮವಸ್ತ್ರದಲ್ಲಿ ಆಲಿವ್ ಹಸಿರು ಮತ್ತು ಮಣ್ಣಿನ ಬಣ್ಣಗಳನ್ನು ಬಳಸಿಕೊಳ್ಳಲಾಗಿದೆ. ಹೊಸ ಸಮವಸ್ತ್ರದಲ್ಲೂ ಇದೇ ಬಣ್ಣಗಳನ್ನು ಉಳಿಸಿಕೊಳ್ಳಲಾಗಿದೆ. ಆದರೆ ವಿನ್ಯಾಸಗಳನ್ನು ಸಂಪೂರ್ಣವಾಗಿ ಬದಲಿಸಲಾಗಿದೆ. ಈ ಮೊದಲು ಕತ್ತರಿಸಿದ ಎಲೆಗಳ ಮಾದರಿಯಲ್ಲಿನ ವಿನ್ಯಾಸವು ಇತ್ತು. ಈಗ ಅವುಗಳನ್ನು ಡಿಜಿಟಲ್ ಪ್ಯಾಟ್ರನ್‌ನಂತೆ ವಿನ್ಯಾಸ ಮಾಡಲಾಗಿದೆ

* ಈ ಮೊದಲು ಇದ್ದ ಸಮವಸ್ತ್ರದಲ್ಲಿ ಅಂಗಿ ಮತ್ತು ಪ್ಯಾಂಟ್‌ ಮಾತ್ರ ಇತ್ತು. ಅಂಗಿಯನ್ನು ಪ್ಯಾಂಟ್‌ನ ಒಳಗೆ ಹಾಕಬೇಕಿತ್ತು. ಆದರೆ ಹೊಸ ಸಮವಸ್ತ್ರದಲ್ಲಿ ಟಿ–ಶರ್ಟ್ ಮತ್ತು ಪ್ಯಾಂಟ್‌ ಇದೆ. ಟಿ–ಶರ್ಟ್‌ ಅನ್ನು ಪ್ಯಾಂಟ್‌ನೊಳಗೆ ಹಾಕಬೇಕು. ಆನಂತರ ಮೇಲೆ ಜಾಕೆಟ್ ಧರಿಸಬೇಕು. ಜಾಕೆಟ್‌ ಅನ್ನು ಪ್ಯಾಂಟ್‌ನ ಒಳಗೆ ಹಾಕುವುದಕ್ಕೆ ಅವಕಾಶ ಇಲ್ಲ

* ಪ್ಯಾಂಟ್‌ನಲ್ಲಿ ಎಲಾಸ್ಟಿಕ್ ಮತ್ತು ಗುಬ್ಬಿಗಳು ಇವೆ. ಹೀಗಾಗಿ ಇವುಗಳನ್ನು ಸೈನಿಕರು ತಮ್ಮ ಗಾತ್ರಕ್ಕೆ ಸರಿಯಾಗಿ ಹೊಂದಿಸಿಕೊಳ್ಳಲು ಸಾಧ್ಯವಾಗುತ್ತದೆ

* ಇಡೀ ಸಮವಸ್ತ್ರದ ಬಟ್ಟೆಯನ್ನು ಬದಲಿಸಲಾಗಿದೆ. ಶೇ 70ರಷ್ಟು ಹತ್ತಿ ಮತ್ತು ಶೇ 30ರಷ್ಟು ಪಾಲಿಸ್ಟರ್ ಸಂಯೋಜನೆಯ ಬಟ್ಟೆಯನ್ನು ಬಳಸಲಾಗಿದೆ. ಇದರಿಂದ ಸಮವಸ್ತ್ರಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಒಣಗಿಸಲು ಸಾಧ್ಯವಾಗುತ್ತದೆ

* ದೇಶದ ಎಲ್ಲಾ ಪ್ರದೇಶಗಳಲ್ಲಿನ ವಾತಾವರಣವನ್ನು ಗಮನದಲ್ಲಿ ಇಟ್ಟುಕೊಂಡು, ಅಲ್ಲಿಗೆ ಹೊಂದಿಕೆಯಾಗುವಂತೆ ಸಮವಸ್ತ್ರವನ್ನು ವಿನ್ಯಾಸ ಮಾಡಲಾಗಿದೆ

* ಮಹಿಳಾ ಸೈನಿಕರಿಗಾಗಿಯೇ ಪ್ರತ್ಯೇಕ ಸಮವಸ್ತ್ರವನ್ನು ವಿನ್ಯಾಸ ಮಾಡಲಾಗಿದೆ

ಎನ್‌ಐಎಫ್‌ಟಿ ವಿನ್ಯಾಸ

ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಫ್ಯಾಷನ್ ಟೆಕ್ನಾಲಜಿಯ (ಎನ್‌ಐಎಫ್‌ಟಿ) 12 ಜನರ ತಂಡವು ಈ ಸಮವಸ್ತ್ರವನ್ನು ವಿನ್ಯಾಸ ಮಾಡಿದೆ. ಸಂಸ್ಥೆಯ 7 ಪ್ರೊಫೆಸರ್‌ಗಳು, ಮೂವರು ವಿದ್ಯಾರ್ಥಿಗಳು ಮತ್ತು ಇಬ್ಬರು ಹಳೆಯ ವಿದ್ಯಾರ್ಥಿಗಳು ಈ ತಂಡದಲ್ಲಿ ಇದ್ದರು. ವಿವಿಧ ರೀತಿಯ ಬಟ್ಟೆಯ ಸಂಯೋಜನೆ, ವಿನ್ಯಾಸ, ಬಣ್ಣಗಳ ವಿನ್ಯಾಸದ 17 ಮಾದರಿಗಳನ್ನು ಈ ತಂಡವು ಸಿದ್ಧಪಡಿಸಿತ್ತು.

ಸೇನೆಯ ಕಮಾಂಡೆಂಟ್‌ ರ‍್ಯಾಂಕ್‌ನ ಅಧಿಕಾರಿಗಳು 17ರಲ್ಲಿ ಐದು ಮಾದರಿಗಳನ್ನು ಅಂತಿಮಗೊಳಿಸಿದ್ದರು. ಈ ಐದರಲ್ಲಿ ಒಂದನ್ನು ಸೇನೆಯ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರು ಸಮವಸ್ತ್ರವನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಸೇನೆಯ ಮೂಲಗಳು ಹೇಳಿವೆ.

ಈ ಸಮವಸ್ತ್ರವನ್ನು ವಿನ್ಯಾಸ ಮಾಡುವ ಮುನ್ನ ನಾಲ್ಕು ಪ್ರಮುಖ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಸೇನೆಯು ಹೇಳಿತ್ತು. ಅವುಗಳನ್ನು ‘4ಸಿ’ ಎಂದು ಕರೆಯಲಾಗಿತ್ತು. ಅವೆಂದರೆ, 1.ಕಂಫರ್ಟ್‌ (ಆರಾಮ), 2.ಕ್ಲೈಮೇಟ್‌ (ವಾತಾವರಣ), 3.ಕ್ಯಾಮೊಫ್ಲಾಜ್ (ಛದ್ಮ) ಮತ್ತು 4.ಕಾಂಫಿಡೆನ್ಷಿಯಲಿಟಿ (ಗೌಪ್ಯತೆ). ಈ ಅಗತ್ಯವನ್ನು ಗರಿಷ್ಠ ಮಟ್ಟದಲ್ಲಿ ಪೂರೈಸಿದ ಮಾದರಿಯನ್ನು ಸೇನೆಯು ಆಯ್ಕೆ ಮಾಡಿದೆ.

ಈ ಹೊಸ ಸಮವಸ್ತ್ರವನ್ನು 12 ಲಕ್ಷ ಸೈನಿಕರಿಗೆ ಹಂತಹಂತವಾಗಿ ಬಳಕೆಗೆ ತರಲಾಗುತ್ತದೆ.

ಸೇನಾ ಸಮವಸ್ತ್ರ ತಯಾರಿ ಗುತ್ತಿಗೆ ವಿವಾದ

ಸೈನಿಕರಿಗೆ ಯುದ್ಧದ ಹೊಸ ಸಮವಸ್ತ್ರವನ್ನು ಅನಾವರಣಗೊಳಿಸಿದ ನಂತರ, ಅವುಗಳ ತಯಾರಿ ಗುತ್ತಿಗೆ ಕುರಿತು ವಿವಾದ ಎದ್ದಿದೆ. ಸಮವಸ್ತ್ರ ವಿನ್ಯಾಸ ಮಾಡಲು ಹಾಗೂ ತಯಾರಿಸಲು ಖಾಸಗಿಯವರಿಗೆ ಅವಕಾಶ ಮಾಡಿಕೊಟ್ಟಿರುವುದನ್ನು ಸರ್ಕಾರಿ ಸಂಸ್ಥೆಯಾದ ಆರ್ಡಿನನ್ಸ್ ಕ್ಲಾತಿಂಗ್ ಫ್ಯಾಕ್ಟರಿಯ (ಓಸಿಎಫ್‌) ಉದ್ಯೋಗಿಗಳು ಆಕ್ಷೇಪಿಸಿದ್ದಾರೆ. ಇಂತಹ ಅತಿದೊಡ್ಡ ಗುತ್ತಿಗೆಯು ತಮಗೇ ಸಿಗಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ.

ಖಾಸಗಿಯವರು ವಸ್ತ್ರ ವಿನ್ಯಾಸ ಮಾಡಿದ್ದನ್ನು ಸರ್ಕಾರ ಅಂತಿಮಗೊಳಿಸಿದೆ ಎಂದು ದೇಶದ ವಿವಿಧ ಭಾಗಗಳಲ್ಲಿ ನೆಲೆಗೊಂಡಿರುವ ವಿವಿಧ ಆರ್ಡಿನೆನ್ಸ್ ಬಟ್ಟೆ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ನೌಕರರು ಆರೋಪಿಸಿದ್ದಾರೆ. ಆದರೆ, ಸೈನಿಕರಿಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಹಾಗೂ ಗುಣಮಟ್ಟದ ವಸ್ತ್ರಗಳನ್ನು ದೊರಕಿಸುವ ಉದ್ದೇಶದಿಂದ ಮುಕ್ತ ಟೆಂಡರ್ ಆಹ್ವಾನಿಸಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ಎನ್‌ಐಎಫ್‌ಟಿ) ಜೊತೆ ಸಮಾಲೋಚಿಸಿ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗಿದೆ.

ಸರ್ಕಾರ ಹಾಗೂ ಸೇನೆಯು ಖಾಸಗಿಯವರ ಅಡಿಯಾಳಾಗಿ ಕೆಲಸ ಮಾಡುತ್ತಿದೆ ಎಂದು ತಮಿಳುನಾಡಿನ ಘಟಕದ ಉದ್ಯೋಗಿಗಳು ಆರೋಪಿಸಿದ್ದಾರೆ. ಆರ್ಡಿನನ್ಸ್ ಕಾರ್ಖಾನೆಗಳು ಉಳಿಯಬೇಕಾದರೆ, ಅವುಗಳಿಗೆ ಗುತ್ತಿಗೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸಮವಸ್ತ್ರ ವಿನ್ಯಾಸ ಮಾಡುವ ಹಾಗೂ ಗುಣಮಟ್ಟದ ಬಟ್ಟೆ ತಯಾರಿಸುವ ಸಾಮರ್ಥ್ಯವನ್ನು ಸರ್ಕಾರಿ ಕಾರ್ಖಾನೆಗಳು ಹೊಂದಿವೆ ಎಂದು ಅವರು ಪ್ರತಿಪಾದಿಸಿದ್ದಾರೆ. ಬೃಹತ್ ಆರ್ಡಿನನ್ಸ್ ಫ್ಯಾಕ್ಟರಿ ಬೋರ್ಡ್ ಅನ್ನು ಕಳೆದ ವರ್ಷ ಏಳು ಘಟಕಗಳಾಗಿ ವಿಭಜಿಸಿದ್ದಕ್ಕೂ ಉದ್ಯೋಗಿಗಳು ಬೇಸರ ವ್ಯಕ್ತಪಡಿಸಿದ್ದರು.

ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ನೌಕರರು ಮನವಿ ಮಾಡಿದ್ದಾರೆ. ಸಿಪಿಎಂ ಸೇರಿದಂತೆ ವಿವಿಧ ಪಕ್ಷಗಳೂ ಈ ಬಗ್ಗೆ ದನಿ ಎತ್ತಿವೆ.

ಸರಿಯಾದ ಬೆಲೆ, ಗುಣಮಟ್ಟ ಜೊತೆಗೆ ನಿರಂತರವಾಗಿ ಸರಬರಾಜು ಸಾಮರ್ಥ್ಯ ಇರುವವರಿಗೆ ಈ ಗುತ್ತಿಗೆ ವಹಿಸಿಕೊಡುವುದು ಮುಖ್ಯ ಉದ್ದೇಶ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. ‘ಆತ್ಮನಿರ್ಭರ ಭಾರತ್’ ಯೋಜನೆ ಅಡಿಯಲ್ಲಿ, ಎಲ್ಲಾ ಖಾಸಗಿ ಸಂಸ್ಥೆಗಳು ಹಾಗೂ ಸರ್ಕಾರಿ ಆರ್ಡಿನನ್ಸ್ ಘಟಕಗಳು ಮುಕ್ತ ಟೆಂಡರ್ ಮತ್ತು ಪಾರದರ್ಶಕ ಖರೀದಿ ಪ್ರಕ್ರಿಯೆಯಲ್ಲಿ ಭಾವಹಿಸಲು ಅರ್ಹರಾಗಿರುತ್ತವೆ ಎಂದು ಮೂಲಗಳು ತಿಳಿಸಿವೆ.

ಓಸಿಎಫ್‌ಗಳಲ್ಲಿ ಈಗಾಗಲೇ ಗುತ್ತಿಗೆ ಪಡೆದಿರುವ ಸಾಕಷ್ಟು ಕೆಲಸಗಳು ಬಾಕಿ ಇವೆ ಎನ್ನಲಾಗಿದೆ. 2023ರ ಹೊತ್ತಿಗೆ ಸೇನೆಗೆ ಸಮವಸ್ತ್ರ ಪೂರೈಕೆ ಆಗಲಿದೆ. ಸೇನಾ ಬಟ್ಟೆ ಕಾರ್ಖಾನೆಗಳು ಶಾಜಹಾನ್‌ಪುರ, ಹಜರತ್‌ಪುರ ಮತ್ತು ತಮಿಳುನಾಡಿನ ಆವಡಿಯಲ್ಲಿ ನೆಲೆಗೊಂಡಿವೆ. ಇವು ದೀರ್ಘಾವಧಿ ಬಾಳಿಕೆಯ, ಉತ್ತಮ ಗುಣಮಟ್ಟದ ಸಮವಸ್ತ್ರ ತಯಾರಿಕೆಗೆ ಹೆಸರುವಾಸಿಯಾಗಿವೆ.

ಸಮವಸ್ತ್ರ: ಸೈನಿಕರ ವಿಶಿಷ್ಟ ಗುರುತು

ಸಮವಸ್ತ್ರಗಳು ಯಾವುದೇ ಸೇನಾಪಡೆಗೆ ಅತ್ಯಂತ ವಿಶಿಷ್ಟವಾದ ಗುರುತಿನ ಲಕ್ಷಣಗಳಲ್ಲಿ ಒಂದಾಗಿರುತ್ತವೆ.ಇವು ಸಿಬ್ಬಂದಿಗಳ ನಡುವೆ ಒಗ್ಗಟ್ಟು ಮತ್ತು ಶಿಸ್ತನ್ನು ಬೆಳೆಸುತ್ತವೆ.ಸಮವಸ್ತ್ರವು ಸೈನಿಕರಿಗೆ ಹೆಮ್ಮೆಯ ಸಂಕೇತ. ಸೈನಿಕನೊಬ್ಬ ಧರಿಸುವ ಬಟ್ಟೆಯು ದೇಶದ ಪ್ರತಿ ನಾಗರಿಕನಲ್ಲೂ ಸೈನಿಕರ ಬಗ್ಗೆ ಗೌರವ ಭಾವ ಮೂಡಿಸುತ್ತದೆ.ಸೇನಾ ಸಿಬ್ಬಂದಿ ಹಾಗೂ ನಾಗರಿಕರ ನಡುವೆ ವ್ಯತ್ಯಾಸವನ್ನು ಗುರುತಿಸುವ ಉದ್ದೇಶದಿಂದ ಮಾತ್ರವೇ ಸಮವಸ್ತ್ರಗಳನ್ನು ವಿನ್ಯಾಸಗೊಳಿಸಿರುವುದಿಲ್ಲ. ಅವು ಸೇನೆಯ ವಿವಿಧ ಪಡೆಗಳ ನಡುವಿನ ಭಿನ್ನತೆಯನ್ನೂ ಪ್ರತಿಬಿಂಬಿಸುತ್ತವೆ.

ಸೈನಿಕರ ದಿರಿಸಿನಲ್ಲಿ ಬದಲಾವಣೆ ತರುವ ಹಿಂದೆ ಹಲವು ಉದ್ದೇಶಗಳಿವೆ. ‘ಆರಾಮದಾಯಕ’ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಹೊಸ ಸಮವಸ್ತ್ರವನ್ನು ಜಾರಿಗೆ ತರಲಾಗಿದೆ ಎಂದು ತಜ್ಞರು ಹೇಳಿದ್ದಾರೆ.ಭದ್ರತೆಯ ವಿಚಾರವೂ ಈ ಬದಲಾವಣೆ ಹಿಂದಿರುವ ಮತ್ತೊಂದು ಉದ್ದೇಶ. ಸೈನಿಕರು ಯುದ್ಧಭೂಮಿಯಲ್ಲಿ ಬದುಕುಳಿಯುವಿಕೆಯ ಸಮಯವನ್ನು ಹೆಚ್ಚಿಸಲು ಈ ಆಧುನಿಕ ದಿರಿಸು ಪರಿಚಯಿಸಲಾಗಿದೆ ಎನ್ನಲಾಗುತ್ತಿದೆ. ಸೈನಿಕರು ಬಳಸುವ ರೀತಿಯ ಸಮವಸ್ತ್ರವನ್ನು ಇತರ ಅರೆಸೇನಾ ಪಡೆಗಳು ಧರಿಸುವುದನ್ನು ಸೇನೆ ಯಾವಾಗಲೂ ಆಕ್ಷೇಪಿಸುತ್ತಿತ್ತು. ಅನೇಕ ಬಾರಿ ಈ ಬಗ್ಗೆ ದನಿ ಎತ್ತಲಾಗಿತ್ತು ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ. ಈ ದಿಸೆಯಲ್ಲಿ ಬದಲಾವಣೆ ಅಗತ್ಯವಿತ್ತು ಎನ್ನುತ್ತಾರೆ ಅವರು.

ಸೇನಾ ಸಮವಸ್ತ್ರ ಬದಲಾವಣೆ ಸೇರಿದಂತೆ,ವಿಶ್ವದ ನಾನಾ ದೇಶಗಳು ಸೈನ್ಯವನ್ನು ಆಧುನಿಕಗೊಳಿಸುತ್ತಿವೆ. ಯುದ್ಧೋಪಕರಣ ಖರೀದಿ, ಮೇಲ್ದರ್ಜೆಗೇರಿಸುವುದು, ವಿವಿಧ ಸಲಕರಣೆಗಳ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿವೆ. ಮುಂಬರುವ ದಿನಗಳಲ್ಲಿ ತಂತ್ರಜ್ಞಾನಾಧಾರಿತ ಯುದ್ಧದ ಪ್ರಸಂಗಗಳನ್ನು ಎದುರಿಸಲು ಸಜ್ಜಾಗುತ್ತಿವೆ. ಈ ದಿಸೆಯಲ್ಲಿ ಭಾರತವೂ ಹೆಜ್ಜೆ ಇರಿಸಿದೆ.

ಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಅವರ ಎದುರು 2020ರ ಜನವರಿಯಲ್ಲಿ ಸಮವಸ್ತ್ರ ಬದಲಿಸುವ ಪ್ರಸ್ತಾವ ಬಂದಿತ್ತು. ಹೊಸ ವಿನ್ಯಾಸವನ್ನುಜಾರಿಗೊಳಿಸುವ ಮುನ್ನ, ಸಂಬಂಧಪಟ್ಟವರ ಜೊತೆ ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ವಿವಿಧ ದೇಶಗಳ ಸೇನಾ ಸಮವಸ್ತ್ರಗಳ ಬಗ್ಗೆ ಅಧ್ಯಯನವನ್ನೂ ನಡೆಸಲಾಗಿದೆ. ಹೊಸ ಸಮವಸ್ತ್ರವು ಅಮೆರಿಕ ಸೈನ್ಯದ ಸೈನಿಕರ ಡಿಜಿಟಲ್ ಮುದ್ರಣದ ಮಾದರಿಯನ್ನು ಹೋಲುತ್ತದೆ.

ಸೈನಿಕರು ದೇಶದ ವಿಶಿಷ್ಟ ಹವಾಗುಣದ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಬೇಕಿರುತ್ತದೆ. ಯುದ್ಧ, ಪರ್ವತಾರೋಹಣ, ಕಠಿಣ ಭೂಪ್ರದೇಶಗಳಲ್ಲಿ ಗಸ್ತು, ಶೀತ ವಾತಾವರಣದಲ್ಲಿ ಕರ್ತವ್ಯ, ಶುಷ್ಕ ಎನಿಸುವ ಜಾಗಗಳಲ್ಲಿ ಕೆಲಸ, ಹವಾಮಾನ ವೈಪರೀತ್ಯ ನಿರ್ವಹಣೆಯಂತಹ ಕರ್ತವ್ಯಗಳನ್ನೂ ನಿಭಾಯಿಸಬೇಕಿರುತ್ತದೆ. ಈ ಎಲ್ಲ ವಿಚಾರಗಳಲ್ಲಿ ಸೈನಿಕರು ಧರಿಸಿರುವ ಸಮವಸ್ತ್ರ ಅತಿಮುಖ್ಯ ಪಾತ್ರ ವಹಿಸುತ್ತದೆ. ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸುವಲ್ಲಿಆರಾಮದಾಯಕ ಉಡುಗೆಗಳ ಪಾತ್ರ ಮಹತ್ವದ್ದು ಎನ್ನುತ್ತಾರೆ ತಜ್ಞರು.

ಭಾರತದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಅವಧಿಯಲ್ಲಿ ಸಾಂಪ್ರದಾಯಿಕ ಸೇನಾ ಸಮವಸ್ತ್ರವನ್ನು ಪರಿಚಯಿಸಲಾಗಿತ್ತು. ಆಗ, ಬಂಗಾಳ, ಬಾಂಬೆ ಹಾಗೂ ಮದ್ರಾಸ್ ಪ್ರೆಸಿಡೆನ್ಸಿಗೆ ಪ್ರತ್ಯೇಕ ಸಮವಸ್ತ್ರ ಇದ್ದವು. 1857ರ ಸೇನಾ ದಂಗೆಯ ಬಳಿಕ ಸಮವಸ್ತ್ರ ಬದಲಿಸಲಾಯಿತು. 1947ರಲ್ಲಿ ದೇಶ ವಿಭಜನೆಯಾದ ಬಳಿಕ, ಭಾರತದ ಸೇನೆಗೆ ಹೊಸ ಸಮವಸ್ತ್ರ ಪರಿಚಯಿಸಲಾಯಿತು. 1962ರ ಯುದ್ಧದ ಬಳಿಕ ಮತ್ತೊಮ್ಮೆ ದಿರಿಸು ಬದಲಾಯಿತು. ಲಡಾಖ್‌ನಂತಹ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ಸೈನಿಕರಿಗೆ ವಿಶೇಷ ವಸ್ತ್ರ ವಿನ್ಯಾಸಗೊಳಿಸಲಾಯಿತು. 1980ರಲ್ಲಿ ಕಾಟನ್ ಆಲಿವ್ ಬಟ್ಟೆಗಳನ್ನು ಬದಲಿಸಲಾಗಿತ್ತು.

ಆಧಾರ: ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT