ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
EXPLAINER-ಅಮೆರಿಕ ಬಾಲ್ಟಿಮೋರ್ ಬಂದರಿನ ಸೇತುವೆಗೆ ಡಾಲಿ ಡಿಕ್ಕಿಯಿಂದ ಆಗಿದ್ದೇನು?
EXPLAINER-ಅಮೆರಿಕ ಬಾಲ್ಟಿಮೋರ್ ಬಂದರಿನ ಸೇತುವೆಗೆ ಡಾಲಿ ಡಿಕ್ಕಿಯಿಂದ ಆಗಿದ್ದೇನು?
Published 28 ಮಾರ್ಚ್ 2024, 14:18 IST
Last Updated 28 ಮಾರ್ಚ್ 2024, 14:28 IST
ಅಕ್ಷರ ಗಾತ್ರ
ಅಮೆರಿಕದ ಅತಿ ಬೇಡಿಕೆಯ 17 ಪ್ರಮುಖ ಬಂದರುಗಳಲ್ಲಿ ಮೆರಿಲ್ಯಾಂಡ್‌ನಲ್ಲಿರುವ ಬಾಲ್ಟಿಮೋರ್ ಕೂಡಾ ಒಂದು. ನಿತ್ಯ ಸುಮಾರು 30 ಸಾವಿರ ವಾಹನಗಳ ಸುಗಮ ಸಂಚಾರಕ್ಕೆ ನೆರವಾಗುತ್ತಿದ್ದ ಫ್ರಾನ್ಸಿಸ್‌ ಸ್ಕಾಟ್‌ ಕೀ ಸೇತುವೆಗೆ ಡಾಲಿ ಹೆಸರಿನ ದೈತ್ಯ ಹಡಗು ಮಾರ್ಚ್ 26ರಂದು ಡಿಕ್ಕಿ ಹೊಡೆದ ಪರಿಣಾಮ ಆರು ಜನ ಮೃತಪಟ್ಟಿದ್ದಾರೆ. ಅಷ್ಟು ಮಾತ್ರವಲ್ಲ, ಅಮೆರಿಕಕ್ಕೆ ಅತಿ ಹೆಚ್ಚಿನ ಆದಾಯ ತಂದುಕೊಡುತ್ತಿದ್ದ ಬಂದರಿನ ಸಂಪರ್ಕ ಕೊಂಡಿಯೇ ಕಳಚಿಬಿದ್ದಿದೆ. ಅದರ ಮಾಹಿತಿ ಇಲ್ಲಿದೆ.

ಬಾಲ್ಟಿಮೋರ್‌ನ ಫ್ರಾನ್ಸಿಸ್‌ ಸ್ಕಾಟ್‌ ಕೀ ಸೇತುವೆಗೆ ಸರಕು ಸಾಗಣೆ ಹಡಗೊಂದು ಅಪ್ಪಳಿಸಿದ ನಂತರ ನಾಪತ್ತೆಯಾಗಿದ್ದ ಆರು ಕಾರ್ಮಿಕರಲ್ಲಿ ಇಬ್ಬರ ಮೃತದೇಹಗಳು ಪಟಾಪ್ಸ್ಕೋ ನದಿಯ ಹಿಮಾವೃತ ನೀರಿನಲ್ಲಿ ಸಿಲುಕಿದ್ದವು. ಅವುಗಳನ್ನು ಮುಳುಗು ತಜ್ಞರು ಮೇಲಕ್ಕೆತ್ತಿದ್ದಾರೆ. ಇನ್ನಿಬ್ಬರ ಶವಗಳು ಪಿಕಪ್ ಟ್ರಕ್‌ನಲ್ಲಿ ಪತ್ತೆಯಾಗಿವೆ. ಬದುಕುಳಿದಿದ್ದ ಇಬ್ಬರು ಕಾರ್ಮಿಕರನ್ನು ರಕ್ಷಣಾ ತಂಡದ ಯೋಧರು ರಕ್ಷಿಸಿದ್ದಾರೆ. ಇವರಲ್ಲಿ ಒಬ್ಬರನ್ನು ಆಸ್ಪತ್ರೆ ದಾಖಲಿಸಲಾಗಿದೆ.

ಬಾಲ್ಟಿಮೋರ್ ಸೇತುವೆ ಕುಸಿದಿದ್ದು ಎಂದು ಮತ್ತು ಹೇಗೆ?

ಶ್ರೀಲಂಕಾದತ್ತ ಹೊರಟಿದ್ದ ಡಾಲಿ ಎಂಬ ಸರಕು ಸಾಗಣೆ ಹಡಗೊಂದು ಪಟಾಪ್ಸ್ಕೋ ನದಿಯಲ್ಲಿ ಸಾಗುತ್ತಿತ್ತು. ನಡು ರಾತ್ರಿ 1:24ರ ಸಮಯದಲ್ಲಿ ಹಡಗಿನ ವಿದ್ಯುತ್ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದಿಂದ ಎಲ್ಲಾ ದೀಪಗಳು ಆರಿಹೋದವು. 

ಇದಾಗಿ ಮೂರು ನಿಮಿಷಗಳ ನಂತರ ಅಂದರೆ 1:27ರ ಹೊತ್ತಿಗೆ ಹಡಗು ಸೇತುವೆಯ ಆಧಾರ ಸ್ತಂಭಕ್ಕೆ ಡಿಕ್ಕಿ ಹೊಡೆದಿತ್ತು. ಇದರ ಪರಿಣಾಮದಿಂದ ಸೇತುವೆಯ ಬಹುಪಾಲು ಕುಸಿದು ನೀರಿಗೆ ಬಿದ್ದಿತು. 

‘ಸೇತುವೆ ಸದೃಢವಾಗಿತ್ತು. ಅದರ ನಿರ್ಮಾಣದಲ್ಲಿ ಯಾವುದೇ ಲೋಪವಿರಲಿಲ್ಲ’ ಎಂಬುದನ್ನು ಮೇರಿಲ್ಯಾಂಡ್‌ನ ಗವರ್ನರ್ ವೇಸ್ ಮೂರ್‌  ಅವರ ಹೇಳಿಕೆ.

2007ರಲ್ಲಿ ಮೆಸ್ಸಿಸ್ಸಿಪಿ ನದಿಗೆ ಮಿನ್ನೆಪೊಲಿಸ್ ಬಳಿ ನಿರ್ಮಿಸಲಾಗಿದ್ದ I-35W ಸೇತುವೆಯ ವಿನ್ಯಾಸ ಹಂತದಲ್ಲಿನ ದೋಷದಿಂದಾಗಿ ಸೇತುವೆ ಕುಸಿದಿತ್ತು. ಈ ದುರ್ಘಟನೆಯಲ್ಲಿ 13 ಜನ ಮೃತಪಟ್ಟಿದ್ದರು. ಇದಾದ ನಂತರ ಅಮೆರಿಕದಲ್ಲಿ ನಡೆದ ಅತ್ಯಂತ ದೊಡ್ಡ ಸೇತುವೆ ಕುಸಿತ ಪ್ರಕರಣ ಇದಾಗಿದೆ.

ಈವರೆಗೂ ಮೃತಪಟ್ಟವರ ಸಂಖ್ಯೆ ಎಷ್ಟು?

ಹಡಗು ಸೇತುವೆಗೆ ಡಿಕ್ಕಿ ಹೊಡೆಯುವ ಸಂದರ್ಭದಲ್ಲಿ ಕಾರ್ಮಿಕರು ಸೇತುವೆ ಮೇಲಿನ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಿದ್ದರು. ಒಟ್ಟು ಎಂಟು ಜನ ಸೇತುವೆ ಮೇಲಿದ್ದರು. ಸೇತುವೆ ಕುಸಿದ ನಂತರ ಇವರು 185 ಅಡಿ ಕೆಳಗಿದ್ದ ನದಿಗೆ ಬಿದ್ದರು. ಆಗ ಅಲ್ಲಿನ ತಾಪಮಾನ 8 ಡಿಗ್ರಿ ಸೆಲ್ಸಿಯಸ್ ಇತ್ತು.

ಹೀಗೆ ನದಿಗೆ ಬಿದ್ದವರಲ್ಲಿ ಇಬ್ಬರನ್ನು ರಕ್ಷಿಸಲಾಯಿತು. ಇವರಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಮತ್ತೊಬ್ಬರಿಗೆ ಹೆಚ್ಚಿನ ಅಪಾಯ ಆಗಿರಲಿಲ್ಲ.

ಬುಧವಾರ ಇಬ್ಬರು ಪುರುಷರ ಮೃತದೇಹವನ್ನು ಹೊರಕ್ಕೆ ತರಲಾಗಿದೆ. ಇವರಲ್ಲಿ ಒಬ್ಬರು ಬಾಲ್ಟಿಮೋರ್‌ನವರೇ ಆದ ಅಲೆಜಾಂಡ್ರೊ ಹರ್ನಂಡೆಜ್‌ ಫ್ಯೂಂಟ್ಸ್‌ (35), ಗ್ವಾಟೆಮಾಲಾದ ಡೋರ್ಲಿಯಾನ್ ರೊನೀಯಲ್ ಕ್ಯಾಸ್ಟಿಲೊ ಕ್ಯಾಬ್ರೆರಾ (26) ಎಂದು ಗುರುತಿಸಲಾಗಿದೆ. ಇವರ ಮೃತದೇಹಗಳು ನದಿಯ 50 ಅಡಿ ಆಳದಲ್ಲಿ ಸಿಲುಕಿದ್ದವು ಎಂದು ರಕ್ಷಣಾ ತಂಡ ಹೇಳಿದೆ. 

ಹಡಗು ಸೇತುವೆಗೆ ಡಿಕ್ಕಿ ಹೊಡೆದ ನಂತರ ವಾಹನಗಳ ಸಂಚಾರವನ್ನು ತಡೆಯಲಾಯಿತು. ಹಡಗು ಕೂಡಾ ಆ್ಯಂಕರ್ ಬಳಸಿ ತನ್ನ ವೇಗ ತಗ್ಗಿಸಿತು ಎಂದು ಗವರ್ನರ್ ಹೇಳಿದ್ದಾರೆ. 

ಬಾಲ್ಟಿಮೋರ್ ಬಂದರು ಬಳಿ ಇರುವ ಸೇತುವೆ ಕುಸಿದ ನಂತರ ನದಿಯಲ್ಲಿ ಮುಳುಗಿದವರಿಗಾಗಿ ನಡೆದ ಶೋಧ ಕಾರ್ಯ

ಬಾಲ್ಟಿಮೋರ್ ಬಂದರು ಬಳಿ ಇರುವ ಸೇತುವೆ ಕುಸಿದ ನಂತರ ನದಿಯಲ್ಲಿ ಮುಳುಗಿದವರಿಗಾಗಿ ನಡೆದ ಶೋಧ ಕಾರ್ಯ

ರಾಯಿಟರ್ಸ್ ಚಿತ್ರ

ಸೇತುವೆ ಕುಸಿದಿದ್ದು ಏಕೆ?

ಲೋಹದಿಂದ ನಿರ್ಮಿಸಲಾದ ಈ ಸೇತುವೆಗೆ ಟ್ರೆಸ್‌ನಿಂದ ಮಾಡಲಾದ ತಗ್ಗಿದ ಡೆಕ್‌ ಹೊಂದಿತ್ತು. ಸೇತುವೆ ಕುಸಿಯಲು ಇದೇ ಕಾರಣ ಎಂದು ಎಂಜಿನಿಯರ್‌ಗಳು ಹೇಳಿದ್ದಾರೆ. ನೀರಿನೊಳಗೆ ಆಳದಲ್ಲಿ ತಳವೂರಿದ್ದ ಸೇತುವೆ ಮುಖ್ಯ ಆಧಾರ ಸ್ತಂಭಕ್ಕೆ ಹಡಗು ಡಿಕ್ಕಿ ಹೊಡೆದಿದ್ದರಿಂದ, ಬೇಗನೆ ಕುಸಿದಿದೆ. ಈ ಸೇತುವೆಯ ಮೂಲ ವಿನ್ಯಾಸದಲ್ಲೇ ಸಮಸ್ಯೆ ಇತ್ತು ಎಂದು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ ಮುಖ್ಯಸ್ಥ ಹೇಳಿದ್ದಾರೆ.

ಹಾನಿಯ ನಷ್ಟವನ್ನು ಭರಿಸುವವರು ಯಾರು? ಸೇತುವೆ ನಿರ್ಮಾಣಕ್ಕೆ ಖರ್ಚಾದ ಒಟ್ಟು ವೆಚ್ಚ ಎಷ್ಟು?

ಘಟನಾ ಸ್ಥಳಕ್ಕೆ ಭೇಟಿ ನೀಡುವುದಾಗಿ ಹೇಳಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಸೇತುವೆ ನಿರ್ಮಾಣದ ಸಂಪೂರ್ಣ ಖರ್ಚನ್ನು ಸರ್ಕಾರವೇ ಭರಿಸಲಿದೆ ಎಂದಿದ್ದಾರೆ.

ತುರ್ತು ಪರಿಹಾರಕ್ಕಾಗಿ ಸಾರಿಗೆ ಇಲಾಖೆಯು ತಕ್ಷಣವೇ ಕೆಲ ದಶಲಕ್ಷ ಡಾಲರ್‌ಗಳನ್ನು ಬಿಡುಗಡೆ ಮಾಡಿದೆ. ಹೊಸದಾಗಿ ಸೇತುವೆ ನಿರ್ಮಿಸಲು  ಅಗತ್ಯ ಇರುವ ಅನುದಾನಕ್ಕೆ ಅಮೆರಿಕ ಕಾಂಗ್ರೆಸ್‌ ಹಣ ಮಂಜೂರು ಮಾಡಬೇಕಿದೆ. 2007ರಲ್ಲಿ ಕುಸಿದ ಮಿನ್ನೆಸೊಟಾ ಸೇತುವೆಗೆ 250 ದಶಲಕ್ಷ ಅಮೆರಿಕನ್ ಡಾಲರ್‌ (₹2,084 ಕೋಟಿ) ಅನುದಾನ ಬಿಡುಗಡೆ ಮಾಡಿದೆ.

ಆರಂಭದಲ್ಲಿ ಈ ಸೇತುವೆಯ ನಿರ್ಮಾಣಕ್ಕೆ 600 ಅಮೆರಿಕನ್ ಡಾಲರ್ (₹5,003 ಕೋಟಿ) ಅಗತ್ಯ ಎಂದು ಅಂದಾಜು ಮಾಡಲಾಗಿತ್ತು. ನಷ್ಟದ ಕುರಿತು ಒಬ್ಬರು ಗರಿಷ್ಠ ₹4 ಶತಕೋಟಿಯಷ್ಟು ಪರಿಹಾರಕ್ಕೆ ಬೇಡಿಕೆ ಇಟ್ಟರೆ, ಹಲವು ಶತಕೋಟಿಯಷ್ಟು ಪರಿಹಾರವನ್ನು ವಿಮಾ ಕಂಪನಿಗಳು ನೀಡುವಂತಾಗಬಹುದು. ಇದು ಹಡಗಿನ ಗರಿಷ್ಠ ವಿಮಾ ನಷ್ಟವಾಗಿರಲಿದೆ ಎಂದು ಅಂದಾಜಿಸಲಾಗಿದೆ.

ಈ ಸೇತುವೆ ಮರು ನಿರ್ಮಾಣಕ್ಕೆ ತೆಗೆದುಕೊಂಡಿದ್ದ ಸಮಯ ಎಷ್ಟು?

1972ರಲ್ಲಿ ನಿರ್ಮಾಣಗೊಂಡ ಈ ಸೇತುವೆಗೆ ಆಗ 5 ವರ್ಷಗಳ ಸಮಯ ತೆಗೆದುಕೊಂಡಿತ್ತು. 

ಸದ್ಯ ಈ ಸೇತುವೆ ಕುಸಿದ ಪರಿಣಾಮ ಮೆರಿಲ್ಯಾಂಡ್‌ಗೆ ಈವರೆಗೂ ₹233 ಕೋಟಿ ವ್ಯವಹಾರ ನಷ್ಟವಾಗಿದೆ.

ಬಾಲ್ಟಿಮೋರ್ ಸೇತುವೆಗೆ ಬಡಿದ ಹಡಗು ಎಂಥದ್ದು ?

ಬಾಲ್ಟಿಮೋರ್‌ನಿಂದ ಹೊರಟ ಸಿನರ್ಜಿ ಮರೈನ್ ಸಮೂಹಕ್ಕೆ ಸೇರಿದ ಡಾಲಿ ಹಡಗು ಶ್ರೀಲಂಕಾದ ಕೊಲೊಂಬೊದತ್ತ ಸಾಗುತ್ತಿತ್ತು. ಇದರಲ್ಲಿ 22 ಜನ ಇದ್ದರು. 

ಸಿಂಗಪುರ ಮೂಲದ ಈ ಹಡಗು 948 ಅಡಿ ಉದ್ದ ಇದೆ. ಅಂದರೆ ಮೂರು ಫುಟ್‌ಬಾಲ್‌ ಕ್ರೀಡಾಂಗಣದಷ್ಟು ದೊಡ್ಡದಿದೆ. ಕಾರ್ಗೊಗಿಂತ ದುಪ್ಪಟ್ಟು ಭಾರ ಹೊತ್ತು ಸಾಗಬಲ್ಲ ಈ ಹಡಗಿನಲ್ಲಿ ಹಲವು ಕಂಟೇನರ್‌ಗಳಿದ್ದವು. 

2016ರಲ್ಲಿ ಬೆಲ್ಜಿಯಂನಲ್ಲಿ ನಾರ್ತ್ ಸಮುದ್ರದ ಟರ್ಮಿನಲ್‌ನಿಂದ ಹೊರಟಿದ್ದ ಹಡಗು ಕಡಲತೀರಕ್ಕೆ ಅಪ್ಪಳಿಸಿ ಅಪಘಾತಕ್ಕೀಡಾಗಿತ್ತು. 2023ರಲ್ಲಿ ಇದನ್ನು ಮರುಪರಿಶೀಲನೆಗೆ ಒಳಪಡಿಸಲಾಯಿತು. ಆಗ ಹಡಗಿನ ಪ್ರೊಪಲ್ಶನ್ ಮತ್ತು ಆಕ್ಸಿಲರ್ ಯಂತ್ರದಲ್ಲಿ ದೋಷವಿದ್ದಿದ್ದು ಪತ್ತೆಯಾಗಿತ್ತು ಎಂದು ರಾಯಿಟರ್ಸ್ ವರದಿ ಮಾಡಿದೆ.

ಕುಸಿದ ಸೇತುವೆ ಕುರಿತು ಒಂದಷ್ಟು ಮಾಹಿತಿ

ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯು ಬಾಲ್ಟಿಮೋರ್‌ ಬಂದರಿಗೆ ಸಂಪರ್ಕ ಕಲ್ಪಿಸುವ ಮೂರು ಮಾರ್ಗಗಳಲ್ಲಿ ಒಂದು. ನಿತ್ಯ ಇಲ್ಲಿ 31 ಸಾವಿರ ಕಾರುಗಳು ಸೇರಿದಂತೆ ವರ್ಷಕ್ಕೆ 1.13 ಕೋಟಿ ವಾಹನ ಸಂಚರಿಸುತ್ತವೆ.

ಈ ಲೋಹದ ಸೇತುವೆಯು ಚತುಷ್ಪತ ರಸ್ತೆಯಾಗಿದ್ದು, ನದಿಯ ನೀರಿನ ಮೇಲ್ಮಟ್ಟದಿಂದ 185 ಅಡಿ ಎತ್ತರದಲ್ಲಿದೆ. 1977ರಲ್ಲಿ ಈ ಸೇತುವೆ ಕಾರ್ಯಾರಂಭ ಮಾಡಿತು. 1814ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಬಾಲ್ಟಿಮೋರ್ ಕದನದಲ್ಲಿ ಬ್ರಿಟಿಷರನ್ನು ಪರಾಭವಗೊಳಿಸಿದ ಸಂದರ್ಭದಲ್ಲಿ ಅಮೆರಿಕದ ರಾಷ್ಟ್ರಗೀತೆ ರಚಿಸಿದ ಫ್ರಾನ್ಸಿಸ್ ಸ್ಕಾಟ್ ಕೀ ಅವರ ಹೆಸರನ್ನೇ ಈ ಸೇತುವೆಗೆ ಇಡಲಾಗಿದೆ.

ಅಮೆರಿಕದ ಬಾಲ್ಟಿಮೋರ್ ಬಂದರು ಬಳಿಯ ಸೇತುವೆ ಕುಸಿದ ದೃಶ್ಯ

ಅಮೆರಿಕದ ಬಾಲ್ಟಿಮೋರ್ ಬಂದರು ಬಳಿಯ ಸೇತುವೆ ಕುಸಿದ ದೃಶ್ಯ

ರಾಯಿಟರ್ಸ್ ಚಿತ್ರ

ಸೇತುವೆ ಕುಸಿದಿದ್ದರಿಂದ ಬಾಲ್ಟಿಮೋರ್ ಬಂದರಿಗೆ ಆದ ನಷ್ಟವೇನು?

ಬಾಲ್ಟಿಮೋರ್ ಬಂದರು ಅಮೆರಿಕದ 17ನೇ ಅತಿ ದೊಡ್ಡ ಬಂದರು. ಸೇತುವೆ ಕುಸಿತದ ನಂತರ ಇದರ ಬಳಿ ರಸ್ತೆ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಬಾಲ್ಟಿಮೋರ್‌ಗೆ ಬರುತ್ತಿದ್ದ ಸರಕು ಸಾಗಣೆ ಹಡಗುಗಳನ್ನು ದೊಡ್ಡ ಬಂದರುಗಳತ್ತ ಹೋಗುವಂತೆ ಮಾರ್ಗ ಬದಲಾವಣೆ  ಮಾಡಲಾಗಿದೆ. ಆದರೆ ಈ ಘಟನೆಯಿಂದ ಕಾರುಗಳ ಸಾಗಣೆ, ಕಲ್ಲಿದ್ದಲ್ಲು ಮತ್ತು ಸಕ್ಕರೆ ಸಾಗಣೆಗೆ ತೀವ್ರ ತೊಡಕಾಗಿದೆ.

ಕಾರುಗಳ ಸಾಗಣೆಯಲ್ಲಿ ಅಮೆರಿಕದಲ್ಲೇ ಅತಿ ಹೆಚ್ಚು ಬೇಡಿಕೆಯಲ್ಲಿರುವ ಬಂದರು ಬಾಲ್ಟಿಮೋರ್. 2023ರಲ್ಲಿ ಇಲ್ಲಿ 7.50ಲಕ್ಷ ವಾಹನಗಳು ಹಡಗು ಮೂಲಕ ಸಾಗಣೆಗೊಂಡಿದ್ದವು ಎಂದು ಮೆರಿಲ್ಯಾಂಡ್ ಬಂದರು ಆಡಳಿತ ಮಾಹಿತಿ ನೀಡಿದೆ. ಇದೇ ವರ್ಷ ಈ ಬಂದರು ಮೂಲಕ ಅತಿ ಹೆಚ್ಚು ಕಲ್ಲಿದ್ದಲ್ಲು ರಫ್ತುಗೊಂಡು ಹೆಚ್ಚಿನ ಆದಾಯ ತಂದುಕೊಟ್ಟಿತ್ತು. 

ಇವುಗಳೊಂದಿಗೆ ಈ ಬಂದರು ಮೂಲಕ ಕೃಷಿ ಉಪಕರಣ, ನಿರ್ಮಾಣ ಯಂತ್ರೋ‍ಕರಣಗಳು, ಸಕ್ಕರೆ, ಉಪ್ಪು ಕೂಡಾ ಅತಿ ಹೆಚ್ಚು ರಫ್ತು ಆಗುತ್ತಿವೆ ಎಂದು ದಾಖಲೆಗಳು ಹೇಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT