ದಟ್ಟ ಮಲೆನಾಡಿನ, ಕವ್ವನೆ ಕವಿದ ಕಾನ ಅಂಚಿನಲ್ಲಿ ಆವರಿಸಿದ್ದ ಮಂಜಿನೊಳಗೆ ಮುಳುಗೇಳುತ್ತಿತ್ತು ಸಾಗರವೆಂಬ ಪೇಟೆಯಲ್ಲದ ಪೇಟೆ. ಇಲ್ಲಿನ ಸಣ್ಣನೆಯ ರೋಡಿನಲ್ಲಿ ಸಾಗುತ್ತಿದ್ದರೆ, ಪಕ್ಕದಲ್ಲೆ ಜಿನುಗುತ್ತ ಹೊರಟಿದ್ದ ವರದಾ ನದಿಯ ಮಡಿಲಿಂದ ಭತ್ತದ ಪೈರಿನ ಘಮ ಇಡೀ ಪೇಟೆಯನ್ನು ಆವರಿಸಿಕೊಂಡು, ದಾರಿಹೋಕರ ಮೂಗಿಗೆ ಗಮ್ಮನೆ ರಾಚುತ್ತಿತ್ತು. ಮಳೆಗಾಲದ ಎಡೆಬಿಡದೇ ಸೋನೆ ಸುರಿಯುತ್ತಿದ್ದಾಗಲಂತೂ ಸಣ್ಣಮನೆ ಸೇತುವೆ, ಸೊರಬ ರೋಡನ್ನೂ ಮೀರಿ ಮೈದುಂಬಿ ಹರಿಯುವ ವರದೆಯ ಮೈಯೆಲ್ಲ ಥರೆಹೇವಾರಿ ಭತ್ತದ ಕದಿರಿನ ಕಂಪೇ. ಹೌದು ವರದಾ ನದಿ ತೀರದ ಈ ಪುಟ್ಟ ಪಟ್ಟಣ ಒಂದೊಮ್ಮೆ ಜಗತ್ತೇ ಕೇಳರಿಯದಷ್ಟು ಅಪರೂಪದ ಭತ್ತದ ತಳಿಗಳ ಬೀಡಾಗಿತ್ತು. ನೂರಾರು ತಳಿಗಳು ಇಲ್ಲಿನ ನೆಲ ತಾಕಿ, ಮಳೆಗೆ ಕೈಹಿಡಿದು, ರೈತನ ಕನಸಿಗೆ ಕಸುವು ಕೊಟ್ಟು ನಲಿಯುತ್ತಿದವು.

ಹೌದು, ಸಾಗರ ಎಂದ ತಕ್ಷಣ ನೆನಪಿಗೆ ಬರುವುದು ಇಲ್ಲಿನ ಯಾವುದೇ ಅಬ್ಬರವಿಲ್ಲದೇ ತಣ್ಣಗೆ ಹರಿಯುತ್ತಿರುವ ವರದಾನದಿ, ಅದರ ದಂಡೆಯಲ್ಲೇ ಅಷ್ಟೇ ತಣ್ಣಗೆ, ಯಾವುದೇ ಗೌಜು ಗದ್ದಲವಿಲ್ಲದೇ ಮೈಚಾಚಿಕೊಂಡಿರುವ ಪುಟ್ಟ ಪಟ್ಟಣ, ಆ ಪಟ್ಟಣದಿಂದ ತುಸುವೇ ಹೊರಕ್ಕೆ ಒಂದೆರಡು ಕಿಲೋ ಮೀಟರ್ ದೂರ ಹೋದರೂ ಸಾಕು ಚೆಂದದ ವೈವಿಧ್ಯಮಯ ಸಸ್ಯ ಸಂಪತ್ತಿನ ಕಾನು, ತೀರಾ ಎತ್ತರವಲ್ಲದ ಬೆಟ್ಟಗುಡ್ಡಗಳ ನಟ್ಟ ನಡುವಿನ ಕಣಿವೆಯಲ್ಲಿ ಉದ್ದಕ್ಕೆ ಹರವಿಕೊಂಡಿರುವ ಅಡಕೆ ತೋಟಗಳು, ಅದರಲ್ಲಿ ಅಡಗಿ ಕುಳಿತ, ಕಾಫಿ, ಏಲಕ್ಕಿ, ಕಾಳು ಮೆಣಸು, ಕೋಕೊ.... ತೋಟಗಳ ಒಂದು ನೆತ್ತಿಗೆ ಸೊಪ್ಪಿನ ಬೆಟ್ಟ, ಮತ್ತೊಂದು ಹಕ್ಕಲಿನಲ್ಲಿ ಹವ್ಯಕರು, ದೀವರು, ಒಕ್ಕಲಿಗ ಗೌಡರು, ಹಸಲರ... ಸಾಮರಸ್ಯದ ಜನಜೀವನ. ಹಚ್ಚ ಹಸಿರಿನ ಮುಗಿಲೆತ್ತರ ಬೆಟ್ಟಗುಡ್ಡಗಳು. ಇವೆಲ್ಲದರೆ ಮಧ್ಯ ಗಮ್ಮನೆ ಸುವಾಸನೆ ಬೀರುತ್ತಿದ್ದ ಭತ್ತದ ಗದ್ದೆಗಳು ಮಾತ್ರ ಇತ್ತೀಚಿನ ದಿನಗಳಲ್ಲಿ ತೀರಾ ವಿರಳವಾಗಿಬಿಟ್ಟಿದೆ.

ಸಾಗರವೆಂದರೆ ಇವತ್ತಿಗೆ ಕಾಫಿ, ಅಡಕೆ, ಕಾಳು ಮೆಣಸು, ಏಲಕ್ಕಿಯಂತಹ ವಾಣಿಜ್ಯ ಬೆಳೆಗಳ ನೆಲ. ಆದರೆ ಒಂದು ಕಾಲದಲ್ಲಿ ಇವಲ್ಲದೇ ಸಾಂಪ್ರದಾಯಿಕ ಭತ್ತದ ಕೃಷಿಗೂ ಖ್ಯಾತಿ ಪಡೆದಿತ್ತೆಂಬುದು ಇತ್ತೀಚಿನ ಪೀಳಿಗೆಗೆ ಮರೆತೇ ಹೋಗಿದೆ. ವರದಾನದಿಯ ಬಯಲಿನಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಬರೀ ಭತ್ತದ ಗದ್ದೆಗಳೇ ಕಂಡು ಬರುತ್ತಿದ್ದವು. ಇಳಿಜಾರಿನಲ್ಲಿ ಯಥೇಚ್ಛವಾಗಿ ನೀರು ಲಭ್ಯವಾಗುತ್ತಿದ್ದರಿಂದ ಒಂದರ ಮೇಲೊಂದು ಜೋಡಿಸಿಟ್ಟಂತೆ ಭತ್ತದ ಗದ್ದೆಗಳನ್ನು ನಿರ್ಮಿಸುತ್ತಿದ್ದ ಇಲ್ಲಿನ ಕೃಷಿಕರು ಈ ಗದ್ದೆಗಳಲ್ಲಿ ವರ್ಷಕ್ಕೆರಡು ಬಾರಿ 60ಕ್ಕೂ ಹೆಚ್ಚು ಸಾಂಪ್ರದಾಯಿಕ ಭತ್ತದ ಬೆಳೆಗಳನ್ನು ಬೆಳೆಯುತ್ತಿದ್ದರು. ವಿಪರ್ಯಾಸವೆಂದರೆ ಕಾಫಿ, ಏಲಕ್ಕಿ, ಅಡಕೆ, ಕಾಳು ಮೆಣಸಿಗೆ ಯಾವಾಗ ದಿಢೀರ್ ಬೆಲೆ ಏರಿಕೆಯಾಯಿತೋ ಅಂದಿನಿಂದ ತಾಲ್ಲೂಕಿನಲ್ಲಿ ಸಾಂಪ್ರದಾಯಿಕ ಭತ್ತದ ಗದ್ದೆಗಳೇ ಅಡಕೆ ತೋಟಗಳಾಗಿಯೋ, ಶುಂಠಿಯ ಪಟ್ಟೆಗಳಾಗಿಯೋ ಬದಲಾಗಿ ಭತ್ತದ ಕಣಜ ಅವಸಾನದ ಅಂಚಿಗೆ ತಲುಪಿಬಿಟ್ಟಿದೆ. ಮಲೆನಾಡಿನ ಸಾಂಪ್ರದಾಯಿಕ ಭತ್ತ ತಳಿ ವೈವಿಧ್ಯವೇ ಜನಮಾನಸದಿಂದ ಮರೆಯಾಗುತ್ತಿದೆ. ಬಯಲು ಪ್ರದೇಶಗಳಲ್ಲಿದ್ದ ಭತ್ತದ ಗದ್ದೆಗಳ ಜಾಗವನ್ನು ಮುಗಿಲೆತ್ತರದ ಅಡಕೆ ಮರಗಳು ಅತಿಕ್ರಮಣ ಮಾಡಿವೆ. ಲಕ್ಷಾಂತರ ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದ್ದ ಭತ್ತ ಇದೀಗ ಕೆಲವೇ ಹೆಕ್ಟೇರ್ಗಳಿಗೆ ಕುಸಿದಿದೆ. ಹಸಿರು ಕ್ರಾಂತಿಗೆ ಮುನ್ನ ದೇಶದಲ್ಲಿ ಲೆಕ್ಕವಿಲ್ಲದಷ್ಟು ಭತ್ತದ ತಳಿಗಳಿದ್ದವು. ಈಗ ಅವುಗಳ ಸಂಖ್ಯೆಕೆಲವೇ ನೂರಕ್ಕೆ ಇಳಿದಿದೆ. ಬಹಳ ಹಿಂದೆ ಹೋಗುವುದು ಬೇಡ, ಕೇವಲ 20 ವರ್ಷಗಳ ಹಿಂದೆ ಸಾಗರ ತಾಲ್ಲೂಕಿನಲ್ಲೇ ಸುಮಾರು 60 ಬಗೆಯ ಭತ್ತದ ತಳಿಗಳಿದ್ದವು ಎಂದು ನೆನಪಿಸಿಕೊಳ್ಳುತ್ತಾರೆ ಕರ್ಕಿಕೊಪ್ಪದ ಕೃಷಿಕ ಶ್ರೀಧರ ಭಟ್ಟ. ಈಗ ಅವುಗಳ ಸಂಖ್ಯೆ ಐದಾರಕ್ಕೆ ಕುಸಿದಿದೆ. ಆಹಾರದ ಬೇಡಿಕೆಗೆ ತಕ್ಕಂತೆ ಸುಧಾರಿತ ತಳಿಗಳು ಬೇಕು ನಿಜ. ಹಾಗೆಂದು ಪಾರಂಪರಿಕ ತಳಿಗಳನ್ನೇ ಕಳೆದುಕೊಳ್ಳುವುದು ಯಾವ ಸಾರ್ಥಕ್ಯ?

ಭತ್ತವೇ ಮಣ್ಣಿನ ವ್ಯಕ್ತಿತ್ವ

ಭತ್ತ ಕೃಷಿ ಎಂಬುದು ಸಾಗರ ಸುತ್ತಮುತ್ತಲಿನ ಪ್ರದೇಶದಲ್ಲಿ ಕೇವಲ ಉದ್ಯೋಗ ಆಗಿರಲಿಲ್ಲ. ಅದೇ ಮಲೆನಾಡಿಗರ ಬದುಕಿನ ಅನ್ವರ್ಥವಾಗಿತ್ತು. ಅದು ಪರಂಪರೆ, ಅದೇ ಅವರ ಸಂಸ್ಕೃತಿಯಾಗಿತ್ತು. ಕೃಷಿ ಎಂಬುದು ಸಂಪ್ರದಾಯ, ಕಲಾತ್ಮಕತೆಗಳ ಸಂಗಮವಾಗಿತ್ತು. ಕೃಷಿ ಗೆಯ್ಮೆಯ ಆಯಾಸವನ್ನು ಮರೆಸಲು ಹುಟ್ಟುತ್ತಿದ್ದ ಸೋಬಾನೆ ಪದಗಳು, ಒಗಟುಗಳು, ಗಾದೆಗಳು ವಿಭಿನ್ನ ಸೃಜನಾತ್ಮಕ ಕಲಾ ಪ್ರಕಾರವನ್ನೇ ಹುಟ್ಟು ಹಾಕಿತ್ತಿದ್ದವು. ಜಾನಪದ ಕಲೆ, ಸಂಸ್ಕೃತಿ ಪರಸ್ಪರ ಅವಿನಾ ಬೆಸೆದು ಕೊಂಡಿದ್ದವು. ಗದ್ದೆಯ ಅಂಟು ಮಣ್ಣು ಹಾಗೂ ಮಳೆಯ ಚಿಟಪಟದ ನಡುವಿನ ಯುಗಳ ಗೀತೆಗೆ ರೈತನ ದುಡಿಮೆಯ ನಡುವಿನ ನಿಟ್ಟುಸಿರು ಪಕ್ಕ ವಾದ್ಯವಾಗಿತ್ತು.

ಮೇಲ್ವರ್ಗದ ಭಟ್ಟರು, ಹೆಗಡೇರು, ಶಾನುಭಗರು, ಪಟೇಲರು ಹಾಗೂ ಕೆಳವರ್ಗದ ಗುತ್ಯ, ಬಿಳಿಯ, ಕನ್ನ, ಚೌಡ, ಕೊಲ್ಲೂರಿ, ಪಾರ್ವತಿಯರು ಕೂಡಿಯೇ ಕಣಕ್ಕೆ ಇಳಿಯುತ್ತಿದ್ದರು. ಹೀಗಾಗಿ ಮೇಲು–ಕೀಳುಗಳಿಲ್ಲದೇ ದುಡಿಮೆಯಲ್ಲಿ ಹೊಮ್ಮುತ್ತಿದ್ದ ಎಲ್ಲರ ಮೈ ಬೆವರಿನ ಗಂಧಕ್ಕೆ ಭತ್ತದ ವೈವಿಧ್ಯಮಯ ಪರಿಮಳಗಳೂ ಬೆರೆತಿರುತ್ತಿದ್ದ ಪರಿಣಾಮ ಉಂಡವರಿಗೆ ಅನೂಹ್ಯ ಸಂತೃಪ್ತಿಯನ್ನು ನೀಡುತ್ತಿತ್ತು ಅನ್ನ. ಹಾಗೆಂದು ಅಲ್ಲಿನ ಜನಜೀವನದಲ್ಲಿ ಮೇಲು ಕೀಳುಗಳ ಭೇದವಿರಲಿಲ್ಲವೆಂದಲ್ಲ. ಆದರೆ ಭತ್ತದ ಗದ್ದೆಯ ಕೆಸರಿಗಿಳಿದರೆ ಅಲ್ಲಿ ಎಲ್ಲರೂ ಒಂದೇ. ಜಮೀನುದಾರನೂ, ಹಾಳಿ ಕಡಿಯುತ್ತಲೋ, ಹೂಟಿ ಮಾಡುತ್ತಲೋ, ನೀರು ಕಟ್ಟುತ್ತಲೋ ಗೆಯ್ಮೆ ಮಾಡುತ್ತಿದ್ದ. ಕೂಲಿಯಾಳುಗಳ ಜತೆಗೂಡಿ ಭೂತಾಯ ಆರಾಧನೆಗೆ ಇಂಬು ನೀಡುತ್ತಿದ್ದ, ಹೀಗಾಗಿ ಮಾಲೀಕರ ಮೇಲ್ವ ರ್ಗ– ದುಡಿಯುತ್ತಿದ್ದ ಕೆಳವರ್ಗದ ನಡುವೆ ಅಪರೂಪದ ಬಾಂಧವ್ಯವಿತ್ತು. ಬದುಕಿಗಾಗಿನ ಪರಸ್ಪರ ಅವಲಂಬನೆಯ ಅನಿವಾರ್ಯತೆ ಜಾತಿಯ, ಸಿರಿವಂತಿಕೆಯ ಅಂತರವನ್ನೂ ತೊಡೆದು ಕಲೆತು ದುಡಿಯುವಂತೆ ಮಾಡಿತ್ತು. ಅನ್ನವೇ ಮಲೆನಾಡಿಗರ ಪ್ರಮುಖ ಆಹಾರವಾಗಿದ್ದರಿಂದ ಭತ್ತವೇ ಪ್ರಧಾನ ಬೆಳೆಯಾಗಿತ್ತು. ಹೀಗಾಗಿ ಕೃಷಿ ವ್ಯಾಪಾರೀಕರಣಗೊಂಡಿರಲಿಲ್ಲ.

ಭತ್ತದ ಗದ್ದೆಗಳು ಸಹ ಕೇವಲ ದುಡಿಮೆಯ ತಾಣವಾಗಿರದೇ ಅದು ಜೀವ ವೈವಿದ್ಯದ ಅತ್ಯಪೂರ್ವ ಸಂಗಮವಾಗಿತ್ತು. ಅಲ್ಲಿ ಹತ್ತಾರು ಪ್ರಭೇದದ ಕಪ್ಪೆಗಳಿದ್ದವು, ಹಾವುಗಳ ಸಂಕುಲಗಳಿದ್ದವು, ಏಡಿಗಳಲ್ಲೇ ಹತ್ತಾರು ಜಾತಿಗಳಿದ್ದವು, ಮೀನುಗಳು, ಎರೆಹುಳುಗಳು, ಕೊಕ್ಕರೆಗಳು, ನೀರಕ್ಕಿ... ಹೀಗೆ ಪಶ್ಚಿಮಘಟ್ಟಗಳ ವ್ಯಾಪ್ತಿಯಲ್ಲಿ ಕಂಡುಬರುವ ಅಪರೂಪದ ಜೀವಿಗಳ ಸಂಗ್ರಹಾಲಯದಂತೆ ಕಾಣುತ್ತಿತ್ತು ಭತ್ತದ ಗದ್ದೆ.

ಇನ್ನು ತಳಿಗಳ ವಿಚಾರಕ್ಕೆ ಬಂದರೆ ನೆರೆಗೂಳಿ, ನಾಗಸಂಪಿಗೆ, ಸರಸ್ವತಿ, ಸುಗಂಧ, ಮೈಸೂರು ಬೆಣ್ಣೆ, ಕಜ , ಮುದುಗ, ರತ್ನ ಸಾಗರ, ಸಹ್ಯಾದ್ರಿ, ಚಂಪಕ, ರಾಜಮುಡಿ(ಬಿಳಿ), ರಾಜಮುಡಿ(ಕೆಂಪು), ಕಡಲಚಂಪ, ಕುಂಬಲೂರ ಸಲೈ, ಗುಜಗುಂಡ, ಸಿಂಗಧೂರು ಸಾಂಬ, ಕಾಶ್ಮೀರಿ ಬಾಸ್ಮತಿ, ಜೀರಿಗೆ ಸಣ್ಣ, ರಾಮ್ಗಲ್ಲಿ, ಮಲ್ಲಿಗೆ, ದಪ್ಪಪಲ್ಯ, ಅಂದನೂರು ಸಣ್ಣ, ಮಾಲ್ಗುಡಿ ಸಣ್ಣ, ಕಾಳಜೀರ, ಗಂಧಸಾಲೆ, ಮಕ್ಕಿ ಗದ್ದೆ ಸಣ್ಣ, ರಾಜಬೋಗ, ಸಿದ್ದಸಣ್ಣ, ಬಂಗಾರಸಣ್ಣ, ಕರಿಕಗ್ಗ, ಪುಟ್ಟುಭತ್ತ... ಒಂದೊಂದು ತಳಿಗೂ ಒಂದೊಂದು ಗುಣ–ಸ್ವಭಾವ, ಪ್ರತಿಯೊಂದರ ಹಿಂದೆಯೂ ಒಂದೊಂದು ಕಥೆ. ಇವತ್ತು ಅದೆಷ್ಟೋ ತಳಿಗಳ ಹೆಸರೇ ಮರೆವಿಗೆ ಸಂದಿವೆ. ನೆನಪಿನ ಫಟಲದಲ್ಲಿ ಉಳಿದಿರಬಹುದಾದ ಕೆಲವೇ ಕೆಲವು ಹೆಸರನ್ನು ಮತ್ತೆ ಸ್ಮರಣೆಗೆ ತಂದುಕೊಂಡರೆ...

ರಾಜಮುಖ – ಮಲೆನಾಡಿನ ರಾಜಸತ್ವ

ತೊಗಟೆಯ ಬಿಳಿಯ ಹೊಳಪು, ಬೇಯಿಸಿದಾಗ ಸೆರಗು ಬಿಟ್ಟಂತೆ ಮೃದುವಾದ ಪರಿಮಳ—ರಾಜಮುಖ ಅನ್ನೊ ಹೆಸರು ಅದಕ್ಕೆ ಅನ್ವರ್ಥ. ಅನುಮಾನವೇ ಇಲ್ಲ. ರಾಜ ಸಣ್ಣ ಹಾಗೆ ಸುಮ್ಮನೆ ಅದಕ್ಕೆ ಬಂದ ಹೆಸರೇ ಅಲ್ಲ. ಅದರ ರುಚಿಯ ಗಾಂಭಿಯರ್ವೇ ಅಂಥದ್ದು. ಮಳೆ ಬಿಡದೇ ರಾಚುತ್ತಿದ್ದರೂ, ಜವಳು ಜಾಸ್ತಿ ಇದ್ದರೂ, ಗಾಳಿ ತಾರಾಡುತ್ತಿದ್ದರೂ ಜಗ್ಗದ ತಳಿ. ಹಬ್ಬದ ದಿನಗಳಲ್ಲಿ ಅಡುಗೆಮನೆಯ ಮೊದಲ ಆಯ್ಕೆ.

ಅಂಬೆಮೋಹರ್ – ಪರಿಮಳದ ಅಲೌಕಿಕ ಆನಂದ

ಮಾವು, ಹಲಸುಗಳೂ ಸಿಗದ ದಿನಮಾನಗಳಲ್ಲೂ (ಮಳೆಕೊರತೆ–ಹವಾಮಾನ ವೈಪರಿತ್ಯ) ಅಂಬೆಯ ಸುವಾಸನೆ ಮನೆ ತುಂಬಿಸುತ್ತಿದ್ದುದು ಸುಳ್ಳಲ್ಲ. ಮಲೆನಾಡಿನ ಹಂಚಿನ ಮಾಡುಗಳನ್ನು ಮೀರಿ ಹೊಮ್ಮುತ್ತಿದ್ದ ಆ ಪರಿಮಳ, ಅನೇಕ ಕುಟುಂಬಗಳ ಬೆಳಗಿನ ಪೂಜೆಗೆ ಸಂಧ ದಾಸವಾಳ, ಡೇರೆ, ದುಂಡುಮಲ್ಲಿಗೆ, ಸೇವಂತಿಗೆಯ ಅಹ್ಲಾದದಲ್ಲಿ ಬೆರೆತು ಹೋಗಿರುತ್ತಿತ್ತು. ಮಲೆನಾಡಿನ ಮಣ್ಣಿನಲ್ಲಿ ಮಾತ್ರ ಹುಟ್ಟಬಹುದಾದಂತಹ ಅತ್ಯಂತ ಖಾಸಾ ತಳಿಯಿದು.

ಗಂಧಸಾಲ – ಅಕ್ಕಿ ಚಿಕ್ಕದಾದರೂ ರುಚಿ–ಪರಿಮಳ ದೊಡ್ಡದೇ

ಹಾಸಿಗೆ ಹಿಡಿದು ಇನ್ನೇನು ಸಾವಿನಂಚಿನ ಮುದುಕರು ಮೃತ್ಯ ಭಯ, ಪ್ರಾಣಾಂತಿಕ ನೋವಿನಲ್ಲಿ ಕೂಗಿತ್ತಿದ್ದಾಗ್ಯೂ ನಾಟಿ ಮದ್ದಿನವ ಹೇಳುತ್ತಿದ್ನಂತೆ–“ಇಂವಂಗೆ ಗಂಧಸಾಲದ ಅನ್ನ ತಿನ್ನಿಸ್ರೋ‘ ಅಂತ . ಆಹಾರವಾಗಿಯೂ ಔಷಧವಾಗಿಯೂ ಬಳಸುತ್ತಿದ್ದ ಅದ್ಭುತ ತಳಿ. ಚರಿಗೆಗೆ ಹಾಕಿ, ಅಕ್ಕಿ ತೊಳೆದು ಒಲೆಯ ಮೇಲಿಡುವ ಕ್ಷಣದಿಂದ ಹಿಡಿದು ಉಂಡು ತೇಗಿದ ಬಳಿಕ ಬಾಯಿಂದ ಹೊಮ್ಮುವ ಗಾಳಿಯ ವರೆಗೂ ಈ ಅಕ್ಕಿಯದ್ದೇ ಗಂಧ ಸಾಮ್ರಾಜ್ಯ. ಸಾಟಿಯಿಲ್ಲದ ಸಾಗರದ ಭತ್ತದ ತಳಿ ಎಂದರೆ ಇದೇ.

ಕರಿಗಜ – ಬೇಸಾಯಗಾರನ ಕೈಬಿಡ ಕಾಳು

ಸಾಗರದ ಸುತ್ತಮುತ್ತಲಿನ ಅನಿಶ್ಚಿತ ಮಳೆಯನ್ನೂ ತಾಳಿಕೊಂಡು ಅತ್ಯುತ್ತಮವಾಗಿ ದಕ್ಕುವ ಸದೃಢ ತಳಿ. ಬರ–ಭಿರುಸಿನ ಮಳೆಗೂ ಜಗ್ಗದೆ ರೈತನ ಬಕ್ಕಣ ತುಂಬಿಸುತ್ತಿದ್ದ ‘ಬೆಳೆಗಾರನ ರಕ್ಷಕ’ ಇದು. ಕಪ್ಪು–ಬೂದು ಮಿಶ್ರ ಬಣ್ಣದ, ನೋಡಲು ಅಷ್ಟೇನೂ ಸೊಗಸಾಗಿರದ ಈ ಕಾಳಾಗಿದ್ದರೂ ಪೌಷ್ಟಿಕಾಂಶದ ವಿಚಾರದಲ್ಲಿ ಮಾತ್ರ ಅತಿ ಶ್ರೀಮಂತ, ಅತ್ಯದ್ಭುತ.

ಜೀರಿಗೆಸಾಲ – ಪಕ್ಕಾ ಕೃಷ್ಣಪಕ್ಷದ ಚಂದ್ರ

ಹೆಸರೇ ಹೇಳುವಂತೆ ತೀರಾ ಗಾಢವಲ್ಲದ, ಹದವಾದ ಜೀರಿಗೆಯ ಪರಿಮಳದ ಅಕ್ಕಿಯಿದು. ಅಡುಗೆ ಮನೆಯಲ್ಲಿ ಈ ಅಕ್ಕಿಯ ಅನ್ನ ಬೇಯುತ್ತಿದ್ದರೆ, ಆ ಮನೆಗೆ ಯಾರೋ ನೆಂಟರು ಬಂದಿದ್ದಾರೆ, ಇಲ್ಲವೇ ಅವರ ಮನೆಯಲ್ಲೇನೋ ವಿಶೇಷ ಪೂಜೆ, ಹಬ್ಬ, ಸಡಗರದ ಆಚರಣೆ ನಡೆಯುತ್ತಿದೆ ಎಂಬುದರ ಸೂಚನೆ. ಬಿರಿಯಾನಿ, ಪಲಾವ್ಗಳು ತೀರಾ ಆಧುನಿಕತೆಗೆ ತೆರೆದುಕೊಳ್ಳದ ಆ ಕಾಲಕ್ಕೆ ಸಾಗರದಂಥ ಸ್ಥಳಕ್ಕೆ ಪರಿಚಿತವಲ್ಲದಿದ್ದರೂ, ತುಪ್ಪದನ್ನ, ಬುತ್ತಿಯನ್ನ, ಕಲಸನ್ನದ ವೈವಿಧ್ಯದ ಜತೆಗೆ ಮಲೆನಾಡಿನ ಖ್ಯಾತ ’ಪರಮಾನ್ನ’ಕ್ಕೆ ಜೀರಿಗೆ ಸಾಲವನ್ನೇ ವಿಶೇಷ ದಿನಗಳಲ್ಲಿ ಬಳಸುವುದು ಮಲೆನಾಡಿನ ಗ್ರಾಹಸ್ಥ್ಯದಲ್ಲಿ ಪರಂಪರೆ ಎನಿಸಿಕೊಂಡಿತ್ತು. ಅದರಲ್ಲೂ ದೊಡ್ಡ ಹಬ್ಬ(ದೀಪಾವಳಿ)ದಂಥ ಸಡಗರದಲ್ಲಿ, ಹೋಮಹವನಾದಿಗಳ ಪಾಯಸಕ್ಕೆ ಘನತೆ ನೀಡುತ್ತಿದ್ದ ತಳಿ ಇದೇ.

ಹೀಗೆ ಹೇಳುತ್ತ ಹೋದರೆ ಹತ್ತಾರು ಕಂತುಗಳನ್ನು ವರದಾ ತೀರದ ಭತ್ತದ ತಳಿಗಳಿಗೆ ಮೀಸಲಿಡಬಹುದು. ನೆರೆಗೂಳಿ, ಸಾಲೆ, ಕೆಂಪಸಾಳ, ಬಾನಹಳ್ಳಿ, ಹಾಸುರು—ಇವೆಲ್ಲವೂ ಮಲೆನಾಡಿನ ಸ್ವಭಾವವನ್ನೇ ಮೈವೆತ್ತು ಕಾಳಾದವುಗಳು. ಗಾಳಿ, ಮಳೆ, ಮಣ್ಣಿನ ಗುಣಗಳನ್ನು ಮೈಗೂಡಿಸಿಕೊಂಡವು—all refined into a grain.

ಆದರೆ… ಪರಂಪರೆ ಒಂದೇ ದಿನದಲ್ಲಿ ಕಿತ್ತುಹೋದಂತೆ ಹೋಗಿಬಿಟ್ಟ್ಟವಲ್ಲ; ಈ ಎಲ್ಲ ತಳಿ ವೈವಿಧ್ಯ! ಕಾರಣ ಏನು? ಹಸಿರು ಕ್ರಾಂತಿ ದೇಶದ ಹೊಟ್ಟೆ ತುಂಬಿಸಿದರೂ, ಕೃಷಿ ಪರಂಪರೆಯ ಮೌಲ್ಯವನ್ನು ಕಸಿದುಕೊಂಡದ್ದು ಸುಳ್ಳಲ್ಲ. ಆಗಿನ ಅವಜ್ಞೆಗೆ ನಾವಿಂದಿಗೂ ಬೆಲೆ ತೆರುತ್ತಲೇ ಬರುತ್ತಿದ್ದೇವೆ.

ಇನ್ನು ಎರಡನೇ ಬಹುಮಖ್ಯ ಕಾರಣ ನಮ್ಮ ಸೋಕಾಲ್ಡ್ ವಿಜ್ಞಾನಿಗಳು ಸಂಶೋಧಿಸಿದ, ಬೆರಕೆ ತಳಿಗಳು. ಹೈಬ್ರೀಡ್ ಹೆಸರಿನಲ್ಲಿ, ತಮ್ಮ ‘ಟಾರ್ಗೆಟ್’ ಮುಟ್ಟಲು ವರ್ಷಕ್ಕೊಂದು ಹೊಸ ತಳಿಗಳನ್ನು ವಿಶ್ವವಿದ್ಯಾಲಯಗಳು ಹೊರ ತಂದವು—ಉತ್ಪಾದನೆ ಹೆಚ್ಚಿಸಬೇಕೆಂಬ ಒತ್ತಡವೇ ದರ ಹಿಂದಿನ ಏಕೈಕ ಉದ್ದೇಶ. ಬಲುಬೇಗ ಫಸಲು ಕೈಸೇರುವ, ವರ್ಷಕ್ಕೆ ಮೂರು, ನಾಲ್ಕು ಬೆಳೆ ತೆಗೆದು ಜೇಬು ತುಂಬಿಸುವ ಆಮಿಷದಲ್ಲಿ ಗದ್ದೆಯಲ್ಲಿ ಚೆಲ್ಲಾಡಿದ ಹೈಬ್ರೀಡ್ಗಳ ಅಬ್ಬರಕ್ಕೆ ಪರಂಪರೆಯ ತಳಿಗಳು ಉತ್ತರ ಕೊಡಲಾರದೇ ತಾವಿದ್ದ ಜಾಗವನ್ನೇ ಬಿಟ್ಟು ಹೋಗುವಂತಾಯಿತು.

ಹೈಬ್ರೀಡ್ ತಳಿಗಳು ಸಣ್ಣ ರೈತರ ಕೈಗೆಟುಕದಂತಾಯಿತು. ಹೆಚ್ಚಿದ ರಸಗೊಬ್ಬರಗಳ ಬೆಲೆ, ಕೃಷಿ ಕಾರ್ಮಿಕರ ಕೊರತೆ, ಕೃಷಿ ಯಂತ್ರೋಪಕರಣಗಳ ದುಭಾರಿ ಬಾಡಿಗೆ ಇತ್ಯಾದಿಗಳಿಂದಾಗಿ ಭತ್ತದ ಕೃಷಿಯಲ್ಲಿ ಹಾಕಿದ ದುಡ್ಡೂ ಸಿಗದಂತಾಯಿತು. ಇಂದಿಗೂ ಭತ್ತಕ್ಕಿರುವ ಬೆಲೆ ತೀರಾ ಕಡಿಮೆ. ಜೆತೆಗೆ ಬೆಂಬಲ ಬೆಲೆಯೂ ಇಲ್ಲ, ಹೀಗಾಗಿ ನಷ್ಟು ಮಾಡಿಕೊಂಡು, ಇಲ್ಲವೇ ಸಾಲ ಮಾಡಿ ಭತ್ತ ಬೆಳೆಯಲಾಗದೇ ರೈತ ಬೇರೆಡೆಗೆ ಹೊರಳಿದ. ತಾನು ಭತ್ತ ಬೆಳೆಯುತ್ತಿದ್ದ ಅದೇ ಗದ್ದೆಗಳಲ್ಲಿ ಕಾಫಿ, ಅಡಕೆ, ಎಲ್ಲಕ್ಕಿಯನ್ನೋ ಇಲ್ಲವೇ ಶುಂಠಿಯನ್ನೂ ಹಾಕಿ ಕೈತೊಳೆದುಕೊಂಡು. ಅಂಥ ರೈತರು ಕೈ ಕೆಲಸರು ಮಾಡಿಕೊಳ್ಳದೇ ಮೊಸರು ಮೆಲ್ಲುವುದು ಬೇರೆಯವರಿಗೂ ಆಮಿಷವೊಡ್ಡಿದವು. ನಿಧಾನಕ್ಕೆ ಊರಿಗೆ ಊರೇ ಲಾಭದಾಯಕ ಕಾಫಿ, ಅಡಕೆಯಂಥವುಗಳತ್ತ ಹೊರಳಿರುವುದು ದುರಂತ.

ಜೊತೆಗೆ ನಗರೀಕರಣದ ಗಾಳಿ ಬೀಸಿದಂತೆಲ್ಲ ಕೃಷಿಭೂಮಿಗಳು ರಿಯಲ್ ಎಸ್ಟೇಟ್ ದಂಧೆಕೋರರಿಗೆ ಮಾರಾಟವಾದವು. ವ್ಯಾಪಾರೀಕರಣಕ್ಕೆ ಈಡಾದ ಮಣ್ಣಿನ ಬಾಳಿಕೆ ಕೇಳುವವರಿಲ್ಲವಾದರು. ಇವೆಲ್ಲವೂ ಸೇರಿ ವರದಾ ತೀರದ ಕಣಜವನ್ನು, ಫಣತವನ್ನು ಒಣಗಿಸಿದವು. ನೂರಾರು ತಳಿಗಳ ಪುಟ್ಟ ಪೀಠಾಸನ ಇದ್ದ ಜಾಗದಲ್ಲೀಗ ಕೇವಲ ಕೆಲವೇ ಕೈ ಬೆರಳೆಣಿಕೆಯ ತಳಿಗಳು, ಅದೂ ಅಪರೂಪಕ್ಕೆ ಅಲ್ಲಲ್ಲಿ ಒಬ್ಬೊಬ್ಬ ಕಾಳಜಿಯುಕ್ತ ರೈತನ ಮನೆಯೊಳಗಿನ ಸಂಧೂಕದಲ್ಲಿ ಅಡಗಿ ಅಸ್ತಿತ್ವ ಉಳಿಸಿಕೊಂಡಿವೆ.

ಪುನರುತ್ಥಾನದ ಬೀಜ ಇನ್ನೂ ಕಳೆದು ಹೋಗಿಲ್ಲ

ನೆನಪುಗಳು ಎಂದರೆ ಕೇವಲ ಭೂತಕಾಲದ ನೋವೇ ಆಗಬೇಕಿಲ್ಲ. ಅದು ಪ್ರಸ್ತುತಕ್ಕೆ ಬೆಳಕು ತರುವ ಒಂದು ಪ್ರೇರಣೆಯೂ ಆಗಬಲ್ಲುದು. ಅಲ್ಲಲ್ಲಿ ಕೆಲವೇ ರೈತರು ಹೀಗೆ ಜತನದಲ್ಲಿ ಉಳಿಸಕೊಂಡಿರುವ ಬೀಜಗಳು, ನೆಲಕ್ಕೆ ಬೀಳಬೇಕು. ಅದಕ್ಕೂ ಮುನ್ನ ಆ ಬಗೆಗಿನ ಕಾಳಜಿ ಇಮದಿನ ತಲೆಮಾರಿನ ಎದೆಯಲ್ಲಿ ಮೊಳಕೆಯೊಡೆಯಬೇಕು. ಕೃಷಿಯೇ ಬೇಡವೆಂದು ಬೆನ್ನುಹಾಕಿ ಹೊರಟಿರುವ ಮಂದಿಯಿಂದ ಇದು ಅಸಾಧ್ಯ. ತಳಿಗಳ ಪುನರುತ್ಥಾನವೆಂತಲೇ ಅಲ್ಲ; ನೆಲಮೂಲದ ಎಲ್ಲ ಜ್ಞಾನಗಳು, ಸಂಪತ್ತಿನ ಉಳಿವು ಸಹ ತನ್ನ ನೆಲದ ಪ್ರೀತಿಯ ಒರತೆಯನ್ನು ಬತ್ತಗೊಡದ ಉದ್ದೇಶಪೂರ್ವಕ ಕಕಾಳಜಿಯ ಯುವಕನಿಂದ ಮಾತ್ರ ಸಾಧ್ಯ.

ಏಕೆಂದರೆ...

ದಿದನದಿಂದ ದಿನಕ್ಕೆ ಹವಾಮಾನ ಬದಲಾವಣೆ ಆಗುತ್ತಿದೆ.

ದಿನಕ್ಕೊಂದು ಹೆಸರಿನ ರಾಸಾಯನಿಕದ ವಿಷ ದಾಂಗುಡಿ ಇಡುತ್ತಿದೆ.

ರೋಗ–ಕೀಟಗಳಿಗೆ ಸ್ವಾಭಾವಿಕ ತಡೆಯೇ ಇಲ್ಲದಾಗಿದೆ

ಅನನ್ಯ ಪೌಷ್ಟಿಕ ಮೌಲ್ಯಗಳನ್ನು ನಾವು ಮರೆತು ಹೋಗುತ್ತಿದ್ದೇವೆ

ಸಂಸ್ಕೃತಿ–ಪರಂಪರೆಯ ಜ್ಯೋತಿಗೆ ಕದರುಕಟ್ಟಿ ನಮ್ಮೆದೆಯಲ್ಲಿ ಆರಿ ಹೋಗಿದೆ

ಆಹಾರ ಭದ್ರತೆಯ ಹೊಣೆಯ ಹೆಸರಿನಲ್ಲಿ ಅನ್ನದ ಸ್ವಾವಲಂಬನೆಯ ಮೇಲೆ ಸವಾರಿ ಹೊರಡಿಸಲಾಗಿದೆ.

ಈ ಎಲ್ಲ ಸನ್ನಿವೇಶದ ಹಿನ್ನೆಲೆಯಲ್ಲಿ ‘ತಳಿ ವೈವಿಧ್ಯ’ವೆಂಬ ಜೀವವೈಜ್ಞಾನಿಕ ಸಂಪತ್ತನ್ನು ಉಳಿಸಿಕೊಳ್ಳುವ ಹೊಣೆಯನ್ನು ಸರಕಾರ, ಸಂಸ್ಥೆಗಳು ಮಾತ್ರವೇ ಅಲ್ಲ ವೈಯಕ್ತಿಕ ನೆಲೆಗಟ್ಟಿನಲ್ಲೂ ನಾವು ಹೊರಲು ಮುಂದಾಗಬೇಕಿದೆ.

ಇದಕ್ಕಾಗಿ ಮುಖ್ಯವಾಗಿ ಏನಾಗಬೇಕು?

ತಳಿ ಭಂಡಾರಗಳು – ಗ್ರಾಮ ಮಟ್ಟದ ‘seed bank‘ಗಳು ತಲೆ ಎತ್ತಬೇಕು

ವಿಶ್ವವಿದ್ಯಾಲಯ – ರೈತರ ಸಹಕಾರದ ವೃದ್ಧಿ ಆಗಬೇಕು. ರೈತನಿಇಗೇನುಬೇಕೋ ಅದನ್ನು ವಿಜ್ಞಾನಿಗಳು ನೀಡಬೇಕು.

ರೈತರ ಜಾಗೃತಿ – ಹಳ್ಳಿ ಹಳ್ಳಿಗಳಲ್ಲಿ ಹೊಸ ತಲೆಮಾರಿನ ಬೇಸಾಯಗಾರನಲ್ಲಿ ಈ ಪ್ರಜ್ಞೆಯನ್ನು ಬಿತ್ತಿ, ಅಳಿದುಳಿದ ತಳಿಗಳನ್ನು ಹುಡುಕಿ ಅವನಿಂದಲೇ ಬಿತ್ತಿ ಬೆಳೆಸಬೇಕು

ಜೈವಿಕ ಕೃಷಿಯ ಉತ್ತೇಜನ: ಎಲ್ಲೆಲ್ಲೂ ರಕ್ಕಸ ಬಾಹು ಚಾಚಿದ ರಾಸಾಯನಿಕ ಕೃಷಿಯನ್ನಂತೂ ಮೀರಿ ನಿಲಲ್ಲಲಾಗದು. ಕನಿಷ್ಠ ಜಮೀನಿನ ಸ್ವಲ್ಪ ಭಾಗಕ್ಕಾದರೂ ವಿಷ ಸೋಂಕದಂತೆ ಉಳಿಸಲು ಕ್ರಮ ಆಗಬೇಕು
ಮೂಲ ತಳಿಗಳ ಮಾರುಕಟ್ಟೆ; ಸಹಕಾರಿ ಮಾದರಿಯಲ್ಲಿ ಪ್ರತಿ ತಾಲೂಕಿನಲ್ಲಿ ಸಾಂಪ್ರದಾಯಿಕ ತಳಿಗಳ ದೇಸಿ ಮಾರುಕಟ್ಟೆ ವ್ಯವಸ್ಥೆ ನಿರ್ಮಾಣವಾಗಬೇಕು.

ಇದು ಅಸಾಧ್ಯವಲ್ಲ. ವರದೆ ಇನ್ನೂ ಹರಿಯುತ್ತಲೇ ಇದ್ದಾಳೆ, ಮಳೆ ಇಂದಿಗೂ (ಪ್ಯಾಟ್ರನ್ ಸ್ವಲ್ಪ ಬದಲಾಗಿರಬಹುದು) ಆಗಿನಂತೆ ಸುರಿಯುತ್ತಲೇ ಇದೆ. ಸಾಗರದ ಮಣ್ಣು ಇನ್ನೂ ಬೇರೆಡೆಯಷ್ಟು ಜೀವಂತಿಕೆ ಕಳೆದುಕೊಂಡಿಲ್ಲ. ವಿಶಿಷ್ಟ ಸಾಗರದ ಭತ್ತದ ತಗಳ ಬಸುರು–ಬಾಣತಂತನಕ್ಕೆ ಇವೆಲ್ಲವೂ ಕೈಬೀಸುತ್ತಲೇ ಇದೆ.

ತಾಯಿ ವರದೆಯ ವಿಶಾಲ ಉದರದ ಬಯಲಿಗೆ ಕಿವಿಗೊಟ್ಟು ಕೇಳಿ ಬೇಕಿದ್ದರೆ ‘ನನ್ನ ಬಸುರಲ್ಲಿ ಹೊತ್ತು ನಡೆದ ಆ ನೂರಾರು ಕಾಳಿನ ಭ್ರೂಣಗಳು ಒಳಗೊಳಗೇ ಒಡಲನ್ನು ಒದೆಯುತ್ತಿದ್ದ ಹದವಾದ ನೋವಿನ ಸುಖದ ಕ್ಷಣಗಳನ್ನು ನಾನಿನ್ನೂ ಮರೆತಿಲ್ಲ. ಆ ನೋವಿನ ಕೊನೆಯಲ್ಲಿ ಜನಿಸಿ ನಿಮ್ಮುದರವನ್ನು ಪೊರೆದುಕೊಂಡಿದ್ದನ್ನು ನೀವೂ ಮರೆಯದಿರಿ‘ ಎಂಬ ಹಳವಂಡ ನಿಮಗೆ ಕೇಳಿಸಿದಿದ್ದರೆ ನನ್ನಾಣೆ!

ಮುಗಿಸುವ ಮುನ್ನ....

ಪರಂಪರೆ ಎಂದರೆ ಕಳೆದು ಹೋದದ್ದಲ್ಲ. ಅದನ್ನು ಮತ್ತೆ ಬಗೆದುಕೊಳ್ಳುವ ನಮ್ಮ ದೃಷ್ಟಿ . ಮಲೆನಾಡಿನಲ್ಲಿ ಹುಟ್ಟುವ ಪ್ರತಿ ಮಗುವೂ ಇನ್ನಾದರೂ ತನ್ನ ತಟ್ಟೆಯಲ್ಲಿ ಮತ್ತೆ ರಾಜಮುಖದ ಮೃದುವನ್ನು, ನೆರೆಗುಳಿಯ ನವಿರನ್ನು, ಗಂಧಸಾಲದ ಪರಿಮಳವನ್ನು, ಕರಿಗಜದ ಬಲವನ್ನು ಅನುಭವಿಸಲಿ. ಅದು ನಾವು, ಈ ತಲೆಮಾರಿನವರ ಕೈಯಲ್ಲಿ ಇರುವ ಪುಣ್ಯ. ಮಾತ್ರವಲ್ಲ, ನಮ್ಮ ಮಣ್ಣಿನ ಋಣ ತೀರಿಸಬೇಕಿರುವ ಬಾಧ್ಯತೆ.

ವರದಾ ತೀರದ ಕಣಜವಿನ್ನೂ ಪೂರ್ತಿ ಒಣಗಿಲ್ಲ, ಅದನ್ನು ಒಣಗಗೊಡದಂತೆ ನೋಡಿಕೊಳ್ಳೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.