ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಭಾರಂಭದ ಹಿಂದಿನ ತಳಮಳ!

Last Updated 27 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

‘ಕಿತ್ತಳೆನಗರಿ’ ನಾಗಪುರದ ಅಂಗಳದಲ್ಲಿ ಕಿತ್ತಳೆ ಬಣ್ಣದ ಸಮವಸ್ತ್ರ ಧರಿಸಿದ್ದ ಹಾಲೆಂಡ್ ಹುಡುಗರು, ಈ ಬಾರಿಯ ವಿಶ್ವಕಪ್ ಟೂರ್ನಿಯ ಮೊಟ್ಟಮೊದಲ ‘ಅನಿರೀಕ್ಷಿತ’ ಫಲಿತಾಂಶ ವೊಂದನ್ನು ಕೊಟ್ಟೇ ಬಿಡುವ ಹಾದಿಯಲ್ಲಿದ್ದರು. ಆದರೆ ಅದೃಷ್ಟ ಜೊತೆ ಕೊಡಲಿಲ್ಲ!
ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ನರಾಗುವ ಫೇವರಿಟ್ ಪಟ್ಟಿಯಲ್ಲಿರುವ ಇಂಗ್ಲೆಂಡ್ ತಂಡ ಈ ಪಂದ್ಯ ಗೆಲ್ಲಲು ಹರಸಾಹಸ ಮಾಡುವಂತಹ ಪ್ರದರ್ಶನವನ್ನು ಹಾಲೆಂಡ್ ನೀಡಿತ್ತು.

ಟೂರ್ನಿಯ ಪ್ರಥಮ ಪಂದ್ಯದಲ್ಲಿಯೇ ಮುಗ್ಗರಿಸಿ ಬೀಳುವ ಭೀತಿಯನ್ನು ಕ್ರಿಕೆಟ್ ಜನಕರ ನಾಡಿನ ತಂಡ ಎದುರಿಸಿದ್ದು ಸುಳ್ಳಲ್ಲ. ಕ್ರಿಕೆಟ್ ಜಗತ್ತಿನಲ್ಲಿ ಅಂಬೆಗಾಲಿಡುತ್ತಿರುವ ಹಾಲೆಂಡ್‌ನಂತಹ ತಂಡದ ಮುಂದೆ ಇಂಗ್ಲೆಂಡ್ ಪರದಾಡಿದ್ದು ಈ ಟೂರ್ನಿಯ ಮೊದಲ ಸುತ್ತಿನ ಅವಿಸ್ಮರಣೀಯ ಪಂದ್ಯವಾಗಿ ದಾಖಲಾಯಿತು. ಹಾಲೆಂಡಿನ 31ರ ಹರೆಯದ ರೆನ್‌ಟೆನ್ ಡಚ್ (119 ರನ್) ತಮ್ಮ ವಿಶ್ವಕಪ್ ಟೂರ್ನಿಯ ಮೊದಲ ಶತಕದ ಆನಂದ ಅನುಭವಿಸಿದರು.

ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾ ದೇಶಗಳ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಮೊದಲ ಸುತ್ತಿನ ಪಂದ್ಯಗಳು ಇದೀಗ ಮುಗಿದಿವೆ. ಇಂತಹ ರೋಚಕ ಅನುಭವಗಳಿಗೆ ಕ್ರಿಕೆಟ್ ಜಗತ್ತು ಸಾಕ್ಷಿಯಾಗುತ್ತಿದೆ. ಟೂರ್ನಿಯ ಮೊದಲ ಪಂದ್ಯವನ್ನು ಗೆಲ್ಲುವ ಛಲ
ಈ ಪಂದ್ಯವನ್ನು ರೋಚಕಗೊಳಿಸಿತ್ತು.

ಎಷ್ಟೇ ಅನುಭವಿ ಅಥವಾ ಹೊಸ ತಂಡವಿರಬಹುದು. ವಿಶ್ವಕಪ್ ಟೂರ್ನಿಯಂತಹ ಅಗ್ನಿಪರೀಕ್ಷೆಯ ಸಂದರ್ಭದಲ್ಲಿಯೂ ಪ್ರಥಮ ಸುತ್ತಿನ ಪಂದ್ಯ ಆಡುವ ತಂಡಗಳ ಮನದಲ್ಲಿ ಅದೊಂದು ರೀತಿಯ ತಳಮಳ ಇದ್ದೇ ಇರುತ್ತದೆ. ಎಲ್ಲರಿಗೂ ‘ಶುಭಾರಂಭ’ದ ನಿರೀಕ್ಷೆಯೇ ಇರುವುದರಿಂದ ಒತ್ತಡದ ಪ್ರಮಾಣವೂ ಹೆಚ್ಚು.

‘ಪ್ರಥಮ’ ಎನ್ನುವ ಶಬ್ದದ ಮಹಾತ್ಮೆಯೇ ಅಂತಹದ್ದು. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಹಲವು ಸಂದರ್ಭದಲ್ಲಿ ಆಗುವಪ್ರಥಮಾನುಭವಗಳು ವಿಶೇಷ ಮತ್ತು ಅವಿಸ್ಮರಣೀಯ. ಕಂದಮ್ಮನ ಮೊಟ್ಟಮೊದಲ ಹೆಜ್ಜೆ, ಮೊದಲ ಹುಟ್ಟುಹಬ್ಬ, ಶಾಲೆಗೆ ಹೋದ ಮೊದಲ ದಿನ, ಕಾಲೇಜು ಕಟ್ಟೆ ಹತ್ತಿದ ಪ್ರಥಮ ದಿನ, ನೌಕರಿ ಸೇರಿದ ಮೊದಲ ದಿನ, ಪ್ರಥಮ ಸಂಬಳ ಹೀಗೆ ಜೀವನದ ಪ್ರಥಮಾನುಭವಗಳ ಪಟ್ಟಿ ಬೆಳೆಯುತ್ತದೆ. ಇದಕ್ಕೆ ಕ್ರೀಡೆಯೂ ಹೊರತಲ್ಲ.

ಆದರೆ ಈ ಅನುಭವ ಪಡೆಯುವ ಮುನ್ನ ಆಗುವ ತಳಮಳ, ಹೆದರಿಕೆ, ಅವುಗಳಿಂದ ಹೊರಬಂದ ಆ ಕ್ಷಣಗಳು ಜೀವನದ್ದುದ್ದಕ್ಕೂ ಮನದಲ್ಲಿ ಉಳಿಯುತ್ತವೆ. ಭಾರತ ಮತ್ತು ಬಾಂಗ್ಲಾ ನಡುವಿನ ಉದ್ಘಾಟನೆ ಪಂದ್ಯವನ್ನೇ ನೋಡಿ. ಬಾಂಗ್ಲಾಕ್ಕಿಂತ ಭಾರತ ಬಲಾಢ್ಯ ಎನ್ನುವ ಅರಿವಿದ್ದರೂ, 2007ರಲ್ಲಿ ಬಿದ್ದಂತೆ ಮತ್ತೊಂದು ಪೆಟ್ಟು ಬಿದ್ದರೆ ಎಂಬ ಆತಂಕವೂ ಕ್ರಿಕೆಟ್ ಪ್ರೇಮಿಗಳ ಮನದಲ್ಲಿತ್ತು.

ಬಾಂಗ್ಲಾದ ಹುಲಿಗಳ ಮುಂದೆ ಭಾರತದ ವೀರೇಂದ್ರ ಸೆಹ್ವಾಗ್ (175 ರನ್) ಮತ್ತು ವಿರಾಟ್ ಕೋಹ್ಲಿ (ಅಜೇಯ 100) ಘರ್ಜಿಸಿದರು. ಆದರೆ ಪಂದ್ಯ ಆರಂಭವಾಗಿ ಕೆಲವು ಹೊತ್ತಿನಲ್ಲಿಯೇ ‘ಮಾಸ್ಟರ್ ಬ್ಲಾಸ್ಟರ್’ ಸಚಿನ್ ತೆಂಡೂಲ್ಕರ್ ರನೌಟ್ ಆದಾಗ ಮತ್ತು 371ರ ಮೊತ್ತವನ್ನು ಬೆನ್ನತ್ತಿದ್ದ ಬಾಂಗ್ಲಾದ ಆರಂಭಿಕ ಬ್ಯಾಟ್ಸ್‌ಮನ್‌ಗಳ ಅಬ್ಬರ ಭಾರತದ ಅಭಿಮಾನಿ ಗಳಲ್ಲಿ ತಳಮಳ ಹುಟ್ಟಿಸಿದ್ದನ್ನು ಅಲ್ಲಗಳೆಯುವಂತಿಲ್ಲ.

ತಮೀಮ್ ಇಕ್ಬಾಲ್ ಮತ್ತು ಇನಾವುಲ್ ಕೇಯ್ಸಾ ನೀಡಿದ ಅದ್ಭುತ ಆರಂಭದಿಂದಾಗಿ ಬಾಂಗ್ಲಾ ಮೊದಲ ಐದು ಓವರುಗಳಲ್ಲಿಯೇ 50ರ ಗಡಿ ಮುಟ್ಟಿತ್ತು. ಇನ್ನೊಂದು ಕಡೆ ಲೈನ್ ಮತ್ತು ಲೆಂಗ್ತ್‌ಗಾಗಿ ಪರದಾಡುತ್ತಿದ್ದ ಶ್ರೀಶಾಂತ್ ರನ್ನುಗಳ ಕಾಣಿಕೆಯನ್ನು ಧಾರಾಳವಾಗಿ ನೀಡುತ್ತಿದ್ದರು. ‘ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಭಾರತ ಮುಗ್ಗರಿಸಿಬಿಡಬಹುದೇ?’ ಎಂಬ ಚಿಂತೆಯ ಗೆರೆ ಭಾರತದ ಅಭಿಮಾನಿಯ ಹಣೆಯಲ್ಲಿ ಸುಳಿದಿತ್ತು. ಆದರೆ ಹಾಗಾಗಲಿಲ್ಲ. ಭಾರತ ಶುಭಾರಂಭ ಮಾಡಿತು. (ಈ ಲೇಖನ ಓದುವ ಹೊತ್ತಿಗೆ ಎರಡನೇ ಸುತ್ತಿನಲ್ಲಿ ಫೆ. 27ರಂದು ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ಭಾರತ ಆಡಿರುತ್ತದೆ).

ಕ್ರಿಕೆಟ್‌ನಲ್ಲಿ ಕೊನೆಯ ಎಸೆತದವರೆಗೂ ಏನೂ ಹೇಳಲು ಆಗುವುದಿಲ್ಲ. ಇಲ್ಲಿ ಯಾವ ತಂಡವೂ ದುರ್ಬಲವಲ್ಲ. 1979ರಲ್ಲಿ ದುರ್ಬಲವಾಗಿದ್ದ ಶ್ರೀಲಂಕಾ ಭಾರತವನ್ನು, 1983ರಲ್ಲಿ ಜಿಂಬಾಬ್ವೆ ಆಸ್ಟ್ರೇಲಿಯವನ್ನು, 1992ರಲ್ಲಿ ಜಿಂಬಾಬ್ವೆ ಇಂಗ್ಲೆಂಡ್ ಅನ್ನು, 1996ರಲ್ಲಿ ಕಿನ್ಯಾ ವಿಂಡೀಸ್ ತಂಡವನ್ನು, 1999ರಲ್ಲಿ ಬಾಂಗ್ಲಾ ಪಾಕಿಸ್ತಾನವನ್ನೂ, 2003ರಲ್ಲಿ ಕೆನಡಾ, ಬಾಂಗ್ಲಾವನ್ನು, ಕೀನ್ಯಾ ಶ್ರೀಲಂಕಾ ಮತ್ತು ಬಾಂಗ್ಲಾ, ಜಿಂಬಾಬ್ವೆ ತಂಡಗಳನ್ನೂ, 2007ರಲ್ಲಿ ಐರ್ಲೆಂಡ್ ಪಾಕಿಸ್ತಾನ ಮತ್ತು ಬಾಂಗ್ಲಾವನ್ನೂ, ಬಾಂಗ್ಲಾ ದಕ್ಷಿಣ ಆಫ್ರಿಕಾ ಮತ್ತು ಭಾರತವನ್ನು ಸೋಲಿಸಿದ ಅನಿರೀಕ್ಷಿತ ಫಲಿತಾಂಶಗಳು ಎಲ್ಲ ಟೂರ್ನಿಗಳಲ್ಲಿಯೂ ಬಲಾಢ್ಯರ ಪಾಳಯದಲ್ಲಿ ಎಚ್ಚರಿಕೆ ಘಂಟೆ ಮೊಳಗಿಸುತ್ತವೆ.

ಈ ಬಾರಿ ಟೂರ್ನಿಯ ಮೊದಲ ಸುತ್ತಿನ ಪಂದ್ಯಗಳಲ್ಲಿ ಅನುಭವಿ ಮತ್ತು ಸಣ್ಣ ತಂಡಗಳ ನಡುವೆಯೇ ಪೈಪೋಟಿ ಇದ್ದದ್ದು ಕೂಡ ಇಂತಹ ತಳಮಳ ಮೂಡಿಸಲು ಕಾರಣ. ಆದರೆ ಅನಿರೀಕ್ಷಿತ ಫಲಿತಾಂಶಗಳು ಬರಲಿಲ್ಲ. ನ್ಯೂಜಿಲೆಂಡ್ ಕೀನ್ಯಾ ವಿರುದ್ಧ, ಶ್ರೀಲಂಕಾ ಕೆನಡಾ ಎದುರು, ಆಸ್ಟ್ರೇಲಿಯಾ ಜಿಂಬಾಬ್ವೆ ಎದುರು, ಪಾಕಿಸ್ತಾನ ಕೀನ್ಯಾ ಎದುರು, ಭಾರತ ಬಾಂಗ್ಲಾ ಎದುರು ಜಯ ಗಳಿಸಿದವು. ಮುಖಭಂಗದಿಂದ ಪಾರಾದ ಇಂಗ್ಲೆಂಡ್ ಕೂಡ ‘ಶುಭಾರಂಭ’ದ ನಗೆ ಬೀರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT