ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ| ಸೈಬರ್ ಜಾಲ: ವಂಚಕರ ಗಾಳ, ಕರ್ನಾಟಕಕ್ಕೆ ಮೂರನೇ ಸ್ಥಾನ

ಅತಿ ಹೆಚ್ಚು ವಂಚನೆ ಪ್ರಕರಣ: ದೇಶದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ
Last Updated 10 ಸೆಪ್ಟೆಂಬರ್ 2022, 19:49 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಂಕ್ ಪ್ರತಿನಿಧಿಗಳ ಸೋಗಿನಲ್ಲಿ ಕರೆ ಮಾಡಿದ್ದ ವಂಚಕ, ಗ್ರಾಹಕನ ಖಾತೆ ವಿವರ ಪಡೆದು ಉಳಿತಾಯದ ಹಣವನ್ನೆಲ್ಲ ಖಾಲಿ ಮಾಡಿದ. ಡೇಟಿಂಗ್ ಆ್ಯಪ್ ಮೂಲಕ ಸಲುಗೆ ಬೆಳೆಸಿದ್ದ ಯುವತಿ, ಉದ್ಯಮಿಯ ನಗ್ನ ವಿಡಿಯೊ ಚಿತ್ರೀಕರಿಸಿಕೊಂಡು ಲಕ್ಷ ಲಕ್ಷ ಕಿತ್ತಳು. ನಕಲಿ ಡೆಬಿಟ್‌ ಕಾರ್ಡ್ ಹಾಗೂ ಸಿಮ್‌ಕಾರ್ಡ್‌ ಸೃಷ್ಟಿಸಿದ್ದ ಅಪರಿಚಿತ, ತನ್ನದಲ್ಲದ ಖಾತೆಯಲ್ಲಿದ್ದ ಹಣವನ್ನೆಲ್ಲ ಗುಳುಂ ಮಾಡಿದ. ಉಡುಗೊರೆ ಆಮಿಷವೊಡ್ಡಿದ್ದ ವಿದೇಶಿ ಪ್ರಜೆ, ಕಸ್ಟಮ್ಸ್ ಹೆಸರಿನಲ್ಲಿ ಹಣ ಕಿತ್ತು ನಾಪತ್ತೆಯಾದ...

ಹೀಗೆ ನಾನಾ ರೀತಿಯಲ್ಲಿ ಜನರನ್ನು ಸೈಬರ್ ಜಾಲದೊಳಗೆ ಸಿಲುಕಿಸಿ ಹಣ ದೋಚುವ ತಂಡಗಳು ದೇಶದಾದ್ಯಂತ ಸಕ್ರಿಯವಾಗಿ ಕೆಲವು ವರ್ಷಗಳೇ ಕಳೆದಿವೆ. ಆದರೆ ಇವುಗಳ ಕೃತ್ಯಕ್ಕೆ ಲಗಾಮು ಹಾಕುವ ಕೆಲಸ ಮಾತ್ರ ಸಮರ್ಪಕವಾಗಿ ನಡೆದಿಲ್ಲ. ಪೊಲೀಸ್‌ ಸಿಬ್ಬಂದಿ ಹಾಗೂ ಸಂಪನ್ಮೂಲಗಳ ಕೊರತೆಯಿಂದಾಗಿ ಸೈಬರ್ ವಂಚನೆ ಪ್ರಕರಣಗಳ ತನಿಖೆ ಕುಂಠಿತವಾಗಿದೆ. ಹೆಚ್ಚಿನ ಪ್ರಕರಣಗಳ ಕಡತಗಳು ಇಂದಿಗೂ ಪೊಲೀಸ್ ಭದ್ರತಾ ಕೊಠಡಿಯಲ್ಲೇ ದೂಳು ತಿನ್ನುತ್ತಿವೆ.

ಮೂರನೇ ಸ್ಥಾನ: ರಾಷ್ಟ್ರೀಯ ಅಪರಾಧ ದಾಖಲೆ ಬ್ಯುರೊ (ಎನ್‌ಸಿಆರ್‌ಬಿ) ಬಿಡುಗಡೆಗೊಳಿಸಿರುವ 2021ರ ಅಂಕಿ–ಅಂಶಗಳ ಪ್ರಕಾರ ಅತಿ ಹೆಚ್ಚು ಸೈಬರ್ ಕ್ರೈಂ ದಾಖಲಾದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.

ಅಂತರ್ಜಾಲ ಬಳಕೆದಾರರ ಸಂಖ್ಯೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಕೆಲ ವಂಚಕರು ತಮ್ಮದೇ ತಂಡ ಕಟ್ಟಿಕೊಂಡು ಸೈಬರ್ ವಂಚನೆಗೆ ಇಳಿಯುತ್ತಿದ್ದಾರೆ. ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಹಾಗೂ ನಿರುದ್ಯೋಗಿ ಯುವಕರನ್ನು ಗುರುತಿಸಿ ತರಬೇತಿ ನೀಡುತ್ತಿರುವ ತಂಡಗಳು, ಅವರ ಮೂಲಕವೇ ಜನರನ್ನು ಸೈಬರ್ ಜಾಲದೊಳಗೆ ಸಿಲುಕಿಸುತ್ತಿವೆ.

ಸಮಾಜ ಸೇವೆಗಾಗಿ ಹಣ ಸಂಗ್ರಹಿಸುವ (ಚಾರಿಟಿ) ಸಂದೇಶಗಳ ಮೂಲಕ ಆರಂಭವಾದ ವಂಚನೆ
ಗಳು, ಇದೀಗ ನಾನಾ ಸ್ವರೂಪ ಪಡೆದುಕೊಂಡಿವೆ. ಒನ್‌ ಟೈಂ ಪಾಸ್‌ವರ್ಡ್ (ಒಟಿಪಿ), ಬ್ಲ್ಯಾಕ್‌ಮೇಲ್‌ನಿಂದ ಹಿಡಿದು ಕ್ರಿಪ್ಟೊ ಕರೆನ್ಸಿ ಹೂಡಿಕೆವರೆಗೂ ವಂಚನೆ ಜಾಲದ ಕಬಂಧಬಾಹು ಚಾಚಿಕೊಂಡಿದೆ.

ಬಹುರಾಷ್ಟ್ರೀಯ ಕಂಪನಿಗಳ ರೀತಿಯಲ್ಲೇ ಸುಸಜ್ಜಿತ ಕಚೇರಿಗಳನ್ನು ತೆರೆಯುವ ತಂಡಗಳು, ವಂಚನೆ ಮೂಲಕವೇ ಲಕ್ಷ ಲಕ್ಷ ಸಂಪಾದಿಸುತ್ತಿವೆ. ಕೆಲ ಕಚೇರಿಗಳ ಮೇಲೆ ಈ ಹಿಂದೆ ದಾಳಿ ಮಾಡಿರುವ ಪೊಲೀಸರು, ಮೂಲ ಬೇರು ಪತ್ತೆ ಹಚ್ಚುವಲ್ಲಿ ವಿಫಲರಾಗಿ ಕೈಚೆಲ್ಲಿದ್ದಾರೆ.

ಬ್ಯಾಂಕ್, ಮೊಬೈಲ್ ವಿವರ ಖರೀದಿಸಿ ಜನರಿಗೆ ಬಲೆ: ಆನ್‌ಲೈನ್ ನೋಂದಣಿ, ಉಡುಗೊರೆ, ಸ್ಪರ್ಧೆ... ಹೀಗೆ ನಾನಾ ರೀತಿಯಲ್ಲಿ ಜನರು ತಮ್ಮ ಬ್ಯಾಂಕ್ ಹಾಗೂ ಮೊಬೈಲ್ ವಿವರಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳುತ್ತಾರೆ. ಇಂಥ ವಿವರವನ್ನೇ ‘ಡಾರ್ಕ್‌ನೆಟ್’ ಮೂಲಕ ಹಣ ಕೊಟ್ಟು ಖರೀದಿಸುವ ವಂಚಕರು, ಅದನ್ನು ಬಳಸಿಕೊಂಡೇ ಜನರಿಗೆ ಬಲೆ ಬೀಸುತ್ತಾರೆ.

ಜನರ ಮೊಬೈಲ್‌ ಹಾಗೂ ಇ–ಮೇಲ್‌ಗೆ ಸಂದೇಶ ಕಳುಹಿಸುವ ವಂಚಕರು ನಾನಾ ಆಮಿಷವೊಡ್ಡುತ್ತಾರೆ. ಅದಕ್ಕೆ ಯಾರಾದರೂ ಪ್ರತಿಕ್ರಿಯಿಸಿದರೆ ಅವರ ಮೇಲೆ ವಂಚಕರ ಸವಾರಿ ಶುರುವಾಗುತ್ತದೆ. ಹಂತ ಹಂತವಾಗಿ ಹಣ ದೋಚಿ, ಮೊಬೈಲ್ ಸ್ವಿಚ್ ಆಫ್ ಮಾಡುತ್ತಾರೆ. ಜೊತೆಗೆ ಕರೆ ಮಾಡಿ ಆಮಿಷವೊಡ್ಡುವ ತಂಡಗಳೂ ಹೆಚ್ಚಿವೆ. ಬ್ಯಾಂಕ್ ಪ್ರತಿನಿಧಿ, ಕಸ್ಟಮ್ಸ್ ಅಧಿಕಾರಿ, ಬೆಸ್ಕಾಂ ಸಹಾಯವಾಣಿ ಸಿಬ್ಬಂದಿ...ಹೀಗೆ ನಾನಾ ಸೋಗಿನಲ್ಲಿ ಲಕ್ಷಗಟ್ಟಲೆ ಹಣ ದೋಚಿರುವ ಪ್ರಕರಣಗಳೂ ವರದಿಯಾಗಿವೆ.

ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗ್ರಾಹಕರಾದ ಮಾಲಾ ಅವರಿಗೆ, ‘ಯೊನೊ ಆ್ಯಪ್‌ ಪ್ರತಿನಿಧಿ ಸೋಗಿನಲ್ಲಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ಖಾತೆ ನವೀಕರಣ ಮಾಡಿಸಿಕೊಳ್ಳಬೇಕೆಂದು ಲಿಂಕ್ ಕಳುಹಿಸಿದ್ದ. ಅದರಲ್ಲಿ ವೈಯಕ್ತಿಕ ಮಾಹಿತಿ ಭರ್ತಿ ಮಾಡುತ್ತಿದ್ದಂತೆ ₹ 1.31 ಲಕ್ಷ ಕಡಿತವಾಯಿತು’ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರತಿನಿತ್ಯ ರಾಜ್ಯದಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ಇಂಥ ಪ್ರಕರಣಗಳು ದಾಖಲಾಗುತ್ತಿವೆ.

ತಕ್ಷಣ ದೂರು ನೀಡಿ

ಸೈಬರ್ ಜಾಲದೊಳಗೆ ಸಿಲುಕಿ ಹಣ ಕಳೆದುಕೊಳ್ಳುವವರು ತಕ್ಷಣ ಪೊಲೀಸರ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬೇಕು. ಇಂಥ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲಿರುವ ಪೊಲೀಸರು, ಖಾತೆಯಿಂದ ಕಡಿತವಾದ ಹಣವನ್ನು ಆರೋಪಿಗಳ ಕೈಗೆ ಸಿಗದಂತೆ ತಡೆಯುತ್ತಾರೆ.

ಬೆಂಗಳೂರು ಸಹಾಯವಾಣಿ:112

ರಾಜ್ಯದ ಇತರೆ ಜಿಲ್ಲೆಗಳ ಸಹಾಯವಾಣಿ:1930

ಕೆಲ ಪ್ರಕರಣಗಳು

ಬಿಟ್‌ ಕಾಯಿನ್‌ ಹೂಡಿಕೆ– ₹ 65.84 ಲಕ್ಷ ವಂಚನೆ: ಬೆಂಗಳೂರಿನ ಶಾಲಿನಿ ಅವರನ್ನು ‘ಬಿಟಿಸಿ ಡೈಮಂಡ್ ವಿಐಪಿ 11–5’ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಿದ್ದ ವಂಚಕರು, ಬಿಟ್ ಕಾಯಿನ್ ಮೇಲೆ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಬರುವುದಾಗಿ ಆಮಿಷವೊಡಿದ್ದರು. ಅದನ್ನು ನಂಬಿದ್ದ ಶಾಲಿನಿ, ಹಂತ ಹಂತವಾಗಿ ₹ 65.84 ಲಕ್ಷ ಹೂಡಿಕೆ ಮಾಡಿದ್ದರು. ಆರೋಪಿಗಳು ಯಾವುದೇ ಲಾಭವನ್ನೂ ನೀಡದೇ ನಾಪತ್ತೆಯಾಗಿದ್ದಾರೆ.

‘ಕಾಲ್‌ ಗರ್ಲ್’ ಸೋಗಿನಲ್ಲಿ ₹ 30 ಲಕ್ಷ ವಂಚನೆ: ಕಾಲ್‌ ಗರ್ಲ್‌ ಸೋಗಿನಲ್ಲಿ ಬೆಂಗಳೂರಿನ ಯುವಕನನ್ನು ಪರಿಚಯ ಮಾಡಿಕೊಂಡಿದ್ದ ವಂಚಕರಿಬ್ಬರು, ಹಂತ ಹಂತವಾಗಿ ₹ 30 ಲಕ್ಷ ಕಿತ್ತಿದ್ದಾರೆ. ಪುನಃ ಹಣ ಕೇಳುತ್ತಿದ್ದಂತೆ ಯುವಕ, ಪೊಲೀಸರಿಗೆ ದೂರು ನೀಡಿದ್ದಾರೆ.

ಹೆಚ್ಚಿನ ಮಾಹಿತಿಗೆ ಕೇಂದ್ರ ಗೃಹ ಇಲಾಖೆ ಜಾಲತಾಣ: https://www.cybercrime.gov.in

ಸೈಬರ್ ವಂಚನೆ ಪ್ರಕಾರಗಳು

1. ಒಟಿಪಿ ವಂಚನೆ:

ಬ್ಯಾಂಕ್‌ ಪ್ರತಿನಿಧಿಗಳ ಸೋಗಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡುವ ವಂಚಕರು, ಕೈವೈಸಿ ನವೀಕರಣ ಮಾಡಬೇಕೆಂದು ಹೇಳಿ ಆಧಾರ್ ಹಾಗೂ ಖಾತೆ ವಿವರ ಪಡೆಯುತ್ತಾರೆ. ಮೊಬೈಲ್‌ಗೆ ಬರುವ ಒನ್ ಟೈಂ ಪಾಸ್‌ವರ್ಡ್‌ (ಒಟಿಪಿ) ಪಡೆದು ವಂಚಿಸುತ್ತಾರೆ. ಜನರು, ಒಟಿಪಿಯನ್ನು ಅಪರಿಚಿತರ ಜೊತೆ ಹಂಚಿಕೊಳ್ಳಬಾರದು.

2. ಒಎಲ್‌ಎಕ್ಸ್ ಹಾಗೂ ಇತರೆ ವಸ್ತುಗಳ ಮಾರಾಟ ಜಾಲತಾಣ:

ಬಳಸಿದ ವಸ್ತುಗಳ ಮಾರಾಟ ವೇದಿಕೆಯಾದ ಒಎಲ್‌ಎಕ್ಸ್‌ ಜಾಲತಾಣದ ಮೂಲಕವೂ ವಂಚನೆ ಆಗುತ್ತಿದೆ. ಅದರಲ್ಲೂ ಸೇನೆ ಅಧಿಕಾರಿಗಳ ಹೆಸರಿನಲ್ಲಿ ಪೋಸ್ಟ್ ಪ್ರಕಟಿಸುವ ವಂಚಕರು, ಕಾರು ಹಾಗೂ ಇತರೆ ವಸ್ತುಗಳ ಮಾರಾಟ ಮಾಡುವುದಾಗಿ ಹೇಳಿ ಹಣ ಪಡೆದು ನಾಪತ್ತೆಯಾಗುತ್ತಿದ್ದಾರೆ.

3. ಫೇಸ್‌ಬುಕ್‌ ಹಾಗೂ ವಾಟ್ಸ್‌ಆ್ಯಪ್ ವಿಡಿಯೊ ಕರೆ

ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್‌ಆ್ಯಪ್, ಮೆಸೆಂಜರ್, ಡೇಟಿಂಗ್ ಆ್ಯಪ್‌ಗಳ ಮೂಲಕ ಪರಿಚಯ ಮಾಡಿಕೊಳ್ಳುವ ವಂಚಕರು, ನಿತ್ಯವೂ ಚಾಟಿಂಗ್ ಮಾಡುತ್ತಾರೆ. ಸಲುಗೆಯಿಂದ ಮಾತನಾಡಿ, ವಿಡಿಯೊ ಕರೆ ಮಾಡಿ ಲೈಂಗಿಕವಾಗಿ ಪ್ರಚೋದಿಸುತ್ತಾರೆ. ನಗ್ನ ವಿಡಿಯೊವನ್ನು ಚಿತ್ರೀಕರಿಸಿಕೊಳ್ಳುತ್ತಾರೆ. ಅದೇ ವಿಡಿಯೊ ಬಳಸಿ ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡುತ್ತಾರೆ.

4. ಡೆಬಿಟ್, ಕ್ರೆಡಿಟ್ ಕಾರ್ಡ್ ಸ್ಕಿಮ್ಮಿಂಗ್

ಬ್ಯಾಂಕ್‌ಗಳ ಎಟಿಎಂ ಘಟಕಗಳ ಯಂತ್ರಗಳಲ್ಲಿ ಕೀ ಪ್ಯಾಡ್ ಹಾಗೂ ರಹಸ್ಯ ಕ್ಯಾಮೆರಾ ಇರುವ ಉಪಕರಣವನ್ನು ಅಳವಡಿಸುವ ವಂಚಕರು, ಗ್ರಾಹಕರ ಕಾರ್ಡ್‌ಗಳ ಮಾಹಿತಿಯನ್ನು ಕದಿಯುತ್ತಾರೆ. ಅದರ ಮೂಲಕ ನಕಲಿ ಕಾರ್ಡ್ ತಯಾರಿಸಿ ಗ್ರಾಹಕರ ಖಾತೆಯಲ್ಲಿರುವ ಹಣ ದೋಚುತ್ತಾರೆ.

5. ಲಿಂಕ್ ಕಳುಹಿಸಿ ವಂಚನೆ

ಬಹುಮಾನ, ಉಡುಗೊರೆ... ಹೀಗೆ ನಾನಾ ಹೆಸರಿನಲ್ಲಿ ಲಿಂಕ್ (ಎಂಬೇಡೆಡ್‌) ಸಂದೇಶ ಕಳುಹಿಸುತ್ತಾರೆ. ಇದನ್ನು ಕ್ಲಿಕ್ ಮಾಡಿ ವೈಯಕ್ತಿಕ ಮಾಹಿತಿ ದಾಖಲಿಸಿದರೆ, ಖಾತೆಯಲ್ಲಿರುವ ಹಣವನ್ನು ವಂಚಕರು ವರ್ಗಾಯಿಸಿಕೊಳ್ಳುತ್ತಾರೆ.

6. ಉಡುಗೊರೆ ಆಮಿಷವೊಡ್ಡಿ ವಂಚನೆ

ಸಾಮಾಜಿಕ ಮಾಧ್ಯಮಗಳ ಮೂಲಕ ಪರಿಚಯ ಮಾಡಿಕೊಳ್ಳುವ ವಂಚಕರು, ಸ್ನೇಹ ಬೆಳೆಸುತ್ತಾರೆ. ಉಡುಗೊರೆ ಕಳುಹಿಸುವುದಾಗಿ ಹೇಳುತ್ತಾರೆ. ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ, ವಿಮಾನ ನಿಲ್ದಾಣದಲ್ಲಿರುವ ಉಡುಗೊರೆಯನ್ನು ಮನೆಗೆ ಕಳುಹಿಸಲು ಹಣ ಪಡೆದು ನಾಪತ್ತೆಯಾಗುತ್ತಾರೆ.

7. ಹೂಡಿಕೆ, ಟ್ರೇಡಿಂಗ್ ಆ್ಯಪ್ ವಂಚನೆ

ಷೇರು ಮಾರುಕಟ್ಟೆ, ಕ್ರಿಪ್ಟೊ ಕರೆನ್ಸಿ ಹಾಗೂ ಇತರೆ ವಲಯಗಳಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭವೆಂದು ವಂಚಕರು ಆಮಿಷವೊಡ್ಡುತ್ತಾರೆ. ಇದನ್ನು ನಂಬಿ ಯಾರಾದರೂ ಹಣ ಹೂಡಿದರೆ, ಅದನ್ನು ದೋಚಿಕೊಂಡು ಆರೋಪಿಗಳು ಪರಾರಿಯಾಗುತ್ತಾರೆ.

8. ವೈವಾಹಿಕ ಜಾಲತಾಣ ವಂಚನೆ

ಮದುವೆಗೆ ವರ–ವಧು ಹುಡುಕಲು ಇಂದು ನಾನಾ ಜಾಲತಾಣಗಳಿವೆ. ಇಂಥ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆಯುವ ವಂಚಕರು, ಮದುವೆ ಸೋಗಿನಲ್ಲಿ ಜನರ ಸ್ನೇಹ ಬೆಳೆಸುತ್ತಾರೆ. ಉಡುಗೊರೆ, ಭೇಟಿ... ಹೀಗೆ ನಾನಾ ಹೆಸರಿನಲ್ಲಿ ಹಣ ಪಡೆದುಕೊಂಡು ನಾಪತ್ತೆಯಾಗುತ್ತಾರೆ.

9. ಎನಿ ಡೆಸ್ಕ್, ಟೀಮ್ ವ್ಹೀವರ್, ಕ್ವಿಕ್ ಸಪೋರ್ಟ್

ಇತ್ತೀಚಿನ ದಿನಗಳಲ್ಲಿ ವಂಚನೆಗೆಂದು ಆರೋಪಿಗಳು, ನಾನಾ ಆ್ಯಪ್‌ ಬಳಕೆ ಮಾಡುತ್ತಿದ್ದಾರೆ. ಎನಿ ಡೆಸ್ಕ್, ಟೀಮ್ ವ್ಹೀವರ್, ಕ್ವಿಕ್‌ ಸಪೋರ್ಟ್ ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಳ್ಳುವಂತೆ ಹೇಳುವ ವಂಚಕರು, ಜನರ ಮೊಬೈಲ್‌ ವಿಂಡೊದ ಕಾರ್ಯಾಚರಣೆ ತಿಳಿದುಕೊಂಡು ಕ್ಷಣಮಾತ್ರದಲ್ಲಿ ಬ್ಯಾಂಕ್ ಖಾತೆಯಿಂದ ಹಣ ದೋಚುತ್ತಾರೆ

10. ಉದ್ಯೋಗದ ಹೆಸರಿನಲ್ಲಿ ವಂಚನೆ

ಪ್ರತಿಷ್ಠಿತ ಕಂಪನಿಗಳಲ್ಲಿ ‘ನೌಕರಿ ಇದೆ’ ಎಂದು ಅಭ್ಯರ್ಥಿಗಳಿಗೆ ಸಂದೇಶ ಕಳುಹಿಸುವ ಹಾಗೂ ಕರೆ ಮಾಡುವ ವಂಚಕರು, ನೋಂದಣಿ ಹಾಗೂ ಸಂದರ್ಶನ ಶುಲ್ಕವೆಂದು ಹೇಳಿ ಹಣ ಪಡೆದು ವಂಚಿಸುತ್ತಾರೆ.

11. ಸಿಮ್ ಕಾರ್ಡ್ ಬ್ಲಾಕ್ ಆಗಿದೆ ಎಂದು ವಂಚನೆ

ಏರ್‌ಟೆಲ್, ಬಿಎಸ್‌ಎನ್‌ಎಲ್‌ ಹಾಗೂ ಇತರೆ ಮೊಬೈಲ್ ಸೇವಾ ಕಂಪನಿಗಳ ಹೆಸರಿನಲ್ಲಿ ಸಂದೇಶ ಹಾಗೂ ಕರೆ ಮಾಡಿ ವಂಚಿಸುವ ತಂಡಗಳಿವೆ. ಮೊಬೈಲ್ ನಂಬರ್ ನವೀಕರಣ ಹಾಗೂ ಆಧಾರ್ ಕಾರ್ಡ್ ಜೋಡಣೆ ಮಾಡಬೇಕು ಎಂಬುದಾಗಿ ಹೇಳಿ ಖಾತೆಯಲ್ಲಿರುವ ಹಣ ದೋಚುತ್ತಾರೆ.

12. ನಕಲಿ ಖಾತೆ ಸೃಷ್ಟಿಸಿ ವಂಚನೆ

ಸಿನಿಮಾ ತಾರೆಯರು, ಉದ್ಯಮಿಗಳು, ಕ್ರೀಡಾಪಟುಗಳು, ರಾಜಕಾರಣಿಗಳು, ಪೊಲೀಸರು, ಪತ್ರಕರ್ತರು.... ಸೇರಿದಂತೆ ಹಲವರ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಖಾತೆ ಸೃಷ್ಟಿ. ಆರೋಗ್ಯ ಸಮಸ್ಯೆ ಹಾಗೂ ಆರ್ಥಿಕ ಸಂಕಷ್ಟವೆಂದು ಹೇಳಿಕೊಂಡು ಖಾತೆದಾರರ ಹೆಸರಿನಲ್ಲಿ ಸ್ನೇಹಿತರಿಂದ ಹಣ ವಸೂಲಿ ಮಾಡುವ ಜಾಲವಿದೆ.

ಸೈಬರ್ ಅಪರಾಧಗಳ ಹಬ್ ‘ಜಾಮತಾರಾ, ಕರಮಾಟಾಂಡ್’

ಜಾರ್ಖಂಡ್‌ ರಾಜ್ಯದ ಜಾಮತಾರ್ ಹಾಗೂ ಕರಮಾಟಾಂಡ್ ಎಂಬ ಗ್ರಾಮಗಳು, ಸೈಬರ್ ವಂಚನೆ ಹಬ್‌ ಎನಿಸಿಕೊಂಡಿವೆ. ಇಲ್ಲಿಯ ಬಹುತೇಕ ಗ್ರಾಮಸ್ಥರೇ ಸೈಬರ್‌ ವಂಚಕರಾಗಿ ಮಾರ್ಪಟ್ಟು, ದೇಶದೆಲ್ಲೆಡೆ ಅಪರಾಧ ಎಸಗುತ್ತಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಸೈಬರ್ ಅಪರಾಧಗಳ ತನಿಖೆ ಕೈಗೊಂಡ ಪ್ರತಿಯೊಂದು ರಾಜ್ಯದ ಪೊಲೀಸರ ತಂಡಗಳು, ಎರಡೂ ಗ್ರಾಮಗಳಿಗೂ ಭೇಟಿ ನೀಡುತ್ತಾರೆ. ಸ್ಥಳೀಯರೇ ಸೈಬರ್ ವಂಚಕರೆಂಬುದು ಹಲವು ಬಾರಿ ನ್ಯಾಯಾಲಯದಲ್ಲೂ ಸಾಬೀತು ಆಗಿದೆ. ಇದೇ ಕಾರಣಕ್ಕೆ 5 ಸಾವಿರ ಜನಸಂಖ್ಯೆಯೂ ಇಲ್ಲದ ಜಾಮತಾರಾದಲ್ಲಿ ಪ್ರತ್ಯೇಕವಾಗಿ ಸೈಬರ್ ಕ್ರೈಂ ಠಾಣೆ ತೆರೆಯಲಾಗಿದೆ. ಡಿವೈಎಸ್ಪಿ ದರ್ಜೆ ಅಧಿಕಾರಿ ಠಾಣೆ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದು, ಹೊರರಾಜ್ಯಗಳಿಂದ ಬರುವ ಪೊಲೀಸರ ತನಿಖೆಗೆ ಸಹಕರಿಸುತ್ತಿದ್ದಾರೆ.

‘ಜಾಮತಾರಾ, ಕರಮಾಟಾಂಡ್ ಗ್ರಾಮದಲ್ಲಿ ಅರ್ಧಕ್ಕೆ ಶಾಲೆ ಬಿಟ್ಟವರು ಹೆಚ್ಚಿದ್ದಾರೆ. ಅವರೆಲ್ಲ ಬಡವರು. ಹಣದ ಆಮಿಷವೊಡ್ಡಿ ಅವರಿಗೆ ಸೈಬರ್ ಅಪರಾಧಗಳ ತರಬೇತಿ ನೀಡಲಾಗುತ್ತದೆ. ನಂತರ ವಂಚನೆಗೆ ಬಳಸಿಕೊಳ್ಳಲಾಗುತ್ತದೆ. ದಿನ ಕಳೆದಂತೆ ಗ್ರಾಮಸ್ಥರೇ ಸ್ವತಂತ್ರವಾಗಿ ವಂಚನೆಗೆ ಇಳಿಯುತ್ತಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಸೈಬರ್ ವಂಚನೆಗೂಜಾಮತಾರಾ, ಕರಮಾಟಾಂಡ್ ಗ್ರಾಮಗಳಿಗೂ ನಂಟು ಇದ್ದೇ ಇದೆ’ ಎಂದು ಸೈಬರ್ ಕ್ರೈಂ ವಿಭಾಗದ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ಎರಡೂ ಗ್ರಾಮಗಳಲ್ಲಿ ಎಲ್ಲ ರಾಷ್ಟ್ರೀಕೃತ ಬ್ಯಾಂಕ್ ಶಾಖೆಗಳು, 25ಕ್ಕೂ ಹೆಚ್ಚು ಎಟಿಎಂಗಳು, 15ಕ್ಕೂ ಹೆಚ್ಚು ಮೊಬೈಲ್ ಟವರ್‌ಗಳು, 25ಕ್ಕೂ ಹೆಚ್ಚು ಸೈಬರ್ ಸೆಂಟರ್‌ಗಳಿವೆ. ಇವೆಲ್ಲವೂ ವಂಚನೆಗೆ ಸಹಕಾರಿಯಾಗಿವೆ. ಸ್ಥಳೀಯ ಕೆಲ ಪೊಲೀಸರೂ ಆರೋಪಿಗಳ ಜೊತೆ ಕೈ ಜೋಡಿಸಿದ್ದಾರೆ. ಹೊರ ರಾಜ್ಯಗಳಿಂದ ಬಂಧಿಸಲು ಬರುವ ಪೊಲೀಸರ ಮೇಲೆ ದಾಳಿ ಮಾಡುವ ಪ್ರವೃತ್ತಿ ಬೆಳೆದಿದೆ. ಹೀಗಾಗಿ, ಗ್ರಾಮದಲ್ಲಿರುವ ವಂಚಕರನ್ನು ಸಂಪೂರ್ಣವಾಗಿ ಸದೆಬಡಿಯಲು ಸಾಧ್ಯವಾಗುತ್ತಿಲ್ಲ’ ಎಂದು ವಸ್ತುಸ್ಥಿತಿ ತೆರೆದಿಡುತ್ತಾರೆ.

***

ಸೈಬರ್ ವಂಚನೆ ಪ್ರಕರಣ ಭೇದಿಸಲು ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಪರಿಣತ ತಂಡವಿದೆ. ಕೃತ್ಯ ನಡೆದ ತಕ್ಷಣ 112ಕ್ಕೆ ಕರೆ ಮಾಡಿ ದೂರು ನೀಡಿದರೆ, ಬ್ಯಾಂಕ್ ಖಾತೆಯಿಂದ ಕಡಿತವಾದ ಹಣ ವಂಚಕರ ಕೈ ಸೇರದಂತೆ ನೋಡಿಕೊಳ್ಳಬಹುದು.


–ಕೆ. ರಾಮರಾಜನ್, ಬೆಂಗಳೂರು ಕಮಾಂಡ್ ಸೆಂಟರ್ ಡಿಸಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT