ಸೋಮವಾರ, ಮೇ 10, 2021
19 °C

ಆಳ–ಅಗಲ | ಜಲಸಮೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ, ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ, ಗೋವಾದಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಹಾಗಾಗಿ, ನದಿಗಳು ಮೈದುಂಬಿ ಹರಿದಿವೆ. ರಾಜ್ಯದ ಹಲವು ಭಾಗಗಳಲ್ಲಿ ಕುಡಿಯುವ ನೀರು, ಬೇಸಾಯಕ್ಕೆ ಆಧಾರವಾಗಿರುವ ಹಲವು ಜಲಾಶಯಗಳು ತುಂಬಿವೆ. ಹಲವು ಇನ್ನೇನು ತುಂಬಲಿವೆ. ಹಾಗಾಗಿ, ಈ ಬಾರಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗದು, ಬೇಸಾಯಕ್ಕೆ ನೀರಿನ ಕೊರತೆಯಾಗದು ಎಂಬ ಭರವಸೆ ಮೂಡಿದೆ.

***

ಕಲಬುರ್ಗಿ, ಯಾದಗಿರಿ ಜಿಲ್ಲೆಯ ಜಲಾಶಯಗಳು ಭರ್ತಿ
ಕಲಬುರ್ಗಿ:
ಕಲಬುರ್ಗಿ ಜಿಲ್ಲೆಯ ಭೀಮಾ ಮತ್ತು ಕಾಗಿಣಾ ನದಿಗಳು ತುಂಬಿ ಹರಿಯುತ್ತಿವೆ. 5 ವರ್ಷದ ಬಳಿಕ ಎಲ್ಲ 6 ಜಲಾಶಯಗಳು ಭರ್ತಿಯಾಗಿವೆ. ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಬೆಣ್ಣೆತೊರಾ, ಅಮರ್ಜಾ, ಸೊನ್ನ ಭೀಮಾ ಬ್ಯಾರೇಜ್, ಚಂದ್ರಂಪಳ್ಳಿ, ಗಂಡೋರಿ ನಾಲಾ ಮತ್ತು ನಾಗರಾಳ ಜಲಾಶಯಗಳು 15 ದಿನಗಳ ಹಿಂದೆಯೇ ಭರ್ತಿಯಾಗಿವೆ. ಅಫಜಲಪುರ ತಾಲ್ಲೂಕಿನ ಸೊನ್ನಾ ಭೀಮಾ ಬ್ಯಾರೇಜ್‌ನ 10 ಗೇಟ್‌ಗಳ ಮೂಲಕ 40 ಸಾವಿರ ಕ್ಯುಸೆಕ್ ನೀರನ್ನು ಭೀಮಾ ನದಿಗೆ  ಬಿಡಲಾಗುತ್ತಿದೆ.

ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಮಳೆ ಬೀಳುತ್ತಿರುವುದರಿಂದ ಜಿಲ್ಲೆಯ ಜೀವನಾಡಿ ಭೀಮೆಯ ಒಡಲು ತುಂಬಿದೆ. ಇದರಿಂದ ಅಫಜಲಪೂರ, ಜೇವರ್ಗಿ ಮತ್ತು ಚಿತ್ತಾಪುರ ತಾಲ್ಲೂಕಿನ ಹಲವು ಕೆರೆಗಳೂ ಭರ್ತಿಯಾಗಿವೆ.


ಕಲಬುರ್ಗಿ ಜಿಲ್ಲೆಯ ಸೊನ್ನ ಭೀಮಾ ಬ್ಯಾರೇಜ್‌

ಭದ್ರಾ ಜಲಾಶಯ
ಚಿಕ್ಕಮಗಳೂರು–ಶಿವಮೊಗ್ಗ ಜಿಲ್ಲೆ ಭಾಗದ ಲಕ್ಕವಳ್ಳಿ ಬಳಿ ಭದ್ರಾ ನದಿಗೆ 1964ರಲ್ಲಿ ಅಣೆಕಟ್ಟೆ ಕಟ್ಟಲಾಗಿದೆ. 71.53 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ (186 ಅಡಿ ಎತ್ತರ) ಜಲಾಶಯ ಮಲೆನಾಡು–ಬಯಲು ಸೀಮೆಯ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಯ 1.82 ಲಕ್ಷ ಹೆಕ್ಟೇರ್ ಜಮೀನುಗಳಿಗೆ ನೀರುಣಿಸುತ್ತದೆ.

ಜತೆಗೆ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ, ಗದಗ ಜಿಲ್ಲೆಗಳ ಹಲವು ನಗರ, ಪಟ್ಟಣ, ಗ್ರಾಮಗಳ ಕುಡಿಯುವ ನೀರಿನ ಯೋಜನೆಗಳಿಗೆ ಈ ಜಲಾಶಯವೇ ಆಧಾರ.

ಕಳೆದ ವರ್ಷ ಆಗಸ್ಟ್ ಕೊನೆಯ ವಾರದಲ್ಲಿ ಜಲಾಶಯ ಭರ್ತಿಯಾಗಿತ್ತು. 2014ರಲ್ಲಿ ಭರ್ತಿಯಾಗಿದ್ದ ಜಲಾಶಯ ಮತ್ತೆ ತುಂಬಿದ್ದು 2018ರಲ್ಲಿ. ಹಿಂದಿನ ವರ್ಷವೂ ಭರ್ತಿಯಾಗಿತ್ತು. ಈ ವರ್ಷ 178.6 ಅಡಿಗೆ ತಲುಪಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ.

71.53 ಟಿಎಂಸಿ ಅಡಿ: ಸಂಗ್ರಹ ಸಾಮರ್ಥ್ಯ
186 ಅಡಿ: ಗರಿಷ್ಠ ಮಟ್ಟ

ಕಾವೇರಿ ಕಣಿವೆಯ ಪ್ರಮುಖ ಜಲಾಶಯ ‘ಹಾರಂಗಿ’
ಮಡಿಕೇರಿ
: ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಕೊಡಗು ಜಿಲ್ಲೆಯ ಕುಶಾಲನಗರದ ಹಾರಂಗಿಯೂ ಒಂದು. 

ಈ ಬಾರಿ ಜುಲೈ 17ರಂದೇ ಜಲಾಶಯ ಭರ್ತಿ ಆಗಿದೆ. 2019ರಲ್ಲಿ ಆಗಸ್ಟ್‌ 8ರಂದು, 2018ರಲ್ಲಿ ಜುಲೈ 7ರಂದು ಜಲಾಶಯ ತುಂಬಿತ್ತು.


ಹಾರಂಗಿ ಜಲಾಶಯ

ಕೊಡಗು ಸೇರಿದಂತೆ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು ಮತ್ತು ಕೆ.ಆರ್.ನಗರ ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ 1,34,895 ಎಕರೆ ಪ್ರದೇಶಕ್ಕೆ ನೀರು ಪೂರೈಸುತ್ತದೆ. 

ಜಲಾಶಯದ ನೀರನ್ನು ಬಳಸಿಕೊಂಡು ‘ಎನರ್ಜಿ ಡೆವಲಪ್‌ಮೆಂಟ್ ಕಂಪೆನಿ’ (ಇ.ಡಿ.ಸಿ.ಎಲ್) ವಿದ್ಯುತ್‌ ಉತ್ಪಾದಿಸುತ್ತಿದೆ. ಸರ್ಕಾರದೊಂದಿಗೆ ಇಡಿಸಿಎಲ್‌ 30 ವರ್ಷಗಳ ಒಪ್ಪಂದ ಮಾಡಿಕೊಂಡಿದೆ. 1998ರಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಿತ್ತು. 

2,859 ಅಡಿ: ಗರಿಷ್ಠ ಮಟ್ಟ
2,858.18 ಅಡಿ: ಈಗಿನ ಸಂಗ್ರಹ
8.5 ಟಿಎಂಸಿ ಅಡಿ: ನೀರು ಸಂಗ್ರಹ ಸಾಮರ್ಥ್ಯ

ಜಲ ವಿದ್ಯುತ್ ಯೋಜನೆಯ ಲಿಂಗನಮಕ್ಕಿ
ಶರಾವತಿ ನದಿಗೆ 1964ರಲ್ಲಿ ನಿರ್ಮಿಸಿದ ಜಲಾಶಯವಿದು. 59.13ಮೀ ಎತ್ತರ, 2,749ಮೀ ಉದ್ದ ಇರುವ ಲಿಂಗನಮಕ್ಕಿ ಅಣೆಕಟ್ಟೆ ನಿರ್ಮಿಸಲಾಯಿತು. 1,992 ಚದರ ಕಿ.ಮೀ ಜಲಾನಯನ ಪ್ರದೇಶ ಹೊಂದಿರುವ ಈ ಜಲಾಶಯ 44.35 ಕೋಟಿ ಘನ ಮೀಟರ್ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ.

ಜಲಾಶಯದ ನೀರು ಬಳಸಿಕೊಂಡು ಮಹಾತ್ಮ ಗಾಂಧಿ, ಶರಾವತಿ, ಲಿಂಗನಮಕ್ಕಿ ಹಾಗೂ ಗೇರುಸೊಪ್ಪ ಘಟಕಗಳಲ್ಲಿ ಒಟ್ಟು 
ಒಟ್ಟು 1,469.8 ಮೆಗಾವಾಟ್‌ ವಿದ್ಯುತ್ ಉತ್ಪಾದಿಸಲಾಗುತ್ತದೆ. 

ಸಮುದ್ರ ಮಟ್ಟದಿಂದ 1,819 ಅಡಿ ಗರಿಷ್ಠಮಟ್ಟ ಇರುವ ಈ ಜಲಾಶಯ ಭರ್ತಿಯಾದ ನಂತರ ಹೊರಗೆ ಹರಿಸುವ ನೀರು ಕಾರ್ಗಲ್‌ ಜಲಾಶಯದ ಮೂಲಕ ವಿಶ್ವ ಪ್ರಸಿದ್ಧ ಜೋಗ ಜಲಪಾತದಿಂದ ಧುಮ್ಮಿಕ್ಕುವ ದೃಶ್ಯ ಮನಮೋಹಕ. 

ಕಳೆದ ವರ್ಷ ಜಲಾಶಯ ಭರ್ತಿಯಾಗಿತ್ತು. ಈ ವರ್ಷ 1,799 ಅಡಿಗೆ ತಲುಪಿದೆ. 

ಸಂಘರ್ಷ ತಪ್ಪಿಸಿದ ಪ್ರವಾಹ
ಮಂಡ್ಯ:
ಕೊಡಗು ಜಿಲ್ಲೆ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮೂರು ವರ್ಷಗಳಿಂದೀಚೆಗೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಉದ್ಭವಿಸುತ್ತಿದ್ದ ಕಾವೇರಿ ಸಂಘರ್ಷ ತಪ್ಪಿದಂತಾಗಿದೆ. ಕಾವೇರಿ ಕಣಿವೆಯ ಎಲ್ಲ ಜಲಾಶಯಗಳು ಈ ಬಾರಿ ಭರ್ತಿಯಾಗಿವೆ

ಕೊಡಗಿನಲ್ಲಿ ಉತ್ತಮ ಮಳೆಯಾದ ಕಾರಣ, 15 ದಿನದಿಂದೀಚೆಗೆ ಕೆಆರ್‌ಎಸ್‌ ಜಲಾಶಯಕ್ಕೆ 20 ಅಡಿ ನೀರು ಹರಿದು ಬಂದಿದೆ. ಸೋಮವಾರ ಬೆಳಗ್ಗೆ ಜಲಾಶಯ ಗರಿಷ್ಠ ಮಟ್ಟ (124.80 ಅಡಿ) ತಲುಪಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇದೇ 21ರಂದು ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಗಳಿಗೆ ಬಾಗಿನ ಅರ್ಪಿಸಲಿದ್ದಾರೆ.

ಕಳೆದ ವರ್ಷ ಆ.15ರಂದೇ ಕೆಆರ್‌ಎಸ್‌ ಜಲಾಶಯ ಗರಿಷ್ಠ ಮಟ್ಟ ತಲುಪಿತ್ತು. ಆ.29ರಂದು ಬಿ.ಎಸ್‌.ಯಡಿಯೂರಪ್ಪ ಬಾಗಿನ ಅರ್ಪಿಸಿದ್ದರು. ಜಲಾಶಯದಿಂದ  11.5 ಲಕ್ಷ ಎಕರೆ ಭೂ ಪ್ರದೇಶ ನೀರಾವರಿಗೆ ಒಳಪಡುತ್ತದೆ. ಜೊತೆಗೆ ಮೈಸೂರು, ಮಂಡ್ಯ ಹಾಗೂ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆಯಾಗುತ್ತದೆ.

ತಮಿಳುನಾಡಿಗೆ ಜೂನ್‌ 1ರಿಂದ ಇಲ್ಲಿಯವರೆಗೆ 63 ಟಿಎಂಸಿ ಅಡಿ ನೀರು ಹರಿದು ಹೋಗಿದೆ.

ಕಬಿನಿ ಭರ್ತಿ: ಎಚ್‌.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಬಳಿ ಕಪಿಲಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ 2,284 ಅಡಿ ಎತ್ತರದ ಈ ಜಲಾಶಯದಲ್ಲಿ ಸದ್ಯ 2,283.25 ಅಡಿ ನೀರಿನ ಸಂಗ್ರಹವಿದೆ. 19.52 ಟಿಎಂಸಿ ಅಡಿ ಸಾಮರ್ಥ್ಯದ ಈ ಜಲಾಶಯದಲ್ಲಿ ಈಗ 18.87 ಟಿಎಂಸಿ ಅಡಿ ನೀರು ಇದೆ.

ಪ್ರತಿ ವರ್ಷವೂ ಮೊದಲು ಭರ್ತಿಯಾಗುತ್ತಿದ್ದ ಕಬಿನಿ ಜಲಾಶಯ ಈ ಬಾರಿ ತಡವಾಗಿ ಭರ್ತಿಯಾಗುತ್ತಿದೆ. 15 ದಿನಗಳಿಂದ ಹೊರಹರಿವು ಹೆಚ್ಚಿದೆ.

ಜಲಾಶಯದಿಂದ ಪ್ರಸಕ್ತ ಮಳೆಗಾಲದಲ್ಲಿ 33.7 ಟಿಎಂಸಿ ಅಡಿಗೂ ಅಧಿಕ ನೀರು ಹೊರ ಹರಿದಿದೆ. ಇದರಲ್ಲಿ ಹೆಚ್ಚಿನ ಪಾಲು ತಮಿಳುನಾಡು ಸೇರಿದೆ.

ಕಳೆದ ವರ್ಷ ಆಗಸ್ಟ್‌ 19ರಂದು ಭರ್ತಿಯಾಗಿದ್ದ ಕಬಿನಿ ಜಲಾಶಯಕ್ಕೆ ಸೆ. 7ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಾಗಿನ ಅರ್ಪಿಸಿದ್ದರು. 2018ರಲ್ಲಿ ಜೂನ್ ತಿಂಗಳಲ್ಲಿಯೇ ಭರ್ತಿಯಾಗಿತ್ತು.

ಈ ಜಲಾಶಯವು ಎಡದಂಡೆ ನಾಲೆ ವ್ಯಾಪ್ತಿಯಲ್ಲಿ 2,910 ಎಕರೆ, ಬಲದಂಡೆ ನಾಲೆ ವ್ಯಾಪ್ತಿಯಲ್ಲಿ 1.05 ಲಕ್ಷ ಎಕರೆ ಪ್ರದೇಶ ಒಳಗೊಂಡಿದೆ. ಜೊತೆಗೆ ಹುಲ್ಲಹಳ್ಳಿ ಹಾಗೂ ರಾಂಪುರ ನಾಲೆಗೆ ನೀರು ಹರಿಸಲಾಗುತ್ತದೆ.ಹೇಮಾವತಿ ಜಲಾಶಯ
ಹಾಸನ:
ಗೊರೂರಿನ ಹೇಮಾವತಿ ಜಲಾಶಯವು ಹಾಸನ, ಮಂಡ್ಯ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಅಚ್ಚುಕಟ್ಟು ಪ್ರದೇಶ ಹೊಂದಿದೆ.


ಗೊರೂರಿನ ಹೇಮಾವತಿ ಜಲಾಶಯದಿಂದ ಸೋಮವಾರ ನದಿಗೆ ನೀರು ಬಿಡಲಾಯಿತು

ಹೇಮಾವತಿ ಜಲಾನಯನ ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ಜಲಾಶಯ ಭರ್ತಿಯಾಗಿದ್ದು, ಸೋಮವಾರ 6 ಕ್ರಸ್ಟ್‌ ಗೇಟ್‌ಗಳ ಮೂಲಕ ನದಿಗೆ 15 ಸಾವಿರ ಕ್ಯುಸೆಕ್‌ ನೀರು ಹರಿ ಬಿಡಲಾಯಿತು.

ಹಾಸನದ 1,07,480 ಎಕರೆ, ಮಂಡ್ಯದ 2,27,920 ಎಕರೆ, ತುಮಕೂರು 3,14,000 ಎಕರೆ ಹಾಗೂ ಮೈಸೂರು ಜಿಲ್ಲೆಯಲ್ಲಿ 5,600 ಎಕರೆ ಅಚ್ಚುಕಟ್ಟು ಪ್ರದೇಶ ಒಳಗೊಂಡಿದೆ. ತುಮಕೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಅಚ್ಚುಕಟ್ಟು ಹೊಂದಿದೆ. ಜೊತೆಗೆ 24 ತಾಲ್ಲೂಕುಗಳಿಗೆ ಕುಡಿಯುವ ನೀರು ಲಭ್ಯವಾಗಲಿದೆ.

ಹೇಮಾವತಿ ಜಲಾಶಯವು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ತುಂಬುತ್ತಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಜಲಾಶಯ ಭರ್ತಿಯಾಗಿತ್ತು. 2018ರಲ್ಲಿ ಮಲೆನಾಡು ಭಾಗದಲ್ಲಿ ಬಿರುಸಿನ ಮಳೆಯಾದ್ದರಿಂದ ಜುಲೈನಲ್ಲೇ ತುಂಬಿತ್ತು.

37.103 ಟಿಎಂಸಿ ಅಡಿ: ಸಂಗ್ರಹ ಸಾಮರ್ಥ್ಯ
36.64 ಟಿಎಂಸಿ ಅಡಿ: ಈಗ ಇರುವ ಸಂಗ್ರಹ

ತುಂಬಿದ ತುಂಗಭದ್ರಾ
ಕೊಪ್ಪಳ ತಾಲ್ಲೂಕಿನ ಮುನಿರಾಬಾದ್‌ನಲ್ಲಿ ತುಂಗಭದ್ರಾ ಜಲಾಶಯ ಇದೆ.

ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ 3 ಲಕ್ಷ ಹೆಕ್ಟೇರ್ ಜಮೀನು ನೀರಾವರಿಗೆ ಒಳಪಟ್ಟಿದೆ. ಕಳೆದ ವರ್ಷ ಈ ಅವಧಿಗೆ ಜಲಾಶಯ ತುಂಬಿರಲಿಲ್ಲ.

ತುಂಗಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗಿರುವುದರಿಂದ ಜಲಾಶಯ ತುಂಬಿದೆ. 10 ಕ್ರಸ್ಟ್‌ ಗೇಟ್ ಮೂಲಕ ತುಂಗಭದ್ರಾ ನದಿಗೆ ನೀರು ಹರಿಸಲಾಗುತ್ತಿದೆ.

ಬಸವಸಾಗರ
ಯಾದಗಿರಿ ಜಿಲ್ಲೆಯ ನಾರಾಯಣಪುರ ಸಮೀಪ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಬಸವಸಾಗರ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ.

ಮೂರು ವರ್ಷಗಳಿಂದ ಜಲಾಶಯ ಭರ್ತಿಯಾಗುತ್ತಿದ್ದು, ಈ ಬಾರಿ ಆಗಸ್ಟ್ 7ರಂದು ಭರ್ತಿಯಾಗಿದೆ.  27 ಗೇಟುಗಳ ಮೂಲಕ ನೀರು ಹರಿಸಲಾಗುತ್ತಿದೆ.

33.313 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. 6 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶ ಹೊಂದಿದೆ. ಕೃಷ್ಣಾ ನದಿಯು ಯಾದಗಿರಿ, ವಿಜಯಪುರ, ಕಲಬುರ್ಗಿ ಮತ್ತು ರಾಯಚೂರು ಜಿಲ್ಲೆಗಳ ಜೀವನದಿಯಾಗಿದೆ.

ತುಂಗಭದ್ರೆಗೆ 75ರ ಸಾರ್ಥಕ್ಯ
ಹೊಸಪೇಟೆ:
ಇಲ್ಲಿಗೆ ಸಮೀಪದ ತುಂಗಭದ್ರಾ ಜಲಾಶಯ 75 ವರ್ಷ ಪೂರ್ಣಗೊಳಿಸಿದ ಸಂಭ್ರಮದಲ್ಲಿದೆ. 

ಬಳ್ಳಾರಿ, ರಾಯಚೂರು, ಕೊಪ್ಪಳ, ಅವಿಭಜಿತ ಆಂಧ್ರ ಪ್ರದೇಶದ ಕಡಪ, ಕರ್ನೂಲು, ಅನಂತಪುರ ಹಾಗೂ ಮೆಹಬೂಬ್‌ ನಗರದ ಜೀವನಾಡಿಯಾಗಿರುವ ಈ ಅಣೆಕಟ್ಟೆ ಒಟ್ಟು 5 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸುತ್ತದೆ. 127 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದಿಸಲಾಗುತ್ತದೆ.


ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯ

ಒಟ್ಟು 33 ಕ್ರಸ್ಟ್ ಗೇಟ್‌ಗಳನ್ನು ಒಳಗೊಂಡಿದೆ. ಕಾಲುವೆಗಳು 250 ಕಿ.ಮೀ ವರೆಗೆ ವಿಸ್ತರಿಸಿವೆ. ಪ್ರತಿ ವರ್ಷ ಈ ಕಾಲುವೆಗಳನ್ನು ಹಂತ ಹಂತವಾಗಿ ದುರಸ್ತಿಗೊಳಿಸಲಾಗುತ್ತಿದೆ. ಕಳೆದ ವರ್ಷ ಉಪಗ್ರಹದಿಂದ ಸಮೀಕ್ಷೆ ಮಾಡಿ, ಕಾಲುವೆಗೆ ಸೇರಿದ ಆಸ್ತಿಯನ್ನು ಸಂರಕ್ಷಿಸಿದ್ದು ವಿಶೇಷ.

133 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 32 ಟಿಎಂಸಿ ಹೂಳು ತುಂಬಿಕೊಂಡಿದೆ. 

ಗರಿಷ್ಠ ಮಟ್ಟಕ್ಕೆ ಆಲಮಟ್ಟಿ 
ಲಾಲ್‌ ಬಹದ್ದೂರ್‌ ಶಾಸ್ತ್ರಿ ಸಾಗರ ಅಥವಾ ಆಲಮಟ್ಟಿ ಅಣೆಕಟ್ಟೆ ಭರ್ತಿಯಾಗಿದೆ. ಇದುವರೆಗೆ 2015ನೇ ಇಸವಿ ಹೊರತು ಪಡಿಸಿ ಪ್ರತಿ ವರ್ಷ ಜಲಾಶಯ ತುಂಬಿ ಹರಿದಿದೆ. 123.081 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. 6.22 ಲಕ್ಷ ಹೆಕ್ಟೆರ್‌ ನೀರಾವರಿ ಪ್ರದೇಶವನ್ನು ಒಳಗೊಂಡಿದೆ. 519.60 ಮೀಟರ್‌ ವರೆಗೆ ನೀರು ಸಂಗ್ರಹ ಮಾಡಲಾಗುತ್ತಿದೆ.

    ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

    ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

    ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

    ಈ ವಿಭಾಗದಿಂದ ಇನ್ನಷ್ಟು