ಶುಕ್ರವಾರ, ಮೇ 29, 2020
27 °C
ಉತ್ತರ ಪ್ರದೇಶ ಮಾದರಿ ಬೆನ್ನುಹತ್ತಿದ ಕರ್ನಾಟಕ

ಆಳ ಆಗಲ | ಕಾರ್ಮಿಕ ಕಾಯ್ದೆಗಳಿಗೆ ಮುಸುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕದಲ್ಲೂ ಉದ್ದಿಮೆಗಳಿಗೆ ಉತ್ತರ ಪ್ರದೇಶದ ಮಾದರಿಯಲ್ಲಿ ‌ಕಾರ್ಮಿಕ ಕಾಯ್ದೆಗಳಿಂದ ವಿನಾಯ್ತಿ ನೀಡಲು ಸಿದ್ಧತೆ ನಡೆದಿದೆ. ರಾಜ್ಯ ಸರ್ಕಾರ ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿದರೆ ಕಾರ್ಮಿಕರ ದಿನದ ಕೆಲಸದ ಮಿತಿ ಹೆಚ್ಚಳ ಆಗಲಿದೆ.

ಸದ್ಯ ವಿದ್ಯುತ್ ಸೌಲಭ್ಯದ ಜತೆಗೆ ಕನಿಷ್ಠ 10 ಕಾರ್ಮಿಕರಿರುವ ಉದ್ದಿಮೆ ಕಾರ್ಖಾನೆಯ ಪರಿಭಾಷೆ ವ್ಯಾಪ್ತಿಗೆ ಒಳಪಡುತ್ತದೆ. ಆದರೆ, ಈ ಮಿತಿಯನ್ನು 50 ಕಾರ್ಮಿಕರಿಗೆ ಹೆಚ್ಚಳ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ‘ಹೀಗೆ ಮಾಡಿದರೆ, ಶೇ 64.24ರಷ್ಟು ಉದ್ದಿಮೆಗಳು ಕಾರ್ಖಾನೆ ಪರಿಭಾಷೆಯಿಂದ ಹೊರಬರಲಿವೆ’ ಎಂಬುದು ಕಾರ್ಮಿಕ ಸಂಘಟನೆಗಳ ಆತಂಕ. ಕಾರ್ಮಿಕ ವಿವಾದಗಳ ಕಾಯ್ದೆಯ ಅಧ್ಯಾಯ 5 ‘ಬಿ’ಗೆ ತಿದ್ದುಪಡಿ ತರಲು ಸರ್ಕಾರ ಉದ್ದೇಶಿಸಿದೆ.

ಸದ್ಯ ಇರುವ ಕಾಯ್ದೆ ಪ್ರಕಾರ ನೂರಕ್ಕೂ ಹೆಚ್ಚು ಕಾರ್ಮಿಕರಿರುವ ಕಾರ್ಖಾನೆ ಮುಚ್ಚುವುದಾದರೆ ಸರ್ಕಾರದ ಅನುಮತಿ ಪಡೆಯಬೇಕು. ಈ ಮಿತಿಯನ್ನು ನೂರರಿಂದ 300ಕ್ಕೆ ಹೆಚ್ಚಳ ಮಾಡಲು ಉದ್ದೇಶಿಸಲಾಗಿದೆ. ಸರ್ಕಾರದ ಈ ಪ್ರಸ್ತಾಪಕ್ಕೆ ಕಾರ್ಮಿಕ ಸಂಘಟನೆಗಳು ಮತ್ತು ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

‘ಕಾರ್ಮಿಕ ಇಲಾಖೆ ಕಾರ್ಯದರ್ಶಿಯಾಗಿದ್ದ ಮಣಿವಣ್ಣನ್ ಅವರನ್ನು ಇದೇ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆ. ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ಎಂ. ಮಹೇಶ್ವರರಾವ್ ಅವರಿಗೇ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಸ್ಥಾನದ ಜವಾಬ್ದಾರಿ ನೀಡಲಾಗಿದೆ. ಕೈಗಾರಿಕೆಗಳ ಪರವಾಗಿ ಇರುವ ಅಧಿಕಾರಿಯು ಕಾರ್ಮಿಕರ ಪರವಾದ ನಿರ್ಧಾರಗಳನ್ನು ಹೇಗೆ ಕೈಗೊಳ್ಳಲು ಸಾಧ್ಯ’ ಎಂಬುದು ಕಾರ್ಮಿಕ ಮುಖಂಡರನ್ನು ಕಾಡುತ್ತಿರುವ ಪ್ರಶ್ನೆ.

ರಾಜ್ಯದಲ್ಲಿ ಏ‌ನೆಲ್ಲಾ ಬದಲಾವಣೆ ಸಂಭವ?

* ಕಾರ್ಮಿಕ ನಿಧಿ ಕಾಯ್ದೆ, ಕನಿಷ್ಠ ವೇತನ ಕಾಯ್ದೆ, ಬೋನಸ್ ಕಾಯ್ದೆ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ     ಸೇರಿದಂತೆ  ಹಾಲಿಯಿರುವ 44 ಕಾರ್ಮಿಕ ಕಾಯ್ದೆಗಳಲ್ಲಿ 40 ಕಾಯ್ದೆಗಳನ್ನು ಮೂರು ವರ್ಷಗಳ ಕಾಲ ಅಮಾನತಿನಲ್ಲಿಡುವುದು

* ಕೆಲಸದ ಅವಧಿ ಹಾಲಿ ನಿತ್ಯ ಎಂಟು ಗಂಟೆ ಇದೆ. ಇದನ್ನು 10 ಅಥವಾ 12 ಗಂಟೆಗೆ ಹೆಚ್ಚಿಸುವುದು

* 300ಕ್ಕಿಂತ ಕಡಿಮೆ ಕಾರ್ಮಿಕರಿರುವ ಕಾರ್ಖಾನೆಗಳನ್ನು ಯಾವಾಗ ಬೇಕಿದ್ದರೂ ಮುಚ್ಚಬಹುದು

* ಕಾರ್ಖಾನೆ ಇನ್‌ಸ್ಪೆಕ್ಟರ್‌ಗಳು ಕಾರ್ಖಾನೆಗಳಿಗೆ ಭೇಟಿ ನೀಡುವುದನ್ನು ಸ್ಥಗಿತಗೊಳಿಸುವುದು

ಎಫ್‌ಕೆಸಿಸಿಐ ಬೇಡಿಕೆಗಳೇನು?

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು (ಎಫ್‌ಕೆಸಿಸಿಐ) ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳ (ಎಂಎಸ್‌ಎಂಇ) ರಕ್ಷಣೆಗಾಗಿ ಸರ್ಕಾರದ ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳು ಹೀಗಿವೆ:

* ಕನಿಷ್ಠ ವೇತನದಲ್ಲಿ ಹೆಚ್ಚಳ ಮಾಡಿ, ಏಪ್ರಿಲ್‌ 1ರಿಂದ ಅನುಷ್ಠಾನಕ್ಕೆ ತರುವಂತೆ ಹೊರಡಿಸಿದ್ದ ಆದೇಶವನ್ನು ಕೊನೆಯಪಕ್ಷ ಒಂದುವರ್ಷದ ಮಟ್ಟಿಗೆ ತಡೆಹಿಡಿಯಬೇಕು. ಎಂಎಸ್‌ಎಂಇಗಳನ್ನು ಕಾನೂನು ಇಲಾಖೆಯ ತಪಾಸಣಾ ಪರಿಮಿತಿಯಿಂದ ಹೊರಗಿಡಬೇಕು

* ₹ 15,000ಕ್ಕಿಂತ ಕಡಿಮೆ ವೇತನವಿರುವ ಕಾರ್ಮಿಕರ ಮೂರು ತಿಂಗಳ ಕಾರ್ಮಿಕ ಕಲ್ಯಾಣ ನಿಧಿ ವಂತಿಗೆಯನ್ನು ಸರ್ಕಾರ ಭರಿಸಲು ನಿರ್ಧರಿಸಿರುವುದು ಸ್ವಾಗತಾರ್ಹ ಕ್ರಮ. ಆದರೆ, ಇದರಿಂದ ಹೆಚ್ಚಿನ ಎಂಎಸ್‌ಎಂಇಗಳಿಗೆ ಅನುಕೂಲವಾಗದು. ₹ 30,000ಕ್ಕಿಂತ ಕಡಿಮೆ ವೇತನವಿರುವ ಕಾರ್ಮಿಕರ ಮೂರು ತಿಂಗಳ ಕಾರ್ಮಿಕ ಕಲ್ಯಾಣ ನಿಧಿ ವಂತಿಗೆಯನ್ನು ಸರ್ಕಾರದಿಂದಲೇ ಭರಿಸಲು ಕ್ರಮ ಕೈಗೊಳ್ಳಬೇಕು

* ಕಾರ್ಮಿಕರ ಮೂರು ತಿಂಗಳ ವಿಮಾ ಕಂತನ್ನೂ (ಇಎಸ್‌ಐ) ಸರ್ಕಾರವೇ ಭರಿಸಬೇಕು

* ಸಣ್ಣ ಹಾಗೂ ಅತಿ ಸಣ್ಣ ಉದ್ದಿಮೆಗಳ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಕಾನೂನು ಕ್ರಮಗಳಿಂದ ಒಂದು ವರ್ಷ ವಿನಾಯ್ತಿಯನ್ನು ನೀಡಬೇಕು.

* ಉತ್ತರ ಪ್ರದೇಶ: ಉತ್ತರ ಪ್ರದೇಶ ಸರ್ಕಾರವು ತನ್ನ ರಾಜ್ಯದತ್ತ ಕೈಗಾರಿಕೆಗಳನ್ನು ಆಕರ್ಷಿಸಲು ಕಾರ್ಮಿಕ ಕಾನೂನುಗಳಿಂದ ಕೈಗಾರಿಕೆಗಳಿಗೆ ಮೂರು ವರ್ಷಗಳ ತನಕ ವಿನಾಯ್ತಿಯನ್ನು ನೀಡಿ ಸುಗ್ರೀವಾಜ್ಞೆ ಹೊರಡಿಸಿದೆ. ಸುಗ್ರೀವಾಜ್ಞೆ ಪ್ರಕಾರ, ಒಟ್ಟು 35 ಕಾರ್ಮಿಕ ಕಾಯ್ದೆಗಳು ಯಾವುದೇ ಉದ್ದಿಮೆಗಳಿಗೆ ಅನ್ವಯ ಆಗುವುದಿಲ್ಲ. ಹೀಗಾಗಿ ಕಾರ್ಮಿಕರಿಗೆ ಶಾಸನಬದ್ಧವಾದ ಹಕ್ಕುಗಳಿಗೆ ಪ್ರತಿಪಾದಿಸುವ ಅವಕಾಶವೂ ಇರುವುದಿಲ್ಲ.

ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಾಯ್ದೆ, ನೌಕರರ ನಷ್ಟ ಪರಿಹಾರ ಕಾಯ್ದೆ, ಜೀತ ಕಾರ್ಮಿಕರ ಕಾಯ್ದೆ ಹಾಗೂ ವೇತನ ಪಾವತಿ ಕಾಯ್ದೆ (ಕಲಂ 5) – ಈ ಕಾಯ್ದೆಗಳಷ್ಟೆ ಸದ್ಯ ಅಲ್ಲಿನ ಉದ್ದಿಮೆಗಳಿಗೆ ಅನ್ವಯವಾಗುತ್ತವೆ.

* ಮಧ್ಯಪ್ರದೇಶ: ಮಧ್ಯ ಪ್ರದೇಶ ಸರ್ಕಾರವು ಕಾರ್ಮಿಕರ ದೈನಂದಿನ ಕೆಲಸದ ಅವಧಿಯನ್ನು ಎಂಟು ಗಂಟೆಗಳಿಂದ 12 ಗಂಟೆಗಳಿಗೆ ಹೆಚ್ಚಿಸಲು ಅನುಮತಿ ನೀಡಿದೆ. ನೂರು ಕಾರ್ಮಿಕರಿಗಿಂತ ಕಡಿಮೆ ಬಲದ ಎಂಎಸ್‌ಎಂಇಗಳಿಗೆ ತಪಾಸಣೆಯಿಂದ ವಿನಾಯ್ತಿ ನೀಡಲಾಗಿದೆ. ಕೆಲವು ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದೆ. ಕಾರ್ಮಿಕರ ನೇಮಕ ಮಾಡಿಕೊಳ್ಳಲು ಹಾಗೂ ಕಿತ್ತುಹಾಕಲು ಉದ್ದಿಮೆಗಳಿಗೆ ಮುಕ್ತ ಅವಕಾಶ ನೀಡಲಾಗಿದ್ದು, ಈ ಕ್ರಮ ಕಾರ್ಮಿಕ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ತುತ್ತಾಗಿದೆ.

ಗುಜರಾತ್‌: ಗುಜರಾತ್‌ ಸರ್ಕಾರವೂ ಉತ್ತರ ಪ್ರದೇಶ ಸರ್ಕಾರದ ದಾರಿಯಲ್ಲೇ ಹೆಜ್ಜೆ ಹಾಕಿದೆ. ಆ ರಾಜ್ಯದಲ್ಲಿ ಸ್ಥಾಪನೆಯಾಗುವ ಹೊಸ ಉದ್ದಿಮೆಗಳಿಗೆ ಕಾರ್ಮಿಕ ಕಾಯ್ದೆಗಳಿಂದ 1,200 ದಿನಗಳವರೆಗೆ ವಿನಾಯ್ತಿ ಘೋಷಿಸಲಾಗಿದೆ. ಆದರೆ, ಕನಿಷ್ಠ ವೇತನ ಕಾಯ್ದೆ, ಕೈಗಾರಿಕಾ ಸುರಕ್ಷಾ ನಿಯಮಾವಳಿ, ನೌಕರರ ನಷ್ಟ ಪರಿಹಾರ ಕಾಯ್ದೆಗಳಿಂದ ಯಾವುದೇ ವಿನಾಯ್ತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಕಾರ್ಖಾನೆಗಳ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಕಾರ್ಮಿಕರ ವಾರದ ಕೆಲಸದ ಅವಧಿಯನ್ನು 72 ಗಂಟೆಗಳಿಗೆ ಹೆಚ್ಚಿಸಲು ಅನುವು ಮಾಡಿಕೊಡಲಾಗಿದೆ.

ಕಾರ್ಮಿಕರ ಹಿತರಕ್ಷಣೆಗೆ ಸಂಬಂಧಿಸಿದಂತೆ 40ಕ್ಕೂ ಹೆಚ್ಚು ಕಾಯ್ದೆಗಳು ಇವೆ. ಆದರೆ, ಆಯಾ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ವಿವಿಧ ಕಾಯ್ದೆಗಳನ್ನು ಗಣನೆಗೆ ತೆಗೆದುಕೊಂಡರೆ ಅವುಗಳ ಒಟ್ಟು ಸಂಖ್ಯೆ 200 ಗಡಿ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಕಾರ್ಮಿಕರ ಕಾಯ್ದೆಗಳನ್ನು ಮುಖ್ಯವಾಗಿ ನಾಲ್ಕು ವಿಧದಲ್ಲಿ (ಕೆಲಸದ ವಾತಾವರಣ, ವೇತನ, ಸಾಮಾಜಿಕ ಭದ್ರತೆ ಹಾಗೂ ಉದ್ಯೋಗ ಭದ್ರತೆ) ವಿಂಗಡಿಸಬಹುದು. ಕೆಲವು ಮುಖ್ಯ ಕಾಯ್ದೆಗಳು ಹೀಗಿವೆ:

ಕೆಲಸದ ವಾತಾವರಣ

* ಕಾರ್ಖಾನೆಗಳ ಕಾಯ್ದೆ–1948

* ಗುತ್ತಿಗೆ (ನಿಯಂತ್ರಣ ಹಾಗೂ ರದ್ದತಿ) ಕಾರ್ಮಿಕ ಕಾಯ್ದೆ–1970

* ಮಳಿಗೆ ಹಾಗೂ ವಾಣಿಜ್ಯ ಘಟಕಗಳ ಕಾಯ್ದೆ

ವೇತನ

* ಕನಿಷ್ಠ ವೇತನ ಕಾಯ್ದೆ–1948

* ವೇತನ ಪಾವತಿ ಕಾಯ್ದೆ–1936

ಸಾಮಾಜಿಕ ಭದ್ರತೆ

* ಕಾರ್ಮಿಕ ಭವಿಷ್ಯ ನಿಧಿ ಕಾಯ್ದೆ–1952

* ದುಡಿಯುವ ಮಹಿಳೆಯರ ಪರಿಹಾರ ನಿಧಿ ಕಾಯ್ದೆ–1923

* ಕಾರ್ಮಿಕರ ವಿಮಾ ಕಾಯ್ದೆ–1948

ಉದ್ಯೋಗ ಭದ್ರತೆ

* ಕೈಗಾರಿಕಾ ವಿವಾದಗಳ ಕಾಯ್ದೆ–1947

‘ಕಾರ್ಮಿಕರ ಹಕ್ಕು ಮೊಟಕು ಆಗದು’

‘ಕಾರ್ಮಿಕ ಕಾಯ್ದೆಗಳಿಗೆ ವಿನಾಯ್ತಿ ನೀಡಿದರೆ ವಿದೇಶಿ ಬಂಡವಾಳ ರಾಜ್ಯಕ್ಕೆ ಹರಿದು ಬರಲಿದೆ. ಕಾರ್ಮಿಕರ ಹಕ್ಕುಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್. ಜನಾರ್ದನ ಹೇಳುತ್ತಾರೆ.

‘ಈಗಾಗಲೇ ಬೇರೆ ರಾಜ್ಯಗಳಲ್ಲಿ ವಿನಾಯ್ತಿ ನೀಡಲಾಗಿದೆ. ಕರ್ನಾಟಕದಲ್ಲಿ ವಿನಾಯ್ತಿ ನೀಡದಿದ್ದರೆ ಬಂಡವಾಳ ಆ ರಾಜ್ಯಗಳ ಪಾಲಾಗಲಿದೆ ಎಂಬುದು ನಮ್ಮ ಆತಂಕ. ಹೀಗಾಗಿ, ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸುತ್ತಾರೆ.

ಕಾರ್ಮಿಕ ಕಾಯ್ದೆಗಳಿಂದ ಉದ್ದಿಮೆಗಳಿಗೆ ವಿನಾಯ್ತಿ ನೀಡಿರುವುದು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮಾತ್ರವೇ ಅಲ್ಲ. ಕಾಂಗ್ರೆಸ್‌ ಆಡಳಿತದ ರಾಜಸ್ಥಾನ, ಪಂಜಾಬ್‌, ಬಿಜು ಜನತಾ ದಳ ಆಡಳಿತದ ಒಡಿಶಾ ಸರ್ಕಾರಗಳೂ ಕೆಲವು ಕಾರ್ಮಿಕ ಕಾಯ್ದೆಗಳಿಂದ ಉದ್ದಿಮೆಗಳಿಗೆ ವಿನಾಯ್ತಿ ಘೋಷಿಸಿವೆ.

ವಿವಿಧ ಮುಖಂಡರ ಪ್ರತಿಕ್ರಿಯೆ

ಉದ್ದಿಮೆಗಳಿಗೆ ಕಾರ್ಮಿಕ ಕಾಯ್ದೆಗಳಿಂದ ವಿನಾಯ್ತಿ ನೀಡಲು ಹೊರಟಿರುವ ಸರ್ಕಾರದ ಕ್ರಮ ಸರಿಯಲ್ಲ. ಪ್ರಸ್ತಾವ ಕೈಬಿಡಲು ಮುಖ್ಯಮಂತ್ರಿಯವರನ್ನು ಆಗ್ರಹಿಸಿದ್ದೇವೆ - ಕೆ.ಮಹಂತೇಶ್, ಕಾರ್ಮಿಕ ಮುಖಂಡ

ಉದ್ಯಮಿಗಳ ಲಾಬಿಗೆ ಸರ್ಕಾರ ಮಣಿದಿದೆ. ತ್ಯಾಗ, ಬಲಿದಾನದ ಮೂಲಕ ಕಾರ್ಮಿಕರು ಕಾನೂನಿನ ಮೂಲಕ ಹಕ್ಕುಗಳನ್ನು ಪಡೆದಿದ್ದಾರೆ. ಮೊಟುಕುಗೊಳಿಸಿದರೆ ಹೋರಾಡದೇ ಬೇರೆ ದಾರಿಯಿಲ್ಲ - ಎಂ.ಡಿ.ಹರಿಗೋವಿಂದ, ಪ್ರಧಾನ ಕಾರ್ಯದರ್ಶಿ, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್

ಕಾರ್ಮಿಕ ಕಾಯ್ದೆಗಳು ಇಷ್ಟು ವರ್ಷ ಜಾರಿಯಲ್ಲಿದ್ದವು. ಆದರೂ, ಕೈಗಾರಿಕಾ ವಲಯ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಕಾಣಲಿಲ್ಲ. ಈಗ ಉದ್ಯೋಗದಾತರಿಗೆ ಒಂದು ಅವಕಾಶ ನೀಡುವುದು ಒಳ್ಳೆಯದು- ಬಿ.ಸಿ. ಪ್ರಭಾಕರ್, ಅಧ್ಯಕ್ಷ, ಕರ್ನಾಟಕ ಎಂಪ್ಲಾಯರ್ಸ್‌ ಅಸೋಶಿಯೇಷನ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು