ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer – ಕೃಷಿ ಕಾಯ್ದೆ ತಡೆಗೆ ಕೇಂದ್ರ ಮುಂದಾಗಿದ್ದೇಕೆ? ಇಲ್ಲಿವೆ ಐದು ಕಾರಣ

Last Updated 22 ಜನವರಿ 2021, 12:10 IST
ಅಕ್ಷರ ಗಾತ್ರ

ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಮುಕ್ತಾಯವಾಗುವ ಲಕ್ಷಣ ಕಾಣದ ಬೆನ್ನಲ್ಲೇ ಕೇಂದ್ರ ಸರ್ಕಾರವು ಅವುಗಳನ್ನು ಮುಂದಿನ ಒಂದೂವರೆ ವರ್ಷಗಳ ಕಾಲ ಅಮಾನತಿನಲ್ಲಿಡುವ ಬಗ್ಗೆ ಪ್ರಸ್ತಾಪಿಸಿದೆ. ಆದರೆ ರೈತರು ಇದನ್ನೂ ತಿರಸ್ಕರಿಸಿದ್ದಾರೆ. ಬಿಕ್ಕಟ್ಟು ಪರಿಹಾರಕ್ಕೆ ಜಂಟಿ ಸಮಿತಿಯನ್ನು ರಚಿಸುವ ಪ್ರಸ್ತಾವಕ್ಕೂ ಒಪ್ಪಿಗೆ ಸಿಕ್ಕಿ‌ಲ್ಲ. ಹೀಗಾಗಿ ಎರಡು ತಿಂಗಳಿಂದ ನಡೆಯುತ್ತಿರುವ ಪ್ರತಿಭಟನೆ ಮುಂದುವರಿಯುತ್ತಿದೆ. ಮತ್ತೊಂದು ಸುತ್ತಿನ ಮಾತುಕತೆಗೆ ವೇದಿಕೆ ಸಿದ್ಧವಾಗಿದೆ. ಆದಾಗ್ಯೂ, ರೈತರ ಪ್ರತಿಭಟನೆ ಮತ್ತು ಕೃಷಿ ಕಾಯ್ದೆಗಳ ವಿಚಾರದಲ್ಲಿ ಈವರೆಗೆ ಎಳ್ಳಿನಿತೂ ಪಟ್ಟು ಸಡಿಲಿಸದ ಕೇಂದ್ರ ದಿಢೀರ್ ಆಗಿ ಅಮಾನತಿನಲ್ಲಿಡುವ ಪ್ರಸ್ತಾವ ರೈತ ಮುಖಂಡರ ಮುಂದಿಟ್ಟಿದ್ದೇಕೆ?

ಕಾಯ್ದೆಗಳ ಜಾರಿಗೆ ಸುಪ್ರೀಂ ಕೋರ್ಟ್‌ ತಡೆಯೊಡ್ಡಿದ್ದು, ಬಿಜೆಪಿಯ ಕೆಲವು ನಾಯಕರಿಂದಲೇ ಹೊಸ ಕಾನೂನಿಗೆ ವಿರೋಧ ವ್ಯಕ್ತವಾಗಿದ್ದು, ಆರ್‌ಎಸ್‌ಎಸ್ ನಾಯಕರ ಹೇಳಿಕೆ, ಹೀಗೆ ಹಲವು ಕಾರಣಗಳು ಕೃಷಿ ಕಾಯ್ದೆಗಳನ್ನು ತಡೆಹಿಡಿಯುವ ಪ್ರಸ್ತಾಪಕ್ಕೆ ಕಾರಣವಾಗಿವೆ ಎನ್ನಲಾಗಿದೆ.

ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ತಡೆ

ಕಾಯ್ದೆಗಳ ಜಾರಿಗೆ ಮುಂದಿನ ಆದೇಶದವರೆಗೆ ತಡೆ ನೀಡಿ ಸುಪ್ರೀಂ ಕೋರ್ಟ್ ಜನವರಿ 12ರಂದು ಆದೇಶ ನೀಡಿತ್ತು. ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯಿಂದ ಉಂಟಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ನಾಲ್ವರು ಸದಸ್ಯರ ಸಮಿತಿಯನ್ನೂ ರಚಿಸಿತ್ತು. ಇದನ್ನು ಕೇಂದ್ರ ಸರ್ಕಾರಕ್ಕಾದ ಹಿನ್ನಡೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗಿತ್ತು. ಇಂಥದ್ದೊಂದು ಆದೇಶ ಬರಬಹುದು ಎಂಬುದನ್ನು ಸರ್ಕಾರವೂ ನಿರೀಕ್ಷಿಸಿರಲಿಲ್ಲ ಎನ್ನಲಾಗಿದೆ.

ಟ್ರ್ಯಾಕ್ಟರ್ ರ್‍ಯಾಲಿ

ಗಣರಾಜ್ಯೋತ್ಸವದ ದಿನ ರೈತರು ಆಯೋಜಿಸಲು ಉದ್ದೇಶಿಸಿರುವ ರ್‍ಯಾಲಿಗೆ ಅನುಮತಿ ನೀಡುವ ವಿಚಾರವನ್ನು ದೆಹಲಿ ಪೊಲೀಸರೇ ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಇದು ಕೂಡ ಆಡಳಿತಪಕ್ಷದ ಹಲವು ನಾಯಕರಲ್ಲಿ ಹತಾಶೆ ಮೂಡಿಸಿತ್ತು ಎನ್ನಲಾಗಿದೆ. ಗಣರಾಜ್ಯೋತ್ಸವದಂದು ರಾಷ್ಟ್ರ ರಾಜಧಾನಿಯಲ್ಲಿ ಟ್ರ್ಯಾಕ್ಟರ್ ರ್‍ಯಾಲಿ ನಡೆಯುವುದು ಅಷ್ಟು ಸಮಂಜಸವಲ್ಲ. ಇದರಿಂದ ಸರ್ಕಾರವೂ ಮುಜುಗರಕ್ಕೆ ಸಿಲುಕಲಿದೆ ಎಂದು ಬಿಜೆಪಿಯ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ‘ಈ ರೀತಿ ಮುಜುಗರಕ್ಕೊಳಗಾಗುವುದನ್ನು ತಪ್ಪಿಸಲು ಸರ್ಕಾರ ಯತ್ನಿಸುತ್ತಿದೆ. ಕನಿಷ್ಠಪಕ್ಷ ತಾತ್ಕಾಲಿಕವಾಗಿಯಾದರೂ ಸಮಸ್ಯೆಯನ್ನು ಬಗೆಹರಿಸಲು ಅದು ಚಿಂತನೆ ನಡೆಸಿದೆ’ ಎಂದು ಅವರು ಹೇಳಿದ್ದಾರೆ.

ಸಂಸತ್ ಅಧಿವೇಶನ

ಜನವರಿ 29ರಿಂದ ಸಂಸತ್‌ನ ಬಜೆಟ್ ಅಧಿವೇಶನ ಆರಂಭವಾಗಲಿದೆ. ದೆಹಲಿ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಲು ಪ್ರತಿಪಕ್ಷಗಳು ತುದಿಗಾಲಿನಲ್ಲಿ ನಿಂತಿವೆ. ಜತೆಗೆ, ಪ್ರಾದೇಶಿಕ ಪಕ್ಷಗಳೂ ಎನ್‌ಡಿಎಯ ಕೆಲವು ಮಿತ್ರ ಪಕ್ಷಗಳೂ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿವೆ. ಇದರಿಂದಾಗಿ ಸದನದಲ್ಲಿ ಏಕಾಂಗಿಯಾಗಬಹುದು ಎಂಬ ಭೀತಿ ಬಿಜೆಪಿಗಿದೆ. ಜತೆಗೆ, ಕಲಾಪಕ್ಕೆ ರೈತರ ಪ್ರತಿಭಟನೆ ವಿಚಾರವಾಗಿ ಅಡ್ಡಿಯುಂಟಾಗುವ ಭೀತಿಯೂ ಇದೆ. ಪ್ರತಿಪಕ್ಷಗಳು ಈ ನೆಪದೊಂದಿಗೆ ಒಗ್ಗಟ್ಟಾಗಬಹುದು, ಸಣ್ಣ–ಪುಟ್ಟ ಪಕ್ಷಗಳೂ ಸರ್ಕಾರದ ವಿರುದ್ಧ ತಿರುಗಿಬೀಳುವಂತಾಗಬಹುದು. ಅದಕ್ಕೆ ಆಸ್ಪದ ನೀಡಬಾರದು ಎಂಬುದೂ ಸರ್ಕಾರದ ಉದ್ದೇಶವಾಗಿದೆ. ಹೀಗಾಗಿ ಕೃಷಿ ಕಾಯ್ದೆಗಳ ತಾತ್ಕಾಲಿಕ ತಡೆ ಪ್ರಸ್ತಾವ ಮುಂದಿಟ್ಟಿರಬಹುದು ಎಂದು ಕೆಲವು ಮೂಲಗಳು ವಿಶ್ಲೇಷಿಸಿವೆ.

ಮಿತ್ರ ಪಕ್ಷಗಳಿಂದಲೇ ತೀವ್ರ ಅಸಮಾಧಾನ

ಕೃಷಿ ಕಾಯ್ದೆಗಳಿಗೆ ಎನ್‌ಡಿಎ ಮಿತ್ರಪಕ್ಷಗಳಿಂದಲೂ ವಿರೋಧ ವ್ಯಕ್ತವಾಗಿದೆ. ಕಾಯ್ದೆಗಳನ್ನು ವಿರೋಧಿಸಿ ಪಂಜಾಬ್‌ನ ಪ್ರಮುಖ ಎನ್‌ಡಿಎ ಮಿತ್ರಪಕ್ಷ ‘ಶಿರೋಮಣಿ ಅಕಾಲಿ ದಳ’ ಮೈತ್ರಿಕೂಟದಿಂದ ಹೊರನಡೆದಿತ್ತು. ರಾಜಸ್ಥಾನದಲ್ಲಿ ‘ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (ಆರ್‌ಎಲ್‌ಪಿ)’ ಸಹ ಇತ್ತೀಚೆಗೆ ಎನ್‌ಡಿಎ ತೊರೆದಿದೆ.

‘ನಾವು ಎನ್‌ಡಿಎ ತೊರೆಯುತ್ತಿದ್ದೇವೆ.ದೇಶದ ರೈತರ ಹಿತಾಸಕ್ತಿಗಿಂತ ದೊಡ್ಡದು ಯಾವುದೂ ಇಲ್ಲ’ ಎಂದು ಆರ್‌ಎಲ್‌ಪಿ ಮುಖ್ಯಸ್ಥ, ಸಂಸದ ಹನುಮಾನ್ ಬೆನಿವಾಲ್ ಹೇಳಿದ್ದರು. ಬಳಿಕ ಅವರ ಪಕ್ಷವು ರೈತರ ಪ್ರತಿಭಟನೆಯನ್ನು ಬೆಂಬಲಿಸಿದೆ.

ಮಸೂದೆಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಸಬೇಕಿತ್ತು ಅಥವಾ ಆಕ್ಷೇಪ ವ್ಯಕ್ತವಾದ ಕೂಡಲೇ ಆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿತ್ತು ಎಂದು ಆಡಳಿತ ಪಕ್ಷ ಬಿಜೆಪಿಯ ಕೆಲವು ನಾಯಕರೂ ಅಸಮಾಧಾನ ವ್ಯಕ್ತಪಡಿಸಿದ್ದರು.

ಆರ್‌ಎಸ್‌ಎಸ್ ನಾಯಕರ ಹೇಳಿಕೆ

ಉಭಯರೂ (ಸರ್ಕಾರ ಹಾಗೂ ರೈತ ಸಂಘಟನೆಗಳು) ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು. ಯಾವುದೇ ಚಳವಳಿ ಸುದೀರ್ಘ ಅವಧಿಯ ವರೆಗೆ ನಡೆಯುತ್ತಿರುವುದು ಸಮಾಜದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಆರ್‌ಎಸ್‌ಎಸ್‌ ನಾಯಕ ಸುರೇಶ್ ಭಯ್ಯಾಜಿ ಜೋಶಿ ಅವರು ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಇತ್ತೀಚೆಗೆ ಹೇಳಿದ್ದರು. ರೈತರ ಪ್ರತಿಭಟನೆ ಬೇಗ ಕೊನೆಯಾಗಬೇಕು ಎಂಬುದು ಅವರ ಹಾಗೂ ಸಂಘದ ಬಯಕೆಯಾಗಿತ್ತು ಎನ್ನಲಾಗಿದೆ. ಆರ್‌ಎಸ್‌ಎಸ್‌ ನಾಯಕರ ಹೇಳಿಕೆ ಕೂಡ ಸರ್ಕಾರವನ್ನು ಒತ್ತಡಕ್ಕೆ ಸಿಲುಕಿಸಿತ್ತು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT